অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೇಂದ್ರೀಯ ಆಹಾರ ಸಂಶೋಧನಾಲಯ

ಕೇಂದ್ರೀಯ ಆಹಾರ ಸಂಶೋಧನಾಲಯ

ಆಹಾರವಿಜ್ಞಾನ ವಿವಿಧ ಶಾಖೆಗಳ ವಿಚಾರ ಅಭ್ಯಸಿಸುವುದಕ್ಕೆ ಪ್ರಯೋಗ ಮತ್ತು ಸಂಶೋಧನೆಗಳನ್ನು ನಡೆಸುವುದಕ್ಕೆ ಮೀಸಲಾಗಿ ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಆಶ್ರಯದಲ್ಲಿ ಸ್ಥಾಪಿತವಾಗಿರುವ ಸಂಸ್ಥೆ (ಸೆಂಟ್ರಲ್ ಫುಡ್ ಟೆಕ್ನಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್). ಆಹಾರದ ಗುಣ ಪ್ರಮಾಣಗಳೆರಡರಲ್ಲಿಯೂ ಸ್ವಯಂಪೂರ್ಣತೆಯನ್ನು ಸ್ಥಾಪಿಸಿ, ಒಳ್ಳೆಯ ಪೌಷ್ಟಿಕ ಮಟ್ಟವನ್ನು ಸಾಧಿಸುವಂತೆ ದೇಶದ ಎಲ್ಲ ಆಹಾರ ಸಾಧನಗಳನ್ನು ಅತ್ಯಂತ ಸಮರ್ಪಕ ರೀತಿಯಲ್ಲಿ ಬಳಸಿಕೊಂಡು, ಆಧುನಿಕ ಆಹಾರ ತಂತ್ರ ಪ್ರಯೋಗದಿಂದ ದೇಶದ ಆರ್ಥಿಕಾಭಿವೃದ್ಧಿಗೆ ನೆರವಾಗುವುದು ಈ ಸಂಸ್ಥೆಯ ಮುಖ್ಯ ಉದ್ದೇಶ. ಈ ಸಂಶೋಧನಾಲಯದಲ್ಲಿ ಸ್ಥಾಪಿತವಾಗಿರುವ ಆಹಾರ ಕೃಷಿ ಸಂಸ್ಥೆಯ ಅಂತಾರಾಷ್ಟ್ರೀಯ ಆಹಾರ ತಂತ್ರಶಾಸ್ತ್ರ ತರಬೇತಿ ಕೇಂದ್ರದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಆಹಾರ ತಂತ್ರಶಾಸ್ತ್ರದ ಎಂ.ಎಸ್ಸಿ. ಪದವಿಗಾಗಿ ಭಾರತ ಹಾಗೂ ದೂರ ಪ್ರಾಚ್ಯ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಈ ಸಂಶೋಧನಾಲಯದ 15 ವಿಭಾಗಗಳಲ್ಲಿ ಧಾನ್ಯಾಹಾರಗಳು, ಹಣ್ಣು ತರಕಾರಿಗಳು, ಮಾಂಸಾಹಾರಗಳು, ಸಂಬಾರಜಿನಸಿಗಳು ಹಾಲಿನ ಉತ್ಪನ್ನಗಳು, ಇವೇ ಮೊದಲಾದ ವಿಚಾರಗಳಿಗೆ ಅನೇಕ ಬಗೆಯ ಪ್ರಯೋಗಗಳೂ ಸಂಶೋಧನೆಗಳೂ ಸತತವಾಗಿ ನಡೆಯುತ್ತಿವೆ. ಈ ಕೆಲಸಗಳಿಂದ ನಮ್ಮ ದೇಶದಲ್ಲಿ ಹಲವಾರು ಹೊಸ ಆಹಾರ ಕೈಗಾರಿಕೆಗಳು ಹುಟ್ಟುಕೊಂಡಿರುವುದಲ್ಲದೆ, ಇರುವ ಕೈಗಾರಿಕೆಗಳವರಿಗೆ ಬಹು ಹೆಚ್ಚಿನ ಸಹಾಯವಾಗುತ್ತದೆ.

ಕೈಗಾರಿಕಾ ಕ್ರಾಂತಿ

ಯುರೋಪಿನಲ್ಲಿ 18 ಮತ್ತು 19ನೆಯ ಶತಮಾನದಲ್ಲಿ ನಡೆದ ಆರ್ಥಿಕ ಬದಲಾವಣೆಗಳನ್ನು ವಿವರಿಸಲು ಉಪಯೋಗಿಸಲಾಗುತ್ತಿರುವ ಪದವೆಂದರೆ ಕೈಗಾರಿಕಾ ಕ್ರಾಂತಿ. ಕ್ರಾಂತಿ ಎಂದ ಮಾತ್ರಕ್ಕೆ ಇಲ್ಲಿ ವಿಪ್ಲವವಾಗಲಿ ದಂಗೆಯಾಗಲಿ ನಡೆದು ಹಿಂಸೆಯ ತಳಹದಿಯ ಮೇಲೆ ಬದಲಾವಣೆಗಳು ಆದುವೆಂದು ಅರ್ಥವಲ್ಲ. ಆದರೆ ಕೈಗಾರಿಕೆಯ ರಂಗದಲ್ಲಿ ನಡೆದ ತೀವ್ರವಾದ ಈ ಬದಲಾವಣೆಗಳು ಅಗಾಧ ಪ್ರಮಾಣದವು, ಅಭೂತಪೂರ್ವವಾದಂಥವು. ಇವು ಒಂದು ಕ್ರಾಂತಿಯಿಂದ ಆಗಬಹುದಾಗಿದ್ದಷ್ಟೇ ಪರಿಣಾಮಗಳನ್ನುಂಟುಮಾಡಿದ್ದರಿಂದ ಇವಕ್ಕೆ ಕೈಗಾರಿಕಾ ಕ್ರಾಂತಿಯೆಂಬ ಹೆಸರು ಬಂದಿದೆ. ಈ ಕ್ರಾಂತಿ ಸುಮಾರು 150 ವರ್ಷಗಳಲ್ಲಿ ನಡೆದ ಬದಲಾವಣೆಗಳಿಗೆ ಸಂಬಂಧಪಟ್ಟದ್ದು. ಹಿಂದೆ ಈ ಕ್ರಾಂತಿಯ ಫಲವಾಗಿ ವಿಶಿಷ್ಟವಾದ ಒಂದು ಆರ್ಥಿಕ ವ್ಯವಸ್ಥೆ ಜಾರಿಗೆ ಬಂತು.

ಈ ಕ್ರಾಂತಿ ಪ್ರಥಮವಾಗಿ ಸಂಭವಿಸಿದ್ದು ಇಂಗ್ಲೆಂಡಿನಲ್ಲಿ. ಇದು 18ನೆಯ ಶತಮಾನದ ಮಧ್ಯಭಾಗದಲ್ಲಿ ಆರಂಭವಾಗಿ ಸುಮಾರು 70 ವರ್ಷಗಳ ಕಾಲ ಮುಂದುವರಿಯಿತು.

ಈ ಕ್ರಾಂತಿಯ ಫಲವಾಗಿ ಇಂಗ್ಲೆಂಡ್ ಕೃಷಿಪ್ರಧಾನ ರಾಷ್ಟ್ರದಿಂದ ಕೈಗಾರಿಕಾ ಬದಲಾವಣೆ ಹೊಂದಿತು. 1765 ರಿಂದ 1785ರ ವರೆಗೆ ನೇಯ್ಗೆ ಕೈಗಾರಿಕೆಯಲ್ಲಿ ಕ್ರಾಂತಿಕಾರಕ ಆವಿಷ್ಕಾರಗಳಾದವು. 1767ರಲ್ಲಿ ಹಾರ್ ಗ್ರೇವ್ಸ್ ನೂಲುವ ಜೆನ್ನಿ ಕಂಡುಹಿಡಿದ. ಇದು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಎಳೆಗಳನ್ನು ಸುತ್ತುವ ಪ್ರಥಮ ಸಾಧನವಾಗಿತ್ತು. ಅನಂತರ ಇದು 40 ಎಳೆಗಳನ್ನು ಏಕಕಾಲದಲ್ಲಿ ಎತ್ತುತ್ತಿತ್ತು. 1769ರಲ್ಲಿ ಆರ್ಕ್ರೈಟ್ ಕಂಡುಹಿಡಿದ ವಾಟರ್ ಫ್ರೇಮ್ ಎಂಬ ಇನ್ನೊಂದು ಯಂತ್ರದಿಂದ ನೂಲುಬಳಕೆಯಲ್ಲಿ ಒಂದು ಕ್ರಾಂತಿಕಾರಕ ಸಾಧನೆಯೇ ಆಯಿತು. ಇದರಿಂದ ನೇಕಾರ ಲಿನನ್ ಅಥವಾ ಉಣ್ಣೆ ಹಾಸುದಾರವನ್ನು ಆಮದು ಮಾಡಿಕೊಳ್ಳುವುದು ತಪ್ಪಿ ಪೂರ್ಣ ಅರಳೆಯ ಬಟ್ಟೆ ತಯಾರಿಸಲು ಸಾಧ್ಯವಾಯಿತು. 1779ರಲ್ಲಿ ಈ ಎರಡೂ ಯಂತ್ರಗಳನ್ನು ಸಂಯೋಜಿಸಿ ಅತ್ಯಂತ ಉನ್ನತಮಟ್ಟದ ದಾರದ ಎಳೆಗಳನ್ನು ತಯಾರಿಸುವ ಯಂತ್ರವನ್ನು ರೂಪಿಸಿದ ಯಶಸ್ಸು ಕ್ರಾಂಪ್ಟನ್ನನದಾಯಿತು. 1782ರಲ್ಲಿ ಜೇಮ್ಸ್ ವಾಟ್ ಉಗಿಯಂತ್ರವನ್ನು ಸೃಷ್ಟಿಸಿ ಇಡೀ ಉತ್ಪಾದನಾರಂಗದಲ್ಲೇ ಕ್ರಾಂತಿಯನ್ನೆಸಗಿದ. ವಾಟ್ ಯಂತ್ರ ಎಷ್ಟು ಪರಿಷ್ಕೃತವಾಗಿತ್ತೆಂದರೆ 1783ರ ವೇಳೆಗೆ ಕಾರ್ನ್ವಾಟ್ ಗಣಿಗಳಲ್ಲಿ ವಿನಾ ಎಲ್ಲ ಸ್ಥಳಗಳಲ್ಲೂ ವಾಟ್ ಯಂತ್ರವೇ ಬಳಕೆಯಲ್ಲಿತ್ತು. ಈ ರೀತಿಯ ಆವಿಷ್ಕಾರಗಳು ಒಂದು ಕೈಗಾರಿಕೆಯಿಂದ ಮತ್ತೊಂದು ಕೈಗಾರಿಕೆಗೆ ಈ ಕಾಲದಲ್ಲಿ ವೇಗವಾಗಿ ಹರಡುತ್ತಿದ್ದವು. ಯಂತ್ರ ಮತ್ತು ಇಂಜಿನ್ನುಗಳ ಬೇಡಿಕೆ ಹೆಚ್ಚಾಗುವುದಕ್ಕೆ ಪ್ರಾರಂಭವಾಗಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಗಳ ಪ್ರಗತಿ ವೇಗವಾಗಲಾರಂಭಿಸಿತು. ಇಂಗ್ಲೆಂಡಿನಲ್ಲಿ ಕಲ್ಲಿದ್ದಲು ಮತ್ತು ಕಬ್ಬಿಣದ ಖನಿಜ ಸಂಪತ್ತು ಹೇರಳವಾಗಿರುವುದು ವರಪ್ರಸಾದವೆನ್ನಬಹುದು. ಕೈಗಾರಿಕಾ ಕ್ರಾಂತಿಯ ಸಿದ್ಧಿಯ ರಹಸ್ಯ ಇವೆರಡರಲ್ಲಡಗಿತ್ತೆಂದೇ ಹೇಳಬಹುದು. ಕೈಗಾರಿಕೆಯ ರಂಗದಲ್ಲಾದ ಈ ಬದಲಾವಣೆ ದೇಶದ ಇತರ ಆರ್ಥಿಕ ರಂಗಗಳಿಗೂ ಪಸರಿಸಿತು. ಉತ್ತಮ ಸಾರಿಗೆ, ವಾಣಿಜ್ಯ, ನೌಕೆ ಇವುಗಳ ಆವಶ್ಯಕತೆ ಹೆಚ್ಚಾದುದರಿಂದ ಈ ದಿಕ್ಕಿನಲ್ಲೂ ಈ ಕ್ರಾಂತಿ ಹಬ್ಬಿತು.

ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಕೈಗಾರಿಕಾ ಕ್ರಾಂತಿ ಒಂದು ರಾತ್ರಿಯಲ್ಲಿ ನಡೆದ ಘಟನೆಯಲ್ಲ. ಆದರೆ ಇದಕ್ಕೆ ಇಂಗ್ಲೆಂಡ್ ಪೂರ್ವಸಿದ್ಧತೆ ಪಡೆದಿತ್ತು. ಶತಮಾನಗಳಿಂದ ನಡೆದ ಪ್ರಯತ್ನ 1760ರ ಅವಧಿಯಲ್ಲಿ ಫಲಿಸಿತೆಂದು ಹೇಳಬಹುದು. 1760-1830ರ ಅವಧಿಯಲ್ಲಿ ಇಂಗ್ಲೆಂಡು ತಯಾರಿಸಿದ ವಸ್ತುಗಳಿಗೆ ಬೇಡಿಕೆ ಹೆಚ್ಚಿತು. ಉತ್ಪಾದನೆ ಹೆಚ್ಚಿತು. ಜನಸಂಖ್ಯೆ ವೃದ್ಧಿಯಾಯಿತು. ತಮ್ಮ ಉತ್ಪಾದನೆಗೆ ಬೇಡಿಕೆ ಹೆಚ್ಚಿದ್ದರಿಂದ, ಉತ್ಪಾದಕರು ಹೆಚ್ಚು ಹೆಚ್ಚು ಲಾಭ ಪಡೆದು ಅದನ್ನು ಮತ್ತೆ ಉತ್ಪಾದನೆಯಲ್ಲಿ ತೊಡಗಿಸುವುದು ಸಾಧ್ಯವಾಯಿತು.

ಉತ್ಪಾದನೆಯ ಜೊತೆಗೆ ಜನಸಂಖ್ಯೆಯೂ ಹೆಚ್ಚಿತು. ಮುಖ್ಯವಾದ ಕೈಗಾರಿಕೆಗಳೊಂದಿಗೆ ಹೊಸ ಹೊಸ ಕಾರ್ಖಾನೆಗಳು ಆರಂಭವಾಗಿ ಕೈಗಾರಿಕೆಯ ರಂಗವನ್ನು ಈ ಕಾಲದಲ್ಲಿ ಬಲಪಡಿಸಿದವು.

ಉತ್ಪಾದನೆಯ ವೃದ್ಧಿಯಿಂದ ದೇಶದ ವಿದೇಶೀ ವ್ಯಾಪಾರವೂ ಹೆಚ್ಚಿತು. ಇಂಗ್ಲೆಂಡ್ ಹೆಚ್ಚು ಹೆಚ್ಚು ವಸ್ತುಗಳನ್ನು ರಫ್ತು ಮಾಡಲು ಪ್ರಾರಂಭಿಸಿತು.

ಕೈಗಾರಿಕಾ ಕ್ರಾಂತಿಯ ಮತ್ತೊಂದು ಪರಿಣಾಮವೆಂದರೆ ಜನ ಹಾಗೂ ಬಂಡವಾಳದ ಸ್ಥಾನಪಲ್ಲಟ. ಕ್ರಾಂತಿಪೂರ್ವದಲ್ಲಿ, ಕೈಗಾರಿಕೆಗಳು ಮುಖ್ಯವಾಗಿ ಉತ್ತರದ ಮತ್ತು ಮಧ್ಯಭಾಗದ ಆರು ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿದ್ದವು. ಆದರೆ ಈ ಕ್ರಾಂತಿಯ ಪರಿಣಾಮವಾಗಿ ವಾಯವ್ಯದಲ್ಲಿ ಜನಸಂಖ್ಯೆ ಮತ್ತು ಬಂಡವಾಳ ಕೇಂದ್ರೀಕೃತವಾದವು. (1918ರ ಅನಂತರ ಕೈಗಾರಿಕೆಗಳು ಮತ್ತೆ ದಕ್ಷಿಣದಲ್ಲಿ ಕೇಂದ್ರೀಕೃತವಾಗುವ ಪ್ರವೃತ್ತಿ ಹೊಂದಿದುವು).

ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಇಂಗ್ಲೆಂಡ್ ಕೈಗಾರಿಕಾ ಪ್ರಧಾನವಾದ ರಾಷ್ಟ್ರವಾಯಿತು. 1851ರ ವೇಳೆಗೆ ಒಟ್ಟು ಜನಸಂಖ್ಯೆಯ ಕೇವಲ 17ರಷ್ಟು ಜನ ಮಾತ್ರ ಕೃಷಿಯಲ್ಲಿ ತೊಡಗಿದ್ದರು (ನೋಡಿ- ಕೈಗಾರಿಕಾ-ಕ್ರಾಂತಿ).

ಮೂಲ : ವಿಕಿಪೀಡಿಯ

ಕೊನೆಯ ಮಾರ್ಪಾಟು : 4/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate