অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೃಷಿ ಕ್ರಾಂತಿ

ಕೃಷಿ ಕ್ರಾಂತಿ

ಸುಮಾರು ಇದೇ ಕಾಲದಲ್ಲಿ ಕೃಷಿಯಲ್ಲೂ ಕ್ರಾಂತಿಯಾಗತೊಡಗಿತು. ಈ ಕ್ರಾಂತಿಗೆ ಪುರ್ವದಲ್ಲಿ ಮೇನರ್ ಪದ್ಧತಿ ಜಾರಿಯಲ್ಲಿತ್ತು. ಬೇಲಿ ಕಟ್ಟದೆ ಕೃಷಿ ನಡೆಸಲಾಗುತ್ತಿತ್ತು. ಒಂದು ಭಾಗವನ್ನು ಬೀಳು ಬಿಡುತ್ತಿದ್ದುದರಿಂದ ಮತ್ತು ಭೂಮಿಯನ್ನು ಸಣ್ಣ ಸಣ್ಣ ಭಾಗಗಳನ್ನಾಗಿ ಮಾಡಿ ಬೆಳೆ ತೆಗೆಯುತ್ತಿದ್ದುದರಿಂದ ಉತ್ಪಾದನೆ ಬಹಳ ಕಡಿಮೆಯಿತ್ತು. 16ನೆಯ ಶತಮಾನದಲ್ಲಿ ನೆಲಕ್ಕೆ ಬೇಲಿ ಹಾಕುವ ಚಳವಳಿ (ಆವರಣ ಚಳವಳಿ) ಆರಂಭವಾ ಯಿತು. ಜಮೀನ್ದಾರರು ಕ್ರಮಕ್ರಮವಾಗಿ ಬೀಳುಭೂಮಿಯನ್ನು ಆಕ್ರಮಿಸಿಕೊಂಡು ಬೇಲಿ ಕಟ್ಟಿ ಅದನ್ನು ದನಕರುಗಳೂ ಕುರಿಗಳೂ ಮೇಯಲು ಅನುಕೂಲವಾಗುವ ಹುಲ್ಲುಗಾವಲನ್ನಾಗಿ ಮಾಡುತ್ತಿದ್ದರು. ಈ ಆವರಣ ಕಾರ್ಯದಲ್ಲಿ ಜಮೀನ್ದಾರರಿಗೆ ಕಾಯಿದೆಯ ಬೆಂಬಲವೂ ಸಿಕ್ಕಿತು.

18ನೆಯ ಶತಮಾನದ ಮಧ್ಯಭಾಗದಲ್ಲೂ ಅನಾವೃತ ನೆಲದ ಬೇಸಾಯ ಪದ್ಧತಿ ಇಂಗ್ಲೆಂಡಿನ ಸುಮಾರು ಅರ್ಧ ಭಾಗದಲ್ಲಿ ಜಾರಿಯಲ್ಲಿತ್ತು. ಕೃಷಿಪದ್ಧತಿ ಇನ್ನೂ ಆಧುನಿಕ ವಾಗಿರಲಿಲ್ಲ. 18ನೆಯ ಶತಮಾನದಲ್ಲಿ ಜನಸಂಖ್ಯೆ ವೇಗವಾಗಿ ಬೆಳೆಯಲಾರಂಭಿಸಿದುದರಿಂದ ಆಹಾರಕ್ಕೆ ಬೇಡಿಕೆ ಹೆಚ್ಚಿತು.

ಈ ರೀತಿಯ ಜಮೀನು ಆವರಣಕ್ಕೆ ಎರಡು ಮುಖ್ಯ ಕಾರಣಗಳಿದ್ದವು. ಒಂದು, ಹೆಚ್ಚುತ್ತಿದ್ದ ಜನಸಂಖ್ಯೆಗೆ ಹೆಚ್ಚಿನ ಆಹಾರದ ಅಗತ್ಯ; ಎರಡು, ಆರ್ಥಿಕ ಪ್ರಗತಿಯಿಂದ ಶ್ರೀಮಂತರಾಗುತ್ತಿದ್ದ ವಣಿಕ ವರ್ಗಕ್ಕೆ ತಮ್ಮ ಹಣವನ್ನು ಹೂಡಲು ಜಮೀನು ತಕ್ಕದೆಂದು ಕಾಣಿಸಿದ್ದು. ಇದರಿಂದ ಈ ವರ್ಗದವರು ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಬಲಿಷ್ಠರೆಂದು ಹೇಳಿಕೊಳ್ಳಬಹುದಿತ್ತು. ಇವರು ಹೆಚ್ಚು ಹೆಚ್ಚು ಭೂಮಿಯನ್ನು ಕೊಂಡು ಅದನ್ನು ಸುತ್ತುಗಟ್ಟಿ ಬೇಲಿ ಹಾಕಿ ಆಧುನಿಕ ರೀತಿಯಲ್ಲಿ ಬೇಸಾಯ ಮಾಡಿಸುವುದಕ್ಕೆ ಪ್ರಾರಂಭಿಸಿದರು.

ಈ ರೀತಿಯ ಬೇಸಾಯ ಕ್ರಮದಿಂದ ನಷ್ಟಕ್ಕೆ ಗುರಿಯಾದವರೆಂದರೆ ಸಣ್ಣ ಸಣ್ಣ ರೈತರು. ಅವರಿಂದ ಜಮೀನನ್ನು ಶ್ರೀಮಂತ ಜಮೀನ್ದಾರರು ಕೊಳ್ಳುತ್ತಿದ್ದುದರಿಂದ ಅವರು ಅನೇಕ ವೇಳೆ ಜಮೀನನ್ನು ಕಳೆದುಕೊಂಡು ಊರು ಬಿಡಬೇಕಾದ ಪರಿಸ್ಥಿತಿಯಲ್ಲಿರುತ್ತಿದ್ದರು. ಸಣ್ಣ ರೈತರಿಗೆ ಜಮೀನು ಮಾರಲು ಇಷ್ಟವಿಲ್ಲದಿದ್ದರೂ ತಮ್ಮ ಸಣ್ಣ ಬಂಡವಾಳದೊಂದಿಗೆ ಬೇಲಿ ಹಾಕಿ ಪಕ್ಕದಲ್ಲೇ ಉತ್ತಮ ರೀತಿಯಲ್ಲಿ ಬೇಸಾಯ ನಡೆಸುತ್ತಿದ್ದ ಜಮೀನ್ದಾರರೊಡನೆ ಸ್ಪರ್ಧಿಸುವುದಕ್ಕಾಗುತ್ತಿರಲಿಲ್ಲ. ಹೀಗಾಗಿ ಅವರು ಜಮೀನನ್ನು ತಾವಾಗಿಯೇ ಮಾರಬೇಕಾದ ಪರಿಸ್ಥಿತಿ ಬರುತ್ತಿತ್ತು. ಈ ವರ್ಗ ಕ್ರಮಕ್ರಮವಾಗಿ ಮಾಯವಾಗುತ್ತಿದ್ದದ್ದು ಇಂಗ್ಲೆಂಡಿನ ಸಾಮಾಜಿಕ ಜೀವನಕ್ಕೆ ಒದಗಿದ ದೊಡ್ಡ ನಷ್ಟವೆಂದು ಹೇಳಲಾಗಿದೆ. ಬೇಲಿ ಹಾಕಿ ದೊಡ್ಡ ಪ್ರಮಾಣದಲ್ಲಿ ಬೇಸಾಯ ಮಾಡುವ ಪದ್ಧತಿ ಬಂಡವಾಳಪ್ರಧಾನವಾದ ಬೇಸಾಯ ಕ್ರಮಕ್ಕೆ ನಾಂದಿ ಹಾಡಿತೆಂದು ಹೇಳಬಹುದು.

ಭೂಮಿಯ ಉತ್ಪಾದನೆಯನ್ನು ಹೆಚ್ಚಿಸಲು ಉತ್ತಮ ರೀತಿಯ ಬೇಸಾಯವೂ ಅಗತ್ಯವಾಯಿತು. ಹಿಂದೆ ಭೂಮಿಯ ಫಲವತ್ತತೆ ಹೆಚ್ಚಿಸಲು ತ್ರಿಪ್ರದೇಶ ವ್ಯವಸಾಯ ಪದ್ಧತಿಯನ್ನು ಅನುಸರಿಸಲಾಗುತ್ತಿತ್ತು: ಒಂದು ಭಾಗದ ಭೂಮಿಯನ್ನು ಬೀಳು ಬಿಡುವುದು, ಸರದಿಯ ಪ್ರಕಾರ ಒಂದೊಂದು ಬೆಳೆಯನ್ನು ತೆಗೆಯುವುದು ಮತ್ತು ಪ್ರಾಣಿಗಳ ಗೊಬ್ಬರವನ್ನು ಉಪಯೋಗಿಸುವುದು. ಆದರೆ ಜಮೀನನ್ನು ವಿಸ್ತಾರಗೊಳಿಸಿ ಕೃಷಿ ಮಾಡಲಾರಂಭಿಸಿದ ಮೇಲೆ ಈ ಮಾರ್ಗಗಳು ಅಷ್ಟೇನೂ ಫಲಪ್ರದವಾದುವೆಂದು ಅನ್ನಿಸಲಿಲ್ಲ. ಅದಕ್ಕೆ ಬದಲಾಗಿ ವೈಜ್ಞಾನಿಕ ಬೇಸಾಯಕ್ಕೆ ಗಮನಕೊಡಲಾಯಿತು. ಈ ಎಲ್ಲ ಸಂಶೋಧನೆಗಳಿಂದ ಕೃಷಿಯ ಪ್ರಗತಿಗೆ ಬಹಳ ಸಹಾಯವಾಯಿತು.

ಕೈಗಾರಿಕಾ ಕ್ರಾಂತಿಯಂತೆಯೇ ಕೃಷಿ ಸಹ ಹಂತಹಂತವಾಗಿ ನಡೆದ ಬದಲಾವಣೆ. ಕೃಷಿಗೂ ವಿಜ್ಞಾನವನ್ನು ಅಳವಡಿಸುವ ಪ್ರಯತ್ನ ಸಫಲವಾಯಿತು. 19ನೆಯ ಶತಮಾನದ ಮಧ್ಯಭಾಗದಲ್ಲಿ ಜರ್ಮನಿಯ ರಸಾಯನಶಾಸ್ತ್ರದ ಸಹಾಯದಿಂದ ಕೃಷಿಗೆ ಆಗಬಹುದಾದ ಲಾಭವನ್ನು ಬೇಸಾಯ ಶಾಸ್ತ್ರಜ್ಞ ಜಸ್ಪಸ್ ವಾನ್ ಲೇಬರ್ಗ್ ತೋರಿಸಿಕೊಟ್ಟ. ತತ್ಕ್ಷಣವೇ ಇಂಗ್ಲೆಂಡಿನಲ್ಲಿಯೂ ರಾಸಾಯನಿಕ ಗೊಬ್ಬರದ ಉತ್ಪಾದನೆಯನ್ನು ಕೈಗೊಳ್ಳಲಾಯಿತು. ಕೃಷಿಕರು ಸಹಜ ಗೊಬ್ಬರವನ್ನು ಅವಲಂಬಿಸುವುದನ್ನು ಇದು ತಪ್ಪಿಸಿತು.

ವೈಜ್ಞಾನಿಕ ಕೃಷಿಸಾಧನಗಳ ಆವಿಷ್ಕಾರ ಉತ್ಪಾದನೆಯನ್ನು ತೀವ್ರವಾಗಿ ವೃದ್ಧಿಪಡಿಸುವುದಕ್ಕೆ ಸಹಾಯ ಮಾಡಿತು. ಕೈಗಾರಿಕೆಯ ರಂಗದಲ್ಲಿ ಸಾಧ್ಯವಾದ ಪ್ರಮಾಣದಲ್ಲಿಯೇ ಕೃಷಿರಂಗದಲ್ಲೂ ಯಂತ್ರಗಳ ಪಾತ್ರ ಹೆಚ್ಚುವುದು ಸಾಧ್ಯವಾಗಲಿಲ್ಲ. ಕೃಷಿಯಲ್ಲಿ ನಿಸರ್ಗದ ಪಾತ್ರ ಹಿರಿದು. ಕೈಗಾರಿಕೆಯ ರಂಗದಲ್ಲಿ ಮಾನವರ ಪಾತ್ರ ಹಿರಿದು. ಕೈಗಾರಿಕೆಯ ರಂಗದಲ್ಲಿ ಕಚ್ಚಾ ಮಾಲಿನ ಪರಿಷ್ಕಾರದಿಂದ ಹಿಡಿದು ಒಂದು ವಸ್ತು ಪೂರ್ಣಗೊಳ್ಳುವವರೆಗೂ ಯಂತ್ರಗಳ ಸಹಾಯದಿಂದಲೇ ಕೆಲಸ ಮಾಡಿಸುವುದು ಸಾಧ್ಯವಿದ್ದುದರಿಂದ ಅಲ್ಲಿ ಯಂತ್ರಗಳ ಆವಿಷ್ಕಾರಕ್ಕೆ ಬಹಳ ಪ್ರಾಧಾನ್ಯವಿದ್ದು ಅದು ಸಾಧ್ಯವಾಯಿತು. ಕೃಷಿ ರಂಗದಲ್ಲಿ ಆದ ಆವಿಷ್ಕಾರಗಳು ಕೃಷಿಕಾರ್ಯಗಳನ್ನು ಶೀಘ್ರವಾಗಿ ಮಾಡಿ ಮುಗಿಸುವ ಯಂತ್ರಗಳಿಗೆ ಮಾತ್ರ ಸೀಮಿತವಾಗಿತ್ತು.

1793-1815ರಲ್ಲಿ ಇಂಗ್ಲೆಂಡಿನ ಜಮೀನ್ದಾರರು ಬಹಳ ಉಚ್ಛ್ರಾಯ ಸ್ಥಿತಿಯನ್ನು ಅನುಭವಿಸಿದರು. ಫ್ರಾನ್ಸಿನ ಕ್ರಾಂತಿ, ನೆಪೋಲಿಯನ್ ಯುದ್ಧ ಮುಂತಾದವುಗಳಿಂದಾಗಿ ಇಂಗ್ಲೆಂಡಿನಲ್ಲಿ ಧಾನ್ಯಗಳ ಬೆಲೆ ಏರಹತ್ತಿತು. ಇದರಿಂದಾಗಿ ಹೆಚ್ಚು ಹೆಚ್ಚು ಭೂಮಿಯನ್ನು ಉಳುವುದಕ್ಕೆ ಪ್ರಾರಂಭಿಸಿದರು. 1750-1801ರಲ್ಲಿ ಇಂಗ್ಲೆಂಡಿನ ಪ್ರಜಾಸಂಖ್ಯೆ ದ್ವಿಗುಣವಾದ್ದರಿಂದ ಆಹಾರಧಾನ್ಯಕ್ಕೆ ಬೇಡಿಕೆ ಇನ್ನೂ ಹೆಚ್ಚಿತು. ಇದು ಆವರಣ ಕ್ರಮವನ್ನು ಇನ್ನೂ ವಿಸ್ತಾರಗೊಳಿಸಿತು. 19ನೆಯ ಶತಮಾನದ ಅಂತ್ಯದ ವೇಳೆಗೆ ಸಣ್ಣ ಸಣ್ಣ ರೈತರ ವರ್ಗ ಹೆಚ್ಚು ಕಡಿಮೆ ಮಾಯವಾಗಿತ್ತೆಂದೇ ಹೇಳಬಹುದು. ಧನಿಕ ಜಮೀನ್ದಾರರು ವಿಸ್ತಾರವಾದ ಭೂಮಿಯಲ್ಲಿ ಬೇಸಾಯವನ್ನು ಆಧುನಿಕ ರೀತಿಯಲ್ಲಿ ಮಾಡುತ್ತಿದ್ದರು. ಕೃಷಿ ಆಧುನಿಕಗೊಂಡಿದ್ದರಿಂದ ಕೃಷಿಯ ಮೇಲೆ ಅವಲಂಬಿತವಾಗಿದ್ದ ಶೇಕಡಾವಾರು ಪ್ರಜಾಸಂಖ್ಯೆ ಇಳಿಮುಖವಾಗುತ್ತ ಬಂತು.

1815ರಲ್ಲಿ ನೆಪೋಲಿಯನ್ ಯುದ್ಧ ಮುಗಿದಾಗ ಧಾನ್ಯಗಳ ಬೆಲೆಗಳು ಕುಸಿಯಬಹುದೆಂಬ ಶಂಕೆಯಿಂದ ಪಾರ್ಲಿಮೆಂಟ್ ಧಾನ್ಯಕಾಯಿದೆಯ ಮೂಲಕ ಗೋಧಿ ಮತ್ತು ಇತರ ಧಾನ್ಯಗಳ ಆಮದನ್ನು ನಿಷೇಧಿಸಿತು. 1846ರಲ್ಲಿ ಈ ಕಾಯಿದೆ ಕೊನೆಗೊಂಡಿತು.

1838ರಲ್ಲಿ ಅಸ್ತಿತ್ವಕ್ಕೆ ಬಂದ ರಾಯಲ್ ಕೃಷಿ ಸಂಸ್ಥೆಯಿಂದ ಕೃಷಿಯ ಪ್ರಗತಿಗೆ ಇಂಗ್ಲೆಂಡಿನಲ್ಲಿ ಬಹಳ ಮಟ್ಟಿಗೆ ಸಹಾಯಕವಾಯಿತು. ಇದು ಕೃಷಿಯ ಹೃದಯ ಹಾಗೂ ಮೆದುಳು ಎಂದು ಪ್ರಸಿದ್ಧವಾಗಿತ್ತು. ಇದು ಕೃಷಿಕರಿಗೆ ಹೊಸ ಹೊಸ ಸಲಹೆಗಳನ್ನು ಕೊಡಲು ಸಮರ್ಥವಾಗಿತ್ತು. ಸರಕಾರವೂ ಕೃಷಿಗೆ ಈ ಅವಧಿಯಲ್ಲಿ ಧಾರಾಳವಾಗಿ ಸಹಾಯ ಮಾಡಿತು.

1850ರ ಅನಂತರ ಸುಮಾರು ಎರಡು ದಶಕಗಳ ಕಾಲ ಇಂಗ್ಲೆಂಡಿನ ಕೃಷಿ ತನ್ನ ಅತ್ಯಂತ ಪ್ರಗತಿಯ ದಿನಗಳನ್ನು ಕಂಡಿತು. ಕೃಷಿ ಕ್ಷೇತ್ರದಲ್ಲಿ ಇಂಗ್ಲೆಂಡಿನೊಂದಿಗೆ ಪೈಪೋಟಿ ಮಾಡುತ್ತಿದ್ದ ರಾಷ್ಟ್ರಗಳಾದ ಅಮೆರಿಕ, ರಷ್ಯ, ಜರ್ಮನಿ ಮತ್ತು ಇತರ ರಾಷ್ಟ್ರಗಳು ಈ ಅವಧಿಯಲ್ಲಿ ತಮ್ಮದೇ ಆದ ಸಮಸ್ಯೆಗಳನ್ನು ಎದುರಿಸುತ್ತಿದ್ದವು. 1860ರಲ್ಲಿ ಅಮೆರಿಕದಲ್ಲಿ ಅಂತರ್ಯುದ್ಧ ಸಂಭವಿಸಿತು. ರಷ್ಯ-ಕ್ರಿಮಿಯನ್ ಯುದ್ಧ ತಲೆ ಎತ್ತುತ್ತಿತ್ತು. ಜರ್ಮನಿ ತನ್ನ ನೆರೆ ರಾಷ್ಟ್ರಗಳ ಮೇಲೆ ಯುದ್ಧ ಹೂಡಿದ ಅನಂತರ ತನ್ನ ಸಂಪತ್ತನ್ನು ರೂಢಿಸಿ ಕೊಳ್ಳುವುದರಲ್ಲಿತ್ತು. ಹೀಗಾಗಿ, ಗೋಧಿ ಇತ್ಯಾದಿ ಧಾನ್ಯಗಳು ಆ ರಾಷ್ಟ್ರಗಳಿಂದ ಕಡಿಮೆ ಬೆಲೆಗೆ ಇಂಗ್ಲೆಂಡಿಗೆ ಬರುವುದು ಅಸಾಧ್ಯವಾಗಿತ್ತು. ಹೀಗಾಗಿ ಇಂಗ್ಲೆಂಡಿನ ಧಾನ್ಯದ ಬೆಲೆ ಕುಸಿಯಲಿಲ್ಲ. ಬದಲಾಗಿ ಆಸ್ಟ್ರೇಲಿಯ ಮತ್ತು ಕ್ಯಾಲಿಫೊ಼ರ್ನಿಯದಿಂದ ಇಂಗ್ಲೆಂಡಿಗೆ ಚಿನ್ನ ಬರುವುದಕ್ಕೆ ಆರಂಭವಾಗಿ ಧಾನ್ಯದ ಬೆಲೆ ಇನ್ನೂ ಹೆಚ್ಚಿತು. ಇಂಗ್ಲೆಂಡಿನ ಕೃಷಿಕರು ಈ ಸುಸಂದರ್ಭವನ್ನು ಉಪಯೋಗಿಸಿಕೊಂಡು ಉತ್ಪಾದನೆ ಹೆಚ್ಚಿಸಿದರು. ಕೃಷಿಗೆ ಯಂತ್ರಸಾಧನೆ ಗಳನ್ನು ಹೆಚ್ಚು ಹೆಚ್ಚಾಗಿ ಅಳವಡಿಸಲಾಯಿತು.

ಆದರೆ 1874ರ ಅನಂತರ ಕೃಷಿಗೆ ದುರ್ದಿನಗಳು ಬಂದವು. ಇದಕ್ಕೆ ಅನೇಕ ಕಾರಣ ಗಳಿದ್ದವು. ಮಳೆ ಬೀಳದೆ ಹೋದುದರಿಂದ ಬೆಳೆ ಕಡಿಮೆಯಾಯಿತು. 1873-79ರ ನಡುವೆ ಬೆಳೆ ಸ್ವಲ್ಪವೂ ಆಶಾದಾಯಕವಾಗಿರಲಿಲ್ಲ. ವಿದೇಶೀ ಪೈಪೋಟಿ ತೀರ ಹೆಚ್ಚಾಯಿತು. ಉತ್ತರ ಅಮೆರಿಕದವರು ಧಾನ್ಯಗಳನ್ನು ಅತ್ಯಂತ ಕನಿಷ್ಠ ಬೆಲೆಗೆ ಮಾರುವುದು ಸಾಧ್ಯವಿತ್ತು. ಹೊಸ ಭೂಮಿಯಲ್ಲಿ ಬೆಳೆಯುತ್ತಿದ್ದ ಆ ದೇಶದವರು ಗೋಧಿಯನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಬೆಳೆದು ಇಂಗ್ಲೆಂಡಿಗೆ ರಫ್ತು ಮಾಡುತ್ತಿದ್ದರು. ಅಮೆರಿಕದ ಕಡಿಮೆ ಬೆಲೆಯ ಗೋಧಿ ಇಂಗ್ಲೆಂಡಿನ ಕೃಷಿಕರನ್ನು ಬಹಳ ಕಷ್ಟಕ್ಕೀಡುಮಾಡಿತು. ಅಮೆರಿಕದಿಂದ ಇಂಗ್ಲೆಂಡಿಗೆ ಗೋಧಿ ಸಾಗಿಸುವ ವೆಚ್ಚವೂ ಈ ಸಮಯದಲ್ಲೇ ಕಡಿಮೆಯಾದ್ದರಿಂದ ಗೋಧಿಯ ಬೆಲೆ ಮತ್ತಷ್ಟು ಇಳಿಯಿತು. ಇದರಿಂದಾಗಿ ಇಂಗ್ಲೆಂಡಿನಲ್ಲಿ ಗೇಣಿ ಅತ್ಯಂತ ಕಡಿಮೆಯಾಯಿತು. ಇಂಗ್ಲೆಂಡಿನ ಕೃಷಿಕರು ಕಡಿಮೆ ಭೂಮಿಯಲ್ಲಿ ಬೆಳೆಯಲಾರಂಭಿಸಿದರು. ಹಳ್ಳಿಯ ಜನಸಂಖ್ಯೆ ಇದರಿಂದ ಕಡಿಮೆಯಾಗುವುದಕ್ಕಾರಂಭವಾಯಿತು. ಇದೇ ಸಮಯದಲ್ಲಿ ಅಮೆರಿಕದಲ್ಲಿ ಗೋಧಿ ಬೆಳೆಯುತ್ತಿದ್ದ ಪ್ರದೇಶ ಹೆಚ್ಚಾಯಿತು. ಇದರ ಪರಿಣಾಮವಾಗಿ ಇಂಗ್ಲೆಂಡಿನಲ್ಲಿ ಧಾನ್ಯದ ಉತ್ಪಾದನೆ ಕಡಿಮೆಯಾಯಿತು. ಇಂಗ್ಲೆಂಡಿನ ಜನ ಹೆಚ್ಚು ಹೆಚ್ಚು ಆಮದು ಆಹಾರದ ಮೇಲೆ ಅವಲಂಬಿತರಾದರು. 1875 ಮತ್ತು 1905ರ ನಡುವೆ ಆಹಾರದ ಆಮದು ಶೇಕಡ 130ರಷ್ಟು ಹೆಚ್ಚಿತು.

ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಅನೇಕ ಪ್ರಯತ್ನಗಳನ್ನು ಸರ್ಕಾರ ಮಾಡಿತು. ಸಣ್ಣ ಹಿಡುವಳಿ ರಚಿಸಿದರೆ ಉತ್ಪಾದನೆಯಲ್ಲಿ ಪ್ರಗತಿಯಾಗಬಹುದೆಂದು ಸಣ್ಣ ಹಿಡುವಳಿಗಳಿಗೆ ಪ್ರಾರಂಭದಲ್ಲಿ ಪ್ರೋತ್ಸಾಹ ಕೊಡಲಾಯಿತು. ಇದನ್ನು ಜಾರಿಗೆ ತರಲು ಅನೇಕ ಕಾಯಿದೆಗಳನ್ನು ಜಾರಿಗೆ ತರಲಾಯಿತು. 1907ರ ಸಣ್ಣ ಹಿಡುವಳಿ ಮತ್ತು ಹಂಚಿಕೆ ಕಾಯಿದೆಯಲ್ಲಿ ಭೂಮಿಯನ್ನು ಕೊಂಡು ಅಥವಾ ಬಲಾತ್ಕಾರವಾಗಿ ಗೇಣಿಗೆ ಪಡೆದುಕೊಂಡು ಸಣ್ಣ ಸಣ್ಣ ಹಿಡುವಳಿಗಳನ್ನು ಮಾಡಿ ಸಣ್ಣ ರೈತರಿಗೆ ಗುತ್ತಿಗೆಗೆ ಕೊಡುವುದು ಅಥವಾ ಮಾರುವುದು ಸಾಧ್ಯವಾಯಿತು. ಸಣ್ಣ ರೈತರಿಗೆ ಭೂಮಿಯ ಬೆಲೆಯನ್ನು ಸಣ್ಣ ಸಣ್ಣ ಕಂತುಗಳಲ್ಲಿ ಕಟ್ಟುವ ಅನುಕೂಲ ಕಲ್ಪಿಸಿಕೊಡಲಾಗಿತ್ತು.

ಸಣ್ಣ ಹಿಡುವಳಿಗಳನ್ನು ನಿರ್ಮಿಸಿದ್ದಲ್ಲದೆ, ಕೃಷಿಗೆ ಅಗತ್ಯವಾದ ಬೇರೆ ಸೌಕರ್ಯಗಳನ್ನೂ ಕಲ್ಪಿಸಿಕೊಡಲಾಗಿತ್ತು. ಸಹಕಾರಕ್ಕೆ ಹಳ್ಳಿಗಳಲ್ಲಿ ಹೆಚ್ಚಿನ ಪ್ರಾಧಾನ್ಯ ಕೊಡಲಾಯಿತು. ಕೃಷಿಗೆ ಸಾಲ, ವೈಜ್ಞಾನಿಕ ರೀತಿಯ ತರಬೇತಿ ಮತ್ತು ಕೃಷಿಕ ಕಾರ್ಮಿಕ ಸಂಘಗಳನ್ನು ವ್ಯವಸ್ಥೆ ಮಾಡಿ ಕೃಷಿಯನ್ನು ಉತ್ತಮಪಡಿಸುವ ಪ್ರಯತ್ನ ನಡೆಯಿತು.

ಪ್ರಥಮ ಮಹಾಯುದ್ಧದ ಕಾಲದಲ್ಲಿ ಆಹಾರದ ವಿಷಮ ಪರಿಸ್ಥಿತಿ ನಿವಾರಿಸುವುದಕ್ಕಾಗಿ ಸರ್ಕಾರ ನೇರವಾಗಿ ಕೃಷಿರಂಗವನ್ನು ಪ್ರವೇಶಿಸಿತು. 1917ರ ಧಾನ್ಯ ಉತ್ಪಾದನಾ ಕಾಯಿದೆಯನ್ವಯ ಕೌಂಟಿ ಕೃಷಿಸಮಿತಿಗಳನ್ನು ನೇಮಿಸಿತು. ಈ ಸಮಿತಿಗಳಿಗೆ ಉತ್ಪಾದನೆಯನ್ನು ಹೆಚ್ಚಿಸಲು ಅನೇಕ ಹಕ್ಕುಗಳನ್ನು ಕೊಡಲಾಗಿತ್ತು. ಕೃಷಿಕರು ಹೇಗೆ ತಮ್ಮ ಭೂಮಿಯನ್ನು ಉಪಯೋಗಿಸಬೇಕು ಎಂಬುದನ್ನು ಬಲಾತ್ಕಾರವಾಗಿ ನಿರ್ದೇಶಿಸುವ ಹಕ್ಕು ಈ ಸಮಿತಿಗಳಿಗಿತ್ತು. 1918ರಲ್ಲಿ ಗೋದಿ, ಓಟ್ಸ್ ಮತ್ತು ಆಲೂಗೆಡ್ಡೆಯ ಬೆಳೆ ಸುಮಾರು ಶೇ.59ರಷ್ಟು ಹೆಚ್ಚಿತು. ಯುದ್ಧಕಾಲದಲ್ಲಿ ಹೆಚ್ಚಿಗೆ ಜಮೀನನ್ನು ಕೃಷಿಗೆ ಒಳಪಡಿಸಲಾಯಿತು. ಆದರೆ ಯುದ್ಧ ಮುಗಿದ ತಕ್ಷಣ ಸರ್ಕಾರ ಕೃಷಿರಂಗದಿಂದ ವಾಪಸ್ಸಾಯಿತು.

1920ರ ಪ್ರಪಂಚದ ಮಹಾ ಆರ್ಥಿಕ ಮುಗ್ಗಟ್ಟಿನ ಕಾಲದಲ್ಲಿ ಇಂಗ್ಲೆಂಡಿನ ಕೃಷಿಕರು ಮತ್ತೆ ದುರ್ದಿನಗಳನ್ನು ಎದುರಿಸಬೇಕಾಯಿತು (ನೋಡಿ-ಪ್ರಪಂಚದ ಆರ್ಥಿಕ ಮುಗ್ಗಟ್ಟು). ಕೈಗಾರಿಕೆಯ ಕ್ಷೇತ್ರದಲ್ಲಿ ನಿರುದ್ಯೋಗ ಹೆಚ್ಚಿದುದರಿಂದ ಕೃಷಿವಸ್ತುಗಳ ಬೆಲೆಗಳೂ ಕುಸಿಯಲಾರಂ ಭಿಸಿದವು. ಇಂಗ್ಲೆಂಡ್ ವಿದೇಶಿ ಪೈಪೋಟಿಗೆ ತೀವ್ರವಾಗಿ ತುತ್ತಾಯಿತು. 1932ರಲ್ಲಿ ಗೋಧಿ ಕಾಯಿದೆಯನ್ನು ಜಾರಿಗೆ ತರಲಾಯಿತು. ಇದರ ಪ್ರಕಾರ ಇಂಗ್ಲೆಂಡಿನಲ್ಲಿ ಬೆಳೆದ ಒಂದು ನಿರ್ದಿಷ್ಟ ಪ್ರಮಾಣದ ಗೋಧಿಗೆ ಕನಿಷ್ಠ ಬೆಲೆಯನ್ನು ನಿಗದಿ ಮಾಡಲಾಯಿತು. ಕೃಷಿ ಉತ್ಪಾದನ ಸಾಮಗ್ರಿಗಳನ್ನು ಮಾರುವ ಬೆಲೆಯನ್ನು ನಿಯಂತ್ರಿಸಲು ಅನೇಕ ಮಾರುಕಟ್ಟೆ ಮಂಡಲಿಗಳನ್ನು ರಚಿಸಲಾಯಿತು.

1931 ಮತ್ತು 33ರ ಕೃಷಿ ಉತ್ಪನ್ನ ಮಾರಾಟ ಕಾಯಿದೆಗಳು ಕೃಷಿ ವಸ್ತುಗಳನ್ನು ಸುಲಭವಾಗಿ ಮಾರಲು ಸಹಾಯ ಮಾಡಿದವು. ಇಂಗ್ಲೆಂಡಿನ ಕೃಷಿ ಉತ್ಪಾದನೆಗೆ ಉಪಕಾರಿ ಯಾಗುವಂತೆ ಅಂಥ ವಸ್ತುಗಳ ಆಯಾತವನ್ನು ನಿಯಂತ್ರಿಸಲು ವ್ಯಾಪಾರದ ಮಂಡಲಿಗೆ ಅಧಿಕಾರ ನೀಡಲಾಯಿತು. ಈ ಕ್ರಮಗಳಲ್ಲದೆ ಅಂತಾರಾಷ್ಟ್ರೀಯ ಒಪ್ಪಂದಗಳ ಮೂಲಕವೂ ಕೃಷಿಯ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸಲಾಯಿತು. 1932ರ ಒಟಾವದ ಸಾಮ್ರಾಜ್ಯ ಸಮ್ಮೇಳನದ ಒಪ್ಪಂದಕ್ಕನುಗುಣವಾಗಿ ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡಿನ ಆಹಾರದ ಆಮದನ್ನು ಕಡಿಮೆ ಮಾಡಲಾಯಿತು. ಒಟ್ಟಿನಲ್ಲಿ ಆರ್ಥಿಕ ಕುಸಿತ ಇಂಗ್ಲೆಂಡಿನಲ್ಲಿ ಒಂದು ರಾಷ್ಟ್ರೀಯ ಕೃಷಿ ನಿಯಮವನ್ನು ಜಾರಿಗೆ ತಂದಿತೆಂದು ಹೇಳಬಹುದು. ಕೃಷಿಕರೂ ಸ್ವತಂತ್ರವಾಗಿ ಉತ್ಪಾದನಾವೆಚ್ಚವನ್ನು ಕಡಿಮೆ ಮಾಡುವ ಮತ್ತು ಹೆಚ್ಚು ದೃಢವಾದ ಬೆಳೆಗಳನ್ನು ಬೆಳೆಯುವ ಪ್ರಯತ್ನ ಮಾಡಿದರು.

ಎರಡನೆಯ ಮಹಾಯುದ್ಧದ ಕಾಲದಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ತೀವ್ರವಾದ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಈ ಕಾಲದ ಕೃಷಿನೀತಿಯ ಮುಖ್ಯ ಗುರಿಯೆಂದರೆ ಆಹಾರದಲ್ಲಿ ಸ್ವಾವಲಂಬನೆಯ ಸಾಧನೆ. ಉತ್ಪಾದನೆಯನ್ನು ಹೆಚ್ಚಿಸುವ ಅನೇಕ ಕಾರ್ಯಕ್ರಮ ಗಳನ್ನು ರೂಪಿಸಲಾಯಿತು. ಹುಲ್ಲುಗಾವಲುಗಳನ್ನು ಧಾನ್ಯ ಬೆಳೆಯುವ ಜಮೀನುಗಳನ್ನಾಗಿ ಪರಿವರ್ತಿಸಲಾಯಿತು. ದೇಶಾದ್ಯಂತ ಯುದ್ಧ ಕೃಷಿ ಸಮಿತಿಗಳನ್ನು ನೇಮಿಸಲಾಯಿತು. ಈ ಸಮಿತಿಗಳು ಕೃಷಿಕರಿಗೆ ಅಗತ್ಯವಾದ ರಾಸಾಯನಿಕ ಗೊಬ್ಬರವನ್ನೂ ಯಂತ್ರಸಾಮಗ್ರಿ ಗಳನ್ನೂ ಒದಗಿಸುತ್ತಿದ್ದವು. ಇವು ಭೂಮಾಲೀಕರಿಗೆ ಯಾವ ರೀತಿಯ ಬೆಳೆ ಬೆಳೆಯಬೇಕು ಇತ್ಯಾದಿಗಳ ವಿಷಯದಲ್ಲಿ ನಿರ್ದೇಶನ ಕೊಡುತ್ತಿದ್ದವು. ಈ ಕ್ರಮಗಳಿಂದ ಉತ್ಪಾದನೆಯಲ್ಲಿ ಹೆಚ್ಚಳ ಸಾಧಿಸುವುದು ಸಾಧ್ಯವಾಯಿತು.

ಈ ಹೆಚ್ಚಿನ ಉತ್ಪಾದನೆಯ ಸಿದ್ಧಿಗೆ ಸರ್ಕಾರ ತನ್ನ ಕಾಯಿದೆಗಳ ಮೂಲಕ ಸಹಾಯ ಮಾಡಿತು. ಮಾರಾಟ ಸೌಲಭ್ಯಗಳ ಒಪ್ಪಂದದ ಮೂಲಕ ರೈತರಿಗೆ ಖಚಿತ ಬೆಲೆಗಳನ್ನು ಒದಗಿಸಿ ಕೃಷಿಯನ್ನು ಪ್ರೋತ್ಸಾಹಿಸಲಾಯಿತು. ಯುದ್ಧಾನಂತರದಲ್ಲಿ ಸಹ ಈ ಪ್ರೋತ್ಸಾಹಗಳು ಮುಂದುವರಿದುವು.

ಮೂಲ : ವಿಕಿಪೀಡಿಯ

ಕೊನೆಯ ಮಾರ್ಪಾಟು : 7/17/2020© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate