অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೆಲ ಕೆಲಸ ಕುಂತಲ್ಲಿ, ಉಚಿತವಾಗಿ!

ಕೆಲ ಕೆಲಸ ಕುಂತಲ್ಲಿ, ಉಚಿತವಾಗಿ!

ರೈತ ಕಾಲದೊಂದಿಗೆ ಸ್ಪರ್ಧಿಸಲೇಬೇಕು. ಕೃಷಿಗೆ ಮತ್ತು ಬದುಕಿಗೆ ಅಗತ್ಯವಾದ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ. ಜೊತೆಜೊತೆಗೆ ಆ ಪ್ರಕ್ರಿಯೆಗೆ ಪೂರಕವಾದ ಜಾಣ್ಮೆಯನ್ನು ತುಂಬಿಕೊಳ್ಳಬೇಕು. ಹಾಗಂತಲೇ ಈ ಅಂಕಣ ಹಲವು ನಿಟ್ಟಿನ ಮಾಹಿತಿಗಳನ್ನು ನಿಮಗೆ ಕೊಟ್ಟಿದೆ. ಈ ಬಾರಿ ಹಲವು ಸಣ್ಣ ಪುಟ್ಟ ವಿಷಯಗಳು, ಮಾಹಿತಿಗಳತ್ತ ದೃಷ್ಟಿ ಹಾಯಿಸೋಣ. ಬಹುಷಃ ಈ ಕ್ಷಣಕ್ಕೆ ಅವು ಸಹಾಯಕ ಎನ್ನಿಸದಿರಬಹುದು. ಆದರೆ ಒಂದಲ್ಲಾ ಒಂದು ಘಳಿಗೆಯಲ್ಲಿ ಇವು ಬೇಕಾಗುವುದು ಖಚಿತ.


ಕೃಷಿ ಮಾಹಿತಿಯನ್ನು ಪಡೆದುಕೊಳ್ಳಲು ರಾಜ್ಯ ಸರ್ಕಾರ ಒಂದು ಉಚಿತ ದೂರವಾಣಿ ಸೌಲಭ್ಯವನ್ನು ಆರಂಭಿಸಿದೆ. ಪ್ರತಿದಿನ ಬೆಳಿಗ್ಗೆ ಏಳರಿಂದ ರಾತ್ರಿ ಒಂಬತ್ತರವರೆಗೆ ನಾವು ೧೮೦೦ ೪೨೫ ೩೫೫೩ ಎಂಬ ಸಂಖ್ಯೆಗೆ ಕರೆ ಮಾಡಬಹುದು. ರಾಜ್ಯ ಮಟ್ಟದಲ್ಲಿ ರೈತರ ದೂರು, ಸಲಹೆಗಳನ್ನು ಸ್ವೀಕರಿಸಲು ಹಾಗೂ ಸೂಕ್ತವಾದ ಪರಿಹಾರೋಪಾಯ ನೀಡಲು ಸ್ಥಾಪಿಸಲಾಗಿರುವ ರೈತ ಸಹಾಯವಾಣಿಯಿದು ಎಂದು ರಾಜ್ಯ ಕೃಷಿ ಇಲಾಖೆ ಹೇಳಿಕೊಂಡಿದೆ.
ಕೃಷಿ ಪರಿಕರಗಳ ಲಭ್ಯತೆ, ಇಲಾಖಾ ಕಾರ್ಯಕ್ರಮಗಳು, ಸಸ್ಯ ಸಂರಕ್ಷಣಾ ಉಪಕರಣಗಳು ಮತ್ತು ಕ್ರಮಗಳು, ಮಣ್ಣು ಹಾಗೂ ನೀರಿನ ವಿಶ್ಲೇಷಣೆ, ಬೆಳೆ ವಿಮೆ, ಸಾವಯವ ಕೃಷಿ, ಕೃಷಿ ಸಂಬಂಧಿತ ಇತರ ವಿಚಾರಗಳನ್ನು ಈ ದೂರವಾಣಿ ಸಹಾಯದಿಂದ ಕೇಳಬಹುದು. ಈ ಸಂಖ್ಯೆಗೆ ಯಾವುದೇ ಸ್ಥಿರ ದೂರವಾಣಿ ಅಥವಾ ಮೊಬೈಲ್‌ನಿಂದ ಕರೆ ಮಾಡಬಹುದು..


ಇವಿಷ್ಟು ಕೃಷಿ ಇಲಾಖೆಯ ಪ್ರಚಾರ. ಇದೇ ಅಂಕಣದಲ್ಲಿ ಕೃಷಿಕ ಮಾಹಿತಿಗಾಗಿ ೧೫೫೧ಕ್ಕೆ ಕರೆ ಮಾಡಬಹುದಾದ ಮಾಹಿತಿ ಪ್ರಕಟಗೊಂಡಿದ್ದು ನಿಮಗೆ ನೆನಪಿರಬಹುದು. ಇದು ಕೇಂದ್ರ ಸರ್ಕಾರದಿಂದ ರೂಪಿತವಾಗಿದ್ದು, ಇದರ ಸಮಯ ಬೆಳಿಗ್ಗೆ ಆರರಿಂದ ರಾತ್ರಿ ಹತ್ತು. ಇಲ್ಲಿ ಕೇವಲ ಬೇಸಾಯ, ಕೃಷಿ ತಂತ್ರ ಕುರಿತ ಮಾಹಿತಿ ಲಭ್ಯವಾದರೆ ರಾಜ್ಯದ ರೈತ ಸಹಾಯವಾಣಿಯಲ್ಲಿ ಕೃಷಿ ಇಲಾಖೆಯ ಕಾರ್ಯಕ್ರಮಗಳು, ಯೋಜನೆಗಳ ಮಾಹಿತಿ ಗಿಟ್ಟುವುದರಿಂದ ರೈತರು ದುಸ್ಸೆಂದು ಸ್ಥಳೀಯ ಕೃಷಿ ಇಲಾಖೆಯ ಕಛೇರಿಗೆ ಹೋಗಿ ಮಾಹಿತಿ ತಿಳಿಯಬೇಕಾದುದಿಲ್ಲ. ಒಂದು ಫೋನ್ ಕರೆ ಸಾಕು.


ರೈತರ ದುರದೃಷ್ಟವೋ ಏನೋ ಈ ಸಂಖ್ಯೆಗೆ ಕರೆ ಮಾಡಿದಾಗ ಬಹುಪಾಲು ವೇಳೆ ‘ಕರೆ ಸ್ವೀಕರಿಸುವವರು ಸದ್ಯ ಲಭ್ಯವಿಲ್ಲ. ಅವರು ಇನ್ನೊಬ್ಬರೊಂದಿಗೆ ಸಂಭಾಷಣೆಯಲ್ಲಿದ್ದಾರೆ’ ಎಂಬರ್ಥದ ಸೂಚನೆ ಬರುತ್ತದೆ. ಇಡೀ ರಾಜ್ಯಕ್ಕೆ ಒಂದೇ ಲೈನ್‌ನ ದೂರವಾಣಿ ಇದೆಯೇ ಅಥವಾ ಬೇರೊಂದು ವ್ಯವಹಾರದ ದೂರವಾಣಿ ಸಂಖ್ಯೆಗೇ ಈ ಸಹಾಯವಾಣಿಯನ್ನು ಸೇರಿಸಿಬಿಟ್ಟಿದ್ದರೋ ಗೊತ್ತಾಗುತ್ತಿಲ್ಲ. ಕೃಷಿಕರಿಗೆ ಅನುಕೂಲವಾಗುವ ಇಂತಹ ಸೌಲಭ್ಯಗಳ ಕುರಿತು, ಅದರ ವ್ಯವಸ್ಥಿತ ಚಾಲನೆಗೆ ರೈತ ಪರ ಸಂಘಟನೆಗಳು ಗಟ್ಟಿಕೂರಬೇಕು. ಹತ್ತು ಹಲವು ಓಡಾಟ ಒಂದು ಫೋನ್ ಕರೆಯಿಂದ ತಪ್ಪುವುದಾದರೆ ಅಷ್ಟರಮಟ್ಟಿಗೆ ರೈತ ಕೃಷಿ

ಕೆಲಸದಲ್ಲಿ ತೊಡಗಿಸಿಕೊಳ್ಳಬಹುದಲ್ಲವೇ?


ಪ್ರತಿಯೊಂದು ಬೆಳೆಯನ್ನು ಕೃಷಿ ವ್ಯಾಪಾರ ಮಾರುಕಟ್ಟೆ - ಎಪಿಎಂಸಿಗೆ ತಂದು ಮಾರುವುದು ಸೂಕ್ತ. ಆದರೆ ರೈತರಿಗೆ ಹತ್ತಾರು ಸಮಸ್ಯೆ. ಎಂದು ಮಾರುಕಟ್ಟೆಗೆ ಬೆಳೆಯನ್ನು ವಿಕ್ರಯಿಸಲು ತೆಗೆದುಕೊಂಡು ಹೋಗುವುದು? ಕೈ ಸಾಲ ಮಾಡಿದರಂತೂ ಮನೆಬಾಗಿಲಿನಲ್ಲಿ ಮಾರಲೇಬೇಕಾದ ಅನಿವಾರ್ಯತೆ. ಅಲ್ಲೂ ಆ ದಿನದ ಮಾರುಕಟ್ಟೆ ದರದ ಅರಿವಿರದೆ ಮಧ್ಯವರ್ತಿ ಹೇಳಿದ ಬೆಲೆಗೆ ಬೆಲೆ ಮಾರಿ ಕೈ ಸುಟ್ಟುಕೊಳ್ಳುವುದಿದೆ. ಖುದ್ದು ಮಾರುಕಟ್ಟೆಗೆ ಹೋಗಿ ಪೇಟೆಧಾರಣೆಯ ಮಾಹಿತಿ ಸಂಗ್ರಹಿಸುವುದು ಕಷ್ಟವಾದುದರಿಂದ ಇನ್ನೊಂದು ಫೋನ್ ಸೌಲಭ್ಯ ರೈತರ ನೆರವಿಗೆ ನಿಲ್ಲುತ್ತದೆ. ೧೮೦೦ ೪೨೫ ೧೫೫೨ಕ್ಕೆ ಕರೆ ಮಾಡಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ ಎಲ್ಲ ವಿವರಗಳನ್ನು ಪಡೆದುಕೊಳ್ಳಬಹುದು. ಇದೂ ಉಚಿತ ವ್ಯವಸ್ಥೆ. ಕರೆ ಮಾಡಿದಾತನಿಗೆ ನಯಾ ಪೈಸೆಯ ವೆಚ್ಚ ತಗಲುವುದಿಲ್ಲ. ನಿಮಗೆ ಗೊತ್ತಿರಲಿ, ೧೮೦೦ಯಿಂದ ಆರಂಭವಾಗುವ ಎಲ್ಲ ೧೧ ಅಂಕಿಗಳ ದೂರವಾಣಿ ಕರೆದಾತರಿಗೆ ಉಚಿತ. ಕರೆ ಸ್ವೀಕರಿಸುವಾತ ಆ ವೆಚ್ಚವನ್ನು ಭರಿಸುತ್ತಾನೆ.
ರೈತರ ಮಗದೊಂದು ಸಂಕಷ್ಟ ಹವಾಮಾನ. ನಿಜ, ಪ್ರಕೃತಿಯನ್ನು ಇದಮಿತ್ಥಂ ಎಂದು ಊಹಿಸುವುದು ಮಾನವನಿಂದ ಸಾಧ್ಯವಿಲ್ಲ. ಆದರೆ ಕೊನೆಪಕ್ಷ ಕೆಲವು ಹವಾಮಾನ ಮುನ್ಸೂಚನೆಗಳಿದ್ದರೆ ಕೃಷಿಕ ತನ್ನ ಕೃಷಿ ಚಟುವಟಿಕೆಗಳನ್ನು ಅದಕ್ಕೆ ತಕ್ಕಂತೆ ರೂಪಿಸಿಕೊಂಡು ಆಗುವ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದೇನೋ.


ಸಾಧಾರಣದಿಂದ ಭಾರೀ ಮಳೆ ಎಂಬ ಹವಾಮಾನ ಭವಿಷ್ಯ ಅನಾದಿಕಾಲದಿಂದಲೂ ಟೀಕೆಗೆ ಒಳಗಾಗಿದೆ. ಆದರೆ ಒಮ್ಮೆ ಹವಾಮಾನ ಭವಿಷ್ಯ ಇದ್ದರೆ ಚೆನ್ನ ಎನ್ನಿಸುವುದಿದೆ. ಮಾನ್ಸೂನ್ ಮಾರುತಗಳ ದುರ್ಬಲತೆ ಕುರಿತು, ಅಪ್ಪಳಿಸುವ ಚಂಡಮಾರುತ ಸಾಗುವ ದಿಕ್ಕಿನ ವಿವರ ತಿಳಿಯಲು ಹವಾಮಾನ ವರದಿ ಲಭ್ಯವಾಗಬೇಕು ಎನ್ನಿಸಬಹುದು. ಈಗ ದೈನಿಕವನ್ನು ತೆರೆದು ಯಾವ ಪುಟದ ಮೂಲೆಯಲ್ಲಿ ಹವಾಮಾನ ಮುನ್ಸೂಚನೆ ಪ್ರಕಟವಾಗಿದೆ ಎಂಬುದನ್ನು ಹುಡುಕಬೇಕಾಗಿಲ್ಲ. ಸುಮ್ಮನೆ ನಿಮ್ಮ ದೂರವಾಣಿಯಿಂದ ಡಯಲ್ ಮಾಡಿ, ೧೮೦೦ ೧೮೦ ೧೭೧೭ಕ್ಕೆ! ಇದನ್ನು ಹವಾಮಾನ ವಿವರ ನೀಡಲೆಂದೇ ನಿಯೋಜಿಸಲಾಗಿದೆ.


ಸಬ್ಸಿಡಿ ದರದಲ್ಲಿ ಆಹಾರ ಪದಾರ್ಥಗಳನ್ನು ಕೊಡಲು ಸರ್ಕಾರ ಪಡಿತರ ಪದ್ಧತಿಯನ್ನು ಅನುಸರಿಸುತ್ತದೆ. ನ್ಯಾಯಬೆಲೆ ಅಂಗಡಿಗಳ ಮೂಲಕ ಕಾರ್ಡುದಾರರಿಗೆ ನಿಗದಿತ ಪಡಿತರ ಒದಗಿಸಲು ಕಟ್ಟುನಿಟ್ಟಾದ ನಿಯಮಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ. ಪಡಿತರ ಪಡೆಯುವ ಬಹುಸಂಖ್ಯಾತರು ರೈತರು ಹಾಗೂ ರೈತ ಕಾರ್ಮಿಕರು. ಅನಕ್ಷರತೆ ಮತ್ತು ಮುಗ್ಧತೆಯಿಂದಾಗಿ ರೈತ ಕಾರ್ಡುದಾರರು ಹಲವಾರು ಶೋಷಣೆಗೆ ಒಳಗಾಗುತ್ತಿದ್ದಾರೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ಒಂದು ಉಚಿತ ಸಹಾಯವಾಣಿಯನ್ನು ಪ್ರಾರಂಭಿಸಿದೆ.


೧೮೦೦ ೪೨೫ ೯೩೩೯ ಎಂಬುದು ಆ ದೂರವಾಣಿ. ದಿನದ ಬೆಳಿಗ್ಗೆ ಏಳರಿಂದ ಸಂಜೆ ಒಂಬತ್ತರವರೆಗೆ ಕಾರ್ಯನಿರ್ವಹಿಸುತ್ತದೆ. ಸೀಮೆಎಣ್ಣೆ, ಅಕ್ಕಿ, ಗೋಧಿ, ಸಕ್ಕರೆ ಮುಂತಾದ ಪಡಿತರ ಪದಾರ್ಥಗಳ ವಿತರಣೆಯಲ್ಲಿ ಲೋಪದೋಷಗಳಿದ್ದರೆ, ಕಾರ್ಡಿಗೆ ನೀಡಬೇಕಾದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ನೀಡುತ್ತಿದ್ದರೆ ಅಥವಾ ಹೆಚ್ಚು ಬೆಲೆ ವಸೂಲಿಸುತ್ತಿದ್ದರೆ, ತೂಕದಲ್ಲಿ ವಂಚನೆ ಇಲ್ಲವೇ ಪ್ರತಿ ತಿಂಗಳು ಸರಿಯಾದ ಸಮಯದಲ್ಲಿ ವಿತರಿಸದಿದ್ದರೆ, ದಾಸ್ತಾನು ಮುಗಿದಿದೆ ಎಂದು ಒಂದು ವಾರದ ನಂತರ ಬಂದವರಿಗೆ ಪಡಿತರ ಪದಾರ್ಥ ಕೊಡದಿದ್ದರೆ ಈ ಸಂಖ್ಯೆಗೆ ಕರೆ ಮಾಡಿ ದೂರಬಹುದು.

ಈ ನ್ಯಾಯ ಬೆಲೆ ಅಂಗಡಿಗಳು ವಾರದ ರಜಾ ದಿನವಾದ ಮಂಗಳವಾರವನ್ನು ಹೊರತುಪಡಿಸಿ ಉಳಿದ ದಿನ ಬೆಳಿಗ್ಗೆ ಎಂಟರಿಂದ ಮಧ್ಯಾಹ್ನ ೧೨ರವರೆಗೆ ಮತ್ತು ಮಧ್ಯಾಹ್ನ ನಾಲ್ಕರಿಂದ ರಾತ್ರಿ ಎಂಟರವರೆಗಿನ ವೇಳೆಯಲ್ಲಿ ಬಾಗಿಲು ತೆರೆಯದಿದ್ದರೂ ದೂರು ದಾಖಲಿಸಬಹುದು. ದೂರು ನೀಡುವವರು ತಮ್ಮ ಹೆಸರು, ದೂರವಾಣಿ ಸಂಖ್ಯೆ, ವಾಸಸ್ಥಳ, ಯಾವ ನ್ಯಾಯಬೆಲೆ ಅಂಗಡಿಯ ವಿರುದ್ಧ ದೂರು ಎಂಬ ವಿವರವನ್ನು ಕರೆ ಮಾಡಿದಾಗ ನೀಡಬೇಕಾಗುತ್ತದೆ. ದೂರುದಾರ ಇಚ್ಛಿಸಿದಲ್ಲಿ ಅವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ.


ದೂರು ಸ್ವೀಕರಿಸಿದವರು ದೂರು ಸಂಖ್ಯೆಯನ್ನು ನೀಡಿರುತ್ತಾರೆ. ದೂರು ಕೊಟ್ಟ ಎರಡು ದಿನದ ನಂತರ ಅದೇ ನಂಬರ್‌ಗೆ ಕರೆ ಮಾಡಿ ಈ ದೂರುಸಂಖ್ಯೆಯನ್ನು ತಿಳಿಸಿದರೆ ತನಿಖೆ, ಕೈಗೊಂಡ ಕ್ರಮದ ಮಾಹಿತಿಯನ್ನು ಒದಗಿಸುತ್ತಾರೆ. ಒಂದೊಮ್ಮೆ ಇದಕ್ಕೂ ತೃಪ್ತಿ ಸಿಗದಿದ್ದರೆ ನಾವು ಆಯುಕ್ತರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮಾರ್ಕೆಟಿಂಗ್ ಫೆಡರೇಶನ್ ಕಟ್ಟಡ, ಕನ್ನಿಂಗ್ ಹ್ಯಾಂ ರಸ್ತೆ, ಬೆಂಗಳೂರು ೫೬೦೦೫೨ಕ್ಕೆ ಲಿಖಿತ ದೂರು ಸಲ್ಲಿಸಬಹುದು.
ಸದ್ಯಕ್ಕೆ ಕೆಲವು ಅಡೆತಡೆಗಳಿವೆ. ಮಾರುಕಟ್ಟೆ ದರ ತಿಳಿಯುವ ಮತ್ತು ಹವಾಮಾನ ಅರಿಯುವ ಉಚಿತ ದೂರವಾಣಿ ಸೇರಿದಂತೆ ಹಲವು ವ್ಯವಸ್ಥೆಗಳು ಪರಿಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅದನ್ನು ಸರಿಪಡಿಸಲು ಹಕ್ಕೋತ್ತಾಯ ಮಾಡಲೇಬೇಕು. ಪ್ರತಿ ರೈತ ಆಯಾ ಇಲಾಖೆಗಳಿಗೆ ಸರಿಪಡಿಸುವಂತೆ ಕಾರ್ಡ್ ಚಳುವಳಿ ಹಮ್ಮಿಕೊಂಡರೂ ಫಲ ನೀಡೀತು. ಇನ್ನು ರೈತ ಸಂಘಟನೆಗಳು ಈ ವಿಚಾರವನ್ನು ಆದ್ಯತೆಯ ಮೇಲೆ ತೆಗೆದುಕೊಂಡರಂತೂ ಅದು ಸ್ವಾಗತಾರ್ಹ ನಿಲುವು. ಇನ್ನೇನು ಹೇಳಲಾದೀತು?

ಮೂಲ : ರೈತಾಪಿ

ಕೊನೆಯ ಮಾರ್ಪಾಟು : 2/15/2020© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate