ಭವರ್ಲಾಲ್ ಜೈನ್ ರೈತ ಕುಟುಂಬದಲ್ಲಿ ಹುಟ್ಟಿದವರು. `ಜೈನ್ ಇರಿಗೇಷನ್' ಎಂಬ ಸಾಮ್ರಾಜ್ಯದ ಅಧಿಪತಿ. ಸರಕಾರದ ತಿಂಗಳು-ತಿಂಗಳು ಸಂಬಳ, ಕಾರು, ಬಂಗಲೆ ಎಲ್ಲವನ್ನು ಪಡೆದು ತಣ್ಣಗೆ ಜೀವನ ಸಾಗಿಸಬಹುದಾಗಿತ್ತು. ಮಹಾರಾಷ್ಟ್ರದ ನಾಗರಿಕ ಸೇವೆಗೆ ಆಯ್ಕೆಯಾಗಿದ್ದ ಬಾವು, ಅದನ್ನು ತಿರಸ್ಕರಿಸಿಬಿಟ್ಟರು. ಆರಂಭದಲ್ಲಿ ಅವರು ತಾಯಿಯಿಂದ ಐದು ಸಾವಿರ ರೂಪಾಯಿ ಪಡೆದು ಸೀಮೆ ಎಣ್ಣೆ ವ್ಯಾಪಾರ ಶುರುಮಾಡಿದರು. ಅವರೇ ಹೇಳುವಂತೆ `ಮಾರ್ವಾಡಿಗಳಿಗೆ ವ್ಯಾಪಾರವೇ ಇಷ್ಟ'. ಇವರು ವ್ಯಾಪಾರದಲ್ಲಿ ಸೋಲಲಿಲ್ಲ. ಬೆಳೆಯುತ್ತ ಹೋದರು. ರೈತಾಪಿ ಹಿನ್ನೆಲೆ ಇರುವ ಇವರಿಗೆ ಕೃಷಿಯ ಸೆಳೆತ ಸಹಜವಾಗಿಯೇ ಇತ್ತು. ತಮ್ಮ ವ್ಯಾಪಾರದ ಜತೆ ತಂದೆಯಿಂದ ತಮಗೆ ಬಂದ ಜಮೀನಿನಲ್ಲಿ ಕೃಷಿ ಮಾಡಲು ಪ್ರಾರಂಭಿಸಿದರು. ತಮ್ಮ ಯೋಚನೆಯನ್ನು ಇತರಿಗೂ ತೋರಿಸಬೇಕು ಎಂಬ ಮನಸ್ಸಾಯಿತು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂಬ ನಿರ್ಧಾರವನ್ನು ಇವರು ತೆಗೆದುಕೊಂಡರು.
ಅವರ ಈ ಯೋಚನೆ ಇವರ ಊರಿಗೆ ಹೊಂದಿಕೊಂಡಿರುವ ಊರು ಶಿರ್ಸೋಳ್ಳಿಯಲ್ಲಿ ಬೆಟ್ಟ ಕಣ್ಣಿಗೆ ಬಿತ್ತು. ಇದನ್ನು ಬಾವು ಖರೀದಿಸಿದರು. ಹಲವಾರು ಕನಸುಗಳ ಮೂಟೆ ಹೊತ್ತು ಬೆಟ್ಟವೇರಿದ ಭಾವು ಅವರಿಗೆ ಇದನ್ನು ಪ್ರಯೋಜನಕ್ಕೆ ಬರುವಂತೆ ಮಾರ್ಪಾಡು ಮಾಡುವುದೇ ದೊಡ್ಡ ಸವಾಲಾಯಿತು. ಕಲ್ಲಿನ ಅರೆ. ಹಸಿರು ಹೇಳುವ ಶಬ್ದಕ್ಕೆ ಇಲ್ಲಿ ಅರ್ಥವಿಲ್ಲ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವ ಮಾತು ಈ ಬೆಟ್ಟದ ವಿಷಯದಲ್ಲಿ ಸುಳ್ಳಾಯಿತು. ಇಲ್ಲಿ ಹತ್ತಿರ ಹೋಗಿ ನೋಡಿದರೂ ನುಣ್ಣಗೆ. ಇಂತಹ ಬೆಟ್ಟವನ್ನು ಖರೀದಿಸಿದ ಬಾವು ಅವರಿಗೆ `ಸರಿಯಿಲ್ಲ' ಎಂಬ ಮಾತುಗಳು ಕೇಳಿಬಂದವು. ಆದರೆ, ಬಾವು ಮಾತ್ರ ತಮ್ಮ ಮನಸ್ಸಿಗೆ ಬಂದ ಆಲೋಚನೆ ಕೈಬಿಡಲಿಲ್ಲ. ಶಿರ್ಸೋಳ್ಳಿ ಬೋಳುಗುಡ್ಡಕ್ಕೆ`ಜೈನ್ ಹಿಲ್ಸ್' ಎಂದು ನಾಮಕರಣ ಮಾಡಿದರು. ಸಾಧನೆ ಮಾಡಿ ತೋರಿಸಲು ಪಣ ತೊಟ್ಟರು.
ಬೋಳುಗುಡ್ಡದಲ್ಲಿ ಕೃಷಿ ಮಾಡುವುದು ಸುಲಭದ ಮಾತಲ್ಲ. ಎಲ್ಲಿಕ್ಕಿಂತ ಮೊದಲು ನೀರನ್ನು ಇಲ್ಲಿಗೆ ತರುವುದು ಸವಾಲಾಗಿತ್ತು. ಈ ಬೆಟ್ಟದ ಹತ್ತಿರದಲ್ಲಿ `ಗಿರಣಾ' ನದಿ ಹರಿಯುತ್ತದೆ. ಇದು ಹೆಸರಿಗೆ ಮಾತ್ರ ನದಿ. ಮಳೆ ಬಂದಷ್ಟು ದಿನ ಮಾತ್ರ ನೀರು ಹರಿಯುತ್ತದೆ. ಉಳಿದ ದಿನದಲ್ಲಿ ಈ ನದಿಯನ್ನು ನೋಡಿದರೆ ಯಾವುದೋ ಶತಮಾನದ ಪಳಯುಳಿಕೆಯಂತೆ ಕಾಣುತ್ತದೆ. ಆದರೂ ಇಲ್ಲಿಂದ ನೀರನ್ನು ತರುವ ಯೋಚನೆಯನ್ನು ಭಾವು ಮಾಡಿದರು. ಈ ನದಿಗೆ ಒಂದು ಪಂಪ್ಸೆಟ್ ಹಾಕಿಸಿ ನೀರನ್ನು ತಂದರು. ಆದರೆ ಇದು ಶಾಶ್ವತ ವ್ಯವಸ್ಥೆಯಾಗಿರಲಿಲ್ಲ.
ನಂತರ ತಮ್ಮ ಸ್ವಂತ ಜಾಗದಲ್ಲಿಯೇ ಶಾಶ್ವತ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕೆಂಬ ಆಲೋಚನೆ ಮಾಡಿದರು ಬಾವು. ಅಂತರ್ಜಲ ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು. ಸಾವಿರ ಅಡಿ ಆಳ ಬೋರ ಹೊಡೆದರು ನೀರು ಬರುವುದಿಲ್ಲ ಎಂಬ ಉತ್ತರ ದೊರೆಯಿತು. ಒಂದು ಹನಿ ನೀರು ಕೂಡಾ ನಿಲ್ಲದಷ್ಟು ಕಡಿದಾದ ಗುಡ್ಡದಲ್ಲಿ ನೀರು ತರುವುದೇ ಒಂದು ಯಕ್ಷ ಪ್ರಶ್ನೆಯಾಯಿತು. ಏನಾದರೂ ಸಾಧನೆ ಮಾಡಬೇಕೆಂದರೆ, ನೀರು ಅನಿವಾರ್ಯ. `ಅನಿವಾರ್ಯವೇ ಆವಿಷ್ಕಾರಕ್ಕೆ ದಾರಿಯಲ್ಲವೇ?' ಈಡಿ ಗುಡ್ಡವನ್ನು ತಾರಸೀಕರಣ (ಟೆರೇಸಿಂಗ್) ಮಾಡುವ ಯೋಚನೆ ಮಾಡಿದರು. ಇದು ಸುಲಭದ ಕೆಲಸವಾಗಿರಲಿಲ್ಲ. ಭೂ ವಿಜ್ಞಾನದಲ್ಲಿ ಪರಿಣಿತಿ ಇರುವವರನ್ನು ಕರೆಸಿದರು ತಾರಸೀಕರಣಕ್ಕೆ ಯೋಜನೆ ರೂಪಿಸಿದರು. ಕಡಿದಾದ ಗುಡ್ಡವನ್ನು ಕಡಿದು ಕರಗಿಸುವುದು ಖರ್ಚಿನ ಬಾಬ್ತು. ಆದರೂ ಕೂಡಾ ಮಾಡದೇ ಬಿಡುವ ಹಾಗಿಲ್ಲ. ಯಂತ್ರಗಳ ಜೊತೆ ಮನುಷ್ಯ ಶ್ರಮವನ್ನು ಬಳಸಿದರು. ಒಂದುವರೆ ವರ್ಷದ ಸತತ ಪರಿಶ್ರಮದಿಂದ ಗುಡ್ಡದ ಸುತ್ತಲು ತಾರಸೀಕರಣ ಮಾಡಿದರು. ಓಡುವ ನೀರು ನಿಂತು ನಿಂತು ಇಂಗ ತೊಡಗಿತು.
ಗುಡ್ಡದ ಯಾವು ಮೂಲೆಯಲ್ಲೂ ನೀರು ಸುಮ್ಮನೆ ಹರಿದುಹೋಗದೆ ಇರುವಂತೆ ಹತ್ತು ಬಾಂದಾರಗಳನ್ನು ನಿರ್ಮಿಸಿದರು. `ಜೈನ್ಸಾಗರ್' ಇದರಲ್ಲಿ 1.25.000 ಘನ ಮೀಟರ್(ಒಂದು ಘನ ಮೀಟರ್= 1000 ಲೀಟರ್) ನೀರು ನಿಲ್ಲುತ್ತದೆ. `ಸಿಂಧೂ'ವಿನಲ್ಲಿ 1.65.000, `ಜೈನ್ ಸಂಗ್ರಹ' 8.000, `ಜೈನ್ ಬಾಂದಾರ' 1200, `ಜೈನ್ ಉಪಸಾಗರ' 61000, `ಕ್ಷೀರಸಾಗರ್' 42.500, `ಜೈನ್ಜಲಗಾರ' 15.000, `ಜೈನ್ ಜಲಾಶಯ' 40.000, `ಮಹಾಸಾಗರ' 4.40.000, `ಜೈನ್ ಜಲನಿಧಿ' 3000 ಘನ ಮೀಟರ್ ನೀರು ಸಂಗ್ರಹವಾಗುತ್ತದೆ.
ಇಲ್ಲಿ ಸಂಗ್ರಹವಾಗುವ ನೀರನ್ನು ಹಿಡಿದಿಡಲು ಗುಡ್ಡದ ತಲೆಯಲ್ಲಿ 3.25 ಹಾಗೂ 2.27 ಲಕ್ಷ ಲೀಟರ್ ಸಾಮರ್ಥ್ಯದ ಎರಡು ೃಹತ್ ಟ್ಯಾಂಕ್ ನೀರ್ಮಾಣ ಮಾಡಿದ್ದಾರೆ. ಇದರಿಂದ ಈಡೀ ಗುಡ್ಡಕ್ಕೆ ನೀರು ಸರಬರಾಜಾಗುತ್ತದೆ. ನೀರಿನ ವ್ಯವಸ್ಥೆಯಾದ ನಂತರ ಸಾವಿರ ಎಕರೆ ಜೈನ್ ಹಿಲ್ಸ್ ಹಸಿರುಕರಣಗೊಳಿಸಲು ಪ್ರಾರಂಭಿಸಿದರು. ಪೇರಲ, ಹುಣಸೆ, ಮಾವು, ಬೇವು, ತಾಡ ಮರಮಗನ್ನು ಬೆಳೆಸಿದರು. ಹದಿನೈದು ವರ್ಷಗಳಲ್ಲಿ ಜೈನ್ ಹಿಲ್ಸ್‌ನ ಚಿತ್ರಣವೇ ಬದಲಾಯಿತು. ನುಣ್ಣನೆ ಗುಡ್ಡ ಹಸಿರಿಂದ ಕಂಗೊಳಿಸತೊಡಗಿತು.
`ಜೈನ್ ಹಿಲ್ಸ್' ಇಂದು ಭಾರತದ ಮೂಲೆ ಮೂಲೆಯಲ್ಲಿರುವ ರೈತರಿಗೂ ನೈಜ ಪ್ರಾತ್ಯಕ್ಷಿಕೆ ತಾಣ. ಮಳೆ ನೀರು ಸದ್ಬಳಕೆ, ತಾರಸೀಕರಣ, ಇಲ್ಲಿನ ಕೃಷಿ ವಿಧಾನ, ನೀರಾವರಿ ಕ್ರಮ ಹೀಗೆ ಹಲವು ದೃಷ್ಟಿಯಿಂದ ಅಧ್ಯಯನ ಯೋಗ್ಯ ಪ್ರವಾಸಿ ತಾಣವಾಗಿ ಜೈನ್ ಹಿಲ್ಸ್ ಮಾರ್ಪಾಡಾಗಿದೆ. ದೇಶದ ಎಲ್ಲಾ ಕಡೆಯಿಂದಲೂ ರೈತರು ಇಲ್ಲಿನ ಯಶೋಗಾಥೆಯನ್ನು ಕಣ್ಣಾರೆ ಕಂಡು, ತರಬೇತಿ ಪಡೆದು ನವ ಕನಸನ್ನು ಕಟ್ಟಿಕೊಂಡು ತವರಿಗೆ ಮರಳುತ್ತಿದ್ದಾರೆ.
ಬಾವು ಬೋಳು ಗುಡ್ಡ ಖರೀದಿಸಿದಾಗ ನಕ್ಕ ಮಂದಿಯೆಲ್ಲ ಇವರ ಸಾಧನೆಯನ್ನು ಕಂಡಿದ್ದಾರೆ. ನಗೆಯಾಡುತ್ತಿದ್ದ ಬಾಯಿ ಮುಚ್ಚಿದೆ. ಕನಸು, ಛಲ, ದೂರದೃಷ್ಟಿಯ ಮನೋಭಾವವಿದ್ದರೆ ಏನ¬ನ್ನಾ-ದರೂ ಸಾಧಿಸಬಹುದು ಎನ್ನುವುದಕ್ಕೆ ಬಾವು ಸಾಧನೆ ಸಾಕ್ಷಿ. ಬಾವು ಸಾಧನೆ ಕಂಡ ಕಂಡ ಅನೇ¬ಕರು ಅವರನ್ನು ಅಭಿನಂದಿಸಿದ್ದಾರೆ. `ಭಾರತೀಯ ಜಲ ರಕ್ಷಕ' ಎನ್ನುವ ಪುರಸ್ಕಾರ ನೀಡಿದ್ದಾರೆ.
ಜೈನ್ ಹಿಲ್ಸ್ ಬಗ್ಗೆ ಮಾಹಿ¬ತಿ¬ಗಾಗಿ:
ಸಿ.ಎ. ಜೋಶಿ,(ಡೆಪ್ಯುಟಿ ಮ್ಯಾನೇಜರ್, ಜೈನ್ ಇರಿಗೇಷನ್),ದೂರವಾಣಿ ಸಂಖ್ಯೆ- 9448286508
ಮೂಲ : ರೈತಾಪಿ
ಕೊನೆಯ ಮಾರ್ಪಾಟು : 2/15/2020