অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪೇಟೆಯೊಳಗೊಂದು ತೋಟವ ಮಾಡಿ

ಪೇಟೆಯೊಳಗೊಂದು ತೋಟವ ಮಾಡಿ

ಕಿರಿದಾದ ಕಚ್ಚಾ ರಸ್ತೆ ಮಾತ್ರ ಸಂಪರ್ಕ ವ್ಯವಸ್ಥೆ. ಐದು ಎಕರೆ ತೋಟ, ಅಲ್ಲಿಯೇ ಮನೆ, ಆದರೆಮೂರೂ ದಿಕ್ಕುಗಳಲ್ಲಿ ಹರಿಯುವ ಹಿಳೆ. ಸಾಕ್ಷಾತ್ ಭಾರತದಂತೆ, ಪರ್ಯಾಯ ದ್ವೀಪ. ಮಳೆಗಾಲದಲ್ಲಂತೂ ಮನೆಯಲ್ಲೂ ಒಂದಡಿ ನೀರು. ಇಷ್ಟು ವಿವರಿಸುತ್ತಿದ್ದಂತೆ ಜನಸಂಪರ್ಕವೇ ಇಲ್ಲದ ಗೂಢ ಪ್ರದೇಶದ ಕೃಷಿಕರೋರ್ವರ ಪರಿಚಯ ಮಾಡಿಕೊಡಲಾಗುತ್ತಿದೆ ಎಂದುಕೊಂಡರೆ ಪಿಗ್ಗಿ ಬಿದ್ದಂತೆ. ಈ ಸ್ಥಳದಿಂದ ಕತ್ತು ಎತ್ತಿ ನೋಡಿದರೆ ವಾಹನ ನಿಬಿಡ ರಾಷ್ಟ್ರೀಯ ಹೆದ್ದಾರಿ. ತಾಲ್ಲೂಕಿನ ಮುಖ್ಯ ಭಾಗದಿಂದ ಕೂಗಳತೆ ದೂರದಲ್ಲಿದೆ ಈ ಕೃಷಿ ಭೂಮಿ!

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಕೇಂದ್ರಕ್ಕೆ, ಅಲ್ಲಿನ ಮುಖ್ಯ ರಸ್ತೆಗೆ ಅಂಟಿಕೊಂಡಿರುವ ಕಮಲಾಕರ ಪಂಡಿತ್ - ದೀಪಕ್‌ರ ತೋಟ ಹಲವು ದೃಷ್ಟಿಯಿಂದ ವಿಶಿಷ್ಟವಾದದ್ದು. ಈ ಭೂಮಿಯ ಸುತ್ತಲೂ ನೀರಿನ ಹೊಳೆ ಹರಿಯುತ್ತದೆ. ಒಂದು ದಿಕ್ಕಿನಿಂದ ಮಾತ್ರ ಭೂ ಸಂಬಂಧ. ಸ್ವಾರಸ್ಯವೆಂದರೆ, ಒಂದೇ ಒಂದು ಕೃಷಿ ಆಳು ಬಳಸದೆ ಅಕ್ಷರಶಃ ಶೂನ್ಯ ಕೃಷಿ ನಡೆಸುತ್ತಿರುವ ಸಾಧನೆ ಇವರದು. ಐದು ಎಕರೆ ಪ್ರದೇಶದಲ್ಲಿ ಮುಖ್ಯ ಬೆಳೆ ಅಡಿಕೆ ಮತ್ತು ತೆಂಗು. ಜೊತೆಜೊತೆಗೆ ಪುನರ್ಪುಳಿ, ಏಲಕ್ಕಿ, ಬಾಳೆ, ಮಾವು, ವೆನಿಲ್ಲಾ, ಉದ್ದು, ಬಿದಿರು, ಭತ್ತ.... ಪೇಟೆಗೆ ಹತ್ತಿರದಲ್ಲಿಯೇ ಕೃಷಿ ಭೂಮಿ ಇರುವುದನ್ನು ಪಂಡಿತ್ ಜೋಡಿ ತಮ್ಮ ಅನುಕೂಲಕ್ಕೆ ಬಳಸಿಕೊಂಡಿರುವುದು ಗಮನಾರ್ಹ. ಅಡಿಕೆ ಬೆಳೆಯನ್ನು ಛೇಣಿಗೆ ಕೊಡುವುದರಿಂದ ಕೊಯ್ಲು ವಗೈರೆ ಕೆಲಸಗಳಿಗೆ ಆಳು ಅವಲಂಬನೆಯಿಲ್ಲ. ಇರುವ ೧೨೦ ತೆಂಗಿನ ಮರಗಳಿಂದ ಪೇಟೆಗೆ ಎಳನೀರು ವ್ಯಾಪಾರ. ವ್ಯಾಪಾರದವರೇ ಮನೆಬಾಗಿಲಿಗೆ ಬಂದು ಎಳನೀರು ಕೊಯ್ದು ಒಯ್ಯುವ ವ್ಯವಸ್ಥೆ. ಅದೂ ತಾಪತ್ರಯವಲ್ಲ. ತೋಟಕ್ಕೆ ಸ್ಲರಿ, ಜೀವಾಮೃತಗಳೇ ಗೊಬ್ಬರ. ಇದನ್ನು ಅಪ್ಪ-ಮಗ ದಕ್ಷತೆಯಿಂದ ನಿರ್ವಹಿಸುತ್ತಾರೆ. ಅದೂ ಆಳಿನ ಬಾಬತ್ತಲ್ಲ. ಕಳೆ ಕೊಚ್ಚಲು ಯಂತ್ರ. ಸಾಕಲ್ಲ?

ಹೋಗಲಿ, ಜಾನುವಾರು ಕೊಟ್ಟಿಗೆ ಇದೆ ಎಂದಮೇಲೆ ಆಳು, ಖರ್ಚಿಗೆ ದಾರಿಯಾಗಲೇಬೇಕಲ್ಲವೇ? ಊಹ್ಞೂ, ಇವರಲ್ಲಿ ನಾಲ್ಕು ಹಸುಗಳಿರುವುದೇನೋ ನಿಜ. ನಾಲ್ಕೂ ಸ್ಥಳೀಯ ಜಾತಿಯವು. ಇಲ್ಲಿ ದನ ಕರು ಹಾಕಿದರೂ ಇವರು ಹಸುವಿನ ಹಾಲು ಹಿಂಡುವುದಿಲ್ಲ. ಸಿದ್ಧ ಪಶು ಆಹಾರವಾದ ‘ಹಿಂಡಿ’ ಹಾಕುವುದಿಲ್ಲ! ಈ ಹಿಂಡಿಯದು ದುಬಾರಿ ಖರೀದಿಯಾಗುತ್ತಿತ್ತು. ಜಮೀನಿನಲ್ಲಿ ಧಾರಾಳವಾಗಿರುವ ಹಸಿರು ಹುಲ್ಲು ಅವುಗಳಿಗೆ ಮೇವು. ಗೋಮೂತ್ರ, ಸಗಣಿ ಇವರ ಜೀವಾಮೃತ ತಯಾರಿಗೆ ಸರಕು. ಪ್ರತಿ ದಿನ ಹಾಲನ್ನು ಖರೀದಿಸುತ್ತಾರೆ. ಅಷ್ಟಕ್ಕೂ ಪೇಟೆ ಮೂರು ಹೆಜ್ಜೆ ಆಚೆಯೇ ಇರುವುದರಿಂದ ಯಾವಾಗ ಬೇಕಾದರೂ ಹಾಲಿನ ಪ್ಯಾಕ್ ಖರೀದಿಗೆ ಲಭ್ಯ.

ಕಮಲಾಕರ ಪಂಡಿತರ ತಂದೆ ಈ ಭೂಮಿಯನ್ನು ಖರೀದಿಸಿದವರು. ಗದ್ದೆ ಹಾಗೂ ಕುರುಚಲು ತುಂಬಿದ್ದ ಭೂಮಿಯಾಗಿತ್ತದು. ೧೯೯೬ರಿಂದ ಹಂತ ಹಂತವಾಗಿ ಅಡಿಕೆ ಸಸಿ ಕೂರಿಸುತ್ತಾ ಬಂದಿದ್ದಾರೆ. ಒಟ್ಟು ಎಂಟು ವರ್ಷಗಳಲ್ಲಿ ತೋಟ ಎದ್ದಿದೆ. ಹಾಗೆಂದು ತೋಟವನ್ನು ಸಮತಟ್ಟು ಮಾಡಲು ಹೋಗಿಲ್ಲ. ಗದ್ದೆಯ ತಟ್ಟೆಗಳನ್ನು ಯಥಾವತ್ ಉಳಿಸಿಕೊಂಡಿದ್ದಾರೆ. ಗಮನಿಸಬೇಕಾದುದೆಂದರೆ, ಈ ಸಸಿಗೆ ೨ x ೨ರ ಗುಳಿ ತೋಡಲು ಮಾತ್ರ ಆಳು ಗುತ್ತಿಗೆ ಕೊಟ್ಟಿದ್ದರಂತೆ. ಸಸಿ ನೆಟ್ಟದ್ದೂ ಇವರೇ. ಮಣ್ಣು, ಬಣ್ಣ (ಅಡಿಕೆ ಮರದ ಸಾಲಿನ ಮಧ್ಯದ ಮಣ್ಣಿನ ರಾಶಿ) ಮಾಡಿಲ್ಲ. ಅದು ತೋಟಕ್ಕೆ ಬೇಕಾದುದೂ ಆಗಿಲ್ಲ.

ಕೃಷಿಗೆ ಮೈ ಕಸುವಿನಷ್ಟೇ ಜಾಣ್ಮೆ ಮುಖ್ಯ ಎಂಬುದಕ್ಕೆ ಇವರೇ ಸ್ಪಷ್ಟ ಉದಾಹರಣೆ. ತೋಟದ ಕೆಲಭಾಗವನ್ನು ಮಣ್ಣು ಹಾಕಿ ಏರಿಸಬೇಕಿತ್ತು. ಅವರಲ್ಲಿ ಮಣ್ಣು ತೆಗೆಯಲು ಗುಡ್ಡವಿಲ್ಲ, ಧರೆಯಿಲ್ಲ. ಮಾಡಿದ್ದಿಷ್ಟೇ, ಪೇಟೆಯ ಕೆಲವು ಮಣ್ಣು ಸಾಗಿಸುವ ಟ್ಯಾಕ್ಟರ್‌ನವರನ್ನು ಸಂಪರ್ಕಿಸಿದರು. ಪೇಟೆಯಲ್ಲಿ ತೆಗೆದ ಮಣ್ಣು, ಮನೆ ಕೆಡವಿದ ಮಣ್ಣುಗಳನ್ನು ಅವರು ಊರಾಚೆ ಸಾಗಿಸುತ್ತಿದ್ದರಷ್ಟೇ. ಅದನ್ನು ತಂದು ತಮ್ಮ ಜಾಗದಲ್ಲಿ ಸುರಿಯಲು ಅವಕಾಶವಿತ್ತರು. ಚಾಲಕನಿಗೆ ಪ್ರತಿ ಲೋಡ್‌ಗೆ ೫೦ ರೂ. ಭಕ್ಷೀಸು. ಅತ್ಯಂತ ಕಡಿಮೆ ಖರ್ಚಿನಲ್ಲಿ ಭೂಮಿ ಎದ್ದಿದೆ. ರಸ್ತೆ ಆಗಿದೆ!

ವಾಸ್ತವವಾಗಿ, ಪಂಡಿತ್‌ದ್ವಯರು ಕೃಷಿಗೆ ಮಾಡುವ ಖರ್ಚು ನಗಣ್ಯ. ಐದು ಪ್ಲಾಸ್ಟಿಕ್ ಡ್ರಂಗಳನ್ನು ಬಳಸಿ ಜೀವಾಮೃತ ತಯಾರಿ ಘಟಕವನ್ನು ರೂಪಿಸಿದ್ದಾರೆ. ತೋಟಕ್ಕೆ ಸ್ಪ್ರಿಂಕ್ಲರ್ ಮೂಲಕ ಪಂಪ್ ಶಕ್ತಿಯಿಂದ ಉಣಿಸುತ್ತಾರೆ. ಬೆಲ್ಲ, ಹಿಟ್ಟು ಮಾತ್ರ ಖರ್ಚಿನ ಬಾಬ್ತು. ನಾಲ್ಕು ಬಾರಿ ಫಿಲ್ಟರ್ ಆಗುವುದರಿಂದ ಸಮಸ್ಯೆ ಇಲ್ಲ. ತೋಟಕ್ಕೆ ಒಂದು ಕಾಳು ರಾಸಾಯನಿಕ ಗೊಬ್ಬರವನ್ನು ಮುಟ್ಟಿಸಿಲ್ಲ. ನಿಜಕ್ಕಾದರೆ, ೨೦ ಸಾವಿರ ರೂ. ಖರ್ಚು ಮಾಡಿ ಜೀವಾಮೃತ ಘಟಕ ಸಿದ್ಧಪಡಿಸಿದ್ದೇ ದೊಡ್ಡ ಖರ್ಚು.

ಪ್ರತಿ ಎಳನೀರಿಗೆ ಆರು ರೂ.ನಂತೆ ಮನೆಬಾಗಿಲಿನಲ್ಲೇ ವ್ಯಾಪಾರ. ವಾರ್ಷಿಕ ೪೦ ಸಾವಿರ ರೂ. ಆಜುಬಾಜಿನ ಆದಾಯ. ಅಡಿಕೆ, ವೆನಿಲ್ಲಾ ಇನ್ನಿತರ ಬೆಳೆಗಳಿಂದ ಒಟ್ಟಾರೆ ವಾರ್ಷಿಕ ಎರಡು ಲಕ್ಷ ರೂಪಾಯಿ ದುಡಿಮೆ. ಖರ್ಚು ಕಡಿಮೆಯಿರುವುದರಿಂದ ನಿರಾಳ ಜೀವನ. ಬಹುಷಃ ಬರುವ ದಿನಗಳಲ್ಲಿ ಪುನರ್ಪುಳಿ ಫಸಲು ಹೆಚ್ಚುವುದರಿಂದ ಕೋಕಂ ಜ್ಯೂಸ್ ತಯಾರಿಯೂ ದೊಡ್ಡ ಪ್ರಮಾಣದಲ್ಲಿ ನಡೆಸಬಹುದು. ತೋಟದ ಅಂಚಿಗೆ ಬಿದಿರು. ಮಣ್ಣು ಕುಸಿತ, ಕೊರೆತ ತಪ್ಪಿದೆ. ಇನ್ನೊಂದು ಆದಾಯಕ್ಕೂ ಕಾರಣವಾಗಿದೆ ಬಿದಿರು.

ಮಗ ದೀಪಕ್ ಬಿಕಾಂ ಪದವೀಧರ. ೧೯೯೧ರಿಂದ ಒಂಭತ್ತು ವರ್ಷ ಕಾಲ ಬ್ಯಾಂಕ್ ಕೆಲಸದಲ್ಲಿದ್ದವರು. ಮದುವೆಯಾಗುತ್ತಿದ್ದಂತೆ ಉದ್ಯೋಗಕ್ಕೆ ತಿಲಾಂಜಲಿ ಹೇಳಿ ಕೃಷಿಗೆಂದು ಮನೆಗೆ ಮರಳಿದವರು. ಇಂದು ಅವರಿಗೆ ತಮ್ಮ ನಿರ್ಧಾರದ ಬಗ್ಗೆ ದೊಡ್ಡ ಹೆಮ್ಮೆಯಿರುವುದು ವಿಶೇಷ.

ನಿಜ, ನಿಜ. ಪೇಟೆಯ ಸಮೀಪವಿರುವುದರಿಂದ ಅವರು ಹಲವು ಮಾದರಿಯಲ್ಲಿ ಆಳಿನ ಅವಲಂಬನೆಯನ್ನು ತಪ್ಪಿಸಿಕೊಂಡಿದ್ದಾರೆ. ಖುದ್ದು ತಂದೆ ಕಮಲಾಕರ್ ಹಾಗೂ ಮಗ ದೀಪಕ್ ತೋಟದಲ್ಲಿ ದುಡಿಯುತ್ತಿರುವುದರಿಂದ ಆಳು ಸಮಸ್ಯೆ ಕಾಡಿಲ್ಲ. ಮುಖ್ಯವಾಗಿ, ವ್ಯವಸ್ಥಿತ ಯೋಜನೆಯೊಂದಿಗೇ ಕೃಷಿ ಮಾಡುತ್ತಿರುವುದರಿಂದ ಬದುಕು ಗೋಜಲಾಗಿಲ್ಲ.

ಹಾಗೆಂದು ತೊಂದರೆಗಳೇ ಇಲ್ಲವೆಂದಲ್ಲ. ಮಳೆಗಾಲದಲ್ಲಿ ಒಂದೆರಡು ದಿನ ನೆರೆ ಬರುವುದಿದೆ. ಆಗ ತೋಟದ ಮುಚ್ಚಿಗೆಯೆಲ್ಲ ನೀರಿನೊಂದಿಗೆ ಕೊಚ್ಚಿ ಹೋಗುವ ತಾಪತ್ರಯ. ಮನೆಯಲ್ಲಿ ಒಂದಡಿ ನೀರು ನಿಲ್ಲುವ ಸಮಸ್ಯೆ. ಆದರೆ ಪೇಟೆಯ ಪಕ್ಕದಲ್ಲಿ ಕೃಷಿ ಮಾಡುವ ಸಾಹಸ ಮತ್ತು ಅದೇ ಪೇಟೆಯನ್ನು ತಮ್ಮ ಅನುಕೂಲಕ್ಕೆ ಬಗ್ಗಿಸಿಕೊಂಡ ರೀತಿಯಿಂದಲೇ ಕಮಲಾಕರ್ - ದೀಪಕ್‌ರ ಕೃಷಿ ವಿಧಾನ ಇತರರಿಗೆ ಮಾದರಿ. ಅವರನ್ನು ಸಂಪರ್ಕಿಸುವುದಾದರೆ ಕರೆ ಮಾಡಿ.... ೯೨೪೨೨೪೮೮೦೦ ಅಥವಾ ೯೪೪೯೮೯೬೨೩೦.

ಕೃಷಿಗೆ ಇಳಿಯುವ ಮುನ್ನ ಆಸಕ್ತರು ಒಮ್ಮೆ ಅವರ ಜಮೀನಿಗೆ ಭೇಟಿ ಕೊಡುವುದು ಒಳಿತು.

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate