ಆರ್ಥಿಕ ಬಿಕ್ಕಟ್ಟಿನ ಪರಿಣಾಮ ರೇಷ್ಮೆ ಕೃಷಿ-ಕೈಗಾರಿಕೆಗಳ ಮೇಲೆ ಪರಿಣಾಮ ಬೀರಿದ್ದು, ರೇಷ್ಮೆ ಉದ್ಯಮ ತತ್ತರಿಸುತ್ತಿದೆ.
ಆಹಾರ ಪದಾರ್ಥವಲ್ಲದಿದ್ದರೂ ಕೃಷಿಕರಿಗೆ ಸಾಕಷ್ಟು ಆದಾಯ ತಂದು ಕೊಡುವ ಕ್ಷೇತ್ರ ರೇಷ್ಮೆ. ಉಳಿದೆಲ್ಲಾ ವಸ್ತುಗಳ ಬೆಲೆ ಕುಸಿದರೂ ಆಲಂಕಾರಿಕ ಉತ್ಪನ್ನಗಳ ತಯಾರಿಕೆಯ ಕಚ್ಚಾವಸ್ತುವಾದ ರೇಷ್ಮೆ ಬೆಲೆ ಅಷ್ಟಾಗಿ ಇಳಿಕೆಯಾಗುತ್ತಿರಲಿಲ್ಲ. ಅಗತ್ಯದಷ್ಟು ರೇಷ್ಮೆ ಉತ್ಪಾದನೆಯಾಗದೇ ಇರುವುದು ಇದಕ್ಕೆ ಕಾರಣವಾದ ಪ್ರಮುಖ ಅಂಶವಾಗಿತ್ತು. ದೇಶೀಯ ಬಳಕೆ ಜತೆಯಲ್ಲಿಯೇ ಭಾರತೀಯ ಮೂಲದ ಅಪ್ಪಟ ರೇಷ್ಮೆಗೆ ವಿದೇಶಿ ನೆಲೆಯಲ್ಲಿ ಬೇಡಿಕೆ ಸಾಕಷ್ಟಿತ್ತು. ಭಾರತದ ರೇಷ್ಮೆಗೆ ಚೈನಾ ಪ್ರಬಲ ಪೈಪೋಟಿ ನೀಡುತ್ತಿದ್ದರೂ ಶುದ್ಧತೆಯಲ್ಲಿ ಸ್ಪರ್ಧಿಸಲಾಗದೇ ವಿದೇಶಿ ರಾಷ್ಟ್ರಗಳಲ್ಲಿ ಭಾರತದ ರೇಷ್ಮೆ ತನ್ನ ಅಸ್ತಿತ್ವ ಉಳಿಸಿಕೊಂಡಿತ್ತು.
ಸ್ಥಳೀಯ ಬೇಡಿಕೆ ಪೂರೈಸಲಾಗದೇ ಇದ್ದರೂ, ವಿದೇಶಕ್ಕೆ ರಫ್ತು ಮಾಡುವ ಕಾರಣದಿಂದಲೇ ರೇಷ್ಮೆ ಉದ್ಯಮ ಈ ಪರಿ ಬೆಳೆದಿತ್ತು. ಭಾರತದ ಉತ್ಪನ್ನಗಳ ಪ್ರಮುಖ ಮಾರುಕಟ್ಟೆಯಾಗಿದ್ದ ಅಮೆರಿಕ, ಬ್ರಿಟನ್, ಅರಬ್ ರಾಷ್ಟ್ರಗಳು, ಇಟಲಿ ಹಾಗೂ ಜರ್ಮನಿಯಿಂದ ರೇಷ್ಮೆ ಬೇಡಿಕೆಗೆ ಕಡಿವಾಣ ಬಿದ್ದಿದೆ. ವಿಶ್ವ ಆರ್ಥಿಕ ಹಿಂಜರಿತದ ಪರಿಣಾಮ ದುಭಾರಿ ವಸ್ತುಗಳ ಮಾರುಕಟ್ಟೆ ಮೇಲೆ ಅಡ್ಡ ಪರಿಣಾಮ ಬೀರಿದ್ದೇ ಈ ಯಡವಟ್ಟಿಗೆ ಕಾರಣ. ಈ ಆರ್ಥಿಕ ವರ್ಷಾಂತ್ಯದೊಳಗೆ ಶೇ.50 ರಷ್ಟು ಬೇಡಿಕೆ ಕಡಿಮೆಯಾಗಬಹುದೆಂದು ಕೇಂದ್ರೀಯ ರೇಷ್ಮೆ ಮಂಡಳಿ ಅಂದಾಜಿಸಿದೆ. ಇದು ಇಡೀ ಭಾರತದ ರೇಷ್ಮೆ ಬೆಳೆ, ಉತ್ಪಾದನೆ ಹಾಗೂ ಉದ್ಯಮದ ಮೇಲೆ ತೀಕ್ಷ್ಣ ಪರಿಣಾಮ ಬೀರಲಿದೆ.
ಇಡೀ ವಿಶ್ವದಲ್ಲಿ ರೇಷ್ಮೆ ಉತ್ಪಾದಿಸುವ ಪ್ರಮುಖ ರಾಷ್ಟ್ರಗಳೆಂದರೆ ಚೀನಾ ಮತ್ತು ಭಾರತ. ವಿಶ್ವದಲ್ಲಿ ವಾರ್ಷಿಕ 1,53,000 ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆಯಾಗುತ್ತದೆ. ಇದರಲ್ಲಿ ಪ್ರಮುಖ ಪಾಲು ಚೀನಾದ್ದಾಗಿದ್ದು, 1,30,000 ಟನ್ಗಳಷ್ಟಿದೆ. ಭಾರತವು 18,320 ಟನ್ಗಳಷ್ಟು ಮಾತ್ರ ಕಚ್ಚಾ ತಯಾರಿಸುತ್ತದೆ.
ರೇಷ್ಮೆ ಕೃಷಿ, ರೀಲಿಂಗ್, ವೀಲಿಂಗ್, ಗ್ರೇಡಿಂಗ್ ಹೀಗೆ ಒಟ್ಟು 61 ಲಕ್ಷ ಮಂದಿಗೆ ರೇಷ್ಮೆ ಉದ್ಯೋಗ ಒದಗಿಸಿದೆ. ಈ ಪೈಕಿ ಶೇ.60 ರಷ್ಟು ಮಂದಿ ಮಹಿಳೆಯರಿದ್ದಾರೆ.
ವಿಶ್ವದಲ್ಲಿ ಎರಡನೇ ರಾಷ್ಟ್ರ ಭಾರತವಾಗಿದ್ದರೆ, ಭಾರತದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ ಒಟ್ಟು 18 ಸಾವಿರ ಟನ್ಗಳಷ್ಟು ರೇಷ್ಮೆ ಬೆಳೆಯುತ್ತಿದ್ದರೆ ಇದರಲ್ಲಿ ಕರ್ನಾಟಕದ ಪಾಲು 14 ಸಾವಿರ ಟನ್. ಅಂದರೆ ಶೇ.70 ರಷ್ಟು ಕಚ್ಚಾ ರೇಷ್ಮೆ ಕರ್ನಾಟಕದ್ದೇ ಆಗಿದೆ. ಇದನ್ನು ಲೆಕ್ಕ ಹಾಕಿದರೆ ರೇಷ್ಮೆ ರಫ್ತಿನ ಪ್ರಮುಖ ಪಾಲು ಕರ್ನಾಟಕದಿಂದಲೇ ಆಗುತ್ತದೆ.
ಕರ್ನಾಟಕದ ಕೋಲಾರ, ರಾಮನಗರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಹಾಸನ, ಶಿವಮೊಗ್ಗ, ದಾವಣಗೆರೆ, ಮೈಸೂರು ಮತ್ತಿತರ ಜಿಲ್ಲೆಗಳಲ್ಲಿ ರೇಷ್ಮೆ ಕೃಷಿಯಲ್ಲಿ ತೊಡಗಿಕೊಂಡ ಸಾಕಷ್ಟು ಮಂದಿಯಿದ್ದಾರೆ. ಉತ್ತರದ ಜಿಲ್ಲೆಗಳೂ ಇದರಿಂದ ಹೊರತಲ್ಲ.
ಕೆಲವು ರೈತರಿಗೆ ರೇಷ್ಮೆ ಕೃಷಿ ಉಪ ಕಸುಬು ಆಗಿದ್ದರೆ ಇನ್ನು ಕೆಲವರು ಪ್ರಮುಖವಾಗಿ ಇದನ್ನು ಅವಲಂಬಿಸಿದ್ದಾರೆ. ಮಾರುಕಟ್ಟೆ ಕೊರತೆ ಮಧ್ಯೆಯೂ ರೇಷ್ಮೆ ಕೃಷಿಯನ್ನು ಜೀವಂತವಾಗಿ ಇಟ್ಟಿರುವುದು ರೈತರ ಸಾಧನೆಯೇ ಸರಿ. ಏಕೆಂದರೆ ರೇಷ್ಮೆಯ ಪ್ರಮುಖ ಮಾರುಕಟ್ಟೆ ರಾಮನಗರ(ಈಗ ಜಿಲ್ಲಾ ಕೇಂದ್ರವಾಗಿರುವ)ದಲ್ಲಿ ಮಾತ್ರವಿದ್ದು, ರಾಜ್ಯದ ಯಾವುದೇ ಭಾಗದ ರೈತ ಇಲ್ಲಿಗೆ ತಂದು ಮಾರಬೇಕು. ಇಲ್ಲಾ ಆಯಾ ಜಿಲ್ಲೆಗಳ ದಲ್ಲಾಳಿಗಳಿಗೆ ಮಾರಬೇಕಾದ ಅನಿವಾರ್ಯತೆಯಿದೆ.
ರೇಷ್ಮೆ ಕೃಷಿ ಉಳಿದ ಕೃಷಿಗಳಂತಲ್ಲ. ಅದಕ್ಕೆ ತನ್ನದೇ ಆದ ನಾಜೂಕು ಬೇಕು. ರೇಷ್ಮೆ ಹುಳುಗಳಿಗೆ ಬೇಕಾದ ಆಹಾರ( ಹಿಪ್ಪು ನೇರಳೆ ಸೊಪ್ಪು) ಬೆಳೆಯಬೇಕು, ಅದನ್ನು ತಂದು ಓರಣ ಮಾಡಬೇಕು. ರೇಷ್ಮೆ ತಟ್ಟಿಗಳಲ್ಲಿ ಆ ಸೊಪ್ಪುಗಳನ್ನು ನೀಟಾಗಿ ಕತ್ತರಿಸಿ ಹಾಕಿ, ಹುಳುಗಳನ್ನು ಅದಕ್ಕೆ ಬಿಡಬೇಕು. ಸೊಪ್ಪಿನಲ್ಲಿ ರೋಗಾಣುಗಳಿದ್ದರೆ ಅಥವಾ ರೇಷ್ಮೆ ತಟ್ಟಿಗಳಲ್ಲಿ ಸೋಂಕಿದ್ದರೆ ಅಷ್ಟೂ ಹುಳುಗಳು ಪ್ರಾಣ ಬಿಡುತ್ತವೆ. ಹುಳುಗಳಿಗೆ ಕೊಟ್ಟ ದುಡ್ಡು ಕೂಡ ವಾಪಸ್ಸು ಬರದು. ಹಾಗೆಯೇ ಹುಳು ಬಲಿತು, ಗೂಡು ಕಟ್ಟಿ ರೇಷ್ಮೆ ನೂಲನ್ನು ತಯಾರಿಸುವವರೆಗೂ ಅದನ್ನು ಮಗುವಿನಂತೆ ಆರೈಕೆ ಮಾಡಬೇಕು. ನಿಜವಾಗಿ ಹೇಳಬೇಕೆಂದರೆ ಬಾಣಂತಿಯನ್ನು ಸಲಹಿದ ರೀತಿಯ ಸೂಕ್ಷ್ಮತೆ ರೇಷ್ಮೆ ಕೃಷಿಗೆ ಅಗತ್ಯ.
ಇತ್ತೀಚಿನ ವರ್ಷಗಳಲ್ಲಿ ಬೆಲೆ ಉತ್ತಮವಾಗಿದೆಯಾದರೂ ಕೂಲಿಗಳ ಸಮಸ್ಯೆಯಿಂದ ರೈತರು ಬಸವಳಿದಿದ್ದಾರೆ. ಮೇಲೆ ಉಲ್ಲೇಖಿಸಿದಂತಹ ಅಷ್ಟೂ ಕೆಲಸವನ್ನು ಕೇವಲ ಮನೆಯಂದಿ ಮಾಡಲಾಗುವುದಿಲ್ಲ. ಅದಕ್ಕೆ ಸೂಕ್ಷ್ಮತೆಯುಳ್ಳ ಕೃಷಿ ಕೆಲಸಗಾರರೇ ಬೇಕು. ನಗರೀಕರಣದಿಂದಾಗಿ ರೇಷ್ಮೆ ಕೃಷಿಕರು ಕೂಲಿಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಇದರ ಜತೆಗೆ ಮಲಬಾರಿ ತಳಿಗೆ ತಗುಲಿರುವ ರೋಗದಿಂದಾಗಿ ಸುಮಾರು 47 ಸಾವಿರ ಹೆಕ್ಟೇರ್ನಲ್ಲಿದ್ದ ಮಲಬಾರಿ ತಳಿಯನ್ನು ರೈತರು ಕಿತ್ತುಹಾಕಿದ್ದಾರೆ. ಇದು ಕೂಡ ರೈತರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ.
ಇದರ ಜತೆಗೆ ರೇಷ್ಮೆ ನೂಲು ತೆಗೆಯುವವರು, ರೇಷ್ಮೆ ಮಗ್ಗಗಳಲ್ಲಿ ರೈತರಷ್ಟೇ ಪ್ರಮಾಣದಲ್ಲಿ ಕೆಲಸ ಮಾಡುವವರಿದ್ದಾರೆ. ಗ್ರೇಡಿಂಗ್, ಬಣ್ಣ ಹಾಕುವವರು ಕೂಡ ಸಮಪ್ರಮಾಣದಲ್ಲಿದ್ದಾರೆ. ಮಾರುಕಟ್ಟೆ ಮಾಡುವವರನ್ನು ಹೊರತು ಪಡಿಸಿಯೂ ನೇರವಾಗಿ ರೇಷ್ಮೆ ಕೃಷಿ-ಉದ್ಯಮದಲ್ಲಿ ಸಾಕಷ್ಟು ಮಂದಿ ತೊಡಗಿದ್ದಾರೆ. ವಿದೇಶದ ರಫ್ತು ಶೇ.50 ರಷ್ಟು ಕುಸಿತ ಕಂಡ ಪರಿಣಾಮ ಇವರೆಲ್ಲಾ ತತ್ತರಿಸಲಿದ್ದಾರೆ. ದೇಶದಲ್ಲಿ ಒಟ್ಟು 61 ಲಕ್ಷ ಮಂದಿ ರೇಷ್ಮೆಯನ್ನು ನೆಚ್ಚಿಕೊಂಡಿದ್ದು, ಮಾರ್ಚ್ ಅಂತ್ಯದೊಳಗೆ 6 ಲಕ್ಷ ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆಂದು ಅಂದಾಜಿಸಲಾಗಿದೆ.
ಭಾರತದಲ್ಲಿ ಕಚ್ಚಾ ರೇಷ್ಮೆ, ರೇಷ್ಮೆ ಉತ್ಪನ್ನ ಸ್ಥಳೀಯ ಬೇಡಿಕೆಯನ್ನು ಪೂರೈಸುವ ಮಟ್ಟದಲ್ಲಿಲ್ಲ. ಈ ಮಾರುಕಟ್ಟೆ ಕೊರತೆ ಹಾಗೂ ಭಾರತದ ರೇಷ್ಮೆಗೆ ವಿದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದನ್ನು ಗಮನಿಸಿದ ಮಾರಾಟಗಾರರು ಕಡಿಮೆ ದರದಲ್ಲಿ ಸಿಗುವ ಚೀನಾ ರೇಷ್ಮೆಯ ಮೊರೆ ಹೋಗಿದ್ದಾರೆ.
ಕಳ್ಳ ಮಾರ್ಗದಿಂದ ಭಾರತದ ಮಾರುಕಟ್ಟೆಗೆ ಸಾಕಷ್ಟು ಚೀನಾ ರೇಷ್ಮೆ ಹರಿದು ಬರುತ್ತಿದ್ದು ಮಾರುಕಟ್ಟೆ ಹಾಗೂ ರೇಷ್ಮೆ ಕೃಷಿಯ ಮೇಲೆ ಹೊಡೆತ ನೀಡಿದೆ.
ರೇಷ್ಮೆ ಕೃಷಿಕರ ಒತ್ತಡದಿಂದಾಗಿ ವಿದೇಶದಿಂದ ಆಮದಾಗುವ ರೇಷ್ಮೆ ಮೇಲೆ ಆಮದು ನಿರ್ಬಂಧ ಶುಲ್ಕವನ್ನು ಕೇಂದ್ರ ಸರ್ಕಾರ ವಿಧಿಸಿದೆ. ಇದು 2009 ಮಾರ್ಚ್ಗೆ ಅಂತ್ಯಗೊಳ್ಳಲಿದೆ. ಆರ್ಥಿಕ ಹಿಂಜರಿತದ ಕಾರಣದಿಂದ ದೇಶೀಯ ರೇಷ್ಮೆ ಕಾಪಾಡಲು ಕೇಂದ್ರ ಸರ್ಕಾರ 2013 ರವರೆಗೆ ಆ್ಯಂಟಿ ಡಂಪಿಂಗ್ ಶುಲ್ಕವನ್ನು ವಿಸ್ತರಿಸಿದೆ.
ಹಾಗಿದ್ದೂ ರೇಷ್ಮೆ ಪರಿಸ್ಥಿತಿ ಸುಧಾರಿಸಿಲ್ಲ. ವಿದೇಶದಿಂದ ಬೇಡಿಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರೇಷ್ಮೆ ರಫ್ತು ಮೇಲೆ ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಭತ್ತ, ರಾಗಿ, ಸೆಣಬು ಮತ್ತಿತರ ಬೆಳೆಗಳಿಗೆ ನೀಡುವಂತೆ ಬೆಂಬಲ ಬೆಲೆ ನೀಡುವಂತೆ ಆಗ್ರಹ ಕೇಳಿಬಂದಿದೆ. ಇದಕ್ಕೆ ಕೇಂದ್ರ ಸರ್ಕಾರ ಮನಸ್ಸು ಮಾಡಬೇಕಷ್ಟೆ. ಮೈಸೂರು ಸಿಲ್ಕ್ ಎಂದು ಹೆಸರುವಾಸಿಯಾಗಿರುವ ಕರ್ನಾಟಕದ ರೇಷ್ಮೆಯನ್ನು ಉಳಿಸಲು, ರೇಷ್ಮೆ ಕೃಷಿಕರಲ್ಲಿ ಧೈರ್ಯ ತುಂಬಲು ರಾಜ್ಯಸರ್ಕಾರ ಕೂಡ ಮುಂದಾಗಬೇಕಾದ ಅಗತ್ಯವಿದೆ.
ಮೂಲ : ರೈತಾಪಿ
ಕೊನೆಯ ಮಾರ್ಪಾಟು : 2/15/2020
ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ವೈಜ್ಞಾನಿಕ ಬೇಸಾಯ ಕ್ರಮಗಳ ...
ಉತ್ತರ ಕರ್ನಾಟಕದ ಸಾಂಪ್ರದಾಯಿಕ ಆಹಾ ಬೆಳೆಯಾದ ಸಜ್ಜೆ, ಜೋಳ,...