অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆಹಾರ ವನ

ಆಹಾರ ವನ

ಅರಣ್ಯ ನಾಶ ಹಾಗೂ ಪರಿಸರ ನಾಶವಾಗುತ್ತಿರುವುದರಿಂದ ಬಡ ಕುಟುಂಬಗಳ ಆದಾಯದ ಮೂಲವೂ ನಿಧಾನವಾಗಿ ನಾಶವಾಗುತ್ತಿದೆ. ಪರಿಣಾಮವಾಗಿ ಈ ಕುಟುಂಬಗಳಲ್ಲಿ ಆಹಾರದ ಕೊರತೆ ಹಾಗೂ ಅಪೌಷ್ಠಿಕತೆ ಎದ್ದು ಕಾಣುತ್ತಿದೆ. ಇವಿಷ್ಟೇ ಸಾಲದೆಂಬಂತೆ ಗ್ರಾಮೀಣ ಜನರಿಗೆ ಆಹಾರ ಮತ್ತು ಹಣ್ಣುಗಳನ್ನು ಒದಗಿಸುತ್ತಿದ್ದ (ಗೆಡ್ಡೆಗೆಣಸು, ಬೇರು, ವಿವಿಧ ಜಾತಿಯ ಕಳೆಗಿಡಗಳು, ರಸ, ಇತ್ಯಾದಿ) ಅಲ್ಲದೆ ಪಶು ಆಹಾರವಾಗಿಯೂ ಬಳಕೆಯಾಗುತ್ತಿದ್ದ ಹಲವು ಬಗೆಯ ಸ್ಥಳೀಯ ಮರಗಿಡಗಳೂ ಕಾಣೆಯಾಗುತ್ತಿವೆ. ಯಾವುದೇ ಭೂಹಿಡುವಳಿಯಿರದ ಹಾಗೂ ಬಡಜನರ ಸ್ಥಿತಿ ಇನ್ನೂ ಶೋಚನೀಯವಾಗಿದೆ. ಯಾವುದೇ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಅಥವಾ ತದನಂತರದಲ್ಲಿ ಅವರು ನಿಸ್ಸಹಾಯಕ ಸ್ಥಿತಿಗೆ ತಲಪುತ್ತಾರೆ. ಅವರಿಗೆ ಯಾವುದೇ ಬಗೆಯ ಸಾಮಾಜಿಕ ಭದ್ರತೆಯಾಗಲೀ, ಆರ್ಥಿಕ ಬೆಂಬಲವಾಗಲೀ ಇರದಿರುವುದರಿಂದ ಅವರು ಇಂತಹ ಪ್ರಕೃತಿ ವಿಕೋಪಗಳ ಸಂದರ್ಭಗಳನ್ನು ಎದುರಿಸುವ ಸಾಮರ್ಥ್ಯವಿಲ್ಲದೆ ಹೆಚ್ಚಿನ ತೊಂದರೆಗೊಳಗಾಗು ತ್ತಾರೆ.

ಆಹಾರವನ ಮಾದರಿಯು ಭೂರಹಿತ ಜನತೆ ಅಥವಾ ನಿರುದ್ಯೋಗಿ ಗ್ರಾಮೀಣ ಜನತೆ ಒಟ್ಟಾಗಿ ಗ್ರಾಮದಲ್ಲಿ ಲಭ್ಯವಿರುವ ಪಾಳು ಭೂಮಿಯನ್ನು ಕಡಿಮೆ ಅವಧಿಗೆ ಪರಬಾದೆಗೆ ತೆಗೆದುಕೊಂಡು ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುವ, ಪ್ರಕೃತಿ ವಿಕೋಪಗಳನ್ನು ತಾಳಿಕೊಳ್ಳುವ ಸಾಮರ್ಥ್ಯವಿರುವ, ಅಲ್ಲದೆ ಆಹಾರದ ಗಣಿಯಾಗಿರುವ, ಜೊತೆಗೆ ಆಹಾರ, ಮೇವು, ಉತ್ತಮ ಗುಣಮಟ್ಟದ ಪೀಠೋಪಕರಣಗಳನ್ನು ತಯಾರಿಸಬಹುದಾದ, ಹಾಗೂ ಕಾಲಕಾಲದ ಅಗತ್ಯಗಳನ್ನು ಪೂರೈಸುವಂತಹ ಬಹುಪಯೋಗಿ ಮರಗಳನ್ನು (ಅಂದರೆ ವಿವಿಧ ಮರಗಳು, ಪೊದೆಯಾಗಿ ಬೆಳೆಯುವ ಸಸ್ಯಗಳು, ಬಳ್ಳಿಗಳು, ಹುಲ್ಲು, ಗೆಡ್ಡೆಗೆಣಸುಗಳನ್ನು) ಬೆಳೆಸುವ ವಿಧಾನವಾಗಿದೆ. ಜೊತೆಗೆ ನೀರಿನ ಮೂಲವಿದ್ದರೆ ಮೀನುಸಾಕಣೆ, ಬಾತುಕೋಳಿಗಳ ಸಾಕಣೆಯನ್ನೂ ಮಾಡಬಹುದಾಗಿದೆ. ಈ ಮಾದರಿಯು ಪ್ರಕೃತಿ ವಿಕೋಪಗಳ ವಿಪತ್ತನ್ನು ಎದುರಿಸುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಭಾಗವಹಿಸುತ್ತಿರುವ ಗುಂಪಿನ ಸದಸ್ಯರಿಗೆ ಮೀನು ಸಾಕಣೆ, ಕೋಳಿಸಾಕಣೆ, ಹಾಗೂ ಬಾತುಕೋಳಿ ಸಾಕಣೆಯ ಮೂಲಕ ಪೂರಕ ಆದಾಯ ಗಳಿಸುವ ಅವಕಾಶವನ್ನೂ ಸೃಷ್ಠಿಸುತ್ತದೆ. ಅದೇ ಸಮಯದಲ್ಲಿ, ಮಿಶ್ರ ಅರಣ್ಯ ಬೆಳೆಸುವಿಕೆಯಿಂದ ಭೂಗೋಳದ ವಾತಾವರಣ ಬಿಸಿಯಾಗುವುದನ್ನು ತಡೆಯುವುದಲ್ಲದೆ, ಜೀವವೈವಿಧ್ಯತೆಯನ್ನೂ ಸಂರಕ್ಷಿಸುತ್ತದೆ, ಹಾಗೂ ಇನ್ನೊಂದೆಡೆಯಲ್ಲಿ ಭೂರಹಿತ ಜನತೆಗೆ ಒಂದು ಸಂಪತ್ತೂ ಆಗುತ್ತದೆ.

ಈ ರೀತಿಯ ಆಹಾರ ವನವನ್ನು ಮೊತ್ತ ಮೊದಲ ಬಾರಿಗೆ 2004 ಇಸವಿಯಲ್ಲಿ ಖೋಸ್ಕದಂಪುರ ಗ್ರಾಮದ ಬಡ ಹಾಗೂ ಭೂರಹಿತ ಜನತೆಗೆ ಪರಿಚಯ ಮಾಡಿಕೊಡಲಾಯಿತು (ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಬೋಲ್ಪುರ-ಶ್ರೀನಿಕೇತನ ಬ್ಲಾಕಿನ ಕಂಕಲಿತಲ ಗ್ರಾಮ ಪಂಚಾಯತು). ಡಿ. ಆರ್. ಸಿ.ಎಸ್.ಸಿ. ಯು ಗ್ರಾಮೀಣ ಸಮುದಾಯದಲ್ಲಿರುವ ಭೂರಹಿತ ಜನತೆಯನ್ನು ಸಂಘಟಿಸಿ, ಪಿ.ಆರ್. ಐ. ಯ ಜೊತೆ ಚರ್ಚಿಸಿ/ ಸಂವಾದ ನಡೆಸಿ, ಭೂಮಿಯ ಬಳಕೆಯಿಂದ ಉತ್ಪನ್ನವಾಗುವ ಆದಾಯದಲ್ಲಿ ಸರಕಾರದ ಹಾಗೂ ಸಂಘಟಿತ ಜನತೆಯ ಪಾಲು 25 : 75 ಎಂಬ ಒಪ್ಪಂದದ ಮೇರೆಗೆ ಭೂಮಿಯನ್ನು ಪಡೆಯಲು ಅವಕಾಶ ಕಲ್ಪಿಸಿಕೊಟ್ಟಿತು. ಬಳಕೆದಾರ ಸಮುದಾಯವು ಸಸ್ಯ ಪ್ರಬೇಧಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ, ಬೆಳೆಸುವಲ್ಲಿ, ಗಿಡನೆಡುವಲ್ಲಿ, ಅವುಗಳ ಸಂರಕ್ಷಣೆಯಲ್ಲಿ, ಅಲ್ಲದೆ ಉತ್ಪನ್ನಗಳ ಕಟಾವು, ಕೊಯಿಲು ಮತ್ತು ವಿತರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತದೆ. ತಂಡದ ಸದಸ್ಯರು ಹಲವು ವರ್ಷಗಳ ಕಾಲ ಸಸ್ಯಗಳನ್ನು ಸಂರಕ್ಷಿಸಿ, ಬೆಳೆಸಿದರಲ್ಲದೆ ಈಗ ತಮ್ಮ ಶ್ರಮದ ಫಲವನ್ನು ಹಣ್ಣು ಹಾಗೂ ಇತರ ಉತ್ಪನ್ನಗಳ ರೂಪದಲ್ಲಿ ಪಡೆಯುತ್ತಿದ್ದಾರೆ. ಇಲ್ಲಿ ಬರುವ ಉತ್ಪನ್ನಗಳನ್ನು ಸದಸ್ಯರು ತಮ್ಮೊಳಗೆ ಸಮನಾಗಿ ಹಂಚಿಕೊಳ್ಳುತ್ತಾರೆ, ಮುಖ್ಯವಾಗಿ, ಪ್ರಕೃತಿ ವಿಕೋಪದ ಸಮಯದಲ್ಲಿ, ಅಥವಾ ನಂತರ ಬೇರೆ ಯಾವುದೇ ಮೂಲದಿಂದ ಉತ್ಪನ್ನಗಳು ದೊರೆಯದಂತಹ ಸಂದರ್ಭಗಳಲ್ಲಿ ಇದರ (ಸಮುದಾಯ ಆಹಾರ ವನ) ಪ್ರಯೋಜನ ಪಡೆಯುತ್ತಾರೆ. ತರಕಾರಿ, ಎಣ್ಣೆಕಾಳುಗಳು, ಧಾನ್ಯಗಳನ್ನು ಮಧ್ಯಂತರ ಬೆಳೆಗಳಾಗಿ ಬೆಳೆಯುತ್ತಿರುವುದರಿಂದ ಜನತೆಯ ನಿತ್ಯಜೀವನದ ಆಹಾರದ ಬೇಡಿಕೆಗಳು ಪೂರೈಸಲ್ಪಡುತ್ತಿರುವುದಲ್ಲದೆ, ಪಶು ಸಂಗೋಪನೆಗೆ ಅಗತ್ಯವಾಗಿರುವ ಮೇವಿನ ಬೇಡಿಕೆಯನ್ನೂ ಪೂರೈಸುತ್ತಿದೆ. ಈ ಪ್ರಯತ್ನ ಸುಸ್ಥಿರವಾಗಿರಲು ಆಹಾರ ವನವನ್ನು ಕೋಳಿ ಸಾಕಣೆ ಹಾಗೂ ಬಾತುಕೋಳಿ ಸಾಕಣೆಯ ಜೊತೆಗೆ ಸಮಗ್ರ ಕಾರ್ಯಕ್ರಮವನ್ನಾಗಿ ಕೈಗೆತ್ತಿಕೊಳ್ಳಲಾಗಿದೆ.

ಆಧಾರ: ಡಿ.ಆರ್. ಸಿ.ಎಸ್. ಸಿ. ವಾರ್ತಾಪತ್ರ, ಸಂಚಿಕೆ: 6

ಕೊನೆಯ ಮಾರ್ಪಾಟು : 12/4/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate