ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಕೃಷಿ ಒಪ್ಪಂದ / ಹೊಲದಲ್ಲಿ ಬೀಳುವ ಕಸ ರೈತನಿಗೆ ಅಪಾಯಕಾರಿ ಅಲ್ಲ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಹೊಲದಲ್ಲಿ ಬೀಳುವ ಕಸ ರೈತನಿಗೆ ಅಪಾಯಕಾರಿ ಅಲ್ಲ

ಹೊಲದಲ್ಲಿ ಬೀಳುವ ಕಸ ರೈತನಿಗೆ ಅಪಾಯಕಾರಿ ಅಲ್ಲ

ಕಸಾ ಇದ್ರ ಹೊಲಾ ಭಾಳ ಕಸುವಿನಿಂದ (ಶಕ್ತಿ) ಕೂಡಿರತ್ತೈತ್ರೀ’ ಎಂದು ತಮ್ಮದೇ ಧಾಟಿಯಲ್ಲಿ ಹೇಳುವ ವಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಚಿಕ್ಕ ಆಸಂಗಿ ಗ್ರಾಮದ ಭೀಮಣ್ಣ ಗೂಗಿಹಾಳ ಅವರ ಹೊಲದಲ್ಲಿ ಕಸದ್ದೇ ಕಾರುಬಾರು. ರಾಸಾಯನಿಕ ಗೊಬ್ಬರ ಸೋಕಿಸದೇ ಕೇವಲ ಕಸದಿಂದಲೇ ಹೊಲದ ತುಂಬ ಸಮೃದ್ಧ ಬೆಳೆ ಬೆಳೆದಿದ್ದಾರೆ ಭೀಮಣ್ಣ. ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿಯ ಬೆಳೆಗಳು ಇವರ ಹೊಲದಲ್ಲಿ ನಲಿದಾಡುತ್ತಿವೆ. ‘ಹೊಲದಲ್ಲಿ ಬೀಳುವ ಕಸ ರೈತನಿಗೆ ಅಪಾಯಕಾರಿ ಅಲ್ಲ. ಅದನ್ನು ಹೊಲದಲ್ಲಿ ಗೊಬ್ಬರವಾಗಿ ಕರಗಿಸುವ ಕಲೆಯನ್ನು ಎಲ್ಲ ರೈತರು ಕರಗತ ಮಾಡಿಕೊಂಡರೆ ಕೃಷಿ ಲಾಭದಾಯಕ ವೃತ್ತಿಯಾಗುತ್ತದೆ’ ಎನ್ನುವುದು ಅವರ ಅನುಭವದ ನುಡಿ. ‘ಈಗ ನಮಗೆ ಮುಳವಾಡ ಏತ ನೀರಾವರಿಯಿಂದ ಸಾಕಷ್ಟು ನೀರು ಸಿಗುತ್ತಿದೆ. ಆದರೆ ಅತಿಯಾದ ನೀರು, ರಾಸಾಯನಿಕ ಗೊಬ್ಬರ, ಕಳೆನಾಶಕಗಳ ಬಳಕೆಯಿಂದ ಬೆಳೆ ಹಾಳಾಗುವುದು ಮಾತ್ರವಲ್ಲದೇ, ಭೂಮಿತಾಯಿಗೆ ವಿಷ ಉಣಿಸದಂತಾಗುತ್ತದೆ’ ಎನ್ನುತ್ತಾರೆ ಇವರು. ‘ಹೊಲದಲ್ಲಿ ಬೀಳುವ ಕಸ ತೆಗೆಯಲು, ಬೆಳೆಯುವ ಕಳೆಗಳನ್ನು ಕೀಳಲು ಆಳುಗಳನ್ನು ಹುಡುಕಿ ಹೋಗುವುದು ಅನವಶ್ಯಕ ವೆಚ್ಚಕ್ಕೆ ಮೂಲ. ಇದರಿಂದ ಭೂಮಿಯ ಫಲವತ್ತತೆಯೂ ಹಾಳಾಗುವುದು. ಆ ಕಸವನ್ನು ಮಣ್ಣಿನಲ್ಲಿಯೇ ಮುಚ್ಚುವಂತೆ ಮಾಡಿದರೆ ಇಳುವರಿಯೂ ಚೆನ್ನಾಗಿ ಬರುತ್ತದೆ’ ಎಂದು ತಮ್ಮ ಇಪ್ಪತ್ತೆರಡು ವರ್ಷಗಳ ಕೃಷಿ ಅನುಭವವನ್ನು ತಿಳಿಸುತ್ತಾರೆ. ಉತ್ತಮ ನಿರ್ವಹಣೆಯ ಶೂನ್ಯ ಬಂಡವಾಳದ ಕೃಷಿ ಕಾಯಕದಲ್ಲಿ ಕೈತುಂಬ ಕಾಸು ಗಳಿಸಲು ಮಿಶ್ರ ನೈಸರ್ಗಿಕ ಪದ್ಧತಿಯೇ ಉತ್ತಮ ಎನ್ನುವುದು ಇವರ ಅಭಿಮತ. ಇದನ್ನೇ ತಮ್ಮಲ್ಲಿರುವ 12 ಎಕರೆ ಹೊಲದಲ್ಲಿ ಅಳವಡಿಸಿ ಯಶಸ್ವಿಯಾಗಿದ್ದಾರೆ. ಮಿಶ್ರ ಬೆಳೆಗಳ ಸಮ್ಮಿಲನ ‘ಜಾಣನಾದ ರೈತ ಎಲ್ಲಾ ಕೋಳಿ ಮೊಟ್ಟೆಗಳನ್ನು ಒಂದೇ ತಟ್ಟೆಯಲ್ಲಿ ಇಡಲಾರ’ ಎಂಬ ಚೀನಿ ದೇಶದ ಗಾದೆಯನ್ನು ಇವರು ಅನುಸರಿಸುತ್ತಿದ್ದಾರೆ. ತಮ್ಮ ಹೊಲದಲ್ಲಿ ಬಹುವಿಧದ ಮಿಶ್ರ ಬೆಳೆಗಳಾದ ಮೆಕ್ಕೆಜೋಳ, ಕಬ್ಬು, ಮೆಣಸಿನಗಿಡ, ಗಜ್ಜರಿ, ಈರುಳ್ಳಿ, ತೆಂಗು, ಕೊತ್ತಂಬರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಒಂದು ಬೆಳೆ ಕೈಕೊಟ್ಟರೂ ಇನ್ನೊಂದರಲ್ಲಿ ಲಾಭ ಗಳಿಸಿಯೇ ಸಿದ್ಧ ಎನ್ನುತ್ತಾರೆ. ಅಲ್ಪಾವಧಿ ಬೆಳೆಯಿಂದ ಮೂರು ತಿಂಗಳಿಗೆ ಹಾಕಿದ ಬಂಡವಾಳ ಮರಳಿ ತೆಗೆಯುತ್ತಾರೆ. ವರ್ಷಕ್ಕೆ ಎಲ್ಲಾ ಖರ್ಚು ಕಳೆದು 3ರಿಂದ 4ಲಕ್ಷ ರೂಪಾಯಿಗಳ ಲಾಭ ತೆಗೆಯಬಹುದು ಎಂದು ಲೆಕ್ಕ ಹೇಳುತ್ತಾರೆ. ಬಹು ಉಪಯೋಗಿ ಗಂಜಳ ಘಟಕ ತಮ್ಮ ಹೊಲದಲ್ಲಿ ಬೆಳೆಯುವ ಎಲ್ಲಾ ಬೆಳೆಗಳು ಹುಲುಸಾಗಿರಲು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಭೀಮಣ್ಣ ಅವರು ತಮ್ಮ ಹೊಲದಲ್ಲಿ ಗಂಜಳ ಘಟಕವನ್ನು ರೂ. 80 ಸಾವಿರದಲ್ಲಿ ನಿರ್ಮಿಸಿಕೊಂಡಿದ್ದಾರೆ. ಇವರ ಬಳಿ 14 ಎಮ್ಮೆ, ದನ-- ಕರುಗಳಿವೆ. ಅವುಗಳಿಂದ ಸಿಗುವ ಸೆಗಣಿ ಮತ್ತು ಮೂತ್ರಗಳನ್ನು ಬೇರೆ ಬೇರೆಯಾಗಿ ಸಂಗ್ರಹಿಸಲು 10 ಅಡಿ ಉದ್ದಗಲ ಮತ್ತು 8 ಅಡಿ ಆಳದ ಹೊಂಡವನ್ನು ನಿರ್ಮಿಸಿದ್ದಾರೆ. ಇದರಲ್ಲಿ ಕೊಟ್ಟಿಗೆಯಿಂದ ನೇರವಾಗಿ ಸೆಗಣಿ ಮತ್ತು ಮೂತ್ರ ಹರಿದು ಬಂದು ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ. ಬೇವಿನತಪ್ಪಲು, ಕಳ್ಳಿ, ಪಾರ್ಥೇನಿಯಂನಂತಹ ಸಸ್ಯಗಳ ಎಲೆಗಳನ್ನು ಇದರಲ್ಲಿ ಹಾಕಿ ಸೆಗಣಿ ಹುದುಗು ಬರುವಂತೆ ಮಾಡಲಾಗುತ್ತದೆ. ಹುದುಗು ಬಂದು ಸೋಸಿದ ಮೂತ್ರ (ಗಂಜಳ) ಇನ್ನೊಂದು ತೊಟ್ಟಿಯಲ್ಲಿ ಸಂಗ್ರಹವಾಗುತ್ತದೆ. ಇದನ್ನು ಪಂಪ್‌ಸೆಟ್‌ನಿಂದ ಮೇಲೆತ್ತಿ ಬೆಳೆಗಳಿಗೆ ನೀರುಣಿಸುವ ಕಾಲುವೆಗೆ ಜೋಡಿಸಿ ಬೆಳೆಗಳಿಗೆ ಉಣಿಸಲಾಗುತ್ತದೆ. ‘ಸಂಪೂರ್ಣ ಹೊಲಕ್ಕೂ ಇದನ್ನು ಬಳಸುತ್ತಾ ಬಂದಿರುವುದರಿಂದ ಈವರೆಗೂ ನಾನು ನನ್ನ ಹೊಲದ ಮಣ್ಣಿಗೆ ಒಂದು ಕೆ.ಜಿ ಕೂಡ ರಾಸಾಯನಿಕ ಗೊಬ್ಬರ ಹಾಕುವ ಪ್ರಮೇಯವೇ ಬಂದಿಲ್ಲ. ನನ್ನ ಹೊಲದ ಮಣ್ಣನ್ನು ಸಂಪೂರ್ಣವಾಗಿ ರಾಸಾಯನಿಕ ಗೊಬ್ಬರದಿಂದ ಮುಕ್ತ ಮಾಡಿದ ಖುಷಿ ನನ್ನದಾಗಿದೆ’ ಎಂದು ಬೀಗುತ್ತಾರೆ ಭೀಮಣ್ಣ. ‘ವಿಜಾಪುರ ಜಿಲ್ಲೆ ಸೂಕ್ತ ನೀರಾವರಿ ಸೌಲಭ್ಯ ಇಲ್ಲದಕ್ಕಾಗಿ ಬರಗಾಲ ಜಿಲ್ಲೆ ಎನ್ನುತ್ತಿದ್ದರು.ಆದರೆ ಈಗ ಏತ ನೀರಾವರಿಯ ದೆಸೆಯಿಂದಾಗಿ ಸಾಕಷ್ಟು ನೀರು ಸಿಗುತ್ತಿದೆ. ನೀರನ್ನು ಬೇಕಾದಷ್ಟೇ ಬಳಸದಿದ್ದರೆ, ಸಾಕಷ್ಟು ನೀರಿದ್ದೂ, ಉತ್ತಮ ಬೆಳೆ ಬೆಳೆಯಲಾರೆವು’ ಎಂದು ಅಭಿಪ್ರಾಯಪಡುವ ಇವರು ಕೃಷಿಯಲ್ಲಿ ಸ್ವಲ್ಪ ಪ್ರಗತಿಪರ ಮನೋಭಾವ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡುತ್ತಾರೆ. ನೀರಿನ ಹಿತಮಿತ ಬಳಕೆ ಮತ್ತು ಎಲ್ಲಾ ಬೆಳೆಗೂ ತಮ್ಮ ಗಂಜಳ ಘಟಕದಲ್ಲಿ ತಯಾರಾಗುವ ಜೀವಸಾರದ ಪೂರೈಕೆ, ಕೃಷಿ ತ್ಯಾಜ್ಯವನ್ನು ಸ್ವಲ್ಪವೂ ಹಾಳುಗೆಡವದೇ, ಅದನ್ನು ಬೆಳೆಗಳ ಮಧ್ಯೆ ಮುಚ್ಚಿಗೆಯಾಗಿ ಬಳಸುತ್ತಿದ್ದಾರೆ. ಸೂಕ್ತ ಅಂತರದಲ್ಲಿ ಬೆಳೆಗಳ ನಿರ್ವಹಣೆ ಮಾಡಿ, ಹೊಲದ ಮಣ್ಣನ್ನು ಸಂಪದ್ಭರಿತಗೊಳಿಸಿದ್ದಾರೆ. ಇದರಿಂದ ಈ ಭಾಗದ ರೈತರಲ್ಲಿ ಅವರು ವಿಭಿನ್ನವಾಗಿ ನೆಲೆಯಲ್ಲಿ ನಿಲ್ಲುತ್ತಾರೆ. ‘ಗಾಳಿ, ಮಣ್ಣು, ನೀರು ಮತ್ತು ಸೂರ್ಯನ ಬೆಳಕನ್ನು ಸಮರ್ಥವಾಗಿ ನಮ್ಮ ಕೃಷಿಯಲ್ಲಿ ಬಳಸಿಕೊಂಡರೆ ನಮ್ಮ ದೇಶದ ರೈತರು ಇನ್ನೊಬ್ಬರ ಮುಂದೆ ಕೈಚಾಚುವ ಪ್ರಮೇಯವೇ ಬರಲಾರದು’ ಎಂದು ಹೇಳುವ ಭೀಮಣ್ಣನವರು, ಜೀವ ವೈವಿಧ್ಯತೆಯನ್ನು ಉಳಿಸಿಕೊಂಡು ಅದನ್ನು ಸದ್ಭಳಕೆ ಮಾಡಿಕೊಳ್ಳುತ್ತಾ ಕೃಷಿಯಲ್ಲಿ ಖುಷಿ ಕಾಣಬಹುದು ಎನ್ನುತ್ತಾರೆ. ವರ್ಷದುದ್ದಕ್ಕೂ ಹಣ ಗಳಿಸುವ ಮೂಲಕ ಕೃಷಿಯೊಂದು ಲಾಭದಾಯಕ ಉದ್ಯಮವಾಗಿಸಿಕೊಂಡ ಅವರ ಈ ಯಶಸ್ಸಿನ ಗುಟ್ಟೆಂದರೆ ‘ನೈಸರ್ಗಿಕ’ ಪದ್ಧತಿಯ ಅನುಸರಣೆ ಎಂಬುದು ಗಮನಾರ್ಹ ಸಂಗತಿ. ಈ ಭಾಗದಲ್ಲಿ ನೈಸರ್ಗಿಕ ಕೃಷಿಯ ಕುರಿತು ಹಲವಾರು ರೈತರಿಗೆ ತಿಳಿವಳಿಕೆ ನೀಡುತ್ತಾ ತಾವೂ ಬೆಳೆಯುತ್ತಿರುವ ಈ ಕೃಷಿ ಪಂಡಿತನಿಗೆ ಇದುವರೆಗೂ ಕೃಷಿ ಇಲಾಖೆಯಾಗಲಿ, ಸರ್ಕಾರವಾಗಲೀ ಸಹಾಯಧನ ನೀಡಿಲ್ಲ. ಕೊನೆಯ ಪಕ್ಷ ಕೃಷಿ ಪ್ರಶಸ್ತಿಗೂ ಪರಿಗಣಿಸಿಲ್ಲ ಎನ್ನುವುದು ನೋವಿನ ಸಂಗತಿ. ಸಂಪರ್ಕಕ್ಕೆ: 9986162326

ಮೂಲ : ಸುಸ್ತೈನಬ್ಲೆ ಅಗ್ರಿನೇಶನ್

2.9537037037
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top