ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕೃಷಿ ಇಲಾಖೆ

ಕೃಷಿ ಇಲಾಖೆಯು ರಾಜ್ಯದ ಪ್ರಮುಖ ಅಭಿವೃದ್ದಿ ಇಲಾಖೆಗಳಲ್ಲಿ ಒಂದಾಗಿದ್ದು,

ಕೃಷಿ ಇಲಾಖೆಯು ರಾಜ್ಯದ ಪ್ರಮುಖ ಅಭಿವೃದ್ದಿ ಇಲಾಖೆಗಳಲ್ಲಿ ಒಂದಾಗಿದ್ದು, ರೈತರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ವಿವಿಧ ಮೂಲಗಳಿಂದ ಹೊರಹೊಮ್ಮುವ ಸಂಶೋಧನಾ ಫಲಿತಾಂಶಗಳನ್ನು ಆಧುನಿಕ ತಂತ್ರಜ್ಞಾನವನ್ನು ಮಳೆ ಹಾಗೂ ನೀರಾವರಿ ಆಶ್ರಯದ ಸುಮಾರು ಒಟ್ಟು ೧೨೪ ಲಕ್ಷ ಹೆಕ್ಟೇರು ಗಳಲ್ಲಿ  ಸಾಗುವಳಿ ಮಾಡುತ್ತಿರುವ ೭೮.೩೨ ಲಕ್ಷ   ರೈತ ಕುಟುಂಬಗಳಿಗೆ ಪರಿಣಾಮಕಾರಿಯಾಗಿ ವರ್ಗಾಯಿಸುವ ಮೂಲಕ ಇವರುಗಳು ತಮ್ಮ ಹಿಡುವಳಿಗಳಲ್ಲಿ ಆಧುನಿಕ ತಂತ್ರಜ್ಞಾನ  ಬಳಸಿ ಹೆಚ್ಚು ಇಳುವರಿ ಪಡೆಯಲು ನೆರವು ನೀಡುತ್ತಿದೆ. ರಾಜ್ಯದ ಒಟ್ಟಾರೆ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಕೃಷಿ ಇಲಾಖೆಯು

ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯಗತಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ೨೦೧೪-೧೫ ನೇ ಸಾಲಿನಲ್ಲಿ ಕೃಷಿ ಭಾಗ್ಯ, ಕೆ .ಕಿಸಾನ್, ರಾಷ್ಟ್ರೀಯ ಇ ಆಡಳಿತ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಪರಿಕರಗಳ ನಿರ್ವಹಣೆ, ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ,  ಭೂಚೇತನ-ಪ್ಲಸ್ ಮುಂತಾದ  ಹೊಸ ಕಾರ್ಯಕ್ರಮಗಳೊಂದಿಗೆ  ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಭೂ ಚೇತನ, ಸ್ವಬಿಜಾಭಿವ್ರುದ್ದಿ  ಯೋಜನೆ, ಮುಂತಾದ ವಿಶಿಷ್ಟ ಕಾರ್ಯಕ್ರಮಗಳ ಅನುಷ್ಠಾನದಿಂದ ಹಾಗೂ ಕೃಷಿ ಪರಿಕರಗಳಾದ ಬಿತ್ತನೆ ಬೀಜ, ಲಘು ಪೋಷಕಾಂಶ,  ಜೈವಿಕ ಗೊಬ್ಬರ ಮತ್ತು ಸಸ್ಯ ಸಂರಕ್ಷಣಾ ಔಷದಿಗಳ ಸಕಾಲಿಕ ಸರಬರಾಜಿನಿಂದಾಗಿ ೨೦೧೪-೧೫ ರಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಬರಗಾಲ ಪರಿಸ್ಥಿತಿ

ಇದ್ದರೂ ಸಹ ೧೩೦ ಲಕ್ಷ ಟನ್ ಆಹಾರ  ಧಾನ್ಯ ಉತ್ಪಾದನೆ ನಿರೀಕ್ಷಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ: ಭಾಗ 1

ಭಾಗ 2

ಭಾಗ 3

ಮೂಲ : ರೈತ ಮಿತ್ರ

ಅಗಸೆ

ಮೃದುವಾದ ಸು. 3-6 ಮೀ ಎತ್ತರ ಬೆಳೆಯುವ ಪ್ಯಾಪಿಲಿಯೊನೇಸೀ ಜಾತಿಗೆ ಸೇರಿದ ವೃಕ್ಷ. ಸೆ. ಗ್ರಾಂಡಿಫ್ಲೋರ (ಸೆಸ್ಟೇನಿಯ) ಇದರ ವೈಜ್ಞಾನಿಕ ಹೆಸರು. ಇದರ ಪುಷ್ಪಗಳು ಬಿಳಿ ಅಥವಾ ಗುಲಾಬಿ ಬಣ್ಣದ್ದಾಗಿವೆ. ಒಂದೊಂದು ಪುಷ್ಪವೂ ಸು. 7 ಸೆಂಮೀ ಉದ್ದವಿರುತ್ತದೆ. ಸಾಮಾನ್ಯವಾಗಿ ಇದು ಅಕ್ಟೋಬರ್, ನವೆಂಬರ್ ತಿಂಗಳುಗಳಲ್ಲಿ ಹೂ ಬಿಡುತ್ತದೆ. ಹೂವಿನ ರಚನೆ ಬಣ್ಣ ಮತ್ತು ಮಕರಂದ-ಇವೆಲ್ಲ ಚಿಟ್ಟೆಗಳಿಂದ ಅನ್ಯಪರಾಗಸ್ಪರ್ಶಕ್ಕೆ ಅನುಕೂಲಿಸುವಂತೆ ಮಾರ್ಪಟ್ಟು ವೈಶಿಷ್ಟ್ಯಪುರ್ಣವಾಗಿವೆ. ಇದರ ಕಾಯಿ, ಎಲೆ ಮತ್ತು ಹೂವನ್ನು ಅಡುಗೆಗೂ ಕಾಯಿ ಮತ್ತು ಎಲೆಯನ್ನು ದನಗಳಿಗೆ ಮೇವಾಗೂ ಉಪಯೋಗಿಸುತ್ತಾರೆ. ಈ ಮರವನ್ನು ತೋಟಗಳಲ್ಲಿ ಎಲೆಯಬಳ್ಳಿ ಹಬ್ಬಿಸುವ ಸಲುವಾಗಿ ಬೆಳೆಸುತ್ತಾರೆ. ಇದರ ಎಲೆ ಮತ್ತು ತೊಗಟೆಗಳಿಗೆ ಔಷಧೀಯ ಗುಣವುಂಟು.

ಅಗಸೆಎಣ್ಣೆ

ಅಗಸೆಯ (ನಾರಗಸೆಯ) ಬೀಜದಿಂದ ಪಡೆಯಲಾಗುವ ಉಪಯುಕ್ತವಾದ ಎಣ್ಣೆ (ಲಿನ್ಸೀಡ್ ಆಯಿಲ್). ಇದು ಒಂದು ಬಗೆಯ ಎಣ್ಣೆ, ಮೆರುಗು ಎಣ್ಣೆ. ನಾರಗಸೆಯ ಉತ್ಪನ್ನಗಳಲ್ಲಿ ಇದೇ ಅತ್ಯಂತ ಮುಖ್ಯವಾದುದು. ಈ ಗಿಡವನ್ನು ಸಮಶೀತೋಷ್ಣ ಪ್ರದೇಶಗಳಲ್ಲಿ ನಾರು, ಎಣ್ಣೆಗಳೆರಡರ ಸಲುವಾಗಿಯೂ ಟರ್ಕಿ, ಆಫ್ಘಾನಿಸ್ತಾನ ಮತ್ತು ಭಾರತಗಳಲ್ಲಿ ಬರಿ ಎಣ್ಣೆಗಾಗಿಯೂ ಬೆಳೆಯುತ್ತಾರೆ. ಭಾರತದಲ್ಲಿ ಮೂರು ನಾಲ್ಕು ಜಾತಿಯ ನಾರಗಸೆ ಗಿಡಗಳು ಬೆಳೆಯುತ್ತವೆ. ಇವುಗಳಲ್ಲಿ ಲಿನಮ್ ಯುಸಿಟಾಟಿಸಿಮಮ್ ಎಂಬ ಬಗೆಯನ್ನು ಬಹುವಾಗಿ ಬೆಳೆಯುತ್ತಾರೆ. ಇದರಲ್ಲಿ ಶೇ88. ಭಾಗ ಎಣ್ಣೆ ತೆಗೆಯಲು ಉಪಯೋಗವಾಗುತ್ತದೆ.

ಬೀಜಗಳನ್ನು ಮುಂಚೆ ನಯವಾಗಿ ಅರೆದು, ಎತ್ತಿನ ಗಾಣಗಳಿಂದ ಅಥವಾ ಯಂತ್ರಶಕ್ತಿಯಿಂದ ನಡೆಯುವ ಉರುಳೆಯಂತ್ರಗಳಿಂದ ಎಣ್ಣೆ ತೆಗೆಯುತ್ತಾರೆ. ಹಸಿ ಬೀಜದಿಂದಾಗಲೀ ಬೀಜವನ್ನು ಬಿಸಿಮಾಡಿಯಾಗಲಿ ಎಣ್ಣೆ ತೆಗೆಯಬಹುದು. ಬೀಜದ ಪುಡಿಯನ್ನು 16೦೦ ಉಷ್ಣತೆಯಲ್ಲಿ ಕಾಯಿಸಿದರೆ ಹೆಚ್ಚು ಎಣ್ಣೆ (ಬೀಜದ ತೂಕದ ಶೇ.33 ಭಾಗ) ಸಿಗುತ್ತದೆ. ಬೀಜದ ತೂಕದ ಶೇ.23 - ಶೇ.36ವರೆಗೆ ಎಣ್ಣೆ ಸಿಗಬಹುದು. ಭಾರತದಲ್ಲಿ ಸರಾಸರಿ ಉತ್ಪತ್ತಿ ಶೇ.33. ಹೀಗೆ ತೆಗೆದ ಎಣ್ಣೆಯನ್ನು ಶೇಖರಿಸಿಟ್ಟಿದ್ದರೆ ಅದರಲ್ಲಿರುವ ತೇವ ಮತ್ತು ಅಂಟು ಪದಾರ್ಥಗಳು ತಳದಲ್ಲಿ ನಿಲ್ಲುತ್ತವೆ. ಹಲವು ವರ್ಷಗಳು ಹೀಗೆ ಇಟ್ಟ ಎಣ್ಣೆಗೆ ಟ್ಯಾಂಕ್್ಡಆಯಿಲ್ ಎನ್ನುತ್ತಾರೆ. ವಾರ್ನಿಷ್ ತಯಾರಿಕೆಯಲ್ಲಿ ಇದಕ್ಕೆ ಬಹು ಬೆಲೆಯಿದೆ, ಆದರೆ ಈ ರೀತಿಯ ಶುದ್ಧೀಕರಣ ಬಹು ನಿಧಾನ. ಆದ್ದರಿಂದ ಸಾಮಾನ್ಯವಾಗಿ ಕಚ್ಚಾ ಎಣ್ಣೆಗೆ ಶೇ.1 ಅಥವಾ ಶೇ.2 ಭಾಗದಷ್ಟು ಪ್ರಬಲ ಸಲ್ಫ್ಯೂರಿಕ್ ಆಮ್ಲವನ್ನು ಸೇರಿಸುತ್ತಾರೆ. ಕಶ್ಮಲಗಳ ಬಹುಭಾಗ ಇದರಿಂದ ಕರಿಕಾಗಿ ಕೆಳಗೆ ನಿಲ್ಲುತ್ತದೆ. ಚಿತ್ರಕಾರರ ಎಣ್ಣೆಯನ್ನು ತಯಾರಿಸಲು ಈ ರೀತಿ ಶುದ್ಧಿಮಾಡಿದ ಎಣ್ಣೆಯನ್ನು ಆಳವಿಲ್ಲದ ಅಗಲವಾದ ತಟ್ಟೆಗಳಲ್ಲಿ ಹಾಕಿ ಗಾಜಿನ ಮುಚ್ಚಳಗಳಿಂದ ಮುಚ್ಚಿ ಬಿಸಿಲಿಗೆ ಇಡುತ್ತಾರೆ. ಇದರಿಂದ ಬಂದ ಎಣ್ಣೆ ಅತ್ಯಂತ ಪರಿಶುದ್ಧವಾಗಿರುತ್ತದೆ. ಇನ್ನೂ ಅನೇಕ ಶುದ್ಧೀಕರಣ ವಿಧಾನಗಳನ್ನು ಕಂಡುಹಿಡಿದಿದ್ದರೂ ಹಳೆಯ ವಿಧಾನಗಳೇ ಹೆಚ್ಚಾಗಿ ಬಳಕೆಯಲ್ಲಿವೆ.

ಎಣ್ಣೆಗೆ ಫುಲ್ಲರ್್ಸ ಆರ್ತ್ ಅಥವಾ ಚುರುಕುಗೊಳಿಸಿದ ಇಂಗಾಲವನ್ನು ಹಾಕಿ ಶೋಧಿಸಿದರೆ ಬಣ್ಣ ಉತ್ತಮಗೊಳ್ಳುತ್ತದೆ. ಅಲೋಹ ಪಾತ್ರೆಗಳಲ್ಲಿ ಹಾಕಿ ಗಾಳಿ ಬೆಳಕುಗಳ ಸಂಪರ್ಕವಿಲ್ಲದಂತೆ ಇಟ್ಟರೆ ಎಣ್ಣೆ ಬಹುಕಾಲ ಕೆಡದೆ ನಿಲ್ಲುತ್ತದೆ. ಈ ಎಣ್ಣೆಯ ಮುಖ್ಯ ಉಪಯೋಗ ವಾರ್ನಿಷ್ ಮತ್ತು ಬಣ್ಣಗಳ ತಯಾರಿಕೆಯಲ್ಲಿ. ಮೆರುಗು ಎಣ್ಣೆ ಅಥವಾ ಆರುವ ಎಣ್ಣೆಗಳಲ್ಲೆಲ್ಲಾ ಇದೇ ಅತಿ ಮುಖ್ಯವಾದುದು. ಲಿನೋಲಿಯಂ ಮತ್ತು ಮೇಣಗಪಟದ ಬಟ್ಟೆ, ಮುದ್ರಣ ಮತ್ತು ಲಿಥೋಗ್ರಫಿಂ ಮಸಿಗಳು, ಮೆತುಸಾಬೂನು, ಪಾಲಿಷ್ಗಳು, ಬಾಣಬಿರುಸುಗಳು-ಇವುಗಳ ತಯಾರಿಕೆಯಲ್ಲಿಯೂ ಚರ್ಮ ನಯ ಮಾಡುವಾಗಲೂ ಸೆಣಬಿನ ನೇಯ್ಗೆಯ ಬಾಬಿನ್ಗಳನ್ನೂ ಕ್ರಿಕೆಟ್ ಬ್ಯಾಟುಗಳನ್ನು ಹದ ಮಾಡುವುದಕ್ಕೂ ಸ್ವಚ್ಛ ಎಣ್ಣೆ ಉಪಯೋಗವಾಗುತ್ತದೆ. ಹಸಿಬೀಜದಿಂದ ತೆಗೆದ ಎಣ್ಣೆಯನ್ನು ಪೂರ್ವ ಯುರೋಪಿನಲ್ಲಿಯೂ ಕಾಶ್ಮೀರ, ಬಿಹಾರ್, ಮಧ್ಯಪ್ರದೇಶ, ಪಂಜಾಬ್ ಮತ್ತು ಉತ್ತರಪ್ರದೇಶಗಳಲ್ಲಿಯೂ ಆಹಾರದಲ್ಲಿ ಬಳಸುತ್ತಾರೆ. ಚರ್ಮದ ಮೇಲೆ ಔಷಧವಾಗಿ ಹಚ್ಚುವುದಕ್ಕೂ ಕುದುರೆಗಳಿಗೆ ಭೇದಿಔಷಧವಾಗಿಯೂ ಇದನ್ನು ಉಪಯೋಗಿಸುವುದುಂಟು. ಎಣ್ಣೆ ತೆಗೆದ ಅನಂತರ ಉಳಿವ ಹಿಂಡಿ ದನಗಳಿಗೆ ಒಳ್ಳೆಯ ಮೇವು.

ಅಗಸೆನಾರು

ಲೈನೇಸೀ ಸಸ್ಯ ಕುಟುಂಬದ ಲೈನಮ್ ಯುಸಿಟಾಟಿಸಿಮಮ್ ಜಾತಿಗೆ ಸೇರಿದ ಸಸ್ಯ (ಲಿನ್ಸೀಡ್). ಸಾಮಾನ್ಯವಾಗಿ ಇದನ್ನು ಅಗಸೆನಾರು ಅಥವಾ ನಾರಗಸೆ (ಫ್ಲಾಕ್ಸ್) ಎಂದೂ ತೊಗಟೆಯ ನಾರನ್ನು ಬ್ಯಾಸ್್ಟ ನಾರೆಂದೂ ಕರೆಯುತ್ತಾರೆ.

ಅಗಸೆನಾರು ಒಂದು ವಾರ್ಷಿಕ ಬೆಳೆ. ಸಮಶೀತೋಷ್ಣ ವಾಯುಗುಣವಿದ್ದೆಡೆಯೆಲ್ಲ ಚೆನ್ನಾಗಿ ಬೆಳೆಯುತ್ತದೆ. ಇದನ್ನು ನಾರಿಗಾಗಿಯೂ ಬೀಜಕ್ಕಾಗಿಯೂ ಬೆಳೆಸುತ್ತಾರೆ. ಬೀಜದಿಂದ ಉತ್ತಮ ಎಣ್ಣೆ (ಲಿನ್ಸೀಡ್ ಆಯಿಲ್) ಮತ್ತು ಹಿಂಡಿ ಉತ್ಪನ್ನವಾಗುತ್ತವೆ.

ಗಿಡ್ಡನೆಯ ಸಸ್ಯಜಾತಿಗೆ ಸೇರಿದ ಈ ಗಿಡ 30-120ಸೆಂಮೀ ಎತ್ತರ ಬೆಳೆಯುತ್ತದೆ. ತಾಯಿ ಬೇರಿದ್ದರೂ ಇತರ ಬೇರುಗಳು ಗುಚ್ಛವಾಗಿ ಮೇಲ್ಪದರದಲ್ಲೇ ಹರಡಿರುತ್ತವೆ. ತೆಳ್ಳಗಿನ ನೀಳಕಾಂಡದಲ್ಲಿ ಅನೇಕ ಕೊಂಬೆಗಳಿರುತ್ತವೆ. ಬೀಜದಿಂದಲೇ ಬೆಳೆ. ಎಲೆಗಳು ಅತಿ ಕಿರಿದಾಗಿರುತ್ತವೆ. ಹೂಗಳು ಬಿಳುಪು ಅಥವಾ ನೀಲಿ ಬಣ್ಣವಿದ್ದು ಸುಮಮಿತಿಯುಳ್ಳ ಸ್ವಪರಾಗಸಂಪರ್ಕದವಾಗಿವೆ. ಹೂವಿನಲ್ಲಿ 5 ಪುಷ್ಪಪತ್ರಗಳೂ 5 ಪುಷ್ಪದಳಗಳೂ 10 ಕೇಸರಗಳೂ 10 ಬೀಜ ಉತ್ಪನ್ನಮಾಡುವ 5 ವಿಭಾಗದ ಅಂಡಕೋಶವೂ ಇರುತ್ತವೆ. ಬೀಜ ಹೊಳಪುಕಂದು ಅಥವಾ ಕಪ್ಪು ಬಣ್ಣದ್ದು.

ಈ ಜಾತಿಯ ಗಿಡಗಳಲ್ಲಿ ದೇಶದ ವಾಯುಗುಣ ಮತ್ತು ಭೂಗುಣಕ್ಕೆ ಹೊಂದಿಕೊಂಡಂಥ ಅನೇಕ ಪ್ರಭೇದಗಳಿವೆ. ನಾರಿನ ಜಾತಿಯನ್ನು ಒತ್ತಾಗಿ ಬಿತ್ತಬೇಕು. ಅದರ ಕಾಂಡ ನೇರ, ರೆಂಬೆಗಳು ಕಡಿಮೆ. ಕೇವಲ ನಾರಿಗಾಗಿ ಬೆಳೆಸುವ ಈ ಗಿಡದಲ್ಲಿ ಬೀಜದ ಉತ್ಪತ್ತಿ ಕಡಿಮೆ. ಬೀಜದ ಜಾತಿಯನ್ನು ಸ್ವಲ್ಪ ವಿರಳವಾಗಿ ಬಿತ್ತಬೇಕು; ಗಿಡ ಗಿಡ್ಡ; ರೆಂಬೆಗಳು ಹೆಚ್ಚು; ನಾರು ಒರಟು; ಬೀಜ ಹೆಚ್ಚು.

ಅಗಸೆ ಬಹುಶಃ ಭೂಮಧ್ಯಪ್ರದೇಶದ ಆಗ್ನೇಯ ರಾಷ್ಟ್ರಗಳಲ್ಲಿ ಮೊದಲು ಹುಟ್ಟಿ ಆ ಪ್ರದೇಶದಲ್ಲೆಲ್ಲ ಹರಡಿ ಅಲ್ಲಿಂದ ಕ್ರಮೇಣ ಯುರೋಪ್, ಅಮೆರಿಕ ಮತ್ತು ಆಸ್ಟ್ರೇಲಿಯಗಳಿಗೆ ಪ್ರಸರಿಸಿದೆ. ಅಲ್ಲದೆ ಏಷ್ಯ ಮತ್ತು ಆಫ್ರಿಕದಲ್ಲೂ ಈಗ ಹೆಚ್ಚಾಗಿ ಕಾಣಿಸಿಕೊಂಡಿದೆ.

ಈ ನಾರಿನ ಮಾದರಿಗಳು ಸ್ವಿóಟ್ಸರ್ಲೆಂಡ್ ದೇಶದ ಸರೋವರಗಳ ವಸಾಹತುಗಳಲ್ಲೂ ಈಜಿಪ್್ಟದೇಶದ ಪುರಾತನ ಸಮಾಧಿಗಳಲ್ಲೂ ಕಂಡುಬಂದಿದೆ. ಅಲ್ಲದೆ ಶಿಲಾಯುಗದಲ್ಲೂ ಇದರ ಬಳಕೆ ಹೆಚ್ಚಾಗಿತ್ತೆಂಬುದಕ್ಕೆ ಪುರಾವೆಗಳಿವೆ. ಇದರಿಂದ ಬಹುಶಃ ಯುರೋಪ್ ಪ್ರದೇಶದಲ್ಲಿ ಅಗಸೆನಾರೂ ಏಷ್ಯಖಂಡದಲ್ಲಿ ಸಣಬುನಾರೂ ಮಾನವೇತಿಹಾಸದ ಆದಿಯಿಂದಲೂ ಬಳಕೆಯಲ್ಲಿದ್ದಿರಬಹುದೆಂದು ಊಹಿಸಲಾಗಿದೆ. ಅರ್ಜೆಂಟೈನ ಮತ್ತು ಕ್ಯಾಲಿಫೋರ್ನಿಯಗಳಲ್ಲಿ ಅಗಸೆನಾರಿನ ಬೀಜವನ್ನು ಶರತ್ಕಾಲದಲ್ಲಿ ಬಿತ್ತುತ್ತಾರೆ. ಅದು ಐದು ತಿಂಗಳ ಕಾಲಾವಧಿಯಲ್ಲಿ ಮಾಗುತ್ತದೆ. ಉತ್ತರವಲಯದಲ್ಲಿ ವಸಂತಕಾಲದಲ್ಲಿ ಬಿತ್ತುತ್ತಾರೆ. 100-120 ದಿನಗಳಲ್ಲೇ ಅದು ಕೊಯಿಲಿಗೆ ಸಿದ್ಧವಾಗುತ್ತದೆ. ಅಲ್ಲಿ ಅವುಗಳ ಬೇಸಾಯ ಸಾಮಾನ್ಯವಾಗಿ ಗೋದಿ ಮತ್ತಿತರ ಸಣ್ಣಕಾಳುಗಳಂತೆಯೇ ಇದ್ದು, ಅವೆಲ್ಲಕ್ಕೂ ಒಂದೇ ರೀತಿಯ ಯಾಂತ್ರಿಕ ಉಪಕರಣಗಳು ಬಳಕೆಯಲ್ಲಿವೆ.

ಭಾರತದ ಅಗಸೆನಾರಿನ ಗಿಡ ಗಿಡ್ಡಜಾತಿಯದು. ಅಬಿಸೀನಿಯ ದೇಶದ್ದಕ್ಕೆ ದಪ್ಪಕಾಂಡವಿದ್ದು ಎಲೆಗಳು ದಟ್ಟವಾಗಿರುತ್ತವೆ. ಭೂಮಧ್ಯಪ್ರದೇಶದಲ್ಲಿ ಗಿಡದ ಬೀಜ ದಪ್ಪವಾಗಿದ್ದು ನಾರು ಹಳದಿ ಅಥವಾ ಬಂಗಾರದ ಬಣ್ಣದ್ದಾಗಿದ್ದು ನೀಳವಾಗಿರುತ್ತದೆ.

ಯುರೋಪ್ ಖಂಡದಲ್ಲಿ ಮಾತ್ರ ನಾರಿನ ಬೆಳೆಗೆ ಅತಿ ಹೆಚ್ಚಿನ ಪ್ರಾಶಸ್ತ್ಯವಿದೆ. ರಷ್ಯವೊಂದರಲ್ಲೇ ಪ್ರಪಂಚದಲ್ಲಿನ ಉತ್ಪನ್ನದ ಅಧಿಕಭಾಗ ಬೆಳೆಯುವುದು. ಆದರೆ ಅದು ಉತ್ತಮ ದರ್ಜೆಯದಲ್ಲ. ಎಕರೆಯೊಂದಕ್ಕೆ ಬರುವ ಉತ್ಪನ್ನವೂ ಕಡಿಮೆ. ಉತ್ತಮದರ್ಜೆಯ ನಾರು ಫ್ರಾನ್್ಸ, ಬೆಲ್ಜಿಯಂ ಮತ್ತು ಹಾಲೆಂಡ್ ದೇಶಗಳಲ್ಲಿ ಉತ್ಪಾದನೆಯಾಗುತ್ತದೆ. ಐರ್ಲೆಂಡ್ ಮತ್ತು ಕೆನಡಗಳಲ್ಲೂ ಸ್ವಲ್ಪಮಟ್ಟಿಗೆ ಈಗ ಇದನ್ನು ಬೆಳೆಸಲಾಗುತ್ತಿದೆ. ಅಮೆರಿಕ ಸಂಯುಕ್ತ ಸಂಸ್ಥಾನಗಳು, ಕೆನಡ ಮತ್ತು ಅರ್ಜೆಂಟೈನ ದೇಶಗಳಲ್ಲಿ ಅದು ಈಚೆಗೆ ಹೆಚ್ಚು ಪ್ರಮುಖವಾಗುತ್ತಿದೆ.

ಮುಖ್ಯವಾಗಿ ಸಮಶೀತೋಷ್ಣವಲಯದ ಬೆಳೆಯಾಗಿದ್ದರೂ ಅಗಸೆ ಬೇರೆ ಯಾವ ಪ್ರದೇಶದಲ್ಲಾದರೂ ಅನುಕೂಲವೇರ್ಪಡಿಸಿದಲ್ಲಿ ಹೊಂದಿಕೊಂಡು ಬೆಳೆಯಬಲ್ಲುದು. ಅದನ್ನು ಭಿನ್ನ ಭಿನ್ನ ವಾಯುಗುಣ, ಭೂಗುಣಗಳ ಪ್ರದೇಶಗಳಲ್ಲಿ ಬೆಳೆಸಲಾಗುತ್ತಿದೆ. ಹೆಚ್ಚಿನ ಉಷ್ಣಾಂಶ ಮತ್ತು ಅತಿ ಹೆಚ್ಚಿನ ಮಳೆ ಇದಕ್ಕೆ ಅನುಕೂಲವಲ್ಲ.

ನಾರಿನ ವ್ಯವಸಾಯ ದೇಶಕ್ಕನುಗುಣವಾಗಿ ಮಾರ್ಪಾಟು ಹೊಂದುತ್ತದೆ. ಜೇಡಿಮಣ್ಣು ಮತ್ತು ಹೆಚ್ಚಿನ ಸಾವಂiÀÄವವಸ್ತುಗಳಿದ್ದಲ್ಲಿ ಬೆಳೆ ಚೆನ್ನಾಗಿ ಬಾರದು. ಹಾಗೂ ಕರಲು ಅಥವಾ ಕಲ್ಲು ಭೂಮಿಗಳೂ ಅದರ ಬೆಳಸಿಗೆ ಯೋಗ್ಯವಲ್ಲ. ಭೂಮಿ ಸ್ವಲ್ಪ ಫಲವತ್ತಾಗಿದ್ದರೂ ಮರಳುಮಿಶ್ರಿತ ಲಘು ಜೇಡಿಮಣ್ಣಿದ್ದರೂ ಗಿಡ ಹಸನಾಗಿ ಬೆಳೆಯುತ್ತದೆ. ಬಿತ್ತನೆಗೆ ಮೊದಲು ಭೂಮಿಯನ್ನು ಅನೇಕ ಸಲ ಉತ್ತು ಹದಗೊಳಿಸಬೇಕು. ರಾಸಾಯನಿಕ ಗೊಬ್ಬರ ಕೊಟ್ಟಲ್ಲಿ ಒಂದೇ ಎತ್ತರಕ್ಕೆ ಗಿಡ ಬೆಳೆಯುವುದಿಲ್ಲವಾದ್ದರಿಂದ ಅದನ್ನು ಬಳಸುವುದಿಲ್ಲ. ಆದರೆ ಅದರ ಹಿಂದಿನ ಬೆಳೆಗೆ ಹೆಚ್ಚು ಗೊಬ್ಬರ ಒದಗಿಸಿದ್ದಲ್ಲಿ. ಉಳಿದ ಗೊಬ್ಬರ ಭೂಮಿಯಲ್ಲಿ ಹರಡಿಕೊಂಡು ಸಹಾಯಕವಾಗುತ್ತದೆ. ಬೀಜವನ್ನು ಎರಚಬಹುದು, ಸಾಲಾಗಿ ಬಿತ್ತಬಹುದು, ಕೂರಿಗೆ ಹೊಡೆಯಬಹುದು. ಭೂಮಿಯನ್ನು ಸಣ್ಣ ಪಾತಿಗಳನ್ನಾಗಿಸಿ, ಬಿತ್ತಿ, ಮೇಲೆ ಭಾರವಾದ ಕಲ್ಲು ಮುಂತಾದುವನ್ನು ಆಡಿಸಿ ಗಟ್ಟಿಗೊಳಿಸುವುದರಿಂದ ಉತ್ತಮ ಮೊಳಕೆ ಉತ್ಪನ್ನವಾಗುತ್ತದೆ. ಬಿತ್ತನೆ ಪ್ರಮಾಣ ಸು. 40-65 ಕಿಗ್ರಾಂ. ಬೆಳೆಯ ಅವಧಿಯಲ್ಲಿ ಕಳೆತೆಗೆದು ಉಪಬೇಸಾಯ ಕೈಗೊಳ್ಳುತ್ತಾರೆ. ಬೀಜ ಅರ್ಧ ಬಲಿತಿರುವಾಗ ಅದು ಕೊಯಿಲಿಗೆ ಸಿದ್ಧ. ಗಿಡವನ್ನು ಭೂಮಟ್ಟಕ್ಕೆ ಕತ್ತರಿಸಬಹುದು ಅಥವಾ ಬೇರುಸಮೇತ ಕೀಳಲೂಬಹುದು. ಈಗ ಯಂತ್ರಗಳಿಂದ ಕೊಯಿಲುಮಾಡುವುದು ಅಮೆರಿಕ ಸಂಯುಕ್ತಸಂಸ್ಥಾನ ಮುಂತಾದ ರಾಷ್ಟ್ರಗಳಲ್ಲಿ ಸಾಮಾನ್ಯ. ಕೊಯಿಲು ಆದೊಡನೆ ಗಿಡಗಳನ್ನು ಅದೇ ಹೊಲದಲ್ಲಿ ಗುಂಪು ಗುಂಪಾಗಿ ಶೇಖರಿಸಿ ನಿಲ್ಲೊಟ್ಟಲು ಹಾಕಿ ಒಣಗಿಸುತ್ತಾರೆ. ಬೀಜವನ್ನು ಒಣಗಿಸಿ ಅನಂತರ ಶೇಖರಿಸುತ್ತಾರೆ. ಅದರ ಶೇಖರಣೆಯಲ್ಲೂ ವೈವಿಧ್ಯವಿದೆ. ಬಿತ್ತನೆಗೂ ದನದ ಮೇವಿಗೂ ಎಣ್ಣೆಗೂ ಅದನ್ನು ಬಳಸಲಾಗುತ್ತದೆ.

ವಿವಿಧ ದೇಶಗಳಲ್ಲಿ ಅಲ್ಲಿನ ಅನುಕೂಲಕ್ಕೆ ತಕ್ಕಂತೆ ನಾರನ್ನು ಕಾಂಡದಿಂದ ಬೇರ್ಪಡಿಸುತ್ತಾರೆ. ಇದರಲ್ಲಿ ಎರಡು ಮುಖ್ಯ ವಿಧಾನಗಳಿವೆ. ಮೊದಲನೆಯದರಲ್ಲಿ, ಕಾಂಡವನ್ನು ಇಬ್ಬನಿಯಲ್ಲಿ ದೀರ್ಘಕಾಲ ನೆನೆಸುತ್ತಾರೆ. ಎರಡನೆಯದರಲ್ಲಿ, ಬೇಗ ನೆನೆಯುವಂತೆ ನೀರಿನಲ್ಲಿ ಕೊಳೆಹಾಕುತ್ತಾರೆ. ಮೊದಲನೆಯ ವಿಧಾನ ರಷ್ಯದಲ್ಲಿ ಹೆಚ್ಚು.. ಇಬ್ಬನಿ ಮಳೆ ಮತ್ತು ಹಿಮದ ನೀರು, ಸೂಕ್ಷ್ಮಾಣುಗಳು ಮತ್ತು ಬೂಷ್ಟುಗಳ ಕಾರ್ಯಾಚರಣೆ ಗಳನ್ನವಲಂಬಿಸಿ ಅವು ಎಷ್ಟು ಚೆನ್ನಾಗಿದ್ದರೆ ಅಷ್ಟು ಬೇಗನೆ ಗಿಡ ನೆನೆದು ಹದವಾಗುತ್ತದೆ. ನೀರಿನಲ್ಲೇ ಆದರೆ ಗಿಡ ಬಹು ಬೇಗ ಹದವಾಗುತ್ತದೆ. ಕಾಂಡದ ಮಧ್ಯಭಾಗ ಮೃದುವಾಗಿ, ಸುಲಭವಾಗಿ ಸೀಳಬಹುದಾದಾಗ ನಾರು ತೆಗೆಯಲು ಬರುತ್ತದೆ. ನೀರಿನಲ್ಲಿ ಕೊಳೆಹಾಕುವ ಮಾರ್ಗವನ್ನೇ ಅನೇಕ ಮುಖ್ಯ ರಾಷ್ಟ್ರಗಳು ಅನುಸರಿಸುತ್ತಿವೆ. ನೀರಿನಲ್ಲಿ ನಾರಿನ ಮಧ್ಯೆ ಹಾಗೂ ಮೇಲ್ಭಾಗದ ಅಂಗಾಂಶಗಳು ಪುರ್ಣ ಕೊಳೆಯುತ್ತವೆ. ಹೊಂಡ, ಕೆರೆ, ತೆಳ್ಳಗೆ ಹರಿಯುವ ಝರಿ, ಸರೋವರ ಮತ್ತು ಸಾಧ್ಯವಾದೆಡೆ ದೊಡ್ಡ ದೊಡ್ಡ ಕೊಪ್ಪರಿಗೆಗಳಲ್ಲೂ ಅದನ್ನು ನೆನೆಹಾಕಬಹುದು. ಈ ಕೊನೆಯವಿಧಾನದಲ್ಲಿ ಉಷ್ಣತೆಯನ್ನು ನಿಯಂತ್ರಣಗೊಳಿಸಿಡಲು ಸಾಧ್ಯವಾದ ಪಶ್ಚಿಮ ಮತ್ತು ಮಧ್ಯ ಯುರೋಪ್ ಹಾಗೂ ಸಂಯುಕ್ತಸಂಸ್ಥಾನಗಳಲ್ಲಿ ಬಳಕೆಯಲ್ಲಿದೆ. ಅದಕ್ಕೆ ಬೇಕಾದ ನಿರ್ದಿಷ್ಟ ಸೂಕ್ಷ್ಮಾಣುಗಳನ್ನು ಹೆಚ್ಚಾಗಿ ಬೆಳೆಸಿ ರಾಸಾಯನಿಕ ಪ್ರಯೋಗದ ಸಹಾಯದಿಂದ ನಾರು ಬಿಡಿಸುವ ಮಾರ್ಗ ಸಂಶೋಧನೆಗಳಿಂದ ಸಿದ್ಧಿಸಿದ್ದರೂ ಸಾಮಾನ್ಯವಾಗಿ ಬಳಕೆಯಲ್ಲಿಲ್ಲ.

ಹೀಗೆ ಕೊಳೆಸಿ ಒಣಗಿಸಿದ ಹುಲ್ಲನ್ನು ಚೆನ್ನಾಗಿ ಜಜ್ಜಬೇಕು. ನಾರು ತುಂಡಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ವಿವಿಧ ಯಾಂತ್ರಿಕ ಸಲಕರಣೆಗಳ ಸಹಾಯದಿಂದ ಅದನ್ನು ನಿರ್ವಹಿಸಲಾಗುತ್ತದೆ. ಜಜ್ಜಿದ ಹುಲ್ಲಿನಲ್ಲಿನ ಬೆಂಡು ಮತ್ತು ಸ್ವಚ್ಛನಾರುಗಳನ್ನು ಬೇರ್ಪಡಿಸಿ ಎಳೆಗಳು ಮುದ್ದೆಯಾಗದೆ ಸರಳವಾಗಿರುವಂತೆ ಹಣಿಗೆಯ ಸಹಾಯದಿಂದ ಹೆಕ್ಕಿಯೋ ವಿವಿಧ ನಾರುಬಿಡಿಸುವ ಯಂತ್ರಗಳನ್ನು ಬಳಸಿಯೋ ನಾರಿನ ಸಿಕ್ಕನ್ನು ಬಿಡಿಸುತ್ತಾರೆ. ನೀಳವಾಗಿ ನವುರಾಗಿರುವ ಎಲೆಗಳನ್ನು ಗಂಟುಬಿದ್ದು ತುಂಡಾಗಿರುವ ಎಲೆಗಳಿಂದ ಬೇರ್ಪಡಿಸಿ ಅವೆಲ್ಲವನ್ನೂ ಪ್ರತ್ಯೇಕ ಪ್ರತ್ಯೇಕ ಗಂಟುಗಳಾಗಿ ಕಟ್ಟಿ ನೂಲುವ ಕಾರ್ಖಾನೆಗಳಿಗೆ ಒದಗಿಸಲಾಗುತ್ತದೆ.

ನಾರಿನ ಉತ್ಪತ್ತಿ ಫ್ರಾನ್್ಸನಲ್ಲೇ ಹೆಚ್ಚು. ಆಸ್ಟ್ರೇಲಿಯ ಮತ್ತು ಹಾಲೆಂಡ್ಗಳು ದ್ವಿತೀಯ ಸ್ಥಾನ ಪಡೆಯುತ್ತವೆ. ಪಶ್ಚಿಮ ಯುರೋಪಿನಲ್ಲಿ ಎಕರೆಗೆ ಸು. 175 ಕಿ.ಗ್ರಾಂ; ರಷ್ಯದಲ್ಲಿ ಸು. 140 ಕಿ.ಗ್ರಾಂ.; ಸಂಯುಕ್ತ ಸಂಸ್ಥಾನದಲ್ಲಿ, ಸು. 185 ಕಿ.ಗ್ರಾಂ.

ಯುರೋಪ್ನಲ್ಲಿ ನಾರಿನಿಂದ ವಿವಿಧ ಬಗೆಯ ದಾರಗಳನ್ನೂ ಗಟ್ಟಿ ಹುರಿಗಳನ್ನೂ ಹಗ್ಗಗಳನ್ನೂ ತಯಾರಿಸುವರು. ಉತ್ತಮದರ್ಜೆಯ ಬಟ್ಟೆಗಳು, ಅಲಂಕಾರದ ಪಟ್ಟೆಗಳು ಇದರಿಂದ ಉತ್ಪನ್ನವಾಗುತ್ತದೆ. ಅಮೆರಿಕದಲ್ಲಿ ಜಮಖಾನೆಗಳಿಗಾಗಿ ಬೇಕಾದ ನೂಲು, ದಾರಕ್ಕೂ ಹೆಂಗಸರ ಕಾಲುಚೀಲಗಳ ತಯಾರಿಕೆಯಲ್ಲೂ ಉಪಯೋಗಿಸುತ್ತಾರೆ.

ಅರ್ಜೆಂಟೈನ, ಭಾರತ, ಸಂಯುಕ್ತಸಂಸ್ಥಾನ ಮತ್ತು ಕೆನಡ ದೇಶಗಳು ಬೀಜಕ್ಕಾಗಿ ಈ ಗಿಡವನ್ನು ಬೆಳೆಸುತ್ತವೆ. ಅರ್ಜೆಂಟೈನ ದೇಶವೊಂದರಿಂದಲೇ ಪ್ರಪಂಚದ ಒಟ್ಟು ಉತ್ಪತ್ತಿಯ ಅರ್ಧಭಾಗ ರಫ್ತಾಗುತ್ತದೆ. ಬೀಜದಿಂದ ಶೇ.30-ಶೇ.40 ಭಾಗ ಎಣ್ಣೆ ಉತ್ಪನ್ನವಾಗುತ್ತದೆ. ಎಣ್ಣೆಯಿಂದ ಬಣ್ಣ, ವಾರ್ನಿಷ್ (ಮೆರುಗೆಣ್ಣೆ) ಅಲ್ಲದೆ ಕಪ್ಪು ಮೆರುಗಿನ ಬಟ್ಟೆ ತಯಾರಿಕೆಗಾಗಿಯೂ ತೊಗಲಿನ ಮೇಲಿನ ಕಪ್ಪು ಬಣ್ಣಕ್ಕಾಗಿಯೂ ಉಪಯೋಗ ವಾಗುವ ಮಸಿ-ಹೀಗೆ ಅನೇಕ ವಸ್ತುಗಳು ತಯಾರಾಗುತ್ತವೆ. ಎಣ್ಣೆಯನ್ನು ಹಾಗೆಯೇ ಅನೇಕ ಕೆಲಸಗಳಿಗೆ ಬಳಸುತ್ತಾರೆ. ಹಿಂಡಿಯಲ್ಲಿ 30-40 ಭಾಗ ನೈಟ್ರೋಜನ್ ಇರುವುದರಿಂದ ಕರಾವುಹಸುಗಳ ಮೇವಿಗೆ ಅದು ಅತಿ ಮುಖ್ಯ ವಸ್ತುವಾಗಿದೆ.

ಅಂತಾರಾಷ್ಟ್ರೀಯ ಕೃಷಿ ಸಂಸ್ಥೆ

ಇದು 1905ರಲ್ಲಿ, ರೋಮ್ ನಗರದಲ್ಲಿ ಇಟಲಿಯ ರಾಜ ಕರೆದ 40 ರಾಷ್ಟ್ರಗಳ ಪ್ರತಿನಿಧಿಗಳ ಸಭೆಯ ನಿರ್ಣಯದ ಪ್ರಕಾರ ಸ್ಥಾಪಿಸಲ್ಪಟ್ಟಿತು. 1906ರಲ್ಲಿ 24 ರಾಷ್ಟ್ರಗಳು ಕೂಡಿ ಒಪ್ಪಂದದ ಕರಡು ತಯಾರಿಸಿ, ಅದನ್ನು ಕಾರ್ಯರೂಪಕ್ಕೆ ತಂದುವು. ಅನಂತರ 77 ರಾಷ್ಟ್ರಗಳು ಈ ಸಂಸ್ಥೆಯ ಸದಸ್ಯರಾದುವು. ಈ ಯೋಜನೆಯನ್ನು ಸೂಚಿಸಿದ್ದು ಧರ್ಮಪ್ರಚಾರಕ ಡೇವಿಡ್ ಲೂಬಿನ್. ವಾಣಿಜ್ಯ ಅಭಿವೃದ್ಧಿಗೆ ಕೃಷಿಸಂಪತ್ತು ಆಧಾರವಾಗಿದ್ದು, ಕೃಷಿ ಮತ್ತು ಕೈಗಾರಿಕೆಗಳ ನಡುವೆ ಸಮತೋಲ ಸಾಧಿಸಲು ಇಂಥ ಸಂಸ್ಥೆ ಆವಶ್ಯಕವೆಂಬುದು ಅವರ ಅಭಿಮತವಾಗಿತ್ತು. ಈ ಒಪ್ಪಂದ ಕೃಷಿ ಸಂಬಂಧಿತ ಪುಸ್ತಕಾಲಯಕ್ಕೆಡೆಮಾಡಿತು (ಅದು ಕ್ರಮೇಣ ಪತ್ರಾಗಾರವಾಗಿ ಆರ್ಕೈವ್ಸ ಬೆಳೆದು ಈಗ ಪ್ರಪಂಚದ ಅತಿ ದೊಡ್ಡ ಕೃಷಿಸಂಖ್ಯಾಸಂಗ್ರಹಣ ನಿಲಯವಾಗಿದೆ). ಜೊತೆಗೆ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳ ಸಾಧಾರಣ ಸಭೆಯನ್ನು ಕರೆಯಲು ಮತ್ತು ಸಂಸ್ಥೆಯ ಕಾರ್ಯ ರೂಪರೇಷೆಯನ್ನು ತಯಾರಿಸಲು ಅವಕಾಶ ಮಾಡಿಕೊಟ್ಟಿದೆ.

ಈ ಸಂಸ್ಥೆಯ ಕಾರ್ಯಕ್ಷೇತ್ರ ಬಹು ವಿಶಾಲವಾಗಿದೆ. ಬೆಳೆ, ಪಶು, ಜನಸಂಖ್ಯೆ, ವ್ಯಾಪಾರ, ಧಾರಣೆ, ಕೂಲಿ, ರೋಗ ಮತ್ತು ಬೆಳೆಗಳ ಪೀಡೆಗಳ ಬಗ್ಗೆ ಅಂಕಿ ಅಂಶ ಸಂಗ್ರಹಿಸುವುದು, ವೈಜ್ಞಾನಿಕ, ಆರ್ಥಿಕ ಮಾಹಿತಿಯ ಸಂಗ್ರಹಣೆ, ವಿಶ್ಲೇಷಣೆ, ಪ್ರಕಟಣೆ ಮತ್ತು ಹಂಚುವಿಕೆ, ವ್ಯವಸಾಯ, ಸಹಕಾರ, ವಿಮೆ, ಹಾಗೂ ವೈಜ್ಞಾನಿಕ ಮತ್ತು ವ್ಯವಸಾಯದ ಪರಿಷತ್ತುಗಳ ನಿರ್ಧಾರಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯ ಅಧ್ಯಯನ - ಇವು ಸಂಸ್ಥೆಯ ಕೆಲವು ಮುಖ್ಯ ಕೆಲಸಗಳು. ಇವೆಲ್ಲ ಧೋರಣೆಗಳು ಈ ಸಂಸ್ಥೆಯನ್ನು ಜಗತ್ತಿನ ಸಮಸ್ತ ಕೃಷಿ ಸಮಸ್ಯೆಗಳನ್ನೂ ಪರಿಶೀಲಿಸಿ, ಪರಿಹರಿಸುವ ಸಂಸ್ಥೆಯನ್ನಾಗಿಸಿವೆ. ಕ್ರಮೇಣ ಈ ಸಂಸ್ಥೆ ಕೃಷಿ ಕಾನೂನು, ಸಾಮಾಜಿಕ ಸಮಸ್ಯೆಗಳು, ವಲಸೆ ಹೋಗುವಿಕೆ, ಅರಣ್ಯಸಂಬಂಧಿ ವಿಷಯಗಳು ಮುಂತಾದುವನ್ನು ತನ್ನ ವ್ಯಾಪ್ತಿಗೆ ಒಳಪಡಿಸಿಕೊಂಡು ಬೆಳೆಯಿತು.

ಈ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಕೆಳಗೆ ಅನೇಕ ವಿಭಾಗಗಳಲ್ಲಿ ನೂರಾರು ರಾಷ್ಟ್ರಗಳ ಸುಮಾರು ಸಾವಿರಾರು ಸ್ತ್ರೀಪುರುಷರ ಸಿಬ್ಬಂದಿ ಕೆಲಸ ಮಾಡುತ್ತದೆ. ರೋಮ್ನಲ್ಲಿ ಎರಡು ವರ್ಷಗಳಿಗೊಮ್ಮೆ ಸೇರುತ್ತಿದ್ದ ಸಾಮಾನ್ಯ ಸಭೆಗಳಿಗೆ ಮತ್ತು ಯುರೋಪಿನ ನೂರಾರು ಸ್ಥಳಗಳಲ್ಲಿ ಆಗಾಗ ಸೇರುತ್ತಿದ್ದ ವಿಶೇಷ ಸಭೆಗಳಿಗೆ ಸೂಕ್ತ ಸಿದ್ಧತೆಗಳನ್ನು ಮಾಡುವುದು ಇದರ ಮುಖ್ಯ ಕೆಲಸಗಳಲ್ಲೊಂದಾಗಿತ್ತು. ಲೀಗ್ ಆಫ್ ನೇಷನ್್ಸ, ಅಂತಾರಾಷ್ಟ್ರೀಯ ಕಾರ್ಮಿಕ ಕಚೇರಿ ಮತ್ತು 1927, 1933, 1939ರಲ್ಲಿ ಸಮಾವೇಶಗೊಂಡ ಆರ್ಥಿಕ ಸಮ್ಮೇಳನಗಳೊಂದಿಗೆ ಈ ಸಂಸ್ಥೆ ಪುರ್ಣ ಸಹಕಾರ ತೋರಿತಲ್ಲದೆ ಜಾಗತಿಕ ಅರಣ್ಯ ಪರಿಷತ್ತು.

ಕುಕ್ಕುಟ ಮತ್ತು ಕ್ಷೀರ ಸಂವರ್ಧನ ಪರಿಷತ್ತುಗಳ ಸಭೆಗಳಲ್ಲಿ ಭಾಗವಹಿಸಿತು. ಈ ಸಂಸ್ಥೆಯ ಕಾರ್ಯಗಳನ್ನು ಅನೇಕ ಶ್ರೇಣಿಗಳಲ್ಲಿ ಪ್ರಚುರಪಡಿಸಿ ವಿವರಗಳನ್ನು ಸರ್ಕಾರ ಹಾಗೂ ಸಾರ್ವಜನಿಕರಿಗೆ ಹಂಚಲಾಯಿತು. ಈ ಸಂಸ್ಥೆ ಇಂಗ್ಲಿಷ್, ಫ್ರೆಂಚ್ ಭಾಷೆಗಳನ್ನೊಳಗೊಂಡು ಹಲವು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಅಂತಾರಾಷ್ಟ್ರೀಯ ಒಕ್ಕಲುತನ ಕಾಯಿದೆಯ ವಾರ್ಷಿಕ ಗ್ರಂಥಗಳು, ಅಂತಾರಾಷ್ಟ್ರೀಯ ಅರಣ್ಯ ಸಂಖ್ಯಾ ಸಂಗ್ರಹಣ ವಾರ್ಷಿಕ ಗ್ರಂಥಗಳು ಮತ್ತು ರಾಷ್ಟ್ರೀಯ ಒಕ್ಕಲುತನ ವಿಮರ್ಶಿಸುವ ಮಾಸಿಕ ಪತ್ರಿಕೆಗಳು ಇತ್ಯಾದಿ ಅತ್ಯುಪಯುಕ್ತವಾದ ಪುಸ್ತಕಗಳನ್ನು ಪ್ರಕಟಿಸಿತು. ಎರಡನೆಯ ಮಹಾಯುದ್ಧ ಕಾಲದಲ್ಲಿ ಈ ಸಂಸ್ಥೆಯ ಅಂತಾರಾಷ್ಟ್ರೀಯ ಧೋರಣೆಯನ್ನು ಒಪ್ಪದ ಯುದ್ಧಾಸಕ್ತ ರಾಷ್ಟ್ರಗಳ ಬಲದಿಂದಾಗಿ ಇದರ ಕಾರ್ಯಾಸಕ್ತಿ ಕ್ಷೀಣಿಸಿತು. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಆಹಾರ ಮತ್ತು ಕೃಷಿಸಂಸ್ಥೆ (ಎಫ್.ಎ.ಒ.) 1943ರಲ್ಲಿ ಸ್ಥಾಪನೆಗೊಂಡಾಗ ಖ್ಯಾತ ಡೇವಿಡ್ ಲೂಬಿನ್ ಸ್ಮಾರಕ ಗ್ರಂಥಾಲಯದ ಎಲ್ಲ ಗ್ರಂಥಗಳನ್ನೂ ರೋಮ್ ನಗರದ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಧಾನ ಕಚೇರಿಗೆ ರವಾನಿಸಲಾಯಿತು (1946) (ನೋಡಿ-ಆಹಾರ ಮತ್ತು ಕೃಷಿ ಸಂಸ್ಥೆ).

ಆಹಾರ ಮತ್ತು ಕೃಷಿ ಸಂಸ್ಥೆ

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ವಿಶ್ವಸಂಸ್ಥೆಯೊಂದಿಗೆ ಸಂಯೋಜಿತವಾದ ವಿಶೇಷ ಸಂಸ್ಥೆಗಳಲ್ಲೊಂದು (ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಸೇಷನ್; ಎಫ್.ಎ.ಒ.) ದ್ವಿತೀಯ ಮಹಾಯುದ್ಧಾನಂತರದಲ್ಲಿ ಎಂದರೆ 1956 ಅಕ್ಟೋಬರ್ 16ರಂದು ಸ್ಥಾಪಿತವಾದ ಇದು ವಿಶ್ವಸಂಸ್ಥೆ ಜನಿಸುವುದಕ್ಕೆ 8 ದಿನ ಮುಂಚೆ ಹುಟ್ಟಿತು. ಹಸಿವಿನ ನಿವಾರಣೆಯೇ ಈ ಸಂಸ್ಥೆಯ ವಿಶೇಷ ಸಮಸ್ಯೆ. ವರ್ಜಿನಿಯದ ಹಾಟ್ಸ್ಪ್ರಿಂಗ್ ಎಂಬಲ್ಲಿ ಹಲವು ರಾಷ್ಟ್ರಗಳ ಪ್ರತಿನಿಧಿಗಳ ಸಮಾವೇಶದಲ್ಲಿ ಜನ್ಮತಳೆದ ಈ ಸಂಸ್ಥೆಗೆ ಅದರದೇ ಆದ ನಿಬಂಧನೆಗಳೂ ಸದಸ್ಯ ಸಂಪತ್ತಿಯೂ ಉಂಟು. ಆಹಾರ ಮತ್ತು ಕೃಷಿ ಸಂಸ್ಥೆಯ ಎಲ್ಲ ಸದಸ್ಯರೂ ವಿಶ್ವಸಂಸ್ಥೆಗೆ ಸೇರಿದವರಲ್ಲ. ಇದಕ್ಕೆ ಸದಸ್ಯರು ಕೊಡುವ ವಂತಿಗೆಯ ರೂಪದಲ್ಲಿ ತನ್ನದೇ ಆದ ವರಮಾನವೂ ತನ್ನದೇ ಆದ ನಿಯಂತ್ರಣ ಮಂಡಲಿಯೂ ಉಂಟು. ಈ ಮಂಡಲಿ ಎರಡು ವರ್ಷಕ್ಕೊಮ್ಮೆ ಆಹಾರ ಮತ್ತು ಕೃಷಿಗೆ ಸಂಬಂಧಿಸಿದ ಸಮ್ಮೇಳನಗಳನ್ನು ನಡೆಸುತ್ತದೆ.

ಆಹಾರ ಮತ್ತು ಕೃಷಿ ಸಂಸ್ಥೆಯ ಸ್ಥಾಪನೆಗೆ ಪೂರ್ವದಲ್ಲಿ ಎರಡು ಸಂಸ್ಥೆಗಳು ಈ ಸಂಸ್ಥೆಯ ಕಾರ್ಯ ನಿರ್ವಹಿಸುತ್ತಿದ್ದುವು. ವ್ಯವಸಾಯ ವಸ್ತುಗಳ ಬೆಲೆಗಳಲ್ಲೂ ಬೇಡಿಕೆ ಹಾಗೂ ಸರಬರಾಜುಗಳಲ್ಲೂ ಹಠಾತ್ತನೆ ಸಂಭವಿಸುವ ಏರಿಳಿತಗಳ ಪರಿಣಾಮಗಳಿಂದ ರೈತರನ್ನು ರಕ್ಷಿಸುವುದು 1905ರಲ್ಲಿ ರೋಮಿನಲ್ಲಿ ಸ್ಥಾಪಿತವಾಗಿದ್ದ ಅಂತಾರಾಷ್ಟ್ರೀಯ ಕೃಷಿಸಂಸ್ಥೆಯ ಉದ್ದೇಶವಾಗಿತ್ತು. ಆ ಸಂಸ್ಥೆಯ ಸ್ಥಾನದಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪಿತವಾದ್ದರಿಂದ ಅದರ ಕರ್ತವ್ಯ ನಿರ್ವಹಣೆ ಈ ಸಂಸ್ಥೆಯದೇ ಆಯಿತು. ದೇಹಪೋಷಣೆ ಹಾಗೂ ಆರೋಗ್ಯಪಾಲನೆಯ ಸಮಸ್ಯೆಗಳ ಪರಿಹಾರ ಲೀಗ್ ಆಫ್ ನೇಷನ್ಸ್ (ನೋಡಿ) ಸಂಸ್ಥೆಯ ಕರ್ತವ್ಯಗಳಲ್ಲೊಂದಾಗಿತ್ತು. ಈ ಕರ್ತವ್ಯವನ್ನೂ ಆಹಾರ ಮತ್ತು ಕೃಷಿ ಸಂಸ್ಥೆ ವಹಿಸಿಕೊಂಡಿತು. ಆ ಎರಡು ಸಂಸ್ಥೆಗಳು ಮುಂದುವರಿದ ರಾಷ್ಟ್ರಗಳಿಗೆ ಸಂಬಂಧಿಸಿದಂತೆ ಮಾತ್ರವೇ ಈ ಸಮಸ್ಯೆಗಳಿಗೆ ಗಮನ ಹರಿಸುತ್ತಿದ್ದುವು. ಆದರೆ ಆಹಾರ ಮತ್ತು ಕೃಷಿ ಸಂಸ್ಥೆಯ ಸ್ಥಾಪನೆಯಲ್ಲಿ ಹೊಸದಾಗಿ ಸ್ವಾತಂತ್ರ್ಯ ಪಡೆದ ಹಾಗೂ ಅಭಿವೃದ್ಧಿ ಹೊಂದದ ರಾಷ್ಟ್ರಗಳೂ ಆಸಕ್ತಿವಹಿಸಿದ್ದರಿಂದ ಸಹಜವಾಗಿಯೇ ಈ ಸಂಸ್ಥೆಯ ಲಕ್ಷ್ಯ ಇಡೀ ಏಷ್ಯಕ್ಕೇ ವ್ಯಾಪಿಸಿತು. ದ್ವಿತೀಯ ಮಹಾಯುದ್ಧದ ಫಲವಾಗಿ ಜರ್ಝರಿತವಾದ ಆರ್ಥಿಕ ವ್ಯವಸ್ಥೆಯ ರಾಷ್ಟ್ರಗಳ ಜನಸಮೂಹಗಳ ಆಹಾರ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಈ ಸಂಸ್ಥೆ ಆದ್ಯ ಗಮನ ನೀಡಿತು. ಕ್ರಮೇಣ ಇತರರ ಸಮಸ್ಯೆಗಳನ್ನೂ ಇದು ಪರಿಹರಿಸುವ ಕ್ರಮ ಕೈಕೊಂಡಿತು. ಕೆಲವು ರಾಷ್ಟ್ರಗಳಲ್ಲಿ ಹೆಚ್ಚು ಉತ್ಪನ್ನವೂ ಇನ್ನು ಕೆಲವು ರಾಷ್ಟ್ರಗಳಲ್ಲಿ ಆಹಾರಾಭಾವವೂ ಸಂಭವಿಸುತ್ತಿರುವುದನ್ನು ಲಕ್ಷ್ಯಕ್ಕೆ ತೆಗೆದುಕೊಂಡು ವಿಶ್ವದಲ್ಲಿ ಆಹಾರದ ಉತ್ಪಾದನೆಯನ್ನೂ ವಿತರಣೆಯನ್ನೂ ಸುಧಾರಿಸುವತ್ತ ಇದು ದೃಷ್ಟಿ ಹರಿಸಿತು. ಪ್ರಪಂಚದಲ್ಲಿ ಏರುತ್ತಿರುವ ಜನಸಂಖ್ಯೆಯ ದೃಷ್ಟಿಯಿಂದ ಆಹಾರ ಸಮಸ್ಯೆಯ ಗಾತ್ರವನ್ನೂ ಸ್ವರೂಪವನ್ನು ಅಳೆದು ಅದರ ಪರಿಹಾರಕ್ಕೆ ತೀವ್ರಕ್ರಮ ಕೈಕೊಳ್ಳುವ ಕೆಲಸದಲ್ಲಿ ನಿರತವಾಯಿತು. ಹೆಚ್ಚು ಆಹಾರವನ್ನೂ ಇತರ ಬೆಳೆಗಳನ್ನೂ ಉತ್ಪಾದಿಸುವುದು ಹೇಗೆ? ಸಸ್ಯಗಳಿಗೂ ಪ್ರಾಣಿಗಳಿಗೂ ತಗಲುವ ರೋಗಾದ್ಯುಪದ್ರವಗಳನ್ನು ನಿವಾರಿಸುವುದೆಂತು? ಶೇಖರವಾದ ಆಹಾರ ವಸ್ತುಗಳು ಕೆಡದಂತೆ ಅವನ್ನು ರಕ್ಷಿಸುವ ವಿಧಾನ ಯಾವುದು? ಹೊಲ, ಅರಣ್ಯ ಹಾಗೂ ಮತ್ಸ್ಯಕ್ಷೇತ್ರಗಳ ಉತ್ಪನ್ನದ ಮಟ್ಟವನ್ನಧಿಕಗೊಳಿಸುವುದೆಂತು? ಇತ್ಯಾದಿ ವಿಚಾರವಾಗಿ ರಾಷ್ಟ್ರಗಳಿಗೆ ಈ ಸಂಸ್ಥೆಯ ತಜ್ಞರು ಸಲಹೆ ನೀಡುತ್ತಿದ್ದಾರೆ. ಮುಂದುವರಿದ ರಾಷ್ಟ್ರಗಳಲ್ಲಿ ಕೃಷಿಯ ಹೊಸ ವಿಧಾನಗಳನ್ನು ಕಲಿಯಲು ಸಹಾಯವಾಗುವಂತೆ ನಾನಾ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಈ ಸಂಸ್ಥೆಯಿಂದ ವೇತನಗಳು ದೊರಕುತ್ತವೆ.

ವ್ಯವಸಾಯ, ಅರಣ್ಯೋದ್ಯಮ ಹಾಗೂ ಮತ್ಸ್ಯೋದ್ಯಮಗಳಲ್ಲಿ ಉಪಯುಕ್ತವಾಗುವ ಸಾಹಿತ್ಯ ಪ್ರಕಟಣೆಯ ಕಾರ್ಯದಲ್ಲೂ ಈ ಸಂಸ್ಥೆ ಉದ್ಯುಕ್ತವಾಗಿದೆ. ಇದು ವಿಶ್ವ ವ್ಯವಸಾಯ ಪರಿಸ್ಥಿತಿಯನ್ನು ಸರ್ವದಾ ಪರಿಶೀಲಿಸುತ್ತಿದ್ದು ಅದಕ್ಕೆ ಸಂಬಂಧವಾದ ಅಂಕಿಅಂಶಗಳನ್ನೊದಗಿಸುತ್ತದೆ. ಈ ಸಂಸ್ಥೆಯ ಸು.2000 ಪರಿಣತರು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ವ್ಯವಸಾಯಾಭಿವೃದ್ಧಿಯ ವಿಚಾರದಲ್ಲಿ ನೆರವು ನೀಡುತ್ತಿದ್ದಾರೆ. ವಿಶ್ವಬ್ಯಾಂಕೇ ಮುಂತಾದ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ನೆರವಿನಿಂದ ಇದು ಅಭಿವೃದ್ಧಿ ಕಾರ್ಯಗಳಿಗೆ ಬಂಡವಾಳ ಒದಗಿಸುವ ಕೆಲಸದಲ್ಲೂ ನಿರತವಾಗಿದೆ. ಹೊಸ ಹೊಸ ನೆಲವನ್ನು ಕೃಷಿಗೆ ಒಳಪಡಿಸುವ ಕಾರ್ಯದಲ್ಲಿ ಸಹಾಯ ನೀಡುತ್ತಿದೆ. ಇದು 1960ರಲ್ಲಿ ಆರಂಭಿಸಿದ ‘ಹಸಿವಿನಿಂದ ವಿಮೋಚನೆ’ ಎಂಬ ಚಳವಳಿಯ ಮೂಲಕ

ಈ ಸಮಸ್ಯೆಯ ಅರಿವು ಜನರಲ್ಲಿ ಮೂಡುವಂತೆ ಮಾಡಿ, ಇದರ ಪರಿಹಾರಕಾರ್ಯದಲ್ಲಿ ಸಾರ್ವಜನಿಕರ ಬೆಂಬಲ ಗಳಿಸುವುದಕ್ಕೂ ಪ್ರಯತ್ನ ನಡೆಸಿದೆ. ಇದರ ಫಲವಾಗಿ ವಿಶ್ವಸಂಸ್ಥೆ ಹಾಗೂ ಆಹಾರ ಮತ್ತು ಕೃಷಿ ಸಂಸ್ಥೆಗಳ ಸಂಯುಕ್ತ ನೇತೃತ್ವದಲ್ಲಿ ಹತ್ತು ಕೋಟಿ ಡಾಲರುಗಳ ಆರಂಭನಿಧಿಯುಳ್ಳ ವಿಶ್ವ ಆಹಾರಯೋಜನೆಯೊಂದು ರೂಪಿತವಾಗಿದೆ. 1951ರಲ್ಲಿ ಈ ಸಂಸ್ಥೆಯ ಪ್ರಧಾನಕಾರ್ಯಾಲಯ ವಾಷಿಂಗ್ಟನ್ನಿನಿಂದ ರೋಮಿಗೆ ವರ್ಗವಾಯಿತು. ಉತ್ತರ ಅಮೆರಿಕಕ್ಕಾಗಿ ಒಂದು ಪ್ರಾದೇಶಿಕ ಕಚೇರಿ ವಾಷಿಂಗ್ಟನ್ನಿನಲ್ಲಿ ಸ್ಥಾಪಿತವಾಯಿತು,. ಕೈರೊ, ಬಾಂಗ್ಕಾಕ್, ನವದೆಹಲಿ, ಸ್ಯಾಂಟಿಯಾಗೊ, ರಯೋಡಿಜನೈರೊ ಮತ್ತು ಮೆಕ್ಸಿಕೊ ನಗರಗಳಲ್ಲೂ ಇದರ ಪ್ರಾದೇಶಿಕ ಕಚೇರಿಗಳ ಸ್ಥಾಪನೆಯಾಯಿತು. ಅರಣ್ಯೋದ್ಯಮಕ್ಕೆ ಸಂಬಂಧಿಸಿದಂತೆ ಜಿನೀವಾದಲ್ಲಿ ಒಂದು ಉಪಕಚೇರಿಯೂ ವಿಶ್ವಸಂಸ್ಥೆಯೊಂದಿಗೆ ಸಂಪರ್ಕ ಹೊಂದಿರುವುದಕ್ಕಾಗಿ ನ್ಯೂಯಾರ್ಕಿನಲ್ಲಿ ಒಂದು ಕಚೇರಿಯೂ ಇವೆ.

ಅಣಬೆ ಕೃಷಿ ಪರಿಚಯ

  • ಅಣಬೆಯು ಮಾನವನಿಗೆ ಒಂದು ಉತ್ತಮ ಆಹಾರವಾಗಿದೆ. ಅಣಬೆಯಲ್ಲಿ ಪ್ರೋಟೀನ್ ಮತ್ತು ಜೀವಸತ್ವಗಳು ಹೇರಳವಾಗಿದ್ದು ಶರ್ಕರ ಪಿಷ್ಠ ಕಡಿಮೆ ಇರುವುದರಿಂದ ಸಕ್ಕರೆ ರೋಗಿಗಳಿಗೆ ಒಳ್ಳೆಯ ಆಹಾರವಾಗಿದೆ.
  • ಅಣಬೆಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಅಣಬೆ ಕೃಷಿಯಿಂದ ಕಡಿಮೆ ವೇಳೆಯಲ್ಲಿ ಹಾಗೂ ಅಲ್ಪ ಪ್ರದೇಶದಲ್ಲಿ ಅಧಿಕ ಇಳುವರಿ ಪಡೆಯಬಹುದು.
  • ಅಣಬೆ ಉತ್ಪಾದಿಸಲು ಭತ್ತದ ಹುಲ್ಲು ಅವಶ್ಯವಿದೆ. ಆದಕಾರಣ ಭತ್ತದ ಹುಲ್ಲು ಲಭ್ಯವಿರುವಂತ ಜಲಾನಯನ ಪ್ರದೇಶಗಳಲ್ಲಿ ಅದರಲ್ಲೂ ಮಲೆನಾಡು/ಅರೆಮಲೆನಾಡು ಪ್ರದೇಶಗಳಲ್ಲಿ ಅಣಬೆ ಕೃಷಿಯನ್ನು ಉತ್ಪಾದನಾ ಚಟುವಟಿಕೆಯಾಗಿ ಕೈಗೊಳ್ಳಬಹುದು.

ತರಬೇತಿ :

ಅಣಬೆ ಕೃಷಿ ಬಗ್ಗೆ ತರಬೇತಿಯನ್ನು ತೋಟಗಾರಿಕೆ ಇಲಾಖೆ ಬೆಂಗಳೂರು, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಹೆಸರಘಟ್ಟ ಬೆಂಗಳೂರು, ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಮುಂತಾದೆಡೆ ನೀಡಲಾಗುತ್ತಿದೆ.

ರತ್ನ ಮಾನಸ ತೋಟ

ರಾಮಮೂರ್ತಿ

ಹತ್ತು ಎಕರೆ ಜಮೀನಿನಲ್ಲಿ ಕಳೆದ ಹತ್ತು ವರ್ಷಗಳಿಂದ ಸಾವಯವ ಗೊಬ್ಬರ ಮಾತ್ರ ಬಳಸಿ ಕೃಷಿ ಮಾಡಲಾಗುತ್ತಿದೆ. ಹಾಗಂತ ಇಲ್ಲಿ ಯಾವುದೇ ಬೆಳೆ ವಿಫಲವಾಗಿದ್ದಾಗಲಿ, ಇಳುವರಿ ಕಡಿಮೆ ಆಗಿದ್ದಾಗಲಿ ಆಗಿಲ್ಲ. ಬಿಲ್‌ಕುಲ್ ರಾಸಾಯನಿಕ ಗೊಬ್ಬರ ಬಳಸದ ಈ ಜಮೀನು ಉಜಿರೆಯಲ್ಲಿದ್ದು 'ರತ್ನಮಾನಸ' ಎಂಬ ಹೆಸರಿನಿಂದ ಗಮನ ಸೆಳೆಯುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿದೆ ಈ ಕೃಷಿ ತೋಟ.

ರತ್ನಮಾನಸ ತೋಟದಲ್ಲಿ ತರಕಾರಿ, ಹಣ್ಣಿನ ಗಿಡಗಳು ಸೇರಿದಂತೆ ಬೆಳೆಯಲಾಗುವ ಎಲ್ಲ ಬೆಳೆಗಳಿಗೆ ಒಂದಿನಿತೂ ರಾಸಾಯನಿಕ ಗೊಬ್ಬರ ಬಳಸುವುದಿಲ್ಲ. ಆದರೂ ಅಕ ಇಳುವರಿಗೆ ಎಂದೂ ಕುಂದುಂಟಾಗಿಲ್ಲ ಎನ್ನುತ್ತಾರೆ ರತ್ನಮಾನಸ ವಸತಿ ನಿಲಯ ಪಾಲಕರು ಹಾಗು ತೋಟದ ಮುಖ್ಯ ನಿರ್ವಹಣೆಕಾರ ಕೃಷ್ಣ ಶೆಟ್ಟಿ. ಇವರ ಪ್ರಕಾರ, ಸಾವಯವ ಗೊಬ್ಬರದ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಬೆಳೆಗಳಿಗೆ ರೋಗ ಹರಡುವ ಸಂಭವ ಕಡಿಮೆಯಾಗುತ್ತದೆ. ಫಸಲು ಹೆಚ್ಚಾಗುತ್ತದೆ. ಜತೆಗೆ ಬೆಳೆದ ತರಕಾರಿಗಳ ರುಚಿಯೂ ಸಖತ್ತಾಗಿರುತ್ತದೆ. ಈ ಎಲ್ಲಾ ಸಕಾರಾತ್ಮಕ ಅಂಶಗಳೇ ಕಳೆದ ಹತ್ತು ವರ್ಷಗಳಿಂದ ತೋಟದ ಎಲ್ಲ ಗಿಡಗಳಿಗೂ ಸಾವಯವ ಗೊಬ್ಬರ ಕೊಡಲು ಕಾರಣವಂತೆ.

ಜಪಾನ್ ಪದ್ದತಿ: ಹಾಗಂತ, ತೋಟದಲ್ಲಿರುವ ಎಲ್ಲ ಬೆಳೆಗಳಿಗೆ ಸಾವಯವ ಗೊಬ್ಬರ ಪೂರೈಸುವುದು ಅಷ್ಟು ಸುಲಭದ ಕಾರ್ಯವಲ್ಲ. ಸಾವಯವ ಗೊಬ್ಬರ ಖರೀದಿಸುವುದು ಕೂಡ ಒಂದರ್ಥದಲ್ಲಿ ಆರ್ಥಿಕ ಹೊರೆಯೇ. ಹಾಗಾಗಿ ಅಗತ್ಯವಿರುವಷ್ಟು ಸಾವಯವ ಗೊಬ್ಬರವನ್ನು ಉತ್ಪಾದಿಸಲು ಇವರು ಅಳವಡಿಸಿಕೊಂಡಿರುವ ವಿಧಾನವೇ ಜಪಾನ್ ಅಥವಾ ತೊಟ್ಟಿ ಪದ್ಧತಿ. ಇದು ಸಾವಯವ ಗೊಬ್ಬರವನ್ನು ವೈಜ್ಞಾನಿಕ ವಿಧಾನದಲ್ಲಿ ತಯಾರಿಸುವ ವಿಧಾನ ಮತ್ತು ತಾಣ.

ಗಿಡಗಳನ್ನು ನೋಡಲು ಜನ: ತೋಟದಲ್ಲಿ ಸಾವಯವ ಗೊಬ್ಬರ ಬಳಸಿ ಹಲವು ಬಗೆಯ ತರಕಾರಿ ಮತ್ತಿತರ ಬೆಳೆಗಳಲ್ಲದೆ, ನಾನಾ ಬಗೆಯ ಗಿಡಮೂಲಿಕೆ ಸಸ್ಯಗಳನ್ನು ಬೆಳೆಸಲಾಗುತ್ತಿದೆ. ಇದಲ್ಲದೆ ಇತರ ರೈತರಿಗೂ ಮಾದರಿ ಎನ್ನುವ ರೀತಿಯಲ್ಲಿ ಹೈನುಗಾರಿಕೆಯನ್ನೂ ಮಾಡಲಾಗುತ್ತಿದೆ. ಹಾಗಾಗಿಯೇ ರತ್ನಮಾನಸ ಸಂಸ್ಥೆಯ ತೋಟಕ್ಕೆ ಪ್ರತಿ ದಿನವೂ ಅಧ್ಯಯನ ದೃಷ್ಟಿಯಿಂದ ರಾಜ್ಯದ ನಾನಾ ಜಿಲ್ಲೆಗಳಿಂದ ಕೃಷಿಕರು, ರೈತ ಸಂಘಟನೆಗಳ ಸದಸ್ಯರು ಆಗಮಿಸುತ್ತಾರೆ.

ಈ ತೋಟದಲ್ಲಿ ಅಳವಡಿಸಿಕೊಂಡಿರುವ ನೀರಿನ ಮರು ಬಳಕೆ ವ್ಯವಸ್ಥೆ, ಮಿಶ್ರಬೆಳೆ ಬೆಳೆಯವ ಪದ್ಧತಿಗಳು, ತೊಟ್ಟಿ ವಿಧಾನದಲ್ಲಿ ಗೊಬ್ಬರ ತಯಾರಿಕೆ, ಹೈನು ಸಾಕಾಣಿಕೆಯ ವೈಜ್ಞಾನಿಕ ವಿಧಾನ, ಇವೆಲ್ಲವೂ ಕೃಷಿಕರಿಗೆ ಹಾಗು ಕೃಷಿ ಆಸಕ್ತರಿಗೆ ತೆರೆದ ಸಂಶೋಧನಾ ಕೇಂದ್ರದಂತೆ ರೂಪುಗೊಂಡಿದೆ. ಭೇಟಿ ನೀಡಲು ಅಥವಾ ಮಾಹಿತಿ ಪಡೆಯಲು ತೋಟದ ನಿರ್ವಹಣೆ ಮಾಡುವ ಎಂ. ಕೃಷ್ಣ ಶೆಟ್ಟಿ ಅವರನ್ನು ದೂ.ಸಂ. 9449488976 ಮೂಲಕ ಸಂಪರ್ಕಿಸಬಹುದು.

ಜಪಾನ್ (ತೊಟ್ಟಿ) ಪದ್ಧತಿ ಎಂದರೇನು?: ಮೂರರಿಂದ ಐದು ಮೀಟರ್ ಅಗಲ, ಮೂರು ಅಡಿ ಎತ್ತರ, ಹದಿನೈದು ಅಡಿ ಉದ್ದವಿರುವ ತೊಟ್ಟಿಯನ್ನು ನಿರ್ಮಿಸುವುದು ಮೊದಲ ಹಂತ. ಆ ನಂತರ ಅದರಲ್ಲಿ ಬಾಳೆದಿಂಡು, ಬಾಳೆ ಎಲೆ, ಸೋಗೆ ಮತ್ತಿತರ ಅನೇಕ ಬಗೆಯ ಗಿಡ,ಮರಗಳ ಎಲೆಗಳನ್ನು ಹಾಕಿ ಅದರ ಮೇಲೆ ಆಕಳ ಸೆಗಣಿಯನ್ನು ಹಾಕುವುದು ಎರಡನೇ ಹಂತ. ನಂತರ ತೊಟ್ಟಿಯಲ್ಲಿರುವ ಸೆಗಣಿ ಮತ್ತು ಎಲೆಗಳಿಗೆ ವಾರಕ್ಕೆ ಎರಡು ಬಾರಿಯಂತೆ ನೀರು ಕುಡಿಸಬೇಕಾಗುತ್ತದೆ. ಹೀಗೆ ನೀರು ಕೊಟ್ಟ ಹಾಗೆಲ್ಲ ಸೆಗಣಿ ಮತ್ತು ಎಲೆಗಳು ಮಿಶ್ರಿತವಾಗಿ ಕೊಳೆಯಲಾರಂಭಿಸುತ್ತವೆ. ಎರಡರಿಂದ ಮೂರು ತಿಂಗಳಲ್ಲಿ ಸಂಪೂರ್ಣವಾಗಿ ಕೊಳೆತು ಉತ್ತಮ ಸಾವಯವ ಗೊಬ್ಬರವಾಗುತ್ತದೆ. ಈ ವಿಧಾನದ ಮೂಲಕ ತಯಾರಿಸಿದ ಗೊಬ್ಬರ ಪರಿಸರ ಸ್ನೇಹಿಯಾಗಿರುವುದರಿಂದ ಮಾರಾಟ ಮಾಡಿದರೆ ಅದರಿಂದಲೂ ಅಕ ಆದಾಯ ಗಳಿಸಲು ಸಾಧ್ಯವಾಗುತ್ತದೆ.

ಮೂಲ : ವಿಕಿಪೀಡಿಯ

3.04347826087
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top