অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರತ್ನ ಮಾನಸ ತೋಟ

ರತ್ನ ಮಾನಸ ತೋಟ

ರಾಮಮೂರ್ತಿ

ಹತ್ತು ಎಕರೆ ಜಮೀನಿನಲ್ಲಿ ಕಳೆದ ಹತ್ತು ವರ್ಷಗಳಿಂದ ಸಾವಯವ ಗೊಬ್ಬರ ಮಾತ್ರ ಬಳಸಿ ಕೃಷಿ ಮಾಡಲಾಗುತ್ತಿದೆ. ಹಾಗಂತ ಇಲ್ಲಿ ಯಾವುದೇ ಬೆಳೆ ವಿಫಲವಾಗಿದ್ದಾಗಲಿ, ಇಳುವರಿ ಕಡಿಮೆ ಆಗಿದ್ದಾಗಲಿ ಆಗಿಲ್ಲ. ಬಿಲ್‌ಕುಲ್ ರಾಸಾಯನಿಕ ಗೊಬ್ಬರ ಬಳಸದ ಈ ಜಮೀನು ಉಜಿರೆಯಲ್ಲಿದ್ದು 'ರತ್ನಮಾನಸ' ಎಂಬ ಹೆಸರಿನಿಂದ ಗಮನ ಸೆಳೆಯುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿದೆ ಈ ಕೃಷಿ ತೋಟ.

ರತ್ನಮಾನಸ ತೋಟದಲ್ಲಿ ತರಕಾರಿ, ಹಣ್ಣಿನ ಗಿಡಗಳು ಸೇರಿದಂತೆ ಬೆಳೆಯಲಾಗುವ ಎಲ್ಲ ಬೆಳೆಗಳಿಗೆ ಒಂದಿನಿತೂ ರಾಸಾಯನಿಕ ಗೊಬ್ಬರ ಬಳಸುವುದಿಲ್ಲ. ಆದರೂ ಅಕ ಇಳುವರಿಗೆ ಎಂದೂ ಕುಂದುಂಟಾಗಿಲ್ಲ ಎನ್ನುತ್ತಾರೆ ರತ್ನಮಾನಸ ವಸತಿ ನಿಲಯ ಪಾಲಕರು ಹಾಗು ತೋಟದ ಮುಖ್ಯ ನಿರ್ವಹಣೆಕಾರ ಕೃಷ್ಣ ಶೆಟ್ಟಿ. ಇವರ ಪ್ರಕಾರ, ಸಾವಯವ ಗೊಬ್ಬರದ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಬೆಳೆಗಳಿಗೆ ರೋಗ ಹರಡುವ ಸಂಭವ ಕಡಿಮೆಯಾಗುತ್ತದೆ. ಫಸಲು ಹೆಚ್ಚಾಗುತ್ತದೆ. ಜತೆಗೆ ಬೆಳೆದ ತರಕಾರಿಗಳ ರುಚಿಯೂ ಸಖತ್ತಾಗಿರುತ್ತದೆ. ಈ ಎಲ್ಲಾ ಸಕಾರಾತ್ಮಕ ಅಂಶಗಳೇ ಕಳೆದ ಹತ್ತು ವರ್ಷಗಳಿಂದ ತೋಟದ ಎಲ್ಲ ಗಿಡಗಳಿಗೂ ಸಾವಯವ ಗೊಬ್ಬರ ಕೊಡಲು ಕಾರಣವಂತೆ.

ಜಪಾನ್ ಪದ್ದತಿ: ಹಾಗಂತ, ತೋಟದಲ್ಲಿರುವ ಎಲ್ಲ ಬೆಳೆಗಳಿಗೆ ಸಾವಯವ ಗೊಬ್ಬರ ಪೂರೈಸುವುದು ಅಷ್ಟು ಸುಲಭದ ಕಾರ್ಯವಲ್ಲ. ಸಾವಯವ ಗೊಬ್ಬರ ಖರೀದಿಸುವುದು ಕೂಡ ಒಂದರ್ಥದಲ್ಲಿ ಆರ್ಥಿಕ ಹೊರೆಯೇ. ಹಾಗಾಗಿ ಅಗತ್ಯವಿರುವಷ್ಟು ಸಾವಯವ ಗೊಬ್ಬರವನ್ನು ಉತ್ಪಾದಿಸಲು ಇವರು ಅಳವಡಿಸಿಕೊಂಡಿರುವ ವಿಧಾನವೇ ಜಪಾನ್ ಅಥವಾ ತೊಟ್ಟಿ ಪದ್ಧತಿ. ಇದು ಸಾವಯವ ಗೊಬ್ಬರವನ್ನು ವೈಜ್ಞಾನಿಕ ವಿಧಾನದಲ್ಲಿ ತಯಾರಿಸುವ ವಿಧಾನ ಮತ್ತು ತಾಣ.

ಗಿಡಗಳನ್ನು ನೋಡಲು ಜನ: ತೋಟದಲ್ಲಿ ಸಾವಯವ ಗೊಬ್ಬರ ಬಳಸಿ ಹಲವು ಬಗೆಯ ತರಕಾರಿ ಮತ್ತಿತರ ಬೆಳೆಗಳಲ್ಲದೆ, ನಾನಾ ಬಗೆಯ ಗಿಡಮೂಲಿಕೆ ಸಸ್ಯಗಳನ್ನು ಬೆಳೆಸಲಾಗುತ್ತಿದೆ. ಇದಲ್ಲದೆ ಇತರ ರೈತರಿಗೂ ಮಾದರಿ ಎನ್ನುವ ರೀತಿಯಲ್ಲಿ ಹೈನುಗಾರಿಕೆಯನ್ನೂ ಮಾಡಲಾಗುತ್ತಿದೆ. ಹಾಗಾಗಿಯೇ ರತ್ನಮಾನಸ ಸಂಸ್ಥೆಯ ತೋಟಕ್ಕೆ ಪ್ರತಿ ದಿನವೂ ಅಧ್ಯಯನ ದೃಷ್ಟಿಯಿಂದ ರಾಜ್ಯದ ನಾನಾ ಜಿಲ್ಲೆಗಳಿಂದ ಕೃಷಿಕರು, ರೈತ ಸಂಘಟನೆಗಳ ಸದಸ್ಯರು ಆಗಮಿಸುತ್ತಾರೆ.

ಈ ತೋಟದಲ್ಲಿ ಅಳವಡಿಸಿಕೊಂಡಿರುವ ನೀರಿನ ಮರು ಬಳಕೆ ವ್ಯವಸ್ಥೆ, ಮಿಶ್ರಬೆಳೆ ಬೆಳೆಯವ ಪದ್ಧತಿಗಳು, ತೊಟ್ಟಿ ವಿಧಾನದಲ್ಲಿ ಗೊಬ್ಬರ ತಯಾರಿಕೆ, ಹೈನು ಸಾಕಾಣಿಕೆಯ ವೈಜ್ಞಾನಿಕ ವಿಧಾನ, ಇವೆಲ್ಲವೂ ಕೃಷಿಕರಿಗೆ ಹಾಗು ಕೃಷಿ ಆಸಕ್ತರಿಗೆ ತೆರೆದ ಸಂಶೋಧನಾ ಕೇಂದ್ರದಂತೆ ರೂಪುಗೊಂಡಿದೆ. ಭೇಟಿ ನೀಡಲು ಅಥವಾ ಮಾಹಿತಿ ಪಡೆಯಲು ತೋಟದ ನಿರ್ವಹಣೆ ಮಾಡುವ ಎಂ. ಕೃಷ್ಣ ಶೆಟ್ಟಿ ಅವರನ್ನು ದೂ.ಸಂ. 9449488976 ಮೂಲಕ ಸಂಪರ್ಕಿಸಬಹುದು.

ಜಪಾನ್ (ತೊಟ್ಟಿ) ಪದ್ಧತಿ ಎಂದರೇನು?: ಮೂರರಿಂದ ಐದು ಮೀಟರ್ ಅಗಲ, ಮೂರು ಅಡಿ ಎತ್ತರ, ಹದಿನೈದು ಅಡಿ ಉದ್ದವಿರುವ ತೊಟ್ಟಿಯನ್ನು ನಿರ್ಮಿಸುವುದು ಮೊದಲ ಹಂತ. ಆ ನಂತರ ಅದರಲ್ಲಿ ಬಾಳೆದಿಂಡು, ಬಾಳೆ ಎಲೆ, ಸೋಗೆ ಮತ್ತಿತರ ಅನೇಕ ಬಗೆಯ ಗಿಡ,ಮರಗಳ ಎಲೆಗಳನ್ನು ಹಾಕಿ ಅದರ ಮೇಲೆ ಆಕಳ ಸೆಗಣಿಯನ್ನು ಹಾಕುವುದು ಎರಡನೇ ಹಂತ. ನಂತರ ತೊಟ್ಟಿಯಲ್ಲಿರುವ ಸೆಗಣಿ ಮತ್ತು ಎಲೆಗಳಿಗೆ ವಾರಕ್ಕೆ ಎರಡು ಬಾರಿಯಂತೆ ನೀರು ಕುಡಿಸಬೇಕಾಗುತ್ತದೆ. ಹೀಗೆ ನೀರು ಕೊಟ್ಟ ಹಾಗೆಲ್ಲ ಸೆಗಣಿ ಮತ್ತು ಎಲೆಗಳು ಮಿಶ್ರಿತವಾಗಿ ಕೊಳೆಯಲಾರಂಭಿಸುತ್ತವೆ. ಎರಡರಿಂದ ಮೂರು ತಿಂಗಳಲ್ಲಿ ಸಂಪೂರ್ಣವಾಗಿ ಕೊಳೆತು ಉತ್ತಮ ಸಾವಯವ ಗೊಬ್ಬರವಾಗುತ್ತದೆ. ಈ ವಿಧಾನದ ಮೂಲಕ ತಯಾರಿಸಿದ ಗೊಬ್ಬರ ಪರಿಸರ ಸ್ನೇಹಿಯಾಗಿರುವುದರಿಂದ ಮಾರಾಟ ಮಾಡಿದರೆ ಅದರಿಂದಲೂ ಅಕ ಆದಾಯ ಗಳಿಸಲು ಸಾಧ್ಯವಾಗುತ್ತದೆ.

ಕೊನೆಯ ಮಾರ್ಪಾಟು : 6/26/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate