অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಚಂದ್ರಿಕೆಗಳು

ವಿವಿಧ ಮಾದರಿಯ ಚಂದ್ರಿಕೆಗಳು ಮತ್ತು ಅವುಗಳ ಬಳಕೆ

ಬಿದಿರಿನ ಚಂದ್ರಿಕೆ :

ಈ ಚಂದ್ರಿಕೆಯನ್ನು ಸಾಂಪ್ರದಾಯಿಕವಾಗಿ ನಮ್ಮ ರಾಜ್ಯದಲ್ಲಿ ಬಳಸಲಾಗುತ್ತಿದೆ. ಬಿದಿರು ಕಡ್ಡಿಗಳನ್ನು ಸೇರಿಸಿ ಹೆಣೆದ ಬಿದಿರಿನ ಚಾಪೆಯ ಮೇಲೆ ಬಿದಿರಿನಿಂದ ಮಾಡಿದ ಸುರುಳಿಯಾಕಾರದ ಪಟ್ಟಿಯನ್ನು ಈ ಚಂದ್ರಿಕೆಗಳು ಹೊಂದಿರುತ್ತವೆ. ಚಂದ್ರಿಕೆಯ ಅಳತೆಯು 1.8 x 1.2 ಮೀ. ಇದ್ದು, ಸುರುಳಿಯಾಕಾರದ ಪಟ್ಟಿಗಳ ಮಧ್ಯೆ ಸುಮಾರು 5-6 ಸೆಂ.ಮೀ. ಅಂತರವಿರುತ್ತದೆ. ಬಿದಿರಿನ ಚಾಪೆಯಲ್ಲಿರುವ ರಂಧ್ರಗಳಿಂದ ಗಾಳಿ ಸಂಚಾರಕ್ಕೆ ಅನುಕೂಲ ಇರುತ್ತದೆ.
ಈ ರೀತಿಯ ಚಂದ್ರಿಕೆಗಳಲ್ಲಿ ಒಂದು ಚದರಡಿಗೆ 40-60 ಹುಳುಗಳನ್ನು ಬಿಡಬಹುದು. ಗೂಡು ಕಟ್ಟುವ ಸಮಯದಲ್ಲಿ ಎರಡು ಚಂದ್ರಿಕೆಗಳನ್ನು 450 ಕೋನ ಬರುವಂತೆ ಜೋಡಿಸಿದಲ್ಲಿ ಕಳಪೆ ಗೂಡುಗಳ ಸಂಖ್ಯೆ ಕಡಿಮೆಯಾಗುತ್ತದೆ.

ಪ್ಲಾಸ್ಟಿಕ್ ಚಂದ್ರಿಕೆ:

ಪ್ಲಾಸ್ಟಿಕ್ ಜಾಲರಿಗಳಿಂದ ಈ ಚಂದ್ರಿಕೆಗಳನ್ನು ಮಾಡಿದ್ದು, 6 ಸೆಂ.ಮೀ. ಎತ್ತರದ 11 ಮಡಿಕೆಗಳನ್ನು ಹೊಂದಿದ್ದು, ಸುಲಭವಾಗಿ ಮಡಚುವಂತೆ ಇರುತ್ತದೆ. ಇದನ್ನು 60 x 90 ಸೆಂ.ಮೀ. ಅಳತೆಯ ಮರದ ತಟ್ಟೆಗೆ ಸುಲಭವಾಗಿ ಹೊಂದಿಸಬಹುದಾಗಿದೆ. ಈ ಚಂದ್ರಿಕೆಗಳ ಮೇಲೆ ಸುಮಾರು 300-400 ಹುಳುಗಳನ್ನು ಬಿಡಬಹುದಾಗಿರುತ್ತದೆ. ಈ ಚಂದ್ರಿಕೆಗಳ ಕೆಳಗೆ ಹಳೆಯ ದಿನಪತ್ರಿಕೆಗಳನ್ನು ಹರಡುವುದು ಉತ್ತಮ. ಈ ಚಂದ್ರಿಕೆಗಳಿಗೆ ಕಡಿಮೆ ಸ್ಥಳಾವಕಾಶ ಸಾಕಾಗಿದ್ದು, ಸೋಂಕು ನಿವಾರಣೆ ಮಾಡುವಲ್ಲಿ ಅನುಕೂಲವಿರುತ್ತದೆ.
ಇದರಲ್ಲಿ ಸಮಾನವಾದ ಗೂಡುಗಳು ಕಟ್ಟುವುದರಿಂದ ಗೂಡುಗಳನ್ನು ಬಿಡಿಸುವಲ್ಲಿ ಸಹಾಯಕವಾಗುತ್ತದೆ. ವಿಶೇಷಾಗಿ ಮೈಸೂರು x ದ್ವಿತಳಿ ಸಂಕರಣದ (ಅಃ) ಹುಳುಗಳು ಈ ಚಂದ್ರಿಕೆಯಲ್ಲಿ ಹೆಚ್ಚು ಮೂತ್ರ ಮಾಡುವ ಸಾಧ್ಯತೆ ಇರುತ್ತದೆ.

ರೋಟರಿ ಚಂದ್ರಿಕೆ (ತಿರುಗುವ ಚಂದ್ರಿಕೆ)

ಈ ಚಂದ್ರಿಕೆಗಳನ್ನು ಕಾರ್ಡ್‍ಬೋರ್ಡ್ ಅಥವಾ ದಪ್ಪನೆ ಕಾಗದದ ಪಟ್ಟಿಗಳಿಂದ 13 ಸಾಲುಗಳು 12 ವಿಭಾಗಗಳೊಂದಿಗೆ ಹೊಂದಿಸಿ ಒಟ್ಟಾರೆ 156 ಭಾಗಗಳಿರುವಂತೆ ರಚಿಸಲಾಗಿರುತ್ತದೆ. ಪ್ರತಿಯೊಂದು ಭಾಗವು 4.5 x3x3 ಸೆಂ.ಮೀ. ಅಳತೆಯದ್ದಾಗಿರುತ್ತದೆ. ಪ್ರತಿಯೊಂದು ಚಂದ್ರಿಕೆಯು 55 ಸೆಂ.ಮೀ. ಉದ್ದ, 40 ಸೆಂ.ಮೀ. ಅಗಲ ಮತ್ತು 3 ಸೆಂ.ಮೀ. ಆಳ ಇರುತ್ತದೆ. ಈ ರೀತಿಯ 10 ಚಂದ್ರಿಕೆಗಳನ್ನು ಮರದಲ್ಲಿ ಮಾಡಿರುವ ತೆಳುವಾದ ಚೌಕಟ್ಟಿಗೆ 8 ಸೆಂ.ಮೀ. ಅಂತರಕ್ಕೆ ಒಂದರಂತೆ ಅಳವಡಿಸಲ್ಪಟ್ಟಿರುತ್ತದೆ.
ಈ ಚೌಕಟ್ಟು ತಿರುಗುವಂತಿದ್ದು, ಛಾವಣಿಗೆ ತೂಗುಬಿಡಬಹುದಾದ್ದರಿಂದ ಇದನ್ನು ರೋಟರಿ ಚಂದ್ರಿಕೆಗಳೆಂದು ಕರೆಯುತ್ತಾರೆ. ಈ ಚೌಕಟ್ಟನ್ನು ಉಪಯೋಗಿಸದೆ ಇದ್ದಾಗ ಮಡಿಚಿಡಬಹುದು.
ರೋಟರಿ ಚಂದ್ರಿಕೆಗಳಲ್ಲಿ ಹುಳುಗಳನ್ನು ಬಿಡುವ ಮೊದಲು ಚಂದ್ರಿಕೆಯ ಕೆಳಗೆ ದಿನಪತ್ರಿಕೆಗಳನ್ನು ಹಾಸಬೇಕು. ಇದರಿಂದ ಕೆಳಗೆ ಬೀಳುವ ಹುಳುಗಳು ಪುನ: ಚಂದ್ರಿಕೆಯ ಮೇಲೇರಲು ಸಹಾಯಕವಾಗುತ್ತದೆ. 20 ಸೆಂ.ಮೀ. ಅಗಲ ಹಾಗೂ 13 ಸೆಂ.ಮೀ. ಆಳದ ಮರದ ಪೆಟ್ಟಿಗೆಯಲ್ಲಿ ಸುಮಾರು 1200 ಹಣ್ಣಾದ ಹುಳುಗಳನ್ನು ಈ ಚಂದ್ರಿಕೆಯ ಮೇಲೆ ಬಿಡಬಹುದು. ಹರಡಿದ ದಿನಪತ್ರಿಕೆಗಳ ಮೇಲೆ ಈ ಚಂದ್ರಿಕೆಗಳನ್ನು ಇಟ್ಟು ಹುಳುಗಳನ್ನು ತೂಕ ಮಾಡಿ ಸಾವಕಾಶವಾಗಿ ಹರಡಲಾಗುತ್ತದೆ. ಹೀಗೆ ಮಾಡಿದಾಗ ಹುಳುಗಳು ಚಂದ್ರಿಕೆಯ ಪ್ರತಿ ಭಾಗಗಳಲ್ಲಿಯೂ ಸಾಕಷ್ಟು ಸ್ಥಳಾವಕಾಶದೊಂದಿಗೆ ಗೂಡು ಕಟ್ಟಲು ಸಹಾಯಕವಾಗುತ್ತದೆ. ಹುಳುಗಳು ಗೂಡು ಕಟ್ಟುವ ಸಮಯದಲ್ಲಿ ರೋಟರಿ ಚಂದ್ರಿಕೆಯ ಚೌಕಟ್ಟನ್ನು ಛಾವಣಿಗೆ ತೂಗುಬಿಡಬೇಕು. ಇದರಿಂದ ಹುಳುಗಳು ಸಮನಾಗಿ ಹರಡಿ ಉತ್ತಮ ಗುಣಮಟ್ಟದ ಗೂಡುಗಳನ್ನು ಕಟ್ಟಲು ಸಹಾಯಕವಾಗುತ್ತದೆ. ಹುಳುಗಳು ಗೂಡು ಕಟ್ಟುವ ಸಮಯದಲ್ಲಿ ಚಟುವಟಿಕೆಯಿಂದ ಹರಿದಾಡುವ ಕಾರಣ ಚಂದ್ರಿಕೆಯ ಮೇಲ್ಭಾಗಕ್ಕೆ ಬಂದು ಈ ಚಂದ್ರಿಕೆಗಳು ತಿರುಗುತ್ತವೆ.

ಕೊನೆಯ ಮಾರ್ಪಾಟು : 7/9/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate