ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮಣ್ಣು ಪರೀಕ್ಷೆ

ಮಣ್ಣು ಪ್ರಕೃತಿದತ್ತವಾದ ನಿಸರ್ಗದ ಅಮೂಲ್ಯ ಸಂಪತ್ತು. ಸಸ್ಯಗಳಿಗೆ ಪೋಷಕಾಂಶಗಳನ್ನು ಒದಗಿಸುವ ಶಕ್ತಿಗೆ ಮಣ್ಣಿನ ಫಲವತ್ತತೆ ಎನ್ನುತ್ತೇವೆ.

ಮಣ್ಣು ಪ್ರಕೃತಿದತ್ತವಾದ ನಿಸರ್ಗದ ಅಮೂಲ್ಯ ಸಂಪತ್ತು. ಸಸ್ಯಗಳಿಗೆ ಪೋಷಕಾಂಶಗಳನ್ನು ಒದಗಿಸುವ ಶಕ್ತಿಗೆ ಮಣ್ಣಿನ ಫಲವತ್ತತೆ ಎನ್ನುತ್ತೇವೆ. ಒಂದೇ ಕ್ಷೇತ್ರದಲ್ಲಿ ನಿರಂತರವಾಗಿ ಬೆಳೆ ಬೆಳೆಸುವುದರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳ ಲಭ್ಯತೆಯ ಪ್ರಮಾಣ ಕ್ಷೀಣಿಸುತ್ತದೆ. ಈ ಪೋಷಕಾಂಶಗಳ ಲಭ್ಯತೆಯು ಮಣ್ಣಿನ ಭೌತಿಕ ಹಾಗೂ ಕೆಲವು ರಾಸಾಯನಿಕ ಕ್ರಿಯೆಗಳನ್ನು ಅವಲಂಬಿಸಿರುತ್ತದೆ. ಸಸ್ಯದ ಬೆಳವಣಿಗೆ ಮತ್ತು ವಯಸ್ಸಿನ ಆಧಾರದ ಮೇಲೆ ಪೋಷಕಾಂಶಗಳು ನಿರ್ಧಿಷ್ಟ ಪ್ರಮಾಣದಲ್ಲಿ ಬೇಕಾಗುತ್ತವೆ. ಆದುದರಿಂದ ಫಲವತ್ತಾದ ಮಣ್ಣು ಎಂದರೆ ಈ ಎಲ್ಲಾ ಪೋಷಕಾಂಶಗಳನ್ನು ಸಸ್ಯಗಳಿಗೆ ಬೇಕಾಗುವ ಪ್ರಮಾಣದಲ್ಲಿ ಮತ್ತು ದೊರೆಯುವ ರೂಪದಲ್ಲಿ ಅವುಗಳ ಬೆಳವಣಿಗೆಯ ಹಂತದಲ್ಲಿ ಪೂರೈಸುವಂತಿರಬೇಕು. ಹಿಪ್ಪುನೇರಳೆಗೆ ಬೇಕಾದ ಮಣ್ಣಿನ ಫಲವತ್ತತೆಯ ವಿವರಗಳನ್ನು ಪಟ್ಟಿ - 1 ರಲ್ಲಿ ನೀಡಲಾಗಿದೆ.

ಮಣ್ಣಿನಿಂದ ಸಸ್ಯಗಳಿಗೆ ದೊರೆಯುವ ಲಭ್ಯ ಪೋಷಕಾಂಶಗಳ ಪ್ರಮಾಣ ಹಾಗೂ ಮಣ್ಣಿನ ಕೆಲವು ಭೌತಿಕ ಮತ್ತು ರಾಸಾಯನಿಕ ಗುಣಲಕ್ಷಣಗಳನ್ನು ತಿಳಿಯುವ ಸಲುವಾಗಿ ಮಣ್ಣು ಪರೀಕ್ಷೆ ಮಾಡಲಾಗುತ್ತದೆ. ಮಣ್ಣು ಪರೀಕ್ಷೆಯಿಂದ ಮಣ್ಣಿನ ಫಲವತ್ತತೆಯನ್ನು ತಿಳಿದುಕೊಳ್ಳುವುದಲ್ಲದೆ ಸಮಸ್ಯಾತ್ಮಕ ಮಣ್ಣಿನ (ಅಂದರೆ ಆಮ್ಲೀಯ ಮಣ್ಣು, ಕ್ಷಾರೀಯ ಮಣ್ಣು, ಉಪ್ಪು / ಲವಣಯುಕ್ತ ಮಣ್ಣು) ಸರಿಪಡಿಕೆಗೆ ಮತ್ತು ಅಪೇಕ್ಷಿತ ಪ್ರಮಾಣದಲ್ಲಿ ರಸಗೊಬ್ಬರಗಳ ಬಳಕೆಯನ್ನು ನಿರ್ಧರಿಸಲು ಸಹಾಯಕವಾಗುತ್ತದೆ.

ಹಿಪ್ಪುನೇರಳೆಯು ಆಳವಾಗಿ ಬೇರುಬಿಡುವ ಬಹುವಾರ್ಷಿಕ ಸಸ್ಯವಾಗಿದ್ದು ಹವಾಗುಣ ಮತ್ತು ಬೇಸಾಯ ಪದ್ದತಿಗನುಗುಣವಾಗಿ ವರ್ಷಕ್ಕೆ 4-6 ಬೆಳೆಗಳನ್ನು ಪಡೆಯಬಹುದು. ಈ ರೀತಿ ಪಡೆಯುವ ಹೆಚ್ಚು ಪ್ರಮಾಣದ ಸೊಪ್ಪಿನ ಇಳುವರಿಯಿಂದ ಮಣ್ಣಿನ ಫಲವತ್ತತೆ ಸಹಜವಾಗಿ ಕ್ಷೀಣಿಸುತ್ತದೆ. ಆದ್ದರಿಂದ ಹಿಪ್ಪುನೇರಳೆ ತೋಟದ ಮಣ್ಣನ್ನು ನಾಟಿಗೆ ಮೊದಲು ಹಾಗೂ ನಂತರ ಪ್ರತಿ ಎರಡು ವರ್ಷಕ್ಕೊಮ್ಮೆ ಪರೀಕ್ಷೆ ಮಾಡುವುದರಿಂದ ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಹಾಗೂ ಅಪೇಕ್ಷಿತ ರಸಗೊಬ್ಬರಗಳ ಪ್ರಮಾಣ ನಿರ್ಧರಿಸುವಲ್ಲಿ ಸಹಾಯಕವಾಗುತ್ತದೆ.

ಹಿಪ್ಪುನೇರಳೆ ತೋಟಗಳಲ್ಲಿ ಮಣ್ಣಿನ ಮಾದರಿಯನ್ನು ಮಳೆಗಾಲದಲ್ಲಿ, ತೋಟಕ್ಕೆ ನೀರು ಹಾಯಿಸಿದ ನಂತರ, ಬೆಳೆಗಳ ತ್ಯಾಜ್ಯ ವಸ್ತುಗಳನ್ನು ಸುಟ್ಟ ನಂತರ ಹಾಗೂ ಗೊಬ್ಬರ ಮತ್ತು ರಸಗೊಬ್ಬರಗಳನ್ನು ಒದಗಿಸಿದ ನಂತರದ ದಿನಗಳಲ್ಲಿ (30 ರಿಂದ 60 ದಿನಗಳು) ಸಂಗ್ರಹಿಸಬಾರದು. ಪೂರ್ಣ ಬೆಳೆದಿರುವ ಕಾಲದಲ್ಲಿ ಅಂದರೆ ರೇಷ್ಮೆಹುಳು ಕೊನೆಯ ಹಂತದಲ್ಲಿರುವಾಗ ಮಣ್ಣು ಮಾದರಿ ಸಂಗ್ರಹಣೆಗೆ ಯೋಗ್ಯವಾದ ಕಾಲ.

ತೋಟದ ಒಟ್ಟಾರೆ ಮಣ್ಣಿನಲ್ಲಿ ಸ್ವಲ್ಪ ಮಣ್ಣನ್ನು ಮಾತ್ರ ಮಣ್ಣಿನ ಪರೀಕ್ಷೆಗಾಗಿ ಉಪಯೋಗಿಸುವುದರಿಂದ ಈ ಮಣ್ಣು ಇಡೀ ತೋಟವನ್ನು ಪ್ರತಿನಿಧಿಸುವಂತಿರಬೇಕು. ತೋಟದ ವಿಸ್ತೀರ್ಣ, ಮಣ್ಣಿನ ವೈವಿಧ್ಯತೆಗಳ ಆಧಾರದ ಮೇಲೆ ಅವಶ್ಯಕ ಉಪಭಾಗಗಳನ್ನಾಗಿ ಬೇರೆಬೇರೆಯಾಗಿ ಗುರುತಿಸಿ ಮಣ್ಣಿನ ಮಾದರಿ ಸಂಗ್ರಹಿಸಬೇಕು.

ನಿಗದಿತ ಸ್ಥಳದಲ್ಲಿ ಮಣ್ಣನ್ನು ತೆಗೆಯುವ ಮೊದಲು ಮಣ್ಣಿನ ಮೇಲಿನ ಹುಲ್ಲು, ಕಸಕಡ್ಡಿಗಳನ್ನು ತೆಗೆಯಬೇಕು. ಸಾಮಾನ್ಯ ಮಣ್ಣು ಪರೀಕ್ಷೆ ಹಾಗೂ ಗೊಬ್ಬರಗಳ ಶಿಫಾರಸ್ಸಿಗಾಗಿ ಒಂದು ಅಡಿಯಷ್ಟು ಆಳದ ಮಣ್ಣಿನ ಮಾದರಿ ಸಾಕಾಗುತ್ತದೆ. ಇದಕ್ಕಾಗಿ ಪ್ರತಿ ಜಾಗದಲ್ಲಿ ‘ಗಿ’ ಆಕಾರದ 30 ಸೆಂ.ಮೀ. ಆಳದ ಗುಂಡಿ ತೋಡಿ, ಗುಂಡಿಯ ಬದಿಯಿಂದ ಒಂದು ಅಂಗುಲದಷ್ಟು ಪದರವನ್ನು ಕೆರೆದು ಪ್ರತಿ ಗುಂಡಿಯಿಂದ ಸುಮಾರು 250-500 ಗ್ರಾಂ ಮಣ್ಣನ್ನು ಶೇಖರಿಸಬೇಕು. (ಚಿತ್ರ 1)

ಗಟ್ಟಿ ಜಮೀನಿನಲ್ಲಿ ಘನಾಕೃತಿಯಲ್ಲಿ ಗುಂಡಿಯನ್ನು ತೋಡಿ, ಒಂದು ಬದಿಯಿಂದ ಮಣ್ಣನ್ನು ಕೆರೆದು ಸಂಗ್ರಹಿಸಬೇಕು. ಈ ರೀತಿ 5-6 ಸ್ಥಳಗಳಿಂದ ಉಪಮಾದರಿಗಳನ್ನು ಸಂಗ್ರಹಿಸಬೇಕು. ಇದಕ್ಕಾಗಿ ಮಣ್ಣು ಮಾದರಿ ಸಂಗ್ರಹಣೆಯ ಕೊಳವೆ, ಬೈರಿಗೆ, ಸನಿಕೆ, ಪಿಕಾಸಿಗಳನ್ನು ಮತ್ತು ಕುರ್ಪಿಯನ್ನು ಉಪಯೋಗಿಸಬಹುದು.

 

ಮೇಲೆ ತಿಳಿಸಿದಂತೆ ಆಯ್ದ ಜಾಗಗಳಿಂದ ಸಂಗ್ರಹಿಸಿದ 5-6 ಮಣ್ಣಿನ ಮಾದರಿಗಳನ್ನು ಒಟ್ಟುಗೂಡಿಸಿ, ಶುದ್ದವಾದ ಬಟ್ಟೆ ಅಥವ ಪಾಲಿಥಿನ್ ಹಾಳೆಯಲ್ಲಿ ಹರಡಿ, ಕಸಕಡ್ಡಿ, ಕಲ್ಲುಗಳನ್ನು ಬೇರ್ಪಡಿಸಬೇಕು. ನಂತರ ಹೆಂಟೆಗಳನ್ನು ಪುಡಿಮಾಡಿ ಚೆನ್ನಾಗಿ ಮಿಶ್ರ ಮಾಡಿ, ತಟ್ಟೆಯಾಕಾರದಲ್ಲಿ ಹರಡಿ ನಾಲ್ಕು ಸಮಭಾಗಗಳನ್ನಾಗಿ ವಿಂಗಡಿಸಬೇಕು. ಪ್ರತಿಬಾರಿ ಎರಡು ಎದರು ಬದುರಿನ ಭಾಗಗಳನ್ನು ತಿರಸ್ಕರಿಸಿ ಉಳಿದ ಎರಡು ಭಾಗಗಳನ್ನು ಪುನ: ಮಿಶ್ರ ಮಾಡಬೇಕು. (ಚಿತ್ರ 1) ಸುಮಾರು 500-750 ಗ್ರಾಂ. ಮಣ್ಣು ಉಳಿಯುವವರೆಗೆ ಈ ವಿಧಾನವನ್ನು ಪುನರಾವರ್ತಿಸಬೇಕು. ನಂತರ ಮಣ್ಣಿನ ಮಾದರಿಯನ್ನು ನೆರಳಿನಲ್ಲಿ ಒಣಗಿಸಿ ಶುದ್ಧವಾದ ಬಟ್ಟೆ ಅಥವ ಪಾಲಿಥಿನ್ ಚೀಲದಲ್ಲಿ ಹಾಕಿ ತೋಟಕ್ಕೆ ಸಂಬಂಧಿಸಿದ ವಿವರಗಳ ಚೀಟಿಯನ್ನು ಹಾಕಬೇಕು. ಚೀಟಿಯಲ್ಲಿ ರೈತನ ಹೆಸರು, ತೋಟದ ಗುರುತಿನ ಸಂಖ್ಯೆ, ಮಾದರಿ ತೆಗೆದ ದಿನಾಂಕ, ಮುಂತಾದ ವಿವರಗಳನ್ನು ಸ್ಪಷ್ಟವಾಗಿ ಬರೆದಿರಬೇಕು. ಮಣ್ಣಿನ ಮಾದರಿಯೊಂದಿಗೆ ನೀಡಬೇಕಾದ ಮಾಹಿತಿ ಅನುಬಂಧ-1 ರಲ್ಲಿ ಕೊಡಲಾಗಿದೆ.

ಮಣ್ಣಿನ ಫಲವತ್ತತೆ ನೇರವಾಗಿ ಮಣ್ಣಿನ ರಸಸಾರವನ್ನು ಅವಲಂಬಿಸಿರುತ್ತದೆ. ಮಣ್ಣಿನ ರಸಸಾರ 6.3 ಕ್ಕಿಂತ ಕಡಿಮೆಯಿದ್ದಲ್ಲಿ ಆಮ್ಲೀಯ ಮಣ್ಣು ಎಂದು ಹಾಗೂ ಮಣ್ಣಿನ ರಸಸಾರ 8.3 ಕ್ಕಿಂತ ಹೆಚ್ಚು ಇದ್ದಲ್ಲಿ ಕ್ಷಾರೀಯ ಮಣ್ಣು ಎಂದು ಕರೆಯುತ್ತಾರೆ. ಇದಲ್ಲದೆ ಮಣ್ಣಿನಲ್ಲಿ ಕರಗುವ ಲವಣಗಳ ಪ್ರಮಾಣ ಹೆಚ್ಚಾಗಿದ್ದು, ಹೆಚ್ಚಿನ ವಿದ್ಯುತ್ ಸಂವಹನ, ಕಡಿಮೆ ರಸಸಾರ ಹಾಗೂ ಕಡಿಮೆ ಪ್ರಮಾಣದಲ್ಲಿ ವಿನಿಮಯವಾಗುವಂತಹ ಸೋಡಿಯಂ ಇದ್ದರೆ ಅದನ್ನು ಲವಣದ ಅಥವ ಚೌಳು ಮಣ್ಣು ಎಂದು ಕರೆಯುತ್ತಾರೆ. ಮೇಲೆ ತಿಳಿಸಿದ ಮಣ್ಣುಗಳನ್ನು ಒಟ್ಟಾರೆಯಾಗಿ ಸಮಸ್ಯಾತ್ಮಕ ಮಣ್ಣುಗಳೆಂದು ಕರೆಯುತ್ತಾರೆ. ಇಂತಹ ಮಣ್ಣು ಹಿಪ್ಪುನೇರಳೆ ಬೇಸಾಯಕ್ಕೆ ಯೋಗ್ಯವಲ್ಲ. ಹಿಪ್ಪುನೇರಳೆ ಬೇಸಾಯಕ್ಕೆ 6.3 ರಿಂದ 7.2 ರ ರಸಸಾರ ಹೊಂದಿರುವ ಮಣ್ಣು ಸೂಕ್ತ.

ಸಮಸ್ಯಾತ್ಮಕ ಮಣ್ಣಿನ ರಸಸಾರವನ್ನು ಅಪೇಕ್ಷಿತ ಮಟ್ಟಕ್ಕೆ (6.3-7.2) ಸರಿಪಡಿಸಬೇಕು. ಉದಾಹರಣೆಗೆ ಆಮ್ಲೀಯ ಮಣ್ಣಿಗೆ ಸುಣ್ಣದ ಅಂಶವುಳ್ಳ ವಸ್ತುಗಳು ಅಂದರೆ, ಸುಣ್ಣದ ಕಲ್ಲನ್ನು (ಕ್ಯಾಲ್ಸಿಯಂ ಕಾರ್ಬೋನೇಟ್) ಬಳಸುವುದು ಸರ್ವೇಸಾಮಾನ್ಯ. ಮಣ್ಣಿನ ಗುಣಗಳು ಮತ್ತು ಆಮ್ಲೀಯತೆಯ ಪ್ರಮಾಣವನ್ನು ಅವಲಂಬಿಸಿ ಸುಣ್ಣದ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಕ್ಷಾರೀಯ ಮಣ್ಣನ್ನು ಸರಿಪಡಿಸಲು ಜಿಪ್ಸಂ ಬೆರೆಸಬೇಕಾಗುತ್ತದೆ. ಇದಲ್ಲದೆ ಹಸಿರು ಗೊಬ್ಬರ - ಧಯಿಂಚ ಸಸಿಗಳನ್ನು ಬೆಳೆಸಿ, ಉಳುಮೆ ಮಾಡಿ ಅವುಗಳನ್ನು ಭೂಮಿಗೆ ಸೇರಿಸುವುದರಿಂದ ಮಣ್ಣಿನ ರಸಸಾರವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಬೇಕಾಗುವ ಸುಣ್ಣ ಮತ್ತು ಜಿಪ್ಸಂ ಪ್ರಮಾಣ, ಮಣ್ಣು ಪರೀಕ್ಷೆಯ ಫಲಿತಾಂಶಗಳ ಮೇಲೆ ನಿರ್ಧರಿತವಾಗುತ್ತದೆ.(ಪಟ್ಟಿ-2).

ಲವಣದ ಅಥವ ಚೌಳು ಮಣ್ಣನ್ನು ಸರಿಪಡಿಸುವುದು ಎಂದರೆ, ಇಂತಹ ಮಣ್ಣಿನಲ್ಲಿ ಕರಗುವ ಲವಣಗಳ ಸಾಂಧ್ರತೆಯನ್ನು ನಿಧಾನವಾಗಿ ಕಡಿಮೆಗೊಳಿಸುವುದು. ಮಣ್ಣಿನಲ್ಲಿರುವ ನೀರಿನ ಅಂಶವು ಆವಿಯಾಗುವುದನ್ನು ತಡೆಗಟ್ಟುವುದರಿಂದ ಅಥವ ಹೆಚ್ಚಿನ ನೀರು ಭೂಮಿಯಲ್ಲಿ ಇಂಗುವಂತೆ ಮಾಡುವುದರಿಂದ ಈ ರೀತಿಯ ಮಣ್ಣನ್ನು ಸರಿಪಡಿಸಬಹುದು. ಇದಲ್ಲದೆ ಹಸಿರೆಲೆ ಗೊಬ್ಬರದ ಬಳಕೆಯಿಂದ ಮಣ್ಣನ್ನು ಸರಿಪಡಿಸಬಹುದು.

3.0
ಕುಂಟೆಪ್ಪ Nov 27, 2018 12:25 PM

ಮಣಿನ ಪರೀಷೆ ವಿಧಾನ ತಿಳಿಸಿ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top