ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಶೆಮೆ ಬಿದಿರು

ಶ್ರಮ ಬೇಡದ ಶಮೆ ಬಿದಿರು

ಕಳೆದ ವರ್ಷ ಮಲೆನಾಡಿನಲ್ಲಿ ಕಾಡುಬಿದಿರಿಗೆ ಹೂಬಿಟ್ಟ ಮರಣಸಂಭ್ರಮ. ಇಷ್ಟು ದಿನ ಬಿದಿರಿನೆಡೆಗೆ ಇದ್ದ ತಾತ್ಸಾರ ಮಾಯವಾಗಿ ತತ್ವಾರ ಉಂಟಾಗುವ ಸಂಭವನೀಯತೆ. ಅದು ಬಿಡಿ, ತಮ್ಮ ಕೃಷಿ ಜೀವನದಲ್ಲಿ ಬಿದಿರಿಗೂ ಮಹತ್ವದ ಸ್ಥಾನಮೊಂದನ್ನು ನೀಡಿ, ಅದಕ್ಕೆ ಮತ್ತು ತಮ್ಮ ಬಾಳಿಗೆ ಗುರುತರ ದಾರಿ ತೋರಿದ ಕುಟುಂಬಮೊಂದು ಸಾಗರ ತಾಲ್ಲೂಕು ಹೆಗ್ಗೋಡಿನ ಸಮೀಪದಲ್ಲಿದೆ.


ಶೆಮೆ ಎಂಬುದು ಬಿದಿರಿನ ಒಂದು ವರ್ಗಕ್ಕೆ ಸೇರಿದೆ. ಇದು ಅವುಗಳಲ್ಲಿ ಸೌಂದರ್ಯ ಸ್ಪರ್ಧೆ ಇಟ್ಟರೆ ಪ್ರಥಮ ಬಹುಮಾನ ಗಿಟ್ಟಿಸುವುದು ಖಚಿತ! ಉದ್ದುದ್ದಕ್ಕೆ ಆಕಾಶಕ್ಕೆ ಚಾಚಿದಂತೆ 18 -20 ಅಡಿ ಬೆಳೆಯುವ ಈ ಬೂದು ಹಸಿರಿನ ಬಿದಿರು ಅಡಿಕೆ ತಟ್ಟಿ ಮಾಡಿಸಲು ಹೇಳಿ ಮಾಡಿಸಿದ್ದು. ಇವತ್ತು ಹೊಸನಗರದ ಜಡ್ಡಿನಕೊಪ್ಪದ ಉಮೇಶ್‌ - ಸುರೇಶ್‌ ತಮ್ಮ ಮನೆಯ ತಟ್ಟಿ, ಬುಟ್ಟಿಯ ಅಗತ್ಯವನ್ನು ನಯಾ ಪೈಸೆ ಖರ್ಚಿಲ್ಲದೆ ಪೂರೈಸಿಕೊಳ್ಳುವ ಜೊತೆಗೆ ಒಂದಿಷ್ಟು ಪುಡಿಗಾಸನ್ನೂ ಸಂಪಾದಿಸಲು ಕಾರಣವಾಗಿರುವುದು ಶೆಮೆ ಬಿದಿರು!


ಏನಿದು ಶೆಮೆ ಬಿದಿರು?
ಶೆಮೆಯಲ್ಲಿ ಗಣ್ಣುಗಳು ದೂರ ದೂರ. ಒಂದು ಒಂದೂವರೆ ಇಂಚು ದಪ್ಪ. ಇದರಿಂದ ಎತ್ತುವ ಸಲಾಕು, ಅಂದರೆ ತಟ್ಟಿ ಬುಟ್ಟಿ ಮಾಡಲು ಬಳಸುವ ಬಿದಿರ ಎಳೆಗಳು ಉಳಿದ ಬಿದಿರುಗಳಿಗಿಂತ ಗಟ್ಟಿ. ಬಾಳ್ವಿಕೆ ಹೆಚ್ಚು. ಹಾಗಾಗಿ ಶೆಮೆ ತಟ್ಟಿಗೆ ಆ ಪರಿ ಬೆಲೆ.


ಅದರಲ್ಲೂ ಜೂನ್‌ನಿಂದ ಸೆಪ್ಟೆಂಬರ್‌ ವೇಳೆ ಹೆಚ್ಚಿನ ರಕ್ಷಣೆ ಬೇಕು. ಇವು ಬೆಳವಣಿಗೆಯ ತಿಂಗಳುಗಳು. ಇದಕ್ಕೆ ಯಾವುದೇ ರೋಗವೂ ಇಲ್ಲ. ಸಾಮಾನ್ಯವಾಗಿ ಕೃಷಿಕರಲ್ಲಿ ಲಭ್ಯವಿರುವ ದರಕು, ಸೋಗೆಯಂತಹ ಸಾವಯವ ಪದಾರ್ಥಗಳನ್ನು ಬುಡಕ್ಕೆ ಹಾಕಿದರೆ ಆಯಿತು, ಅದೇ ಗೊಬ್ಬರ. ನಾಲ್ಕನೇ ವರ್ಷದಿಂದಲೇ ಬಿದಿರು ಗಳಗಳು ಕೊಯ್ಲಿಗೆ ಸಿಗುತ್ತವೆ.


ಈ ಬಿದಿರು ಬೆಟ್ಟ, ಕಾಡಲ್ಲಿ ಬೆಳೆಯಲು ಮಾತ್ರ ಯೋಗ್ಯ. ಏತಕ್ಕಪ್ಪಾಂದ್ರೆ, ಇದಕ್ಕೆ ಒಂದು ಮರದ ಆಶ್ರಯ ಬೇಕೇ ಬೇಕು. ಮರದ ಪಕ್ಕದಲ್ಲಿಯೇ ನಾಟಿ ಮಾಡಬೇಕು. ಬಿದಿರು ಬೆಳೆದಂತೆ ಮರದ ಬೆನ್ನಿಗೆ ಆತು ನೇರವಾಗಿ ಮೇಲೆ ಚಿಮ್ಮುತ್ತದೆ. ಮರದ ಆಶ್ರಯವಿಲ್ಲದಿದ್ದರೆ ಬಿದಿರ ಮೆಳೆ ನೆಲದೆಡೆಗೆ ಬಾಗುತ್ತದೆ. ಈ ಮಾದರಿಯ ಗಳಗಳಿಗೆ ಗುಣಮಟ್ಟ ಇರುವುದಿಲ್ಲ. ತಟ್ಟಿ ಬುಟ್ಟಿ ಮಾಡುವವರು ಅತ್ಯಧಿಕ `ವೇಸ್ಟ್‌' ಬರುವ ಹಿನ್ನೆಲೆಯಲ್ಲಿ ಖಾಯಸ್‌ ಪಡುವುದಿಲ್ಲ. ನೇರವಾಗಿರುವ ಬಿದಿರಿಗೆ ಪರಮಾವಧಿ ಬೆಲೆ.


ಜಡ್ಡಿನಕೊಪ್ಪ ಸಹೋದರರ ಲೆಕ್ಕಾಚಾರ ಸರಳ. ಅವರಲ್ಲಿ ಸರಿಸುಮಾರು 50 ಬಿದಿರು ಬುಡಗಳಿವೆ. ಮನೆ ಸುತ್ತಲಿನ ಬೆಟ್ಟದಲ್ಲೆಲ್ಲ ಇದೇ. ಎಳ್ಳಾರೆ ರಾಮಯ್ಯ ಎಂಬುವವರಿಂದ ಅಪ್ಪ ತಂದು ಹಚ್ಚಿದ್ದು ಎಂದು ಇತಿಹಾಸ ನೆನೆಯುತ್ತಾರೆ ಸುರೇಶ್‌. ಇಂದು ಎಲ್ಲವೂ ಪುಷ್ಕಳವಾಗಿ ಬೆಳೆದಿವೆ. ಇವರು ಮರು ನಾಟಿ ಮಾಡಿದ್ದೂ ಇವೆ. ನಾಲ್ಕು ಐದು ವರ್ಷ ಪ್ರಾಯದ ಗಳಗಳನ್ನಷ್ಟೇ ಇವರು ಕಟಾವ್‌ಗೆ ಕೊಡುತ್ತಾರೆ. ಒಂದು ಮೆಳೆಯಿಂದ ಕನಿಷ್ಟ 12 ಗಳ ಗ್ಯಾರಂಟಿ. 20 -25 ಗಳ ಸಿಗುವುದೂ ಇದೆ.


ಇವರೇ ಸ್ವತಃ ಕೆಂಪು ಅಡಿಕೆ ಒಣಗಿಸಲು ಬೇಕಾದ ತಟ್ಟಿ ಮಾಡಿಸಿ ಮಾರುತ್ತಾರೆ. ಐದಾರು ವರ್ಷ ಬಾಳುವ ತಟ್ಟಿ ಎಂಬ ಖ್ಯಾತಿ ಸಿಕ್ಕಿರುವುದರಿಂದ ಸಾಗರದವರಲ್ಲದೆ ಸೊರಬ, ಹೊಸನಗರಗಳ ಅಡಿಕೆ ಬೆಳೆಗಾರರೂ ಮನೆಗೆ ಬಂದು ತಟ್ಟಿ ಖರೀದಿಸುತ್ತಾರೆ. ಇಷ್ಟಕ್ಕೂ ಇವರ ವಾಸ ಹೆಗ್ಗೋಡು ಸಮೀಪ. 16 ಕಿ.ಮೀ. ದೂರದ ಸಾಗರದ ಸಂಪರ್ಕ ಹೆಚ್ಚಿದ್ದರೂ ತಾಲ್ಲೂಕು ಮಾತ್ರ ಹೊಸನಗರ! ಇವರದ್ದು ವಾರ್ಷಿಕ 15 ಸಾವಿರ ರೂಪಾಯಿಗಳ ವ್ಯವಹಾರ. ಕೈಗೆ ಹೆಚ್ಚೆಂದರೆ ಐದು ಸಾವಿರ ಉಳಿದೀತು. ಆದರೆ ಮನೆಯ ಅಡಿಕೆ ಕೊಯ್ಲಿಗೆ ಅಥವಾ ಇನ್ನಾವುದೇ ಮಣ್ಣು ಕೆಲಸಕ್ಕೆ ತಟ್ಟಿ, ಚಬ್ಬೆ, ಹೆಡಿಗೆ, ಬುಟ್ಟಿ ಖರೀದಿಸಬೇಕಾದ ಖರ್ಚಿನ ಬಾಬತ್ತಿಲ್ಲ.


ಮಾರಾಟ ವ್ಯವಸ್ಥೆ ಏನು?


ಕೃಷಿಕನೇ ಸ್ವತಃ ತಟ್ಟಿ ಮಾಡಿಸಬೇಕೆಂದೇನೂ ಇಲ್ಲ. ಗಳದ ಗಾತ್ರ ನೋಡಿ 15ರಿಂದ 20 ರೂ. ದರಕ್ಕೆ ಕಡಿದು ಒಯ್ಯುವ ಕುಶಲಕರ್ಮಿಗಳಿದ್ದಾರೆ. ಮಲೆನಾಡಿನಲ್ಲಿ ಹಲವರ ಮನೆ ಹಿತ್ತಲಿನಲ್ಲಿ ಒಂದು ಎರಡು ಶೆಮೆ ಬುಡಗಳಿದ್ದು ಅವರೆಲ್ಲ ಗಳ ಮಾರುತ್ತಾರೆ. ಆದರೆ ಯಾರೊಬ್ಬರೂ ದೊಡ್ಡ ಪ್ರಮಾಣದಲ್ಲಿ ಶೆಮೆ ಕೃಷಿ ನಡೆಸಲು ಯೋಚಿಸಿದಂತಿಲ್ಲ. ವಾಸ್ತವವಾಗಿ ಖರ್ಚೇ ಇಲ್ಲದ ಶೆಮೆ ಕೃಷಿ ಅಡಿಕೆ ಬೆಳೆಗಾರರನ್ನು ಆಕರ್ಷಿಸಬೇಕಿತ್ತು. ಆದರೆ ಪ್ರತಿಕ್ರಿಯೆ ಶೂನ್ಯ ಎನ್ನುವ ಉಮೇಶ್‌ ಪ್ರಕಾರ, ಹತ್ತಿರದ ನಂದ್ರೆ ಗ್ರಾಮದ ಮಹಾಬಲಗಿರಿ ಎನ್‌.ಎಸ್‌. ಶೆಮೆ ಕೃಷಿ ಮಾಡಿರುವುದು ಒಂದು ಅಪವಾದ.


ಜಡ್ಡಿನಕೊಪ್ಪ ಸಹೋದರರ ವ್ಯಾಪಾರವೆಲ್ಲ ಮನೆ ಬಾಗಿಲಿನಲ್ಲೇ. ಬಹುಪಾಲು ಫೋನ್‌ ಮೂಲಕ ಬೇಡಿಕೆ ಸ್ವೀಕಾರ (08183 265150). ಸಾಮಾನ್ಯವಾಗಿ 7 -4 ರ ಅಳತೆಯ ತಟ್ಟಿ ತಯಾರಿ. ತಟ್ಟಿ ತಯಾರಿಸಿದ ನಂತರ ನಾಲ್ಕು ದಿನ ನೀರಲ್ಲಿ ಮುಳುಗಿಸುತ್ತಾರೆ. ಇದರಿಂದ ಬಿದಿರಿನ ಸಿಹಿಯೆಲ್ಲ ತೊಳೆದು ಹೋಗುವುದರಿಂದ ಬಾಳಿಕೆ ಹೆಚ್ಚುತ್ತದೆ. ಸ್ವಾರಸ್ಯವೆಂದರೆ, ಈ ಬಿದಿರಿನ ಕಟಾವ್‌ ಮಾಡಲು ಹುಣ್ಣಿಮೆ ಅಮವಾಸ್ಯೆಗಳ ನಿರ್ಬಂಧ ಇಲ್ಲವಂತೆ. ಆಸಕ್ತರಿಗೆ ಬಿದಿರ ಬುಡ ಒದಗಿಸಲೂ ಸುರೇಶ್‌ ತಯಾರಿದ್ದಾರೆ. ಒಂದು ಬುಡಕ್ಕೆ ನೂರು ರೂ.ಗಳ ದರ ನಿಗದಿಪಡಿಸಿದ್ದಾರೆ.


ಕೃಷಿಕರು ಶೆಮೆ ಬಿದಿರನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬಟ್ಟೆ ಒಣಗಿಸುವುದರಿಂದ ಹಿಡಿದು ಕಬ್ಬಿಣದ ಗೇಟಿಗೆ ಪರ್ಯಾಯವಾಗಿ ಈ ಬಿದಿರನ್ನು ಬಳಸಬಹುದು. ಇದನ್ನೇ ಆಕರ್ಷಕ ಬೇಲಿಯನ್ನಾಗಿಸಿದವರೂ ಇದ್ದಾರೆ. ತಟ್ಟಿಯಲ್ಲದೆ ಬುಟ್ಟಿ, ಹೂವಿನ ಸಿಬ್ಬಲು, ತಾತ್ಕಾಲಿಕ ಶೆಡ್‌ ಮಾಡಿಗೂ ಬಿದಿರು ಕಚ್ಚಾವಸ್ತು. ಕೃಷಿಕ ಕಬ್ಬಿಣದ ಸರಳು, ಮರದ ರೀಪಿನ ಬದಲಿಯಾಗಿ ಶೆಮೆ ಬಿದಿರನ್ನು ಉಪಯೋಗಿಸಬಹುದು. ಗಾಳಿ ಮಳೆಗೆ ನಲುಗದ ಶಮೆ 20 ವರ್ಷ ಕಳೆದರೂ ಗಟ್ಟಿ ಮುಟ್ಟಾಗಿರುವ ಉದಾಹರಣೆ ಇವೆ.


ಆದಾಯ, ಲಾಭ, ವಿದೇಶಿ ಮಾರುಕಟ್ಟೆಗಳ ವರ್ತುಲದಿಂದ ಕೃಷಿಕರು ಹೊರಬಂದು ಪರ್ಯಾಯ ಚಿಂತನೆ ನಡೆಸಲು ಈ ಬಡಿ ಬಿದಿರು ಸ್ಫೂರ್ತಿ ನೀಡುವಂತಾದರೆ ಅದೇ ಬಡಾ ವಿಚಾರ, ಅಲ್ಲವೇ?

ಮೂಲ : ರೈತಾಪಿ

2.93269230769
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top