অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಈರುಳ್ಳಿ

ಉಳ್ಳಾಗಡ್ಡಿ (ಈರುಳ್ಳಿ)ಯು ನಮ್ಮ ರಾಜ್ಯದ ಮುಖ್ಯವಾದ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ಇದನ್ನು ತರಕಾರಿಯಂತೆಯೂ, ಸಾಂಬಾರು ಪದಾರ್ಥದಂತೆಯೂ ಬೆಳೆಯ ಎಲ್ಲಾ ಹಂತಗಳಲ್ಲಿ ಉಪಯೋಗಿಸಲಾಗುವುದು ಉತ್ತರ ಕರ್ನಾಟಕದಲ್ಲಿ ಈರುಳ್ಳಿಯನ್ನು ಮುಖ್ಯ ಬೆಳೆಯಾಗಿಯೂ ಹಾಗೂ ಇತರ ಬೆಳೆಗಳ ಜೊತೆ ಮಿಶ್ರ ಬೆಳೆಯಾಗಿಯೂ ಬೆಳೆಯಲಾಗುತ್ತಿದೆ. ಇದು ಘಾಟು ವಾಸನೆಗೆ ಪ್ರಸಿದ್ಧಿ.

ಬಿತ್ತನೆ ಕಾಲ

ಈರುಳ್ಳಿಯನ್ನು ವರ್ಷದ ಎಲ್ಲ ಕಾಲಗಳಲ್ಲಿಯೂ ಬೆಳೆಯಬಹುದು. ಬೆಳೆಯನ್ನು ಪ್ರಾರಂಭ ಮಾಡಲು ಜೂನ್-ಜುಲೈ, ಸೆಪ್ಟೆಂಬರ್-ಅಕ್ಟೋಬರ್ ಮತ್ತು ಜನವರಿ-ಫೆಬ್ರುವರಿ ತಿಂಗಳುಗಳು ಉತ್ತಮ. ಚಳಿಗಾಲದಲ್ಲಿ ಬೆಳೆದ ಗೆಡ್ಡೆಗಳು ಉತ್ತಮವಾಗಿರುತ್ತವೆ. ಸೂರ್ಯನ ಬೆಳಕು ಮತ್ತು ಉಷ್ಣಾಂಶ ಏರಿಳಿತವಾದಲ್ಲಿ ಬೆಳೆಗೆ ಹಾನಿಯಾಗುತ್ತದೆ.

ಮಣ್ಣು

ಈ ಬೆಳೆಯನ್ನು ಹಲವಾರು ಬಗೆಯ ಮನ್ಣುಗಳಲ್ಲಿ ಬೆಳೆಯಬಹುದು. ಆದರೆ ನಿರು ಬಸಿದು ಹೋಗುವಂತಹ ಮರಳು ಮಿಶ್ರಿತ ಗೋಡುಮಣ್ಣು ಸೂಕ್ತ. ಮಣ್ಣಿನ ರಸಸಾರ 5.8 ರಿಂದ 6.5 ವರೆಗೆ ಇರಬೇಕು. ಹೆಚ್ಚು ಕ್ಷಾರ, ಜೌಗು ಪ್ರದೇಶ ಸೂಕ್ತವಲ್ಲ.

ತಳಿಗಳು

ಅ) ಮಧ್ಯಮದಿಂದ ದೊಡ್ಡ ಗಾತ್ರದ ಗೆಡ್ಡೆಯುಳ್ಳ ತಳಿಗಳು

  • ಬಳ್ಳಾರಿ ರೆಡ್: ಈ ತಳಿಯ ಗೆಡ್ಡೆಗಳು ಸಾಧಾರಣ ಗಾತ್ರದಿಂದ ಕೂಡಿದ್ದು ಅಧಿಕ ಇಳುವರಿ ಕೊಡುತ್ತವೆ. ಇದು ರಾಜ್ಯದಲ್ಲಿ ಮುಖ್ಯವಾಗಿ ಬೆಳೆಯುವ ತಳಿ. ಗೆಡ್ಡೆಗಳನ್ನು ಹೆಚ್ಚು ದಿನ ಕೆಡದಂತೆ ಶೇಖರಿಸಬಹುದು.
  • ಪೂಸಾ ರೆಡ್: ಸಾಧಾರಣ ಗಾತ್ರದಿಂದ ಕೂಡಿದ ಕೆಂಪು ಗೆಡ್ಡೆ, ಕಡಿಮೆ ಖಾರದಿಂದ ಕೂಡಿದೆ.
  • ಅರ್ಕಾ ಕಲ್ಯಾಣ್: ಈ ತಳಿಯನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರು ಅಭಿವೃದ್ಧಿಪಡಿಸಿದೆ. ಈ ತಳಿಯ ಗೆಡ್ಡೆಗಳು ಚಪ್ಪಟೆ-ಗುಂಡಾಗಿದ್ದು, ಮಧ್ಯಮ ಗಾತ್ರದವಾಗಿದ್ದು (130-180 ಗ್ರಾಂ), ಕೆಂಪು ಬಣ್ಣವನ್ನು ಹೊಂದಿರುತ್ತವೆ. ಈ ತಳಿಗೆ ನೇರಳೆ ಎಲೆ ಮಚ್ಚೆ ರೋಗವನ್ನು ತಡೆದುಕೊಳ್ಳುವ ಶಕ್ತಿ ಇದೆ. ಇದು ಮಳೆಗಾಲಕ್ಕೆ ಸೂಕ್ತವಾದ ತಳಿ. ಬೆಳೆಯ ಅವಧಿ 140 ದಿನಗಳು. ಒಂದು ಹೆಕ್ಟೇರಿಗೆ 45 ಟನ್ ಇಳುವರಿ ಪಡೆಯಬಹುದು.
  • ಅರ್ಕಾ ನಿಕೇತನ್: ಈ ತಳಿಯನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರು ಅಭಿವೃದ್ಧಿಪಡಿಸಿದೆ. ಈ ತಳಿಯ ಗೆಡ್ಡೆಗಳು ಗುಂಡಾಗಿದ್ದು, ತೆಳುವಾದ ಕತ್ತನ್ನು ಹೊಂದಿರುತ್ತವೆ. ಗೆಡ್ಡೆಗಳು ಮಧ್ಯಮ ಗಾತ್ರವಾಗಿದ್ದು (100-180 ಗ್ರಾಂ) ತಿಳಿಕೆಂಪು ಬಣ್ಣವನ್ನು ಹೊಂದಿರುತ್ತದೆ ಗೆಡ್ಡೆಗಳೂ ಗಟ್ಟಿಯಾಗಿದ್ದು ಹೆಚ್ಚು ಖಾರವಾಗಿರುತ್ತವೆ ಒಳ್ಳೆಯ ಶೇಖರಣಾ ಗುಣವನ್ನು ಹೊಂದಿರುತ್ತದೆ (3-4 ತಿಂಗಳು). ಬೆಳೆಯ ಅವಧಿ 145 ದಿವಸಗಳು. ಒಂದು ಹೆಕ್ಟೇರಿಗೆ 37 ಟನ್ ಇಳುವರಿ ಪಡೆಯಬಹುದು.
  • ಅರ್ಕಾ ಪ್ರಗತಿ: ಈ ತಳಿಯನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದೆ. ಗೆಡ್ಡೆಗಳು ಗುಂಡಾಗಿದ್ದು, ತೆಳುವಾದ ಕತ್ತನ್ನು ಹೊಂದಿರುತ್ತವೆ. ಗೆಡ್ಡೆಗಳು ಮಧ್ಯಮ ಗಾತ್ರವಿದ್ದು (100-160 ಗ್ರಾಂ) ಗುಲಾಬಿ ಬಣ್ಣವನ್ನು ಹೊಂದಿರುತ್ತವೆ. ಇದು ಅಲ್ಪಾವಧಿ ತಳಿ. ಬೆಳೆ 130 ದಿವಸಗಳಲ್ಲಿ ಕಟಾವಿಕೆ ಬರುತ್ತದೆ. ಒಂದು ಹೆಕ್ಟೇರಿಗೆ 35 ಟನ್ ಇಳುವರಿ ಪಡೆಯಬಹುದು.
  • ಅರ್ರ್ಕಾ ಪಿತಾಂಬರ್: ಈ ತಳಿಯನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಿಂದ ಅಭಿವೃದ್ಧಿಪಡಿಸಿದೆ. ಗೆಡ್ಡೆಗಳು ಹಳದಿ ಬಣ್ಣವನ್ನು ಹೊಂದಿದ್ದು, ಗುಂಡಾಗಿದ್ದು, ತೆಳುವಾದ ಕತ್ತನ್ನು ಪಡೆದಿರುತ್ತದೆ. ಗೆಡ್ಡೆಗಳು ಮಧ್ಯಮ ಗಾತ್ರವಿದ್ದು (5.2-6.2 ಸೆಂ.ಮೀ.) ಖಾರದ ಅಂಶ ಕಡಿಮೆ ಇರುತ್ತದೆ. ಗಡ್ಡೆಗಳನ್ನು ಬಹಳ ದಿನಗಳವರೆಗೆ ಶೇಖರಿಸಿ ಇಡಬಹುದು (3-4 ತಿಂಗಳು). ಇದು ರಫ್ತು ಮಾಡಲು ಸೂಕ್ತವಾದ ತಳಿ. ಈ ತಳಿಯು ಚಳಿಗಾಲದಲ್ಲಿ ಬೆಳೆಯಲು ಸೂಕ್ತ. ಬೆಳೆಯ ಅವಧಿ 140 ದಿವಸಗಳು. ಒಂದು ಹೆಕ್ಟೇರಿಗೆ 35 ಟನ್ ಇಳುವರಿ ಪಡೆಯಬಹುದು.
  • ಎನ್-53: ಇದು ಆಕರ್ಷಕ ಕೆಂಪು ಬಣ್ಣದ ಗುಂಡು ಗಡ್ಡೆಗಳನ್ನು ಹೊಂದಿರುವುದಲ್ಲದೆ, ಎಲ್ಲಾ ತರದ ವಾತಾವರಣಕ್ಕೆ ಹೊಂದಿಕೊಳ್ಳುವ ಶಕ್ತಿ ಪಡೆದಿದೆ.
  • ತೆಲಗಿ ಕೆಂಪು ಮತ್ತು ತೆಲಗಿ ಬಿಳಿ
  • ಸ್ಥಳೀಯ ಜನಪ್ರಿಯ ತಳಿಗಳು
  • ಅ. ಈರುಳ್ಳಿ ಸಂಕರಣ ತಳಿಗಳು
  • ಅರ್ಕಾ ಕೀರ್ತಿಮಾನ್: ಈ ಸoಕರಣ ತಳಿಯನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದೆ. ಮಧ್ಯಮ ಗಾತ್ರದ ಗಡ್ಡೆಗಳು (120-130 ಗ್ರಾಂ). ಗೆಡ್ಡೆಗಳು ಗುಂಡಾಗಿದ್ದು, ಕೆಂಪು ಬಣ್ಣವನ್ನು ಹೊಂದಿರುತ್ತದೆ. ಗಡ್ಡೆಗಳನ್ನು ಬಹಳ ದಿನಗಳವರೆಗೆ ಶೇಖರಿಸಿಡಲು ಸಾಧ್ಯ (4-5 ತಿಂಗಳು). ಈ ತಳಿಯು ಮಳೆಗಾಲ ಮತ್ತು ಚಳಿಗಾಲಗಳೆರಡರಲ್ಲಿಯೂ ಬೆಳೆಯಲು ಸೂಕ್ತ. ಒಂದು ಹೆಕ್ಟೇರಿಗೆ 47 ಟನ್ ಇಳುವರಿ ಪಡೆಯಬಹುದು.
  • ಅರ್ಕಾ ಲಾಲಿಮ: ಈ ಸಂಕರಣ ತಳಿಯನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದೆ. ಮಧ್ಯಮ ಗಾತ್ರದ (120-130 ಗ್ರಾಂ), ಕೆಂಪು ಬಣ್ಣದ ಗುಂಡಾಗಿರುವ ಗಡ್ಡೆಗಳನ್ನು ಬಹಳ ದಿನಗಳವರೆಗೆ ಶೇಖರಿಸಿಡಲು ಸಾಧ್ಯ (4-5 ತಿಂಗಳು) ಈ ತಳಿಯು ಮಳೆಗಾಲ ಮತ್ತು ಚಳಿಗಾಲಗಳೆರಡರಲ್ಲೂ ಬೆಳೆಯಲು ಸೂಕ್ತ. ಬೆಳೆಯ ಅವಧಿ 130-140 ದಿವಸಗಳು. ಒಂದು ಹೆಕ್ಟೇರಿಗೆ 50 ಟನ್ ಇಳುವರಿ ಪಡೆಯಬಹುದು.
  • ಸಣ್ಣ ಗೆಡ್ಡೆಯುಳ್ಳ ತಳಿಗಳು
  • ಬೆಂಗಳೂರು ಗುಲಾಬಿ ಈರುಳ್ಳಿ: ಈ ತಳಿಯನ್ನು ಬೆಂಗಳೂರು ಸುತ್ತಮುತ್ತ ಬೆಳೆಯಲಾಗುತ್ತಿದ್ದು ಗೆಡ್ಡೆಗಳು ಸಣ್ಣದಾಗಿದ್ದು ಖಾರವಾಗಿರುತ್ತವೆ.
  • ಅರ್ಕಾ ಬಿಂದು: ಈ ತಳಿಯನ್ನು ಭಾಋತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರು ಅಭಿವೃದ್ಧಿಪಡಿಸಿದೆ. ಗಡ್ಡೆಗಳು ಸಣ್ಣವಾಗಿದ್ದು (2.5-3.5 ಸೆಂ.ಮೀ.) ಕಡು ಕೆಂಪು ಬಣ್ಣವನ್ನು ಹೊಂದಿದ್ದು, ಗುಂಡಾಗಿರುತ್ತವೆ. ಖಾರದ ಅಂಶ ಜಾಸ್ತಿ. ಈ ತಳಿಯು ರಫ್ತು ಮಾರುಕಟ್ಟೆಗೆ ಸೂಕ್ತವಾದದ್ದು, ಗಡ್ಡೆಗಳನ್ನು ಬಹಳ ದಿನಗಳವರೆಗೆ ಶೇಖರಣೆ ಮಾಡಲು ಸಾಧ್ಯ (3-4 ತಿಂಗಳು). ಬೆಳೆಯ ಅವಧಿ 90-100 ದಿವಸಗಳು. ಒಂದು ಹೆಕ್ಟೇರಿಗೆ 25 ಟನ್ ಇಳುವರಿ ಪಡೆಯಬಹುದು.
  • ಬೇಸಾಯ ಸಾಮಗ್ರಿಗಳು
ಬೀಜ

    ಕ್ರ.ಸಂ ವಿವರಗಳು ಪ್ರತಿ ಹೆಕ್ಟೇರಿಗೆ

    1            ಕೈ ಅಥವಾ ಕೂರಿಗೆ ಬಿತ್ತನೆ        20-25 ಕಿ.ಗ್ರಾಂ

    2            ಸಸಿಮಡಿ ಮಾಡಲು                5-6 ಕಿ.ಗ್ರಾಂ

    3            ಗಡ್ಡೆನಾಟಿ ಮಾಡಲು               875 ಕಿ.ಗ್ರಾಂ

ಬೇಸಾಯ ಕ್ರಮಗಳು

  • ಈ ಬೆಳೆಯನ್ನು 3 ವಿಧಗಳಲ್ಲಿ ಬಿತ್ತನೆ ಮಾಡಬಹುದು. 1) ಸಸಿ ನಾಟಿ ಮಾಡುವುದು, 2) ಕೂರಿಗೆ ಬಿತ್ತನೆ ಅಥವಾ ಬಿತ್ತರಿಸುವುದು, 3) ಗೆಡ್ಡೆ ನಾಟಿ ಮಾಡುವುದು.
  • ಸಸಿಮಡಿ: ಒಂದು ಹೆಕ್ಟೇರಿಗೆ ಬೇಕಾಗುವ ಸಸಿಗಳನ್ನು ಬೆಳೆಯಲು 7.5 ಮೀಟರ್ ಉದ್ದ, 1.2 ಮೀಟರ್ ಅಗಲ ಮತ್ತು 10 ಸೆಂ.ಮೀ. ಎತ್ತರದ 25 ಮಡಿಗಳನ್ನು ತಯಾರಿಸಬೇಕು. ಮಡಿಗಳಿಗೆ 3-4 ಬುಟ್ಟಿ ಕೊಟ್ಟಿಗೆ ಗೊಬ್ಬರ ಮತ್ತು ಅರ್ಧ ಕಿ.ಗ್ರಾಂ 15:15:15 ಸಂಯುಕ್ತ ರಾಸಾಯನಿಕ ಗೊಬ್ಬರವನ್ನು ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು. ನಂತರ ಬಿತ್ತನೆ ಬೀಜವನ್ನು 7.5 ಸೆಂ.ಮೀ. ಅಂತರದ ಸಾಲುಗಳಲ್ಲಿ ಬಿತ್ತಬೇಕು. ತಕ್ಷಣ ಮಡಿಗಳಿಗೆ ನೀರುಣಿಸಬೇಕು. ಹೀಗೆ ಮಾಡಿದ ಸಸಿಗಳು 6-8 ವಾರಗಳಲ್ಲಿ ನಾಟಿ ಮಾಡಲು ಸಿದ್ಧವಾಗುತ್ತವೆ.
  • ನಾಟಿ ವಿಧಾನ: ನಾಟಿ ಮಾಡುವ ಮುನ್ನ ಪೂರ್ತಿ ಪ್ರಮಾಣದ ಕೊಟ್ಟಿಗೆ ಗೊಬ್ಬರ, ಶೇ. 50 ರಷ್ಟು ಸಾರಜನಕ, ಪೂರ್ತಿ ಪ್ರಮಾಣದ ರಂಜಕ ಮತ್ತು ಪೊಟ್ಯಾಷ್ ಕೊಡಬೇಕು. ಸಸಿಗಳನ್ನು 15 ಸೆಂ.ಮೀ. ಅಂತರದ ಸಾಲುಗಳಲ್ಲಿ 10 ಸೆಂ.ಮೀ.ಗೆ ಒಂದರಂತೆ ಹೆಚ್ಚು ಆಳಕ್ಕೆ ಇಳುಯದಂತೆ ನಾಟಿ ಮಾಡಬೇಕು. ನಾಟಿ ಮಾಡಿದ ತಕ್ಷಣ ನೀರು ಹಾಯಿಸಬೇಕು. ಆರು ವಾರಗಳ ನಂತರ ಉಳಿದ ಶೇ. 50 ರಷ್ಟು ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಡಬೇಕು.
  • ಕೂರಿಗೆ ಬಿತ್ತನೆ ಅಥವಾ ಬಿತ್ತರಿಸುವುದು
  • ಈ ಪದ್ಧತಿಯು ಮಳೆಯಾಶ್ರಿತ ಬೆಳೆಗೆ ರೂಢಿಯಲ್ಲಿದೆ.
  • ಬಿತ್ತರಿಸುವುದು: ಬಿತ್ತನೆ ಮಾಡಲು ಜಮೀನನ್ನು ಸಿದ್ಧಪಡಿಸಿ ಶಿಫಾರಸ್ಸು ಮಾಡಿದ ಪೂರ್ತಿ ಪ್ರಮಾಣದ ಸಾವಯವ ಮತ್ತು ರಾಸಾಯನಿಕ ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಿ, ನಮತರ 1.2x1.2 ಮೀ. ಅಂತರದ ಮಡಿಗಳನ್ನು ಮಾಡಿ ತೆಳ್ಳಗೆ ಬೀಜವನ್ನು ಕೈಯಿಂದ ಬಿತ್ತಿ 4 ವಾರಗಳ ನಂತರ 5 ಸೆಂ.ಮೀ.ಗೆ ಒಂದು ಸಸಿಯನ್ನುಳಿಸಿ ಉಳಿದವುಗಳನ್ನು ತೆಗೆಯಿರಿ.
  • ಕೂರಿಗೆ ಬಿತ್ತನೆ: ಭೂಮಿಯನ್ನು ಬಿತ್ತನೆಗೆ ಸಿದ್ಧಪಡಿಸಿ ಶಿಫರಸ್ಸು ಮಾಡಿದ ಪೂರ್ತಿ ಪ್ರಮಾಣದ ಸಾವಯವ ಗೊಬ್ಬರ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಮಣ್ಣಿನಲ್ಲಿ ಚೆನ್ನಾಗಿ ಬೆರೆಸಿ ಬೀಜವನ್ನು 30 ಸೆಂ.ಮೀ. ಅಂತರದ ಸಾಲಿನಲ್ಲಿ ಕೂರಿಗೆಯಿಂದ ಬಿತ್ತನೆ ಮಾಡಬೇಕು.
  • ಗೆಡ್ಡೆ ನಾಟಿ ಮಾಡುವುದು (ಗೊಂಚಲು ಈರುಳ್ಳಿ)
  • ಆಮೀನನ್ನು ಬಿತ್ತನೆಗೆ ಸಿದ್ಧಮಾಡಿ, ಶಿಫಾರಸ್ಸು ಮಾಡಿದ ಪೂರ್ತಿ ಪ್ರಮಾಣದ ಸಾವಯವ ಗೊಬ್ಬರ, ರಂಜಕ, ಪೊಟ್ಯಾಷ್ ಮತ್ತು ಅರ್ಧ ಭಾಗ ಸಾರಜನಕ ರಸಗೊಬ್ಬರಗಳನ್ನು ಮಣ್ಣಿನಲ್ಲಿ ಸೇರಿಸಿ, ನಂತರ 15 ಸೆಂ.ಮೀ. ಅಂತರದ ಬದುಗಳನ್ನು ಮಾಡಿ ಬದುವಿನ ಒಂದು ಪಕ್ಕದಲ್ಲಿ ಪ್ರತಿ 10 ಸೆಂ.ಮೀ.ಗೆ ಒಂದರಂತೆ ಗಡ್ಡೆ ನಾಟಿ ಮಾಡಿ, ನೀರು ಹಾಯಿಸಿ, 6 ವಾರಗಳ ನಂತರ ಉಳಿದ ಅರ್ಧಭಾಗ ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಡಬೇಕು.

ಬೇಸಾಯ ಸಾಮಗ್ರಿಗಳು

ಕ್ರ.ಸಂ ವಿವರಗಳು ಪ್ರತಿ ಹೆಕ್ಟೇರಿಗೆ

1.      ಕೊಟ್ಟಿಗೆ ಗೊಬ್ಬರ/ಕಾಂಪೋಸ್ಟ್           30 ಟನ್
2.      ರಾಸಾಯನಿಕ ಗೊಬ್ಬರಗಳು    
ಸಾರಜನಕ                           125 ಕಿ.ಗ್ರಾಂ
ರಂಜಕ                               50 ಕಿ.ಗ್ರಾಂ
ಪೊಟ್ಯಾಷ್                            125 ಕಿ.ಗ್ರಾಂ

ನೀರು ನಿರ್ವಹಣೆ ಮತ್ತು ಅಂತರ ಬೇಸಾಯ

ಹವಾಮಾನ ಮತ್ತು ಮಣ್ಣಿನ ಗುಣಧರ್ಮಕ್ಕನುಸಾರವಾಗಿ 4 ರಿಂದ 6 ದಿವಸಗಳಿಗೊಮ್ಮೆ ನೀರು ಉಣಿಸಬೇಕು. ಕೊಯ್ಲಿಗೆ 15 ದಿವಸ ಮುಂಚೆ ನೀರು ಕೊಡುವುದನ್ನು ನಿಲ್ಲಿಸಬೇಕು.

ಕಳೆಗಳ ನಿಯಂತ್ರಣ

ಸಸಿ ನಾಟಿ ಮಾಡಿದ ದಿವಸ ಅಥವಾ ಮಾರನೆಯ ದಿವಸ ಹೆಕ್ಟೇರಿಗೆ 2 ಲೀ. ಶೇ. 50 ಇ.ಸಿ. ಮೆಟೊಲೋಕ್ಲೋರ್ ಅಥವಾ 500 ಮಿ.ಲೀ. 23.5 ಇ.ಸಿ. ಆಕ್ಸಿಫ್ಲೋರೋಫೆನ್ ಅನ್ನು 750 ಲೀ. ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಿ. ಸಿಂಪರಣೆಯ ನಂತರ ಭೂಮಿಯನ್ನು ತುಳಿಯಬೇಡಿ. ಸಿಂಪರಣೆಯ ಸಮಯದಲ್ಲಿ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿರಲಿ ಮತ್ತು ಹೆಚ್ಚು ಹೆಂಟೆಗಳಿರದಂತೆ ಎಚ್ಚರವಹಿಸಿ. ಬೀಜದಿಂದ ಪ್ರಸಾರವಾಗುವ ಕಳೆಗಳೆಲ್ಲವನ್ನು ಪ್ರಾರಂಭದ 40 ದಿವಸಗಳವರೆಗೆ ಹತೋಟಿ ಮಾಡುತ್ತದೆ. ನಂತರ 45 ರಿಂದ 50 ದಿವಸಗಳಲ್ಲಿ ಅಥವಾ 70 ರಿಂದ 75 ದಿವಸಗಳಲ್ಲಿ ಕಳೆ ಬರದಂತೆ ಕೈಯಿಂದ ಕಳೆಗಳನ್ನು ಹತೋಟಿ ಮಾಡಿ.

ಸಸ್ಯ ಸಂರಕ್ಷಣೆ


ರೋಗಗಳು: ಕಾಡಿಗೆ ರೋಗ, ನೇರಳೆ ಎಲೆ ಮುಚ್ಚಿರೋಗ, ಬುಡ ಕೊಳೆ ರೋಗ ಮತ್ತು ಬಿಳಿ ಕೊಳೆ ರೋಗ.

ಹತೋಟಿ ವಿಧಾನ

1.ನೇರಳೆ ಎಲೆ ಮುಚ್ಚೆರೋಗ ಕಂಡಾಗ 2 ಗ್ರಾಂ ಮ್ಯಾಂಕೋಜೆಬ್ 1ಲೀ ನೀರಿನಲ್ಲಿ ಸಿಂಪಡಿಸಬೇಕು. 15 ದಿವಸಗಳ ನಮತರ ರೋಗದ ಲಕ್ಷಣಗಳು ಮತ್ತೆ ಕಂಡುಬಂದಲ್ಲಿ ಇದೇ ಸಿಂಪರಣಾ ದ್ರಾವಣ ಬಳಸಿರಿ. ಪ್ರತಿ ಹೆಕ್ಟೇರಿಗೆ 450 ರಿಂದ 530 ಲೀ. ಸಿಂಪರಣ ದ್ರಾವಣ ಉಪಯೋಗಿಸಬಹುದು.

ರೋಗಗಳು

ಹಾನಿಯಲಕ್ಷಣಗಳು

ನಿರ್ವಹಣಾಕ್ರಮಗಳು

1. ಕಾಡಿಗೆರೋಗ

ಮೊದಲಿಗೆ ಕಪ್ಪನೆಯ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ನಂತರ ಗೆರೆಗಳು ಕಾಣಿಸುತ್ತವೆ. ತದನಂತರ ಗಡ್ಡೆ ಬಿರುಕುಗೊಂಡು ಕಪ್ಪನೆಯ ಬೂದು ಬಣ್ಣದ ಶಿಲೀಂಧ್ರವನ್ನು ಕಾಣಬಹುದು.

1. ಬೀಜವನ್ನು ಕ್ಯಾಪ್ಟಾನ್ 80 ಡಬ್ಲೂ.ಪಿ (2 ಗ್ರಾಂ ಪ್ರತಿ ಕಿ.ಗ್ರಾಂ ಬೀಜಕ್ಕೆ) ದಿಂದ ಉಪಚರಿಸಬೇಕು.

2. ಬಿತ್ತಿದ ಮೂರು ವಾರಗಳ ನಂತರ 2 ಗ್ರಾಂ ಮೆಂಕೋಜೆಬ್ 75 ಡಬ್ಲೂ.ಪಿ ಅಥವಾ 2 ಗ್ರಾಂ ಮ್ಯಾನೆಬ್ 80 ಡಬ್ಲೂ.ಪಿ ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. (ಸಸಿ ಮಡಿಗಳಲ್ಲಿ ಅಥವಾ ಬೆಳೆಯಲ್ಲಿ).

3. ಬಿತ್ತನೆಯಾದ 6 ವಾರಗಳನಂತರ ಕ್ರಮಾಂಕ 2 ರಲ್ಲಿ ಸೂಚಿಸಲಾದ ಸಿಂಪರಣೆಯನ್ನು ಮತ್ತೆ ಮಾಡಬೇಕು. ಪ್ರತಿ ಹೆಕ್ಟೇರಿಗೆ 360 ಲೀಟರ್ ಸಿಂಪರಣಾ ದ್ರಾವಣ ಬಳಸಬೇಕು.

4. ಬಿತ್ತನೆಯಾದ 9 ಮತ್ತು 11 ವಾರಗಳ ನಂತರ ಕ್ರಮಾಂಕ 2 ರಲ್ಲಿ ಸೂಚಿಸಲಾದ ದ್ರಾವಣವನ್ನೇ ಪ್ರತಿ ಹೆಕ್ಟೇರಿಗೆ 450 ಲೀ. ಸಿಂಪಡಿಸಬೇಕು.

5. ಒಂದು ಲೀಟರ್ ನೀರಿನಲ್ಲಿ 2 ಗ್ರಾಂ ಮೆಂಕೋಜೆಬ್ 75 ಡಬ್ಲೂ.ಪಿ ಅಥವಾ 1 ಮಿ.ಲೀ. ಡೈಪೆನ್‍ಕೊನೊಜೋಲ್ 25 ಇ.ಸಿ. ಕರಗಿಸಿ ನೇರಳೆ ಎಲೆ ಮಚ್ಚೆ ರೋಗ ಕಂಡಾಗ ಸಿಂಪಡಿಸಬೇಕು. 15 ದಿವಸಗಳ ನಂತರ ರೋಗದ ಲಕ್ಷಣಗಳು ಮತ್ತೆ ಕಂಡುಬಂದಲ್ಲಿ ಇದೇ ಸಿಂಪರಣಾ ದ್ರಾವಣವನ್ನು ಪ್ರತಿ ಹೆಕ್ಟೇರಿಗೆ 450 ರಿಮದ 530 ಲೀ. ಸಿಂಪಡಿಸಬೇಕು.

6. ಈರುಳ್ಳಿಯ ಎಲೆ ಮಚ್ಚೆ ರೋಗವನ್ನು ನಿವಾರಿಸಲು 2 ಗ್ರಾಂ ಮ್ಯಾಂಕೋಜೆಬ್ 75 ಡಬ್ಲೂ.ಪಿ ಅಥವಾ 1.0 ಮಿ.ಲೀ. ಇಪ್ರೊಬೆನ್‍ಫಾಸ್ 48 ಇ.ಸಿ. ಅಥವಾ 2.5 ಗ್ರಾಂ ಕ್ಯುಫ್ರುಸ್ ಆಕ್ಸೈಡ್ 50 ಡಬ್ಲೂ.ಪಿ ಒಂದು ಲೀ. ನೀರಿನಲ್ಲಿ ಬೆರೆಸಿ ರೋಗ ಕಂಡು ಬಂದಾಗ 15 ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪಡಿಸಬೇಕು.

ಸಸ್ಯ ಸಂರಕ್ಷಣೆ

ಕೀಟಗಳು: ಥ್ರಿಪ್ಸ್, ನುಸಿ ಮತ್ತು ಎಲೆ ಕತ್ತರಿಸುವ ಹುಳು.

ಹತೋಟಿ ವಿಧಾನ

ಕೀಟಗಳು

ಹಾನಿಯಲಕ್ಷಣಗಳು

ನಿರ್ವಹಣಾಕ್ರಮಗಳು

1. ಥ್ರಿಪ್ಸ್ನುಶಿ

ಙ್ರಪ್ಸ್ ನುಶಿಗಳು ಎಲೆಯ ಮೇಲೆ ಹೆಚ್ಚಾಗಿ ಕಂಡು ಬರುತ್ತವೆ. ಎಲೆಗಳ ಸುಳಿಯಲ್ಲಿ ಮತ್ತು ಎಲೆಗಳ ಕೆಳಗೆ ಕುಳಿತು ರಸ ಹೀರುತ್ತವೆ. ಎಲೆಗಳ ಮೇಲೆ ಬಿಳಿಯಾದ ಮಚ್ಚೆಗಳು ಕಾಣಿಸಿ ನಂತರ ಒಣಗುತ್ತವೆ.

ಬಿತ್ತಿದ 3 ವಾರಗಳ ನಂತರ ಬೆಳೆಗೆ 1.7 ಮಿ.ಲೀ. ಡೈಮಿಥೋಯೇಟ್ 30 ಇ.ಸಿ. ಅಥವಾ 0.5 ಮಿ.ಲೀ. ಫಾಸ್ಫಾಮಿಡಾನ್ 85 ಡಬ್ಲೂ.ಎಸ್.ಸಿ ಅಥವಾ 1.3 ಮಿ.ಲೀ. ಆಕ್ಸಿಡೆಮೆಟಾನ್ ಮಿಥೈಲ್ 25 ಇ.ಸಿ. 1ಲೀ. ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ಬಿತ್ತನೆಯಾದ 6 ವಾರಗಳ ನಂತರ ಕ್ರಮಾಂಕ 1 ರಲ್ಲಿ ಸೂಚಿಸಲಾದ ಸಿಂಪರಣೆಯನ್ನು ಮತ್ತೆ ಮಾಡಬೇಕು. ಪ್ರತಿ ಹೆಕ್ಟೇರಿಗೆ 360 ಲೀ. ಸಿಂಪರಣಾ ದ್ರಾವಣ ಬಳಸಬೇಕು. ಬಿತ್ತನೆಯಾದ 9 ಮತ್ತು 11 ವಾರಗಳ ನಂತರ ಕ್ರಮಾಂಕ 1 ರಲ್ಲಿ ಸೂಚಿಸಲಾದ ದ್ರಾವಣವನ್ನೇ ಪ್ರತಿ ಹೆಕ್ಟೇರಿಗೆ 450 ಲೀ. ಸಿಂಪಡಿಸಬೇಕು.

2. ಕತ್ತರಿಸುವಹುಳು

ಮರಿಹುಳು ಎಳೆ ಗಿಡಗಳ ಕಾಂಡವನ್ನು ಭೂಮಿಯ ಮೇಲ್ಭಾಗಕ್ಕೆ ಕತ್ತರಿಸುತ್ತದೆ. ಅಂತಹ ಗಿಡಗಳು ಕೆಳಗೆ ಬಿದ್ದು ಕ್ರಮೇಣ ಒಣಗುತ್ತವೆ.

ಈ ಕೀಟದ ಹತೋಟಿಗಾಗಿ ಪ್ರತಿ ಲೀಟರ್ ನೀರಿಗೆ 2 ಮಿ.ಲೀ. ಕ್ಲೋರ್‍ಪೈರಿಫಾಸ್ 20 ಇ.ಸಿ. ಅಥವಾ 2 ಮಿ.ಲೀ. ಕ್ವಿನಾಲ್‍ಫಾಸ್ 25 ಇ.ಸಿ. ಬೆರೆಸಿ ಗಿಡದ ಸುತ್ತಲೂ ತೊಯಿಸಬೇಕು.

ಕೊಯ್ಲು

ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಶೇ. 50 ರಷ್ಟು ಬಾಗಿದಾಗ ಕಟಾವು ಮಾಡಬೇಕು. ಗಡ್ಡೆಗಳನ್ನು ಅಗೆದು ಬಿಸಿಲಿನಲ್ಲಿ ಒಂದು ವಾರ ಒಣಗಿಸಬೇಕು.

ಇಳುವರಿ

ಪ್ರತಿ ಹೆಕ್ಟೇರಿಗೆ ಸರಾಸರಿ 25,000 ಕಿ.ಗ್ರಾಂ ಇಳುವರಿ ಪಡೆಯಬಹುದು.

ಮೂಲ : ಆಗ್ರೋಪೀಡಿಯ

 

ಕೊನೆಯ ಮಾರ್ಪಾಟು : 12/24/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate