ನಮ್ಮೆ ರಾಜ್ಯದಲ್ಲಿ ಬೆಳೆಯುವ ತರಕಾರಿ ಬೆಳೆಗಳಲ್ಲಿ ಬೆಂಡಯೂ ಒಂದು ಮುಖ್ಯ ಬೆಳೆಯಾಗಿದೆ. ಇದು ಜೀವಸತ್ವ ‘ಸಿ’ ಅಯೋಡಿನ್ ಮತ್ತು ಸುಣ್ಣದ ಅಂಶವನ್ನು ಪೂರೈಸುತ್ತದೆ.
ಮಣ್ಣು
ಬೆಂಡೆಯನ್ನು ಎಲ್ಲಾ ವಿಧವಾದ ಮಣ್ಣಿನಲ್ಲಿ ಬೆಳೆಯಬಹುದು. ಆದರೆ ನೀರು ಬಸಿದು ಹೋಗುವಂತಹ ಮರಳು ಮಿಶ್ರಿತ ಗೋಡು ಮಣ್ಣು ಉತ್ತಮವಾದುದು.
ತಳಿಗಳು
- ಪೂಸಾ ಸವಾನಿ: ಈ ತಳಿಯನ್ನು ಎಲ್ಲ ವಲಯಗಳಿಗೆ ಶಿಫಾರಸ್ಸು ಮಾಡಲಾಗಿದ್ದು ಹಳದಿ ನಂಜುರೋಗಕ್ಕೆ ಸ್ವಲ್ಪಮಟ್ಟಿಗೆ ನಿರೋಧಕ ಶಕ್ತಿ ಹೊಂದಿದೆ.
- ಅರ್ಕಾ ಅಭಯ್: ಈ ತಳಿಯನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರು ಅಭಿವೃದ್ಧಿಪಡಿಸಿದೆ. ಈ ತಳಿಯ ಗಿಡಗಳು ಎತ್ತರವಾಗಿ ಬೆಳೆಯುತ್ತವೆ ಹಾಗೂ ಕವಲು ರೆಂಬೆಗಳನ್ನು ಹೊಂದಿರುತ್ತವೆ. ತರಕಾರಿಯಾಗಿ ಉಪಯೋಗಿಸುವ ಹಂತದಲ್ಲಿ ಕಾಯಿಗಳು ಕಡು ಹಸಿರು ಬಣ್ಣದಿಂದ ಕೂಡಿದ್ದು, ಉದ್ದವಾಗಿದ್ದು, ಮೃದುವಾಗಿರುತ್ತವೆ. ಕಾಯಿಗಳು ಒಳ್ಳೆಯ ಶೇಖರಣಾ ಗುಣ ಹಾಗೂ ಅಡಿಗೆ ಗುಣಗಳನ್ನು ಹೊಂದಿವೆ. ಈ ತಳಿಗೆ ಹಳದಿ ನಂಜು ರೋಗವನ್ನು ತಡೆದುಕೊಳ್ಳುವ ಶಕ್ತಿ ಇದೆ. ಬೆಳೆಯ ಅವಧಿ 120-130 ದಿವಸಗಳು. ಒಂದು ಹೆಕ್ಟೇರಿಗೆ 18 ಟನ್ ಇಳುವರಿ ಪಡೆಯಬಹುದು.
- ಅರ್ರ್ಕಾ ಅನಾಮಿಕಾ: ಈ ತಳಿಯನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರು ಅಭಿವೃದ್ಧಿಪಡಿಸಿದೆ. ಈ ತಳಿಯ ಗಿಡಗಳೂ ಎತ್ತರವಾಗಿ ಬೆಳೆಯುತ್ತವೆ ಹಾಗೂ ಕವಲು ರೆಂಬೆಗಳನ್ನು ಹೊಂದಿರುತ್ತವೆ. ತರಕಾರಿಯಾಗಿ ಉಪಯೋಗಿಸುವ ಹಂತದಲ್ಲಿ ಕಾಯಿಗಳು ಕಡು ಹಸಿರು ಬಣ್ಣದಿಂದ ಕೂಡಿದ್ದು, ಉದ್ದವಾಗಿ, ಮೃದುವಾಗಿರುತ್ತವೆ. ಕಾಯಿಗಳು ಒಳ್ಳೆಯ ಶೇಖರಣಾ ಹಾಗೂ ಅಡಿಗೆ ಗುಣಗಳನ್ನು ಹೊಂದಿರುತ್ತವೆ. ಈ ತಳಿಗೆ ಹಳದಿ ನಂಜು ರೋಗವನ್ನು ತಡೆದುಕೊಳ್ಳುವ ಶಕ್ತಿ ಇದೆ. ಬೆಳೆಯ ಅವಧಿ 130-135 ದಿವಸಗಳು. ಒಂದು ಹೆಕ್ಟೇರಿಗೆ 20 ಟನ್ ಇಳುವರಿ ಬರುತ್ತದೆ.
- ವೈಟ್ ವೆಲ್ವೆಟ್ (ಹಾಲು ಬೆಂಡೆ): ಇದು ಸ್ಥಳೀಯ ತಳಿಯಾಗಿದ್ದು, ರಾಜ್ಯದಲ್ಲಿ ಅತ್ಯಂತ ಜನಪ್ರಿಯವಾಗಿದೆ.
ಬೇಸಾಯ ಸಾಮಗ್ರಿಗಳು
ಕ್ರ.ಸಂ. ವಿವರಗಳು ಪ್ರತಿ ಹೆಕ್ಟೇರಿಗೆ
1. ಬೀಜ 7.5 ಕಿ.ಗ್ರಾಂ
ಬಿತ್ತನೆ ಕಾಲ
ದಕ್ಷಿಣ ಒಣ ಪ್ರದೇಶಗಳಲ್ಲಿ: ಜೂನ್-ಜುಲೈ ಮತ್ತು ಜನವರಿ-ಫೆಬ್ರುವರಿ ಸೂಕ್ತ ಕಾಲವಾಗಿದೆ.
ಗುಡ್ಡಗಾಡು ಪ್ರದೇಶಗಳಲ್ಲಿ: ಜನವರಿ-ಫೆಬ್ರವರಿ ಸೂಕ್ತ ಕಾಲ.
ಕರಾವಳಿ ಪ್ರದೇಶಗಳಲ್ಲಿ: ಜೂನ್-ಜುಲೈ ಸೂಕ್ತ.
ಬಿತ್ತನೆ
ಬಿತ್ತನೆ ಮಾಡಲು ಭೂಮಿಯನ್ನು ಸಿದ್ಧಮಾಡಿ 60 ಸೆಂ.ಮೀ. ಅಂತರದಲ್ಲಿ ತಗ್ಗು ಮತ್ತು ದಿನ್ನೆಗಳನ್ನು ಮಾಡಿ ನಂತರ ಪೂರ್ತಿ ಸಾವಯವ ಗೊಬ್ಬರ ಮತ್ತು ಶೇ. 50 ರಷ್ಟು ಸಾರಜನಕ ಹಾಗೂ ಪೂರ್ಣ ಪ್ರಮಾಣದ ರಂಜಕ ಮತ್ತು ಪೊಟ್ಯಾಷ್ ಅನ್ನು ಮಣ್ಣಿನಲ್ಲಿ ಸೇರಿಸಬೇಕು. ಬೀಜವು ಚೆನ್ನಾಗಿ ಮೊಳಕೆ ಬರಲು ಬಿತ್ತನೆಗೆ ಮುಂಚೆ ಬೀಜವನ್ನು 15 ತಾಸು ನೀರಿನಲ್ಲಿ ನೆನೆಸಬೇಕು. ಬೀಜವನ್ನು 30 ಸೆಂ.ಮೀ. ಅಂತರದಲ್ಲಿ ಬಿತ್ತನೆ ಮಾಡಬೇಕು. ಬಿತ್ತಿದ ನಾಲ್ಕು ವಾರಗಳ ನಂತರ ಉಳಿದ ಶೇ. 50 ರಷ್ಟು ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಡಬೇಕು.
ಬೇಸಾಯ ಸಾಮಗ್ರಿಗಳು
ಕ್ರ.ಸಂ. ವಿವರಗಳು ಪ್ರತಿ ಹೆಕ್ಟೇರಿಗೆ
1. ಸಾವಯವ/ ಕೊಟ್ಟಿಗೆ/ ಕಾಂಪೋಸ್ಟ್ ಗೊಬ್ಬರ 25 ಟನ್
2. ರಾಸಾಯನಿಕ ಗೊಬ್ಬರಗಳು
ಸಾರಜನಕ 125 ಕಿ.ಗ್ರಾಂ
ರಂಜಕ 75 ಕಿ.ಗ್ರಾಂ
ಪೊಟ್ಯಾಷ್ 63 ಕಿ.ಗ್ರಾಂ
ಭೂಮಿಗನುಗುಣವಾಗಿ 5 ರಿಂದ 7 ದಿವಸಗಳಿಗೊಮ್ಮೆ ನೀರನ್ನು ಉಣಿಸಬೇಕು.
ಸಸ್ಯ ಸಂರಕ್ಷಣೆ
ರೋಗಗಳು: ಹಳದಿ ನಂಜು ರೋಗ, ಬೂದಿ ರೋಗ, ಎಲೆ ಚುಕ್ಕೆರೋಗ ಮತ್ತು ಬೇರುಗಂಟು ಜಂತುರೋಗ.
ಹತೋಟಿ ವಿಧಾನ
- ಸರ್ಕೊಸ್ಪೊರಾ ಎಲೆ ಚುಕ್ಕೆರೋಗ, ಬೂದಿರೋಗ ಕಂಡುಬಂದಲ್ಲಿ 1 ಗ್ರಾಂ ಕಾರ್ಬೆಂಡಜಿಂ ಅನ್ನು ಪರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಿಸಬೇಕು. ಎಲೆ ಚುಕ್ಕೆ ರೋಗದ ಲಕ್ಷಣಗಳು ಕಂಡುಬಂದಲ್ಲಿ 15 ದಿವಸಗಳ ನಂತರ ಇದೇ ಸಿಂಪರಣೆಯನ್ನು ಪುನರಾವರ್ತಿಸಿ. ಪ್ರತಿ ಹೆಕ್ಟೇರಿಗೆ 450-530 ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ.
- ಹಳದಿ ನಂಜುರೋಗ ಕಂಡುಬಂದಾಗ ಮೊದಲಿಗೆ ರೋಗ ಬಂದ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ನಂತರ 0.5 ಮಿ.ಲೀ. ಇಮಿಡೋಕ್ಲೋಪ್ರಿಡ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಿಸಬೇಕು. ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗದಿದ್ದಲ್ಲಿ 15 ದಿವಸಗಳ ನಂತರ ಇದೇ ಸಿಂಪರಣೆಯನ್ನು ಪುನರಾವರ್ತಿಸಿ.
ಸಸ್ಯ ಸಂರಕ್ಷಣೆ
ಕೀಟಗಳು ಜಿಗಿಹುಳು, ಕೆಂಪು ಹತ್ತಿ ತಿಗಣೆ, ಹೇನು, ಕಾಯಿ ಕೊರೆಯುವ ಹುಳು ಮತ್ತು ಬಿಳಿ ನೊಣ
ಹತೋಟಿ ವಿಧಾನ
- ಬಿತ್ತನೆಯಾದ 2 ವಾರಗಳ ನಂತರ ಸಸಿಗಳನ್ನು 2 ಮಿ.ಲೀ. ಆಕ್ಸಿಡೆಮೆಟಾನ್ ಮೀಥೈಲ್ ಜೊತೆಗೆ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಿಸಬೇಕು. ಪ್ರತಿ ಹೆಕ್ಟೇರಿಗೆ 450-530 ಲೀಟರ್ ಸಿಂಪರಣಾ ದ್ರಾವಣ ಬಳಸಬೇಕು.
- ಬೆಳೆಗೆ ಕಾಯಿ ಕೊರೆಯುವ ಪೀಡೆ ಕಂಡು ಬಂದಲ್ಲಿ 2 ಮಿ.ಲೀ. ಎಂಡೋಸಲ್ಫಾನ್ ಅಥವಾ 4 ಗ್ರಾಂ ಕಾರ್ಬಾರಿಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಿಸಬೇಕು.
ಕೊಯ್ಲು
ಬಿತ್ತಿದ ಆರು ವಾರಗಳ ನಂತರ ಮೊದಲ ಬಾರಿ ಕೊಯ್ಲು ಮಾಡಬಹುದು. ಮುಂದೆ 6 ರಿಂದ 8 ವಾರಗಳವರೆಗೆ ಇಳುವರಿ ನಿರೀಕ್ಷಿಸಬಹುದು.
ಇಳುವರಿ
ಪ್ರತಿ ಹೆಕ್ಟೇರಿಗೆ 7,500 ರಿಂದ 10,000 ಕಿ.ಗ್ರಾಂ ಇಳುವರಿ ಪಡೆಯಬಹುದು.
ಮೂಲ : ಆಗ್ರೋಪೀಡಿಯ