ಮನುಷ್ಯನ ಆರೋಗ್ಯವು ಆತನ ಆಹಾರವನ್ನು ಅವಲಂಬಿಸಿದೆ. ಅನುವಂಶಿಕವಾಗಿಯೋ ಅಥವಾ ಇನ್ನಿತರ ಕಾರಣಗಳಿಂದಾಗಿ ಒಂದೊಮ್ಮೆ ಮಧುಮೇಹ (ಡಯಾಬಿಟಿಸ್) ಅಥವಾ ಬೊಜ್ಜಿನ ಸಮಸ್ಯೆ ಕಾಡುತ್ತಿದ್ದರೆ, ಊಟದ ಕಡೆ ಸರಿಯಾದ ಗಮನವಿರಲಿ. ಸಕ್ಕರೆಯ ಅಂಶ ಕಡಿಮೆ ಇರುವ ಪದಾರ್ಥಗಳ ಸೇವನೆ ಆಗ ಕಡ್ದಾಯವಾಗಬಹುದು. ಚಿಂತೆ ಬೇಡ. ಮರೆಯಾಗುತ್ತಿರುವ ತೃಣ ಧಾನ್ಯಗಳನ್ನು ಮತ್ತೆ ಬಳಸಿದರೆ ತೊಂದರೆ ಕಡಿಮೆಯಾಗುತ್ತದೆ.
ಆಧುನಿಕತೆಯ ಬೆಡಗಿನಲ್ಲಿ ಕಣ್ಮರೆಯಾಗುತ್ತಿರುವ ಪೋಷಕ ಆಹಾರಗಳಲ್ಲಿ ತೃಣ ಧಾನ್ಯಗಳು ಮುಖ್ಯವಾಗಿವೆ. "ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು" ಎಂಬಂತೆ ಹುಲ್ಲು ಬೆಳೆಗಳ ಗುಂಪಿಗೆ ಸೇರುವ ರಾಗಿ, ಸಜ್ಜೆ, ಊದಲು, ನವಣೆ, ಸಾವೆ ಮತ್ತು ಬರಗೂ ದೇಹ ಪೋಷಣೆಯ ದೃಷ್ಟಿಯಿಂದ ಉತ್ಕೃಷ್ಟ ಧಾನ್ಯಗಳು. ಇವುಗಳನ್ನು ಕಿರು ಧಾನ್ಯಗಳೆಂದು ಕರೆಯುತ್ತಾರೆ. ತೃಣ ಧಾನ್ಯಗಳು ಗಾತ್ರಗಳು ಕಿರಿದಾದರೂ ಪೋಷಣೆಯ ದೃಷ್ಟಿಯಿಂದ ಮಹತ್ವ ಪೂರ್ಣವಾಗಿದೆ. ಸಾಮಾನ್ಯವಾಗಿ ಬಳಸುವ ಏಕದಳ ಧಾನ್ಯಗಳಿಗೆ ಹೋಲಿಸಿದರೆ ಈ ಕಿರು ಧಾನ್ಯಗಳಲ್ಲಿ ಎಲ್ಲಾ ಪೋಷಕಾಂಶಗಳು ಸಾಕಷ್ಟು ಪ್ರಮಾಣದಲ್ಲಿವೆ. ಇವುಗಳಲ್ಲಿರುವ ಪೋಷಕ ತತ್ವಗಳ ತುಲನೆಯನ್ನು ಇತರ ಏಕದಳ ಧಾನ್ಯಗಳೊಂದಿಗೆ ಮಾಡಿದರೆ ಇವು ಯಾವ ರೀತಿಯಿಂದಲೋ ತ್ರುಣವಲ್ಲ ಎಂಬ ಸತ್ಯ ಅರಿವಾಗುತ್ತದೆ. ಇವುಗಳಲ್ಲಿರುವ ನಾರಿನಾಂಶ, ಅದರಲ್ಲೂ ವಿಶೇಷವಾಗಿ ಕರಗುವ ನಾರಿನಾಂಶ ಅನೇಕ ರೋಗಗಳ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ಹೊಂದಿದೆ. ತೃಣ ಧಾನ್ಯಗಳಲ್ಲಿರುವ ಶರ್ಕರ ಪಿಷ್ಟಗಳ ಪ್ರಮಾಣ ಸರಾಸರಿ ಗೋಧಿ, ಜೋಳ ಅಥವಾ ಅಕ್ಕಿಗಳಲ್ಲಿರುವ ಪ್ರಮಾಣಕ್ಕೆ ಸಮನಾಗಿದ್ದರೂ ಸಹಿತ, ತೃಣ ಧಾನ್ಯಗಳೇ ಪೋಷಣೆಗೆ ಉತ್ಕೃಷ್ಟ ಏಕೆಂದರೆ ಈ ಧಾನ್ಯಗಳಲ್ಲಿ ಸಂಕೀರ್ಣ ಶರ್ಕರ ಪಿಷ್ಟಗಳು ಹೆಚ್ಚಿನ ಪ್ರಮಾಣದಲ್ಲಿವೆ. ಹಾಗೂ ಇವು ದೇಹದಲ್ಲಿ ನಿಧಾನವಾಗಿ ರಕ್ತಗತವಾಗಿ ಪೋಷಣೆಯ ದೃಷ್ಟಿಯಿಂದ ಅತ್ಯಮೂಲ್ಯವಾಗಿವೆ. ಊಟದ ನಂತರ ಬೇರೆ ಆಹಾರಗಳಂತೆ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ತಕ್ಷಣ ಹೆಚ್ಚಿಸುವುದಿಲ್ಲ. ದೈಹಿಕವಾಗಿ ಶ್ರಮ ಭರಿಸುವವರ ದೈನಂದಿನ ಕೆಲಸಗಳಿಗೆ ನಿಧಾನವಾಗಿ ಶಕ್ತಿ ಕೊಡುತ್ತ ದೀರ್ಘಕಾಲ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಹಾಯಕಾರಿಯಾಗಿವೆ. ಬಹುಷಃ ಇದೆ ಕಾರಣದಿಂದಲೋ ಏನೋ ಹಿಂದೆ ಹೊಲ, ಗದ್ದೆಗಳಲ್ಲಿ ಶ್ರಮಿಸುವ ಆಳುಗಳಿಗೆ ರಾಗಿ, ನವನೆಗಳ ಆಧಾರಿತ ಊಟವಿರುತ್ತಿತ್ತು.
ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ: ಮಧುಮೇಹಿಗಳ ಊಟದಲ್ಲಿರಲಿ ಕಿರು ಧಾನ್ಯಗಳು
ಮೂಲ : ಕೃಷಿ ಮುನ್ನಡೆ
ಕೊನೆಯ ಮಾರ್ಪಾಟು : 11/14/2019