ಅಜೋಲ ನೀರಿನ ಮೇಲೆ ಬೆಳೆಯಬಲ್ಲ ಝರಿ ಸಸ್ಯ. ಇದರ ಕಾಂಡ ಮತ್ತು ಎಲೆಗಳು ಚಿಕ್ಕದಾಗಿದ್ದು ಒಂದರಮೇಲೊಂದು ಹೋಡಿಸಿದಂತಿರುತ್ತದೆ. ಅಜೋಲ ಸಸ್ಯದ ಅನಬೀನಾ ಎಂಬ ನೀಲಿ ಹಸಿರು ಪಾಚಿಯು ವಾಯುಮಂಡಲದಲ್ಲಿರುವ ಸಾರಜನಕವನ್ನು ಹೀರಿ ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಪಡೆದಿರುತ್ತದೆ. ಮಣ್ಣಿನ ರಸಸಾರ 5-6.5 ಮತ್ತು ವಾತಾವರಣದಲ್ಲಿ 27-370 ಸೆ. ಉಷ್ಣಾಂಶ ಇದು ಬಯಸುತ್ತದೆ. ಇದರ ಬೆಳವಣಿಗೆಗೆ ಒಳ್ಳೆಯ ಬಿಸಿಲು ಸಹ ಅಗತ್ಯ. ಫಲವತ್ತಾದ ಮಣ್ಣು ಹಾಗೂ ಹರಿಯುವ ನೀರಿನಲ್ಲಿ ಅಜೋಲ ಹುಲುಸಾಗಿ ಬೆಳೆಯಬಲ್ಲದು ಅಜೋಲವನ್ನು ಭತ್ತದ ಗದ್ದೆಯಲ್ಲಿ ಬೆಳೆಸುವುದರಿಂದ ಭತ್ತದ ಬೆಳೆಗೆ ಸಾಕಷ್ಟು ಹಸಿರೆಲೆ ಗೊಬ್ಬರ ದೊರೆಯುವುದಲ್ಲದೆ ಬೆಳೆಗೆ ಬೇಕಾದ ಪೋಷಕಾಂಶಗಳನ್ನು ದೊರಕಿಸಿಕೊಡುತ್ತದೆ. ಹಾಗೂ ಕಳೆಯನ್ನು ನಿಯಂತ್ರಿಸಲು ಸಹಾಯಕವಾಗಿದೆ.
ಅಜೋಲ ಮಣ್ಣಿನಲ್ಲಿ ಹ್ಯೂಮಸ್ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗೂ ಮಣ್ಣಿನ ಗುಣಗಳನ್ನು ಅಭಿವೃದ್ಧಿಗೊಳಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅಜೋಲವನ್ನು ಪರ್ಯಾಯ ಪಶು ಅಹಾರವಾಗಿ ಹಾಗೂ ಕೋಳಿ ಸಾಕಣೆ ಮತ್ತು ಮೀನು ಸಾಕಣೆಯ ಆಹಾರವಾಗಿ ಬಳಸಲಾಗುತ್ತದೆ. ಅಜೋಲದಲ್ಲಿ ಶೇ. 4 ರಿಂದ 6 ಸಾರಜನಕ ಹಾಗೂ ಶೇ. 24-26 ರಷ್ಟು ಸಸಾರಜನಕ ಮತ್ತು ಸಸ್ಯ ಬೆಳವಣಿಗೆಗೆ ಬೇಕಾದ ಹಲವಾರು ಲಘು ಪೋಷಕಾಂಶಗಳು ಅಡಗಿವೆ.
ಸಣ್ಣ ಮಡಿಯಲ್ಲಿ ಬೆಳೆಸುವುದು : ಗದ್ದೆಯಲ್ಲಿ ಬೆಳೆಸುವುದಕ್ಕೆ ಮೊದಲು ಸಣ್ಣ ಮಡಿಯಲ್ಲಿ ಇದನ್ನು ಬೆಳೆಸಬೇಕು. ಒಂದು ಎಕರೆ ಪ್ರದೇಶಕ್ಕೆ ಬಿತ್ತನೆಯಾಗಿ ಬೆಳೆಸಲು 40 ಚದರ ಅಡಿ ಗಾತ್ರದ 3-4 ಮಡಿಗಳು ಬೇಕು. ಇದನ್ನು ಬೆಳಸುವುದಕ್ಕೆ ಮೊದಲು 40 ಚದರ ಅಡಿ ಪ್ರದೇಶಕ್ಕೆ 0.5 ಕಿ.ಗ್ರಾಂ ಸೂಪರ್ ಫಾಸ್ಫೇಟು, 0.5 ಕಿ.ಗ್ರಾಂ ಬೂದಿ, 120 ಗ್ರಾಂ ಪೊಟ್ಯಾಷಿಯಂ ಸಲ್ಫೇಟ್, 40 ಗ್ರಾಂ ಸೋಡಿಯಂ ಮಾಲಿಬ್ಡಟ್ ಮತ್ತು 8 ಗ್ರಾಂ ಪ್ಯೂರಡಾನ್ ಕೀಟನಾಶಕವನ್ನು ಮಣ್ಣಿನಲ್ಲಿ ಸೇರಿಸಿ 2-3 ಇಂಚು ನೀರು ನಿಲ್ಲಿಸಿ ಈ ವಿಧಾನಕ್ಕೆ ಬದಲಾಗಿ 24 ಕಿ.ಗ್ರಾಂ ದನದ ಸಗಣಿ, 400 ಗ್ರಂ ಸೂಪರ್ ಫಾಸ್ಫೇಟ್ ಮತ್ತು 16 ಗ್ರಾಂ ಪ್ಯೂರಡಾನ್ ಕೀಟನಾಶಕವನ್ನು ಬಳಸಬಹುದು. ನಂತರ 8 ಕಿ.ಗ್ರಾಂ. ಅಜೋಲ ಸಸ್ಯವನ್ನು ಈ ಪ್ರದೇಶದಲ್ಲಿ ಹರಡಿ, ನೀರಿನ ಎತ್ತರ 2-3 ಅಂಗಲಗಿಂತ ಕಡಿಮೆಯಾಗದಂತೆ ಎಚ್ಚರವಹಿಸಿ. ಇದಾದ 2 ವಾರದಲ್ಲಿ 8 ಕಿ.ಗ್ರಾಂ ಅಜೋಲ ಸುಮಾರು 120 ಕಿ.ಗ್ರಾಂ ಗಳಷ್ಟಾಗುತ್ತದೆ.
ನಾಟಿ ಮಾಡಲು ಸುಮಾರು 20 ದಿವಸಗಳಿಗೆ ಮೊದಲು ಒಂದು ಎಕರೆಗೆ 30 ಕಿ.ಗ್ರಾಂ ಸೂಪರ್ ಫಸ್ಫೇಟ್, 20 ಕಿ.ಗ್ರಾಂ ಬೂದಿ, 4 ಕಿ.ಗ್ರಾಂ ಪೊಟ್ಯಾಷಿಯಂ ಸಲ್ಫೇಟ್, 100 ಗ್ರಾಂ ಸೋಡಿಯಂ ಮಾಲಿಬ್ಡೇಟ್ ಮತ್ತು 1.0 ಕಿ.ಗ್ರಾಂ ಪ್ಯೂರಡಾನ್ ಮಣ್ಣಿನಲ್ಲಿ ಸೇರಿಸಿ, 2-3 ಇಂಚು ನೀರು ನಿಲ್ಲಿಸಿ. ಇದಕ್ಕೆ ಬದಲಾಗಿ ಎಕರೆಗೆ 2000-2500 ಕಿ.ಗ್ರಾಂ ದನದ ಸಗಣಿ, 14 ಕಿ.ಗ್ರಾಂ ಸೂಪರ್ ಫಾಸ್ಫೇಟ್ ಮತ್ತು 1.0 ಕಿ.ಗ್ರಾಂ ಪ್ಯೂರಡಾನ್ ಕೀಟನಾಶಕವನ್ನು ಉಪಯೋಗಿಸಬಹುದು. ಅನಂತರ ಈ ಕಪ್ರದೇಶಕ್ಕೆ ಸಸಿಮಡಿಯಲ್ಲಿ ಬೆಳೆಸಿದ 300 ಕಿ.ಗ್ರಾಂ. ಅಜೋಲ ಹರಡಿ, ಸುಮಾರು 3 ವಾರ ಇದು 4000 ರಿಂದ 4800 ಕಿ.ಗ್ರಾಂ ಗಳಷ್ಟಾಗುತ್ತದೆ.
ನಾಟಿಗೆ ಮೊದಲು ನೀರನ್ನೆಲ್ಲಾ ಬಸಿದು ತೆಗೆದು, ಅಜೋಲವನ್ನು ಮಣ್ಣಿನಲ್ಲಿ ಸೇರಿಸಿ, ಶಿಫಾರಸ್ಸು ಮಾಡಿದ ಸಾರಜನಕದಲ್ಲಿ ಶೇ. 25 ರಷ್ಟನ್ನು ಕೊಡಿ. ಜೊತೆಗೆ ಪೂರ್ತಿ ರಂಜಕ ಮತ್ತು ಪೊಟ್ಯಾಷ್ ಗೊಬ್ಬರಗಳನ್ನು ಕೊಟ್ಟು ಮಣ್ಣಿನಲ್ಲಿ ಸೇರಿಸಿ, ಭತ್ತ ನಾಟಿ ಮಾಡಿದ ಎರಡು ವಾರದ ವೇಳೆಗೆ ಅಲ್ಪ ಸ್ವಲ್ಪ ಅಜೋಲ ಬೆಳೆದು ಮತ್ತೆ ಸುಮಾರು 1000 ಕಿ.ಗ್ರಾಂಗಳಷ್ಟಾಗುತ್ತದೆ. ಅದನ್ನೂ ಮಣ್ಣಿನಲ್ಲಿ ಸೇರಿಸಿ.
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 6/28/2020