অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅಜೋಲಾ

ನಂದೀಶ್ ಭದ್ರಾವತಿ, ಗಂಗಾವತಿ ಹೈನುಗಾರಿಕೆ ಮಾಡಲು ಬಯಸುವವರಿಗೆ ಇರುವ ದೊಡ್ಡ ಆತಂಕವೇ ಪಶುಗಳಿಗೆ ನೀಡುವ ಆಹಾರ. ಜಾನುವಾರುಗಳಿಗೆ ಮೇವಿನ ಅಭಾವ ತಲೆದೋರುತ್ತಿರುವ ಈ ಸಂದರ್ಭದಲ್ಲಿ ಈ ಆತಂಕ ನಿವಾರಿಸಲು ಬಂದಿರುವ, ಪಶುಗಳ ಪಾಲಿಗೆ ನಿಜ ಅರ್ಥದಲ್ಲಿ ಕಾಮಧೇನು ಆಗಬಹುದಾದ ಆಹಾರವೇ ಅಜೋಲಾ. 

ಜಾನುವಾರುಗಳಿಗೆ ಉಪಯೋಗಿಸುವ ಪೌಷ್ಟಿಕ ಆಹಾರವಾದ ಅಜೋಲಾ, ರೈತನ ಬದುಕನ್ನೇ ಉಜ್ವಲಗೊಳಿಸುವ ಸಾಧ್ಯತೆಯನ್ನು ತೆರೆದಿಟ್ಟಿದೆ. ಪಶುಪಾಲನೆ ಮಾಡುವವರು ಪ್ರತಿ ವರ್ಷ ಮೇವು ಸಂಗ್ರಹಿಸಿಟ್ಟುಕೊಳ್ಳಲು, ಬೇರೆಡೆಯಿಂದ ತರಿಸಲು ನಡೆಸುತ್ತಿದ್ದ ಕಸರತ್ತಿಗೆ ಅಜೋಲಾ ಮುಕ್ತಿ ನೀಡಲಿದೆ.

ಜಲಸಸ್ಯದ ಲಕ್ಷಣಗಳು:

ಮೂಲತಃ ಫರ‌್ನ ಜಾತಿಗೆ ಸೇರಿದ, ನೀರಿನ ಮೇಲೆ ತೇಲಾಡಿಕೊಂಡು ಬೆಳೆಯಬಲ್ಲ ಝರಿ ರೀತಿಯ ಸಸ್ಯವೇ ಅಜೋಲಾ. ಇದರ ಕಾಂಡ ಮತ್ತು ಎಲೆಗಳು ಚಿಕ್ಕದಾಗಿದ್ದು, ಒಂದರ ಮೇಲೊಂದು ಜೋಡಿಸಿದಂತೆ ಇರುತ್ತವೆ. ಎಂಟರಿಂದ ಸೆಂ.ಮೀ.ನಷ್ಟು ಉದ್ದದ ಬೇರುಗಳು ನೀರಿನಲ್ಲಿ ಇಳಿಬಿದ್ದಿರುತ್ತದೆ. ಅನಬೇನಾ ಅಜೋಲಾ ಎಂಬ ನೀಲಿ ಹಸಿರು ಪಾಚಿ ಅಜೋಲಾ ಸಹಜೀವಿಯಾಗಿದೆ. ಅಜೋಲಾ ಸಸ್ಯದ ಎಲೆಯ ಕೆಳಭಾಗದಲ್ಲಿ ಸಣ್ಣ ರಂಧ್ರಗಳಿದ್ದು, (ಅವುಗಳಲ್ಲಿ ಅನಬೀನಾ ಎಂಬ ನೀಲಿ ಹಸಿರು ಪಾಚಿಯು ಅಡಕವಾಗಿದ್ದು, ಇವು ವಾಯುಮಂಡಲದಲ್ಲಿ ಮುಕ್ತವಾಗಿ ಸಿಗುವಂತೆ ಸಾರಜನಕವನ್ನು ಹೀರಿ ಹಿಡಿದಿಟ್ಟುಕೊಳ್ಳುವ ಶಕ್ತಿ ಪಡೆದಿರುತ್ತದೆ). ಈ ಪಾಚಿಗೆ ವಾಸಿಸಲು ಇದು ಸ್ಥಳ ಒದಗಿಸುತ್ತದೆ. ಇದಕ್ಕೆ ಪ್ರತ್ಯುಪಕರವಾಗಿ ಅನಬೇನಾ ಅಜೋಲಾವು ಗಾಳಿಯಲ್ಲಿರುವ ಮುಕ್ತವಾಗಿ ಸಿಗುವ ಸಾರಜನಕವನ್ನು ಸ್ಥಿರೀಕರಿಸಿ ಬೆಳವಣಿಗೆಗೆ ಚೇತರಿಸುವ ಪದಾರ್ಥಗಳನ್ನು ಕೊಡುತ್ತದೆ. ಇದನ್ನು ಹಸಿರು ಎಲೆ ಗೊಬ್ಬರವಾಗಿ ಉಪಯೋಗಿಸುವುದಕ್ಕಿಂತ ಮುಂಚೆಯೇ ಸಾರಜನಕವನ್ನು ಸ್ಥಿರೀಕರಿಸುವ ಮೂಲಕ ಅಜೋಲಾವನ್ನು ಗೊಬ್ಬರವಾಗಿಯೂ ಬಳಸಬಹುದು.

ಅಜೋಲಾ ಬೆಳೆಯುವುದು ಹೇಗೆ?:

ಆರಂಭದಲ್ಲಿ ನೆಲವನ್ನು ಸ್ವಚ್ಛಗೊಳಿಸಿ ಸಮತಟ್ಟಾಗಿಸಬೇಕು. 2.25 ಮೀ ಉದ್ದ ಹಾಗೂ 1.5 ಮೀ. ಅಗಲವಿರುಂಥ ಗುಂಡಿ ಅಗೆಯಬೇಕು. ಅಂದಹಾಗೆ, ಅನುಕೂಲಕ್ಕೆ ಅನುಗುಣವಾಗಿ ಉದ್ದಗಲವನ್ನು ಬದಲಿಸಿಕೊಳ್ಳುವ ಸ್ವಾತಂತ್ರ್ಯ ತೆಗೆದುಕೊಳ್ಳಬಹುದು). ಬಳಿಕ ಒಂದು ಅಂಗುಲದಷ್ಟು ಎತ್ತರಕ್ಕೆ ಮರಳು ಹಾಕಿ ಇದರ ಮೇಲೆ ತೊಟ್ಟಿಯ ಮೇಲ್ಭಾಗದ ಅಂಚಿನವರೆಗೆ ಬರುವಂತೆ 120ರಿಂದ 150 ಜಿಸಿಎಂ ಸಿಲ್ಫಾಲಿನ್ ಶೀಟು ಹರಡಬೇಕು. ಬಳಿಕ 30ರಿಂದ 35 ಕಿಲೋದಷ್ಟು ಫಲವತ್ತಾದ ಮೆತ್ತನೆ ಮಣ್ಣನ್ನು ಸಮಾನವಾಗಿ ಅದರ ಮೇಲೆ ಹರಡಬೇಕು. ಬಳಿಕ ಸುಮಾರು ಐದು ಕಿಲೊದಷ್ಟು ಸೆಗಣಿಗೆ, 40 ಗ್ರಾಂ ಖನಿಜ ಮಿಶ್ರಣ ಸೇರಿಸಿ ನೀರಿನಲ್ಲಿ ಕಲೆಸಿದ ಮೇಲೆ ಮಣ್ಣಿನಲ್ಲಿ ಮಿಶ್ರಣ ಮಾಡಬೇಕು. ಸುಮಾರು 7ರಿಂದ 10 ಸೆಂಮಿ ಎತ್ತರದವರೆಗೆ ನೀರು ಹಾಯಿಸಿ ಅದಕ್ಕೆ ಒಂದು ಕೆಜಿಯಷ್ಟು ಅಜೋಲಾ ಕಲ್ಚರ್ ಅಥವಾ ಹೆಪ್ಪನ್ನು ಮೇಲ್ಭಾಗದಿಂದ ಸಮಾನವಾಗಿ ಬೀಳುವಂತೆ ಹಾಕಬೇಕು. ಇಷ್ಟು ಮಾಡಿದ ನಂತರ ಅಜೋಲಾದ ಮೇಲೆ ನೀರನ್ನು ಚಿಮುಕಿಸಬೇಕು. ಇದು ಬಹು ಬೇಗನೆ ಬೆಳೆಯಲು ನೆರವಾಗುತ್ತದೆ ಎನ್ನುತ್ತಾರೆ ತಜ್ಞರು.

ಪೂರಕ ಆಹಾರದ ಸ್ಥಾನ:

ಅಜೋಲಾವನ್ನು ಆಕಳು, ಎಮ್ಮೆ, ಕೋಳಿ, ಆಡು, ಮೇಕೆ, ಮೊಲ, ಹಂದಿ, ಬಾತುಕೋಳಿ ಮತ್ತು ಮೀನುಗಳಿಗೆ ಪೂರಕ ಆಹಾರವಾಗಿ ಬಳಸಬಹುದು. ಇದರಲ್ಲಿ ಒಟ್ಟು ಆರು ತಳಿಗಳಿದ್ದು, ಅವುಗಳಲ್ಲಿ ಪಿನ್ನಾಟ ಹಾಗೂ ಮೈಕ್ರೋಫಿಲ್ಲಾ ತಳಿಗಳು ಹೆಚ್ಚು ಪ್ರಚಲಿತದಲ್ಲಿವೆ. ಮೈಕ್ರೋಫಿಲ್ಲಾ ತಳಿಯನ್ನು ಮೇವಿಗಾಗಿ ಅತಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಬಳಸುತ್ತಿದ್ದಾರೆ. ಅಜೋಲಾ ಮೈಕ್ರೋಫಿಲ್ಲಾವನ್ನು ವಿಭಿನ್ನ ವಾತಾವರಣಗಳಲ್ಲೂ ಬೆಳೆಯಬಹುದಾಗಿದೆ. ಹೆಚ್ಚು ಉಷ್ಣಾಂಶವಿರುವ ಪ್ರದೇಶಗಳಲ್ಲೂ ಇವು ಸರಾಗವಾಗಿ ಬೆಳೆೆಯುತ್ತವೆ.

ಜಾನುವಾರುಗಳಿಗೆ ನೀಡುವ ಮುನ್ನ

ಅಜೋಲಾವನ್ನು ಜಾನುವಾರುಗಳಿಗೆ ಕೊಡುವ ಮೊದಲು ಸೆಗಣಿ ವಾಸನೆ ನಿವಾರಿಸಲು ಶುದ್ಧವಾಗಿ ತೊಳೆಯಬೇಕು. ಅವುಗಳಿಗೆ ನೀಡುವ ನಿತ್ಯ ಆಹಾರದಲ್ಲಿ ಶೇ.5-10ರಷ್ಟನ್ನು ಅಜೋಲಾದಿಂದ ಪೂರೈಸಬೇಕು. ಮೊದಮೊದಲು ಜಾನುವಾರುಗಳು ನಿರಾಕರಿಸುತ್ತವೆ. ಕ್ರಮೇಣ ಸೇವಿಸಲು ಶುರು ಮಾಡುತ್ತವೆ. ಅಭ್ಯಾಸವಾಗುವವರೆಗೆ ಹಿಂಡಿ ಅಥವಾ ದಾಣಿಯ ಜತೆ ಮಿಶ್ರ ಮಾಡಿ ತಿನ್ನಿಸುವುದು ಸೂಕ್ತ. ಆರು ತಿಂಗಳು ಮೀರಿದ ಕರುಗಳಿಗೆ ಮಾತ್ರ ಅಜೋಲಾ ನೀಡಬಹುದು. ಕೋಳಿ, ಕುರಿ, ಆಡು,ಮೊಲ, ಮೀನು ಮತ್ತು ಹಂದಿಗಳಿಗೂ ಹಸಿಯಾದ ಅಜೋಲಾವನ್ನು ಆಹಾರವಾಗಿ ಕೊಡಬಹುದು.

ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.

ಕೊನೆಯ ಮಾರ್ಪಾಟು : 7/20/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate