ಕರಾವಳಿ ಮತ್ತು ಮಲೆನಾಡಿನ ಕಾಡುಗಳಲ್ಲಿ ಮೇಯಲು ಹೋದ ಜಾನುವಾರುಗಳು ಮರಗಳಿಗೆ ಅಂಟಿಕೊಂಡು ಮೇಲೇರುವ ಈ ಬಳ್ಳಿಯ ಕೊಂಬೆಗಳನ್ನು ಎಳೆದೆಳೆದು ಆಸಕ್ತಿಯಿಂದ ತಿನ್ನುತ್ತವೆ. ಹಚ್ಚ ಹಸಿರಾದ ಚೂಪಾಗಿರುವ ಇದರ ಎಲೆಗಳು ಅವುಗಳಿಗೆ ಸಮೃದ್ಧವಾದ ಪೋಷಕಾಂಶಗಳನ್ನು ಒದಗಿಸುತ್ತವೆ ಎಂಬುದು ರೈತರಿಗೂ ಗೊತ್ತಿದೆ. ಮೇವಿನ ಅಭಾವ ಕಾಲದಲ್ಲಿ ಕಾಡಿಗೆ ಹೋಗಿ ಮರಗಳನ್ನೇರಿ ಈ ಬಳ್ಳಿಯ ಕೊಂಬೆಗಳನ್ನು ಕಿತ್ತು ತರುತ್ತಾರೆ.
ಒಣ ದಿಮ್ಮಿಯ ಮೇಲೆ ಬಳ್ಳಿಗಳನ್ನಿಟ್ಟು ಮಚ್ಚಿನಿಂದ ಕತ್ತರಿಸಿ ಸಣ್ಣ ಚೂರುಗಳಾಗಿ ಮಾಡುತ್ತಾರೆ. ಈ ಚೂರುಗಳಿಗೆ ಅಕ್ಕಿಯ ತೌಡು ಬೆರೆಸಿ ನೀರು ಹಾಕಿ ಬೇಯಿಸುತ್ತಾರೆ. ಹಾಲು ಕರೆಯುವ ಜಾನುವಾರುಗಳು ಮತ್ತು ಉಳುವ ಎತ್ತುಗಳಿಗೆ ಹೊಟ್ಟೆ ತುಂಬ ತಿನ್ನಿಸುತ್ತಾರೆ. ಇದು ಅಕ್ಕಿಯಷ್ಟೇ ಪೋಷಕಾಂಶಗಳಿಂದ ಕೂಡಿದೆ ಎಂಬ ರೈತರ ನಂಬಿಕೆ ಹುಸಿಯಲ್ಲ. ಈ ಆಹಾರದಿಂದ ಮೇವಿನ ಕೊರತೆಯ ಕಾಲದಲ್ಲೂ ಜಾನುವಾರು ಗಳು ಪುಷ್ಟವಾಗಿ ಬೆಳೆಯುತ್ತವೆ. ದನಗಳು ಪುಷ್ಕಳವಾಗಿ ಹಾಲು ಕೊಡುತ್ತವೆ.
ಇದನ್ನು ಪ್ರಾದೇಶಿಕವಾಗಿ ಅಕ್ಕಿಬಳ್ಳಿಯೆಂದು ಕರೆಯುತ್ತಾರೆ. ಕೇರಳ, ತಮಿಳುನಾಡು, ಬಿಹಾರ, ಗೋವಾ, ಅಸ್ಸಾಂ, ತ್ರಿಪುರ, ಅಂಡಮಾನ್ ಮೊದಲಾದೆಡೆಗಳಲ್ಲಿಯೂ ನಿಸರ್ಗದ ಈ ಕೊಡುಗೆಯನ್ನು ಕಾಣಬಹುದು. ಅಷ್ಟೇ ಏಕೆ ಚೀನಾ, ಆಸ್ಟ್ರೇಲಿಯಾ, ನ್ಯೂಗಿನಿ ಮತ್ತಿತರ ಪ್ರದೇಶಗಳಲ್ಲಿಯೂ ಇದು ಲಭ್ಯವಿದೆ. ಮಲಯಾಳದಲ್ಲಿ ಅನಪ್ಪರ್ವ, ತಮಿಳಿನಲ್ಲಿ ಅನಾಪರುಗ ಎಂದು ಅದನ್ನು ಕರೆಯುತ್ತಾರೆ. ಅರೇಸಿಯೇ ಕುಟುಂಬದ ಸದಸ್ಯನಾದ ಅಕ್ಕಿಬಳ್ಳಿ ವೈಜ್ಞಾನಿಕವಾಗಿ ಪೋಥೋಸ್ ಸ್ಕಾಂಡೆನ್ಸ್ ಎಂಬ ಹೆಸರು ಪಡೆದಿದೆ.
ನಮ್ಮ ಕಾಡಿನಲ್ಲಿ ಅಯಾಚಿತವಾಗಿ ಬೆಳೆಯುವ ಈ ಸಸ್ಯದ ಬಗೆಗೆ ನಾವು ಹೆಚ್ಚು ಯೋಚಿಸಿಲ್ಲ ವಾದರೂ ಅದೊಂದು ಮಹತ್ವದ ಔಷಧಿಯೆಂದು ಸಂಶೋಧನೆಗಳು ಹೇಳುತ್ತವೆ. ಚೆರುವತ್ತೂರಿನ ನಾಟಿವೈದ್ಯರು ಇದರ ಎಲೆಗಳ ಸಾರವನ್ನು ಅನಾದಿಯಿಂದಲೇ ಸುಟ್ಟ ಗಾಯದ ಚಿಕಿತ್ಸೆಗೆ ಬಳಸುತ್ತಿದ್ದಾರೆ.
ಜಂತುಹುಳ, ಸಿಡುಬು, ಚರ್ಮರೋಗ, ಹಾವಿನ ಕಡಿತ, ಅಪಸ್ಮಾರಗಳಿಗೆ ಅದರಿಂದ ಚಿಕಿತ್ಸೆ ಮಾಡುವ ವಿವರಗಳಿವೆ. ಎಲೆಗಳಿಂದ ತಯಾರಿ ಸುವ ತೈಲ ಏಟು ಬಿದ್ದ ಗಾಯದ ನೋವನ್ನು ಶೀಘ್ರ ನಿವಾರಿಸುವುದೆಂದು ಹೇಳುತ್ತಾರೆ. ಕಾಂಡವನ್ನು ಕರ್ಪೂರದೊಂದಿಗೆ ಸುಟ್ಟಾಗ ಬರುವ ಹೊಗೆಯ ಸೇವನೆ ಅಸ್ತಮಾ ನಿವಾರಕವೆಂದು ವಿವರಗಳಿವೆ.
ಜೀವಕೋಶಗಳ ಬೆಳವಣಿಗೆಗೆ ಬೇಕಾದ ಹಲವು ಅಂಶಗಳನ್ನು ಪಾಶ್ಚಾತ್ಯ ತಜ್ಞರು ಅಕ್ಕಿಬಳ್ಳಿಯಲ್ಲಿ ಗುರುತಿಸಿದ್ದಾರೆ. ಅದರ ಎಲೆ ಮತ್ತು ಕಾಂಡಗಳಲ್ಲಿ ಜ್ವರ ನಿವಾರಕವಾದ ಫೆನಿಲಿಕ್ಸ್ ಮತ್ತು ಫ್ಲೇವನಾಯ್ಡ್ ಸತ್ವಗಳಿವೆ. ಕಾರ್ಬೋಹೈಡ್ರೇಟ್ಸ್, ಪ್ರೊಟೀನ್, ಸ್ಥಿರತೈಲ, ಕ್ಷಾರಾಭಗಳು, ಗ್ಲೈಕೊಸೈಡ್ಸ್‌ಗಳನ್ನು ಹೊಂದಿದ ಈ ನಿಸರ್ಗದ ಕೊಡುಗೆ ಜಾನುವಾರುಗಳ ದೇಹಪುಷ್ಟಿಗೆ ಸಹಕರಿಸುವುದು ಸಹಜವೇ ಆಗಿದೆ.
ಇದರಲ್ಲಿ ಸಾಕಷ್ಟು ನಾರು ಮತ್ತು ಮೇದಸ್ಸು ಇರುವುದರಿಂದ ಅದು ಅವುಗಳ ಮೆಲುಕಿಗೂ ಪೂರ್ಣವಾಗಿ ಸಹಕರಿಸುತ್ತದೆ. ಸುಮಾರು ಎರಡೂವರೆ ಸೆ. ಮೀ. ಉದ್ದವಿರುವ ಅಕ್ಕಿಬಳ್ಳಿಯ ಎಲೆಗಳು ಪೌಷ್ಟಕಾಂಶದ ಕಣಜವೇ ಆಗಿದೆ. ವಿಷಾದವೆಂದರೆ ರಬ್ಬರ್ ಕೃಷಿಗಾಗಿ ನಾಶ ವಾದ ಸಹಜಾರಣ್ಯದೊಂದಿಗೇ ಪರಾವಲಂಬಿ ಯಾದ ಈ ಬಳ್ಳಿ ವಿನಾಶದ ಅಂಚು ತಲುಪಿದೆ. ಅದಕ್ಕೆ ಅಂಟಿಕೊಳ್ಳಲು ಕಲ್ಲುಬಂಡೆ ಸಿಕ್ಕಿದರೂ ಸಾಕು, ಬದುಕಿಕೊಳ್ಳುತ್ತದೆ. ತೋಟದ ಮರಗಳಿಗಾದರೂ ಇದನ್ನು ಹಬ್ಬುವಂತೆ ಮಾಡಿ ಜಾನುವಾರುಗಳಿಗೆ ಕೃತಕವಲ್ಲದ ಈ ಆಹಾರವನ್ನು ಸದಾ ಒದಗಿಸಲು ರೈತರು ಮುಂದಾಗುವುದು ಅಗತ್ಯ.
ಅಪರೂಪವಾಗುತ್ತಿರುವ ಆನೆಮುಂಗಿ
ಕರ್ನಾಟಕದ ಕರಾವಳಿ ಮತ್ತು ಪಶ್ಚಿಮ ಘಟ್ಟದ ಕಾಡುಗಳಲ್ಲಿ ಒಂದು ಕಾಲದಲ್ಲಿ ವಿಪುಲವಾಗಿ ಕಾಣಿಸುತ್ತಿದ್ದ ಆನೆಮುಂಗು ಮರ ನಿಸರ್ಗದಲ್ಲಿ ಸಹಜವಾಗಿ ಬೆಳೆಯುತ್ತಿದ್ದುದರಿಂದ ಬಹುತೇಕ ಜನರು ಅದರ ಮಹತ್ವವನ್ನು ಅರಿತಿರಲಾರರು. ಇಂದು ಅದು ಪೂರ್ಣ ಅಳಿವಿನ ಅಂಚಿನಲ್ಲಿದ್ದು ಎಲ್ಲೋ ಒಂದು ಕಡೆ ಅಪರೂಪವಾಗಿ ಗೋಚರಿ ಸುತ್ತದೆ.
ಆನೆಯ ದಂತದಂತೆ ನೀಳವಾದ ಒಂದು ಅಡಿಗಿಂತ ಉದ್ದವಿರುವ ಕಂದುವರ್ಣದ ಕೋಡುಗಳನ್ನು ಅದು ಬಿಡುವ ಕಾರಣ ಪ್ರಾದೇಶಿಕವಾಗಿ ಈ ಹೆಸರು ಬಂದಿರಬಹುದು. ಎಳೆಯ ಕೋಡುಗಳನ್ನು ಹೆಚ್ಚಿ ಬೇಯಿಸಿ ಒಂದು ಸಲದ ನೀರು ತೆಗೆದು ಸ್ವಾದಿಷ್ಟವಾದ ಪಲ್ಯ, ಸಾಂಬಾರು ಇತ್ಯಾದಿ ಅಡುಗೆ ಪದಾರ್ಥಗಳನ್ನು ತಯಾರಿಸಲಾಗುತ್ತದೆ.
ಅದರ ತೊಗಟೆಯನ್ನು ತುಪ್ಪದಲ್ಲಿ ಹುರಿದು ಮಜ್ಜಿಗೆಯೊಂದಿಗೆ ಅರೆದು ತಯಾರಿಸುವ ತಂಬುಳಿ ಊಟಕ್ಕೂ ರುಚಿಕರ. ಭೇದಿ ಮತ್ತು ಅಜೀರ್ಣ ನಿವಾರಣೆಗೆ ಅದು ಸಿದ್ಧೌಷಧವೂ ಹೌದು. ಭಾರತದಲ್ಲಿ ಕರಾವಳಿಯಿಂದ ಹಿಮಾಲಯದ ತಪ್ಪಲಿನವರೆಗೂ ಬೆಳೆಯುವ ಈ ಸಸ್ಯ ಆಗ್ನೇಯ ಏಷ್ಯಾದ ಎಲ್ಲ ದೇಶಗಳಲ್ಲಿಯೂ ಇದೆ. ವಿದೇಶಗಳಲ್ಲಿ ಅದರ ಮಹತ್ವವನ್ನು ಅರಿತು ಸದ್ಬಳಕೆ ಮಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ಅಲಕ್ಷ್ಯ ದಿಂದಾಗಿ ಅದು ಅಪರೂಪ ಸಸ್ಯ ಸಂತತಿಯ ಸಾಲಿಗೆ ಸೇರುತ್ತಿದೆ. ಎಂಟರಿಂದ ಹನ್ನೆರಡು ಅಡಿ ಎತ್ತರವಾಗುವ ಅದರ ಮರ ಮೇಲೇರಿದಂತೆ ಕೊಂಬೆಗಳೂ ಅಪರೂಪವಾಗುತ್ತವೆ.
ಹಳದಿ ವರ್ಣದ ಮೃದುವಾದ ಮರದಲ್ಲಿ 12 ಸೆಂ.ಮೀ. ಉದ್ದ, 8 ಸೆಂ.ಮೀ. ಅಗಲವಿರುವ ಎಲೆಗಳಿವೆ. ಎಲೆಗಳ ತೊಟ್ಟು ಗಮನ ಸೆಳೆ ಯುವಷ್ಟು ದಪ್ಪ ಮತ್ತು ನೀಳವಾಗಿದೆ. ಮರದ ಬೇರು, ಕೋಡು, ಬೀಜ, ತೊಗಟೆ ಎಲ್ಲವೂ ಔಷಧಿಗೆ ಬಳಕೆಯಾಗುತ್ತದೆ. ಹೂಗಳು ಹಾಗೂ ಎಳೆಯ ಎಲೆಗಳು ಜಾನುವಾರು ಮತ್ತು ಮನುಷ್ಯರಿಗೆ ಆಹಾರವಾಗಿ ಉಪಯೋಗವಾಗುತ್ತದೆ.
ಆನೆಮುಂಗಿನ ಎಳೆಯ ಕೋಡಿನಲ್ಲಿ ಶೇ 8ರಷ್ಟು ಪ್ರೊಟೀನ್ ಇರುವುದರಿಂದ ಅದು ಉತ್ತಮ ಆಹಾರವಾಗಿದೆ. ಎಲೆಗಳಲ್ಲಿ ಕ್ರೈಸಿನ್, ಬೈಕಾಲಿನ್, ಟೆಟ್ವಿನ್ ಗ್ಲೂಕೊಸೈಡ್‌ಗಳಿದ್ದು ಉರಿಯೂತ ಮತ್ತು ಅಲರ್ಜಿಗೆ ಅದರಿಂದ ಚಿಕಿತ್ಸೆ ಮಾಡಲಾಗುತ್ತದೆ. ಇಂಡಿಯನ್ ಜರ್ನಲ್ ಜುಲೈ 2002ರ ಸಂಚಿಕೆಯಲ್ಲಿ ಮಣಿಪುರದ ತಂಗ್ಖುಲ್ ನಾಗ ಜನಾಂಗದವರು ಇದರ ತೊಗಟೆಯ ಕಷಾಯಕ್ಕೆ ಜೇನು ತುಪ್ಪ ಸೇರಿಸಿ ಕೊಟ್ಟು ಕ್ಯಾನ್ಸರ್ ರೋಗವನ್ನು ಗುಣಪಡಿಸುತ್ತಾರೆಂದು ಉಲ್ಲೇಖಿ ಸಿದೆ. ತೊಗಟೆಯನ್ನು ತೇದು ಗಂಧವನ್ನು ಲೇಪಿಸಿ ತುರಿಗಜ್ಜಿ, ಚರ್ಮರೋಗ, ಗಾಯಗಳನ್ನು ಗುಣಪಡಿಸಬಹುದೆಂದು ಆಯುರ್ವೇದವು ಹೇಳಿದೆ.
ಸಸ್ಯಶಾಸ್ತ್ರದಲ್ಲಿ ‘ಒರೊಜೈಲಮ್ ಇಂಡಿಕಮ್’ ಎಂದು ಹೆಸರಿರುವ ಆನೆಮುಂಗು ಬಿಗ್ಜೊನಿಯೇಸಿ ಕುಟುಂಬಕ್ಕೆ ಸೇರಿದೆ. ಬಂಗಾಳದಲ್ಲಿ ಸೋನಾ, ಅಸ್ಸಾಮಿನಲ್ಲಿ ಬತ್‌ಘಿಲಾ, ಹಿಂದಿಯಲ್ಲಿ ಭೂತವೃಕ್ಷ, ತೆಲುಗಿನಲ್ಲಿ ಮಂಡೂಕಪರ್ಣಿ ಎಂದು ಅದನ್ನು ಕರೆಯುತ್ತಾರೆ.
ಸಿಹಿಮಿಶ್ರಿತ ಒಗರು ಮತ್ತು ಕಹಿಯಿರುವ ಬೇರು ಆಯುರ್ವೇದದ ಚ್ಯವನಪ್ರಾಶ, ದಶಮೂಲ ಮೊದಲಾದ ಔಷಧಿಗಳಿಗೂ ಮಿಶ್ರವಾಗುತ್ತದೆ. ಸಂಧಿವಾತ ಗುಣಪಡಿಸುವ ಶಕ್ತಿ ಇರುವ ಬೇರುಗಳು ಜೀರ್ಣಾಂಗ ಬಾಧೆಯನ್ನು ಗುಣಪಡಿಸುತ್ತವೆ.
ಜ್ವರಶಾಮಕ, ಮೂತ್ರವರ್ಧಕ, ವಾತ, ಕಫ, ಉದರಶೂಲೆ, ವಾಯು, ಅತಿಸಾರ ನಿವಾರಕ ಗುಣ ಹೊಂದಿದೆಯೆಂದು ಆಯುರ್ವೇದ ಹೊಗಳಿದೆ. ಆನೆಮುಂಗಿನ ಕೋಡುಗಳು ಕೆಮ್ಮು, ಬ್ರಾಂಕೈಟಿಸ್, ಕಾಮಾಲೆ, ಅಗ್ನಿಮಾಂದ್ಯ, ಸಿಡುಬು, ಉದರಶೂಲೆ, ಹೃದಯದ ವ್ಯಾಧಿಗಳು, ಕಾಲರಾ, ಮೂಲವ್ಯಾಧಿಗಳಿಗೆ ಮದ್ದಾಗಿದ್ದರೆ ಬೀಜಗಳ ತೈಲವನ್ನು ವಿರೇಚಕವಾಗಿ ಉಪಯೋಗಿಸಲಾಗುತ್ತದೆ. ಬೀಜಗಳ ಹುಡಿ ಸುಗಂಧದ್ರವ್ಯದ ಉದ್ಯಮಕ್ಕೆ ಬೇಕಾಗುತ್ತದೆ.
ತೊಗಟೆಯಿಂದ ಖಾಕಿ ಬಣ್ಣ ತಯಾರಾಗುತ್ತದೆ. ಜೂನ್ ತಿಂಗಳಲ್ಲಿ ಅದು ಬಿಡುವ ನೇರಳೆಮಿಶ್ರಿತ ಬಿಳಿ ವರ್ಣದ ಹೂಗಳ ಗುಚ್ಛ ನೀಳವಾಗಿದೆ. ಹೂಗಳ ಪರಾಗ ಸಂಪರ್ಕ ಕಾರ್ಯದಲ್ಲಿ ಬಾವಲಿಗಳು ಪ್ರಧಾನ ಪಾತ್ರ ವಹಿಸುತ್ತವೆ. ಕೋಡುಗಳು ಒಣಗಿದರೆ ಅದರೊಳಗೆ ಮೃದುವಾದ ಹತ್ತಿಯಿರುತ್ತದೆ. ಅಸ್ಸಾಮಿನ ಮಾನಸ ರಾಷ್ಟ್ರೀಯ ಉದ್ಯಾನ ಮತ್ತು ರಾಜಸ್ಥಾನದ ಬನ್ಸ್ವಾರಾ ಉದ್ಯಾನದಲ್ಲಿ ಈ ವೃಕ್ಷದ ಅಭಿವೃದ್ಧಿಗೆ ವಿಶೇಷ ಗಮನ ನೀಡಲಾಗಿದೆ. ಇದರ ರಕ್ಷಣೆಯತ್ತ ನಮ್ಮ ರೈತರು ಲಕ್ಷ್ಯ ಹರಿಸಬೇಕಾಗಿದೆ.
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 12/31/2019