ಬಹುಪಯೋಗಿ ಬೆರಣಿಗಳನ್ನು ತಟ್ಟುವುದು ಕೂಡ ಒಂದು ಕಲೆ. ಹಸಿ ಸೆಗಣಿಯನ್ನು ಕಲಸಿ ಮಿದಿಯುತ್ತಾ ತಪ ತಪ ತಟ್ಟುತ್ತಾ, ನೋಡಲು ಗುಂಡಗಾಗಿರುವಂತೆ ರೂಪಿಸುವುದು ಎಲ್ಲರಿಗೂ ಸುಲಭದ ಕೆಲಸವಲ್ಲ. ಒಂದು ಎರಡು ಮೂರು ಹೀಗೆ ಎಣಿಸದೆ ಬೆರಣಿಗಳನ್ನು ಗೋಡೆಗೆ ಅಂಟಿಸಿ ಬಿಸಿಲಿನ ಜಳಕ್ಕೆ ಒಣಗಿಸುವುದನ್ನು ನೋಡುವುದೇ ಚೆಂದ. ಹಾಗೆ ತಯಾರಾದ ಬೆರಣಿಗಳನ್ನು ಸಗಣಿಯ ಕುಳ್ಳು ಎಂದೂ ಕರೆಯುವುದುಂಟು.
ಬಾಗಲಕೋಟ ಜಿಲ್ಲೆಯ ಮುದೋಳ ತಾಲೂಕಿನ ಅಕ್ಕಿಮರಡಿ ಎಂಬ ಚಿಕ್ಕ ಗ್ರಾಮಕ್ಕೆ ನೀವು ಬಂದರೆ ಇಲ್ಲಿನ ಪ್ರತಿ ಮನೆ ಅಂಗಳದಲ್ಲೂ ಬೆರಣಿಗಳ ಸಾಲುಗಳನ್ನು ನೋಡಬಹುದು. ಅಲ್ಲಲ್ಲೇ ಬೆರಣಿಗಳ ಗೂಡುಗಳನ್ನು ಕಾಣಬಹುದು. ಅಂಗಳ ಅಸಹ್ಯವಾಗದಂತೆ ಒಪ್ಪ ಓರಣ ಮಾಡಿ ಬೆರಣಿ ಜೊಡಿಸುವ, ಗೂಡು ಕಟ್ಟುವ ಕಲೆ ಆ ಮಹಿಳೆಯರಿಗೆ ಕರಗತ. ಉರುವಲಿನ ಕೊರತೆ ನೀಗಿಸಲು ಬೆರಣಿಗಳನ್ನು ತಟ್ಟುವುದು ಪೂರ್ವಕರಿಂದ ಬಂದ ಬಳುವಳಿ. ಅಗ್ನಿಗಾಹುತಿ ಮಾಡಿದ ಬೆರಣಿಯಿಂದ ಶೀಘ್ರ ಹಾಗೂ ನಿರಂತರವಾಗಿ ಬಿಸಿ ಹೊರಹೊಮ್ಮುವುದರಿಂದ ಚಳಿಗಾಲದಲ್ಲಿ ಈ ಭಾಗದ ಜನರಿಗೆ ಇದೇ ಪ್ರಮುಖ ಉರುವಲು. ಇಲ್ಲಿ ಹಾಲಿಗಾಗಿ ಅಲ್ಲದಿದ್ದರೂ ಸೆಗಣಿಗಾಗಿ ಆಕಳು, ಎಮ್ಮೆ ಬೇಕೆ ಬೇಕು ಎನ್ನುವಷ್ಟರ ಮಟ್ಟಿಗೆ ಬೆರಣಿಗಳ ಮೇಲೆ ಇಲ್ಲಿನ ರೈತ ಮಹಿಳೆಯರಿಗೆ ಮೋಹವಿದೆ.
ತಯಾರಿಸುವುದು ಹೀಗೆ: ಮುಂಜಾನೆಯ ರಂಗೋಲಿಯ ಜತೆಗೆ ನಿತ್ಯ ಸೂರ್ಯೋದಯದೊಂದಿಗೆ ಬೆರಣಿ ತಟ್ಟುವ ಕೆಲಸ ಶುರುವಾಗುತ್ತದೆ. ಕೊಟ್ಟಿಗೆಯಿಂದ ಬೆರಣಿ ಸಂಗ್ರಹಿಸಿ, ಕಸ ಕಡ್ಡಿ ಬೇರ್ಪಡಿಸಿ, ಹದಗೊಳಿಸಿ ರಾಶಿ ಮಾಡುವುದು ಮೊದಲ ಹಂತ. ಕಣ್ಣು ಗುರುತಿನ ಅಳತೆಯಲ್ಲಿ ಎರಡು ಕೈಗಳಿಂದ ಸೆಗಣಿಯನ್ನು ಗೋರೆ ಮಾಡುವುದು ಎರಡನೇ ಹಂತ. ಕ್ಷಣಾರ್ಧದಲ್ಲಿ ಒಂದು ಕಾಲು ಅಡಿ ಅಳತೆಯ ಗುಂಡಾಕಾರದ ಬೆರಣಿ ಸಿದ್ಧವಾಗುವುದು, ಒಂದು ಇಂಚು ಆಚೀಚೆಯಾಗದಷ್ಟು ಅರ್ಧ ನಿಮಿಷಕ್ಕೊಂದರಂತೆ ಬೆರಣಿ ಗೋಡೆಗಳ ಮೇಲೆ ಚಿತ್ತಾರದಂತೆ ಒಡಮೂಡುವುದನ್ನು ನೋಡಲು ಎರಡು ಕಣ್ಣು ಸಾಲದು.
ಗೂಡು ನಿರ್ಮಿಸುವ ಕೆಲಸ: ಗೂಡು ಕಟ್ಟುವುದಕ್ಕಾಗಿಯೇ ದುಂಡಾಕಾರದಲ್ಲಿ ಬೆರಣಿ ತಟ್ಟುತ್ತಾರೆ. ಚಪ್ಪಟೆ ಆಕಾರ ಇರುವುದರಿಂದಲೇ ಬೆರಣಿಯನ್ನು ಗೋಪುರದಂತೆ ಜೋಡಿಸಲು ಸುಲಭವಾಗುತ್ತದೆ. ಒಂದರ ಮೇಲೊಂದರಂತೆ ಪೇರಿಸಿ ದಾಗ ಗೋಡೆ ಗಟ್ಟಿಯಾಗುತ್ತದೆ. ಮಳೆ, ಗಾಳಿಯನ್ನೂ ತಡೆಯುತ್ತದೆ ಎನ್ನುವುದು ಬೆರಣಿ ಬಗ್ಗೆ ರೈತ ಮಹಿಳೆಯರ ವಿವರಣೆ.ಬಿಸಿಲು ಚುರುಕಾಗುವ ಹೊತ್ತಿಗೆ ಬೆರಣಿ ತಟ್ಟುವ ಕಾರ್ಯ ಮುಗಿಸಿ, ತಟ್ಟಿದ ಬೆರಣಿಯನ್ನು ಬಿಸಿಲಿಗೆ ಹರಡುವ ಕೆಲಸ ಶುರು ಮಾಡುತ್ತಾರೆ. ಗೂಡು ಕಟ್ಟಲು ಅನುಕೂಲವಾಗು ವಂತೆ ನೆಲದ ಮೇಲೆ ಒಣಗಿಸ ಲಾಗುತ್ತದೆ. ಮಾರ್ಚ್-ಏಪ್ರಿಲ್ ಬಿಸಿಲಿಗೆ ಒಂದೆರಡು ದಿನಕ್ಕೆ ಬೆರಣಿ ಒಣಗುತ್ತದೆ. ಒಣಗಿದ ಬೆರಣಿಗಳನ್ನು ಟ್ರೈಸಿಕಲ್‌ನಲ್ಲಿ ಸಾಗಿಸಿ ಒಂದೆಡೆ ರಾಶಿ ಹಾಕುತ್ತಾರೆ. ನಂತರ ಗೂಡು ಕಟ್ಟಲಾಗುತ್ತದೆ. ಮಳೆಗಾಲದ ಆರಂಭವಾಗುವರೆಗೂ ಗೂಡುಗಳು ಮನೆಯ ಅಂಗಳದಲ್ಲೇ ಇರುತ್ತವೆ.ಗೂಡು ಕಟ್ಟುವುದಕ್ಕಾಗಿಯೇ ದುಂಡಾಕಾರದಲ್ಲಿ ಬೆರಣಿ ತಟ್ಟುತ್ತಾರೆ. ಚಪ್ಪಟೆ ಆಕಾರ ಇರುವುದರಿಂದಲೇ ಬೆರಣಿಯನ್ನು ಗೋಪುರದಂತೆ ಜೋಡಿಸಲು ಸಾಧ್ಯವಾಗುತ್ತದೆ. ಒಂದರ ಮೇಲೊಂದರಂತೆ ಪೇರಿಸಿದಾಗ ಗೋಡೆ ಗಟ್ಟಿಯಾಗುತ್ತದೆ. ಮಳೆ, ಗಾಳಿಯನ್ನೂ ತಡೆಯುತ್ತದೆ ಎನ್ನುವುದು ಇಲ್ಲಿನ ರೈತ ಮಹಿಳೆಯರು ಅಭಿಮತ.
ಸುರಕ್ಷತೆಗೆ ಆದ್ಯತೆ: ಗೂಡಿನ ಸುತ್ತ ಸೆಗಣಿ ಹಾಗು ಮಣ್ಣಿನಿಂದ ಸಾರಿಸುವುದು ಇನ್ನೊಂದು ಪ್ರಕ್ರಿಯೆ. ಇದರಿಂಧ ವಿಷ ಜಂತುಗಳು ಗೂಡು ಸೇರುವುದನ್ನು ತಪ್ಪಿಸಬಹುದು ಎನ್ನುವ ಲೆಕ್ಕಾಚಾರವಿದು. ಸೆಗಣಿ ಹಲವು ಪ್ರಾಣಿಗಳ ಅವಾಸಸ್ಥಾನ. ಗೂಡುಗಳಲ್ಲಿ ರಂಧ್ರಗಳಿದ್ದರೆ ಅವುಗಳ ಮೂಲಕ ಹಾವು ಚೇಳುಗಳಂತಹ ವಿಷ ಜಂತುಗಳು ಒಳ ನುಸುಳಬಹುದು. ಅದನ್ನು ತಡೆಯಲು ಸಂದುಗಳನ್ನು ಮಣ್ಣಿನಿಂದ ಮುಚ್ಚಲಾಗುತ್ತದೆ.
ಬೆರಣಿಗಳು ಬಹುಪಯೋಗಿ: ಬೆರಣಿಗಳನ್ನು ಎಲ್ಲ ಅಗ್ನಿ ಕಾರ್ಯಕ್ಕೂ ಬಳಸುತ್ತಾರೆ. ಅಡುಗೆ ಮನೆ, ಕೃಷಿ ಕಾರ್ಯಗಳನ್ನು ಸಂಸ್ಕರಣೆ ಮತ್ತು ಬಾಣಂತಿಯರಿಗಾಗಿ ಬಳಸಲಾಗುತ್ತದೆ. ಅಕ್ಕಿಮರಡಿಯ ಸುತ್ತಲಿನ ಬಹುತೇಕ ರೈತರು ಪ್ರತಿದಿನ ಮುಂಜಾನೆ ವಾತಾವರಣ ಶುದ್ಧಿಗಾಗಿ ಅಗ್ನಿಹೋತ್ರ ಹೋಮ ಮಾಡುತ್ತಾರೆ. ಈ ಹೋಮಕ್ಕೆ ಮುಖ್ಯವಾಗಿ ಸೆಗಣಿಯ ಬೆರಣಿಗಳೇ ಉರುವಲು. ಸಣ್ಣ ಹಿಡುವಳಿದಾರರೇ ಹೆಚ್ಚಾಗಿರುವ ಉತ್ತರ ಪ್ರದೇಶ, ಪಂಜಾಬ್, ಬಿಹಾರದಂಥ ಅನೇಕ ರಾಜ್ಯಗಳ ಹಳ್ಳಿಗಳಲ್ಲಿ ಸೆಗಣಿಯನ್ನು ಬೆರಣಿಯನ್ನಾಗಿಸಿ ಅದರ ಬೂದಿಯನ್ನು ಕೃಷಿ ಗೊಬ್ಬರವಾಗಿ, ಸಸ್ಯಜನ್ಯ ಕೀಟನಾಶಕವಾಗಿ ಬಳಸುತ್ತಾರೆ.
ದಕ್ಷಿಣದ ರಾಜ್ಯಗಳಲ್ಲಿ ಕೃಷಿಯ ಸಾಂಪ್ರದಾಯಿಕತೆ ಮಾಯವಾಗುತ್ತಿದೆ. ಆಧುನಿಕ ಕೃಷಿಯಿಂದ ಎತ್ತಿನ ಬಳಕೆಯೇ ಕಡಿಮೆಯಾಗುತ್ತಿದೆ. ಹಳ್ಳಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸೆಗಣಿ ದೊರಕುವುದೇ ಕಷ್ಟವಾಗಿದೆ. ಇಂಥ ಕಾಲಘಟ್ಟದಲ್ಲ್ಲೂ ಉತ್ತರ ಕರ್ನಾಟಕದ ಅನೇಕ ಕಡೆ ಹಸು, ಎಮ್ಮೆಗಳನ್ನು ಸಾಕಿ ಬೆರಣಿ ತಟ್ಟುವ ಮೂಲಕ ಸೆಗಣಿಯ ಕುಳ್ಳನ್ನು ನಿರ್ಮಿಸುವ ಕೆಲಸ ನಡೆಯುತ್ತಿರುವುದು ಗಮನಾರ್ಹ.
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 1/28/2020