ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಇತ್ತೀಚೆಗೆ ರಾಷ್ಟ್ರೀಯ ವಾಯುಮಾಲಿನ್ಯ ನೈಜ ದತ್ತಾಂಶ ಸೂಚ್ಯಂಕ ಕೇಂದ್ರಕ್ಕೆ ಚಾಲನೆ ನೀಡಿದ್ದಾರೆ. ಶೀಘ್ರವೇ ಈ ರೀತಿಯ ಕೇಂದ್ರಗಳು ಬೆಂಗಳೂರು ಸೇರಿದಂತೆ ಹತ್ತು ಪ್ರಮುಖ ನಗರಗಳಲ್ಲಿ ಅಸ್ತಿತ್ವಕ್ಕೆ ಬರಲಿವೆ. ಮುಂದಿನ ಎರಡು ವರ್ಷಗಳಲ್ಲಿ ಹಂತಹಂತವಾಗಿ ವಿವಿಧ ರಾಜ್ಯಗಳ 22 ರಾಜಧಾನಿಗಳು ಸೇರಿದಂತೆ 46 ನಗರಗಳಿಗೆ ಈ ಕೇಂದ್ರಗಳನ್ನು ವಿಸ್ತರಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಇರಿಸಿಕೊಂಡಿದೆ.
ಆದರೆ ಈ ಕ್ರಮ ಸಾಂಕೇತಿಕವಷ್ಟೇ ಆಗಬಾರದು. ಈ ಸೂಚ್ಯಂಕ ಕೇಂದ್ರಗಳ ಆರಂಭವೇ ವಾಯು ಮಾಲಿನ್ಯದ ಗಂಭೀರತೆಯ ಅರಿವಿನಿಂದ ಆಗಿರುವಂತಹದ್ದ್ದು. ಆರಂಭದಲ್ಲಿ ದೆಹಲಿ, ಆಗ್ರಾ, ಫರಿದಾಬಾದ್, ವಾರಾಣಸಿ, ಅಹಮದಾಬಾದ್, ಬೆಂಗಳೂರು, ಚೆನ್ನೈ, ಹೈದರಾಬಾದ್, ಕಾನ್ಪುರ ಹಾಗೂ ಲಖನೌ ನಗರಗಳಲ್ಲಿ ವಾಯುಗುಣಮಟ್ಟ ಅಳೆಯುವ ತಲಾ 6–7 ಕೇಂದ್ರಗಳು ತಲೆಯೆತ್ತಲಿವೆ.
ನಗರದ ವಾಯು ಗುಣಮಟ್ಟವನ್ನು ಬಣ್ಣಗಳ ಮೂಲಕ ಗುರುತಿಸುವ ಕಾರ್ಯವನ್ನು ಈ ಕೇಂದ್ರಗಳು ಮಾಡಲಿವೆ. ಈ ನಗರಗಳಲ್ಲಿ ತೇಲಾಡುವ ಕಶ್ಮಲ, ಗಂಧಕದ ಅನಿಲ, ಓಜೋನ್, ಇಂಗಾಲದ ಅನಿಲ, ಅಮೋನಿಯ ಹಾಗೂ ಸೀಸದ ಪ್ರಮಾಣವನ್ನು ಅಳೆಯಲಾಗುತ್ತದೆ. ಹಸಿರು, ಹಳದಿ, ಕೆಂಪು ಹಾಗೂ ನೇರಳೆ ಬಣ್ಣವು ಕ್ರಮವಾಗಿ ಕಡಿಮೆ, ಸಾಧಾರಣ, ಹಾನಿಕಾರಕ ಹಾಗೂ ಅಪಾಯಕಾರಿ ಎನ್ನುವ ಸೂಚನೆ ನೀಡಲಿದೆ.
ಈ ವ್ಯವಸ್ಥೆಯನ್ನು ಕಾನ್ಪುರದ ಐಐಟಿಯ ಸಹಯೋಗದಿಂದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಭಿವೃದ್ಧಿಪಡಿಸಿದೆ. ಇದರಿಂದ ಸಾರ್ವಜನಿಕರಿಗೆ ಗಾಳಿಯ ಆರೋಗ್ಯ ಅರಿವಾಗಿ ಸ್ವಚ್ಛ ವಾತಾವರಣ ನಿರ್ಮಾಣವಾಗಲು ಜಾಗೃತಿ ಉಂಟಾಗಬಹುದು ಎಂಬುದು ಕೇಂದ್ರ ಸರ್ಕಾರದ ಆಶಯ. ವಿಶ್ವ ಆರೋಗ್ಯ ಸಂಸ್ಥೆಯು 1600 ನಗರಗಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ ವಿಶ್ವದಲ್ಲೇ ಅತ್ಯಂತ ಕೆಟ್ಟ ಹವಾಮಾನವನ್ನು ಹೊಂದಿರುವ ರಾಜಧಾನಿಯೆಂದರೆ ನವದೆಹಲಿ. ಚಿಕಾಗೋದಲ್ಲಿರುವ ಇಂಧನ ನೀತಿ ಅಧ್ಯಯನ ಸಂಸ್ಥೆಯ ಆರ್ಥಿಕ ಮತ್ತು ಸಾರ್ವಜನಿಕ ನೀತಿ ತಜ್ಞರ ಅಭಿಪ್ರಾಯದ ಪ್ರಕಾರ ಭಾರತದಲ್ಲಿ ಕೆಟ್ಟ ಗಾಳಿಯಿಂದಲೇ ನಾಗರಿಕರ ಜೀವಿತಾವಧಿ 3.2 ವರ್ಷಗಳಷ್ಟು ಕಡಿಮೆಯಾಗುತ್ತಿದೆ. ಇತ್ತೀಚೆಗೆ ನವದೆಹಲಿಗೆ ಬಂದಿದ್ದ ಅಮೆರಿಕ ಅಧ್ಯಕ್ಷರ ಜೊತೆ ಗಾಳಿ ಶುದ್ಧಮಾಡುವ ಯಂತ್ರಗಳನ್ನೂ ತರಿಸಲಾಗಿತ್ತು. ದೆಹಲಿಯ ಗಾಳಿಯ ಗುಣಮಟ್ಟ ಅಷ್ಟರಮಟ್ಟಿಗೆ ಭಯ ಹುಟ್ಟಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪಟ್ನಾ, ಗ್ವಾಲಿಯರ್, ರಾಯಪುರ ಹಾಗೂ ಅಹಮದಾಬಾದ್ ನಗರಗಳಲ್ಲೂ ವಾಯುಮಾಲಿನ್ಯ ಮಿತಿ ಮೀರಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವರದಿಯ ಪ್ರಕಾರ ಅತಿ ಹೆಚ್ಚು ವಾಯುಮಾಲಿನ್ಯ ನಗರಗಳ ಪೈಕಿ ನವದೆಹಲಿಗೆ ಮೊದಲ ಸ್ಥಾನ ದೊರಕಿದರೆ ನಂತರದ ಸ್ಥಾನಗಳನ್ನು ಮುಂಬೈ, ಕೋಲ್ಕತ್ತ, ಚೆನ್ನೈ ಹಾಗೂ ಬೆಂಗಳೂರು ಪಡೆದಿವೆ.
ಮಾಲಿನ್ಯದ ಅಂಶಗಳನ್ನು ಪ್ರಕಟಿಸುವ ಕೇಂದ್ರ ಸರ್ಕಾರದ ಕ್ರಮಗಳನ್ನು ಸ್ವಾಗತಿಸಬಹುದಾದರೂ ವಾಯುಮಾಲಿನ್ಯ ನಿಯಂತ್ರಣಕ್ಕೆ ಬಿಗಿಕ್ರಮವನ್ನೂ ಅನುಸರಿಸಬೇಕು. ವಿಶ್ವದಲ್ಲೇ ಅತಿ ಹೆಚ್ಚು ವಾಯುಮಾಲಿನ್ಯವಾದ ನಗರ ಎನ್ನುವ ಬೀಜಿಂಗ್ ಈ ಪರಿಸ್ಥಿತಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳುತ್ತಿದೆ. ವಾಯುಗುಣಮಟ್ಟ ತೀರಾ ಕೆಳಮಟ್ಟಕ್ಕೆ ಬಂದ ತಕ್ಷಣ ಶಾಲೆಗಳಿಗೆ ರಜೆ ಘೋಷಿಸಲಾಗುತ್ತದೆ. ವಾಹನಗಳು ರಸ್ತೆಗೆ ಇಳಿಯುವುದಿಲ್ಲ.
ವಾಯುಮಾಲಿನ್ಯ ಉಂಟುಮಾಡುವ ಕಾರ್ಖಾನೆಗಳು ಉತ್ಪಾದನೆ ಕಡಿಮೆ ಮಾಡುತ್ತವೆ ಇಲ್ಲವೇ ರಜೆ ಘೋಷಿಸುತ್ತವೆ. ಈ ಮೂಲಕ ವಾಯುಮಾಲಿನ್ಯ ಕಡಿಮೆಯಾಗುತ್ತದೆ. ಐಐಎಸ್ಸಿ ವರದಿಯ ಪ್ರಕಾರ ನವದೆಹಲಿಯೂ ಇದೇ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅತಿ ಹೆಚ್ಚು ವಾಯುಮಾಲಿನ್ಯವನ್ನು ಎದುರಿಸುತ್ತಿರುವ ವಿಶ್ವದ 20 ನಗರಗಳ ಪೈಕಿ ಭಾರತದಲ್ಲೇ 13 ನಗರಗಳಿವೆ. ಆದರೆ ಬಿಕ್ಕಟ್ಟು ಪರಿಹಾರಕ್ಕೆ ಬೀಜಿಂಗ್ ಮಾದರಿಯ ಯಾವುದೇ ಕ್ರಮವನ್ನು ಆಯಾ ರಾಜ್ಯ ಸರ್ಕಾರಗಳು ತೆಗೆದುಕೊಂಡಿಲ್ಲ.
ವಾಯುಮಾಲಿನ್ಯಕ್ಕೆ ಕಡಿವಾಣ ಹಾಕಲು ರಾಜ್ಯ ಹಾಗೂ ಕೇಂದ್ರ ಸುಸ್ಥಿರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ಹೊಗೆ ಉಗುಳುವ ವಾಹನಗಳ ಬದಲು ಬ್ಯಾಟರಿಚಾಲಿತ ವಾಹನ, ಸಮೂಹ ಸಾರಿಗೆ, ಮೆಟ್ರೊರೈಲು ಹಾಗೂ ಸೈಕಲ್ ಬಳಕೆಗೆ ಒತ್ತು ನೀಡಬೇಕು. ಕೈಗಾರಿಕೆಗಳಿಂದ ಉಂಟಾಗುತ್ತಿರುವ ವಾಯುಮಾಲಿನ್ಯ ನಗಣ್ಯ ಎನ್ನುವ ಪರಿಸ್ಥಿತಿ ಉಂಟಾಗಬೇಕು.
ಯುರೋಪ್‌ನ ದೇಶಗಳಿಂದ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ ಎನ್ನುವ ದೂರು ಇದ್ದರೂ ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯ ತೀರಾ ಕಡಿಮೆ. ಅಲ್ಲಿ ಸಮೂಹ ಸಾರಿಗೆಗೆ ಒತ್ತು ನೀಡಲಾಗುತ್ತಿದೆ. ಈ ಪರಿಕಲ್ಪನೆ ಭಾರತದಲ್ಲೂ ಜಾರಿಗೆ ಬರಬೇಕು. ವಾಯುಮಾಲಿನ್ಯದ ಅಂಕಿಅಂಶಗಳು ಪ್ರದರ್ಶನದ ವಸ್ತುವಾಗದೆ, ವಾಯುಮಾಲಿನ್ಯ ನಿಯಂತ್ರಣದ ಜನಜಾಗೃತಿಗೆ ವೇದಿಕೆಯಾಗಬೇಕು.
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 4/23/2020