অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಹಕಾರ ಸಂಘ

ಸಹಕಾರ ಸಂಘ

ದೇಶದ ಸಂವಿಧಾನಕ್ಕೆ ತಂದ 97ನೇ ತಿದ್ದುಪಡಿಯ ಅನುಸಾರ, ಸಹಕಾರ ಸಂಘಗಳಿಗೆ ಹೆಚ್ಚಿನ ಸ್ವಾಯತ್ತತೆ ಲಭಿಸಿ ಎರಡು ವರ್ಷವಾಗುತ್ತಾ ಬಂದಿದೆ. ಈ ಸಂದರ್ಭದಲ್ಲಿ, ಸಂವಿಧಾನ ನೀಡಿದ ಸ್ವಾಯತ್ತತೆಯು ಸಂಘಗಳ ಅಭಿವೃದ್ಧಿಗೆ ಪೂರಕವಾಗಿದೆಯೇ ಅಥವಾ ಸ್ವೇಚ್ಛೆಗೆ ಪ್ರೇರಕವಾಗಿದೆಯೇ ಎಂಬ ಬಗ್ಗೆ ಸ್ವಾಯತ್ತತೆಯನ್ನು ನೀಡಿದವರು ಮತ್ತು ಪಡೆದುಕೊಂಡವರಿಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ.

‘ಇಂತಹ ಸ್ವಾಯತ್ತತೆ ಕ್ರಮೇಣ ಸ್ವೇಚ್ಛೆಗೆ ಎಡೆ ಮಾಡುವುದಿಲ್ಲವೇ?’ ಎಂದು ಲೆಕ್ಕಪರಿಶೋಧಕನಾದ ನಾನು ಒಂದು ತರಬೇತಿ ಸಂದರ್ಭದಲ್ಲಿ  ಪ್ರಶ್ನಿಸಿದೆ. ಅದಕ್ಕೆ ‘ಇದು ನಿಮ್ಮ ಬ್ರಿಟಿಷ್ ಮೆಂಟಾಲಿಟಿಯನ್ನು ತೋರಿಸುತ್ತದೆ. ಅವರು ಕೂಡಾ ಭಾರತಕ್ಕೆ ತಮ್ಮನ್ನು ಆಳಿಕೊಳ್ಳುವ ಸಾಮರ್ಥ್ಯ ಇಲ್ಲ ಎಂಬ ನೆಪ ಒಡ್ಡಿ ನಮಗೆ ಸ್ವಾತಂತ್ರ್ಯ ಕೊಡುವುದನ್ನು ಮುಂದೂಡುತ್ತಿದ್ದರು’ ಎಂಬ ಉತ್ತರ ಸಿಕ್ಕಿತು.
ಎಲ್ಲಿಯವರೆಗೆ ಸಂಘಗಳ ಮೇಲೆ ಸರ್ಕಾರದ ಹಿಡಿತ ಬಿಗಿಯಾಗಿ ಇರುತ್ತದೋ ಅಲ್ಲಿಯವರೆಗೆ ಸಹಕಾರ ಸಂಘ ಪ್ರಗತಿ ಸಾಧಿಸುವುದು ಅಸಾಧ್ಯ ಎಂಬುದು ಅವರ ಅಭಿಪ್ರಾಯ. ‘ಹಿಡಿತ ಬೇಕಿರುವುದು ಬೆಳೆಯುವುದನ್ನು ತಡೆಯುವುದಕ್ಕೆ ಅಲ್ಲ; ಜಾರದಂತೆ ತಡೆಯಲು’ ಎಂಬ ನನ್ನ ಸಮಜಾಯಿಷಿಗೆ ಸಹ ಅವರ ಬಳಿ ಪ್ರಶ್ನೆ ಇತ್ತು. ‘ಬೀಳೋರನ್ನ ನೀವು ಎಷ್ಟು ದಿನಾಂತ ಹಿಡಿದಿಟ್ಟುಕೊಳ್ಳೋಕೆ ಆಗುತ್ತೇರಿ?’
ಒಂದು ಸಂಘ ಅಭಿವೃದ್ಧಿ ಹೊಂದಿದೆ ಎಂದರೆ ಅದಕ್ಕೆ ಕಾರಣ ಅಲ್ಲಿನ ಆಡಳಿತ ಮಂಡಳಿ ಮತ್ತು ಕಾರ್ಯದರ್ಶಿಯ ಕಾರ್ಯಕ್ಷಮತೆ. ಇಲಾಖಾಧಿಕಾರಿಗಳ ಕಾರ್ಯ ಕೆಲ ಸಂಘಗಳು ಹಾಳಾಗುವುದನ್ನು ತಾತ್ಕಾಲಿಕವಾಗಿ ತಡೆಯುವುದಕ್ಕೆ ಮಾತ್ರ ಸೀಮಿತವಾಗಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಹೀಗಾಗಿ ನಾನು ಅವರನ್ನು ಮತ್ತಷ್ಟು ಪ್ರಶ್ನಿಸಲು ಹೋಗಲಿಲ್ಲ.

ಆದರೆ ಈಗ ಸಂಘಗಳಿಗೆ ನೀಡಿರುವ ಸ್ವಾಯತ್ತತೆಯಲ್ಲಿ, ಸಂಘದ ನೈಜ ಸ್ಥಿತಿಗತಿಯ ಚಿತ್ರಣ ನೀಡುವ ಲೆಕ್ಕಪರಿಶೋಧನಾ ವರದಿಯನ್ನು ಸಿದ್ಧಪಡಿಸುವ  ಲೆಕ್ಕಪರಿಶೋಧಕನನ್ನು ಸಂಘದವರೇ ಆರಿಸಿಕೊಳ್ಳಲು, ಸಂವಿಧಾನದ ವಿಧಿ 243ಜಡ್ಎಂ(3)ಯಲ್ಲಿ ಅವಕಾಶ ನೀಡಲಾಗಿದೆ. ಈ ಬಗ್ಗೆ ಖಂಡಿತಾ ಮರು ಚಿಂತನೆ ನಡೆಸಬೇಕಾದ ಅಗತ್ಯವಿದೆ.

ಲೆಕ್ಕಪರಿಶೋಧಕನೆಂದರೆ ಒಂದು ಸಂಘದ ಲೆಕ್ಕಪತ್ರ ಪರಿಶೀಲನೆ ಮಾಡುವುದು ಮಾತ್ರವಲ್ಲ, ಆ ಸಂಘದ ಆಗುಹೋಗುಗಳನ್ನು ಗಮನಿಸಿ ಅದಕ್ಕೆ ಸೂಕ್ತ ಸಲಹೆ, ನಿರ್ದೇಶನವನ್ನೂ ನೀಡಬೇಕಾದ ಮಾರ್ಗದರ್ಶಕನಾಗಿರುತ್ತಾನೆ. ಸಂಘ ತನ್ನ ಧ್ಯೇಯೋದ್ದೇಶಕ್ಕೆ ತಕ್ಕಂತೆ ತನಗೆ ಬೇಕಾದ ಮಾರ್ಗದರ್ಶಕನನ್ನು ತಾನೇ ಆರಿಸಿಕೊಳ್ಳುವುದಕ್ಕೆ ಇದು ಪೂರಕವಾಗಿದೆ; ತಾನು ಚುನಾಯಿಸಿರುವ ಆಡಳಿತ ಮಂಡಳಿಯ ಕಾರ್ಯವೈಖರಿ ಬಗ್ಗೆ ತಾನೇ ಆಯ್ಕೆ ಮಾಡಿಕೊಂಡ ಲೆಕ್ಕಪರಿಶೋಧಕನಿಂದ ವರದಿ ಪಡೆಯುವ ಅಧಿಕಾರವನ್ನು ಮಹಾಸಭೆಯ ಮೂಲಕ ಸರ್ವ ಸದಸ್ಯರಿಗೆ ನೀಡುವ ಸಂವಿಧಾನದ ಆಶಯ ಉನ್ನತವೂ, ಉದಾತ್ತವೂ ಆಗಿದೆ. ಆದರೆ ವಾಸ್ತವದಲ್ಲಿ ಸಂಘದ ಎಲ್ಲ ಸದಸ್ಯರೂ ಲೆಕ್ಕಪರಿಶೋಧನೆಗೆ ಲಭ್ಯ ಇರುವ ಅರ್ಹ ಲೆಕ್ಕಪರಿಶೋಧಕರ ಬಗ್ಗೆ ಮಾಹಿತಿ ಹೊಂದಿರುತ್ತಾರೆ ಎಂದುಕೊಳ್ಳುವುದು ಅಸಾಧುವಾಗುತ್ತದೆ. ಆದ್ದರಿಂದ ಲೆಕ್ಕಪರಿಶೋಧಕರ ಆಯ್ಕೆ ಪ್ರಕ್ರಿಯೆಯಲ್ಲಿ ಕೇವಲ ಆಡಳಿತ ಮಂಡಳಿ ಅಥವಾ ಮುಖ್ಯ ಕಾರ್ಯನಿರ್ವಾಹಕರ ಶಿಫಾರಸೇ ಮಹಾಸಭೆಯಲ್ಲಿ ಸಿಂಧು ಆಗುವ ಸಾಧ್ಯತೆ ಇರುತ್ತದೆ. ಇದು ಪರೀಕ್ಷೆ ಬರೆದ ವಿದ್ಯಾರ್ಥಿಗೆ ತನ್ನ ಪ್ರಶ್ನೆಪತ್ರಿಕೆಯ ಮೌಲ್ಯಮಾಪನಕ್ಕೆ ತಾನೇ ಮೌಲ್ಯಮಾಪಕರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಟ್ಟಂತೆ ಆಗುತ್ತದೆ. ಇದು ವಿಷಾದನೀಯ ಸಂಗತಿ. ಸಂಘಗಳಲ್ಲಿ ಲೆಕ್ಕಪರಿಶೋಧಕರ ಆಯ್ಕೆ ಬಗ್ಗೆ ಸೂಕ್ತ ನಿಯಮಾವಳಿಗಳನ್ನು ರಚಿಸಿಕೊಂಡಿಲ್ಲದಿರುವುದು ಸಹ ಇದಕ್ಕೆ ಕಾರಣವಾಗಿದೆ.

ಲೆಕ್ಕಪರಿಶೋಧಕರನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ಸಂಘಕ್ಕೆ ಇದ್ದಾಗ, ಕೆಲ ಲೆಕ್ಕಪರಿಶೋಧಕರು ತಮ್ಮನ್ನೇ ಲೆಕ್ಕಪರಿಶೋಧನೆಗೆ ಆಯ್ಕೆ ಮಾಡಿಕೊಳ್ಳುವಂತೆ ಪ್ರಭಾವಿ ವ್ಯಕ್ತಿಗಳ ಮೂಲಕ ಆಡಳಿತ ಮಂಡಳಿಯ ಮೇಲೆ ಒತ್ತಡ ಹೇರಬಹುದು.  ಎಲ್ಲಿಯವರೆಗೆ ಲೆಕ್ಕಪರಿಶೋಧಕರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಸಂಘಗಳಿಗೆ ಇರುತ್ತದೋ ಅಲ್ಲಿಯವರೆಗೂ ಈ ರೀತಿ ಒತ್ತಡ ತರುವ ಸಾಧ್ಯತೆಗಳೂ ಹೆಚ್ಚಾಗಿಯೇ ಇರುತ್ತವೆ. ಚಾಪೆ ಮತ್ತು ರಂಗೋಲಿ ಕೆಳಗೆ ನುಸುಳುವವರನ್ನು ಬೇಲಿ ಹಾಕಿ ತಡೆಗಟ್ಟಲಾಗುವುದಿಲ್ಲ. ‘ಈ ರೀತಿ ಸ್ವತಃ ಕೇಳಿಕೊಂಡು ಲೆಕ್ಕಪರಿಶೋಧನೆಗೆ ಬರುವ ಲೆಕ್ಕಪರಿಶೋಧಕರು, ನಾವು ಮಾಡಿದ ತಪ್ಪನ್ನು ಎತ್ತಿ ತೋರಿಸುವ ನೈತಿಕ ಹಕ್ಕನ್ನು ಎಷ್ಟರಮಟ್ಟಿಗೆ ಉಳಿಸಿಕೊಂಡಿರುತ್ತಾರೆ’ ಎಂಬುದು ಒಂದು ಸಂಘದ ಅಧ್ಯಕ್ಷರ ಪ್ರಶ್ನೆ.

ಪ್ರಸ್ತುತ ತನ್ನನ್ನು ಲೆಕ್ಕಪರಿಶೋಧನೆಗೆ ಆಯ್ಕೆ ಮಾಡಿಕೊಂಡಿದ್ದಕ್ಕೆ ಲೆಕ್ಕಪರಿಶೋಧಕ ಆ ಸಂಸ್ಥೆಗೆ, ಅದಕ್ಕಿಂತ ಹೆಚ್ಚಾಗಿ ಅಲ್ಲಿನ ಆಡಳಿತ ಮಂಡಳಿಗೆ ಧನ್ಯವಾದ ಹೇಳಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ತಪ್ಪಿದರೆ ಅವನಿಗೆ ಕೆಲಸ  ಇರದು. ಇಂತಹ ಸ್ಥಿತಿಯಲ್ಲಿ ತಯಾರಾಗುವ ಸಂಘದ ಬ್ಯಾಲೆನ್ಸ್ ಶೀಟ್‌ಗಳು ಎಷ್ಟರಮಟ್ಟಿಗೆ ನೈಜವಾಗಿರಬಹುದು ಮತ್ತು ಲೆಕ್ಕಪರಿಶೋಧಕ ತನ್ನ ವರದಿಯಲ್ಲಿ ಸಂಸ್ಥೆಯ ನೈಜ ಚಿತ್ರಣವನ್ನು ಎಷ್ಟರಮಟ್ಟಿಗೆ ಅನಾವರಣ ಮಾಡಬಹುದು ಎಂಬುದು ಕೆಲ ಪ್ರಜ್ಞಾವಂತ ಸದಸ್ಯರ ಪ್ರಶ್ನೆ. ಇದಕ್ಕೆ ಉತ್ತರಿಸುವವರು ಯಾರು?

ಈ ಕಾನೂನು ಬದಲಾವಣೆಗಿಂತ ಮೊದಲು ಸಲ್ಲಿಸಲಾಗುತ್ತಿದ್ದ ಲೆಕ್ಕಪರಿಶೋಧನಾ ವರದಿಗಳ ಜೊತೆ ಈಗ ಸಲ್ಲಿಸಲಾಗುತ್ತಿರುವ ಲೆಕ್ಕಪರಿಶೋಧನಾ ವರದಿಗಳ ತುಲನೆ ಮಾಡಲು ಒಂದು ಸಮಿತಿಯನ್ನು ನೇಮಿಸಿದರೆ, ಆ ಸಮಿತಿ ಮಾತ್ರ ಈ ಪ್ರಶ್ನೆಗೆ ಅಧಿಕೃತವಾಗಿ ಉತ್ತರಿಸಬಲ್ಲದು. ಆದರೆ ಸ್ವಲ್ಪಮಟ್ಟಿನ ಸಾಮಾನ್ಯ ಜ್ಞಾನ ಇರುವವರು ಸಹ ಸಮಿತಿಯ ಉತ್ತರ ಏನಿರಬಹುದು ಎಂಬುದನ್ನು ಮೊದಲೇ ಊಹಿಸಬಲ್ಲರು.

ಪರೀಕ್ಷೆಯಲ್ಲಿ ಆರು ಪ್ರಶ್ನೆಗಳನ್ನು ನೀಡಿ ‘ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸು’ ಎಂದು ಕೇಳುವುದಕ್ಕಿಂತ, ಹತ್ತು ಪ್ರಶ್ನೆಗಳನ್ನು ನೀಡಿ ‘ನಾಲ್ಕಕ್ಕೆ ಉತ್ತರಿಸು’ ಎಂದು ಕೇಳುವುದರಿಂದ ವಿದ್ಯಾರ್ಥಿಗೆ ಹೆಚ್ಚಿನ ಆಯ್ಕೆ ಕೊಟ್ಟಂತೆ ಆಗುತ್ತದೆ ಎಂಬುದು ಸರಿ. ನೀವು ಇನ್ನೂ ಹೆಚ್ಚಿನ ಸ್ವಾತಂತ್ರ್ಯ ಕೊಟ್ಟು ‘ನೀನು ಓದಿಕೊಂಡು ಬಂದಿರುವ ಯಾವುದಾದರೂ ಐದು ಪ್ರಶ್ನೆಗಳು ಮತ್ತು ಅವುಗಳಿಗೆ ಉತ್ತರಗಳನ್ನು ಬರೆ’ ಎಂಬ ಮಟ್ಟಿಗೆ ಸ್ವಾತಂತ್ರ್ಯ ಕೊಡುವುದಾದರೆ ಅದನ್ನೂ ಒಪ್ಪಿಬಿಡಬಹುದು. ಆದರೆ ‘ನಿನ್ನ ಉತ್ತರ ಪತ್ರಿಕೆಯ ಮೌಲ್ಯಮಾಪನಕ್ಕೆ ಬೇಕಾದವರನ್ನು ನೀನೇ ಆರಿಸಿಕೋ ಮತ್ತು ಅವರಿಗೆ ನೀನೇ ಶುಲ್ಕ ಪಾವತಿ ಮಾಡು’ ಎಂಬ ಮಟ್ಟಿಗಿನ  ಸ್ವಾತಂತ್ರ್ಯ ಕೊಡುವುದು ಎಷ್ಟು ಸರಿ? ಒಟ್ಟಿನಲ್ಲಿ ಇಂದಿನ ಸಹಕಾರ ರಂಗ ಈಗ ಅಗ್ನಿಪರೀಕ್ಷೆಗೆ ಒಳಪಟ್ಟಿದೆ. ಹೀಗಾಗಿ, ಸಾವಿರಾರು ಸಂಘಗಳಲ್ಲಿರುವ ಲಕ್ಷಾಂತರ ಸದಸ್ಯರು ಜವಾಬ್ದಾರಿಯುತ ಹೆಜ್ಜೆ ಇಡಬೇಕಾಗಿದೆ.
-ಲೇಖಕರು ಸಹಕಾರ ಸಂಘಗಳ ಲೆಕ್ಕಪರಿಶೋಧಕರು, ಸಾಗರ

ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate