অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹೈನೋದ್ಯಮಿ

ಹೈನೋದ್ಯಮಿ

ಬದುಕು ಪಾಠ ಕಲಿಸುತ್ತದೆ. ಮೆಕಾನಿಕಲ್ ಡಿಪ್ಲೊಮ ಓದಿನ ನಂತರ ಬೆಂಗಳೂರು ಕಡೆಗೆ ಮುಖ ಮಾಡಿದ್ದ ವಿನಯ್‌ಕುಮಾರ್‌ಗೂ ಜೀವನ ಪಾಠ ಸಿಕ್ಕಿತು. ಪರಿಣಾಮ, ಅವರು ಊರಿಗೆ ಮರಳಲು ನಿರ್ಧರಿಸಿದರು. 

ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳಬೇಕೆಂದು ನಿರ್ಧರಿಸಿ ತವರಿನ ಹಾದಿ ತುಳಿದು ಹೈನುಗಾರಿಕೆ ಆರಂಭಿಸಿ, ಇದೀಗ ಈ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮಾದರಿ ಹೈನೋದ್ಯಮಿಯಾಗಿ ಬೆಳೆಯುತ್ತಿದ್ದಾರೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ರಾಂಪುರ ಗ್ರಾಮದ ಎಸ್.ಎನ್.ವಿನಯ್‌ಕುಮಾರ್. 

ಯಾರೂ ಒಪ್ಪಿರಲಿಲ್ಲ: ಪ್ರಾರಂಭದಲ್ಲಿ ಹೈನುಗಾರಿಕೆಯನ್ನು ಮಾಡುತ್ತೇನೆಂದಾಗ ಹಿತೈಷಿಗಳು ಬೇರೆ ಕ್ಷೇತ್ರ ಆಯ್ದುಕೊಳ್ಳಲು ಸೂಚಿಸಿದರು. ಆಟೋಮೊಬೈಲ್, ಫರ್ಟಿಲೈಸರ್ ಅಂಗಡಿ, ದಲ್ಲಾಳಿ ಅಂಗಡಿ ಹೀಗೆ ನಾನಾ ಕ್ಷೇತ್ರಗಳ ಬಗ್ಗೆ ಮಾಹಿತಿ ನೀಡಿದರು. ಆದರೆ ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭ ತರುವ ಹೈನುಗಾರಿಕೆ ಮಾಡುವುದೇ ಸರಿಯೆಂದು ಬಲವಾಗಿ ನಂಬಿಕೊಂಡಿದ್ದ ವಿನಯ್‌ಕುಮಾರ್, ಅದಕ್ಕೇ ಬದ್ಧವಾಗಿ ನಡೆದುಕೊಂಡರು. 

ಸ್ಥಳೀಯ ಬ್ಯಾಂಕೊಂದರಲ್ಲಿ ಆರ್ಥಿಕ ನೆರವು ಪಡೆದು ಹೈನುಗಾರಿಕೆ ಪ್ರಾರಂಭಿಸಿದ ವಿನಯ್, ತಮ್ಮ 1.5 ಎಕರೆ ಜಮೀನಿನಲ್ಲಿ 55್ಡ 33 ಅಡಿ ವಿಸ್ತೀರ್ಣದ ಕೊಟ್ಟಿಗೆ ನಿರ್ಮಿಸಿದರು. ಈ ಮೊದಲೇ ಇದ್ದ ಜಮೀನಿನಲ್ಲಿನ ಕೊಳವೆ ಬಾವಿಯ ನೀರು ಹೈನುಗಾರಿಕೆಗೆ ಅನುಕೂಲಕರವಾಗಿತ್ತು. ಪ್ರಾರಂಭದಲ್ಲಿ ಐದು ಜೆರ್ಸಿ ಆಕಳುಗಳಿದ್ದವು. ಇತ್ತೀಚೆಗೆ ಮೂರು ಎಚ್.ಎಫ್.ತಳಿಯ ಹಸುಗಳು ಇವರ ಕೊಟ್ಟಿಗೆ ಸೇರಿದ್ದು, ಸದ್ಯ ಒಟ್ಟು ಎಂಟು ಹಸುಗಳು ಹಾಗೂ ಎರಡು ಕರುಗಳಿವೆ. 

ಹಸುಗಳ ಆರೈಕೆಗೆ ಆದ್ಯತೆ: ಪ್ರತಿ ಹಸುವಿಗೆ ನಿತ್ಯ ಬೆಳಗ್ಗೆ ಮತ್ತು ಸಂಜೆ ಹಾಲು ಕರೆಯುವುದಕ್ಕಿಂತ ಮೊದಲು 3 ಕೆಜಿಯಷ್ಟು ಹಿಂಡಿಯನ್ನು ನೀಡಲಾಗುತ್ತದೆ. 10 ಲೀಟರ್‌ಗೂ ಅಕಾ ಹಾಲು ಕರೆಯುವ ಹಸುಗಳಿಗೆ ಐದು ಕೆಜಿಯಷ್ಟು ಹಿಂಡಿಯನ್ನು ನೀಡಲಾಗುತ್ತದೆ. ರಾಸುಗಳಿಗೆ ಬೆಳಗ್ಗೆ ರಾಗಿ ಹುಲ್ಲು, ರಾತ್ರಿ ನೆಲ್ಲು ಹುಲ್ಲು ನೀಡಲಾಗುತ್ತದೆ. ಮಧ್ಯಾಹ್ನ ಹಸಿ ಸೊಪ್ಪಿಗೆ ಒದಗಿಸಲಾಗುತ್ತದೆ. ಸೊಪ್ಪನ್ನು ಯಂತ್ರದಲ್ಲಿ ತುಂಡು ತುಂಡಾಗಿ ಕತ್ತರಿಸಿ ನೀಡುವುದರಿಂದ ವೇಸ್ಟ್ ತೆಗೆಯುವ ಸಮಸ್ಯೆಯಿಲ್ಲ. ಇವರ ಜಮೀನಿನ ಮುಕ್ಕಾಲು ಎಕರೆಯಲ್ಲಿ ನೇಪಿಯರ್ ಹುಲ್ಲು ಬೆಳೆಯಲಾಗಿದೆ. 

ಹಸುಗಳನ್ನು ಮಧ್ಯಾಹ್ನದ ಸಮಯದಲ್ಲಿ ತೊಳೆಯಲಾಗುತ್ತದೆ. ಬೇಸಿಗೆಯಲ್ಲಾದರೆ ಎರಡು ಬಾರಿ ತೊಳೆಯಬೇಕಾಗುತ್ತದೆ ಎನ್ನುವ ವಿನಯ್, ಕೊಟ್ಟಿಗೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ಇದರಿಂದ ಹಸುಗಳ ಪಾದಗಳು ರೋಗ ಬಾಧೆಗೆ ಸಿಲುಕದಂತೆ ಗಮನ ಕೊಡಲಾಗಿದೆ. ಸೊಳ್ಳೆಗಳಿಂದ ರಕ್ಷಣೆಯನ್ನು ನೀಡಲು ಸುತ್ತಲೂ ಪರದೆಯನ್ನು ಹಾಕಲಾಗಿದೆ. 

ಎಚ್.ಎಫ್. ತಳಿಯ ಹಸುಗಳು ಸೂಕ್ಷ್ಮ ಸ್ವಭಾವದವುಗಳಾಗಿರುವುದರಿಂದ ಅವುಗಳಿಗಾಗಿ ತಲಾ 2,500 ಸಾವಿರ ರೂ. ಕೊಟ್ಟು ಖರೀದಿಸಿದ 6್ಡ 4 ಅಡಿಯ 8 ಮ್ಯಾಟ್‌ಗಳನ್ನು ಬಳಸಲಾಗಿದೆ. ಇದರಿಂದ ಹಸುಗಳಿಗೆ ಗಾಯವಾಗುವುದಿಲ್ಲ. ಹಾಸಿಗೆ ಇದ್ದಂತೆ ಅವುಗಳಿಗೆ ಹಿತವೆನಿಸುತ್ತದೆ. ಜತೆಗೆ ನೆಲದ ಶಾಖದಿಂದಲೂ ರಕ್ಷಣೆ ಸಿಗುತ್ತದೆ ಎನ್ನುತ್ತಾರೆ ವಿನಯ್. 

ಬೆಂಗಳೂರಿನ ಶಿಫ್ಟ್ ವೈಸ್ ಡ್ಯೂಟಿಯಲ್ಲಿ ಬೆಳಗ್ಗೆ ನಾಲ್ಕಕ್ಕೆ ಬಿಟ್ಟರೆ ಮಧ್ಯಾಹ್ನ ಮೂರು ಗಂಟೆಗೆ ಮನೆಗೆ ವಾಪಸ್ ತಲುಪುತ್ತೇವೆ. ಅಲ್ಲಿಯದು ಯಾಂತ್ರಿಕ ಜೀವನ. ಯಾವುದಕ್ಕೂ ಸಮಯವಿರುವುದಿಲ್ಲ. ಇಲ್ಲಿ ದಿನದಲ್ಲಿ ಬೆಳಗ್ಗೆ ಎರಡು, ಸಾಯಂಕಾಲ ಎರಡು ತಾಸು ಮೀಸಲಿರಿಸಿದರೆ ಸಾಕು. ಯಾವುದೇ ಒತ್ತಡವಿಲ್ಲದೆ ಆರಾಮವಾಗಿರಬಹುದು. ಮುಂದೆ ಹೆಚ್ಚಿನ ಹಾಲನ್ನು ಹಿಂಡುವ ತಳಿಗಳ ಹಸುಗಳನ್ನು ತಂದು ಇನ್ನೂ ದೊಡ್ಡ ಮಟ್ಟದಲ್ಲಿ ಹೈನೋದ್ಯಮದಲ್ಲಿ ತೊಡಗಿಸಿಕೊಳ್ಳುವ ಗುರಿಯಿದೆ ಎನ್ನುವ ವಿನಯ್‌ಕುಮಾರ್ ದೂ.ಸಂ. 9591240225.

ಪ್ರತಿ ತಿಂಗಳು 23000 ರೂ. ಲಾಭದ ಲೆಕ್ಕ: ಕೊಟ್ಟಿಗೆಯಲ್ಲಿರುವ ಐದು ಹಸುಗಳಿಂದ ಬೆಳಗ್ಗೆ 22 ಲೀ., ಸಾಯಂಕಾಲ 22 ಲೀಟರ್ ಹಾಲು ಕರೆಯ ಲಾಗುತ್ತಿದೆ. ಹಾಲು ಮಾರಾಟದಿಂದ ಪ್ರತಿ ತಿಂಗಳು 38 ಸಾವಿರ ರೂ. ಸಿಗುತ್ತದೆ. 15 ಸಾವಿರ ಖರ್ಚು ಕಳೆದರೂ 23 ಸಾವಿರ ರೂ. ನಿವ್ವಳ ಲಾಭ ಉಳಿಯುತ್ತದೆ. ಹಾಲನ್ನು ಗ್ರಾಮದಲ್ಲಿರುವ ಹಾಲಿನ ಡೇರಿಗೆ ಹಾಕಲಾಗುತ್ತದೆ. ಹಸುಗಳಿಂದ ಕನಿಷ್ಠವೆಂದರೂ ವರ್ಷಕ್ಕೆ 60 ಲೋಡ್ ಗೊಬ್ಬರ ಸಂಗ್ರಹವಾಗುತ್ತದೆ. ಪ್ರತಿ ಲೋಡಿಗೆ 3500-4000 ರೂ. ಸಿಗುತ್ತದೆ. ಇದರಿಂದಲೇ ವರ್ಷಕ್ಕೆ ಸುಮಾರು 2 ಲಕ್ಷ ರೂ. ಸಿಗುತ್ತದೆ ಎನ್ನುತ್ತಾರೆ ವಿನಯ್. 

ಹೈನುಗಾರಿಕೆಯಲ್ಲಿ ಯಾವುದೇ ರಿಸ್ಕ್ ಇಲ್ಲ. ಇದರಲ್ಲಿ ಯಾರ ಮೇಲೂ ಅವಲಂಬನೆಯಾಗುವ ಅಗತ್ಯವಿಲ್ಲ. ನಾವೇ ಸ್ವತಂತ್ರವಾಗಿ ಮುಂದೆ ಬರಬಹುದು. ಬೇರೆ ಕ್ಷೇತ್ರಗಳಿಗೆ ಹೆಚ್ಚಿನ ಬಂಡವಾಳ ಬೇಕಾಗುತ್ತಿತ್ತು. ಕನಿಷ್ಠ 15-16 ಲಕ್ಷ ರೂ. ಅಗತ್ಯವಿತ್ತ್ತು. ಹೈನುಗಾರಿಕೆ ಮಾಡಲು ಅಷ್ಟೊಂದು ಹೂಡಿಕೆಯ ಅವಶ್ಯಕತೆಯಿರಲಿಲ್ಲ. ಕಡಿಮೆ ಹಣ ವಿನಿಯೋಗಿಸಿ ಹೆಚ್ಚಿನ ಗಳಿಕೆ ಇದರಿಂದ ಸಾಧ್ಯ ಎಂಬ ಲೆಕ್ಕಾಚಾರದ ಆಧಾರದಲ್ಲಿ ಹೈನುಗಾರಿಕೆಗೆ ಮುಂದಾದೆ. -ವಿನಯ್‌ಕುಮಾರ, ಹೈನೋದ್ಯಮಿ

ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.

ಕೊನೆಯ ಮಾರ್ಪಾಟು : 7/21/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate