ಖುಷ್ಕಿ ಪ್ರದೇಶಕ್ಕೆ ಸೂಕ್ತವಾದ ಬೆಳೆಗಳು ಮತ್ತು ಬೆಳೆಯ ಪದ್ಧತಿಗಳು.
ಆಯಾ ಪ್ರದೇಶದಲ್ಲಿ ಬೀಳುವ ಮಳೆ ಮತ್ತು ಮಣ್ಣಿನ ಗುಣಧರ್ಮವನ್ನು ಗಮನದಲ್ಲಿಟ್ಟುಕೊಂಡು ಬೆಳೆಯುವ ಬೆಳೆಗಳು, ತಳಿಗಳ ಆಯ್ಕೆ ಹಾಗೂ ಬೆಳೆ ಪದ್ಧತಿಯನ್ನು ಅನುಸರಿಸಿದಾಗ ಹೆಚ್ಚಿನ ಲಾಭ ಪಡೆಯಲು ಸಾಧ್ಯ. ದಕ್ಷಿಣ ಕರ್ನಾಟಕದಲ್ಲಿ ಪ್ರಮುಖವಾಗಿ ಕೆಂಪು ಮಣ್ಣಿನ ಭೂಮಿ ಇದ್ದು, ಮಳೆಯ ನೀರನ್ನು ಬೆಳೆಗೆ ಲಭ್ಯವಾಗುವಂತೆ ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಕಡಿಮೆಯೆಂದು ಹೇಳಬಹುದು. 15 ದಿವಸಗಳಲ್ಲಿ ಮಳೆಯಾಗದಿದ್ದರೆ ಬೆಳೆಗಳು ನೀರಿನ ಕೊರತೆಯಿಂದ ಬಾಡಲು ಪ್ರಾರಂಭವಾಗುತ್ತವೆ. ಆದ್ದರಿಂದ ಅಧಿಕ ಇಳುವರಿ ಪಡೆಯಬೇಕಾದರೆ ಮಣ್ಣು ಮತ್ತು ನೀರಿನ ಸಂರಕ್ಷಣೆ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ.
ಕೆಂಪು ಮಣ್ಣಿನಲ್ಲಿ ರಂಜಕ, ಸಾರಜನಕ ಹಾಗೂ ಸಾವಯವ ಅಂಶಗಳು ಕಡಿಮೆಯಿರುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಲು ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಕೆರೆಗೋಡು ಮತ್ತು ಇತರೆ ಸಾವಯವ ವಸ್ತುಗಳನ್ನು ಭೂಮಿಗೆ ಸತತವಾಗಿ ಸೇರಿಸುವ ಮೂಲಕ ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳನ್ನು ಕಾಪಾಡಿಕೊಂಡು ಸುಸ್ಥಿರ ಇಳುವರಿಯನ್ನು ಪಡೆಯಲು ಸಾಧ್ಯ. ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ಬೆಳೆ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ.
ಬೆಳೆ ಪದ್ಧತಿಗಳು ಮೇಲೆ ತಿಳಿಸಿರುವಂತೆ ಮಣ್ಣಿನ ಆಳ, ಮಣ್ಣಿನ ಫಲವತ್ತತೆ ಹಾಗೂ ಮಣ್ಣಿನಲ್ಲಿ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ, ಬೀಳುವ ಮಳೆಯ ಪ್ರಮಾಣ ಕಾಲಾವಧಿ, ಬೆಳೆ ತರುವ ಆದಾಯದ ಮೇಲೆ ಬೆಳೆ ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ.
ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು
ಕೊನೆಯ ಮಾರ್ಪಾಟು : 2/15/2020