অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಾಂಪೋಸ್ಟ್ ತಯಾರಿಸುವ ಪದ್ಧತಿಗಳು

ಬೆಂಗಳೂರು ಪದ್ಧತಿ.

ಈ ಕ್ರಮವನ್ನು ಶ್ರೀ. ಸಿ. ಎನ್. ಆಚಾರ್ಯ ರವರು 1939 ರಲ್ಲಿ ಪ್ರಚಾರಪಡಿಸಿದರು. ಇದು ಕಡಿಮೆ ಮಳೆ ಬೀಳುವ ಪ್ರದೇಶಗಳಿಗೆ ಹಾಗೂ ನಗರ ಪ್ರದೇಶಗಳಲ್ಲಿ ಕಾಂಪೋಸ್ಟ್ ಮಾಡಿಕೊಳ್ಳಲು ಸೂಕ್ತ ಪದ್ಧತಿ. ಈ ಪದ್ಧತಿಯಿಂದ ಕಾಂಪೋಸ್ಟ್ ತಯಾರಿಸಲು 8-9 ತಿಂಗಳು ಬೇಕಾಗುತ್ತದೆ. ಈ ಪದ್ಧತಿಯಲ್ಲಿ 3-10 ಮೀ. ಉದ್ದ, 2 ಮೀ, ಅಗಲ ಹಾಗೂ ಒಂದು ಮೀ. ಆಳವಿರುವ ಕಂದಕಗಳನ್ನು ತೋಡಬೇಕು. ಈ ಕಂದಕದ ಕೆಳಭಾಗದಲ್ಲಿ ಅನೇಕ ಬಗೆಯ ಸಸ್ಯ ತ್ಯಾಜ್ಯ ವಸ್ತುಗಳನ್ನು ದಪ್ಪ ಪದರವಾಗಿ ಹರಡಿ ನೀರನ್ನು ಚಿಮುಕಿಸಬೇಕು. ನಂತರ ದನಕರುಗಳ ಸಗಣಿ ಹಾಗೂ ಮೂತ್ರಯುಕ್ತ ರಾಡಿಯನ್ನು ದಪ್ಪವಾಗಿ ಪದರಗಳಲ್ಲಿ ಹಾಕಬೇಕು. ಅದರ ಮೇಲೆ 2-5 ಮಿ.ಮೀ. ದಪ್ಪವಾಗಿ ಮಣ್ಣನ್ನು ಹಾಕಬೇಕು. ಈ ಕ್ರಮವನ್ನು ಭೂಮಿಯಿಂದ 45-60 ಸೆಂ. ಮೀ. ಮೇಲೆ ಬರುವಂತೆ ಪುರಾವರ್ತಿಸಬೇಕು. ಕೊನೆಯಲ್ಲಿ ಮಣ್ಣಿನ ರಾಡಿಯಿಂದ 2 ಅಂಗುಲ ದಪ್ಪ ಮತ್ತೆ ಹಾಕಿ ಮುಚ್ಚಬೇಕು. ಗುಂಡಿ ತುಂಬಿದ ಒಂದು ವಾರದ ಕಾಲ ಗಳಿಯ ಆಶ್ರಯದಲ್ಲಿ ಅನಂತರ ಗಾಳಿ ಆಶ್ರಯವಿಲ್ಲದೆ ಸೂಕ್ಷ್ಮಜೀವಿಗಳ ಕ್ರಿಯೆಯಿಂದ ಸಾವಯವ ವಸ್ತುಗಳು ಕಳಿಯುತ್ತವೆ. ಕಾಂಪೋಸ್ಟ್ ತಯಾರಿಸಲು ಬಳಸುವ ವಸ್ತುಗಳು: ನಗರ ತ್ಯಾಜ್ಯ ವಸ್ತುಗಳು, ಮನುಷ್ಯರ ತ್ಯಾಜ್ಯ ಮತ್ತು; ಮಣ್ಣು.

ತೊಟ್ಟಿ ಪದ್ಧತಿ (ಜಪಾನ್ ಪದ್ಧತಿ)

ಈ ಪದ್ಧತಿಯಲ್ಲಿ ಗುಂಡಿಗಳ ಬದಲು ಕಲ್ಲು ಚಪ್ಪಡಿ ಬಳಸಿ ಆಯತಾಕಾರದ ತೊಟ್ಟಿಗಳನ್ನು ನಿರ್ಮಿಸಬೇಕು. ಆಯ್ಕೆ ಮಾಡಿಕೊಂಡ ಸ್ಥಳದಲ್ಲಿ 45-50 ಸೆಂ.ಮೀ. ಆಳದ ಕಂದಕವನ್ನು ಸುಮಾರು 4-10 ಮೀ. ಉದ್ದ 2 ಮೀ ಅಗಲ ಮಾಡಿಕೊಂಡು ಅದರಲ್ಲಿ 1.5 - 1.8 ಮೀ. ಎತ್ತರದ ಚಪ್ಪಡಿಗಳನ್ನು ನಿರ್ಮಿಸಬೇಕು. ಎರಡು ಚಪ್ಪೆಇಗಳ ನಡುವೆ 3 - 5 ಸೆಂ.ಮೀ. ಸಂದು ಬಿಡುವಂತೆ ನೋಡಿಕೊಳ್ಳಬೇಕು. ಇದನ್ನು ಉತ್ತರ ದಕ್ಷಣಾಭಿಮುಖವಾಗಿ ನಿಲ್ಲಿಸುವುದರಿಂದ ಗಾಳಿಯ ಸಂಚಾರ ಚೆನ್ನಾಗಿ ಆಗುತ್ತದೆ.

ತೊಟ್ಟಿಯ ಕೆಳಭಾಗವನ್ನು ದಮ್ಮಸ್‍ನಿಂದ ಕಟ್ಟುವ ಮೂಲಕ ಕೆಳಭಾಗದ ಭೂಮಿಯನ್ನು ಗಟ್ಟಿಯಾಗುವಂತೆ ಮಾಡಿಕೊಳ್ಳಬೇಕು. ಹಾಗೂ ಸಗನಿಯನ್ನು ನೀರಿನಲ್ಲಿ ಚೆನ್ನಾಗಿ ಕದಡಿಕೊಂಡು ತೆಳುವಾಗಿ ಕೆಳಭಾಗವನ್ನು ಸಾರಿಸಿಕೊಳ್ಳುವುದು ಸೂಕ್ತ. ನಿಧಾನವಾಗಿ ವಿಭಜನೆಯಾಗುವ ವಸ್ತುಗಳಾದ ತೆಂಗಿನ ಮೊಟ್ಟೆ, ಗರಿ, ತೆಂಗಿನ ನಾರು, ಜೋಳದ ಕಡ್ಡಿ ಇವುಗಳನ್ನು ಸಣ್ಣ ಚೂರುಗಳಾಗಿ ಮಾಡಿಕೊಂಡು ಮೊದಲನೆಯ ಪದರವಾಗಿ ಸುಮಾರು 15 ಸೆಂ.ಮೀ. ವರೆಗೂ ಹರಡಬೇಕು. ಆನಂತರ ಚೆನ್ನಾಗಿ ನೀರು ಚಿಮುಕಿಸಿ, ಸಗಣಿಯ ಬಗ್ಗಡ ಮಾಡಿಕೊಂಡು ತೆಳುವಗಿ ಹರಡಿ ಮೇಲೆ ತೆಳು ಪದರವಾಗಿ ಮಣ್ಣನ್ನು ಹರಡಬೇಕು. ಮೊದಲನೇ ಪದರದ ವಸ್ತುಗಳಲ್ಲಿ ನಾರು ಮತ್ತು ಸೆಲ್ಯೂಲೋಸ್ ಅಂಶ ಜಾಸ್ತಿ ಇರುವುದರಿಂದ ಸೂಕ್ಷ್ಮಜೀವಿಗಳಾದ ಪ್ಲೊರೋಟಸ್, ಅಸ್ಪರ್‍ಜಿಲ್ಲಸ್, ಟ್ರೈಕೋಡರ್ಮ ಮುಂತಾದವುಗಳ ಶಿಲೀಂಧ್ರಗಳನ್ನು ಸಗಣಿಯ ಬಗ್ಗಡದ ಜೊತೆಯಲ್ಲಿ ಸೇರಿಸಿ ಚಿಮುಕಿಸಬೇಕು.

ಎರಡನೆಯ ಪದರವಾಗಿ ಒಣ ಹುಲ್ಲು, ಕಳೆ, ನೆಲಗಡಲೆ ಸಿಪ್ಪೆ, ಸತ್ತೆ, ಸೋಯಾಅವರೆ ಇತ್ಯಾದಿ ಬೆಳೇಗಳ ಅವಶೇಷಗಳನ್ನು ಸುಮಾರು 25 - 30 ಸೆಂ.ಮೀ. ನಷು ಮಂದದ ಪದರವಾಗಿ ಹರಡಬೇಕು. ಪದರವನ್ನು ಹರಡುತ್ತಿರುವಾಗ ಆಗಾಗ್ಗೆ ನೀರು ಹಾಕುತ್ತಿರಬೇಕು. ಅನಂತರ ಸಗಣಿಯ ಬಗ್ಗಡ, ಮಣ್ಣು ಸೂಕ್ಷ್ಮಜೀವಿಗಳ ಮಿಶ್ರಣವನ್ನು ತೆಳುವಾಗಿ ಹರಡಬೇಕು. ಮೂರನೆಯ ಪದರದಲ್ಲಿ ಒಕ್ಕಣೆ ಮಾಡುವ ಕಾಲದಲ್ಲಿ ಕಣದಲ್ಲಿ ಶೇಖರವಾಗುವ ತ್ಯಾಜ್ಯ ವಸ್ತುಗಳನ್ನು ಸುಮಾರು 10 - 15 ಸೆಂ.ಮೀ. ಮಂದದ ಪದರವಾಗಿ ಹರಡಬೇಕು. ಇಲ್ಲಿ ಹಸಿರೆಲೆ ಗೊಬ್ಬರವನ್ನು ಮಿಶ್ರಮಾಡಿಕೊಂಡು ತುಂಬುವುದು ಬಹಳ ಸೂಕ್ತ. ನಾಲ್ಕನೆಯ ಪದರದಲ್ಲಿ ಲಭ್ಯವಿರುವ ಹಸಿರೆಲೆ ಗೊಬ್ಬರಗಳು, ಲಭ್ಯವಿದ್ದರೆ ಹೋಳಿ ಗೊಬ್ಬರ, ರೇಷ್ಮೆ ಹುಳುವಿನ ಹಿಕ್ಕೆ, ತ್ಯಾಜ್ಯ ವಸ್ತುಗಳು, ಕೆರೆಗೋಡು, ಬಯೋಗ್ಯಾಸ್ ಬಗ್ಗೆ ಹೀಗೆ ಲಭ್ಯವಿರುವ ವಸ್ತುಗಳ ಮತ್ತೊಂದು ಪದರವನ್ನು ಸುಮಾರು 25-30 ಸೆಂ.ಮೀ. ನಷ್ಟು ಮಂದವಾಗಿ ಹರಡಬೇಕು. ಸಗಣಿ, ಮಣ್ಣು ಹಾಗೂ ಸೂಕ್ಷ್ಮಜೀವಿಗಳ ಮಿಶ್ರಣವನ್ನು ತೆಳುವಾಗಿ ಹರಡುವುದನ್ನು ಪುನರಾವರ್ತಿಸಬೇಕು. 5 ನೇ ಪದರವಾಗಿ ಜಾನುವಾರುಗಳ ಕೊಟ್ಟಿಗೆಯಲ್ಲಿ ಲಭ್ಯವಾಗುವ ಸಗಣಿ, ದನಕರುಗಳು ತಿಂದು ಬಿಟ್ಟ ಮೇವಿನ ಭಾಗ, ಗಂಜಲ ಇವೆಲ್ಲವನ್ನೂ ಸುಮಾರು 25-30 ಸೆಂ.ಮೀ. ಮಂದದವರೆಗೂ ಹರಡಿ ನೀರನ್ನು ಚಿಮುಕಿಸಬೇಕು. ಹೀಗೆ ತೊಟ್ಟಿಯಲ್ಲಿ ಸುಮಾರು 15-30 ಸೆಂ.ಮೀ. ಎತ್ತರ ತೊಟ್ಟಿಯ ಮೇಲ್ಭಾಗಕ್ಕೆ ಬಂದಾಗ ಗಟ್ಟಿಯಾಗಿ ಸಗಣಿ ಬಗ್ಗಡ ಮಾಡಿಕೊಂಡು 6 ನೇ ಪದರವಾಗಿ ಹಾಕಿ ಸರಿಸಬೇಕು. ತೊಟ್ಟಿಯನ್ನು ತುಂಬುವಾಗ ಒಂದು ಕಡೆ ಸ್ವಲ್ಪ ಸ್ಥಳವನ್ನು ಬಿಟ್ಟುಕೊಂಡಿದ್ದಲ್ಲಿ ತಿರುವಿ ಹಾಕಲು ಅನುಕೂಲವಾಗುತ್ತದೆ. ಆಗಾಗ್ಗೆ ನೀರು ಚಿಮುಕಿಸುವುದು ಈ ವಿಧಾನದಲ್ಲಿ ಅವಶ್ಯಕ.

ನಾಡೆಪ್ ಪದ್ಧತಿ :

9 ಅಡಿ ಉದ್ದ, 9 ಅಡಿ ಅಗಲ ಮತ್ತು 5 ಅಡಿ ಎತ್ತು ಇರುವ ತೊಟ್ಟಿಯನ್ನು ನಿಮೀಸಬೇಕು. ಈ ಅಳತೆಯನ್ನು ತ್ಯಾಜ್ಯ ವಸ್ತು ಮತ್ತು ಜಾಗದ ಅನುಕೂಲ ನೋಡಿಕೊಂಡು ಬದಲಾಯಿಸಬಹುದು. ತೊಟ್ಟಿಯನ್ನು ಕಲ್ಲು ಚಪ್ಪಡಿಯಿಂದ, ತೆಂಗಿನ ಮರದ    ಗರಿಗಳಿಂದ ಅಥವಾ ಜೋಳದ ದಂಟಿನಿಂದ ನಿರ್ಮಿಸಬಹುದು. ತೊಟ್ಟಿಯ ತಳಭಾಗಕ್ಕೆ ಸಾವಯವ ವಸ್ತುಗಳಾದ ಜೋಳದ ಕಡ್ಡಿ, ಸುಬಾಬುಲ್ ಸೊಪ್ಪು, ಸೀಮೇತಂಗಡಿ ಸೊಪ್ಪು, ಮುಸುಕಿನ ಜೋಳ ಇತ್ಯಾದಿಗಳನ್ನು ಒಂದು ಅಡಿಯಿಂದ ಎರಡು ಅಡಿಗಳವರೆಗೆ ಹರಡಿ ನಂತರ ಸಗಣಿ ನೀರು ಚಿಮುಕಿದಬೇಕು. ಅದೇ ರೀತಿ ಮೂರು ಪದರದಂತೆ ತೊಟ್ಟಿಯ ತಲೆಭಾಗದವರೆಗೂ ತುಂಬಬೇಕು. ನಂತರ ಅದರ ಮೇಲೆ ಅರ್ಧದಿಂದ ಲಂದಿಂಚು ಎತ್ತರ ಗೋಡುಮಣ್ಣನ್ನು ಹಾಕಿ ಹುಲ್ಲು, ಎಲೆ ಕಸಕಡ್ಡಿಯನ್ನು ಸೇರಿಸಿ ಒಂದು ತಿಂಗಳು ಹಾಗೆ ಬಿಡಿ. ವಾರಕ್ಕೊಮ್ಮೆ ನೀರು ಚಿಮುಕಿಸಿ ತೇವಾಂಶ ಶೇ. 50-60 ಇರುವಂತೆ ನೋಡಿಕೊಳ್ಳಬೇಕು. ಮೂರು ತಿಂಗಳ ನಂತರ ತೊಟ್ಟಿಯಲ್ಲಿರುವ ಕಸ ಕೊಳೆತು ಉತ್ತಮ ಸಾವಯವ ಗೊಬ್ಬರ ಸಿದ್ಧ.

ಕಾಂಪೋಸ್ಟ್ ತಯಾರಿಸುವ ಇತರೆ ಪದ್ಧತಿಗಳು :  ಗುಡ್ಡೆ ಪದ್ಧತಿ, ಫಾಸ್ಪೊಕಾಂಪೋಸ್ಟ್, ತೆಂಗಿನ ನಾರಿನ ಕಾಂಪೋಸ್ಟ್, ಪ್ರೆಸ್‍ಮಡ್ ಕಾಂಪೋಸ್ಟ್, ಕಬ್ಬಿನ ತರಗಿನ ಕಾಂಪೋಸ್ಟ್. ಇತ್ಯಾದಿ.

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

ಕೊನೆಯ ಮಾರ್ಪಾಟು : 7/18/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate