অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪಂಚಗವ್ಯ ಮತ್ತು ಜೀವಾಮೃತ

ಪಂಚಗವ್ಯ  :

ಪಂಚಗವ್ಯ ಎಂಬ ಪದವು ಸಾವಯವ ಕೃಷಿಯಲ್ಲಿ ಬಹುವಾಗಿ ಬಳಕೆಯಾಗುವ ಪದ. ಸಂಸ್ಕøತದಲ್ಲಿ ಪಂಚಗವ್ಯ ಎಂದರೆ ಆಕಳಿಂದ ಬರುವ ಐದು ಉತ್ಪನ್ನಗಳ (ಆಕಳ ಸಗಣಿ, ಗಂಜಳ, ಹಾಲು,ಮೊಸರು ಮತ್ತು ತುಪ್ಪವನ್ನು 5:3:2:2:1 ರ ಅನುಪಾತದಲ್ಲಿ) ಮಿಶ್ರಣ ಎಂದರ್ಥ. ಈ ಎಲ್ಲಾ 5 ಉತ್ಪನ್ನಗಳನ್ನು ಬಿಡಿಯಾಗಿ ಗವ್ಯ ಎಂದು ಮತ್ತು ಒಟ್ಟಾಗಿ ಪಂಚಗವ್ಯ ಎಂದು ಕರೆಯುತ್ತಾರೆ. ಪಂಚಗವ್ಯದಲ್ಲಿ ಮುಖ್ಯ ಪೋಷಕಾಂಶಗಳು ಮತ್ತು ಬೆಳವಣಿಗೆ ಚೋದಕಗಳಿದ್ದು (ಇಂಡೋಲ್ ಅಸಿಟಿಕ್ ಆಮ್ಲ ಮತ್ತು ಗೊಬ್ಬರ್ಲಕ್ ಆಮ್ಲ) ಬೆಳೆಯ ಬೆಳವಣಿಗೆಗೆ ಸಹಕಾರಿಯಾಗುತ್ತವೆ.

ಪಂಚಗವ್ಯದ ವಸ್ತುಗಳನ್ನು ಮಿಶ್ರಣ ಮಾಡಿ 7-9 ದಿನಗಳ ಕಾಲ ಮಣ್ಣಿನ ಹರವಿಯಲ್ಲಿ ಪರಿಪಾಕಾವಸ್ತೆಗೆ ಬಿಡಬೇಕು. ಪ್ರತಿದಿನವೂ 7-9 ದಿನಗಳ ಕಾಲ ಬೆಳಿಗ್ಗೆ ಮತ್ತು ಸಂಜೆಯ ವೇಳೆಯಲ್ಲಿ 2 ಬಾರಿ ಕೋಲಿನಿಂದ ಬಲದಿಂದ ಎಡಕ್ಕೆ ಎಡದಿಂದ ಬಲಕ್ಕೆ ವೃತ್ತಾಕಾರವಾಗಿ ತಿರುಗಿಸಬೇಕು. ಇದನ್ನು ಮುಚ್ಚಳದಿಂದ ಮುಚ್ಚಿ ನೆರಳಲ್ಲಿ ಶೇಖರಿಸಬೇಕು

ಬಳಸುವ ಹಂತ / ಅವಧಿ

  1. ಹೂ ಬಿಡುವ ಮುಂಚಿನ ಹಂತ :
  2. 15 ದಿನಗಳಿಗೊಮ್ಮೆ ಬೆಳೆಯ ಅವಧಿಗೆ ಅನುಗುಣವಾಗಿ 2 ಬಾರಿ ಸಿಂಪರಣೆಯನ್ನು ಮಾಡಬೇಕು. ಶೇ. 1 ರಷ್ಟು ಪಂಚಗವ್ಯವನ್ನು ಬಿತ್ತನೆ ಮಾಡಿದ 30 ದಿನಗಳವರೆಗಿನ ಸಸ್ಯಗಳಿಗೆ ಸಂಪಡಿಸಬೇಕು. ಮತ್ತು ಶೇ. 3 ರಷ್ಟು ಪಂಚಗವ್ಯವನ್ನು ಬಿತ್ತನೆ ಮಾಡಿದ 30 ದಿನಗಳ ನಂತರದ ಬೆಳೆಯ ಹಂತಗಳಿಗೆ ಸಿಂಪಡಿಸಬೇಕು.

  3. ಹೂ ಬಿಡುವ ಮತ್ತು ಕಾಯಿ ಹೂಡುವ ಹಂತ : 10 ದಿನಗಳಿಗೊಮ್ಮೆ 2 ಬಾರಿ ಸಿಂಪರಣೆ ಮಾಡಬೇಕು.
  4. ಹಣ್ಣು / ಕಾಯಿ ಬಲಿಯುವ ಹಂತ :  ಒಂದು ಅವಧಿಗೆ ಕಾಯಿ ಬಲಿಯುವ ಅವಧಿಯಲ್ಲಿ ಸಿಂಪಡಿಸಬೇಕು.

ಬೀಜೋಪಚಾರ :

ಶೇ. 3 ರ ಪಂಚಗವ್ಯ ದ್ರಾವಣವನ್ನು ಬೀಜೋಪಚಾರ ಅಥವಾ ಸಸಿಗಳನ್ನುನಾಟಿ ಮಾಡುವುದಕ್ಕಿಂತ ಮುಂಚೆ ಪಂಚಗವ್ಯ ದ್ರಾವಣದಲ್ಲಿ ಅದ್ದಿ ನಾಟಿ ಮಾಡಬಹುದು. ದ್ರಾವಣದಲ್ಲಿ 20 ನಿಮಿಷ ಅದ್ದುವುದು ಸೂಕ್ತ, ಶುಂಠಿ ಮತ್ತು ಅರಿಶಿಣ ಬೆಳೆಗಳ ಬೇರುಕಾಂಡ ಮತ್ತು ಕಬ್ಬು ಬೆಳೆಯ ಬೀಜ ಬೇರನ್ನು ನಾಟಿ ಮಾಡುವುದಕ್ಕಿಂತ ಮುಂಚೆ 30 ನಿಮಿಷಗಳ ಕಾಲ ಪಂಚಗವ್ಯ ದ್ರಾವಣದಲ್ಲಿ ಅದ್ದುವುದು ಸೂಕ್ತ.

ಜೀವಾಮೃತ  :

ಜೀವಾಮೃತವು ಸಸ್ಯಗಳ ಬೆಳವಣಿಗೆಯ ಪ್ರಚೋದಕಗಳಲ್ಲೊಂದಾಗಿದೆ. ಇದರಲ್ಲಿ ಅನೇಕ ರೀತಿಯ ಉಪಯುಕ್ತ ಸೂಕ್ಷ್ಮಜೀವಿಗಳಿದ್ದು ಸಸ್ಯಗಳಿಗೆ ಬೇಕಾಗಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ. ಇದು ಸಣ್ಣ ರೈತರ ಏಳಿಗೆಗೆ ಸಂಜೀವಿನಿಯಾಗಿದೆ. ಕ್ರಿಯೆಯನ್ನು ಉತ್ತೇಜಿಸಿ ಸಸ್ಯಗಳ ಬೆಳವಣಿಗೆಗೆ ಪೋಷಕಾಂಶಗಳಾದ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಸಿಗುವಂತೆ ಮಾಡುತ್ತದೆ. ಸಾರಜನಕವನ್ನು ಒದಗಿಸುವ ಸೂಕ್ಷ್ಮಜೀವಿಗಳಾದ ಅಜಟೋಬ್ಯಾಕ್ಟರ್, ಅಸಿಟೋಬ್ಯಾಕ್ಟರ್, ಅಜೋಸಟೈರಿಲಂ, ರಂಜಕವನ್ನು ಕರಗಿಸುವ ದುಂಡಾಣುವಾದ ಬೆಸಿಲಸ್ ಸಬ್‍ಟಿಲಿಸ್ ಸಗಣಿಯಲ್ಲಿರುತ್ತದೆ.

ಬಳಕೆ ಮತ್ತು ವಿಧಾನ

  1. ಒಂದು ಎಕರೆ ಪ್ರದೇಶಕ್ಕೆ 50-200 ಲೀಟರ್‍ನಷ್ಟು ಜೀವಾಮೃತವು ಬೇಕಾಗುತ್ತದೆ. ಮತ್ತು ತೇವಾಂಶ ಇರುವಾಗ ಮಾತ್ರ ಭೂಮಿಗೆ ಹಾಕಬೇಕು.
  2. 15 ದಿನಗಳಿಗೊಮ್ಮೆ ಇದನ್ನು ಬಳಸಬೇಕು. ಹಾಗೂ ಸಸ್ಯ ಬೆಳವಣಿಗೆಯ ಹಂತದಲ್ಲಿ ಹೂ ಬಿಡುವ ಮತ್ತು ಕಾಳು ಕಟ್ಟುವ ಹಂತದಲ್ಲಿ ( ಪ್ರತಿ ಸಸ್ಯಕ್ಕೂ 250 ಮಿ.ಲೀ. ಹಾಕಬೇಕು) ಬಳಸಬೇಕು.
  3. ಜೀವಾಮೃತವನ್ನು ಭತ್ತದ ಬೆಳೆಗೆ ನೀರಿನ ಜೊತೆ ಬಿಡಬಹುದು.
  4. ಜೀವಾಮೃತವನ್ನು ಜಮೀನಿನ ಕಾಲುವೆಗಳಲ್ಲಿ ನೀರಿನ ಮುಖಾಂತರ ಹೊಡಬಹುದು. ಜೀವಾಮೃತವನ್ನು ಹತ್ತಿ ಬಟ್ಟೆಯಿಂದ ಸೋಸಿ ನೀರಿಗೆ ಬೆರೆಸಬೇಕು.
  5. ಎಲ್ಲಾ ವಯಸ್ಸಿನ ಹಣ್ಣಿನ ಮರಗಳಿಗೆ 25-30 ಲೀಟರ್ ಜೀವಾಮೃತವನ್ನು 200 ಲೀಟರ್ ನೀರಿನಲ್ಲಿ ಬೆರೆಸಿ ಬಳಸಬಹುದು.

 

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ  ವಿಜ್ಞಾನಿಗಳು ಭತ್ತ, ರಾಗಿ, ಹಸಿ ಮೆಣಸಿನಕಾಯಿಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳವರಿಯನ್ನು ಹೆಚ್ಚಿಸುವಲ್ಲಿ ಜೀವಾಮೃತವು ಸಹಕಾರಿಯಾಗಿದೆಯೆಂದು ಮನಗೊಂಡಿದ್ದಾರೆ.

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

ಕೊನೆಯ ಮಾರ್ಪಾಟು : 7/26/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate