ಖುಷ್ಕಿ ಜಮೀನಿನಲ್ಲಿ ಬಿತ್ತನೆಗೆ ಒಂದು ತಿಂಗಳು ಮುಂಚಿತವಾಗಿ ಬೆಳೆಗೆ ಶಿಫಾರಸ್ಸು ಮಾಡಿದ ಸಾರಜನಕವನ್ನು ಪೂರೈಸಲು ಬೇಕಾಗುವ ತ್ಯಾಜ್ಯ ನೀರನ್ನು ಒಂದೇ ಬಾರಿ ಉಳುಮೆ ಮಾಡುವ ಮೊದಲೇ ಜಮೀನಿಗೆ ಸಮನಾಗಿ ಹರಿಸಿ ಉಳುಮೆ ಮಾಡಬೇಕು. ನಂತರ ಎಂದಿನಂತೆ ಉಳಿದ ಬೇಸಾಯ ಕ್ರಮವನ್ನು ಪಾಲಿಸಬೇಕು.
ತ್ಯಾಜ್ಯ ನೀರಿನಲ್ಲಿ ರಂಜಕದ ಅಂಶ ಕಡಿಮೆ ಇರುವುದರಿಂದ ಇದನ್ನು ಬಳಸಿದಾಗ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಸಾರಜನಕವನ್ನು ಪೂರೈಸಲು ಉಳಿಕೆ ಪ್ರಮಾಣವನ್ನು ಸೂಪರ್ ಫಾಸ್ಪೇಟ್ ಮೂಲಕ ಹಾಕಬೇಕಾಗುತ್ತದೆ. ಬೆಳೆಗೆ ಬೇಕಾಗುವ ಸಾರಜನಕವಲ್ಲದೆ ಹೆಚ್ಚಿನ ಪ್ರಮಾಣದ ಪೊಟ್ಯಾಷ್ ಕೂಡ ತ್ಯಾಜ್ಯ ನೀರಿನಲ್ಲಿರುತ್ತದೆ. ಹೀಗಾಗಿ ರೈತರಿಗೆ ಗೊಬ್ಬರದ ಖರ್ಚು ಉಳಿಯುವುದಲ್ಲದೆ ಆದಾಯವೂ ಹೆಚ್ಚಾಗುತ್ತದೆ. ಜೊತೆಗೆ ಉಚಿತವಾಗಿ ಲಘು ಪೋಷಕಾಂಶಗಳೂ ಸಿಕ್ಕಿದಂತಾಗುತ್ತದೆ.
ಖುಷ್ಕಿ ಜಮೀನಿಗೆ ಈ ತ್ಯಾಜ್ಯ ನೀರನ್ನು ಎರಡು ವರ್ಷಕ್ಕೊಮ್ಮೆ ಮಾತ್ರ ಹಾಕಬೇಕು. ಎರಡನೆಯ ವರ್ಷದಲ್ಲಿ ಕೇವಲ ಸಾರಜನಕ ಮತ್ತು ರಂಜಕ ಗೊಬ್ಬರಗಳನ್ನು ಪೂರೈಸಿದರೆ ಸಾಕು. ಮೊದಲ ವರ್ಷ ಹಾಕಿದ ಪೊಟ್ಯಾಷ್ ಇನ್ನೂ ಭೂಮಿಯಲ್ಲಿ ಉಳಿಸಿರುವುದರಿಂದ ಅದನ್ನು ಮತ್ತೆ ಹಾಕುವ ಅಗತ್ಯವಿರುವುದಿಲ್ಲ.
ಇಲ್ಲಿ ಆಯಾ ಬೆಳೆಗೆ ನಿಗದಿಪಡಿಸಲಾದ ತ್ಯಾಜ್ಯ ನೀರಿನ ಪ್ರಮಾಣದ ಶೇ.40 ರಷ್ಟನ್ನು ಉಳುಮೆಗೆ ಮುನ್ನ ಜಮೀನಿಗೆ ಹರಿಸಿ ಇಂಗಿಸಬೇಕು. ನಂತರ ಬೆಳೆ ಬೆಳೆಯುವ ಸಮಯದಲ್ಲಿ ಇನ್ನುಳಿದ ಶೇ. 60 ರಷ್ಟು ಸ್ಪೆಂಟ್‍ವಾಷ್‍ನ್ನು ನೀರಿನೊಂಧಿಗೆ (1:20 ಪ್ರಮಾಣದಲ್ಲಿ) ಬೆರೆಸಿ 3 ಸಮನಾದ ಕಂತುಗಳಲ್ಲಿ ಅಲ್ಪಾವಧಿ ಬೆಳೇಗಳಿಗೂ 6 ಸಮನಾದ ಕಂತುಗಳಲ್ಲಿ ದೀರ್ಘಾವಧಿ ಬೆಳೆಗಳಿಗೂ ಕೊಟ್ಟು ಪೂರೈಸಬೇಕು. ಬೆಳೆಯು ಮೊಳಕೆಯೊಡೆಯುತ್ತಿರುವಾಗ ಮತ್ತು ಎಳೆಯ ಪೈರಾಗಿರುವಾಗ ಈ ನೀರು ಬಳಸುವುದು ಸೂಕ್ತವಲ್ಲ.
ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು
ಕೊನೆಯ ಮಾರ್ಪಾಟು : 2/11/2020