ಕೃಷಿ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಕೃಷಿಯನ್ನು ಸುಲಭ ಮಾಡಿಕೊಳ್ಳಲು ಕೃಷಿಕರು ಬಹುವಾರ್ಷಿಕ ಮತ್ತು ಕೆಲಸ ಕಡಿಮೆ ಇರುವ ಕೃಷಿಯತ್ತ ತಮ್ಮ ಚಿತ್ತ ಹಾಯಿಸುತ್ತಿದ್ದಾರೆ. ಆಹಾರ ಬೆಳೆ ಬೆಳೆಯುವ ಜಾಗದಲ್ಲಿ ಅರಣ್ಯ ಕೃಷಿ ಮಾಡುತ್ತಿದ್ದಾರೆ. ಇಂತಹ ಅರಣ್ಯ ಕೃಷಿಯಲ್ಲಿ ಗಾಳಿ (ಸರ್ವೆ, ಸುರ್ಗಿ)ಯೂ ಒಂದು. ಕ್ಯಾಸುರಿನಾ ಇಕ್ಯೂಸಿಟಿಪೋಲಿಯಾ ( easurina equisitifolia )ಎನ್ನುವ ಜಾತಿಗೆ ಸೇರುವ ಈ ಸಸ್ಯಗಳನ್ನು ಮೊದಲು ಅರಣ್ಯ ಇಲಾಖೆಯ ಜಮೀನಿನಲ್ಲಿ ಮಾತ್ರ ಬೆಳೆಯುತ್ತಿದ್ದರು. ಈಗ ಇದು ರೈತರ ಹೊಲಗಳಿಗೂ ಬಂದಿದೆ.
ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರಿನ ಕೆಲವು ಭಾಗದಲ್ಲಿ ಗಾಳಿಮರಗಳನ್ನು ರೈತರು ಬೆಳೆಸುತ್ತಿದ್ದಾರೆ.
ಕೃಷಿ ಮಾಡುವುದು ಸುಲಭ:
ಗಾಳಿ ಮರಗಳನ್ನು ಬೆಳೆಸುವಾಗ ಮೊದಲು ನರ್ಸರಿ ಮಾಡಿಕೊಂಡು ಸಸಿಗಳನ್ನು ತಯಾರಿಸಿಕೊಳ್ಳಬೇಕು. ನರ್ಸರಿ ಮಾಡುವ ವ್ಯವಧಾನವಿಲ್ಲದಿದ್ದರೆ, 30 ಪೈಸೆಯಿಂದ ಎರಡು ರೂಪಾಯಿವರೆಗೂ ಸಸಿಗಳು ಖಾಸಗಿ ನರ್ಸರಿಗಳಲ್ಲಿ ದೊರೆಯುತ್ತದೆ.
ಸಸಿಯಿಂದ ಸಸಿಗೆ ಮೂರು ಅಡಿ, ಸಾಲಿಂದ ಸಾಲಿಗೆ ಆರು ಅಡಿ ಅಂತರದಲ್ಲಿ, ಒಂದು ಅಡಿ ಆಳ- ಅಗಲದ ಗುಂಡಿಯನ್ನು ತೆಗೆದು, ಅದರಲ್ಲಿ ಕೊಟ್ಟಿಗೆ ಗೊಬ್ಬರವನ್ನು ತುಂಬಿ ಗಾಳಿ ಸಸಿಗಳನ್ನು ನಾಟಿ ಮಾಡಬೇಕು. ರಾಸಾಯನಿಕ ಗೊಬ್ಬರವನ್ನು ಗಾಳಿ ಸಸಿ ಬೇಡುವುದಿಲ್ಲ. ಆದರೂ ಸಸಿ ಸದೃಢವಾಗಿ ಬೆಳೆಯುವ ಸಲುವಾಗಿ ಒಂದು ಸಸಿಗೆ ಹತ್ತು ಗ್ರಾಂನಂತೆ ಎನ್ಪಿಕೆಯನ್ನು ನೀಡಬೇಕು. ಮೂರು ತಿಂಗಳ ನಂತರ ಮತ್ತೊಮ್ಮೆ ಒಂದು ಸಸಿಗೆ 20ಗ್ರಾಂನಂತೆ ಎನ್ಪಿಕೆ ಕೊಡಬೇಕು. ಮತ್ತೆ ಆರು ತಿಂಗಳ ನಂತರ ಒಮ್ಮೆ 40ಗ್ರಾಂ ಎನ್ಪಿಕೆಯನ್ನು ಗಾಳಿಗಿಡಗಳಿಗೆ ನೀಡಿದರೆ ರಾಸಾಯನಿಕ ಬಳಕೆಯನ್ನು ಮತ್ತೆ ಮಾಡುವ ಅಗತ್ಯವಿಲ್ಲ.
ಗಾಳಿ ಕೃಷಿಗೆ ನೀರಿನ ಅಗತ್ಯ ಏಪ್ರಿಲ್, ಮೆ ತಿಂಗಳಿನಲ್ಲಿ ಬೇಕಾಗುತ್ತದೆ. ಸಸಿಗಳ ಸಾಲುಗಳ ನಡುವೆ ಇರುವ ಸಣ್ಣ ಬಸಿ ಕಾಲುವೆ ಮೂಲಕ ಹದಿನೈದು ದಿನಕ್ಕೊಮ್ಮೆ ನೀರು ಹಾಯಿಸಿದರೆ ಸಾಕಾಗುತ್ತದೆ. ಗಾಳಿಸಸಿಗಳನ್ನು ನಾಟಿ ಮಾಡಿ ಒಂದುವರೆ ವರ್ಷವಾದ ನಂತರ ಗಿಡಗಳನ್ನು ಪ್ರೂನಿಂಗ್( ಅನಗತ್ಯ ಟೊಂಗೆಗಳನ್ನು ಕಟಾವು ಮಾಡುವುದು) ಮಾಡಬೆಕಾಗುತ್ತದೆ. ಗಿಡವನ್ನು ನಾಟಿ ಮಾಡಿ ಮೂರು ವರ್ಷದ ನಂತರ ಕಟಾವಿಗೆ ಬರುತ್ತದೆ.
ಒಂದು ಎಕರೆಯಲ್ಲಿ ಸುಮಾರು ಎರಡು ಸಾವಿರ ಸಸಿಗಳನ್ನು ನಾಟಿ ಮಾಡಬಹುದು. ಸಸಿ, ನೀರು, ಗೊಬ್ಬರ ಎಲ್ಲಾ ಸೇರಿ ಸುಮಾರು ಇಪ್ಪತ್ತೈದು ಸಾವಿರ ರೂಪಾಯಿ ಖರ್ಚಾಗುತ್ತದೆ. ಒಂದು ಟನ್ ಗಾಳಿ ಮರಕ್ಕೆ 800ರಿಂದ ಎರಡು ಸಾವಿರ ರೂಪಾಯಿವರೆಗೂ ಬೆಲೆ ಸಿಗುತ್ತದೆ. ಒಂದು ಎಕರೆಗೆ ಒಂದು ಲಕ್ಷದಿಂದ ಒಂದು ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿವರೆಗೂ ಆದಾಯ ದೊರೆಯುತ್ತದೆ. ಗಿಡ ನಾಟಿ ಮಾಡಿ ಒಂದುವರೆ ವರ್ಷವಾದ ಮೇಲೆ ಮಾಡುವ ಪ್ರೂನಿಂಗ್ನಿಂದ ಸುಮಾರು ಹತ್ತು ಸಾವಿರ ರೂಪಾಯಿ ಆದಾಯ ಬರುತ್ತದೆ. ಪ್ರೂನಿಂಗ್ ಮಾಡಿದ ಗಾಳಿ ಕಟ್ಟಿಗೆಯನ್ನು ಪವರ್ ಪ್ಲಾಂಟ್ನವರು ಖರೀದಿ ಮಾಡುತ್ತಾರೆ.
`ಕೃಷಿ ಕಾರ್ಮಿಕರ ಕೊರತೆ ನಮ್ಮನ್ನು ಅರಣ್ಯ ಕೃಷಿ ಕಡೆಗೆ ಬರುವಂತೆ ಮಾಡಿತು. ನಾವು ಈಗ ಗಾಳಿ ಮರಗಳನ್ನು ಬೆಳೆಸಿದ ಜಾಗದಲ್ಲಿ ಭತ್ತವನ್ನು ಬೆಳೆಯುತ್ತಿದ್ದೆವು. ಈಗಲೂ ಐದು ಎಕರೆಯಲ್ಲಿ ಭತ್ತವನ್ನು ಬೆಳೆಯುತ್ತಿದ್ದೇವೆ. ಮೂರು ಎಕರೆಯಲ್ಲಿ ಗಾಳಿಮರಗಳನ್ನು ನಾಟಿ ಮಾಡಿದ್ದೇವೆ. ಈಗ ಇರುವ ಭತ್ತದ ಬೇಸಾಯ ಮಾಡಲು ಕೆಲಸಗಾರರ ತಾಪತ್ರಯ ಅನುಭವಿಸುತ್ತಿದ್ದೇವೆ. ಗಾಳಿಮರಗಳಿಗೆ ಮೊದಲಿಗಿಂತಲೂ ಈಗ ಮಾರುಕಟ್ಟೆ ಮೌಲ್ಯ ಹೆಚ್ಚಿದೆ. ನಮ್ಮ ಮಾಲ್ಕಿ ಜಾಗದಲ್ಲಿ ಅರಣ್ಯ ಕೃಷಿ ಮಾಡಿದರೆ ಅರಣ್ಯ ಇಲಾಖೆಯವರ ರಗಳೆ ಇರುವುದಿಲ್ಲ. ಮೊದಲು ಅವರ ಅನುಮತಿಯನ್ನು ಪಡೆಯದೆ ಈ ತರಹದ ಕೃಷಿ ಮಾಡುವಂತಿರಲಿಲ್ಲ.
ಗಾಳಿಮರಗಳನ್ನು ಬೆಳೆಸುವ ಜಾಗದಲ್ಲಿ ಮಧ್ಯೆ ಇರುವ ಖಾಲಿ ಜಾಗದಲ್ಲಿ ತರಕಾರಿಗಳನ್ನು ಬೆಳೆಯಬಹುದು. ಈ ಮರಗಳಿಂದ ಉದುರುವ ಎಲೆಗಳಿಂದ ಭೂಮಿ ಮುಚ್ಚಿರುತ್ತದೆ. ತೇವಾಂಶ ಯಾವಾಗಲೂ ಇರುತ್ತದೆ. ಭೂಮಿ ಫಲವತ್ತಾಗುತ್ತದೆ. ಎರೆಹುಳುಗಳ ಉತ್ಪತ್ತಿಯೂ ಆಗುತ್ತದೆ.
`ಭತ್ತವನ್ನು ಬೆಳೆದರೆ ನಮಗೆ ಮೂರು ವರ್ಷಕ್ಕೆ ಹೆಚ್ಚೆಂದರೆ ಎಂಬತ್ತು ಸಾವಿರ ರೂಪಾಯಿ ಆದಾಯ ಬರುತ್ತಿತ್ತು. ಗಾಳಿ ಮರದಿಂದ ಏನಿಲ್ಲ ವೆಂದರೂ ಮೂರು ವರ್ಷಕ್ಕೆ ಒಂದುಕಾಲು ಲಕ್ಷ ರೂಪಾಯಿ ಆದಾಯ ಬರುತ್ತದೆ. ನಾಟಿ ಮಾಡುವಾಗ ಮಾತ್ರ ಕೆಲಸಗಾರರು ಬೇಕಾಗುತ್ತದೆ. ನಂತರ ನಾವು ಗುತ್ತಿಗೆ ನೀಡುತ್ತೇವೆ. ಅವರೆ ಬಂದ ಕಟಾವು ಮಾಡಿ ಹೋಗುತ್ತಾರೆ. ಮನೆ ಜನವೇ ಕೆಲಸ ಮಾಡಿದರೆ ಸಾಕಾಗುತ್ತದೆ. ಬೇರೆಯವರಿಗಾಗಿ ಕಾಯುವ ಅಗತ್ಯವಿರುವುದಿಲ್ಲ' ಎಂಬುದು ಮಳವಳ್ಳಿ ತಾಲೂಕಿನ ಕಿರುಗಾವಲಿನ ರೈತ ಸಯ್ಯದ್ ಘನಿ ಖಾನ್ ಅವರ ಅಭಿಪ್ರಾಯ.
ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾದಂತೆ ಬೆಳೆಯಲ್ಲಿಯೂ ವ್ಯತ್ಯಾಸವಾಗುತ್ತಿದೆ. ಕೃಷಿ ಕ್ರಮವೂ ಬದಲಾಗುತ್ತಿದೆ ಎನ್ನುವುದಕ್ಕೆ ಬೇಸಾಯದ ಭೂಮಿ ಅರಣ್ಯ ಕೃಷಿಗೆ ಒಳಪಡುತ್ತಿರುವುದು ಒಂದು ಉದಾಹರಣೆ. ಗಾಳಿ ಕೃಷಿಯ ಕುರಿತು ಮಾಹಿತಿಗಾಗಿ: ಸಯ್ಯದ್ ಘನಿ ಖಾನ್, ಕಿರುಗಾವಲು, ಮಳವಳ್ಳಿ ತಾಲೂಕು, ಮಂಡ್ಯ-571424, ದೂರವಾಣಿ-೯೯೦೧೭೩೩೫೧
ಬೇಸಾಯ ಭೂಮಿ ಬೇರೆ ಬೇರೆ ಕೃಷಿಗೆ ಮಾರ್ಪಡುತ್ತಿರುವುದು ಆತಂಕಕಾರಿ ಸಂಗತಿ. ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳ ಕೆಲವು ಭಾಗದಲ್ಲಿ ಭತ್ತ ಬೆಳೆಯುವ ಜಾಗದಲ್ಲಿ ಅಡಿಕೆ ಕೃಷಿಯನ್ನು ಮಾಡುತ್ತಿದ್ದಾರೆ. ಅದೇ ಭತ್ತ ಹೆಚ್ಚು ಬೆಳೆಯುವ ಮಂಡ್ಯ ಮುಂತಾದ ಹಳೇ ಮೈಸೂರು ಪ್ರಾಂತ್ಯದಲ್ಲಿ ಭತ್ತದ ಕೃಷಿ ಬಿಟ್ಟು ಬೇರೆ ಕೃಷಿ ಕಡೆಗೆ ರೈತರು ಹೊರಟಿದ್ದಾರೆ.
ಆಹಾರ ಬೆಳೆಯುವ ಪ್ರದೇಶದಲ್ಲಿ ಆದಾಯ ತರುವ ಬೆಳೆಗಳನ್ನು ಬೆಳೆಯುವುದರಿಂದ ಸ್ವತಃ ರೈತರೇ ಆಹಾರದ ಸ್ವಾವಲಂಬನೆ ಕಳೆದು ಕೊಳ್ಳುತ್ತಿದ್ದಾರೆ.`ಆಹಾರ ಬೆಳೆ ಬೆಳೆಯುವುದು ಬಿಟ್ಟು ಅರಣ್ಯ ಕೃಷಿ ಮಾಡುತ್ತಿರುವ ಬಗ್ಗೆ ನಮಗೂ ಬೇಸರವಿದೆ. ಆದರೆ ಅನಿವಾರ್ಯ. ಕೆಲಸಗಾರರಿಲ್ಲ. ಆಧುನಿಕ ಕೃಷಿ ಮಾಡುವಷ್ಟು ಆರ್ಥಿಕವಾಗಿ ಸಬಲರಲ್ಲ' ಎಂದು ಅರಣ್ಯ ಕೃಷಿ ಮಾಡುವ ರೈತರು ಹೇಳುತ್ತಾರೆ.
ಮೂಲ : ರೈತಾಪಿ
ಕೊನೆಯ ಮಾರ್ಪಾಟು : 5/11/2020
ಕಷ್ಟ ಪಡುವುದೇ ಕೃಷಿ ಮಹಿಳೆಯ ಬದುಕೇ
ಸಾವಯವ ಕೃಷಿ ಪರಿವಾರ ಬಗ್ಗೆಗಿನ ಇತಿಹಾಸವನ್ನು ಇಲ್ಲಿ ತಿಳಿಸ...
ಕೃಷಿ ಸಂಶೋಧನೆಯಲ್ಲಿ ರೈತ ಪಾತ್ರ ಬೇಕೆ
ರಾಜ್ಯ ಕೃಷಿ ಇಲಾಖೆ ಬಗ್ಗೆ ಮಾಹಿತಿ ಇಲ್ಲಿ ಲಭ್ಯವಿದೆ.