ಜೇನು ತುಪ್ಪದ ರುಚಿ ಹಾಗೂ ಮಹತ್ವವನ್ನು ಸವಿದವರೇ ಬಲ್ಲರು. ಆದರೆ ತುಡುವೆ ಜೇನನ್ನು ಪೆಟ್ಟಿಗೆಯಲ್ಲಿ ಸಾಕುವವರಿಗೆ ತುಪ್ಪದ ಮಹತ್ವ ಇನ್ನೂ ಚೆನ್ನಾಗಿ ಬಲ್ಲವರಾಗಿರುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ತುಡುವೆ ಜೇನುಹುಳಗಳನ್ನು ಪೆಟ್ಟಿಗೆಯಲ್ಲಿ ಸಾಕುವುದು ಕೃಷಿಕರಿಗೆ ಬಹಳ ಪ್ರಯೋಜನಾಕರಿ ಎಂಬುದು ನಿಜವಾದರೂ, ಜೇನುಕುಟುಂಬಗಳು ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಹಿಸ್ಸೆಯಾಗಿ ಹಾರಿಹೋಗದಂತೆ ತಡೆಯುವುದು ಕಷ್ಟಕರ ಕೆಲಸ. ಮಳೆಗಾಲ ಮುಗಿದ ತಕ್ಷಣ ರಾಣಿ ಹುಳು ಮತ್ತೊಂದು ರಾಣಿಮೊಟ್ಟೆಯನ್ನಿಟ್ಟು ಹಾರಿಹೋಗುತ್ತದೆ. ಇದನ್ನು ತಡೆಯಲು ಕೃತಕ ಹಿಸೆಯನ್ನು ಮಾಡಿಸಬೇಕಾಗುತ್ತದೆ. ಅಥವಾ ಹೊಸ ರಾಣಿ ಮೊಟ್ಟೆಗಳನ್ನು ಕೀಳಬೇಕಾಗುತ್ತದೆ.ಮರದ ಪೆಟ್ಟಿಗೆಯೊಳಗಿನ ಜೇನು ಕುಟುಂಬಗಳ ಹಿಸ್ಸೆ ಪ್ರಕ್ರಿಯೆಯನ್ನು ಗಮನಿಸಲು ಜೇನು ಪೆಟ್ಟಿಗೆಯ ಮುಚ್ಚಳವನ್ನು ಪದೆ ಪದೆ ತೆಗೆದು ನೋಡಬೇಕು. ರಾಣಿ ಮೊಟ್ಟೆಯನ್ನು ಇಟ್ಟಾಗ ಹುಳುಗಳು ಸಿಟ್ಟಿನಿಂದ ಇರುತ್ತವೆಯಾದ್ದರಿಂದ ಮರದ ಪೆಟ್ಟಿಗೆಯ ಮುಚ್ಚುಳ ತೆಗೆದಾಗಲೆಲ್ಲಾ ಹತ್ತಾರು ಜೇನುನೊಣಗಳಿಂದ ಕಚ್ಚಿಸಿಕೊಳ್ಳುವುದು ಅನಿವಾರ್ಯ. ಎರಡು ದಿನಗಳಿಗೊಮ್ಮೆ ಜೇನುಪೆಟ್ಟಿಗೆಯ ಸಂಸಾರಕೋಣೆಯನ್ನು ಮುಚ್ಚಳ ತೆಗೆದು ನೋಡದಿದ್ದರೆ ಜೇನುಕುಟುಂಬ ಪರಾರಿಯಾಗುವುದು ಖಂಡಿತ. ಪೆಟ್ಟಿಗೆಯ ಮುಚ್ಚಳ ತೆಗೆಯದೇ, ರಾಣಿ ಹಾಗು ಇತರ ಹುಳುಗಳ ಕೆಲಸಗಳನ್ನು ಅರಿಯಲು ಅತ್ಯಂತ ಸುಲಭವಾದ ಮಾರ್ಗವೆಂದರೆ, ಜೇನುಪೆಟ್ಟಿಗೆಯ ಸಂಸಾರಕೋಣೆಯ ಹೊರಗಡೆ ಗಾಜನ್ನು ಅಳವಡಿಸುವುದು. ಇದರಿಂದಾಗಿ ಪದೆಪದೇ ಮುಚ್ಚುಳತೆಗೆದು ನೋಡುವ ಕೆಲಸ ತಪ್ಪುತ್ತದೆ ಎನ್ನುವುದು ಹಲವಾರು ವರ್ಷಗಳಿಂದ ತುಡುವೆ ಜೇನಿನ ಕೃಷಿ ಮಾಡುತ್ತಾ ಬಂದಿರುವ ಸಾಗರ ತಾಲ್ಲೂಕಿನ ಕೆರೇಕೈಪ್ರಶಾಂತ್‌ರವರ ಅಭಿಪ್ರಾಯ.
ಹಣವೂ ಉಳಿತಾಯ: ಮರದಿಂದ ತಯಾರಿಸಿದ ಜೇನುಪೆಟ್ಟಿಗೆಗೆ ಸುಮಾರು 900 ರೂಪಾಯಿಗಳು ತಗಲುತ್ತವೆ. ಆದರೆ ಗಾಜಿನಿಂದ ತಯಾರಾಗುವ ಜೇನುಪೆಟ್ಟಿಗೆ ತಗಲುವ ವೆಚ್ಚ 400 ರೂಪಾಯಿ. ಗಾಜು ಮಾರಾಟ ಮಾಡುವ ಅಂಗಡಿಗಳಲ್ಲಿನ ಅಳಿದುಳಿದ ಗಾಜಿನ ತುಣುಕುಗಳು ಅರ್ದ ಬೆಲೆಗೆ ದೊರಕುತ್ತದೆ. ಅವುಗಳಿಗೆ ಅರಾಲ್ಡೇಟ್ ಅಂಟನ್ನು ಬಳಸಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಒಂದು ಮುನ್ನೆಚ್ಚರಿಕೆಯನ್ನು ಮಾತ್ರಾ ತೆಗೆದುಕೊಳ್ಳಬೇಕು. ತುಡುವೆ ಜೇನುಗಳು ಕತ್ತಲಿನಲ್ಲಿ ಮಾತ್ರಾ ಗೂಡುಕಟ್ಟಿ ವಾಸಮಾಡುವುದರಿಂದ ಗಾಜಿನಪೆಟ್ಟಿಗೆಯ ಒಳಗಡೆ ಬೆಳಕು ಪ್ರವೇಶಿಸದಂತೆ ದಟ್ಟ ವರ್ಣದ ಬಟ್ಟೆಯಿಂದ ಮುಚ್ಚಬೇಕಾಗುತ್ತದೆ. ಜೇನುನೊಣಗಳ ಚಲನವಲನ ನೋಡಬೇಕಾದ ಸಂದರ್ಭಗಳಲ್ಲಿ ಬಟ್ಟೆಯನ್ನು ಬದಿಸರಿಸಿ ನೋಡಿದರಾಯಿತು. ಗಾಜು ಅಳವಡಿಸಿದ ಪಾರದರ್ಶಕ ಜೇನುಪೆಟ್ಟಿಗೆಯಿಂದ ಪದೆಪದೆ ಜೇನುನೊಣಗಳಿಗೆ ತೊಂದರೆಕೊಡುವುದು ಮತ್ತು ಅವುಗಳಿಂದ ಕಚ್ಚಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಬಹುದು, ಹಾಗೂ ಜೇನುಕುಟುಂಬಗಳು ಪರಾರಿಯಾಗುವುದನ್ನು ಸುಲಭದಲ್ಲಿ ಕಂಡುಹಿಡಿಯಬಹುದು. ಇಡೀ ಪೆಟ್ಟಿಗೆಯನ್ನು ಗಾಜಿನಿಂದ ರಚಿಸ ಬಯಸುವವರು ಒಳಗಡೆ ಗಾಳಿ ಪ್ರವೇಶಿಸಲು ಸಣ್ಣ ಜಾಗವನ್ನು ಬಿಡಲು ಮರೆಯಬಾರದು.
ಕೊನೆಯ ಮಾರ್ಪಾಟು : 3/18/2020
ನಮ್ಮ ಕೈ ಮತ್ತು ಮತ್ತು ಕಾಲುಬೆರಳುಗಳಲ್ಲಿ ಉಗುರಿನ ಹಿಂಭಾಗದ...