ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಸಾವಯವ ಕೃಷಿ / ಬಯೋ ಅನಿಲ ಸ್ಥಾವರ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಬಯೋ ಅನಿಲ ಸ್ಥಾವರ

ಬಯೋ ಅನಿಲ ಸ್ಥಾವರ ರೈತಗೆ ವರ, ಸಬ್ಸಿಡಿಗೆ ಬರ!

ಕೃಷಿಕರಿಗಾಗಿ ರೂಪಿಸಾಗಿರುವ ರಾಷ್ಟ್ರೀಯ ತೋಟಗಾರಿಕಾ ಸಹಾಯಧನ ಯೋಜನೆ ಸಾರ್ಥಕ ಕ್ರಮಗಳಲ್ಲೊಂದು. ಇದನ್ನು ದೊಡ್ಡ ಸಂಖ್ಯೆಯ ರೈತರು ಬಳಸಿಕೊಂಡು ಶೇ. 50ರಷ್ಟು ಸಹಾಯಧನ ಪಡೆದಿದ್ದಾರೆ. ಈ ಸಹಾಯಧನ ಯೋಜನೆಯ ವ್ಯಾಪ್ತಿಯಲ್ಲಿ ಎರೆಗೊಬ್ಬರ ತಯಾರಿ ಸ್ಥಾವರ ಮತ್ತು ಬಯೋ ಡೈಜಸ್ಟರ್‌ನ್ನು ಸೇರಿಸಲಾಗಿದೆ. ರೈತರ ಬದುಕಿಗೆ ತುಂಬಾ ಪೂರಕವಾಗಿರುವ, ಮುಖ್ಯವಾಗಿ ಪರಿಸರ ರಕ್ಷಣೆಯಲ್ಲಿ ಅತ್ಯುತ್ತಮ ಪಾತ್ರ ನಿರ್ವಹಿಸುತ್ತಿರುವ ಬಯೋ ಅನಿಲ ಸ್ಥಾವರ ನಿರ್ಮಾಣವನ್ನು ಈ ಯೋಜನೆ ವ್ಯಾಪ್ತಿಗೆ ಸೇರಿಸದೆ ಇರುವುದು ದುರಂತವೇ ಸರಿ.


ನಿಜಕ್ಕೂ ಎಲ್ಲಿ ಅನ್ಯಾಯವಾಗಿದೆ ಎಂಬ ಅರಿವಿಗಾಗಿಯೇ ಇಲ್ಲಿ ಬಯೋ ಅನಿಲ ಸ್ಥಾವರದ ಅನುಕೂಲಗಳತ್ತ ಇಲ್ಲಿ ಬೆಳಕು ಚೆಲ್ಲಲಾಗಿದೆ. ಪ್ರತಿಯೊಬ್ಬ ರೈತ ಕೃಷಿಯೊಂದಿಗೆ ಪಶುಸಂಗೋಪನೆಯನ್ನೂ ಸಾಮಾನ್ಯವಾಗಿ ನಡೆಸುವುದರಿಂದ ಬಯೋ ಅನಿಲಕ್ಕೆ ಅಗತ್ಯವಾದ ಕಚ್ಚಾ ಸಾಮಗ್ರಿಯಾದ ಸಗಣಿ ಆತನಲ್ಲೇ ಲಭ್ಯವಿರುತ್ತದೆ. ಬಯೋ ಅನಿಲವು ಒಂದು ಶಕ್ತಿ ರೂಪದಲ್ಲಿ ಲಭ್ಯವಾಗುವುದರಿಂದ ಹಲವು ಯಾಂತ್ರಿಕ ಸಲಕರಣೆಗಳಿಗೆ ಇಂಧನವಾಗಿ ಬಳಕೆಯಾಗುತ್ತಿದೆ.


ಪ್ರಮುಖವಾಗಿ ಬಯೋ ಅನಿಲದ ಬಳಕೆ ಅಡುಗೆ ಮನೆಯಲ್ಲಿ. ಆಹಾರ ಬೇಯಿಸಲು ನಾವು ಬಳಸುವ ಕಟ್ಟಿಗೆ, ವಿದ್ಯುತ್‌ ಹೀಟರ್‌, ಎಲ್‌ಪಿಜಿ ಗ್ಯಾಸ್‌ಗೆ ಅತ್ಯುತ್ತಮ ಪರ್ಯಾಯವಿದು. ಅಂದರೆ ಬಯೋ ಅನಿಲ ಸ್ಥಾವರಗಳಿಗೆ ಸಬ್ಸಿಡಿ ನೀಡಿ ಉತ್ತೇಜಿಸುವುದು ಸರ್ಕಾರದ ದೃಷ್ಟಿಯಿಂದ ದೂರಗಾಮಿ ಸಫಲತೆಗೆ ಅಡಿಪಾಯವಾಗುತ್ತದೆಂದು ದೃಢವಾಗಿ ಹೇಳಬಹುದು.


ಅಡುಗೆ ಅನಿಲ, ಸೀಮೆಎಣ್ಣೆ, ವಿದ್ಯುತ್‌ಗಳಲ್ಲಾಗುವ ಉಳಿತಾಯದ ಲಾಭ ಸರ್ಕಾರದ ಖಜಾನೆಗೆ. ಇಂದು 26 ಸಾವಿರ ಕೋಟಿ ರೂ.ಗಳ ವಾರ್ಷಿಕ ಸಬ್ಸಿಡಿಯನ್ನು ಈ ಕ್ಷೇತ್ರಕ್ಕೆ ಸರ್ಕಾರ ನೀಡುತ್ತದೆ ಎನ್ನುವುದನ್ನು ಗಮನಿಸಿದರೆ, ಬಯೋ ಅನಿಲ ಸ್ಥಾವರಕ್ಕೆ ಸರ್ಕಾರ ಸಹಾಯಧನ ನೀಡಿ ಉತ್ತೇಜಿಸಿದರೆ, ಆಗುವ ಬದಲಾವಣೆಯನ್ನು ಕ್ರಾಂತಿಕಾರಕ ಎಂದರೆ ಉತ್ಪ್ರೇಕ್ಷೆಯೇನಿಲ್ಲ.


ಬಯೋ ಅನಿಲದಿಂದ ಫ್ರಿಜ್‌ ನಿರ್ವಹಿಸುವ ತಾಂತ್ರಿಕತೆ ಯಶಸ್ವಿಯಾಗಿದೆ. ಶಿರಸಿ ತ್ಯಾಗಲಿಯ ಸುಬ್ರಾಯರು ಹಿಂದೆ ಹಡಗಿನಲ್ಲಿದ್ದ ಫ್ರಿಜ್‌ ಒಂದನ್ನು ತಂದು ಅದನ್ನು ಬಯೋ ಅನಿಲದಲ್ಲಿ ದುಡಿಸಿದ್ದರು. ಅದರ ವ್ಯಾಪಕ ಬಳಕೆ ಇನ್ನಷ್ಟೇ ಆಗಬೇಕಿದೆ. ಇತ್ತೀಚೆಗೆ ಎಲ್‌ಪಿಜಿ ಬಳಸಿ ನೀರು ಕಾಯಿಸುವ ಯಂತ್ರ ಬಂದಿದೆಯಷ್ಟೆ. ಅದರಲ್ಲಿ ಕೆಲ ತಾಂತ್ರಿಕ ಪರಿವರ್ತನೆ ಮಾಡಿ ಎಲ್‌ಪಿಐ ಬದಲು ಬಯೋ ಅನಿಲ ಬಳಸುವ ತಂತ್ರ ನೂರಕ್ಕೆ ನೂರು ಸಫಲವಾಗಿದ್ದು, ಈಗಾಗಲೇ ಕೃಷಿಕರನ್ನು ಆಕರ್ಷಿಸಿದೆ. ಇದರಿಂದ ದೀಪ ಬೆಳಗಿಸುವ ಸಾಧನವಂತೂ ಹಿಂದಿನಿಂದ ಜಾರಿಯಲ್ಲಿದೆ.


ಬಯೋ ಅನಿಲದಿಂದ ನೀರಾವರಿ ಪಂಪ್‌ ನಡೆಸಬಹುದಾದ ವ್ಯವಸ್ಥೆಯನ್ನು ಜಾರಿಗೊಳಿಸಲು ಸಾಧ್ಯವಿದೆ. ಕಳೆದ ಕೆಲವು ವರ್ಷಗಳಿಂದ ಸುಸೂತ್ರವಾಗಿ ರೈತರು ಇದನ್ನು ಬಳಸುತ್ತಿರುವುದೇ ಸಫಲತೆಗೆ ಸಾಕ್ಷಿ ಎನ್ನಬಹುದೇನೋ.


ನಾಣ್ಯದ ಇನ್ನೊಂದು ಮಗ್ಗುಲನ್ನೂ ಇಲ್ಲಿಯೇ ವಿವರಿಸಬೇಕು. ಈಗಾಗಲೇ ಬಯೋ ಅನಿಲ ಸ್ಥಾವರ ಮಾಡಿಕೊಂಡವರು ದೈನಂದಿನ ಅಡುಗೆಗೆ ಸಾಕಷ್ಟು ಅನಿಲ ದೊರಕದೆ ಬಳಲುತ್ತಿದ್ದಾರೆ. ಇದು ಬಯೋ ಅನಿಲ ಸ್ಥಾವರ ಸ್ಥಾಪನೆಯನ್ನು ನಿರುತ್ತೇಜಿಸಿದೆ. ವಾಸ್ತವ ಬೇರೆ. ತಪ್ಪು ಬಯೋ ಅನಿಲದಲ್ಲ, ಕಚ್ಚಾ ವಸ್ತುಗಳದ್ದಲ್ಲ. ದೀನಬಂಧು, ಕಾಮಧೇನು ತೇಲುವ ಫೈಬರ್‌ ಡ್ರಮ್‌ ಮುಂತಾದ ಈ ಹಿಂದಿನ ಸ್ಥಾವರದ ಮಾದರಿಗಳಲ್ಲಿಯೇ ದೋಷವಿದೆ. ಇವುಗಳಲ್ಲಿ ಶೇ.100ರಲ್ಲಿ ಬಯೋ ಅನಿಲ ಉತ್ಪತ್ತಿಯಾಗದಿರುವುದರಿಂದಲೇ ಗ್ರಾಹಕ ಕಡಿಮೆ ಅನಿಲ ಲಭ್ಯತೆಗೆ ತೃಪ್ತಿಪಡುವಂತಾಗಿದೆ. ಆದರೆ ಇದೀಗ ಶಿವಮೊಗ್ಗ ಸಾಗರದ ವೀ.ನಾ.ಕೃಷ್ಣಮೂರ್ತಿಯವರು ವಿನ್ಯಾಸಗೊಳಿಸಿರುವ ಅಕ್ಷಯ ಜೈವಿಕ ಅನಿಲ ಯಂತ್ರ ಸ್ಥಾವರ ಪರಿಹಾರವೆನ್ನಬಹುದು. ಕೇವಲ ಒಂದು ಬುಟ್ಟಿ ಸಗಣಿ, ಇತರ ಕಚ್ಚಾವಸ್ತು ಬಳಸಿದರೆ ಸಾಕು, ಐದು ಜನರ ಒಂದು ಕುಟುಂಬ ಅಡುಗೆಯ ಇಂಧನದ ಸಮಸ್ಯೆ `ಅಕ್ಷಯದಲ್ಲಿ ಹುಟ್ಟುವುದಿಲ್ಲ.


ಬಯೋ ಡೈಜೆಸ್ಟರ್‌ಗಿಂತ ಅನಿಲ ಸ್ಥಾವರ ಹೆಚ್ಚು ಉಪಯೋಗಿ. ಡೈಜಿಸ್ಟರ್‌ನಲ್ಲಿ ದ್ರಾವಣ (ಡಿಕಾಕ್ಷನ್‌) ಮಾತ್ರ ಲಭ್ಯ. ಇದರಲ್ಲಿ ಉತ್ಪತ್ತಿಯಾಗುವ ಮಿಥೇನ್‌ ಅನಿಲ ವ್ಯರ್ಥವಾಗಿ ವಾಯುಮಂಡಲವನ್ನು ಸೇರುತ್ತದೆ. ವಾಸ್ತವವಾಗಿ, ಮಿಥೇನ್‌ ಅನಿಲ ಪರಿಸರಕ್ಕೆ ಬೆರೆಯುವುದು. ಕ್ಷೇಮವಲ್ಲ. ಬಯೋಗ್ಯಾಸ್‌ ಶಕ್ತಿಯ ಮೂಲವಾದುದರಿಂದ ಯಾವುದೇ ಸಂದರ್ಭದಲ್ಲಿ ಇದನ್ನು ವಿದ್ಯುತ್‌ನ್ನಾಗಿಯೂ ಪರಿವರ್ತಿಸಿಕೊಳ್ಳಬಹುದು.


ಪ್ರಸ್ತುತ ಬೇರೊಂದು ಯೋಜನೆಯಡಿ ಗೋ ಅನಿಲ ಸ್ಥಾವರಕ್ಕೆ ಐದು ಸಾವಿರ ರೂ.ಗಳ ಸಬ್ಸಿಡಿ ಸಿಕ್ಕೀತು ಎಂದು ಕೇಳಿದ್ದೇವೆ. ಪ್ಲಾಂಟ್‌ ಬಗ್ಗೆ ಯಾವುದೇ ಷರತ್ತುಗಳಿಲ್ಲದಿರುವುದರಿಂದ ಇದೊಂದು ಅಸಮರ್ಪಕ ಕ್ರಮ. ಮೊತ್ತವೂ ತುಂಬಾ ಕನಿಷ್ಟವಾಗಿದೆ. ಹಾಗಾಗಿ ಎನ್‌ಹೆಚ್‌ಬಿ ಮೂಲಕ ಇದನ್ನು 30 ಸಾವಿರ ರೂ.ಗಳ ಸಹಾಯಧನದ ವ್ಯಾಪ್ತಿಗೆ ಸೇರಿಸಿದರೆ ಅಷ್ಟರಮಟ್ಟಿಗೆ ರೈತರಿಗೇ ಅನುಕೂಲವಾಗುತ್ತದೆ.


ಇದೀಗ ರಾಜ್ಯದಲ್ಲಿ ಚಾಲ್ತಿಗೆ ಬಂದಿರುವ ಸಾವಯವ ಕೃಷಿ ಮಿಷನ್‌ನ ಅಧ್ಯಕ್ಷರಾದ ಆ.ಶ್ರೀ. ಆನಂದ್‌, ಸರ್ಕಾರದ ಅಧಿಕಾರಿಗಳು, ವಿಜ್ಞಾನಿಗಳಲ್ಲಿ ರಾಷ್ಟೀಯ ತೋಟಗಾರಿಕಾ ಯೋಜನೆಯ ವ್ಯಾಪ್ತಿಯಲ್ಲಿ ಬಯೋ ಅನಿಲ ಸ್ಥಾವರ ಯೋಜನೆಯನ್ನು ಸೇರಿಸಲು ರೈತ ಸಮುದಾಯದ ಪರವಾಗಿ ಕಾರ್ಯೋನ್ಮುಖರಾಗಬೇಕಾದುದು ಇಂದಿನ ಅಗತ್ಯವಾಗಿದೆ.

ಮೂಲ : ರೈತಾಪಿ

2.97701149425
ಸ್ಟಾರ್‌ಗಳನ್ನು ಜಾರಿಸಿ ನಂತರ ಕ್ಲಿಕ್‌ ಮಾಡಿ
ಮಳಿಯಪ್ಪ ಹಂಗರಗಿ Apr 29, 2019 10:27 PM

ನಮಗೂ ಬಯೋ ಗ್ಯಾಸ್ ಬೇಕಾಗುತ್ತದೆ ಸರ್ ಮಾಹಿತಿ ತಿಳಿಸಿ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top