ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಸಾವಯವ ಕೃಷಿ / ಬಾಡಿಗೆ ಭೂಮಿಯಲ್ಲಿ ಬಂಗಾರದಂಥ ಫಸಲು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಬಾಡಿಗೆ ಭೂಮಿಯಲ್ಲಿ ಬಂಗಾರದಂಥ ಫಸಲು

ಎನ್.ಡಿ.ಹೆಗಡೆ ಆನಂದಪುರಂ ರೈತ ಗಜಾನನ ಗೌಡ ಅವರ ಕೃಷಿಯಲ್ಲಿ ಎರಡು ವಿಶೇಷತೆಗಳು ಗಮನ ಸೆಳೆಯುತ್ತವೆ.

ಎನ್.ಡಿ.ಹೆಗಡೆ ಆನಂದಪುರಂ ರೈತ ಗಜಾನನ ಗೌಡ ಅವರ ಕೃಷಿಯಲ್ಲಿ ಎರಡು ವಿಶೇಷತೆಗಳು ಗಮನ ಸೆಳೆಯುತ್ತವೆ. ಮೊದಲನೆಯದು, ಇವರು ತರಕಾರಿ ಕೃಷಿ ಮಾಡುವುದು ಎತ್ತರದ ಖಾಲಿ ಗುಡ್ಡದಲ್ಲಿ. ಎರಡನೆಯದು, ಇವರು ಬೇಸಾಯ ಮಾಡುವುದು ಬಾಡಿಗೆಗೆ ಭೂಮಿಯಲ್ಲಿ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದ ದಿಬ್ಬಣಗಲ್ ಎಂಬ ಊರು ಕೃಷಿಕ ಗಜಾನನ ಗೌಡರ ಕರ್ಮಭೂಮಿ.

ದಿಬ್ಬಣಗಲ್ ಸಮೀಪದ ಎತ್ತರದ ಖಾಲಿ ಗುಡ್ಡದಲ್ಲಿ ಐದಾರು ಎಕರೆ ಭೂಮಿಯನ್ನು ಬಾಡಿಗೆಗೆ ಪಡೆದುಕೊಂಡು ಬಗೆ ಬಗೆಯ ತರಕಾರಿ ಕೃಷಿ ನಡೆಸುತ್ತ ಬಂದಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ಮಳೆಗಾಲದಲ್ಲಿ ತರಕಾರಿ ಕೃಷಿ ಮಾಡಿ ಸಾಕಷ್ಟು ಆದಾಯ ಗಳಿಸುವುದರಲ್ಲಿ ಇವರು ಪರಿಣತಿಯನ್ನು ಪಡೆದಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು.

ಮೇ ತಿಂಗಳು ಕೊನೆಯಾಗುತ್ತ ಬಂದಹಾಗೆ ಸಕ್ರಿಯರಾಗುವ ಈ ರೈತ ಬೇಲಿ ಭದ್ರಪಡಿಸಿಕೊಳ್ಳುವ ಕೆಲಸ ಶುರು ಮಾಡುತ್ತಾರೆ. ಜೂನ್‌ನಲ್ಲಿ ಮಳೆ ಬಿದ್ದು ಭೂಮಿ ಹದಗೊಳ್ಳುತ್ತಿದ್ದಂತೆ ಸೌತೆ, ಬೆಂಡೆ, ಹೀರೆಕಾಯಿ, ಪಡುವಲಕಾಯಿ, ಹಾಗಲಕಾಯಿ, ಮೊಗೆ ಸೌತೆ, ಇಬ್ಬಟ್ಟಲು, ಕೆಸು ಇತ್ಯಾದಿ ತರಕಾರಿ ಕೃಷಿ ಆರಂಭಿಸುತ್ತಾರೆ. ಪ್ರತಿ ತರಕಾರಿಗೂ ಬೇರೆ ಬೇರೆ ವಿಸ್ತೀರ್ಣದ ಜಾಗ ಗುರುತಿಸಿ ಕೃಷಿ ನಡೆಸುವುದು ಇವರ ವೈಶಿಷ್ಟ್ಯತೆ.

ತರಕಾರಿ ಕೃಷಿ ಮಾಡುವುದು ಹೇಗೆ?:

ಮಳೆಗಾಲದ ಆರಂಭದಲ್ಲಿ ಭೂಮಿ ಹದಗೊಳ್ಳುತ್ತಿದ್ದಂತೆ ಎತ್ತರದ ಬ್ಯಾಣವಾದ ಜಾಗದಲ್ಲಿ ಗುದ್ದಲಿ, ಪಿಕಾಶಿ ಬಳಸಿ ಸುಮಾರು 20 ಅಡಿ ಉದ್ದ, ಎರಡು ಅಡಿ ಅಗಲ ಹಾಗೂ ಒಂದು ಅಡಿ ಎತ್ತರದ ಪಟ್ಟೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಓಳಿ ಎಂದು ಕರೆಯಲಾಗುತ್ತದೆ. ಈ ಪಟ್ಟೆಗಳಲ್ಲಿ ಸಣ್ಣ ಗುಳಿ ಮಾಡಿ ಸೆಗಣಿ ಗೊಬ್ಬರ ಹಾಕಿ ಮಣ್ಣು ಉದುರಿಸಿ ಮೇಲಿನಿಂದ ಬೀಜ ಬಿತ್ತುತ್ತಾರೆ. ಪ್ರತಿ ಗಿಡಕ್ಕೂ ಎರಡು ಅಡಿ ಅಂತರವಿರುವಂತೆ ಬೀಜ ಹಾಕುವುದು ವಾಡಿಕೆ. ಬೀಜಗಳು ಮೊಳಕೆಯೊಡೆದು ಸರಾಸರಿ ಮೂರು ಎಲೆ ಕಾಣಿಸಿಕೊಳ್ಳುತ್ತಿದ್ದಂತೆ ಗೊಬ್ಬರ ಹಾಕುತ್ತಾರೆ. ಪ್ರತಿ 22 ದಿನಕ್ಕೆ ಒಮ್ಮೆಯಂತೆ ಒಟ್ಟು ಮೂರು ಸಲ ಗೊಬ್ಬರ ನೀಡುತ್ತಾರೆ. ಮೊದಲು ಸುಫಲಾ, ಎರಡನೇ ಸಲ ಫ್ಯಾಕ್ಟಂಪಾಸ್ ಮತ್ತು ಮೂರನೆ ಸಲ 19:19 ಕಾಂಪ್ಲೆಕ್ಸ್ ಗೊಬ್ಬರ ನೀಡುತ್ತಾರೆ. ಪ್ರತಿ ಗಿಡಕ್ಕೆ ಪ್ರತಿ ಸಲ ಸರಾಸರಿ 10 ಗ್ರಾಂ ಸಿಗುವಂತೆ ಗೊಬ್ಬರ ಹಾಕಿ ಮೇಲ್ಮಣ್ಣು ಏರಿಸುತ್ತಾರೆ. ಬಳ್ಳಿ ಜಾತಿಯ ತರಕಾರಿ ಗಿಡಗಳು ಬೆಳೆದು ಸುಮಾರು ಅರ್ಧ ಅಡಿ ಎತ್ತರವಾಗುತ್ತಿದ್ದಂತೆ ಕಾಡಿನಿಂದ ಮರದ ರೆಂಬೆಗಳನ್ನು ತಂದು ಆಧಾರವಾಗಿ ನಿಲ್ಲಿಸುತ್ತಾರೆ. ನಂತರ ಐದು ಅಡಿ ಎತ್ತರದ ಚಪ್ಪರ ನಿರ್ಮಿಸುತ್ತಾರೆ. ಈ ಚಪ್ಪರದ ತುಂಬ ಹರಡಿಕೊಳ್ಳುವ ತರಕಾರಿಗಳನ್ನು ಚಪ್ಪರದ ಒಳ ಭಾಗದಲ್ಲಿ ಸರಾಗವಾಗಿ ಓಡಾಡಿ ಕೀಳಲು ಸಾಧ್ಯವಾಗುತ್ತದೆ. ಸೌತೆ, ಮೊಗೆ ಸೌತೆ ಮತ್ತು ಇಬ್ಬಟ್ಟಲು ಬಳ್ಳಿಗಳನ್ನು ನೆಲದಲ್ಲಿ ಹರಡಿಕೊಂಡು ಹಬ್ಬುವಂತೆ ಮಾಡುವ ಇವರು, ಬೆಂಡೆ ಗಿಡಗಳಿಗೆ ಹೆಚ್ಚು ಮಣ್ಣು ಎತ್ತರಿಸಿ ಏರಿ ಮಾಡುತ್ತಾರೆ.

ಕಳೆದ ಮಳೆಗಾಲದಲ್ಲಿ ಸುಮಾರು ಆರು ಎಕರೆ ವಿರ್ಸ್ತೀಣದ ಭೂಮಿಯಲ್ಲಿ ಸುಮಾರು 2500 ಬೆಂಡೆಗಿಡ, 1500 ಸೌತೆ ಬಳ್ಳಿ, 1000 ಮೊಗೆ ಸೌತೆ, 1000 ಇಬ್ಬಟ್ಟಲು, 500 ಹಾಗಲ ಬಳ್ಳಿ, 1000 ಹೀರೆ ಬಳ್ಳಿ, 500 ಪಡುವಲ ಕಾಯಿ ಬಳ್ಳಿಯನ್ನು ಬೆಳೆಸಿ, ಭರ್ಜರಿ ಬೆಳೆ ತೆಗೆದಿದ್ದಾರೆ. ಇವರ ಕೃಷಿ ಕಾರ‌್ಯಕ್ಕೆ ಮಾವ ಭೈರಾ ಗೌಡ ಸಾಥ್ ನೀಡುತ್ತಿದ್ದು, ಇಬ್ಬರೂ ಸೇರಿ ಪ್ರತಿ ಹಂತದ ಕಾರ‌್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

ಕೃಷಿ ಮಾಡಲು ಸ್ವಂತ ಭೂಮಿ ಇಲ್ಲ ಕೊರಗುತ್ತ ಕುಳಿತುಕೊಳ್ಳುವ ಬದಲು, ಪ್ರತಿ ವರ್ಷ ಎತ್ತರದ ಗುಡ್ಡ ಪ್ರದೇಶದ ಬ್ಯಾಣವನ್ನು ಬೇರೆಯವರಿಂದ ಬಾಡಿಗೆಗೆ ಪಡೆದು ಮಳೆಗಾಲದಲ್ಲಿ ಥರಹೇವಾರಿ ತರಕಾರಿ ಕೃಷಿ ನಡೆಸುವ ಗಜಾನನ ಗೌಡರ ಮೊ.ಸಂ.7483303252.

ಹೊಲದ ಬಳಿಯೇ ಮಾರುಕಟ್ಟೆ, ಲಾಭದ ಹಾದಿಯಲ್ಲಿ ರೈತನ ನಡೆ: ಇವರಿಗೆ ಆಗಸ್ಟ್ 2ನೇ ವಾರದಿಂದಲೇ ತರಕಾರಿ ಫಸಲು ದೊರೆಯಲಾರಂಭಿಸಿದೆ. ತೂಕ ಮಾಡಿ ಮಾರಾಟ ಮಾಡಲು ತಕ್ಕಡಿ ಅಥವಾ ತೂಕದ ಯಂತ್ರ ಇಲ್ಲದಿರುವುದರಿಂದ ಎಲ್ಲ ತರಕಾರಿಗಳನ್ನು ಬಿಡಿ ಬೆಲೆಯಲ್ಲಿ ಮಾರುತ್ತಾರೆ. ಇವರ ಹೊಲದಿಂದ ಸ್ವಲ್ಪ ದೂರದಲ್ಲಿ ಹೊನ್ನಾವರ-ಜೋಗ ರಾಷ್ಟ್ರೀಯ ಹೆದ್ದಾರಿ 206 ಹಾದುಹೋಗಿದ್ದು, ನಿತ್ಯ ತರಕಾರಿ ಕೊಯ್ಲು ಮಾಡಿ ಹೆದ್ದಾರಿ ಪಕ್ಕದಲ್ಲಿ ಇಟ್ಟು ಮಾರುತ್ತಾರೆ. ತಾಜಾ ತರಕಾರಿ ಸಿಗುವ ಕಾರಣ ಸುತ್ತಮುತ್ತಲ 10-15 ಕಿಮೀ ದೂರದಿಂದ ಜನ ಇವರಲ್ಲಿ ತರಕಾರಿ ಖರೀದಿಸಿ ಒಯ್ಯುತ್ತಾರೆ. ಈ ಮಾರ್ಗದಲ್ಲಿ ಓಡಾಡುವ ಪ್ರವಾಸಿಗರು, ವಾಹನ ನಿಲ್ಲಿಸಿ ತರಕಾರಿ ಖರೀದಿಸುತ್ತಾರೆ. ಹಡಿನಬಾಳ, ಕವಲಕ್ಕಿ, ಉಪ್ಪೋಣಿ, ಮೂಡ್ಕಣಿ, ಹೊನ್ನಾವರ ಇತ್ಯಾದಿ ಸ್ಥಳಗಳಿಂದ ಆಗಮಿಸುವ ತರಕಾರಿ ವ್ಯಾಪಾರಸ್ಥರು ಮತ್ತು ತರಕಾರಿ ಅಂಗಡಿ ಮಾಲೀಕರು ಕೂಡ ತರಕಾರಿ ಖರೀದಿಸಲು ಇವರ ಹೊಲಕ್ಕೆ ಆಗಮಿಸುತ್ತಾರೆ. ಹಾಗಾಗಿ ಇವರಿಗೆ ಮಾರುಕಟ್ಟೆಯ ಸಮಸ್ಯೆ ಇಲ್ಲವೇ ಇಲ್ಲ. ಈ ವರ್ಷ ಒಂದು ಜತೆ ಬೆಂಡೆಕಾಯಿಗೆ 3, ಒಂದು ಜತೆ ಹೀರೆಕಾಯಿಗೆ 25, ಒಂದು ಜತೆ ಪಡುವಲ ಕಾಯಿಗೆ 25, ಒಂದು ಜತೆ ಹಾಗಲಕಾಯಿಗೆ 15, ಒಂದು ಜೊತೆ ಸೌತೆಕಾಯಿಗೆ 25 ರೂ., ಹೀಗೆ ಇವರೇ ದರ ನಿಗದಿ ಪಡಿಸಿ ಮಾರುತ್ತಾರೆ.

ಕಳೆದ ವರ್ಷ ತರಕಾರಿ ಕೃಷಿಯಿಂದ ಇವರಿಗೆ ಸುಮಾರು 3 ಲಕ್ಷ ರೂ. ಆದಾಯ ದೊರೆತಿತ್ತು. ತರಕಾರಿ ಬೆಳೆಯುವ ವೆಚ್ಚ , ಭೂಮಿಯ ಬಾಡಿಗೆ ಸೇರಿದಂತೆ ಸುಮಾರು 80 ಸಾವಿರ ರೂ. ಖರ್ಚಾಗಿತ್ತು. ಅಷ್ಟಾದರೂ ಕನಿಷ್ಠ ಎರಡು ಲಕ್ಷ ರೂ. ನಿವ್ವಳ ಲಾಭ ಇವರದ್ದಾಗಿತ್ತು. ಪ್ರತಿ ವರ್ಷ ಮೇ ಅಂತ್ಯದಿಂದ ನವೆಂಬರ್ ಮೊದಲ ವಾರದವರೆಗೆ ತರಕಾರಿ ಕೃಷಿ ನಡೆಸುವ ಇವರು ಉಳಿದ ದಿನಗಳಲ್ಲಿ ಬೇರೆಡೆಗೆ ಕೂಲಿ ಕೆಲಸ ಮಾಡುತ್ತ ಸಂಸಾರ ನಿರ್ವಹಿಸುತ್ತಾರೆ.

3.05154639175
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top