ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಸಾವಯವ ಕೃಷಿ / ಸಮಗ್ರ ನೀರು ನಿರ್ವಹಣೆ
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಮಗ್ರ ನೀರು ನಿರ್ವಹಣೆ

ನೀರಿನ ಬಳಕೆ ಸಾಮಥ್ರ್ಯವನ್ನು ಹೆಚ್ಚಿಸುವುದು. ನೀರಿನ ಬಳಕೆ-ಸಾಮಥ್ರ್ಯ ಎಂದರೆ ಒಂದು ನಿರ್ಧಿಷ್ಟ ಪ್ರಮಾಣದಲ್ಲಿ ಬಳಸಿದ ನೀರಿಗೆ ಎಷ್ಟು ಕಿಲೋಗ್ರಾಂ ಬೆಳೆ ಇಳುವರಿ ಬಂದಿತೆಂಬ ಒಂದು ಅಳತೆ/ಮಾಪಕ.

ಮೂಲ ಉದ್ದೇಶ

ಸಮಗ್ರ ನೀರು ನಿರ್ವಹಣೆಯ ಮೂಲ ಉದ್ದೇಶವೆಂದರೆ

ನೀರಿನ ಬಳಕೆ ಸಾಮಥ್ರ್ಯವನ್ನು ಹೆಚ್ಚಿಸುವುದು. ನೀರಿನ ಬಳಕೆ-ಸಾಮಥ್ರ್ಯ ಎಂದರೆ ಒಂದು ನಿರ್ಧಿಷ್ಟ ಪ್ರಮಾಣದಲ್ಲಿ ಬಳಸಿದ ನೀರಿಗೆ ಎಷ್ಟು ಕಿಲೋಗ್ರಾಂ ಬೆಳೆ ಇಳುವರಿ ಬಂದಿತೆಂಬ ಒಂದು ಅಳತೆ/ಮಾಪಕ. ಇದು ಹೆಚ್ಚಾಗ ಬೇಕಾದರೆ, ಬೆಳೆಗಳ ಇಳುವರಿ ಹೆಚ್ಚಾಗಬೇಕು ಮತ್ತು ನೀರಿನ ಗಳಿಕೆ/ಅವಶ್ಯಕತೆ ಕಡಿಮೆ ಆಗಬೇಕು. ಮಣ್ಣು, ನೀರು ಮತ್ತು ಬೆಳೆಗಳ  ಸುಕ್ತ ಸಂಯೋಜನೆಯಲ್ಲಿ ಅನುಸರಿಸಬೇಕಾದ ಎಲ್ಲಾ ಸಮಗ್ರ ಬೇಸಾಯ ಕ್ರಮಗಳನ್ನು ಅಳವಡಿಸುವುದರಂದ ನೀರಿನ-ಬಳಕೆ-ಸಾಮಥ್ರ್ಯ ಹೆಚ್ಚಾಗುತ್ತದೆ.

ಆದರೆ, ಇತ್ತೀಚಿನ ದಿನಗಳಲ್ಲಿ ಕಂಡು ಬಂದಿರುವ ಅಂಶವೆಂದರೆ ಕರೆಗೆ ನೀರು ಬರುವುದೇ ಕಡಿಮೆ. ಬಂದ ನೀರಿನ ಬಳಕೆ ಸಾಮಥ್ರ್ಯವೂ ಸಹಾ ಕಡಿಮೆ. ಕೆರೆ ನೀರಿನ-ಬಳಕೆ-ಸಾಮಥ್ರ್ಯ ಕಡಿಮೆಯಾಗಲು ಕಾರಣಗಳು ಇಂತಿವೆ. :

 • ಮಣ್ಣು ಕಾಲುವೆಗಳಲ್ಲಿ ನೀರನ್ನು ಸಾಗಿಸುವುದು
 • ಹುಲ್ಲು ಬೆಳೆದ ಹೂಳು ತುಂಬಿರುವ ನೀರಿನ ಕಾಲುವೆಗಳಲ್ಲಿ ನೀರನ್ನು ಹರಿಸುವುದು.
 • ಭುಮಿಯನ್ನು ಸರಿಯಾಗಿ ಮಟ್ಟ ಮಾಡದೆ ಇರುವುದು.
 • ಬದುಗಳು ಇಲ್ಲದಿರುವುದು
 • ಮಣ್ನಿನ ಆಳ ಬಹಳಷ್ಟು ಕಮ್ಮಿ ಇರುವುದು
 • ಮರಳು ಮಣ್ಣಿನಲ್ಲಿ ನೀರು ಬಹಳಷ್ಟು ಇಂಗುವುದು
 • ಪಾತಿಗಳಿಗೆ ಸೂಕ್ತವಾದ ಆಕಾರ ಮತ್ತು ಗಾತ್ರ ಇಲ್ಲದೆ ವಕ್ರಾಕಾರದಲ್ಲಿರುವುದು
 • ನೀರನ್ನು ಪಾತಿಗಳಿಗೆ ಹಾಯಿಸಿದಾಗ ರೈತ ಅಥವಾ ನೀರಗಂಟಿ ಇಲ್ಲದಿರುವುದು
 • ಅತಿ ಸಣ್ಣ ಅಥವಾ ಅತಿ ಹೆಚ್ಚು ಪ್ರವಾಹದ ನೀರನ್ನು ಪಾತಿಗಳಿಗೆ ಹರಿಸುವುದು
 • ಬಹಳ ಉದ್ದನೆಯ ಕಾಲುವೆಗಳಲ್ಲಿ ನೀರನ್ನು ಹರಿಸುವುದು
 • ಅತಿ ಹೆಚ್ಚಾಗಿ ಒಂದೇ ಕಂತಿನಲ್ಲಿ ನೀರನ್ನು ಪಾತಿಗಳಿಗೆ ತುಂಬಿಸುವುದು.
 • ಮಣ್ಣಿಗೆ ಸಾಕಷ್ಟು ಸಾವಯವ ಗೊಬ್ಬರಗಳನ್ನು ಹಾಕದೆ ಇರುವುದು
 • ಮಣ್ಣಿನ ಮೇಲ್ಭಾಗದಲ್ಲಿ ಸಮನಾಗಿ ನೀರನ್ನು ಹರಿಸದೆ ಇರುವುದು
 • ಸೂಕ್ತವಾದ ನೀರಾವರಿ ಪದ್ಧತಿ ಮತ್ತು ನೀರಾವರಿ ವಿನ್ಯಾಸವನ್ನು ಅನುಸರಿಸದೆ ಇರುವುದು.
 • ಬೆಳೆಗಳಿಗೆ ಸೂಕ್ತ ಕಾಲ ಮತ್ತು ನಿರ್ದಿಷ್ಟ ಪ್ರಮಾಣದಲ್ಲಿ ನೀರು ಹಾಯಿಸದೇ ಇರುವುದು.

ಸಮಗ್ರ ನೀರು ನಿರ್ವಹಣೆಯಲ್ಲಿ ಅನುಸರಿಸಬೇಕಾದ ಪದ್ಧತಿಗಳು

 1. ನೀರಿನ ಸಾಗಣೆ ಸಾಮಥ್ರ್ಯವನ್ನು ಹೆಚ್ಚುಸುವುದು
 2. ಸೂಕ್ತ ಬೆಳೆ ಮತ್ತು ತಳಿಗಳನ್ನು ಆರಿಸಿ ಬೆಳೆಸುವುದು
 3. ನೀರಿನ ಬಳಕೆ ಸಾಮಥ್ರ್ಯವನ್ನು ಹೆಚ್ಚಿಸುವುದು
 4. ಬೆಳೆಗಳ ಅವಶ್ಯಕತೆಗೆ ತಕ್ಕಂತೆ ನೀರುಣಿಸುವುದು
 5. ಕೆರೆ ನೀರು, ಮಳೆ ನೀರು ಮತ್ತು ಕೊಳವೆ ಬಾವಿ ನೀರಿನ (ಅಂತರ್ಜಲ) ಸಂಯುಕ್ತ ಬಳಕೆ

ನೀರಿನ ಸಾಗಣೆ - ಸಾಮಥ್ರ್ಯ ಹೆಚ್ಚಳ

ನೀರಿನ ಸಾಗಣೆ ಸಾಮಥ್ರ್ಯವೆಂದರೆ ಕೆರೆ ತೂಬಿನಿಂದ ಬಿಟ್ಟ ಒಟ್ಟು ನೀರಿನ್ಲಲಿ ಶೇಕಡ ಎಷ್ಟು ಭಾಗ ಜಮೀನಿಗೆ ತಲುಪಿದೆ ಮತ್ತು ಎಷ್ಟು ನೀರು ಸಾಗಣೆಯ ಹಂತದಲ್ಲಿ ನಷ್ಟವಾಗಿದೆ ಎನ್ನುವುದು.

ಸಾಗಣೆ ಸಾಮಥ್ರ್ಯವನ್ನು ಹೆಚ್ಚಿಸಲು, ನೀರು ಹಾಯಿಸುವ ಕಾಲುವೆಗಳಲ್ಲಿ ತುಂಬಿಸುವ ಹೂಳು/ಮಣ್ಣನ್ನು ಆಗಿಂದ್ದಾಗ್ಗೆ ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಬೆಳೆದಿರುವ ಹುಲ್ಲು ಮತ್ತು ಇತರೆ ಗಿಡಗಳನ್ನು ತೆಗೆಯಬೇಕು. ಬಿಲಗಳಿದ್ದು ನೀರು ಸೋರುತ್ತಿದ್ದರೆ ಅವುಗಳನ್ನು ಮುಚ್ಚಬೇಕು.

ಸೂಕ್ತ ಬೆಳೆ ಮತ್ತು ತಳಿಗಳನ್ನು ಆರಿಸಿ ಬೆಳೆಸುವುದು

ಸಮಗ್ರ ನೀರಿನ ನಿರ್ವಹಣೆಯಲ್ಲಿ ಎರಡನೆಯ ಅಂಶವೆಂದರೆ ಸೂಕ್ತ ಬೆಳೆಗಳನ್ನು ತಳಿಗಳನ್ನು ಮತ್ತು ಬೆಳೆ ಪದ್ಧತಿಗಳನ್ನು ಆಯ್ಕೆಮಾಡಿ ಬೆಳೆಸುವುದು. ಅಲ್ಲದೆ ಭೂಮಿಯನ್ನು ಸಿದ್ಧಗೊಳಿಸುವ ವಿಧಾನ, ಮಣ್ಣಿನ ಫಲವತ್ತತೆ ಕಾಪಾಡುವುದು, ಅಂತರ ಮತ್ತು ಸಸ್ಯಗಳ ಸಂಖ್ಯೆಯನ್ನು ಕಾಪಾಡುವುದು, ಹಂಗಾಮಿಗೆ ತಕ್ಕಂತೆ ನೀರು ಹಾಯಿಸುವುದು, ಕಳೆ ನಿಯಂತ್ರಣ ಮತ್ತು ಸಸ್ಯ ಸಂರಕ್ಷಣೆ ಸಹಾ ಬಹಾಳ ಮುಖ್ಯವಾದ ಕ್ರಮಗಳು; ಅವುಗಳ ವಿವರ ಇಂತಿವೆ.

ಬೆಳೆ ತಳಿಗಳ ಆಯ್ಕೆ

ದೀರ್ಘಾವಧಿ ಬೆಳೆ ತಳಿಗಳಿಗಿಂತ ಮಧ್ಯಮಾವಧಿ ಮತ್ತು ಅಲ್ಪಾವಧಿ ತಳಿಗಳನ್ನು ಆಯ್ಕೆ ಮಾಡುವುದು ಉತ್ತಮ. ದೀರ್ಘಾವಧಿ ತಳಿಗಳನ್ನು ತಡವಾಗಿ ಬಿತ್ತನೆ ಮಾಡಿದರೆ ಹೂಬಿಡುವ ಹಂತವು ಚಳಿಗಾಳಿಗೆ ಸಿಕ್ಕಿ ಕಾಳೂ ಜೊಳ್ಳಾಗಬಹುದು. ಕೆರೆ ನೀರು ಸಾಲದೆ ಆ ಬೆಳೆಯೂ ಒಣಗಬಹುದು.

ಸೂಕ್ತ ಬೆಳೆ ಪದ್ದತಿ

ಸೂಕ್ತ ಬೆಳೆ ಪದ್ಧತಿಗಳನ್ನು ಅನುಸರಿಸುವುದರಿಂದ ನೀರನ್ನು ಉಳಿತಾಯ ಮಾಡಬಹುದು ಹಾಗೂ ಮಣ್ಣಿನ ಆರೋಗ್ಯವನ್ನು ಕಾಪಾಡಬಹುದು. ಆದಷ್ಟು ನೀರು ನಿಲ್ಲಿಸಿ ನಾಟಿ ಭತ್ತ ಬೆಳೆಯುವುದನ್ನು ಕಡಿಮೆ ಮಾಡಿ ಕಡಿಮೆ ನೀರಾವರಿ ಬೆಳೆಗಳನ್ನು ಬೆಳೆಯುವುದು ಸೂಕ್ತ.

ಭೂಮಿಯ ಸಿದ್ಧತೆ

ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ, ಬದುಗಳನ್ನು ಕಟ್ಟಿ ಕೆಸರಿನಿಂದ ಸವರಿ, ಏಡಿ-ಇಲಿ ಬಿಲಗಳನ್ನು ಮುಚ್ಚುತ್ತಿರಬೇಕು. ಕಾಲುವೆಗಳಲ್ಲಿ ಬೆಳೆದ ಕಳೆ, ಗಿಡ ಗೆಂಟೆಗಳನ್ನು ಕೊಚ್ಚಿ ತೆಗೆದು ನೀರು ಸರಾಗವಾಗಿ ಹರಿಯುವಂತೆ ಅನುವು ಮಾಡಬೇಕು.

ಮಣ್ಣಿನ ಫಲವತ್ತೆಯನ್ನು ಕಾಪಾಡುವುದು

ಬೆಳೆಗೆ ತಕ್ಕಂತೆ ಸಮಗ್ರ ಪೋಷಕಾಂಶಗಳನ್ನು ನೀಡುವುದು. ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರಗಳ ಬಳಕೆಯನ್ನು ಮಾಡಬೇಕು. ಹಾಗೆ ಮಾಡಿದಾಗ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಹೆಚ್ಚಾಗುತ್ತದೆ.

ಹಂಗಾಮಿಗೆ ತಕ್ಕಂತೆ ನೀರು ಕೊಡುವುದು

ಬೆಳೆಗಳಿಗೆ ಬೇಸಿಗೆಯಲ್ಲಿ ನೀರಾವರಿ ಅವಶ್ಯಕತೆ ಮತ್ತು ಕೊಡಬೇಕಾದ ನೀರಾವರಿ ಸಂಖ್ಯೆ ಮಳೆಗಾಲಕ್ಕಿಂತ ಹೆಚ್ಚಾಗುತ್ತವೆ. ಏಕೆಂದರೆ, ಬೇಸಿಗೆ ಕಾಲದಲ್ಲಿ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ. ಕಾರಣ ಬೇಸಿಗೆಯಲ್ಲಿ ಮೇಲಿಂದ ಮೇಲೆ ನೀರುಣಿಸಬೇಕಾಗುತ್ತದೆ.

ಮುಂದಿನ ಅಧ್ಯಾಯದಲ್ಲಿ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯಬಹುದಾದ ಬೆಳೆಗಳು, ಬೆಳೆ ಪದ್ಧತಿ ಮತ್ತು ಸೂಕ್ತ ತಳಿಗಳ ಬಗ್ಗೆ ವಿವರಿಸಲಾಗಿದೆ.

ಸೂಕ್ತವಾದ ಅಂತರ ಮತ್ತು ಸಸ್ಯಗಳ ಸಂಖ್ಯೆ

ಉತ್ಪಾದನೆ ಮತ್ತು ನೀರಿನ-ಬಳಕೆ ಸಾಮಥ್ರ್ಯ ಹೆಚ್ಚಿಸಲು ಆಯಾ ಬೆಳೆಗಳಿಗೆ ಮಾಡಿರುವ ಶಿಫಾರಸ್ಸಿನಂತೆ ಅಂತರ ಮತ್ತು ಸಸ್ಯಗಳ ಸಂಖ್ಯೆ ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ಕಳೆ ನಿಯಂತ್ರಣ

ಕಳೆಗಳು ನೀರು, ಪೋಷಕಾಂಶ ಮತ್ತು ಸೂರ್ಯನ ಕಿರಣಗಳಿಗೆ ಮುಖ್ಯ ಬೆಳೆಜೊತೆ ಪೈಪೋಟಿಯಿಂದ ಇಳುವರಿಯು ಕಡಿಮೆಯಾಗುತ್ತದೆ. ಕಳೆ ನಿಯಂತ್ರಣ ನೀರಿನ-ಬಳಕೆ-ಸಾಮಥ್ರ್ಯ ಹೆಚ್ಚಿಸುವುದು.

ಸಸ್ಯ ಸಂರಕ್ಷಣೆ

ಸಮಗ್ರ ಪೀಡೆ ನಿರ್ವಹಣೆ ಉತ್ತಮ, ಇದರಿಂದ ಹೆಚ್ಚುತ್ತದೆ ನೀರಿನ ಸಾಮಥ್ರ್ಯ.

ನೀರಿನ-ಬಳಕೆ-ಸಾಮರ್ಥ್ಯ ಹೆಚ್ಚಳ

ನೀರಿನ ಬಳಕೆ ಸಾಮರ್ಥ್ಯವನ್ನು ಹೆಚ್ಚಿಸಲು ಸೂಕ್ತವಾದ ನೀರಾವರಿ ಪದ್ದತಿಗಳನ್ನು ಮತ್ತು ವಿನ್ಯಾಸಗಳನ್ನು ಆಯಾ ಬೆಳೆಗಳಿಗೆ ತಕ್ಕಂತೆ ಅಳವಡಿಸಬೇಕು. ಆಗ ಮಾತ್ರ ಬೆಳೆಗಳ ಇಳುವರಿ ಹೆಚ್ಚುತ್ತದೆ.

ನೀರಾವರಿ ಪದ್ದತಿಗಳು ಮತ್ತು ವಿನ್ಯಾಸಗಳು

ನೀರಾವರಿಯನ್ನು ಆಯಾ ಬೆಳೆಗಳಿಗೆ ಅನುಗುಣವಾಗಿ ಬೇರೆ ಬೇರೆ ಪದ್ದತಿಗಳನ್ನು ಅನುಸರಿಸಿ ಕೊಡಬಹುದು. ಸೂಕ್ತವಾದ ನೀರಾವರಿ ಪದ್ಧತಿಯನ್ನು ಅನುಸರಿಸುವುದರಿಂದ ನೀರಿನ ಬಳಕೆ ಸಾಮಥ್ರ್ಯವನ್ನು ಹೆಚ್ಚಿಸಬಹುದು. ನೀರಾವರಿ ಪದ್ಧತಿಗಳಲ್ಲಿ ಎರಡು ವಿಧಗಳಿದ್ದು ಅವುಗಳಾವುವೆಂದರೆ :

 1. ಪಾತಳಿ  ನೀರಾವರಿ ಪದ್ಧತಿ (ಭೂಮಿಯ ಮೇಲ್ಪದರದಲ್ಲಿ ನೀರು ಹರಿಸುವುದು)
 2. ಏರಿಯಲ್ ನೀರಾವರಿ ಪದ್ಧತಿ ( ನೀರನ್ನು ಮೇಲಿನಿಂದ ಭೂಮಿಗೆ ಚಿಮುಕಿಸುವುದು)

ಇದರಲ್ಲಿ ಎರಡು ವಿಧಗಳಿವೆ . ಅವುಗಳೆದಂರೆ : ತುಂತುರು ನೀರಾವರಿ ಮತ್ತು ಹನಿ ನೀರಾವರಿ

ಪಾತಳಿ ನೀರಾವರಿ ಪದ್ಧತಿ : ಈ ಪದ್ಧತಿಯನ್ನು ಗುರುತ್ವಾಕರ್ಷಣೆ ಶಕ್ತಿಯ ಸಹಾಯದಿಂದ ಭೂಮಿಯ ಮೇಲೆ ನೀರಿನ ಕಾಲುವೆಗಳಲ್ಲಿ ನೀರನ್ನು ಹರಿಸಿ ತಂದು ಬೆಳೆಗಳಿಗೆ ನೀರುಣಿಸುವುದು.

ಅನುಕೂಲಗಳು

 • ಈ ಪದ್ಧತಿಯನ್ನು ರೈತರು ಸುಲಭವಾಗಿಅಳವಡಿಸಬಹುದು.
 • ಬೇರೆ ಪದ್ಧತಿಗಳಿಗಿಂತ ಖರ್ಚಿನಲ್ಲಿ ಕಡಿಮೆ.
 • ಅನುಕೂಲಕ್ಕೆ ತಕ್ಕಂತೆ ಪಾತಿಗಳ ಗಾತ್ರ ಮತ್ತು ಆಕಾರಗಳನ್ನು ಇಟ್ಟುಕೊಳ್ಳಬಹುದು.
 • ಭುಮಿಯನ್ನು ಆದಷ್ಟು ಮಟ್ಟಮಾಡಿ, ಬದುಗಳನ್ನು ಹಾಕಿ, ಮಣ್ಣು ಮತ್ತು ಬೆಳೆಗಳ ಗುಣಧರ್ಮಕ್ಕೆ ಸೂಕ್ತವಾದ ನೀರಾವರಿ ವಿನ್ಯಾಸಗಳನ್ನು ತಯಾರುಮಾಡಿ ನೀರು ಕೊಡಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ನೀರಿನ ಸದ್ಬಳಕೆಯಾಗುತ್ತದೆ..

ಪಾತಳಿ ನೀರಾವರಿ ಪದ್ಧತಿಯಲ್ಲಿನ ವಿನ್ಯಾಸಗಳು

ಪಾತಳಿ ನೀರಾವರಿ ಪದ್ಧತಿಯಲ್ಲಿ ಈ ಕೆಳಕಂಡ ವಿನ್ಯಾಸಗಳನ್ನು ಸೂಕ್ತವಾದ ಬೆಳೆಗಳು ಮತ್ತು ಮಣ್ಣಿಗೆ ಶಿಫಾರಸ್ಸು ಮಾಡಲಾಗಿದೆ.

 • ಬದುಪಟ್ಟಿ ನೀರಾವರಿ
 • ಚೌಕಪಾತಿ ಅಥವಾ ಮಡಿ ನೀರಾವರಿ
 • ಸಾಲುಬೋದು ಅಥವಾ ದೋಣಿ-ದಿಣ್ಣೆ ನೀರಾವರಿ
 • ನೀರಿಗೆ ನೀರಾವರಿ
 • ವೃತ್ತಾಕಾರದ ಗುಂಡಿ ನೀರಾವರಿ

ಬದುಪಟ್ಟಿ ನೀರಾವರಿ ಹೇಗೆ ?

 • ಭೂಮಿಯನ್ನು ಸಮಾನಾಂತರ ಪಟ್ಟಿಗಳಾಗಿ ವಿಭಾಗಿಸಿ, ಸಣ್ಣ ಬದುಗಳನ್ನು ಹಾಕಿ, ಪಟ್ಟಿಗಳ ಮಧ್ಯದಲ್ಲಿ ಸಮತಟ್ಟು ಮಾಡಬೇಕು.•
 • ಎರಡು ಬದುಗಳ ನಡುವೆ ತೆಳುವಾಗಿ ಮತ್ತು ಸಾವಕಾಶವಾಗಿ ನೀರು ಹರಿದು ಹೋಗುವಂತೆ ಪಟ್ಟಿಯನ್ನು ಮಟ್ಟ ಮಾಡಬೇಕು.
 • ಪಟ್ಟಿಯ ಉದ್ದಕ್ಕೂ ಸ್ವಲ್ಪ ಇಳಿಜಾರು ಇರಬೇಕು.
 • ಈ ನೀರಾವರಿ ವಿನ್ಯಾಸವನ್ನು ಸಾಧಾರಣ ಉಪಕರಣಗಳನ್ನು ಬಳಸಿ ನಿರ್ಮಿಸಬಹುದು ಮತ್ತು ನೀರನ್ನು ಸಮರ್ಪಕವಾಗಿ ಬಳಸಬಹುದು.
 • ಈ ಪದ್ಧತಿಯು ಗೋಧಿ, ಜೋಳ, ಮುಸುಕಿನ ಜೋಳ, ಹತ್ತಿ, ಕಬ್ಬು, ದ್ವಿದಳ ಧಾನ್ಯಗಳು, ನೆಲಗಡಲೆ, ಮಾವಿನ ಬೆಳೆಗಳಿಗೆ ಬಹಳ ಸೂಕ್ತವಾದುದು.
 • ಬದು ಪಟ್ಟಿಗಳಲ್ಲಿ ನೀರುಣಿಸಿದರೆ, ನೀರಾವರಿ ಸಾಮಥ್ರ್ಯ ಸುಮಾರು ಶೇ. 65 ರಿಂದ 70 ರಷ್ಟನ್ನು ಸಾಧಿಸಬಹುದು.

ಚೌಕಿ ಪಾತಿ ಅಥವಾ ಮಡಿ ನೀರಾವರಿ

ಇದು ಒಂದು ಉತ್ತಮ ನೀರುಣಿಸುವ ವಿನ್ಯಾಸ.

 • ನೀರು ಇಂಗುವ ಪ್ರಮಾಣ ಕಡಿಮೆ ಇರುವ ಹಾಗೂ ಸಮನಾದ ಮತ್ತು ಅಲ್ಪ ಇಳಿಜಾರುಳ್ಳ ಭೂಮಿಯಲ್ಲಿ ಉತ್ತಮ ಪದ್ಧತಿ.
 • ಪತ್ರಿ ಮಡಿಗೂ ಸುತ್ತಲೂ ಸಣ್ಣ ಬದು ಹಾಕಿ ಭೂಮಿಯನ್ನು ಮಟ್ಟ ಮಾಡಬೇಕು.
 • ಒಂದು ಮಡಿಯಲ್ಲಿ ನೀರನ್ನು ತುಂಬಿ ಸಾಕಷ್ಟು ಇಂಗಿದ ನಂತರ ಮುಂದಿನ ಮಡಿಗೆ ನೀರು ಬಿಡಬೇಕು. ಈ ವಿನ್ಯಾಸವನ್ನು ಮುಖ್ಯವಾಗಿ ಭತ್ತಕ್ಕೆ ನೀರುಣಿಸಲು ಅನುಸರಿಸಬೇಕು.
 • ಇತರೆ ಬೆಳೆಗಳಾದ ಗೋಧಿ, ಮುಸುಕಿನ ಜೋಳ, ಧಾನ್ಯಗಳು, ಎಣ್ಣೆಕಾಳು ಬೆಳೆಗಳು ಮತ್ತು ಮೇವಿನ ಬೆಳೆಗಳಿಗೂ ಅನುಸರಿಸಬಹುದು.
 • ಅನುಕೂಲಗಳು.
 • ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ.
 • ನೀರು ಒಂದೇ ಸಮನಾಗಿ ಇಂಗುತ್ತದೆ.
 • ನೀರು ಪೂಲಾಗುವುದಿಲ್ಲ.
 • ನೀರನ್ನು ಹಾಯಿಸುವ ಸಾಮಥ್ರ್ಯ ಹೆಚ್ಚಾಗುತ್ತದೆ. (ಸುಮಾರು ಶೇ. 70 ರಿಂದ 75 ರಷ್ಟು)

ಸಾಲು ಬೋದು ಅಥವಾ ದೋಣಿ-ದಿಣ್ಣೆ ನೀರಾವರಿ

ಇದು ಸಹಾ ಶಿಫಾರಸ್ಸು ಮಾಡಿರುವ ಪದ್ಧತಿ

 • ಇದನ್ನು ಸಾಲು ಬೆಳೆಗಳಲ್ಲಿ ಸುಲಭವಾಗಿ ಅಳವಡಿಸಬಹುದು.
 • ಸಾಲುಗಳ ಅಂತರ ಹೆಚ್ಚು ಇರುವ ಮೆಣಸಿನಕಾಯಿ, ಟೊಮ್ಯಾಟೋ, ಬದನೆ, ಕಬ್ಬು, ತೊಗರಿ, ಮುಸುಕಿನ ಜೋಳ, ಸೂರ್ಯಕಾಂತಿ ಮತ್ತು ಹತ್ತಿ ಮುಂತಾದ ಬೆಳೆಗಳಿಗೆ ಈ ವಿನ್ಯಾಸ ಸೂಕ್ಷ್ಮ.
 • ಕ್ಷೇತ್ರಗಳಲ್ಲಿ ದೋಣಿ-ದಿಣ್ಣೆಗಳನ್ನು ಸೂಕ್ತ ಅಂತರದಲ್ಲಿ ನಿರ್ಮಿಸಿ ಪ್ರತಿ ದೋಣಿಗೆ ನೀರನ್ನು ಹಾಯಿಸಬೇಕು.
 • ದೋಣಿ-ದಿಣ್ಣೆಗಳನ್ನು ಸಮತಟ್ಟಾದ ಕ್ಷೇತ್ರಗಳಲ್ಲಿ ನೇರವಾಗಿ ಮತ್ತು ಇಳಿಜಾರು ಕ್ಷೇತ್ರದಲ್ಲಿ ಸಮಪಾತಳಿಯಾಗಿ ನಿರ್ಮಿಸಿ ನೀರನ್ನು ಹಾಯಿಸಬಹುದು.
 • ಅನುಕೂಲಗಳು
 • ನೀರು ಪೋಲಾಗದಂತೆ ಮಿತವಾಗಿ ಬಳಸಬಹುದು.
 • ನೀರಾವರಿ ಸಾಮಥ್ರ್ಯ ಸುಮಾರು ಶೇ. 75 ರಿಂದ 80 ರಷ್ಟಾಗಬಹುದು.
 • ಹೆಚ್ಚು ತೇವಾಂಶ ತಡೆಯಲಾರದ ಬೆಳೆಗಳಿಗೆ (ಟೊಮ್ಯಾಟೋ, ಮುಸುಕಿನ ಜೋಳ ಮತ್ತು ದ್ವಿದಳ ಧಾನ್ಯಗಳು.) ಈ ಪದ್ಧತಿಯಿಂದ ನೀರುಣಿಸುವುದು ಬಹಳ ಉತ್ತಮ.
 • ಬೆಳೆಗಳ ಬೇರಿಗೆ ಸೂಕ್ತ ಪ್ರಮಾಣದಲ್ಲಿ ತೇವಾಂಶ ಮತ್ತು ಗಾಳಿ ಸಿಗುತ್ತವೆ.
 • ಅಂತರ ಬೇಸಾಯವನ್ನೂ ಸಹ ಸುಲಭವಾಗಿ ಮಾಡಬಹುದು.
 • ಬೆಳೆಗಳ ಇಳುವರಿ ಹೆಚ್ಚಾಗುತ್ತದೆ.

ನೀರಿಗೆ ನೀರಾವರಿ

ಈ ವಿನ್ಯಾಸ ಸಹ ತರಕಾರಿ ಬೆಳೆಗಳಲ್ಲಿ ಹೆಚ್ಚಿನ ಬಳಕೆಯಲ್ಲಿದೆ.

 • ಸಾಲಿನ ಅಂತರ ಕಡಿಮೆ ಇರುವ ಸಣ್ಣ ಕಾಳಿನ ಬೆಳೆಗಳು ಮತ್ತು ತರಕಾರಿ ಬೆಳೆಗಳಾದ ಈರುಳ್ಳಿ, ಬೆಳ್ಳುಳ್ಳಿ, ಕೋಸು, ಮೂಲಂಗಿ, ಹುರಳಿಕಾಯಿ, ಸೊಪ್ಪುಗಳು ಮತ್ತು ಹುಲ್ಲು ಬೆಳೆಗಳಿಗೆ ಉತ್ತಮ
 • ದೊರೆಯುವ ನೀರಿನ ಪ್ರಮಾಣ ಕಡಿಮೆ ಇರುವಲ್ಲಿ ಒಂದೇ ಮಟ್ಟವಾಗಿರುವ ಸಾಲುಗಳ ಮೂಲಕ ನೀರಾವರಿ ಮಾಡುವುದು.
 • ಬದುಪಟ್ಟಿ ನೀರಾವರಿಯಲ್ಲಿಯೂ ಸಹ ಈ ಪದ್ಧತಿಯನ್ನು ಅಳವಡಿಸಿ ನೀರನ್ನು ಸಮವಾಗಿ ಹರಡುವಂತೆ ಮಾಡಬಹುದು.

ವೃತ್ತಾಕಾರದ ಗುಂಡಿ ನೀರಾವರಿ

ನೀರು ನಿಲ್ಲಲು ಸ್ವಲ್ಪ ಆಳದ ತಗ್ಗುಗಳನ್ನು ಮಾಡಿ ಸುತ್ತಲೂ ಸಣ್ಣ ಸಣ್ಣ ಕಟ್ಟೆ/ಬದುಗಳನ್ನು ಕಟ್ಟಿ ಆಯಾ ಬೆಳೆಯ ವಯಸ್ಸು ಮತ್ತು ಗಾತ್ರಕ್ಕೆ ತಕ್ಕಷ್ಟು ನೀರನ್ನು ಹರಿಸುವುದನ್ನು ವೃತ್ತಾಕಾರದ ಗುಂಡಿ ನೀರಾವರಿ ಎಂದು ಕರೆಯಬಹುದು.

ಈ ಪದ್ಧತಿಯಲ್ಲಿ

 • ಹಣ್ಣಿನ ಗಿಡಗಳ/ಮರಗಳ ಬುಡದ ಸುತ್ತಲೂ ಭೂಮಿಯನ್ನು ಮಟ್ಟಮಾಡಿ ಪ್ರತಿಯೊಂದು ಬುಡದ ಸುತ್ತಲೂ ಮಣ್ಣನ್ನು ಏರಿಸಬೇಕು.
 • ಹಣ್ಣಿನ ಮರಗಳ ಬುಡಕ್ಕೆ ನೇರವಾದ ನೀರಿನ ಸಂಪರ್ಕವಿಲ್ಲದಂತೆ ತಡೆಯುತ್ತದೆ.
 • ಸಾಮಾನ್ಯವಾಗಿ ಹಣ್ಣಿನ ಬೆಳೆಗಳಿಗೆ ಇದು ಒಳ್ಳೆಯ ಪದ್ಧತಿ.
 • ಈ ಪದ್ಧತಿಯಲ್ಲಿ ನೀರು ಸಮವಾಗಿ ಮಣ್ಣಿನಲ್ಲಿ ಇಂಗಿ, ಬೇರುಗಳಿಗೆ ಲಭ್ಯವಾಗುತ್ತದೆ.
 • ಈ ಪದ್ಧತಿಯಲ್ಲಿ ನೀರು ಪೋಲಾಗುವುದಿಲ್ಲ.
 • ಸುಮಾರು ಶೇ. 80 ರಷ್ಟು ನೀರಾವರಿ ಸಾಮಥ್ರ್ಯವನ್ನು ಸಾಧಿಸಬಹುದು.
 • ಬೆಳೆಗಳ ಬೇರುಗಳಿಗೆ ಉತ್ತಮ ಪ್ರಮಾಣದಲ್ಲಿ ಗಾಳಿ ಮತ್ತು ನೀರು ಲಭ್ಯವಾಗಿ ಉತ್ತಮ ಇಳುವರಿ ಪಡೆಯಬಹುದು.

ಏರಿಯಲ್ ನೀರಾವರಿ ಪದ್ಧತಿ

ಈ ಪದ್ಧತಿಯಲ್ಲಿ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿಗಳಿದ್ದು ಇವುಗಳಲ್ಲಿ ಹನಿ ನೀರಾವರಿ ಪದ್ಧತಿ ಅಚ್ಚುಕಟ್ಟು ಪ್ರದೇಶಕ್ಕೆ ಸೂಕ್ತವಾಗಿರುವುದರಿಂದ ಆ ಪದ್ಧತಿಯ ವಿವರಣೆ ಇಲ್ಲಿ ಕೊಡಲಾಗಿದೆ.

ಹನಿ ನೀರಾರಿ ಪದ್ಧತಿ

ನೀರನ್ನು ಹನಿಹನಿಯಾಗಿ ಬೇರಿನ ವಲಯದಲ್ಲಿ ಮೇಲಿಂದ ಮೇಲೆ ಒದಗಿಸುವುದಕ್ಕೆ ಹನಿ ನೀರಾವರಿ ಪದ್ಧತಿ ಎಂದು ಕರೆಯಲಾಗುತ್ತದೆ.

ಇತರೆ ನೀರಾವರಿ ಪದ್ಧತಿಗಳಲ್ಲಿ ನೀರು ಬೇರಿನ ವಲಯಕ್ಕಿಂತ ಆಳವಾಗಿ ಇಂಗಿ ಮತ್ತು ಆವಿಯಾಗಿ ಹೋಗುವುದರಿಂದ ಆಗುವ ನಷ್ಟವನ್ನು ಈ ಪದ್ಧತಿಯಿಂದ ಕಡಿಮೆ ಮಾಡಬಹುದು.

ನೀರಿನ ಕೊರತೆ ಇರುವ ಮತ್ತು ಕ್ಷಾರಯುಕ್ತ ಜಮೀನಿನ ಪ್ರದೇಶಗಳಲ್ಲಿ ಈ ಪದ್ಧತಿಯು ಬಹು ಉತ್ಕøಷ್ಟವಾದದು.

 • ನೀರು ಹನಿಸುವ ಸಾಧನಗಳುಳ್ಳ ಕಡಿಮೆ ವ್ಯಾಸದ ಪ್ಲಾಸ್ಟಿಕ್ ಕೊಳವೆಗಳನ್ನು ಬಳಸಿ ನೀರುಣಿಸಬೇಕು.
 • ಈ ಪದ್ಧತಿಯಲ್ಲಿ ಕೇವಲ ಶೇ. 10 ರಷ್ಟು ಮಾತ್ರ ನೀರು ಪೋಲಾಗಿ, ಶೇ. 90 ರಷ್ಟು ನೀರು ಸಸ್ಯಗಳಿಗೆ ದೊರಕಿ ಲಭ್ಯವಿರುವ ನೀರಿನ-ಸಾಮಥ್ರ್ಯ-ಬಳಕೆ ಆಗುತ್ತದೆ.
 • ಪಾತಳಿ ನೀರಾವರಿಯಲ್ಲಿ ಒಂದು ಎಕರೆ ಉಪಯೋಗಿಸುವಷ್ಟು ನೀರನ್ನು ಹನಿ ನೀರಾವರಿ ಪದ್ಧತಿಯಲ್ಲಿ 2 ರಿಂದ 3 ಎಕರೆ ಉಪಯೋಗಿಸಬಹುದು.
 • ಎಕರೆವಾರು ಬೆಳೆಯ ಇಳುವರಿ ಶೇ. 50 ರಿಂದ 100 ರಷ್ಟು ಹೆಚ್ಚಾಗುತ್ತದೆ.

ಈ ಪದ್ಧತಿಯ ಬಳಕೆಗೆ ಸ್ವಲ್ಪ ಹೆಚ್ಚಿನ ಪ್ರಾರಂಭಿಕ ಖರ್ಚು ಬರುತ್ತಾದರೂ ಸರ್ಕಾರದಿಂದ ಸಹಾಯಧನ ದೊರೆಯಬಹುದಾಗಿದೆ.

ಬೆಳೆಗಳ ಅವಶ್ಯಕತೆಗೆ ತಕ್ಕಂತೆ ನೀರುಣಿಸುವುದು

ಮಿತಬಳಕೆಯ ವಿಧಾನಗಳನ್ನು ಅನುಸರಿಸಿ ನೀರನ್ನು ಅಗತ್ಯವಿದ್ದಷ್ಟು ಮಾತ್ರ ಬಳಸಬೇಕು.ಆದಕಾರಣ ಎಷ್ಟು ಬೇಕೋ ಅಷ್ಟೇ ನೀರು ಬಳಸುವುದು ಮುಖ್ಯ.  ನೀರನ್ನು ಕೊಡಬೇಕಾದ ಸಮಯ, ಅದರ ಪ್ರಮಾಣವನ್ನು ತಿಳಿದಿರಬೇಕು. ಜೊತೆಗೆ ನೀರಿನ ಬಳಕೆ ಸಾಮಥ್ರ್ಯವನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ಮಣ್ಣಿನ ಗುಣಧರ್ಮ

 • ಭೂಮಿಗೆ ಸಾಕಷ್ಟು ಮಳೆ ನೀರು ಅಥವಾ ನೀರಾವರಿ ನೀರನ್ನು ಕೊಟ್ಟು ನೀರು ಇಂಗಿದ ಮೇಲೆ 2 ದಿವಸಗಳ ನಂತರ ಕೆಂಪು ಮಣ್ಣಿನಲ್ಲಿ ಅಥವಾ 3 ದಿವಸಗಳ ನಂತರ ಕಪ್ಪು ಮಣ್ಣಿನಲ್ಲಿ ಉಳಿಯುವ ತೇವಾಂಶದ ಪ್ರಮಾಣದ ಪರಿಮಿತಿಯನ್ನು ನೀರು ಹಿಡಿದಿಟ್ಟುಕೊಳ್ಳುವ ಮಣ್ಣಿನ ಶಕ್ತಿ ಎನ್ನಬಹುದು. ಈ ಸಮಯದಲ್ಲಿ ಮಣ್ಣಿನಲ್ಲಿ ಸೂಕ್ತ ಪ್ರಮಾಣದಲ್ಲಿ ನೀರು ಇರುತ್ತದೆ.
 • ಇನ್ನೂ 10-15 ದಿವಸಗಳು ಕಳೆದ ನಂತರ ಮಣ್ಣಿನಲ್ಲಿ ತೇವಾಂಶ ತುಂಬಾ ಕಡಿಮೆಯಾಗಿ ಈ ತೇವಾಂಶವನ್ನು ಬೆಳೆಗಳು ಹೀರಲು ಶಕ್ತಿಯಿರುವುದಿಲ್ಲ. ಕಾರಣ ತೇವಾಂಶ ದೊರೆಯುವಿಕೆಯು ಬೇರುಗಳಿಗೆ ಇಲ್ಲವಾಗುತ್ತವೆ. ಹಾಗಾಗಿ ಬೆಳೆಗಳು ಒಣಗುತ್ತವೆ. ಮತ್ತೆ ನೀರು ಕೊಡದೆ ಇದ್ದರೆ ಬೆಳೆಗಳು ಪೂರ್ತಿಯಾಗಿ ಒಣಗುತ್ತದೆ.

ಬೆಳೆಗಳ ಗುಣಧರ್ಮ

ವಿವಿಧ ಬೆಳೆಗಳಲ್ಲಿ ಬೇರುಗಳ ಆಳ, ಸಾಂದ್ರತೆ ಮತ್ತು ನೀರನ್ನು ಹೀರುವ ಕ್ರಮವನ್ನು ತಿಳಿದು ನೀರುಣಿಸುವುದು. ಬೆಳೆಗಳು ತಮಗೆ ಬೇಕಾಗುವ ನೀರನ್ನು ಭೂಮಿಯ ಆಳದಿಂದ ಬೇರಿನ ಸಹಾಯದಿಂದ ತೆಗೆದುಕೊಳ್ಳುವುದು. ಈ ಆಳವು ತರಕಾರಿ ಬೆಳೆಗಳಲ್ಲಿ 1.5 ಅಡಿ ಇದ್ದರೆ ಗೋಧಿ, ಮುಸುಕಿನ ಜೋಳ ಮುಂತಾದ ಏಕದಳ ಧಾನ್ಯಗಳಲ್ಲಿ 2 ರಿಂದ 4 ಅಡಿ ಮತ್ತು ಹಣ್ಣಿನ ಗಿಡಗಳಲ್ಲಿ 6 ಅಡಿಗಳಿಗೆ ಮೇಲ್ಪಟ್ಟು ಇರಬಹುದು.

ಮೂಲ :ದೂರ ಶಿಕ್ಷಣ ಘಟಕ

ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ

ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

3.01904761905
ತೋಟಗಾರಿಕೆಯಲ್ಲಿ ನೀರಾವರಿ ಪದ್ಧತಿ Aug 14, 2020 06:22 PM

ತೋಟಗಾರಿಕೆಯಲ್ಲಿ ನೀರಾವರಿ ಪದ್ಧತಿ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top