ಕಂಪ್ಯೂಟರಲ್ಲಿ ಕನ್ನಡದ ಬಳಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಅಂತರಜಾಲದಲ್ಲಿ ಸದ್ಯಕ್ಕೆ ಕನ್ನಡ ವೆಬ್ ಸೈಟುಗಳ ಸಂಖ್ಯೆ ಕಡಿಮೆ ಇದ್ದರೂ ಕೂಡ ಓದುಗರ ಸಂಖ್ಯೆ ಕಡಿಮೆ ಇಲ್ಲ. ಬಹಳಷ್ಟು ಜನ ಕಂಪ್ಯೂಟರ್ನಲ್ಲಿ ಕನ್ನಡದಲ್ಲಿ ಬರೆಯಲು ಬಯಸುತ್ತಿದ್ದಾರೆ. ಕೆಲವರು ಒತ್ತಕ್ಷರ, ದೀರ್ಘ, ಮಹಾಪ್ರಾಣ ಮುಂತಾದ ಟೈಪಿಂಗ್ ಸ್ವಲ್ಪ ಸಮಸ್ಯೆಯಾಗಿ ಹಿಂಜರಿಯುತ್ತಿದ್ದಾರೆ. ಆದರೂ ಕೂಡ ಉತ್ಸಾಹಿಗಳಿಗೇನೂ ಕಡಿಮೆ ಇಲ್ಲ. ಬಹಳ ಸುಲಭವಾಗಿ ನೇರವಾಗಿ ಎಲ್ಲಿ ಬೇಕಾದರೂ ಕನ್ನಡದಲ್ಲಿ ಬರೆಯಲು
ಮುಂತಾದ ಹಲವು IME ಟೂಲ್ ಗಳಿವೆ. ನುಡಿ, ಪದ, ಬರಹದ IME ಜೊತೆಗೆ ಪದ ಸಂಸ್ಕಾರಕಗಳೂ (Word Processors) ಇವೆ. ಆನ್ ಲೈನ್ ನಲ್ಲಿ ಬರೆಯಲು ಹಲವು ಟೂಲ್ ಗಳಿವೆ. ಸಾಮಾನ್ಯ ಬಳಕೆದಾರರಿಗೆ ಈಗ ಯಾವ ತಾಂತ್ರಿಕ ಸಮಸ್ಯೆ ಇಲ್ಲ. ಬೇಕಾಗಿರುವುದು ಸ್ವಲ್ಪ ಆಸಕ್ತಿ, ಅಭ್ಯಾಸ ಅಷ್ಟೆ. ಈ ಮೊದಲು ವ್ಯಾಪಕವಾಗಿ ಬಳಕೆಯಲ್ಲಿದ್ದ 'ಬರಹ' ತಂತ್ರಾಂಶ ಆವೃತ್ತಿ ಹತ್ತರ ಬಳಿಕ ಉಚಿತವಾಗಿ ಲಭ್ಯವಿಲ್ಲ. ಅದರಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗಾಗಿ ಸಂಪನ್ಮೂಲ ಒಟ್ಟುಮಾಡಲು ಸದ್ಯಕ್ಕೆ ಬರಹ ತಂತ್ರಾಂಶಕ್ಕೆ ಶುಲ್ಕವಿಡಲಾಗಿದೆ ಎಂದು ಹೇಳಲಾಗಿದೆ. ಮತ್ತೊಂದು ಬಹುಬಳಕೆಯ 'ನುಡಿ' ತಂತ್ರಾಂಶದಲ್ಲಿ ಕೆಲವು ಸೌಲಭ್ಯಗಳಿಲ್ಲ. (ಕನ್ನಡ ಬರೆಯಲು ಇರುವ ಹಲವು ತಂತ್ರಾಂಶ ಹಾಗೂ ಟೂಲ್ ಗಳ ಬಗ್ಗೆ ಹಿಂದೊಮ್ಮೆ ಬರೆದಿದ್ದೆ. ಅದು ಇಲ್ಲಿದೆ:
ಈ ಸಂದರ್ಭದಲ್ಲಿ 'ಪದ' ತಂತ್ರಾಂಶದ ಹೊಸ ಆವೃತ್ತಿ (Pada 4.0) ಬಿಡುಗಡೆಯಾಗಿದೆ. ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಬರೆಯಲು ಸಾಧ್ಯವಿರುವ ಈ ತಂತ್ರಾಂಶದಲ್ಲಿ ಮುಖ್ಯವಾಗಿ ಕನ್ನಡಕ್ಕೆ ಹಲವು ರೀತಿಯ ವಿಶೇಷ ಸೌಲಭ್ಯಗಳಿವೆ. ಸ್ಪೆಲ್ ಚೆಕರ್, ಪದ ಅರ್ಥ, ಆಟೋ ಕಂಪ್ಲೀಟ್ ಸೌಲಭ್ಯಗಳಿವೆ. ಮೊತ್ತಮೊದಲ ಬಾರಿಗೆ ಎರಡು ಲಕ್ಷಕ್ಕೂ ಹೆಚ್ಚು ಪದಗಳನ್ನುಳ್ಳ ನಿಘಂಟು ಕೂಡ ಇದರಲ್ಲಿದೆ. ಟೈಪಿಸಿದ ಕಡತಗಳನ್ನು ಹಲವು ರೀತಿಯಲ್ಲಿ ಉಳಿಸಲು(save as) ಅವಕಾಶವಿದೆ. ಹಲವು ಬಗೆಯ ಅಕ್ಷರ ಶೈಲಿಗಳಿವೆ (Font styles). ಪದ ತಂತ್ರಾಂಶ ಅಳವಡಿಸಿಕೊಂಡಾಗ ಅದರ ಜೊತೆ ಪದ IME ಕೂಡ ಇರುತ್ತದೆ. ಇದನ್ನು ಆನ್ ಮಾಡಿಕೊಂಡು ವರ್ಡ್, ಎಕ್ಸೆಲ್ ಮುಂತಾದ ಯಾವುದೇ ಅಪ್ಲಿಕೇಶನ್ ಗಳಲ್ಲಿ ಹಾಗೂ ಇಮೇಲ್, ಚಾಟ್, ಫೇಸ್ ಬುಕ್, ಬ್ಲಾಗ್ ಮುಂತಾದ ಯಾವುದೇ ಅಂತರಜಾಲ ತಾಣಗಳಲ್ಲಿ ನೇರವಾಗಿ ಕನ್ನಡದಲ್ಲಿ ಟೈಪಿಸಬಹುದು.
ತಾಣದಲ್ಲಿ ಈ ತಂತ್ರಾಂಶ ಉಚಿತವಾಗಿ ದೊರೆಯುತ್ತದೆ.ಇದರಲ್ಲಿರುವ ಸೌಲಭ್ಯಗಳು ಹೀಗಿವೆ.
ಪದ ತಂತ್ರಾಂಶದ ಇನ್ನೊಂದು ವಿಶೇಷವೆಂದರೆ ಬರಹ, ನುಡಿ ಮುಂತಾದ ತಂತ್ರಾಂಶಗಳಲ್ಲಿ ಉಳಿಸಿಟ್ಟಿರುವ ಯಾವುದೇ ಕಡತಗಳನ್ನು ನೇರವಾಗಿ ಇದರಲ್ಲಿ ತೆರೆಯಬಹುದು. ಅದು ಯುನಿಕೋಡ್ ಅಕ್ಷರಗಳಾಗಿ ತೆರೆದುಕೊಳ್ಳುತ್ತದೆ. ಮತ್ತೊಂದು ವಿಶೇಷವೆಂದರೆ ಪದ ತಂತ್ರಾಂಶದ ಮೂಲಕ ರಚಿಸಿದ ಪಿಡಿಎಫ್ ಕಡತಗಳಲ್ಲಿ ಯಾವುದೇ ಪದವನ್ನು ಕೂಡ ಹುಡುಕಬಹುದು (find) ಹಾಗೂ ಪಿಡಿಎಫ್ ಕಡತದಲ್ಲಿರುವ ಪಠ್ಯವನ್ನು ಕಾಪಿ ಮಾಡಿ ಬೇರೆಡೆಗೆ ಪೇಸ್ಟ್ ಮಾಡಬಹುದು. ಯಾವುದೇ ಫಾಂಟ್ ಸಮಸ್ಯೆ ಉಂಟಾಗುವುದಿಲ್ಲ.
ಪದ ತಂತ್ರಾಂಶದ zipped/portable version ಕೂಡ ಲಭ್ಯವಿದೆ. ಬಹುತೇಕ ಆಫೀಸ್ ಮುಂತಾದ ಕಡೆ ಗಣಕದಲ್ಲಿ ಯಾವುದೇ ತಂತ್ರಾಂಶ ಅಳವಡಿಸಿಕೊಳ್ಳಲು admin rights ಅಥವಾ permission ಇರುವುದಿಲ್ಲ. ಅಂತಹ ಕಡೆ ಈ zipped version ಇಟ್ಟುಕೊಂಡು ಕನ್ನಡದಲ್ಲಿ ಬರೆಯಬಹುದು. ಅಥವಾ ಒಂದು ಪೆನ್ ಡ್ರೈವ್ ನಲ್ಲಿ ಕಾಪಿ ಮಾಡಿಟ್ಟುಕೊಂಡು ಬೇಕಾದ ಕಂಪ್ಯೂಟರ್ ನಲ್ಲಿ ಹಾಕಿ ನೇರವಾಗಿ ಬಳಸಬಹುದು. ಕಂಪ್ಯೂಟರಿನಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.
ಇಷ್ಟೆಲ್ಲಾ ಸೌಲಭ್ಯಗಳ ತಂತ್ರಾಂಶ ರಚಿಸಿ ಉಚಿತವಾಗಿ ಬಳಕೆಗೆ ದೊರೆಯುವಂತೆ ಮಾಡಿರುವ ತಂತ್ರಾಂಶ ಅಭಿವೃದ್ಧಿಗಾರರಾದ ಲೋಹಿತ್ ಶಿವಮೂರ್ತಿಯವರಿಗೆ ಧನ್ಯವಾದಗಳು.
ಡೌನ್ ಲೋಡ್ ಮಾಡಿಕೊಳ್ಳುವ ತಾಣ:
ಕೊಡುಗೆದಾರರು : ವಿಕಾಸ್ ಹೆಗಡೆ, ಬೆಂಗಳೂರು
ಕೊನೆಯ ಮಾರ್ಪಾಟು : 2/15/2020