ಪ್ರಜಾಪ್ರಭುತ್ವ ಫಲಕಾರಿಯಾಗಬೇಕಾದರೆ, ಸಾರ್ವಜನಿಕರ ಭಾಗವಹಿಸುವಿಕೆ ಅವಶ್ಯಕ. ಪ್ರಜೆಗಳು ಆಡಳಿತದಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ, ಪ್ರಜಾಪ್ರಭುತ್ವಕ್ಕೆ ಒಂದು ಅರ್ಥ ಇರುತ್ತದೆ. ಭಾಗವಹಿಸುವುದೆಂದರೆ ಕೇವಲ ಚುನಾವಣೆಗಳಲ್ಲಿ ಮಾತ್ರವಲ್ಲ. ಸರ್ಕಾರದ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯ. ಸರ್ಕಾರ ಯೋಜನೆಗಳನ್ನು ತಯಾರಿಸುವಾಗ, ಕಾನೂನುಗಳನ್ನು ರಚಿಸುವಾಗ ಹಾಗೂ ತನ್ನ ನಿರ್ಧಾರಗಳನ್ನು ಆಚರಣೆಗೆ ತರುವಾಗ, ನಾಗರೀಕರು ಭಾಗವಹಿಸಬೇಕು. ಆಗ ಮಾತ್ರ ಆಡಳಿತದ ಗುಣಮಟ್ಟ ವೃದ್ದಿಸಲು ಸಾಧ್ಯ. ಸಾರ್ವಜನಿಕರು ಆಡಳಿತದಲ್ಲಿ ಭಾಗವಹಿಸಿದಾಗ ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಉಂಟಾಗುತ್ತದೆ.
ಆದರೆ ಸಾರ್ವಜನಿಕರು ಭಾಗವಹಿಸುವ ಒಂದು ವಿಧಾನ ಮಾಹಿತಿ ಹಕ್ಕು ಚಲಾಯಿಸುವುದು.ಸಾರ್ವಜನಿಕ ಪ್ರಾಧಿಕಾರಗಳು ಹೇಗೆ ಮತ್ತು ಏಕೆ ಹಣ ವೆಚ್ಹ ಮಾಡುತ್ತಿವೆ ಎಂದು ಕೇಳುವುದರಿಂದ ಅಥವಾ ಸಾಮಾನ್ಯ ಮಾಹಿತಿ ಸಂಗ್ರಹಿಸುವುದರಿಂದ ಸಕ್ರಿಯವಾಗಿ ಭಾಗವಹಿಸಬಹುದು.ಕೇಂದ್ರ ಸರ್ಕಾರವು ಮೇ, ೨೦೦೫ ರಲ್ಲಿ ಜಾರಿಗೊಳಿಸುವ ಮಾಹಿತಿ ಹಕ್ಕು ಕಾಯ್ದೆ ೨೦೦೫, ಎಲ್ಲ ಭಾರತೀಯ ನಾಗರೀಕರಿಗೆ ಮಾಹಿತಿ ಸಂಗ್ರಹಿಸುವ ಹಕ್ಕು ನೀಡಿದೆ. ಭಾರತವೆಂಬ ಪ್ರಜಾಪ್ರಭುತ್ವದಲ್ಲಿ, ಸರ್ಕಾರದ ಹಿಡಿತದಲ್ಲಿರುವ ಎಲ್ಲ ಮಾಹಿತಿಯು, ನಾಗರಿಕರ ಸ್ವತ್ತು ಎಂಬುದನ್ನು ಈ ಕಾಯ್ದೆ ಅಂಗೀಕರಿಸುತ್ತದೆ. ನಾಗರಿಕರಿಗೆ ಮಾಹಿತಿ ನೀಡುವುದು, ಸರ್ಕಾರದ ಸಾಮಾನ್ಯ ಕರ್ತವ್ಯಗಳಲ್ಲಿ ಒಂದು, ಕಾರಣ ತಮ್ಮ ಹಣ ಹೇಗೆ ವಿನಿಯೋಗವಾಗುತ್ತಿದೆ ಎಂಬ ಮಾಹಿತಿ ತಿಳಿದುಕೊಳ್ಳುವುದು ನಾಗರೀಕರ ಹಕ್ಕು.
ಮಾಹಿತಿಯನ್ನು ನಾಗರೀಕರೊಂದಿಗೆ ಹಂಚಿಕೊಳ್ಳುವುದರಿಂದ, ಪ್ರಜಾಪ್ರಭುತ್ವದ ಆಚರಣೆಗೆ ಪೂರಕ ಎಂಬ ಅಂಶವನ್ನು ಮಾಹಿತಿ ಹಕ್ಕು ಗುರುತಿಸಿದೆ. ಗೌಪ್ಯತೆ ಎಂಬುದು ಈಗ ಚರಿತ್ರೆಯಾಗಬೇಕು. ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ಯಾವ ಮಾಹಿತಿಯನ್ನು ಜನಪ್ರತಿನಿಧಿಗಳಿಗೆ ನಿರಾಕರಿಸಲಾಗುವುದಿಲ್ಲವೋ ಅದನ್ನು ನಾಗರೀಕರು ನಿರಾಕರಿಸಲು ಸಾಧ್ಯವಿಲ್ಲ. ಈ ಕಾನೂನು ಕೇಂದ್ರ ಸರ್ಕಾರದ ಸಂಸ್ಥೆ / ಇಲಾಖೆಗಳಿಗೆ ಮಾತ್ರ ಅನ್ವಯಿಸದೆ ರಾಜ್ಯಸರ್ಕಾರಗಳಿಗೂ ಅನ್ವಯಿಸುತ್ತದೆ.
ಮಾಹಿತಿ ಹಕ್ಕು ಕಾಯ್ದೆ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸಂವಿಧಾನಾತ್ಮಕ ಕಾರಣಗಳಿಗಾಗಿ ಅನ್ವಯಿಸುವುದಿಲ್ಲ. ಈ ತನ್ನದೇ ಆದ ಮಾಹಿತಿ ಹಕ್ಕು ಕಾಯ್ದೆ ೨೦೦೪ ನ್ನು ಹೊಂದಿದೆ. ಅಲ್ಲಿನ ನಾಗರೀಕರು ರಾಜ್ಯ ಕಾಯ್ದೆಯನ್ನು ಉಪಯೋಗಿಸಿಕೊಂಡು ಮಾಹಿತಿ ಪಡೆಯಬಹುದು ಅಥವಾ ಆ ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಪ್ರಾಧಿಕಾರಗಳಿಂದ ಮಾಹಿತಿ ಪಡೆಯಲು ಕೇಂದ್ರ ಸರ್ಕಾರದ ಪ್ರಾಧಿಕಾರಗಳಿಂದ ಮಾಹಿತಿ ಪಡೆಯಲು ಕೇಂದ್ರ ಮಾಹಿತಿ ಕಾಯ್ದೆ ೨೦೦೫ ನ್ನು ಉಪಯೋಗಿಸಬಹುದು,ಅಲ್ಲದೆ, ಸ್ಥಳೀಯ ಸಂಸ್ಥೆಗಳಿಗೂ ಅದು ಅನ್ವಯ. ಇದರ ಅರ್ಥವೇನೆಂದರೆ ದೇಶದ ಎಲ್ಲ ಹಳ್ಳಿ, ನಗರ, ಜಿಲ್ಲೆಗಳಲ್ಲಿರುವ ನಾಗರೀಕರು ಸಾರ್ವಜನಿಕ ಪ್ರಾಧಿಕಾರದ ಹಿಡಿತದಲ್ಲಿರುವ ಮಾಹಿತಿಯನ್ನು ಪಡೆಯಬಹುದು.
ಇದುವರೆಗೂ ಸರ್ಕಾರದ ಕಛೇರಿಗಳು ಗೌಪ್ಯತೆಯ ನೆರಳಿನಲ್ಲೇ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಾಗಿನಿಂದ ಪರಿಸ್ಥಿತಿ ಬದಲಾಗುತ್ತಿದೆ. ಸರ್ಕಾರಿ ರಹಸ್ಯಗಳ ಅಧಿನಿಯಮ, ೧೯೨೩, ಮಾಹಿತಿಯನ್ನು ಬಹಿರಂಗಗೊಳಿಸುವುದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿದರೆ ಮಾಹಿತಿ ಹಕ್ಕು ಕಾಯ್ದೆ ೨೦೦೫, ಮಾfಹಿತಿ ಬಹಿರಂಗಗೊಳಿಸುವುದನ್ನು ಕದ್ದಾಯಗೊಳಿಸುತ್ತದೆ. ಸರ್ಕಾರದ ಹಿಡಿತದಲ್ಲಿರುವ ಮಾಹಿತಿ ನಾಗರೀಕರಿಗೆ ದೊರೆಯುವುದು ಅಥವಾ ನೀಡುವುದು ಅಪರೂಪವಾದ ಕಾಲವೊಂದಿತ್ತು. ಮಾಹಿತಿ ನೀಡುವುದು ಅಥವಾ ನಿರಾಕರಿಸುವುದು ಸರ್ಕಾರಿ ಅಧಿಕಾರಿ / ಸಿಬ್ಬಂದಿಯ ಅನುಕೂಲವನ್ನು ಅವಲಂಬಿಸಿತ್ತು. ಆದರೆ ಈಗ ಹಾಗಲ್ಲ. ಮಾಹಿತಿ ಹಕ್ಕು ಕಾಯ್ದೆ ನಾಗರೀಕರಿಗೆ ಪ್ರಶ್ನಿಸುವ ಅಧಿಕಾರ ನೀಡಿದೆ. ಉತ್ತರ ಪಡೆಯುವ ಹಕ್ಕು ನೀಡಿದೆ. ಮಾಹಿತಿ ಹಕ್ಕು ಕಾಯ್ದೆಯು ಅಧಿಕಾರಶಾಹಿಯ ಭ್ರಷ್ಟ ಆಡಳಿತವನ್ನು ಮುಚ್ಚಿಕೊಳ್ಳಲು ಬಿಡುವುದಿಲ್ಲ. ಮಾಹಿತಿ ಹಕ್ಕನ್ನು ಉಪಯೋಗಿಸಿ ಕಳಪೆ ಮಟ್ಟದ ಸರ್ಕಾರಿ ನೀತಿಗಳನ್ನು ಬಯಲಿಗೆಳೆದು ರಾಷ್ಟ್ರದ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ದಿಗೆ ನಾಗರೀಕರು ಕಾರಣೇಭೋತರಾಗಬಹುದು.
ಮಾಹಿತಿ ಹಕ್ಕು ಬಗ್ಗೆ ಜನಪರ ಹೋರಾಟ ಮತ್ತು ಆಂದೋಲನ ೧೯೯೦ ರಿಂದಲೇ ನಡೆಯುತ್ತಿದ್ದರೂ, ಕೇಂದ್ರ ಸರ್ಕಾರ ಅದರ ಬಗ್ಗೆ ಕ್ರಮ ಕೈಗೊಂಡಿದ್ದು ೨೦೦೨ ರಲ್ಲಿ. ಆಗಿನ ಸರ್ಕಾರ ಮಾಹಿತಿ ಸ್ವಾತಂತ್ರ್ಯ ಕಾಯ್ದೆಯನ್ನು ಜಾರಿಗೊಳಿಸಲು ಪ್ರಯತ್ನಿಸಿತು. ಆದರೆ ಆ ಕಾನೂನು ಅನುಷ್ಠಾನಕ್ಕೆ ಬಾರದೆ ನಾಗರೀಕರು ಅದನ್ನು ಉಪಯೋಗಿಸಿಕೊಳ್ಳಲು ಆಗಲಿಲ್ಲ. ಅನಂತರ ೨೦೦೪ ರಲ್ಲಿ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಯು,ಪಿ,ಎ. ಸರ್ಕಾರ ಹೆಚ್ಚು ಪ್ರಗತಿಗಾಮಿ,
ಪರಿಣಾಮಕಾರಿ ಮತ್ತು ಅರ್ಥಪೂರ್ಣ ಮಾಹಿತಿ ಹಕ್ಕು ಕಾಯ್ದೆ ತರುವುದಾಗಿ ಘೋಷಿಸಿತು. ಸರ್ಕಾರವು ರಾಷ್ಟ್ರೀಯ ಸಲಹಾ ಸಮಿತಿ (NAC ) ಸ್ತಾಪಿಸಿತು.ಮಾಹಿತಿ ಹಕ್ಕು ವಿಷಯದಲ್ಲಿ ಸರ್ಕಾರ ನೀಡಿದ್ದ ಆಶ್ವಾಸನೆಯ ಅನುಷ್ಠಾನದ ಬಗ್ಗೆ ನಿಗಾವಹಿಸುವುದು ಪರಿಷತ್ತಿನ ಒಂದು ಉದ್ದೇಶವಾಗಿತ್ತು. ರಾಷ್ಟ್ರೀಯ ಮಾಹಿತಿ ಹಕ್ಕು ಆಂದೋಲನದ ಸಕ್ರಿಯ ಕಾರ್ಯಕರ್ತರು ಈ ಪರಿಷತ್ತಿನಲ್ಲಿದ್ದರು. ರಾಷ್ಟ್ರೀಯ ಮಾಹಿತಿ ಹಕ್ಕು ಆಂದೋಲನದ ಜೊತೆಗೆ ಸಿ.ಎಚ್.ಆರ್.ಐ. ಹಾಗೂ ಇತರೆ ನಾಗರಿಕ ಸಂಸ್ಥೆಗಳು ಸೇರಿದಂತೆ ರಾಷ್ಟ್ರೀಯ ಸಲಹಾ ಪರಿಷತ್ತು ಆಗಸ್ಟ್ ೨೦೦೪ ರಲ್ಲಿ, ಕೇಂದ್ರ ಸರ್ಕಾರಕ್ಕೆ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ತನ್ನ ಸಲಹೆಗಳನ್ನು ನೀಡಿತು. ಈ ಸಲಹೆಗಳನ್ನು ಆದರಿಸಿದ ಮಾಹಿತಿ ಹಕ್ಕು ಮಸೂದೆ ೨೦೦೪ ಸಿದ್ದವಾಯಿತು. ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಇದಾದನಂತರ ಮಸೂದೆಯು ಲೋಕಸಭೆಯ ಅನುಮೋದನೆಯನ್ನು ಮೇ ೧೧, ೨೦೦೫ ರಂದು ಹಾಗೂ ರಾಜ್ಯ ಸಭೆಯ ಅನುಮೋದನೆಯನ್ನು ಮೇ ೧೨, ೨೦೦೫ ರಂದು ಪಡೆಯಿತು. ಮಾಹಿತಿ ಹಕ್ಕು ಕಾಯ್ದೆ ದಿನಾಂಕ. ೧೫-೬-೨೦೦೫ ರಂದು ರಾಷ್ಟ್ರಪತಿ ಅವರ ಅಂಗೀಕಾರ ಪಡೆಯಿತು. ಕೆಲವು ಸೆಕ್ಷನ್ಗಳು ಅಂದಿನಿಂದಲೇ ಜಾರಿಗೊಂಡಿತು. ಅಕ್ಟೋಬರ್ ೧೨, ೨೦೦೫ ರಂದು ಕಾಯ್ದೆಯು ಸಂಪೂರ್ಣವಾಗಿ ದೇಶಾದ್ಯಂತ ಅನುಷ್ಟಾನಗೊಂಡಿದೆ.
ಹೆಚ್ಚಿನ ಮಾಹಿತಿಗಾಗಿ : ಮಾಹಿತಿ ಹಕ್ಕು ಕಾಯಿದೆ ಬಳಸುವುದು ಹೇಗೆ
ಕೊನೆಯ ಮಾರ್ಪಾಟು : 7/29/2020
ಮಾಹಿತಿಗಾಗಿ ಹಕ್ಕು ಯಾವುದೇ ಸಾರ್ವಜನಿಕ ಪ್ರಾಧಿಕಾರದ ನಿಯಂತ...
ರೈಲ್ವೇ ಪ್ಲಾಟ್ ಫಾರಂಗಳಲ್ಲಿರುವ ಮಕ್ಕಳ ಹಕ್ಕುಗಳನ್ನು ರಕ್ಷ...
ಮಗುವಿನ ಹಕ್ಕುಗಳು ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಅಂತರಾಷ್ಟ್ರೀಯ ಕಾನೂನಿನ ಪ್ರಕಾರ , ಮಗು ಎಂದರೆ ೧೮ ವರ್ಷದೊ...