ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಾಧಕರು

ಸಾಧಕರ ಕುರಿತು

ರಂಗಭೂಮಿಯ ಭೀಷ್ಮ ಬಿ.ವಿ. ಕಾರಂತ್

ಬಿ.ವಿ. ಕಾರಂತ್ ಹೆಸರೇ ಮೋಡಿ ಮಾಡುವಂಥದ್ದು. ಗುಂಗುರು ಗುಂಗುರು ಕಪ್ಪು ತಲೆಗೂದಲು, ಬಿಳಿಯ ಗಡ್ಡ, ಹೊಳೆವ ಕಣ್ಣುಗಳು.... ಆ ಕಣ್ಣುಗಳಲ್ಲಿ ಅದೇನೋ ಸೆಳಕು. ಮುಗ್ಧ ಮುಖಭಾವ. ಪ್ರಥಮ ನೋಟದಲ್ಲೇ ಪಾಮರ ಕೂಡ ತಲೆ ತಗ್ಗಿಸಿ ಗೌರವಿಸುವಂಥ ತೇಜಸ್ಸು. ನಿಂತಲ್ಲಿ ನಿಲ್ಲದ, ಕುಂತಲ್ಲಿ ಕೂರದ ಚಟುವಟಿಕೆ,ಲವಲವಿಕೆಯ ಜೀವ. ಇಂದು ಕಾರಂತ್ ನಮ್ಮೊಂದಿಲ್ಲ ಎಂದರೆ ನಂಬಲೇ ಆಗುತ್ತಿಲ್ಲ.

ಕಾರಂತರ ವ್ಯಕ್ತಿತ್ವವೇ ಅಂಥದ್ದು. ಬಿ.ವಿ. ಕಾರಂತರ ಮುಖದಲ್ಲಿ ಅಡಕವಾಗಿದ್ದ ಗಾಂಭೀರ್ಯ, ಅವರ ತ್ರಿವಿಕ್ರಮ ಪ್ರತಿಭೆ ಹಾಗೂ ವಿದ್ವತ್ತನ್ನು ಹೊರಸೂಸುತ್ತಿತ್ತು. ಎಂಥವರಿಗೂ ಅವರನ್ನು ಕಂಡಾಗ ಪೂಜ್ಯಭಾವ ಮೂಡುತ್ತಿತ್ತು. ಕಾರಂತರು ಕೊನೆಗಾಲದಲ್ಲಿ ಅನಾರೋಗ್ಯದಿಂದ ಕೃಶವಾಗಿದ್ದರಾದರೂ ಮುಖಕಾಂತಿ ಬಾಡಿರಲಿಲ್ಲ.

ಕನ್ನಡಕ್ಕೆ ಮೊಟ್ಟ ಮೊದಲ ಸ್ವರ್ಣಕಮಲ ತಂದುಕೊಟ್ಟ ಹಿರಿಮೆಯೂ ಬಿ.ವಿ.ಕಾರಂತರದು. ಕಾರಂತರದು ಬಹುಮುಖ ವ್ಯಕ್ತಿತ್ವ. ಅವರು ಕವಿ, ಸಾಹಿತಿ, ನಾಟಕಕಾರ, ರಂಗಕರ್ಮಿ, ಚಿತ್ರ ನಿರ್ದೇಶಕ, ಸಂಗೀತ ನಿರ್ದೇಶಕ.

ಕಾರಂತರು ಹುಟ್ಟಿದ್ದು, ೧೯೨೮ರ ಅಕ್ಟೋಬರ್ ೭ರಂದು. ಹುಟ್ಟೂರು ಉಡುಪಿ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಕ್ಕಾಜೆ. ತಂದೆ ಬಾಬು ಕೋಡಿ ನಾರಣಪ್ಪಯ್ಯ, ತಾಯಿ ಲಕ್ಷ್ಮಮ್ಮ. ತಾಯಿಯ ಈ ಅಕ್ಕರೆಯ ಪುತ್ರ ವೆಂಕಟರಮಣ. ಅಕ್ಕರೆಯ ಬೋಯಣ್ಣ.

ಬಾಲ್ಯದಿಂದಲೇ ಕಾರಂತರಿಗೆ ನಾಟಕದ ಗೀಳು. ಯಕ್ಷಗಾನ ತಾಲೀಮು ನೋಡುವುದು ನಿತ್ಯದ ಕಾಯಕ. ನಾಟಕ ನೋಡಲು ಪಾಣೆ ಮಂಗಳೂರಿನಿಂದ ಮಂಗಳೂರಿಗೆ ಸೈಕಲ್ ಹೊಡೆಯುತ್ತಿದ್ದ ಕಾರಂತರು, ರಂಗಭೂಮಿಯ ಆಕರ್ಷಣೆಯಿಂದ ಮೈಸೂರಿಗೆ ಹೋದರು.

ರಂಗದ ಸೆಳೆತ: ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಪಿ.ಕೆ. ನಾರಾಯಣರಾವ್ ನಿರ್ದೇಶನದ ಕುವೆಂಪು ವಿರಚಿತ‘ನನ್ನ ಗೋಪಾಲ’ ನಾಟಕದ ಮೂಲಕ ಕಾರಂತರು ರಂಗಭೂಮಿ ಪ್ರವೇಶಿಸಿದರು. ಎಂಟನೇ ತರಗತಿವರೆಗೆ ಓದಿದ ಕಾರಂತರಿಗೆ ಊರಲ್ಲಿ ಓದು ಮುಂದುವರಿಸಲು ಸಾಧ್ಯವಾಗಲಿಲ್ಲ. ರಂಗಭೂಮಿಯ ಸೆಳೆತ ಮಾತ್ರ ಕಾರಂತನ್ನು ಬಿಟ್ಟಿರಲಿಲ್ಲ. ರಂಗಭೂಮಿಗೆ ವಿಫುಲ ಅವಕಾಶವಿದ್ದ ಮೈಸೂರಿಗೆ ಪ್ರಯಾಣ. ರಂಗಭೂಮಿಯ ಸೇವೆಯೇನೋ ಸರಿ ಹೊಟ್ಟೆಪಾಡು ನಡೆಯಬೇಕಲ್ಲ. ಅಲ್ಲಿ ಮಾಣಿಯಾಗಿ ಕೆಲಸಕ್ಕೆ ಸೇರಿದರು. ಹಿಂದಿ ಕಲಿಯಲೂ ಆರಂಭಿಸಿದರು.

ಆನಂತರ ಅಲ್ಲೇ ಬೀಡು ಬಿಟ್ಟಿದ್ದ ಗುಬ್ಬಿ ಕಂಪನಿ ಸೇರಿ ಬಾಲಕೃಷ್ಣ, ಮಾರ್ಕಂಡೇಯ ಮೊದಲಾದ ಪಾತ್ರಗಳಲ್ಲಿ ಅಭಿನಯಿಸಿ, ಅನುಭವ ಸಂಪಾದಿಸಿದರು. ಸ್ತ್ರೀಪಾತ್ರಗಳಲ್ಲಿ ಮಿಂಚಿದರು. ಆನಂತರ ಹೊಸ ಅಲೆಯ ರಂಗ ಮಾಧ್ಯಮಕ್ಕೆ ತಮ್ಮನ್ನು ತೊಡಗಿಸಿಕೊಂಡ ಅವರು, ರಂಗಭೂಮಿಗೇ ಹೊಸ ಆಯಾಮ ನೀಡಿದರು. ಬೋಪಾಲ,ದೆಹಲಿಯನ್ನೆಲ್ಲಾ ಸುತ್ತಾಡಿದರು. ವಿದೇಶಗಳಲ್ಲೂ ಕನ್ನಡ ರಂಗಭೂಮಿಯ ಕಂಪನ್ನು ಪಸರಿಸಿದರು.

ಹಿಂದಿಯನ್ನು ವ್ಯಾಸಂಗ ಮಾಡಿದ್ದ ಕಾರಂತರು ಬೆಂಗಳೂರಿಗೆ ಬಂದು ಹಿಂದಿ ಅಧ್ಯಾಪಕರಾದರು. ಕಾಶಿ ವಿ.ವಿಯಿಂದ ಹಿಂದಿ ಎಂ.ಎ. ಪದವಿ ಪಡೆದರು. ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲೂ ಶಿಕ್ಷಣ ಪಡೆದರು. ಅಲ್ಲಿ ಸರ್ವತೋಮುಖ ಪರಿಣತ ಎಂಬ ಪ್ರಶಸ್ತಿಗೂ ಪಾತ್ರರಾದರು.

ಕನ್ನಡ ನಾಟಕಗಳನ್ನು ಹಿಂದಿಗೆ ತರುವ ಪ್ರಯೋಗದಲ್ಲೂ ಯಶಸ್ಸು ಕಂಡರು. ಗಿರೀಶ್ ಕಾರ್ನಾಡರ ‘ಹಯ ವದನ’,‘ತುಘಲಕ್’, ‘ಹಿಟ್ಟಿನ ಹುಂಜ’, ಶ್ರೀರಂಗರ ‘ಕೇಳು ಜನಮೇಜಯ’, ‘ರಂಗ ಭಾರತ’, ‘ಕತ್ತಲೆ ಬೆಳಕು’ ಹಾಗೂ ಶಿವರಾಮ ಕಾರಂತರ ‘ಯಕ್ಷಗಾನ’ ಸೇರಿದಂತೆ ೧೫ ಕೃತಿಗಳನ್ನು ಹಿಂದಿಗೆ ಅನುವಾದಿಸಿದರು.

ವಿಶ್ವಶ್ರೇಷ್ಠ ನಾಟಕಕಾರರಾದ ಸಂಸ, ಕಂಬಾರ, ಶ್ರೀರಂಗ, ಲಂಕೇಶ್, ಕಾರ್ನಾಡ್, ಜಡಭರತ, ಕುವೆಂಪು,ಷೇಕ್ಸ್‌ಪಿಯರ್ ಮೊದಲಾದವರ ನಾಟಕಗಳನ್ನು ಕಾರಂತ್ ನಿರ್ದೇಶಿಸಿದ್ದಾರೆ. ಕಾರಂತರು ಒಟ್ಟು ೧೦೪ ನಾಟಕಗಳನ್ನು ನಿರ್ದೇಶಿಸಿ ದಾಖಲೆಯನ್ನೇ ಮೆರೆದಿದ್ದಾರೆ. ಕನ್ನಡ ರಂಗಭೂಮಿಯ ಆಕರ್ಷಣೆ ಕಡಿಮೆಯಾಗುತ್ತಿದ್ದ ಕಾಲದಲ್ಲಿ ‘ರಂಗಾಯಣ’ವನ್ನು ಕಟ್ಟಿ ರಂಗಭೂಮಿ ಜೀವಂತವಾಗಿರುವಂತೆ ನೋಡಿಕೊಂಡರು. ಜನರಲ್ಲಿ ನಾಟಕಗಳ ಬಗ್ಗೆ ಆಸಕ್ತಿ ಮೂಡಿಸಿದರು. ರಂಗ ಸಂಗೀತವೆಂದರೆ ಏನೆಂದು ತೋರಿಸಿಕೊಟ್ಟರು. ‘ಹಯವದನ’ಕ್ಕೆ ಕಾರಂತರು ನೀಡಿದ ಸಂಗೀತ ಇಂದು ಮನೆಮಾತು.

ನಾಟಕದ ಜೊತೆ ಜೊತೆಗೆ ಚಲನಚಿತ್ರ ರಂಗದಲ್ಲೂ ಕಾರಂತರು ಕೃಷಿ ಮಾಡಿದರು. ಕಾರ್ನಾಡರೊಂದಿಗೆ ನಿರ್ದೇಶಿಸಿದ ‘ವಂಶವೃಕ್ಷ’ ಕಾರಂತರಿಗೆ ಮನ್ನಣೆ ಪ್ರಶಸ್ತಿ ತಂದುಕೊಟ್ಟಿತು. ಫಿಲ್ಮ್‌ಫೇರ್ ಪ್ರಶಸ್ತಿಯೂ ಲಭಿಸಿತು.‘ಕಾಡು’, ‘ಹಂಸಗೀತೆ’ ಮೊದಲಾದ ಮನೋಜ್ಞ ಚಿತ್ರಗಳಿಗೆ ಸಂಗೀತವನ್ನೂ ನೀಡಿದರು. ಶಿವರಾಮಕಾರಂತರ‘ಚೋಮನದುಡಿಯನ್ನು’ ಚಿತ್ರ ಮಾಡುವ ಮೂಲಕ ಸ್ವರ್ಣಕಮಲ ಪ್ರಶಸ್ತಿಯನ್ನೂ ಕನ್ನಡಕ್ಕೆ ತಂದುಕೊಟ್ಟರು. ಕಾರಂತರ ಈ ಸಾಧನೆಗೆ ‘ಕಾಳಿದಾಸ ಪ್ರಶಸ್ತಿ’, ‘ಪದ್ಮಶ್ರೀ’ ಕೇಂದ್ರ ನಾಟಕ ಅಕಾಡಮಿ ಪ್ರಶಸ್ತಿಯೇ ಮೊದಲಾದ ಪ್ರತಿಷ್ಠಿತ ಗೌರವ ಸಂದವು.

ಕಾರಂತರ ಜನಪ್ರಿಯ ನಾಟಕಗಳು : ‘ಕಕೇಶಿಯನ್ ಚಾಕ್ ಸರ್ಕಲ್’, ‘ಗೋಕುಲ ನಿರ್ಗಮನ’, ‘ಸತ್ತವರ ನೆರಳು’,‘ನಾಟಕಕಾರನ ಶೋಧನೆಯಲ್ಲಿ ಆರು ಪಾತ್ರಗಳು’, ‘ಚಂದ್ರಹಾಸ’, ‘ಹೆಡ್ಡಾಯಣ’, ‘ಪಂಜರಶಾಲೆ’, ‘ದಾರಿ ಯಾವುದಯ್ಯ ವೈಕುಂಠಕೆ’, ‘ನೀಲಿ ಕುದುರೆ’, ‘ಈಡಿಪಸ್’, ‘ಸಂಕ್ರಾಂತಿ’, ‘ಜೋಕುಮಾರಸ್ವಾಮಿ’, ‘ಮೂಕನ ಮಕ್ಕಳು’, ‘ವಿಗಡ ವಿಕ್ರಮರಾಯ’, ‘ಮಿಸ್ ಸದಾರಮೆ’, ‘ಅಶ್ವತ್ಥಾಮನ್’, ‘ಟಿಂಗರ ಬುಡ್ಡಣ್ಣ ’.

ಕನ್ನಡ ಡಿಂಡಿಮ ಮೊಳಗಿಸಿದ ರಸಋಷಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

 • ಕನ್ನಡ ಎನೆ ಕುಣಿದಾಡುವುದೆನ್ನೆದೆ
  ಕನ್ನಡ ಎನೆ ಕಿವಿ ನಿಮಿರುವುದು....

 • ಎಲ್ಲಾದರು ಇರು ಎಂತಾದರೂ ಇರು
  ಎಂದೆಂದಿಗೂ ನೀ, ಕನ್ನಡವಾಗಿರು...

 • ಬಾರಿಸು ಕನ್ನಡ ಡಿಂಡಿಮವ
  ಓ ಕರ್ನಾಟಕ ಹೃದಯ ಶಿವ ಬಾರಿಸು ಕನ್ನಡ ಡಿಂಡಿಮವ...

 • ಜಯ ಭಾರತ ಜನನಿಯ ತನುಜಾತೇ..
  ಜಯಹೇ ಕರ್ನಾಟಕ ಮಾತೆ...

ಕುವೆಂಪು ಎಂಬ ಮೂರಕ್ಷರದಿಂದಲೇ ಕನ್ನಡಿಗರ ಮನೆ ಮಾತಾದ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಕನ್ನಡದ ಮಹಾನ್ ಚೇತನ. ಕನ್ನಡ- ಕರ್ನಾಟಕದ ಬಗ್ಗೆ ಅವರು ಬರೆದಿರುವ ಭಾವಗೀತೆಗಳು ನಿತ್ಯ ನೂತನ. ಮನುಜ ಮತ ವಿಶ್ವಪಥವನ್ನು ಸಾರಿದ ಈ ಸಾಹಿತ್ಯ ಶ್ರೇಷ್ಠ ವಿಶ್ವಮಾನವರೆನಿಸಿದವರು.

ಕುವೆಂಪು ಹೊಸಗನ್ನಡ ಸಾಹಿತ್ಯದ ಹಿರಿಯ ಕವಿ. ಕನ್ನಡ ಸಾಹಿತ್ಯವನ್ನು ವಿಶ್ವ ಸಾಹಿತ್ಯ ವೇದಿಕೆಗೆ ಕೊಂಡೊಯ್ದ ವಿಶ್ವಮಾನವ. ಮಹಾಕಾವ್ಯ, ನಾಟಕ, ಖಂಡಕಾವ್ಯ, ಕಥನಕಾವ್ಯ, ಭಾವಗೀತೆಯೇ ಮೊದಲಾದ ಹಲವು ಪ್ರಕಾರಗಳಲ್ಲಿ ಅತ್ಯುತ್ತಮ ಕೃತಿಗಳನ್ನು ನೀಡಿದ ಅದ್ವರ್ಯು. ಕುವೆಂಪು ಅವರಂತೆ ಸರ್ವ ಪ್ರಕಾರಗಳಲ್ಲೂ ಏಕ ಪ್ರಕಾರವಾದ ಸಿದ್ಧಿ ಪಡೆದ ಕವಿಗಳು ಅತಿ ವಿರಳ.

ಓ ನನ್ನ ಚೇತನ
ಆಗು ನೀ ಅನಿಕೇತನ!
ರೂಪ ರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವದೀಟಿ....

‘ಅನಿಕೇತನದ’ ವಿಶ್ವ ಮಾನವ ಗೀತೆ. ಇದು ಮಾನವನ ಬದುಕಿನ ಅರ್ಥ-ವ್ಯಾಪ್ತಿಯನ್ನು ಕೆಲವೇ ಪದಗಳಲ್ಲಿ ಅರ್ಥಗರ್ಭಿತವಾಗಿ ತೆರೆದಿಡುತ್ತದೆ. ಅರ್ಥೈಸಿಕೊಳ್ಳಲು ಪ್ರಕೃತಿ - ಸೃಷ್ಟಿಯ ಪರಿಕಲ್ಪನೆಗಳನ್ನು - ರಹಸ್ಯಗಳನ್ನು ಕುವೆಂಪು ತಮ್ಮ ಕೃತಿಗಳಲ್ಲಿ ಶ್ರೀಸಾಮಾನ್ಯನಿಗೂ ಅರ್ಥವಾಗುವ ರೀತಿಯಲ್ಲಿ ತೆರೆದಿಟ್ಟಿದ್ದಾರೆ.

‘ಕಾನೂರು ಹೆಗ್ಗಡಿತಿ’ ‘ಮಲೆಗಳಲ್ಲಿ ಮದುಮಗಳು’ (ಬೃಹತ್ ಕಾದಂಬರಿಗಳು), ‘ಶ್ರೀರಾಮಕೃಷ್ಣ ಪರಮಹಂಸ’‘ಸ್ವಾಮಿ ವಿವೇಕಾನಂದ’ (ಜೀವನ ಚರಿತ್ರೆ), ‘ರಕ್ತಾಕ್ಷಿ’, ‘ಬೆರಳ್ಗೆ ಕೊರಳ್’ ‘ಜಲಗಾರ’ ‘ಯಮನ ಸೋಲು’ಕೃತಿಗಳಲ್ಲಿ ಬದುಕಿನ ಬವಣೆ, ಬದುಕಿನ ಸತ್ಯ - ರಹಸ್ಯಗಳ ವರ್ಣನೆ ಹಾಸುಹೊಕ್ಕಾಗಿವೆ.

ಕುವೆಂಪು ಅವರು ಹುಟ್ಟಿದ್ದು ೨೯ ಡಿಸೆಂಬರ್ ೧೯೦೪. ಅವರೂರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ. ತಂದೆ ವೆಂಕಟಪ್ಪ ಗೌಡರು, ತಾಯಿ ಸೀತಮ್ಮ. ಆದರೆ, ಕುವೆಂಪು ಅವರು ಹುಟ್ಟಿದ್ದು ತಾಯಿಯ ತವರಾದ ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆ ಗ್ರಾಮದಲ್ಲಿ. ಮಲೆನಾಡಿನ ಮಡಿಲಲ್ಲಿ ಹುಟ್ಟಿ ಬೆಳೆದ ಕುವೆಂಪು ಅವರು,ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಕಲಿತದ್ದಕ್ಕಿಂತ ಹೆಚ್ಚಿನ ವಿಷಯವನ್ನು ಕಲಿಸಿದ್ದು ಮಲೆನಾಡಿನ ಪ್ರಕೃತಿ. ಹೀಗಾಗೇ ಅವರ ಎಲ್ಲ ಕೃತಿಗಳಲ್ಲಿ ಮಲೆನಾಡಿನ ಸೊಬಗು ಕಂಗೊಳಿಸುತ್ತದೆ. ಇದಕ್ಕೆ ಕಾನೂರು ಹೆಗ್ಗಡಿತಿ ಹಾಗೂ ಮಲೆಗಳಲ್ಲಿ ಮದುಮಗಳು ಸಾಕ್ಷಿ.

ಕುವೆಂಪು ಅವರು ಮೊದಲು ಬರೆದದ್ದು (ಬಿಗಿವರ್ಸ್ ಮ್ಯೂಸ್) ಇಂಗ್ಲಿಷ್‌ನಲ್ಲಿ. ಆದರೆ, ಅವರ ಕಣ್ಣು ತೆರೆಸಿ ಮಾತೃಭಾಷೆಯಲ್ಲಿ ಬರೆಯುವಂತೆ ಪ್ರೇರೇಪಿಸಿದವರು ಐರಿಷ್ ಕವಿ ಜೇಮ್ಸ್ ಕಸಿನ್ಸ್. ಅಂದಿನಿಂದ ಕುವೆಂಪು ಅವರು ೭೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಈ ಪೈಕಿ ಶ್ರೀರಾಮಾಯಣ ದರ್ಶನಂ - ಮಹಾಕಾವ್ಯ (ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ), ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡಿತಿ (ಕಾದಂಬರಿ), ಸನ್ಯಾಸಿ ಮತ್ತು ಇತರ ಕತೆಗಳು (ಕಥಾ ಸಂಕಲನ), ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ (ಜೀವನ ಚರಿತ್ರೆ),ಶೂದ್ರ ತಪಸ್ವಿ, ರಕ್ತರಾತ್ರಿ, ರಕ್ತಾಕ್ಷಿ, ಯಮನ ಸೋಲು, ಬೆರಳ್ಗೆ ಕೊರಳ್ (ನಾಟಕಗಳು), ಪಕ್ಷಿಕಾಶಿ, ಪಾಂಚಜನ್ಯ,ಅನಿಕೇತನ, ಚಂದ್ರಮಂಚಕೆ ಬಾ ಚಕೋರಿ, ಕೊಳಲು (ಕವನಸಂಕಲನಗಳು) ಪ್ರಮುಖವಾದವು.

ಇಂತಹ ಅತ್ಯಮೂಲ್ಯ ಕೃತಿಗಳನ್ನು ನೀಡಿದ ಕವಿಗೆ ಪದ್ಮವಿಭೂಷಣ (೧೯೫೮), ರಾಜ್ಯ-ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಷ್ಟ್ರಕವಿ ಬಿರುದು (೧೯೬೪), ಪಂಪಪ್ರಶಸ್ತಿ, ಕರ್ನಾಟಕ ರತ್ನ ಪುರಸ್ಕಾರಗಳನ್ನು ನೀಡಿ ಸರಕಾರ ಗೌರವಿಸಿದರೆ, ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಅವರಿಗೆ ೩೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ನೀಡಿ ತನ್ನ ಘನತೆಯನ್ನೇ ಹೆಚ್ಚಿಸಿಕೊಂಡಿತು. ಕುವೆಂಪು ಅವರಂಥ ಕವಿಶ್ರೇಷ್ಠರನ್ನು ಪಡೆದ ನಮ್ಮೀ ನಾಡೇ ಧನ್ಯ.

ಸಾಧನಕೇರಿಯ ಅನರ್ಘ್ಯ ರತ್ನ ಅಂಬಿಕಾತನಯ ದತ್ತ

ಏನು ಏನು ಜೇನು ಜೇನು ಏನೇ ಗುಂಗು ಗಾನಾ..
ಓಂಕಾರದ ಶಂಕನಾದಕಿಂತ ಕಿಂಚಿದೂನ, ಕವಿಯ ಏಕತಾನ..
ಕವನದಂತೆ ನಾದ ಲೀಲ ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ,
ಮಸೆದ ಗಾಳಿ ಪಕ್ಕ ಪಡೆಯುತ್ತಿತ್ತು ಸಹಜ ಪ್ರಾಸ, ಮಿಂಚಿ ಮಾಯವಾಗುತ್ತಿತ್ತು..
ಒಂದು ಮಂದಹಾಸ.. ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ...

ಇದು ಸಾಧನಕೇರಿಯ ಮಾಸ್ತರ ಅಮೋಘ ಕಲ್ಪನೆ. ಭಾವದ ಬೆನ್ನೇರಿ ಕಲ್ಪನಾ ವಿಲಾಸದಿಂದ ಮೆರೆದು5;, ಕವನದ ಶೃಂಗಾರ ದಂಡೆಯನ್ನು ಕಟ್ಟಿದ ಶ್ರಾವಣ ಪ್ರತಿಭೆ. ಶ್ರಾವಣ ಬಂತು ನಾಡಿಗೆ, ಬಂತು ಕಾಡಿಗೆ.. ಬಂತು ಬೀಡಿಗೇ ಬಂತೂ ಶ್ರಾವಣ... ಎಂದು ಹಾಡಿದ ಬೇಂದ್ರೆ ತಮ್ಮ ಕೃತಿಗಳಿಂದ ಮನಸ್ಸಿಗೆ ಅಮಿತಾನಂದ ನೀಡುವುದರ ಜೊತೆಗೆ ಕನ್ನಡವ ಮರೆತು ನಿದ್ರಾವಸ್ತೆಯಲ್ಲಿದ್ದ ಕಣ್ಣುಗಳನ್ನು ತೆರೆಸಿದ ವರಕವಿ.

ಬೇಂದ್ರೆ ಅವರು ಹುಟ್ಟಿದ್ದು ೧೮೯೬ ಜನವರಿ ೩೧ರಂದು. ಹುಟ್ಟೂರು ಧಾರವಾಡ, ತಂದೆ ರಾಮಚಂದ್ರ ಭಟ್ಟ,ತಾಯಿ ಅಂಬಿಕೆ. ಬೇಂದ್ರೆಯವರ ಪೂರ್ಣ ಹೆಸರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ.ರಾ.ಬೇಂದ್ರೆ). ಬೇಂದ್ರೆ ಅವರು ‘ಅಂಬಿಕಾತನಯ ದತ್ತ’ ರಾದದ್ದು ೧೯೧೮ರಲ್ಲಿ. ಆಗವರಿಗೆ ೨೨ ವರ್ಷ. ಅವರ ಮೊದಲ ಕವಿತೆ ‘ಪ್ರಭಾತ’ಪತ್ರಿಕೆಯಲ್ಲಿ ಪ್ರಕಟಗೊಂಡಂದಿನಿಂದ ಬೇಂದ್ರೆ ಅವರಿಗೆ ಆ ಕಾವ್ಯನಾಮ ಸ್ಥಿರವಾಯ್ತು.

ಕನ್ನಡ ಭಾಷೆಯ ಸಿರಿಸೌಂದರ್ಯವನ್ನು ಬಿಂಬಿಸಿ ಬದುಕನ್ನೇ ನಾಕು ತಂತಿಯಾಗಿ ಮಾಡಿ ಸುಂದರ ಸಾಹಿತ್ಯವನ್ನು ಮೀಟಿದ ಬೇಂದ್ರೆಯವರು ತಮ್ಮ ಕೃತಿಗಳ ಮೂಲಕ ಕನ್ನಡದ ಘಮಲನ್ನು ರಾಷ್ಟ್ರಾದ್ಯಂತ ಪಸರಿಸಿದರು. ಅವರ ಎಲ್ಲ ಕಾವ್ಯಗಳಲ್ಲೂ ಮತ್ತು ಬರಿಸುವ ಗತ್ತು, ಕನ್ನಡ ನುಡಿ ಮಾಧುರ್‍ಯವನ್ನು ಹೊರಹೊಮ್ಮಿಸುವ ಗಮ್ಮತನ್ನು ಕಾಣಬಹುದು.

ಬೇಂದ್ರೆಯವರ ಬಗ್ಗೆ ಕವಿ ಎಸ್.ವಿ. ಶ್ರೀನಿವಾಸರಾಯರು ಬರೆದ ಸಾಲುಗಳು ಹೀಗಿವೆ : “ಬೇಂದ್ರೆ ಸಾಧನಕೇರಿಯ ಕವಿವರ್ಯ, ‘ನಾಕುತಂತಿ’ಯ ವೈಣಿಕ ‘ಗಂಗಾವತರಣ’ದ ಭಗೀರಥ ‘ನಾದಲೀಲೆ’ಯ ನಾದೋಪಾಸಕ.... ಕಲ್ಪನೆ ‘ಗರಿ’ ಬಿಚ್ಚಿ ಮಯೂರ ನೃತ್ಯ ಆರಂಭಿಸಿದಾಗ ‘ಉಯ್ಯಾಲೆ’ಯಲ್ಲಿ ತೂಗಾಡುತ್ತಿದ್ದ ಕವಿ ಹೃದಯದಿಂದ ಹೊರಹೊಮ್ಮಿದ್ದು ‘ಸಖೀಗೀತ’ ‘ಹಾಡುಪಾಡು’ ‘ಸೂರ್‍ಯಪಾನ’ ‘ಕಾಮಕಸ್ತೂರಿ’ ಮುಂತಾದವು..."

ಶಿಕ್ಷಣ : ಪ್ರಾಥಮಿಕ ಶಿಕ್ಷಣವನ್ನು ಧಾರವಾಡದಲ್ಲೇ ಮುಗಿಸಿ, ಪೂನಾದ ಫರ್ಗ್ಯೂಸನ್ ಕಾಲೇಜಿನಲ್ಲಿ ಬಿ.ಎ. ಮುಗಿಸಿ ಸ್ನಾತಕೋತ್ತರ ಪದವಿಯನ್ನೂ ಪಡೆದ ಬೇಂದ್ರೆ ಅವರಿಗೆ ಬಾಲ್ಯದಿಂದಲೇ ಓದುವ, ಬರೆಯುವ ಗೀಳು ಅಂಟಿತ್ತು. ತಮ್ಮ ಕೃತಿಗಳ ಮೂಲಕ ಸಾಹಿತ್ಯ ಸರಸ್ವತಿಯನ್ನು ಅನವರತ ಅರಾಸಿದ ಬೇಂದ್ರೆ ಅವರು ಸಾಹಿತ್ಯದ ಎಲ್ಲ ಪ್ರಕಾರಗಳಿಗೂ ತಮ್ಮದೇ ಆದ ಕಾಣಿಕೆ ನೀಡಿದ್ದಾರೆ.

ಕನ್ನಡ ಸಾಹಿತ್ಯದ ಜೊತೆಗೆ ಇಂಗ್ಲಿಷ್ -ಮರಾಠಿಯಲ್ಲೂ ಅವರು ಕೃತಿ ರಚಿಸಿದ್ದಾರೆ. ಹದಿನಾಲ್ಕು ನಾಟಕ, ಕಥಾ ಸಂಕಲನ, ೨೯ ಕವನಸಂಕಲನ, ೯ ವಿಮರ್ಶಾ ಲೇಖನ, ೨ ಭಾಷಣ, ಐದು ಮರಾಠಿ ಗ್ರಂಥ, ಇಂಗ್ಲಿಷ್ ಲೇಖನಗಳ ಸಂಗ್ರಹ, ಏಳು ಅನುವಾದಿತ ಕೃತಿಗಳನ್ನು ಬೇಂದ್ರೆ ನಾಡಿಗೆ ನೀಡಿದ್ದಾರೆ.

ರಾಜ್ಯ ಸಾಹಿತ್ಯ ಅಕಾಡಮಿ ಪುರಸ್ಕಾರ (‘ಅರಳು ಮರಳು’ ೧೯೫೮), ‘ಪದ್ಮಶ್ರೀ’ (೧೯೬೮), ‘ಜ್ಞಾನಪೀಠ’(‘ನಾಕುತಂತಿ’- ೧೯೭೪), ಗೌರವ ಡಾಕ್ಟರೆಟ್ (ಮೈಸೂರು ವಿವಿ) ಪಡೆದ ಬೇಂದ್ರೆ ಅವರು ೮೦ ವರ್ಷಗಳ ತುಂಬು ಜೀವನ ನಡೆಸಿದರು. ಬೇಂದ್ರೆ ನಮ್ಮನ್ನಗಲಿದ್ದು ೨೬-೧೦-೧೯೮೧ರಂದು.

ಶಿವಮೊಗ್ಗದಲ್ಲಿ ನಡೆದ ೨೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಈ ವರಕವಿಯ ಬಗ್ಗೆ ಅವರ ಕೃತಿಗಳ ಬಗ್ಗೆ ಮತ್ತೊಬ್ಬ ಶ್ರೇಷ್ಠ ಕವಿ ತೀ.ನಂ.ಶ್ರೀ ಹೀಗೆ ಹೇಳುತ್ತಾರೆ: ‘ಬೇಂದ್ರೆಯವರ ಕವಿತೆ ಒಂದು ಚಿಲುಮೆ, ಅದು ನೋಡಲು ಚಿಕ್ಕದು ಆದರೆ, ತೋಡಿದಷ್ಟೂ ಅರ್ಥ ಉಕ್ಕಿ ಹರಿಯುತ್ತದೆ’ ಈ ಮಾತುಗಳು ನಿಜಕ್ಕೂ ಅರ್ಥಪೂರ್ಣ, ಔಚಿತ್ಯ ಪೂರ್ಣ.. ಬೇಂದ್ರೆಯವರ ಕಾವ್ಯಗಳು ಇದನ್ನು ಸಾರಿ ಹೇಳುತ್ತವೆ.

‘ಅರಳು ಮರಳು’ವಿನ ಪುಟ - ಪುಟಗಳಲ್ಲೂ ಇದು ಸುಟಗೊಳ್ಳುತ್ತದೆ. ಇಲ್ಲಿ ಏಕನಾದದ ಶ್ರುತಿ, ವೀಣೆಯ ಮಿಡಿತ,ಸಂಗೀತ ಸುಧೆ ಎಲ್ಲವೂ ಇದೆ...

‘ಮರುಳನಲ್ಲ ನಾನು, ಮರುಳಾದೆನಯ್ಯಾ’
ನನ್ನೆದೆಯ ಮರುಳ ಸಿದ್ಧ
ನಿಮ್ಮರುಳಿನಿಂದ ಮರಮರಳಿ ಅರಳಿ
ಸುಟವಾಗಿ ಭಾವ ಶುದ್ಧ.
‘ಓ ತಾಯಿ ಬಂದೆ, ಮಾ ಮಾಯಿ ಎಂದೆ, ಈ ಬಾಯಿ ತುಂಬು ಒಂದೇ
ಮಕರಂದ ಪಾನದ ಝರೀ
ತೆಂತೆರಿ ನಿನ್ನ ತಾವರೀ
ಬಂದದ ತುಂಬಿಯಾ ಮರಿ’

ನಾಕು ತಂತಿಯ ನಾಕು ಸಾಲುಗಳು ಹೀಗಿವೆ :

“ತಾನೊ? ನಾನೊ?
ನೀನೊ
ಏನೇನೊ!
ಆತನೊ? ಆತ್ಮನೊ
ಅವನೊ
‘ನಾಕುತಂತಿ’ಯಲ್ಲಿ
‘ನಾನು’ ‘ನೀನು’
‘ಆನು’ ‘ತಾನು’
ನಾ ನಾಕು ತಂತಿ"

ಈ ಸಾಲುಗಳಲ್ಲಿ ಭಾವ ಭಾರವಾಗಿದೆ. ಕಾವ್ಯ ಕುಸುಮವು ಕಲ್ಪನೆಯ ಉತ್ತುಂಗದಲ್ಲಿ ಅರಳಿ ನಿಂತಿದೆ. ಕನ್ನಡದ ಕಂಪು ಗಮಗಮಿಸಿದೆ. ವರಕವಿಯ ಕಾವ್ಯದ ವೈಶಿಷ್ಟ್ಯ ಅವರ ಕಾವ್ಯ ಸುಧೆಯ ಸವಿದಾಗ ಮಾತ್ರ ತಿಳಿಯಲು ಸಾಧ್ಯ. ಬೇಂದ್ರೆ ವರ್ಣಾನಾತೀತ ವ್ಯಕ್ತಿ. ಅವರ ಕಾವ್ಯಗಳೂ ಕೂಡ.

ಕನ್ನಡದ ಆಸ್ತಿ ಶ್ರೀನಿವಾಸ ಎಂಬ ಮಾಸ್ತಿ

ಸಣ್ಣ ಕತೆಗಳ ಜನಕ ಎಂದೇ ಖ್ಯಾತರಾದ ಮಾಸ್ತಿ, ಕನ್ನಡ ಸಾಹಿತ್ಯದಲ್ಲಿ ಕಥಾ ಪ್ರಕಾರಕ್ಕೆ ಹೊಸ ಆಯಾಮ ನೀಡಿದ ಮಾನವ ಅಂತಸ್ಥ ಜಗತ್ತಿನ ಶೋಧಕ, ಇಂದು ಮಾಸ್ತಿ ಬಹುಕಿದ್ದಿದ್ದರೆ ಅವರಿಗೆ ೧೧೧ ವರ್ಷ ತುಂಬುತ್ತಿತ್ತು. ಇಂದು ಮಾಸ್ತಿ ನಮ್ಮ ಮುಂದಿಲ್ಲ ಆದರೆ,ಅವರ ಬದುಕು- ಬರಹ ಚಿರಸ್ಥಾಯಿಯಾಗಿದೆ.

ಮಾಸ್ತಿ ಅವರು ಕೇವಲ ಕವಿಯಲ್ಲ, ಸಂಸ್ಕೃತಿಯ ಪ್ರತಿಪಾದಕರೂ ಹೌದು. ಶಿಸ್ತುಬದ್ಧ ಜೀವನ ಎಂದರೇನು ಎಂಬುದನ್ನು ಮಾಸ್ತಿ ಅವರನ್ನು ನೋಡಿ ಕಲಿಯಬೇಕು ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಿದ್ದರು. ನಿತ್ಯ ಮನೆಯಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ವಿಷ್ಣು ಸಹಸ್ರನಾಮ ಹೇಳದೆ, ಮನೆ ಮಂದಿಯಿಂದ ಹೇಳಿಸದೇ ಅವರು ಹೊರ ಹೋಗುತ್ತಿರಲಿಲ್ಲ. ಹಾಗೆಂದ ಮಾತ್ರಕ್ಕೆ ಅವರು ಧರ್ಮಾಚರಣೆಯ ಮೂಲಕ ಸಂಸ್ಕೃತಿಯ ಪ್ರತಿಪಾದಕರಾಗಿ ನಿಲ್ಲಲಿಲ್ಲ. ಬದುಕಿನಲ್ಲಿ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಪರಿಪಕ್ವವಾಗುವುದು ಹೇಗೆ ಎಂಬುದನ್ನು ಮಾಸ್ತಿ ಅವರು ತಮ್ಮ ಕೃತಿಗಳ ಮೂಲಕ ಸಾರಿದರವರು. ತಮ್ಮ, ಕಥೆ, ಕಾದಂಬರಿಗಳ ಮೂಲಕ ತಮ್ಮ ಅನ್ವೇಷಣೆಗಳನ್ನು ಓದುಗರಿಗೆ ತಿಳಿಯ ಹೇಳಿದವರು.

ಮಾಸ್ತಿ ಅವರು ಮಾನವನ ಅಂತರಂಗದ ಅತೀತ ಮೂಲಗಳಲ್ಲಿ ಸಂಚರಿಸಿದ್ದರಿಂದಲೇ ಅವರ ಸಾಹಿತ್ಯ ಕಾಲದ ಪರಿಕಲ್ಪನೆಯಿಂದ ವೈಶಿಷ್ಟ್ಯಪೂರ್ಣವಾಗಿವೆ. ಮಾಸ್ತಿಯವರ ಸಾಹಿತ್ಯದಲ್ಲಿ ಅತ್ಯಂತ ರಹಸ್ಯವಾದ ಮುಷ್ಟಿಗ್ರಾಹ್ಯವಲ್ಲದ ನೆಲೆಯೆಂದರೆ ಮಾನವನೇ. ಮಾನವನ ಧಾರಣಾಶಕ್ತಿ, ಅತೀಂದ್ರಿಯಾತ್ಮಕ ವಿಷಯಗಳನ್ನು ಅನಾಯಾಸವಾಗಿ ಬಣ್ಣಿಸಿರುವ ಮಾಸ್ತಿ ಅವರು, ಮನುಷ್ಯನಲ್ಲಿ ಅಂತಸ್ಥವಾಗಿರುವ ಶಕ್ತಿಯನ್ನು ಶೋಸಿದವರು.

ಅವರ ವೆಂಕಟರಾಯನ ಪಿಶಾಚ, ವೆಂಕಶಾಮಿಯ ಪ್ರಣಯ, ಸುಬ್ಬಣ್ಣ, ಮಾತುಗಾರ ರಾಮಣ್ಣ, ಗೌತಮಿ ಹೇಳಿದ ಕತೆ, ಕಾಮನಹಬ್ಬದ ಕತೆಗಳೆಲ್ಲ ಈ ಅಂತಸ್ಥ ಶಕ್ತಿಯ ಪರಿಕಲ್ಪನೆಯನ್ನು ಅತ್ಯಂತ ನಾಜೂಕಿನಿಂದ ಬಣ್ಣಿಸುತ್ತವೆ.

ಕನ್ನಡ ಸಾರಸ್ವತ ಮಕುಟಕ್ಕೆ ಜ್ಞಾನಪೀಠದ ಮತ್ತೊಂದು ಗರಿತೊಡಿಸಿದ ಮಾಸ್ತಿ ಅವರನ್ನು ಇಂದಿನ ಪೀಳಿಗೆಯವರು ಪ್ರಾಸಮಯವಾಗಿ ಮಾಸ್ತಿ ಕನ್ನಡದ ಆಸ್ತಿ ಎಂದು ಸುಮ್ಮನಾಗುವುದುಂಟು. ಆದರೆ, ಮಾಸ್ತಿ ಕನ್ನಡದ ಆಸ್ತಿ ಎನಿಸಿಕೊಂಡಿದ್ದು, ಕೇವಲ ಅವರ ಸಾಹಿತ್ಯ ಕೃಷಿಯಿಂದಲ್ಲ. ಕನ್ನಡ ಮನಸ್ಸುಗಳನ್ನು ಪೋಷಿಸಿ,ಮಾನವನ ಅಂತಸ್ಥ ಶಕ್ತಿಯನ್ನು ಶೋಸಿ, ಪ್ರೋತ್ಸಾಹಿಸಿ, ನೀರೆರೆದು ಬದುಕಿನ ಮಹತ್ವವನ್ನೂ ಕನ್ನಡದ ಅಸ್ತಿತ್ವದ ಹಿರಿಮೆಯನ್ನೂ ಸಾರಿದ್ದರಿಂದ.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜನಿಸಿದ್ದು ೧೮೯೧ರ ಜೂನ್೬ರಂದು. ಹುಟ್ಟೂರು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹೊಂಗೇನಹಳ್ಳಿ. ತಂದೆ ರಾಮಸ್ವಾಮಿ ಅಯ್ಯಂಗಾರ್, ತಾಯಿ ತಿರುಮಲಮ್ಮ. ಸಂಪ್ರದಾಯಸ್ಥ ಬಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಮಾಸ್ತಿಹೊಂಗೇನಳ್ಳಿ ಶಿವಾರಪಟ್ಟಣದ ಪುಟ್ಟ ಶಾಲೆಯಿಂದ ಸಿವಿಲ್ ಸರ್ವೀಸ್ ಪರೀಕ್ಷೆಯ ಪಾಸು ಮಾಡುವ ಎತ್ತರಕ್ಕೆ ಬಳೆದರು.

ವೆಂಕಟೇಶ ಅಯ್ಯಂಗಾರ್ ‘ಶ್ರೀನಿವಾಸ’ ಎಂಬ ಕಾವ್ಯನಾಮದಿಂದ ಬರೆಯುತ್ತರಿದ್ದರಾದರೂ ಅವರಿಗೆ ಮಾಸ್ತಿ ಎಂಬ ಹೆಸರೇ ಸ್ಥಿರವಾಯ್ತು. ಅಪ್ರತಿಮ ವಾಗ್ಮಿಗಳೂ ಆಗಿದ್ದ ಮಾಸ್ತಿ ಮಾತಿನಲ್ಲಿ ಬಲು ಚತುರರು.

ವಾಕ್ಚತುರ : ಒಮ್ಮೆ ಯುವಕವಿಗೋಷ್ಠಿಯಲ್ಲಿ ಮಾಸ್ತಿ ಭಾಗವಹಿಸಿದ್ದರು. ಬಿಸಿರಕ್ತದ ತರುಣ ಕವಿಯೊಬ್ಬ ತನ್ನ ವೀರಾವೇಶದ ಭಾಷಣದಲ್ಲಿ ಈ ಮುದಿಕವಿಗಳು ಸಾಯುವ ತನಕ ಯುವಕವಿಗಳ ಬದುಕು ಹಸನಾಗದು ಎಂದನಂತೆ.

ಈ ಮಾತಿನಿಂದ ಮಾಸ್ತಿ ಸಿಟ್ಟಿಗೆದ್ದರೂ, ಅದನ್ನು ತೋರ್‍ಪಡಿಸದೇ ತಮ್ಮ ಮಾತಿನಿಂದಲೇ ಛಡಿ ಏಟು ಕೊಟ್ಟರಂತೆ. ಆಗ ಅವರು ಹೇಳಿದ್ದು ಇಷ್ಟು: ಜಾಣ ಜಾಣ ಕಚ್ಚಾಡಿದ್ರೆ ಲೋಕಕ್ಕೆ ಒಳಿತಂತೆ (ಆಗ ವಿಚಾರ ವಿನಿಮಯವಾಗತ್ತೆ), ಕೋಣ ಕೋಣ ಕಚ್ಚಾಡಿದ್ರೆ ಲೋಕಕ್ಕೆ ಮೋಜಂತೆ (ಖರ್ಚಿಲ್ಲದೆ ಹೋಡೆದಾಟ ನೋಡಬಹುದು) ಆದರೆ, ಜಾಣ - ಕೋಣ ಕಚ್ಚಾಡಿದ್ರೆ ಜನ ಜಾಣಂಗೆ ಉಗೀತಾರೆ, ಅವನ ಹತ್ರ ಜಗಳ ಕಾಯ್ತೀಯಲ್ಲ ನಿನಗೆ ಬುದ್ಧಿ ಇಲ್ವ ಅಂತ.. ಹೀಗಾಗೇ ನಾನು ಆ ಬಿಸಿರಕ್ತದ ತರುಣನೊಂದಿಗೆ ಜಗಳ ಮಾಡಲ್ಲ ಅಂತ.

ಕಾರ್ಯಕ್ರಮದ ಕೊನೆಯಲ್ಲಿ ಆ ಯುವಕ ತನ್ನ ತಪ್ಪನ್ನು ಮನ್ನಿಸುವಂತೆ ಮಾಸ್ತಿ ಅವರ ಕಾಲಿಗೆ ಬಿದ್ದನಂತೆ. ಮತ್ತೊಂದು ಸಂದರ್ಭ: ಮಾಸ್ತಿಯವರಿಗಿಂತ ಕಿರಿಯರಿಗೆಲ್ಲಾ ಜ್ಞಾನಪೀಠ ಬಂದ ಬಳಿಕ ಮಾಸ್ತಿ ಅವರಿಗೆ ಆ ಗೌರವ ದೊರಕಿತು. ಪತ್ರಕರ್ತರೊಬ್ಬರು ಮಾಸ್ತಿ ಅವರನ್ನು ಕೇಳಿದರಂತೆ ‘ನಿಮಗಿಂತ ಕಿರಿಯರಿಗೆಲ್ಲಾ ಪ್ರಶಸ್ತಿ ಬಂದ ಬಳಿಕ ನಿಮಗೆ ಜ್ಞಾನಪೀಠ ದೊರೆತಿದೆ ಇದರಿಂದ ನಿಮಗೆ ಬೇಸರ ಆಗಿಲ್ಲವೇ’? ಮಾಸ್ತಿ ಅಷ್ಟೇ ನಾಜೂಕಾಗಿ ಉತ್ತರಿಸಿದರಂತೆ.

ಮನೆಯಲ್ಲಿ ಏನಾದರೂ ಸಿಹಿತಿಂಡಿ ಮಾಡಿದ್ರೆ ಮೊದಲು ಕೊಡೋದೇ ಚಿಕ್ಕೋರಿಗೆ, ಅವರೆಲ್ಲಾ ಸಂತೋಷ ಪಟ್ಟಮೇಲೆ ಉಳಿದ್ರೆ ಹಿರಿಯರು ತಿಂತಾರೆ... ಇಲ್ಲೂ ಅಷ್ಟೇ ಎಂದು ಸುಮ್ಮನಾದರಂತೆ. ಒಮ್ಮೆ ಗಾಂಬಜಾರ್‌ನಲ್ಲಿ ಮಾಸ್ತಿ ಸಂಜೆ ಕೊಡೆ ಹಿಡಿದು ವಾಕಿಂಗ್ ಹೊರಟಿದ್ರು.. ಕೆಲವು ಹುಡುಗರು .. ಮಳೆಯೂ ಇಲ್ಲ ಬಿಸಿಲು ಮೊದ್ಲೇ ಇಲ್ಲ. ಅಲ್ಪನಿಗೆ ಐಶ್ವರ್‍ಯ ಬಂದ್ರೆ ಅರ್ಧರಾತ್ರೀಲಿ ಕೊಡೆ ಹಿಡಿದ ಅನ್ನೋಹಾಗೆ ಮಾಸ್ತಿ ಕೊಡೆ ಹಿಡಿದು ನಡೀತಿದ್ದಾರೆ ಎಂದು ಛೇಡಿಸಿದರಂತೆ. ಇದನ್ನು ಕೇಳಿಸಿಕೊಂಡ ಮಾಸ್ತಿ ಎಳ್ಳಷ್ಟೂ ಕೋಪಗೊಳ್ಳದೆ. ಆ ಹುಡುಗರನ್ನು ಕರೆದು ತಮ್ಮೊಂದಿಗೆ ವಾಕಿಂಗ್‌ಗೆ ಕರೆದುಕೊಂಡು ಹೋದರಂತೆ.

ಇಕ್ಕೆಲೆಗಳಲ್ಲೂ ದೊಡ್ಡ ದೊಡ್ಡ ಮರಗಳಿದ್ದ ಗಾಂ ಬಜಾರ್‌ನಲ್ಲಿ ಆ ಹುಡಗರ ಮೇಲೆ ಹಕ್ಕಿ ಪಕ್ಷಿಗಳ ಹಿಕ್ಕೆ ಬಿತ್ತಂತೆ. ಆಗ ಮಾಸ್ತಿ ಹೇಳಿದ್ರು... ಈಗ ಗೊತ್ತಾಯ್ತಾ ಈ ಅಲ್ಪ ಯಾಕೆ ಕೊಡೆ ಹಿಡಿದು ನಡೀತಿದ್ದ ಅಂತ...

ಮಾಸ್ತಿ ಅವರ ಬದುಕಲ್ಲಿ ಇಂತ ಘಟನೆಗಳು ಹಲವು. ಇಂಗ್ಲಿಷ್ ಉಪನ್ಯಾಸಕರಾಗಿ, ಅಸಿಸ್ಟೆಂಟ್ ಕಮಿಷನರ್ ಆಗಿ ಸೇವೆ ಸಲ್ಲಿಸಿ ‘ರಾಜಸೇವಾ ಪ್ರಸಕ್ತ ’ಎಂಬ ಬಿರುದನ್ನೂ ಪಡೆದ ಮಾಸ್ತಿ ಜನಸಾಮಾನ್ಯರಿಗೂ ಸರಕಾರದ ಕಾನೂನು-ಕಟ್ಟಳೆಗಳ ಬಗ್ಗೆ ಅರಿವಿರಬೇಕು. ಆ ಎಲ್ಲ ನಿಯಮಗಳೂ ಕನ್ನಡದಲ್ಲಿರಬೇಕು ಎಂದು ಪ್ರತಿಪಾದಿಸಿದವರು. ಆಡಳಿತದಲ್ಲಿ ಕನ್ನಡ ಜಾರಿಗೊಳಿಸಲು ಮಾಸ್ತಿ ಅಂದೇ ಶ್ರಮಿಸಿ ಕನ್ನಡದ ಆಸ್ತಿಯಾದವರು.

ಹಲವು ಕಥೆ, ನಾಟಕ, ಆತ್ಮಕಥನ, ಭಾಷಾಂತರ, ಖಂಡಕಾವ್ಯ, ಕವನ ಸಂಕಲನಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿರುವ ಮಾಸ್ತಿ ಅವರಿಗೆ ಜ್ಞಾನಪೀಠದ ಗರಿದೊರೆತದ್ದು ೧೯೮೩ರಲ್ಲಿ (ಚಿಕವೀರರಾಜೇಂದ್ರ). ಮಾಸ್ತಿ ಅವರದು ವಿಮರ್ಶೆಯಲ್ಲೂ ಪಳಗಿದ ಕೈ. ಅವರ ವಿಮರ್ಶೆಗಳು ಸುಂದರಶೈಲಿ, ಗಾಂಭೀರ್‍ಯಪೂರ್ಣ ನವಚೈತನ್ಯದಿಂದ ವಿಶಿಷ್ಟವಾಗಿವೆ. ‘ಭಾರತತೀರ್ಥ’, ‘ಆದಿಕವಿ ವಾಲ್ಮೀಕಿ’ಗಳಲ್ಲಿ ಅವರ ವಿದ್ವತ್ತು ಮತ್ತು ವಿಚಾರಲಹರಿಯ ಪರಿಚಯವಾಗುತ್ತದೆ. ಮಾಸ್ತಿಯವರ ಕೆಲವು ಕೃತಿಗಳು:

ನಾಟಕ : ಯಶೋಧರ, ಕಾಳಿದಾಸ, ಕಾಕನಕೋಟೆ, ಶಿವಾಜಿ, ತಿರುಪಾಣಿ, ತಾಳಿಕೋಟೆ, ಪುರಂದರದಾಸ, ಭಟ್ಟರ ಮಗಳು. (ಇದಲ್ಲದೆ ಶೇಕ್ಸ್‌ಪಿಯರ್, ಠಾಕೂರರ ಹಲವು ನಾಟಕಗಳನ್ನೂ ಮಾಸ್ತಿ ಕನ್ನಡಕ್ಕೆ ತಂದಿದ್ದಾರೆ)

ಕಾದಂಬರಿಗಳು: ಚೆನ್ನಬಸವನಾಯಕ, ಚಿಕ್ಕವೀರರಾಜೇಂದ್ರ, ಸುಬ್ಬಣ್ಣ
ಖಂಡಕಾವ್ಯ: ಶ್ರೀರಾಮಪಟ್ಟಾಭಿಷೇಕ
ಆತ್ಮಚರಿತ್ರೆ: ಭಾವ
ಜೀನವಚರಿತ್ರೆ: ರಾಮಕೃಷ್ಣ ಪರಮಹಂಸ, ಠಾಕೂರರ ಜೀವನ ಚರಿತ್ರೆ

ಬಹುಮುಖ ವ್ಯಕ್ತಿತ್ವದ ತ್ರಿವಿಕ್ರಮ ಪ್ರತಿಭೆಯ ಶಿವರಾಮ ಕಾರಂತರು

ಕೋಟಾ ಶಿವರಾಮ ಕಾರಂತರು ಕೇವಲ ಕವಿ-ಸಾಹಿತಿ -ಲೇಖಕರಷ್ಟೇ ಅಲ್ಲ. ಅವರದು ಬಹುಮುಖ ಪ್ರತಿಭೆ. ಕಾರಂತರು ಶ್ರೇಷ್ಠ ಕನ್ನಡ ಸಾಹಿತಿ, ಕಲಾವಿದ, ವಿಜ್ಞಾನ ವಿಲಾಸಿ,ಅಲೆಮಾರಿ, ಪತ್ರಕರ್ತ, ಪ್ರಯೋಗಶೀಲ, ನೃತ್ಯಪಟು, ಪರಿಸರವಾದಿ, ಸ್ವಾತಂತ್ರ್ಯ ಹೋರಾಟಗಾರ, ಭಾಷಾ ಶಾಸ್ತ್ರಜ್ಞ... ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಕಾರಂತರಷ್ಟು ಶ್ರದ್ಧಾಪೂರ್ಣ ಮತ್ತು ಕ್ರಿಯಾಪೂರ್ಣ ಸೇವೆಯನ್ನು ಕನ್ನಡದಲ್ಲಿ ಮತ್ತಾರೂ ಮಾಡಿಲ್ಲ ಎಂದೇ ಹೇಳಬಹುದು.

ನಡೆದಾಡುವ ವಿಶ್ವಕೋಶ, ಕಡಲತೀರದ ಭಾರ್ಗವ ಎಂದೇ ಖ್ಯಾತರಾಗಿದ್ದ ಕಾರಂತರು ಹುಟ್ಟಿದ್ದು ಅಕ್ಟೋಬರ್ ೧೦, ೧೯೦೨ರಂದು. ಹುಟ್ಟೂರು ಕಡಲ ತೀರದ ಕೋಟ, ತಂದೆ ಶೇಷ ಕಾರಂತ, ತಾಯಿ ಲಕ್ಷ್ಮೀ. ಲಕ್ಷ್ಮೀ -ಶೇಷಕಾರಂತ ದಂಪತಿಗಳಿಗೆ ಐದನೇ ಮಗನಾಗಿ ಜನಿಸಿದ ಕಾರಂತರು, ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದಾಗ,ಮಹಾತ್ಮಾ ಗಾಂ ಅವರ ತತ್ವಗಳಿಂದ ಪ್ರಭಾವಿತರಾಗಿ ಅಸಹಕಾರ ಚಳವಳಿಗೆ ಧುಮುಕಿದರು. ಆನಂತರ ಪತ್ರಕರ್ತರಾಗಿ, ಛಾಯಾಗ್ರಾಹಕರಾಗಿ, ನೃತ್ಯಪಟುವಾಗಿ, ಸಿನಿಮಾ ನಿರ್ಮಾಪಕರಾಗಿ ಹತ್ತು ಹಲವು ಕ್ಷೇತ್ರಗಳಲ್ಲಿ ಕಾರಂತರು ದುಡಿದರು. ಕೈಸುಟ್ಟುಕೊಂಡರು. ಯಕ್ಷಗಾನ, ಕೋಲಾಟ ಪ್ರದರ್ಶನದಲ್ಲಿ ಅಪ್ರತಿಮ ಯಶಸ್ಸು ಗಳಿಸಿ,ದಕ್ಷಿಣ ಕನ್ನಡ ಜಿಲ್ಲೆಯ ಜೀವಂತ ಕಲೆಯ ಪರಿಚಯವನ್ನು ದೇಶಾದ್ಯಂತ ಮಾಡಿದರು.

ಪ್ರವಾಸಿ - ಅಲೆಮಾರಿ: ಕೆಲವನ್ನು ಬಲ್ಲವರಿಂದ ಕಲಿತು, ಮತ್ತೆ ಕೆಲವನ್ನು ಕೋಶ ಓದಿ ತಿಳಿದು, ಮತ್ತೆ ಕೆಲವನ್ನು ವಿಶ್ವಪರ್ಯಟನೆಯಿಂದ ಅರಿಯಬೇಕೆನ್ನುವ ಹಿರಿಯ ಸಿದ್ಧಾಂತವನ್ನು ತಮ್ಮ ಬಾಳಲ್ಲೂ ಅಳವಡಿಸಿಕೊಂಡ ಕಾರಂತರಿಗೆ ಸಂಚಾರ (ಅಲೆಮಾರಿತನ) ಕಲಿಸಿದ್ದು ಅಪಾರ. ಸಿಂಹಳ, ನೇಪಾಳ, ಬೀರುತ್, ಇರಾನ್,ಆಫ್ಘಾನಿಸ್ತಾನ, ಹಾಂಕಾಂಗ್, ಜಪಾನುಗಳ ಸುತ್ತಿಬಂದ ಕಾರಂತರ ‘ಪೂರ್ವದಿಂದ ಅತ್ಯಪೂರ್ವಕ್ಕೆ’ ಕೃತಿಯ ಬೆನ್ನುಡಿಯಲ್ಲಿ ಸಂಚಾರದ ಬಗ್ಗೆ ಕಾರಂತರ ಅಭಿಪ್ರಾಯ ಹೀಗಿದೆ :

‘...ಸಂಚಾರ ನನ್ನ ಬದುಕಿಗೆ ಅವಿರತವಾಗಿ ಬೆರೆತದ್ದು, ಪುಟಕೊಟ್ಟಿದ್ದು, ಸೂರ್ತಿಕೊಟ್ಟಿದ್ದು, ಬಾಹ್ಯ ಜಗತ್ತಿನ ಅನುಭವಕ್ಕೆ ಹೆದ್ದಾರಿಯಾದದ್ದು.

... ಆ ಸಂಚಾರದ ಅನುಭವಗಳೇ ನನ್ನ ಸಾಹಿತ್ಯಕ್ಕೆ ಜೀವಕಳೆಯನ್ನು ಒದಗಿಸಬೇಕು. ಸಾಹಿತ್ಯಕ್ಕೆ ಬೇಕಾದ ವಸ್ತುವನ್ನು ಸ್ವಯಂಸೂರ್ತಿಯಿಂದಲೇ ಸೃಷ್ಟಿ ಮಾಡಿ, ಕಲ್ಪನಾವಿಲಾಸದಿಂದಲೇ ಅಲಂಕರಿಸಿ ಯಾರನ್ನೂ ಮೆಚ್ಚಿಸುವುದಕ್ಕೆ ಹೋಗಲಾರೆ. .... ಸಂಚಾರ ನನ್ನ ಪಾಲಿಗೆ ನಿತ್ಯದ ವಿದ್ಯಾಭ್ಯಾಸ.’

ಕೃತಿ : ಕಾರಂತರು ನಾಲ್ಕು ಸಂಪುಟಗಳ ವಿಜ್ಞಾನ ಪ್ರಪಂಚ, ಸಿರಿಗನ್ನಡ ಅರ್ಥಕೋಶ, ೪೪ ಕಾದಂಬರಿ, ೧೬ ನಾಟಕ, ೩ ಕಥಾ ಸಂಕಲನ, ೬ ಪ್ರಬಂಧ ಮತ್ತು ಚಿತ್ರಣ, ಕವನ ಸಂಗ್ರಹ, ೫ ಆತ್ಮಕಥೆ ಮತ್ತು ಜೀವನ ಚರಿತ್ರೆ,ವಿಚಾರ ಸಾಹಿತ್ಯ, ೨೫ ಮಕ್ಕಳ ಸಾಹಿತ್ಯ, ಪ್ರವಾಸ ಕಥನ, ಕಿರಿಯರ ವಿಶ್ವಕೋಶ, ಗೀತರೂಪಕ ಸೇರಿದಂತೆ ೧೫೦ಕ್ಕೂ ಹೆಚ್ಚು ಅಮೂಲ್ಯ ಕೃತಿಗಳನ್ನು ಕನ್ನಡಕ್ಕೆ ನೀಡಿದ್ದಾರೆ.

ಪ್ರಶಸ್ತಿ ಪಾರಿತೋಷಕ : ಈ ಮಹಾನ್ ಸಾಹಿತ್ಯ ಸಾಧಕನಿಗೆ ಜ್ಞಾನಪೀಠ ಪ್ರಶಸ್ತಿ (ಮೂಕಜ್ಜಿಯ ಕನಸು),ಪದ್ಮಭೂಷಣ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಎರಡು ಗೌರವ ಡಾಕ್ಟರೇಟ್, ತುಲಸಿ ಸಮ್ಮಾನ್,ಇಂದಿರಾಗಾಂ ವೃಕ್ಷಮಿತ್ರ ಪ್ರಶಸ್ತಿ, ಪಂಪ ಪ್ರಶಸ್ತಿ, ಸ್ವೀಡಿಷ್ ಅಕಾಡಮಿ ಪಾರಿತೋಷಕವೇ ಮೊದಲಾದ ಹಲವು ಪ್ರಶಸ್ತಿಗಳು ಸಂದಿವೆ. ಕಾರಂತರು ಬದುಕಿದ್ದಿದ್ದರೆ ಈಹೊತ್ತು ಶತಾಯುಷಿಗಳಾಗಿರುತ್ತಿದ್ದರು. ಆದರೆ, ತಮ್ಮ ೯೩ನೇ (೧೯೯೭) ವಯಸ್ಸಿನಲ್ಲಿ ಕಾರಂತರು ಇಹವನ್ನು ತ್ಯಜಿಸಿದರು.

ಸಮುದ್ರಗೀತೆಗಳ ಅಲೆಯಲ್ಲಿ ಭಾರತ ಸಿಂಧು ರಶ್ಮಿಯಾಗಿ ಕಂಗೊಳಿಸಿದ ಗೋಕಾಕ್

ವಿನಾಯಕ ಕೃಷ್ಣ ಗೋಕಾಕ್ ಅರ್ಥಾತ್ ವಿ.ಕೃ. ಗೋಕಾಕ್ ಸಮಸ್ತ ಕನ್ನಡ ಕೋಟಿಗೆ ಪರಿಚಯವಾದದ್ದು, ಗೋಕಾಕ್ ಚಳವಳಿಯ ಕಾಲದಲ್ಲಿ. ೧೯೮೨ರಲ್ಲಿ ಡಾ. ರಾಜ್‌ಕುಮಾರ್ ಆದಿಯಾಗಿ ರಾಜ್ಯದ ಸಾಹಿತಿ, ಕಲಾವಿದರು ಗೋಕಾಕ್ ವರದಿ ಜಾರಿಗೆ ಆಗ್ರಹಿಸಿ ನಡೆಸಿದ ಚಳವಳಿಯ ಸಂದರ್ಭದಲ್ಲಿ ಸಾಹಿತ್ಯದ ಗಂಧ-ಗಾಳಿ- ಆಸಕ್ತಿ ಇಲ್ಲದವರಿಗೂ ಗೋಕಾಕರ ಪರಿಚಯವಾಯ್ತು.

ಈ ಚಳವಳಿ ಗೋಕಾಕರಿಗೆ ಖ್ಯಾತಿ- ಜನಪ್ರಿಯತೆಯನ್ನು ತಂದಿತ್ತಿತು. ಚಳವಳಿಯ ನಂತರ ಯಾರೀ ಗೋಕಾಕ್ ಎಂಬ ಕುತೂಹಲದಿಂದ ಗೋಕಾಕರ ಸಾಹಿತ್ಯ ಓದಿದ ಕನ್ನಡಿಗರಿಗೆ ಕಡಿಮೆ ಏನಿಲ್ಲ. ‘ಭಾರತಸಿಂಧುರಶ್ಮಿ’ಸೇರಿದಂತೆ ಅವರ ಸಮಗ್ರ ಸಾಹಿತ್ಯ ಕೃಷಿಗೆ ೧೯೯೦ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂತು.

ಸಾಹಿತ್ಯವನ್ನು ಒಂದು ಕಾಯಕದಂತೆ ಅನವರತ - ಅವಿರತವಾಗಿ ನಡೆಸಿಕೊಂಡು ಬಂದ ಗೋಕಾಕರ ಸಾಹಿತ್ಯ ನಿರ್ಮಿತಿಯ ಹರಹು ವಿಶಾಲವಾದದ್ದು. ಅವರ ಸಾಹಿತ್ಯದ ಆಳ-ಅಗಲ ಶ್ರದ್ಧೆಯಿಂದ ಮನವಿಟ್ಟು ಕೃತಿಗಳನ್ನು ಓದಿದವರಿಗಷ್ಟೇ ನಿಲುಕೀತು.

ಗೋಕಾಕರಿಗೆ ೧೯೯೦ರಲ್ಲಿ ಜ್ಞಾನಪೀಠ ದೊರೆತಾಗ ಹಲವರು ಹುಬ್ಬೇರಿಸಿದರು. ‘ಈಗಿನ ಪ್ರಶಸ್ತಿಗಳಾವುವೂ ಕೊಡುವುದಲ್ಲ - ತೆಗೆದಕೊಳ್ಳುವುದು’ ಎಂದು ಛೇಡಿಸಿದರು. ಗೋಕಾಕರಿಗೆ ಪ್ರಶಸ್ತಿ ಬಂದ ಬಗ್ಗೆ ಮೂಗು ಮುರಿದರು. ಆದರೆ, ನವೋದಯದ ನಂತರ ಬದಲಾಗಬೇಕಾಗಿದ್ದ ಕಾವ್ಯಕ್ಕೆ ಅಗತ್ಯವಾದ ಛಂದೋರೂಪವನ್ನು‘ನವ್ಯಕಾವ್ಯ’ ಪರಿಕಲ್ಪನೆಯನ್ನೂ ಹಾಗೂ ನವ್ಯತೆಯ ಕುರಿತ ಮಂತ ಚಿಂತನೆಗಳನ್ನು ನೀಡಿದ ಗೋಕಾಕರ ಸಾಹಿತ್ಯ ಸಾಧನೆ ಅತ್ಯಮೋಘವಾದ್ದು.

೧೯೪೦ರಲ್ಲಿ ಪ್ರಕಟವಾದ ಗೋಕಾಕರ ‘ಸಮುದ್ರಗೀತೆಗಳು’ ಹಲವು ಹೊಸ ಅಂಶಗಳನ್ನು ಹೊರಗೆಡಹುತ್ತವೆ. ವಚನ ಸಾಹಿತ್ಯದ ಪ್ರೇರಣೆಯಿಂದ ಸಮುದ್ರಗೀತೆಗಳ ಅಭಿವ್ಯಕ್ತಿಯನ್ನು ರೂಪಿಸಿಕೊಂಡ ಗೋಕಾಕರು, ಹಿಂದಿನ ಚಂಪೂಕಾವ್ಯದ ತಂತ್ರವನ್ನು ಹೊಸಗನ್ನಡ ಕವಿತೆಗೆ ಅಳವಡಿಸಲು ಪ್ರಯತ್ನಿಸಿದವರು. ೧೯೪೫ರಲ್ಲಿ ಪ್ರಕಟವಾದ‘ತ್ರಿವಿಕ್ರಮನ ಆಕಾಶಗಂಗೆ’ ಹಾಗೂ ೬೫ರಲ್ಲಿ ಪ್ರಕಟವಾದ ‘ಇಂದಲ್ಲ ನಾಳೆ’ ಕೃತಿಗಳು ಹೊಸ ಬಗೆಯ ಚಂಪೂಕಾವ್ಯಗಳೆಂದೇ ಗುರುತಿಸಲ್ಪಟ್ಟಿವೆ.

ಕವಿ ರತ್ನಾಕರ ವರ್ಣಿ ಅವರ ತರುವಾಯ ಕಡಲಿನ ಬಗ್ಗೆ, ಕಡಲಿನ ಅಸಂಖ್ಯ ವೈವಿಧ್ಯಗಳ ಕುರಿತು ಉತ್ಸಾಹ ತನ್ಮಯತೆಯಿಂದ ಬರೆದವರು ಬಹುಶಃ ಗೋಕಾಕರೊಬ್ಬರೇ. ಆಧುನಿಕ ಕಾವ್ಯಕ್ಕೆ ಶೈಶವಾವಸ್ಥೆಯಲ್ಲಿ ಚೈತನ್ಯ ನೀಡಿ ಮುನ್ನಡೆಸಿ, ನಮ್ಮ ಸಂಸ್ಕೃತಿಯೊಳಗೆ ಬೀಸಿದ ಆಧುನಿಕ ವಾತಾವರಣವನ್ನು ಮನಮುಟ್ಟುವಂತೆ ತಮ್ಮ ಕೃತಿಗಳಲ್ಲಿ ವರ್ಣಿಸಿದ ಗೋಕಾಕರ ಸೃಜನಶೀಲತೆ ಅನನ್ಯವಾದ್ದು.

ಗೋಕಾಕರ ಕಾವ್ಯಗಳಲ್ಲಿನ ವೈವಿಧ್ಯತೆ, ಸೌಂದರ್ಯ, ಶೈಲಿಯೇ ಅಂಥದ್ದು. ಈ ಕೆಳಗಿನ ಸಾಲುಗಳೇ ಅದಕ್ಕೆ ಸಾಕ್ಷಿ...
ಭಾರತದಲ್ಲಿ ಜನಸಂಖ್ಯೆ ಬೆಳೆವುದೆಂದು
ಚಿಂತಿಸುವೆವು ನಾವು
ಅಮೆರಿಕೆಯಲಿ ಯಂತ್ರ ಸಂಖ್ಯೆ ಮಿಕ್ಕಿ
ಹೊಸ ಮಾದರಿ ನೋವು
ಚಂದ್ರನ ಶೀತನ ಸ್ಪರ್ಶದಲಿ
ಸೂರ್ಯನ ರಜಸೋತ್ವವ ಹರ್ಷದಲಿ 
ಗಗನ ವಿಹಾರಿ, ತ್ರಿಭುವನ ಸಂಚಾರಿ
ನೀಲಾಂತರ್ಯಾಮಿ, ವಿಶ್ವಪ್ರೇಮಿ
ಏಕಾಕಿ -ಆದರೂ ವಿವೇಕಿ!
ಅದುವೇ ನೀರದ, ಅದುವೇ ನಾರದ.

ಗೋಕಾಕರು ಹುಟ್ಟಿದ್ದು ೧೯೦೯ ಆಗಸ್ಟ್ ೯ರಂದು. ಹುಟ್ಟೂರು ಧಾರವಾಡ ಜಿಲ್ಲೆಯ ಸವಣೂರು. ಭಾರತ ಸಿಂಧು ರಶ್ಮಿ ಎಂಬ ಮಹಾಕಾವ್ಯ, ಸಮುದ್ರಗೀತೆಗಳು, ಊರ್ಣನಾಭ, ಉಗಮ, ಬಾಳ ದೇಗುಲದಲ್ಲಿ, ದ್ಯಾವಾಪೃಥಿವಿ (ಖಂಡಕಾವ್ಯ) ಹಾಗೂ ಅಭ್ಯದಯ ಎಂಬ ೬ ಕವನ ಸಂಕಲನ, ಜನನಾಯಕ, ಯುಗಾಂತರ, ವಿಮರ್ಶಕ ವೈದ್ಯ ಎಂಬ ಮೂರು ನಾಟಕ, ಇಂದಿನ ಕನ್ನಡ ಕಾವ್ಯದ ಗೊತ್ತುಗುರಿ ಮೊದಲಾದ ೪ ವಿಮರ್ಶಾ ಗ್ರಂಥ, ೨ ಪ್ರಬಂಧ, ೨ ಪ್ರವಾಸ ಸಾಹಿತ್ಯ, ಒಂದು ಬೃಹತ್ ಕಾದಂಬರಿ ಬರೆದಿರುವ ಗೋಕಾಕರ ಪ್ರಥಮ ಕಾದಂಬರಿ ‘ಇಜ್ಜೋಡು’ಮುಂದೆ ಇದು ವಿಸ್ತೃತ ಗೊಂಡಾಗ ‘ಸಮರಸವೇ ಜೀವನ’ ಎಂಬ ಬೃಹತ್ ಕಾದಂಬರಿಯಾಯ್ತು.

ಪ್ರಶಸ್ತಿ ಹಾರ: ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಶೈಲಿಯಲ್ಲಿ ಹಲವು ಉಪಯುಕ್ತ ಕೊಡುಗೆ ನೀಡಿದ ಗೋಕಾಕರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಎರಡು ಗೌರವ ಡಾಕ್ಟರೇಟ್, ಪದ್ಮಶ್ರೀ ಪುರಸ್ಕಾರ, ರಾಜಾಜಿ ಸಾಹಿತ್ಯ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ೧೯೫೮ರಲ್ಲಿ ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗಾದಿಯನ್ನೂ ಗೋಕಾಕರು ಅಲಂಕರಿಸಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ (೧೯೬೬) ಕಾಲೇಜು ಶಿಕ್ಷಣದಲ್ಲಿ ಅನೇಕ ಬದಲಾವಣೆಗಳನ್ನು ತಂದು ಯಶಸ್ವೀ ಕುಲಪತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದವರು. ಗೋಕಾಕರು ಮರಣವನ್ನಪ್ಪಿದ್ದು ೨೮-೦೪-೧೯೯೨ರಲ್ಲಿ

ಡಾ.ಯು.ಆರ್. ಅನಂತಮೂರ್ತಿ ಎಂಬ ಆಲದಮರ

ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಎಂದರೆ ಬಹುಮಂದಿ ಯಾರೆಂದು ಪ್ರಶ್ನಿಸುತ್ತಾರೆ. ಅದೇ ಡಾ.ಯು.ಆರ್. ಅನಂತಮೂರ್ತಿ ಎಂದರೆ ತಮ್ಮ ಆತ್ಮೀಯ, ಹಿತೈಶಿ, ಬಂಧು, ಗೆಳೆಯ ಎನ್ನುವಂತೆ ಓ ಅನಂತ ಮೂರ್ತಿ ಅವರೇ ನನಗೆ ಗೊತ್ತು ಬಿಡಿ ಎನ್ನುತ್ತಾರೆ. (ಮೂರ್ತಿ ಅವರನ್ನು ಒಪ್ಪದವರೂ ಕೆಲವರಿದ್ದಾರೆ)

ಅನಂತ ಮೂರ್ತಿ ಅವರು ತಮ್ಮ ಬರಹ ಹಾಗೂ ಸೂಜಿಗಲ್ಲಿನಂಥ ವ್ಯಕ್ತಿತ್ವದಿಂದ ಸಾಹಿತ್ಯಾಸಕ್ತರೆಲ್ಲರಿಗೂ ಅತ್ಯಂತ ಆತ್ಮೀಯರಾಗಿದ್ದರು. ಕನ್ನಡಿಗರ ಹೃದಯಕ್ಕೆ ಹತ್ತಿರವಾಗಿದ್ದರು. ಆದರೆ ಕೆಲವೊಮ್ಮೆ ವಿವಾದಗಳನ್ನು ತಮ್ಮ ಮೈಮೇಲೆ ಎಳೆದುಕೊಳ್ಳುತ್ತಿದ್ದರು. ಅವರು ನೀಡಿದ್ದ ಕೆಲವು ಹೇಳಿಕೆಗಳು ವಿವಾದವನ್ನೂ ಹುಟ್ಟು ಹಾಕುತ್ತಿದ್ದವು. ಆದರೆ ಇದಾವುದಕ್ಕೂ ಅಂಜದ, ಅಳುಕದ ಅನಂತಮೂರ್ತಿ ಅವರು ತಮ್ಮ ನೇರ ನಡೆ-ನುಡಿಯನ್ನು ಕೊನೆಯ ತನಕ ಉಳಿಸಿಕೊಂಡು ಬಂದವರು.

ಅನಂತಮೂರ್ತಿ ಅವರು ಬಹುಮುಖ ಪ್ರತಿಭೆಯ ಧೀಮಂತ ಲೇಖಕ. ಅತ್ಯುತ್ತಮ ಕಥೆಗಾರ, ಕಾದಂಬರಿಕಾರ, ವಿಮರ್ಶಕ, ಪತ್ರಕರ್ತ (ಋಜುವಾತು ತ್ರೈಮಾಸಿಕ) ಕವಿ.
ಅನಂತಮೂರ್ತಿ ಅವರು ಹುಟ್ಟಿದ್ದು 1932ರ ಡಿಸೆಂಬರ್ 21ರಂದು. ಹುಟ್ಟೂರು ತೀರ್ಥಹಳ್ಳಿಯ ಮೇಳಿಗೆ. ತಂದೆ ರಾಜಗೋಪಾಲಾಚಾರ್ಯ, ತಾಯಿ ಸತ್ಯಭಾಮ. ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಮೂರ್ತಿಯವರು ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದ ಬಳಿಕ, ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ (ರಾಜಕಾರಣ ಮತ್ತು ಕಥೆ -ಕಾದಂಬರಿ) ಪಿಎಚ್‌ಡಿ ಪದವಿ ಪಡೆದಿದ್ದರು.

ಶಿವಮೊಗ್ಗ, ಹಾಸನ, ಮೈಸೂರು ಕಾಲೇಜುಗಳಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದ ಅವರು, ೧೯೮೭ರ ಜುಲೈನಲ್ಲಿ ಕೇರಳದ ಕೊಟ್ಟಾಯಂನ ಗಾಂಧಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕಗೊಂಡು, ಕಾಲೇಜು ಶಿಕ್ಷಣದಲ್ಲಿ ಹಲವು ಸುಧಾರಣೆಗಳನ್ನು ತಂದರು. ನ್ಯಾಷನಲ್ ಬುಕ್‌ಟ್ರಸ್ಟ್ ಅಧ್ಯಕ್ಷರಾಗಿ ಪ್ರಕಾಶನ ಉದ್ಯಮಕ್ಕೆ ಹೊಸ ಆಯಾಮವನ್ನೇ ನೀಡಿದ್ದರು.

ಕೇಂದ್ರ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಸ್ಥಾನವನ್ನೂ ಅಲಕಂರಿಸಿದ್ದ, ಡಾ.ಮೂರ್ತಿ, ೨೦೦೨ರ ಫೆಬ್ರವರಿಯಲ್ಲಿ ತುಮಕೂರಿನಲ್ಲಿ ನಡೆದ ೬೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವಿವಾದಗಳ ನಡುವೆ, ಭಾರಿ ಸುದ್ದಿಯನ್ನೂ ಮಾಡಿದ್ದರು.

ಇತ್ತೀಚೆಗೆ ಎಂ.ಎಂ. ಕಲ್ಬುರ್ಗಿ ಅವರು ಭಾಷಣವೊಂದರಲ್ಲಿ ಅನಂತಮೂರ್ತಿ ಅವರು ದೇವರಿದ್ದಾನೆಯೇ ಎಂಬ ಸತ್ಯಾನ್ವೇಷಣೆಗೆ ತಮ್ಮ ಬಾಲ್ಯದಲ್ಲಿ ದೇವರೆಂದು ನಂಬುತ್ತಿದ್ದ ಶಿಲೆಯೊಂದರ ಮೇಲೆ ಮೂತ್ರ ಮಾಡಿದ್ದರೆಂಬ ಬಗ್ಗೆ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು.

ಲೋಕಸಭೆ ಚುನಾವಣೆಗೂ ಮುನ್ನ ಮೋದಿ ಅವರು ಈ ದೇಶದ ಪ್ರಧಾನಿ ಆದರೆ ತಾವು ಭಾರತದಲ್ಲಿ ಇರುವುದಿಲ್ಲ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದರು, ಮೋದಿ ಅವರು ಪ್ರಧಾನಿ ಆದಾಗ ಕೆಲವರು ಅವರಿಗೆ ಪಾಕಿಸ್ತಾನಕ್ಕೆ ತೆರಳುವಂತೆ ವಿಮಾನದ ಟಿಕೆಟ್ ಕೂಡ ಕಳಿಸಿದ್ದರು. ಈ ಎಲ್ಲ ಸಂಘರ್ಷಗಳ ನಡುವೆಯೂ ಅನಂತ ಮೂರ್ತಿ ಸ್ಥಿತಪ್ರಜ್ಞರಂತೆ ಇರುತ್ತಿದ್ದರು. 
ವಿವಿಧ ರಾಷ್ಟ್ರಗಳನ್ನು ಸುತ್ತಿ, ಕೋಶವನ್ನು ಓದಿ ತಮ್ಮ ದೀರ್ಘಾನುಭವ ಹಾಗೂ ಕಲ್ಪನೆಗಳನ್ನು ಕೃತಿಗಳಿಸುವುದರಲ್ಲಿ ನಿರತರಾಗುತ್ತಿದ್ದರು. ಅನಂತ ಮೂರ್ತಿ ಅವರ ಕೃತಿಗಳನ್ನು ಓದುವುದೇ ಒಂದು ಆನಂದ.

ಪದ್ಮಭೂಷಣ, ಜ್ಞಾನಪೀಠ, ಮಾಸ್ತಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಪ್ರಶಸ್ತಿಯೇ ಮೊದಲಾದ ಹಲವು ಹತ್ತು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಮೂರ್ತಿ ಅವರದು, ಆಕರ್ಷಕ ವ್ಯಕ್ತಿತ್ವ.

ತುಮಕೂರಿನ ಸಾಹಿತ್ಯ ಸಮ್ಮೇಳನದಲ್ಲಿ ಅವರು ಹರಿಸಿದ ವಿಚಾರ ಧಾರೆ, ೨೫ ಪುಟಗಳ ವಿಚಾರಪೂರ್ಣ ಭಾಷಣ, ಕನ್ನಡ - ಕನ್ನಡಿಗರ ಬಗ್ಗೆ ಮೂರ್ತಿಯವರಿಗಿರುವ ಕಳಕಳಿಯನ್ನು ಬಿಂಬಿಸಿತ್ತು. ಸುಲಿದ ಬಾಳೆಯ ಹಣ್ಣಿನಂದದಿ... ಸರಳ ಸುಂದರ ಕನ್ನಡದಲ್ಲಿ ಕಂಚಿನ ಕಂಠದಿಂದ ಹೊರಹೊಮ್ಮಿದ್ದ ಆ ಅಸ್ಖಲಿತ ಭಾಷಣ ಮೂರ್ತಿಯವರು ಅಪ್ರತಿಮ ವಾಗ್ಮಿ ಎಂಬುದನ್ನು ನಿರೂಪಿಸಿದ್ದಲ್ಲದೆ, ಅವರ ವಿಚಾರಧಾರೆಗೆ ಹಿಡಿದ ಕೈಗನ್ನಡಿಯಾಗಿತ್ತು. ಅವರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಬಗ್ಗೆ ಟೀಕೆ ಮಾಡಿದ್ದ ಟೀಕಾಕಾರರ ಬಾಯನ್ನೂ ಮುಚ್ಚಿಸಿತ್ತು. ಅನಂತ ಮೂರ್ತಿ ಕನ್ನಡ ಸಾರಸ್ವತ ಲೋಕದಲ್ಲಿ ಅತಿ ಎತ್ತರಕ್ಕೆ ಬೆಳೆದ ಬೃಹತ್ ಆಲದ ಮರದಂತಿದ್ದರು. 

ಕೃತಿಗಳು: ಸಂಸ್ಕಾರ, ಭಾರತೀಪುರ, ಎಂದೆಂದೂ ಮುಗಿಯದ ಕಥೆ, ದಿವ್ಯ, ಪ್ರಶ್ನೆ, ಮೌನಿ, ಅವಸ್ಥೆ, ಪ್ರಜ್ಞೆ ಮತ್ತು ಪರಿಸರ, ಅವಾಹನೆ, ಘಟಶ್ರಾದ್ಧ, ಬರ, ಆಕಾಶ ಮತ್ತು ಬೆಕ್ಕು, ಸಮಕ್ಷಮ, ಪೂರ್ವಾಪರ, ಹದಿನೈದು ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು, ಮಿಥುನ ಇತ್ಯಾದಿ.

ಕರುನಾಡಿನ ಹೆಮ್ಮೆಯ ಪರಿಪೂರ್ಣ ನಾಟಕಕಾರ ಕಾರ್ನಾಡ್

ನಾಟಕ ಕೇವಲ ರಂಗ ಪ್ರಕಾರವೇ ಪರಂತು ಸಾಹಿತ್ಯ ಪ್ರಕಾರವಲ್ಲ ಎಂದು ಭಾವಿಸಿದವರಿಗೆ ನಾಟಕದ ಹಿರಿಮೆಯನ್ನು ತಿಳಿಯಹೇಳಿ, ನಾಟಕಕ್ಕೂ ಮಹಾಕಾವ್ಯ, ಕವಿತೆ,ಕಾದಂಬರಿಯಷ್ಟೇ ಸಂಚಾರವಿದೆ ಎಂದು ಪ್ರತಿಪಾದಿಸಿದ ಪರಿಪೂರ್ಣ ನಾಟಕಕಾರ ಗಿರೀಶ್ ಕಾರ್ನಾಡ್.

ಕಾರ್ನಾಡರು ಕೇವಲ ಸಾಹಿತಿ, ನಟಕಕಾರರಷ್ಟೇ ಅಲ್ಲ ನಟ ನಿರ್ದೇಶಕರೂ ಹೌದು. ಕಾರ್ನಾಡರ ‘ತುಘಲಕ್’ ಕನ್ನಡ ಶ್ರೇಷ್ಠ ನಾಟಕ ಎಂಬ ಮನ್ನಣೆಗೆ ಪಾತ್ರವಾಗಿದೆ. ಕಾರ್ನಾಡರು ಹುಟ್ಟಿದ್ದು ೧೯೩೮ರ ಮೇ ೧೯ರಂದು. ಮಹಾರಾಷ್ಟ್ರದಲ್ಲಿ. ಕಾರ್ನಾಡರ ಪೂರ್ವಿಕರು ಉತ್ತರ ಕನ್ನಡ ಜಿಲ್ಲೆಗೆ ಸೇರಿದವರು. ತಂದೆ ರಘುನಾಥ ಕಾರ್ನಾಡ್, ತಾಯಿ ಕೃಷ್ಣಾಬಾಯಿ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಕಾರ್ನಾಡರು, ಧಾರವಾಡದ ಬಾಸೆಲ್ ಮಿಷನ್‌ನಲ್ಲಿ ಪ್ರೌಢ ಶಿಕ್ಷಣ ಪಡೆದರು. ನಂತರ ಕರ್ನಾಟಕ ಕಾಲೇಜಿನಲ್ಲಿ ಪದವಿ, ಮುಂಬೈನಲ್ಲಿ ಸ್ನಾತಕೋತ್ತರ.

ಬಳಿಕ ಆಕ್ಸ್‌ಫರ್‍ಡ್ ವಿ.ವಿ.ಯಲ್ಲಿ ತತ್ವಶಾಸ್ತ್ರ, ಅರ್ಥಶಾಸ್ತ್ರ ಮತ್ತು ರಾಜಕೀಯ ಶಾಸ್ತ್ರಗಳಲ್ಲಿ ವಿಶೇಷ ಅಧ್ಯಯನ ಮಾಡಿದ ಕಾರ್ನಾಡರು ಮದ್ರಾಸ್‌ನ ಆಕ್ಸ್‌ಫರ್ಡ್ ಪ್ರೆಸ್‌ನಲ್ಲೇ ನೌಕರಿ ಹಿಡಿದರು. ಮದ್ರಾಸಿನಲ್ಲಿದ್ದಾಗ ಸಿನಿಮಾ ರಂಗದೊಂದಿಗೆ ನಂಟು ಬೆಳೆಸಿಕೊಂಡ ಅವರು, ಅನಂತಮೂರ್ತಿ ಅವರ ‘ಸಂಸ್ಕಾರ’ವನ್ನು ಅವರ ಜೊತೆಗೂಡಿ ಚಲನ ಚಿತ್ರ ಮಾಡಿದರು.

ಕುವೆಂಪು ಅವರ ಕಾನೂರು ಹೆಗ್ಗಡಿತಿಯನ್ನೂ ಕಾರ್ನಾಡರು ಸಿನಿಮಾಕ್ಕೆ ಅಳವಡಿಸಿದರು. ನಿರ್ದೇಶಿಸಿದರು. ೧೯೯೮ರಲ್ಲಿ ಈ ಚಿತ್ರ ನಿರ್ದೇಶಿಸುತ್ತಿದ್ದ ಸಂದರ್ಭದಲ್ಲೇ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತ ಸಿಹಿ ಸುದ್ದಿ ಸಿಕ್ಕಿದ್ದು. ಹೀಗಾಗಿ ಇಬ್ಬರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕಾದಂಬರಿಗಳನ್ನು ಸಿನಿಮಾ ಮಾಡಿದ ಏಕೈಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೆಂಬ ಗೌರವಕ್ಕೆ ಕಾರ್ನಾಡ್ ಪಾತ್ರರಾಗಿದ್ದಾರೆ.

ಸಂಸ್ಕಾರದಲ್ಲಿ ಪ್ರಾಣೇಶಾಚಾರ್ಯನಾಗಿ, ಕಾನೂರು ಹೆಗ್ಗಡಿತಿಯ ನಾಯಕನಾಗಿ ನಟಿಸಿರುವ ಕಾರ್ನಾಡರು ಕಾಡು,ಉತ್ಸವ್, ಗೋಧೂಳಿ, ಒಂದಾನೊಂದು ಕಾಲದಲ್ಲಿ ಮೊದಲಾದ ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಯಯಾತಿ,ಹಯವದನ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಟಿಪ್ಪು ಸುಲ್ತಾನ್, ತುಘಲಕ್ ಮೊದಲಾದ ಶ್ರೇಷ್ಠ ನಾಟಕಗಳನ್ನು ನೀಡಿದ್ದಾರೆ.

೧೯೭೬-೭೮ರವರೆಗೆ ಸಂಗೀತ ನಾಟಕ ಅಕಾಡಮಿ ಅಧ್ಯಕ್ಷರಾಗಿ, ಕೆಲ ಕಾಲ ಪುಣೆಯ ಫಿಲಂ ಇನ್‌ಸ್ಟಿಟ್ಯೂಟ್ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿ ಪಾರಿತೋಷಕ : ಕಾರ್ನಾಡರಿಗೆ ವಿವಿಧ ವಿಭಾಗಗಳಲ್ಲಿ ಅಸಂಖ್ಯಾತ ಪ್ರಶಸ್ತಿ - ಪಾರಿತೋಷಕಗಳು ಲಭ್ಯವಾಗಿದೆ. ನಾಟಕ ಹಾಗೂ ಚಲನಚಿತ್ರಕ್ಷೇತ್ರದಲ್ಲಿ ನೀಡಿರುವ ವಿಶೇಷ ಕೊಡುಗೆಗೆ ರಾಜ್ಯ ನಾಟಕ ಅಕಾಡಮಿ ವಿಶೇಷ ಪ್ರಶಸ್ತಿ (೧೯೮೩), ೧೯೭೨ರಲ್ಲಿ ದೆಹಲಿಯ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ೧೯೬೨ರಲ್ಲಿ ರಾಜ್ಯ ಪ್ರಶಸ್ತಿ ಮತ್ತು ಕುಲಾಪತಿಗಳ ಸ್ವರ್ಣಪದಕ (ಯಯಾತಿ), ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ (ಹಯವದನ), ರಾಜ್ಯೋತ್ಸವ ಪ್ರಶಸ್ತಿ (೧೯೮೪), ೧೯೯೨ರಲ್ಲಿ ಪದ್ಮಭೂಷಣ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ (ತಲೆದಂಡ), ವಂಶವೃಕ್ಷ - ಕಾಡು ಚಿತ್ರಗಳಿಗೆ ಸ್ವರ್ಣ ಕಮಲ,ಗೌರವ ಡಾಕ್ಟರೇಟ್ ಪಡೆದ ಕಾರ್ನಾಡರಿಗೆ ಜ್ಞಾನಪೀಠ ದೊರೆತದ್ದು ೧೯೯೮ರಲ್ಲಿ.

ಭಾರತೀಯ ಸಾಹಿತ್ಯ ಕ್ಷೇತ್ರದ ಪರಮೋಚ್ಚ ಪುರಸ್ಕಾರ ಜ್ಞಾನಪೀಠ

ಕನ್ನಡ ನಾಡು ನುಡಿ ಪರಂಪರೆಗೆ ೨೦೦೦ ವರ್ಷಗಳ ಇತಿಹಾಸವಿದೆ. ಬಹುಭಾಷೀಯರ ಹಿಂದಿಗಿಂತಲೂ ಮಿಗಿಲಾಗಿ ೭ ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಏಕೈಕ ಪ್ರಾದೇಶಿಕ ಭಾಷೆ ಕನ್ನಡ. ಇಂತಹ ಸರಳ, ಸುಂದರ ಭಾಷೆಯ ಸಾಹಿತ್ಯ ಹಿರಿಮೆಯೇ ಅಂತದ್ದು. ಕನ್ನಡ ಸಾರಸ್ವತ ಲೋಕದ ದಿಗ್ಗಜರಾದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ಕನ್ನಡ ಸಾಹಿತ್ಯ ಸರಸ್ವತಿಗೆ ಮೊದಲ ಜ್ಞಾನಪೀಠದ ಮಕುಟ ತೊಡಿಸಿದ ಅಧ್ವರ್ಯು.

ನಂತರ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ಕೋಟ ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ. ಗೋಕಾಕ್, ಯು.ಆರ್. ಅನಂತಮೂರ್ತಿ ಹಾಗೂ ಗಿರೀಶ್ ಕಾರ್ನಾಡ್ ಅವರು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ಕನ್ನಡ ಸಾಹಿತ್ಯದ ಹಿರಿಮೆಯನ್ನು ದೇಶಾದ್ಯಂತ ಪಸರಿಸಿದರು.

ಜ್ಞಾನಪೀಠ: ಜ್ಞಾನಪೀಠ ಪ್ರಶಸ್ತಿ ಭಾರತೀಯ ಸಾರಸ್ವತ ಲೋಕದಲ್ಲಿ ನೀಡಲಾಗುವ ಅತ್ಯುನ್ನತ ಪ್ರಶಸ್ತಿ. ಸಾಹಿತ್ಯ ಲೋಕಕ್ಕೆ ಅನುಪಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪುರಸ್ಕರಿಸಲೋಸುಗವೇ ಈ ಪ್ರಶಸ್ತಿ ಜನ್ಮ ತಳೆದದ್ದು. ಜ್ಞಾನಪೀಠ ಪ್ರಶಸ್ತಿಯನ್ನು ಕೇಂದ್ರ ಸರಕಾರ ನೀಡುವ ಅತ್ಯುನ್ನತ ಸಾಹಿತ್ಯಕ ಪ್ರಶಸ್ತಿ ಎಂದು ತಿಳಿದವರೇ ಹೆಚ್ಚು.

ಆದರೆ, ಜ್ಞಾನಪೀಠ ಸರಕಾರ ಕೊಡಮಾಡುವ ಪುರಸ್ಕಾರವಲ್ಲ. ಇದೊಂದು ಅತ್ಯುನ್ನತ ಖಾಸಗಿ ಪ್ರಶಸ್ತಿ ಎಂಬುದು ಹಲವರಿಗೆ ತಿಳಿದಿಲ್ಲ. ಈ ಪ್ರಶಸ್ತಿ ನೀಡುವ ಸಂಸ್ಥೆ ‘ಭಾರತೀಯ ಜ್ಞಾನಪೀಠ ಪ್ರಶಸ್ತಿ ಪ್ರತಿಷ್ಠಾನ ಈ ಪ್ರತಿಷ್ಠಾನವು ಪ್ರತಿವರ್ಷ ಒಬ್ಬ ಭಾರತೀಯ ಲೇಖಕ ಅಥವಾ ಸಾಹಿತಿ ಇಲ್ಲವೇ ಕವಿಯನ್ನು ಗುರುತಿಸಿ, ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಿ ಪುರಸ್ಕರಿಸುತ್ತಾ ಬಂದಿದೆ.

ಈ ಪ್ರಶಸ್ತಿ ಸುಲಭವಾಗಿ ಸಿಗುವ ಪ್ರಶಸ್ತಿ ಖಂಡಿತಾ ಅಲ್ಲ. ಆ ಪ್ರಶಸ್ತಿಗೆ ಪಾತ್ರರಾಗಲು ಕವಿ, ಸಾಹಿತಿ ತಮ್ಮ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿರಬೇಕು. ಈ ಸಂಸ್ಥೆಯು, ಸಂವಿಧಾನದ ರೀತ್ಯ ಮಾನ್ಯ ಮಾಡಲ್ಪಟ್ಟ ರಾಷ್ಟ್ರೀಕೃತ ಭಾಷೆಗಳಲ್ಲಿ ರಚಿತವಾಗುವ ಕೃತಿ ಹಾಗೂ ಅದನ್ನು ರಚಿಸಿದ ಕೃತಿಕಾರನ ಸಾಧನೆಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ.

ಸಾಹಿತ್ಯ ಕ್ಷೇತ್ರದ ಈ ಅತ್ಯುನ್ನತ ಪ್ರಶಸ್ತಿ ನೀಡುವ ‘ಭಾರತೀಯ ಜ್ಞಾನಪೀಠ ಪ್ರಶಸ್ತಿ ಪ್ರತಿಷ್ಠಾನ’ ಸ್ಥಾಪನೆ ಆದದ್ದು ೧೯೪೪ರಲ್ಲಿ. ರಮಾಜೈನ್ ಮತ್ತು ಸಾಹು ಶಾಂತಿ ಪ್ರಸಾದ್ ಜೈನ್ ದಂಪತಿಗಳು ಹುಟ್ಟು ಹಾಕಿದ ಈ ಸಂಸ್ಥೆ ೧೯೬೫ರಿಂದ ಭಾರತೀಯ ಭಾಷೆಗಳಲ್ಲಿ ಅನುಪಮ ಸಾಹಿತ್ಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗೌರವಿಸುತ್ತಾ ಬಂದಿದೆ.

ನಿಯಮ: ಈ ಪ್ರಶಸ್ತಿ ಪಡೆಯುವ ಸಾಹಿತಿ, ಕವಿ, ಲೇಖಕರು ಭಾರತೀಯರಾಗಿದ್ದಲ್ಲಿ ಮಾತ್ರ ಅವರನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಒಂದು ಬಾರಿ ಪ್ರಶಸ್ತಿ ಪಡೆದ ಭಾಷೆಯನ್ನು ಮತ್ತೆ ಮುಂದಿನ ಮೂರು ವರ್ಷಗಳಿಗೆ ಪರಿಗಣಿಸಲಾಗುವುದಿಲ್ಲ. ಈ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗುವುದಿಲ್ಲ. ಪ್ರಶಸ್ತಿ ಪಡೆದ ಕವಿ ಪ್ರಶಸ್ತಿಗೆ ಸೂಚಿಸುವ ಅವಧಿಯಲ್ಲಿ ಬದುಕಿರಬೇಕು. ಒಮ್ಮೆ ಪ್ರಶಸ್ತಿ ಪಡೆದ ಲೇಖಕನಿಗೆ ಮತ್ತೆ ಈ ಪ್ರಶಸ್ತಿ ನೀಡಲಾಗುವುದಿಲ್ಲ. ಜ್ಞಾನಪೀಠ ಪ್ರಶಸ್ತಿಯು ವಾಗ್ದೇವಿಯ ಪ್ರತಿಮೆ ಹಾಗೂ ಐದು ಲಕ್ಷ ರುಪಾಯಿ ಬಹುಮಾನವನ್ನು ಒಳಗೊಂಡಿದೆ.

ಪತ್ರಕರ್ತ, ನಾಟಕಕಾರ, ವಾಗ್ಮಿ ಟಿ.ಎಂ. ಸತೀಶ್

ಕವಿಯಾಗಿ, ಲೇಖಕರಾಗಿ, ಪದಬಂಧ ರಚನೆಕಾರರಾಗಿ, ಕಥೆಗಾರರಾಗಿ, ನಾಟಕಕಾರರಾಗಿ, ವಾಗ್ಮಿಯಾಗಿ,  ನಟ-ನಿರ್ದೇಶಕರಾಗಿ, ದೂರದರ್ಶನ ವಾಹಿನಿಗಳಲ್ಲಿ ಕಾರ್ಯಕ್ರಮ ನಿರೂಪಕರಾಗಿ, ಸುದ್ದಿ ವಿಶ್ಲೇಷಕರಾಗಿ, ಆಕಾಶವಾಣಿ ದೂರದರ್ಶನದಲ್ಲಿ ಸಾಂದರ್ಭಿಕ ವಾರ್ತಾ ವಾಚಕರಾಗಿ, ವಕೀಲರಾಗಿ  ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸತೀಶ್ ಮೂಲತಃ ಪತ್ರಕರ್ತರು.

ಕನ್ನಡನಾಡಿನ ಜನಪ್ರಿಯ ದಿನ ಪತ್ರಿಕೆ ‘ಕನ್ನಡಪ್ರಭ’ದಲ್ಲಿ ಹನ್ನೆರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ ಟಿ.ಎಂ. ಸತೀಶ್,ಆನಂತರ ಕನ್ನಡದ ಮೊಟ್ಟ ಮೊದಲ ಪೋರ್ಟಲ್ ಕನ್ನಡ.ಇಂಡಿಯಾಇನ್‌ಫೋ.ಕಾಂನಲ್ಲಿ ಮುಖ್ಯ ಉಪಸಂಪಾದಕರಾಗಿ ದುಡಿದರು. ಮುದ್ರಣ ಮಾಧ್ಯಮ ಹಾಗೂ ವಿದ್ಯುನ್ಮಾನ ಮಾಧ್ಯಮ ಹಾಗೂ ಅಂತರ್ಜಾಲ ಮಾಧ್ಯಮದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಟಿ.ಎಂ. ಸತೀಶ್ ಬೆಂಗಳೂರು ಆಕಾಶವಾಣಿ, ದೂರದರ್ಶನ ಸುದ್ದಿ ವಿಭಾಗದಲ್ಲಿ ಕ್ಯಾಷುಯಲ್ ಎಡಿಟರ್ (ಸಾಂದರ್ಭಿಕ ಸಂಪಾದಕ) ಆಗಿ, ಕನ್ನಡರತ್ನ.ಕಾಂ ಹಾಗೂ ಮಾಸಿಕದ ಗೌರವ ಪ್ರಧಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ವಕೀಲರೂ ಆದ ಟಿ.ಎಂ. ಸತೀಶ್ ಉದಯವಾಣಿ ದಿನಪತ್ರಿಕೆಗೆ ಪಹಣಿ ಪ್ರವರ ಎಂಬ ಅಂಕಣ  ಬರೆಯುವ ಮೂಲಕ ಸಾರ್ವಜನಿಕರಿಗೆ ಜಮೀನಿನ ಖರೀದಿಯಲ್ಲಿ ಎದುರಾಗುವ ತೊಡಕುಗಳು ಹಾಗೂ ಅದರ ನಿವಾರಣೆಯ ಮಾರ್ಗೋಪಾಯಗಳ ಬಗ್ಗೆ ಅರಿವು ಮೂಡಿಸಿದ್ದಾರೆ. ಫ್ಲಾಟ್, ನಿವೇಶನ, ಜಮೀನು ಖರೀದಿಗೂ ಮುನ್ನ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆಯೂ ಆ ಅಂಕಣ ಬರಹದಲ್ಲಿ ವಿವರಿಸಿದ್ದಾರೆ. ಹಲವು ಓದುಗರು ಈ ಲೇಖನಗಳನ್ನು ಆಕರವಾಗಿ ಇಂದಿಗೂ ಸಂಗ್ರಹಿಸಿಟ್ಟುಕೊಂಡಿದ್ದಾರೆಂದರೆ, ಅದರ ಮಹತ್ವ ಅರಿವಾಗುತ್ತದೆ.

ಕಳೆದ 28 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸತೀಶ್, ವಿ.ಆರ್.ಎಲ್. ಮೀಡಿಯಾದಿಂದ ಪ್ರಕಟವಾಗುತ್ತಿದ್ದ ಉಷಾಕಿರಣ ದಿನಪತ್ರಿಕೆಯದಲ್ಲಿ ಉಪ ಸಂಪಾದಕ ಹಾಗೂ ವರದಿಗಾರರಾಗಿ,  ಹೈದ್ರಾಬಾದ್ ಕರ್ನಾಟಕ ಪ್ರದೇಶದಿಂದ ಪ್ರಕಟವಾಗುವ ರಾಯಚೂರಿನ ‘ಸುದ್ದಿ ಮೂಲ’ ದಿನಪತ್ರಿಕೆಯ ಬೆಂಗಳೂರು ವಿಶೇಷ ವರದಿಗಾರರಾಗಿ, ಸುವರ್ಣ ಟೈಮ್ಸ್ ಆಫ್ ಕರ್ನಾಟಕ ಪತ್ರಿಕೆಯ ಮುಖ್ಯ ವರದಿಗಾರರಾಗಿ, ವಿಜಯವಾಣಿ ದಿನಪತ್ರಿಕೆಯ ಮುಖ್ಯ ಉಪ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕನ್ನಡ ನಾಡು ಕಲೆಗಳ ಬೀಡು. ಹೀಗಾಗಿ ನಮ್ಮ ನಾಡಿನ ಶ್ರೀಮಂತ ದೇವಾಲಯಗಳ ವಾಸ್ತು ಶಿಲ್ಪ, ಇತಿಹಾಸ, ಐತಿಹ್ಯವನ್ನು ವಿಶ್ವ ಕನ್ನಡಿಗರಿಗೆ ಪರಿಚಯಿಸುವ ಸಲುವಾಗಿ www.ourtemples.in ಅಂತರ್ಜಾಲ ತಾಣ ನಿರ್ಮಿಸಿರುವ ಸತೀಶ್ ರಾಜ್ಯದ 500ಕ್ಕೂ ಹೆಚ್ಚು ದೇವಾಲಯಗಳ ಬಗ್ಗೆ ಸಚಿತ್ರ ಲೇಖನ ಬರೆದಿದ್ದಾರೆ. ತಮ್ಮ ಈ ಅಂತರ್ಜಾಲ ತಾಣದಲ್ಲಿ ಜಿಲ್ಲಾವಾರು ಮಾಹಿತಿ ನೀಡಲಾಗಿದ್ದು, ರಾಜ್ಯದ 30 ಜಿಲ್ಲೆಗಳಲ್ಲಿರುವ ಹಲವು ದೇವಾಲಯಗಳ ಮಾಹಿತಿ ಒದಗಿಸಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ದೇವಾಲಯಗಳಿಗೆ ಭೇಟಿ ನೀಡುವ ಸತೀಶ್, ತಮ್ಮ ಅಂತರ್ಜಾಲ ತಾಣದಲ್ಲಿ ನಿರಂತರವಾಗಿ ಹೊಸ ಹೊಸ ದೇವಾಲಯಗಳ ಮಾಹಿತಿಯನ್ನು ಸೇರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ಪದಬಂಧ ರಚನಕಾರರಾದ ಸತೀಶ್ 3 ಸಾವಿರಕ್ಕೂ ಹೆಚ್ಚು ಪದಬಂಧ (ನಿತ್ಯಪ್ರಭ, ಪದಪ್ರಭ) ಗಳನ್ನು ಕನ್ನಡಪ್ರಭ ದಿನಪತ್ರಿಕೆಗೆ ರಚಿಸಿರುವ ಸತೀಶ್ ವಿಜಯವಾಣಿ ದಿನಪತ್ರಿಕೆ ಹಾಗೂ ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದಿನಪತ್ರಿಕೆಗೂ ನೂರಾರು ಪದಬಂಧ ರಚಿಸಿದ್ದಾರೆ. ಅಂಕಣಕಾರರೂ ಆದ ಟಿ.ಎಂ. ಸತೀಶ್ ಅವರು ಬರೆದ 4೦೦ಕ್ಕೂ ಹೆಚ್ಚು ಅಂಕಣ ಬರಹಗಳು ಉದಯವಾಣಿ (ಪಹಣಿ ಪ್ರವರ), ಉಷಾಕಿರಣ (ನಡೆ-ನುಡಿ, ಸಮ್ಮರ್ ಸ್ಪೆಷಲ್ ಮತ್ತು ದಿನಕ್ಕೊಂದು ಗಾದೆ,ಗಾದೆಗೊಂದು ಕಥೆ), ಹೊಸದಿಗಂತ (ಪರಿವೀಕ್ಷಣ) ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 25 ವರ್ಷಗಳ ಸುದೀರ್ಘ ಪತ್ರಿಕೋದ್ಯಮ ಸೇವೆಯಲ್ಲಿ ಸತೀಶ್ ಅವರು ಮಾಡಿರುವ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಮಾಧ್ಯಮ ಅಕಾಡಮಿ 2010ರ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. 2011ರ ನವೆಂಬರ್ 29ರಂದು ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ  ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಪ್ರಶಸ್ತಿ ಪ್ರದಾನ ಮಾಡಿ ತುರುವೇಕೆರೆ ಸತೀಶ್ ಅವರನ್ನು ಗೌರವಿಸಿದರು.

ಸಾಹಿತ್ಯ ರಚನೆ ಪತ್ರಿಕೋದ್ಯಮದ ಜೊತೆಗೆ ಸಮಾಜಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಸತೀಶ್ ಉತ್ತಮ ಸಂಘಟಕರೂ ಹೌದು. ಕರ್ನಾಟಕದ ಎಲ್ಲ ಪತ್ರಕರ್ತರ ಮಾತೃ ಸಂಘಟನೆಯಾದ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಕಾರ್ಯದರ್ಶಿಯಾಗಿ,ಉಪಾಧ್ಯಕ್ಷರಾಗಿ, ಖಜಾಂಚಿಯಾಗಿ,ರಾಷ್ಟ್ರೀಯ ಮಂಡಳಿ ಸದಸ್ಯರಾಗಿ,ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿಯೂ ದುಡಿದಿದ್ದು, ಸ್ವಾಮಿ ವಿವೇಕಾನಂದ ಪ್ರಸಾರ ಕೇಂದ್ರದ ಸಂಚಾಲಕರಾಗಿ,ಕರ್ನಾಟಕ ಚರ್ಚಾವೇದಿಕೆಯ ಉಪಾಧ್ಯಕ್ಷರಾಗಿ ರಾಜ್ಯದ ವಿವಿಧ ಶಾಲೆ -ಕಾಲೇಜುಗಳಲ್ಲಿ ಸಾವಿರಾರು ಕಾರ್ಯಕ್ರಮ ನಡೆಸಿದ್ದಾರೆ.

2011ರ ಡಿಸೆಂಬರ್ 9, 10 ಹಾಗೂ 11ರಂದು ಗಂಗಾವತಿಯಲ್ಲಿ ನಡೆದ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  ಕನ್ನಡ ಮಾತು ತಲೆಎತ್ತುವ ಬಗೆ ಗೋಷ್ಠಿಯಲ್ಲಿ ವಿದ್ಯುನ್ಮಾನ ಮಾಧ್ಯಮದಲ್ಲಿ ಕನ್ನಡದ ಸ್ಥಿತಿ ಕುರಿತು ಸತೀಶ್  ಉಪನ್ಯಾಸ ನೀಡಿದ್ದಾರೆ. ರಾಜ್ಯದ ವಿವಿಧ ಪತ್ರಿಕೋದ್ಯಮ ಕಾಲೇಜುಗಳಲ್ಲಿ ಗೌರವ ಉಪನ್ಯಾಸವನ್ನೂ ನೀಡಿರುವ ಸತೀಶ್ ಅವರು ಕರ್ನಾಟಕ ಮಾಧ್ಯಮ ಅಕಾಡಮಿ ಶೇಷಾದ್ರಿಪುರಂ ಕಾಲೇಜಿನ ಸಹಯೋಗದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂತರ್ಜಾಲ ಪತ್ರಿಕೋದ್ಯಮದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಳಗಾವಿಯಲ್ಲಿ ಏರ್ಪಡಿಸಿದ್ದ ಸಮ್ಮೇಳನದಲ್ಲೂ ಅವರು, ಅಂತರ್ಜಾಲ ಪತ್ರಿಕೋದ್ಯಮದ ಬಗ್ಗೆ ಉಪನ್ಯಾಸ ನೀಡಿದ್ದಾರೆ.

ಕನ್ನಡಪ್ರಭ ದಿನಪತ್ರಿಕೆಗೆ ನಿತ್ಯಪ್ರಭ, ಪದಪ್ರಭ  ಹೆಸರಿನಲ್ಲಿ 3 ಸಾವಿರ ಪದಬಂಧಗಳನ್ನು ರಚಿಸಿರುವ ಸತೀಶ್ ಅವರಿಗೆ ಶಿವಮೊಗ್ಗದಲ್ಲಿ ನಡೆದ 21ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ವಾರ್ಷಿಕ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 1998 ಡಿಸೆಂಬರ್ 2ರಂದು ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಪತ್ರಕರ್ತರ ಸಮಾವೇಶದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿನಿಯಾಗಿ ಪಾಲ್ಗೊಂಡಿದ್ದಾರೆ.  ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಪತ್ರಕರ್ತರ ಸಮಾವೇಶಗಳಲ್ಲಿ ಪಾಲ್ಗೊಂಡಿದ್ದಾರೆ.

ಆಶುಭಾಷಣ ಸ್ಪರ್ಧೆ, ಏಕಪಾತ್ರಾಭಿನಯ, ಅಂತರಕಾಲೇಜು ನಾಟಕ ಸ್ಪರ್ಧೆಗಳಲ್ಲೂ ಸತೀಶ್,  ಹಲವಾರು ಬಹುಮಾನಗಳನ್ನು ಗಳಿಸಿದ್ದಾರೆ.  ವೇದಿಕೆಯಲ್ಲಿ ನಿಂತು ಜನ ಮೆಚ್ಚಿ ಕರತಾಡನ ಮಾಡುವಂತೆ ಮಾತನಾಡುವುದು  ಸತೀಶ್ ಅವರಿಗೆ ಕರಗತವಾಗಿದೆ.

ಶಾಲೆ ಕಾಲೇಜು ದಿನಗಳಿಂದಲೂ ಚರ್ಚಾಸ್ಪರ್ಧೆಗಳಲ್ಲಿ ಪಾಲ್ಗೊಂಡು 3೦೦ಕ್ಕೂ ಹೆಚ್ಚು ವೈಯಕ್ತಿಕ ಬಹುಮಾನ ಹಾಗೂ 1೦೦ಕ್ಕೂ ಹೆಚ್ಚು ಪರ್ಯಾಯ ಪಾರಿತೋಷಕ ಪಡೆದಿರುವ ಸತೀಶ್ ಮಾತನಾಡಲು ವೇದಿಕೆಯಲ್ಲಿ ನಿಂತರೆಂದರೆ ನಿರರ್ಗಳವಾಗಿ ಪ್ರಾಸಮಯ ವಾಗ್ಝರಿ ಉಕ್ಕಿ ಹರಿಯುತ್ತದೆ. ಕೇಳುಗರು ಮಂತ್ರಮುಗ್ಧರಾಗುತ್ತಾರೆ. ಕರತಾಡನ ಮಾಡಿ ಮೆಚ್ಚುಗೆಯ ಮಾತನಾಡುತ್ತಾರೆ.

ಸತೀಶ್ ರಚಿಸಿದ ಹಾಗೂ ರೂಪಾಂತರಿಸಿದ‘ಹೆತ್ತೊಡಲು’ ‘ವೆಂಕಟರಾಯನ ಪಿಶಾಚ’ ‘ಒಂದು ಸಾವಿನ ಸುತ್ತ’ ‘ಚಿನ್ನದಹೂವು’ ‘ಹುತ್ತದಿಂದ ಎದ್ದು ಬಂದಾತ’ ‘ನಡುರಾತ್ರಿ ಹನ್ನೆರಡು’ ‘ಅರಿವು ಕಣ್ತೆರೆಯಿತು’ ‘ಕಂಪಾರ್ಟ್‌ಮೆಂಟ್‌ನಲ್ಲೂಂದು ಕೊಲೆ’ಸೇರಿದಂತೆ 40ಕ್ಕೂ ಹೆಚ್ಚು ನಾಟಕ, ರೂಪಕಗಳು ಬೆಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ಹಲವಾರು ನಾಟಕಗಳು ಮಂಗಳೂರು, ಭದ್ರಾವತಿ,ಚಿತ್ರದುರ್ಗ ಆಕಾಶವಾಣಿ ಕೇಂದ್ರಗಳಿಂದಲೂ ಮರುಪ್ರಸಾರ ಆಗಿವೆ.

ನಾಟಕಕಾರರಷ್ಟೇ ಅಲ್ಲದೆ ರಂಗ ಕಲಾವಿದರೂ ಆದ ಸತೀಶ್ ತಾವೇ ಕಟ್ಟಿದ ‘ನಟ ಕಲಾವಿದರು’ ತಂಡದಿಂದ ಹಲವಾರು ರಂಗಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಹಲವಾರು ನಾಟಕಗಳನ್ನೂ ನಿರ್ದೇಶಿಸಿದ್ದಾರೆ.

ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆಯವರಾದ ಸತೀಶ್ ಬಿ.ಕಾಂ, ಎಲ್.‌ಎಲ್.‌ಬಿ. ಪದವೀಧರರು. ಆಕಾಶವಾಣಿ, ದೂರದರ್ಶನಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ನೀಡಿರುವ ಸತೀಶ್, ‘ಜೀವಜಗತ್ತು ’ಮೊದಲಾದ ದೂರದರ್ಶನದ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಸತೀಶ್ ಕವಿವಾಣಿ, ಮಂಕುತಿಮ್ಮನ ಕಗ್ಗ,ಸರ್ವಜ್ಞ ವಚನ, ಸುಭಾಷಿತಗಳನ್ನು ಸೂಕ್ತವಾಗಿ ಬಳಸಿಕೊಂಡು, ತಮ್ಮ ಪ್ರಾಸಮಯ ವಾಗ್ಝರಿಯಿಂದ ವಿಭಿನ್ನ ಶೈಲಿಯಲ್ಲಿ ವೇದಿಕೆಯ ಕಾರ್ಯಕ್ರಮಗಳನ್ನೂ ನಿರೂಪಿಸುತ್ತಾರೆ. (ಎಂ.ಸಿ) ಭಾರತ ಸರ್ಕಾರದ ವಾರ್ತಾ ಶಾಖೆ ನಡೆಸುವ ಭಾರತ ನಿರ್ಮಾಣ ಸಾರ್ವಜನಿಕ ಮಾಹಿತಿ ಆಂದೋಲನದ ಹಲವು ಕಾರ್ಯಕ್ರಮಗಳಲ್ಲಿ ಸತೀಶ್ ಸಮರ್ಥವಾಗಿ ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ.

ಕಲೆ, ಸಾಹಿತ್ಯ, ಚಲನಚಿತ್ರ, ಕ್ರೀಡೆ, ವಾಣಿಜ್ಯ, ವಿಜ್ಞಾನ, ವ್ಯಕ್ತಿತ್ವ ವಿಕಾಸ... ಹೀಗೆ ವಿವಿಧ ವಿಭಾಗಗಳಲ್ಲಿ ಸತೀಶ್ ಬರೆದಿರುವ ನೂರಾರು ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಸತೀಶ್ ಬರೆದ ಸಣ್ಣ ಕತೆಗಳು ಪತ್ರಿಕೆಗಳಲ್ಲೂ ಪ್ರಕಟವಾಗಿವೆ. ವಿವಿಧ ವಿಷಯಗಳ ಬಗ್ಗೆ ಸತೀಶ್ ವಿಚಾರಗೋಷ್ಠಿಗಳಲ್ಲಿ ತಮ್ಮ ವಿಚಾರಧಾರೆಹರಿಸಿದ್ದಾರೆ. ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಾಧ್ಯಮ ಸಮಿತಿ ಸಂಚಾಲಕರಾಗಿಯೂ ಸತೀಶ್ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ರಾಜ್ಯೋತ್ಸವ ಕವಿಗೋಷ್ಠಿ ಸೇರಿದಂತೆ ಹಲವು ಕವಿಗೋಷ್ಠಿಗಳಲ್ಲಿ ಸ್ವರಚಿತ ಕವನ ವಾಚನ ಮಾಡಿದ್ದಾರೆ. ಸ್ವಾಮಿ ವಿವೇಕಾನಂದ ಪ್ರಸಾರ ಕೇಂದ್ರದ ಸಂಚಾಲಕರೂ ಆದ ಸತೀಶ್ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಕಾಲೇಜಿನಿಂದ ಕಾಲೇಜಿಗೆ ವಿವೇಕಾನಂದ ಸರಣಿಯಲ್ಲಿ ಸ್ವಾಮಿ ವಿವೇಕಾನಂದರ ಕುರಿತು ಉಪನ್ಯಾಸ ನೀಡಿದ್ದಾರೆ.

ಸಾಹಿತ್ಯ ಕಲೆ, ಸಂಸ್ಕೃತಿ, ಸಮಾಜ ಸೇವೆ, ಪತ್ರಿಕೋದ್ಯಮ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಸತೀಶ್ ಅವರನ್ನು ಈ ನಾಡಿನ ಹಾಗೂ ಹೊರನಾಡಿನ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಗೌರವಿಸಿವೆ.

ಜನಾನುರಾಗಿಸಮಾಜ ಸೇವಕ ಶಂಕರನಾರಾಯಣ್

ಎಂ.ವಿ.  ಶಂಕರನಾರಾಯಣ್ ಸಾಹಿತ್ಯಾಸಕ್ತರು,ರಾಜಕಾರಿಣಿ, ಸಮಾಜ ಸೇವಕರು ಎಲ್ಲಕ್ಕಿಂತ ಮಿಗಿಲಾಗಿ ಅತ್ಯುತ್ತಮ ಸಂಘಟಕರು. ಮೂಲತಃ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕು ಮುಂಗಾನಹಳ್ಳಿ ಗ್ರಾಮದಲ್ಲಿ ೧೯೫೮ರ ಜುಲೈ ೨೪ರಂದು ಶ್ರೀಮತಿ ಪದ್ಮಾವತಮ್ಮ ಹಾಗೂ ವೆಂಕಟೇಶಶಾಸ್ತ್ರಿ ದಂಪತಿಗಳ ಮಗನಾಗಿ ಜನಿಸಿದ ಶಂಕರನಾರಾಯಣ್ ವಿದ್ಯಾರ್ಥಿ ದೆಸೆಯಿಂದಲೂ ನಾಯಕತ್ವದ ಗುಣ ರೂಢಿಸಿಕೊಂಡವರು.

ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಯಾಗಿ, ವಿದ್ಯಾರ್ಥಿಗಳ ನ್ಯಾಯಸಮ್ಮತ ಹಕ್ಕುಗಳ ರಕ್ಷಣೆಗೆ ಹೋರಾಟ ನಡೆಸಿ ಯಶಸ್ವಿಯಾದ ಶಂಕರನಾರಾಯಣ್ ವಾಣಿಜ್ಯ ಪದವಿ ಪಡೆದ ಬಳಿಕವೂ ತಮ್ಮ ಬಡಾವಣೆಯ ಜನತೆಯ ಸಂಕಷ್ಟಗಳಿಗೆ ಸ್ಪಂದಿಸಿ, ಜನಸೇವೆಗೆ, ಸಮಾಜ ಸೇವೆಗೆ ತಮ್ಮನ್ನು ತೊಡಗಿಸಿಕೊಂಡರು.

೧೯೮೦ರ ದಶಕದಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ ಬಳಿಕವೂ ತಮ್ಮನ್ನು ವಿವಿಧ ಸಾಂಸ್ಕೃತಿಕ, ಸಾಹಿತ್ಯಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡ ಅವರು, ಕನ್ನಡ, ನಾಡು, ನುಡಿ, ಸಂಸ್ಕೃತಿಯ ರಕ್ಷಣೆಗೆ ನಡೆದ ಹೋರಾಟಗಳಿಂದ ಹಿಂದೆಸರಿದವರಲ್ಲ. ಗೋಕಾಕ್ ಚಳವಳಿ, ಕಾವೇರಿ ಹೋರಾಟದಲ್ಲಿಯೂ ಪಾಲ್ಗೊಂಡ ಶಂಕರನಾರಾಯಣ್, ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟಿಸಿ, ಕನ್ನಡ ಸೇವೆ ಮಾಡಿದರು. ತಮ್ಮ ಬಡಾವಣೆಯ ಹಲವು ಉದ್ಯಾನಗಳಲ್ಲಿ ಉದಯರಾಗ ಕಾರ್ಯಕ್ರಮ ಏರ್ಪಡಿಸಿ ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರಕ್ಕೂ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.

ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಶಂಕರನಾರಾಯಣ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದು, ಕರ್ನಾಟಕಾದ್ಯಂತ ಪ್ರವಾಸ ಮಾಡಿ ತಮ್ಮ ಕುಲಬಾಂಧವರ ನೋವು, ನಲಿವುಗಳಿಗೆ ಸ್ಪಂದಿಸುತ್ತಿದ್ದಾರೆ.

ಬ್ರಾಹ್ಮಣ ಮಹಾಸಭಾ ತನ್ನದೇ ಆದ ಸ್ವಂತ ಕಟ್ಟಡ ಹೊಂದಲು, ೨೩ಸಾವಿರ ಚದರಡಿಯ ನಿವೇಶನವನ್ನು ಬಿಡಿಎಯಿಂದ ದೊರಕಿಸಿಕೊಡುವಲ್ಲಿ ಇವರ ಪಾತ್ರ ಮಹತ್ವವಾದದ್ದು. ಮಹಾಸಭಾದ ವತಿಯಿಂದ ಸುಮಾರು ೨೦೦ಕ್ಕೂ ಹೆಚ್ಚು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದ ಕೀರ್ತಿಯೂ ಇವರದು.

ಅಖಿಲ ಕರ್ನಾಟಕ ೮ನೇ ಬ್ರಾಹ್ಮಣ ಮಹಾ ಸಮ್ಮೇಳನ ನಡೆದ ಸಂದರ್ಭದಲ್ಲಿ ಗಾಯತ್ರಿ ರಥಯಾತ್ರೆಯೊಂದಿಗೆ ತೆರಳಿ ರಾಜ್ಯಾದ್ಯಂತ ಬ್ರಾಹ್ಮಣ ಜಾಗೃತಿ ಮೂಡಿಸಿದ ಶಂಕರನಾರಾಯಣ್ ಸದಾ ಕ್ರಿಯಾಶೀಲರಾಗಿ,ಯುವಕರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.

ಬೆಂಗಳೂರಿನ ಶಂಕರಮಠದ ಆವರಣದಲ್ಲಿ ಶಂಕರನಾರಾಯಣ್ ಸಂಘಟಿಸಿದ್ದ ಲಲಿತಾ ಸಹಸ್ರನಾಮ ಪಾರಾಯಣ ಕಾರ್ಯಕ್ರಮದಲ್ಲಿ ೮ ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ಅರ್ಚಕರ ಸಂಕಷ್ಟಗಳಿಗೂ ಸ್ಪಂದಿಸಿದ ಶಂಕರನಾರಾಯಣ್, ಅರ್ಚಕರಿಗೆ ಗೌರವಧನ ಕೊಡಿಸುವಲ್ಲಿ ವಹಿಸಿದ ಪಾತ್ರವನ್ನು ಮರೆಯುವಂತೆಯೇ ಇಲ್ಲ.

ಬ್ರಾಹ್ಮಣ ಸಮುದಾಯದಲ್ಲಿ ನಡೆದಾಡುವ ದೇವರೆಂದೇ ಕರೆಸಿಕೊಂಡಿದ್ದ ಮಂತ್ರಾಲಯ ಮಠದ ಶ್ರೀಸುಷಮೀಂದ್ರ ತೀರ್ಥರ ಹಾಗೂ ಸುಮತೀಂದ್ರ ತೀರ್ಥರಿಗೆ ಬೆಂಗಳೂರಿನಲ್ಲಿ ಭಕ್ತಿಪುರಸ್ಸರ ಸಮಾರಂಭ ಏರ್ಪಡಿಸಿ ಗೌರವ ಸಮರ್ಪಿಸಿದ ಕೀರ್ತಿಯೂ ಇವರದು.

ಜಾತಿಯಲ್ಲಿ ಬ್ರಾಹ್ಮಣರಾಗಿ, ಬ್ರಾಹ್ಮಣ ಮಹಾಸಭಾದ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೂ ಇವರು ಜಾತ್ಯತೀತ ಮನೋಭಾವದಿಂದ ಜನಸೇವೆ ಮಾಡಿದವರು. ಮತ್ತಿಕೆರೆ ಶ್ರೀ ಚೌಡೇಶ್ವರಿ ದೇವಾಲಯದ ವತಿಯಿಂದ ಬಸವನಗುಡಿ ಮತ್ತು ಪದ್ಮನಾಭನಗರ ಕ್ಷೇತ್ರದಲ್ಲಿ ಶಂಕರನಾರಾಯಣ್ ಕಾರ್ಯಕ್ರಮ ಸಂಘಟಿಸಿ ಎಲ್ಲ, ಜಾತಿ, ಮತ,ಧರ್ಮದ ೨ ಸಾವಿರ ಮಹಿಳೆಯರಿಗೆ ಉಚಿತವಾಗಿ ಸೀರೆಗಳನ್ನೂ ವಿತರಿಸಿದ್ದಾರೆ.

ಕಳೆದ ೨೫ ವರ್ಷಗಳ ಹಿಂದೆ ರಾಜಕೀಯರಂಗ ಪ್ರವೇಶಿಸಿದ ಶಂಕರನಾರಾಯಣ್ ವಿವಿಧ ರಾಜಕೀಯ ಪಕ್ಷಗಳಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದಾರೆ. ಎಂದೂ ಅಧಿಕಾರಕ್ಕೆ ಆಸೆ ಪಡೆದ ಅವರು ಪಕ್ಷದ ಸಂಘಟನೆಗೇ ತಮ್ಮನ್ನು ತೊಡಗಿಸಿಕೊಂಡವರು.

೨೦೦೮ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪದ್ಮನಾಭನಗರ, ಬಸವನಗುಡಿ, ಚಿಕ್ಕಪೇಟೆ, ಜಯನಗರ, ಯಶವಂತಪುರ, ಬೆಂಗಳೂರು ದಕ್ಷಿಣ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳ ಬಿ.ಜೆ.ಪಿ. ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಶಂಕರನಾರಾಯಣ್ ಕಳಹಂತದಲ್ಲಿ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿ ಮಾಡಿದ ಕಾರ್ಯವನ್ನು ಪಕ್ಷವೂ ಗುರುತಿಸಿದೆ.

೨೦೦೯ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅನಂತಕುಮಾರ್ ಅವರ ಪರ ಮತ ಯಾಚಿಸಿದ ಶಂಕರನಾರಾಯಣ್, ಅವರ ಗೆಲುವಿಗೂ ತಮ್ಮ ಕೈಲಾದಷ್ಟು ಅಳಿಲು ಸೇವೆ ಸಲ್ಲಿಸಿದ್ದಾರೆ.

ಬನಶಂಕರಿ ೩ನೇ ಹಂತದ ನಿವಾಸಿಯಾದ ಶಂಕರನಾರಾಯಣ್, ತಮ್ಮ ಬಡಾವಣೆಯ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಈ ಬಡಾವಣೆಯ ಬಡ ಜನರ ಬಗ್ಗೆ ಕಾಳಜಿ ಹೊಂದಿರುವ ಅವರು, ಅರ್ಹ ಫಲಾನುಭವಿಗಳಿಗೆ ಯಾವುದೇ ಫಲಾಪೇಕ್ಷೆ ಇಲ್ಲದೆ, ಬಿ.ಪಿ.ಎಲ್. ಕಾರ್ಡ್, ವಿಧವಾ ವೇತನ,ವೃದ್ಧಾಪ್ಯವೇತನ ಕೊಡಿಸುತ್ತಿದ್ದರೂ ಎಲೆ ಮರೆಕಾಯಿಯಂತಿದ್ದಾರೆ.

ಇವರಿಂದ ಉಪಕೃತರಾದವರು, ಅಭಿಮಾನಿಗಳು ಎಂ.ವಿ.ಶಂಕರನಾರಾಯಣ್ ಹಿತೈಷಿಗಳ ವೇದಿಕೆಯನ್ನೇ ಸ್ಥಾಪಿಸಿದ್ದು, ಈ ವೇದಿಕೆ ಮೂಲಕ ಹಲವು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಹಲವು ಸಂಘಟನೆಗಳು ಶಂಕರನಾರಾಯಣ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿವೆ.

ಸಮಾಜ ಸೇವಕಜನಾನುರಾಗಿ ಕೆ. ಧರಣೀಶ್

ಈಚೆಗೆ ಬನಶಂಕರಿ ಮೂರನೇ ಹಂತದ, ಮೂರನೇ ಘಟ್ಟದ, ೩ನೇ ವಿಭಾಗದಲ್ಲಿರುವ ಗೆಳೆಯರೊಬ್ಬರ ಮನೆಗೆ ಹೋಗಿದ್ದೆ.ಆಗ ಅಲ್ಲಿ ಕತ್ತರಿಗುಪ್ಪೆ ಸರ್ವೇ ನಂ ೧೦೯ರಲ್ಲಿದ್ದ ಸರ್ಕಾರಿ ಜಾಗ ಅತಿಕ್ರಮಣಕಾರರ ಪಾಲಾಗುವುದನ್ನು ತಪ್ಪಿಸಿ, ಆ ಪ್ರದೇಶದಲ್ಲಿ ಬಡಾವಣೆಯ ಮಕ್ಕಳಿಗೆ ಆಟವಾಡಲು ಅನುವಾಗುವಂತೆ ಆಟದ ಮೈದಾನ ನಿರ್ಮಿಸಿಕೊಟ್ಟ ಸ್ಥಳೀಯ ಯುವ ಮುಖಂಡ ಕೆ.ಧರಣೀಶ್ ಅವರಿಗೆ ಅಭಿನಂದನೆ ನಡೆದಿತ್ತು.

ಬಡಾವಣೆಯ ಪ್ರತಿಯೊಬ್ಬರೂ ಬಂದು ಅವರನ್ನು ಅಭಿನಂದಿಸುತ್ತಿದ್ದರು. ಹೊಸ ಆಟದ ಮೈದಾನದಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಪುಟ್ಟ ಮಕ್ಕಳಂತೂ ಇವರನ್ನು ಕಂಡೊಡನೆ ಓಡಿ ಬಂದು, ಫೀಲ್ಡ್ ಬಿಡಿಸಿಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಅಂಕಲ್ ಎಂದು ಹೇಳಿ ಓಡಿ ಹೋದರು. ಇದನ್ನೆಲ್ಲ ನೋಡುತ್ತಿದ್ದ ನಾನು, ಪತ್ರಕರ್ತನಾಗಿ ಸಹಜ ಕುತೂಹಲದಿಂದ ಧರಣೀಶ್ ಬಗ್ಗೆ ವಿಚಾರಿಸಿದೆ. ಸ್ಥಳೀಯರ ಸಮಸ್ಯೆಗೆ ಸ್ಪಂದಿಸುವ ಅವರ ಕಾರ್ಯವೈಖರಿಯ ಬಗ್ಗೆ ಕೇಳಿ ಆಶ್ಚರ್ಯವಾಯಿತು.

ಈ ಬಡಾವಣೆಯ ಯಾವುದೇ ರಸ್ತೆಯಲ್ಲಿ ಬೀದಿ ದೀಪ ಉರಿಯದಿದ್ದರೆ ಜನ ಸಂಪರ್ಕಿಸುವುದು ಧರಣೀಶ್ ಅವರನ್ನು, ಕೊಳಾಯಿಯಲ್ಲಿ ನೀರು ಬಾರದಿದ್ದರೆ, ನೀರಿನ ಕೊಳವೆ ಒಡೆದು ರಸ್ತೆಯಲ್ಲಿ ನೀರು ಹರಿಯುತ್ತಿದ್ದರೆ,ಗಣೇಶೋತ್ಸವ ಆಚರಣೆಗೆ ಪೆಂಡಾಲ್ ಹಾಕಲು ಅನುಮತಿ ಬೇಕಾದರೆ, ರಸ್ತೆಗಳು ಹಾಳಾಗಿ ಗುಂಡಿ ಬಿದ್ದಿದ್ದರೆ, ಈ ಬಡಾವಣೆಯ ನಿವಾಸಿಗಳು ಜನಪ್ರತಿನಿಧಿಗಳ ಬಳಿಗೆ ಹೋಗದೆ ಧರಣೀಶ್ ಮೊರೆ ಹೋಗುತ್ತಾರೆ. ಧರಣೀಶ್ ಈ ಎಲ್ಲ ಕೆಲಸವನ್ನೂ ತಮ್ಮ ಕೆಲಸವೆಂದು ತಿಳಿದು ಜನಪ್ರತಿನಿಧಿಗಳ ಮನೆಗೆ, ಬಿಡಿಎ, ಕೆ.ಇ.ಬಿ., ಬೆಂಗಳೂರು ನೀರು ಸರಬರಾಜು ಮಂಡಳಿಗೆ ಅಲೆದು ಆ ಕಾರ್ಯ ಮಾಡಿಸಿಕೊಡುತ್ತಾರೆ.

ಇಂಥ ಯುವ ಹಾಗೂ ನಿಷ್ಠ ಕಾರ್ಯಕರ್ತರಿಂದಲೇ ಇರಬೇಕು, ಬೆಂಗಳೂರಿನಲ್ಲಿ ಈ ಬಾರಿ ಭಾರತೀಯ ಜನತಾಪಾರ್ಟಿ ಜಯಭೇರಿ ಬಾರಿಸಿದ್ದು. ಧರಣೀಶ್ ಬಿಜೆಪಿಯ ಸಕ್ರಿಯ ಕಾರ್ಯಕರ್ತರು, ಹಳೆಯ ಶ್ರೀನಿವಾಸನಗರ ಪಾಲಿಕೆ ವಾರ್ಡ್ ವ್ಯಾಪ್ತಿಯ ಸಂಘಟನಾ ಕಾರ್ಯದರ್ಶಿಯಾಗಿ ಪಕ್ಷದ ಸಂಘಟನೆಗೆ ಶ್ರಮಿಸಿದ ಧರಣೀಶ್ ಪ್ರಸ್ತುತ ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಘಟಕದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಆದರ್ಶ ಯುವಕ:ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ನಾಯಕತ್ವದ ಗುಣ ಮೈಗೂಡಿಸಿಕೊಂಡ ಧರಣೀಶ್, ಮಾವಳ್ಳಿಯ ಆರ್.ವಿ.ಬಿ.ಎಚ್.ಎಸ್. ಶಾಲೆಯಲ್ಲಿ ಓದುತ್ತಿದ್ದಾಗಲೇ ಚರ್ಚಾಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಭಾಷಣ ಕಲೆ ಕರಗತ ಮಾಡಿಕೊಂಡರು. ಎಸ್.ಜೆ. ಪಾಲಿಟೆಕ್ನಿಕ್‌ನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡುವಾಗ ಕಾಲೇಜು ವಿದ್ಯಾರ್ಥಿ ಸಂಘದ ಜಂಟಿ ಕಾರ್ಯದರ್ಶಿಯಾಗಿ ವಿದ್ಯಾರ್ಥಿಗಳ ಹಕ್ಕುಗಳಿಗೆ ಹೋರಾಟ ನಡೆಸಿದರು. ಶ್ರೀಗಂಧದ ಕಾವಲುವಿನಲ್ಲಿರುವ ವಕ್ಕಲಿಗರ ಸಂಘದ ವಿ.ವಿ.ಪುರ ಕಾಲೇಜಿನಲ್ಲಿ ಲ್ಯಾಬ್‌ಟೆಕ್ನೀಷಿಯನ್ ಕೋರ್ಸ್‌ಗೆ ಸೇರಿದಾಗ, ಹೋರಾಟ ನಡೆಸಿ ಕೋರ್ಸ್‌ಗೆ ಮಾನ್ಯತೆ ಕೊಡಿಸಿದರು. ಇದುವೇ ಇವರನ್ನು ಸಮಾಜ ಸೇವೆಗೆ ಎಳೆದು ತಂತು.

ವಿದ್ಯಾಭ್ಯಾಸದ ಬಳಿಕ ಕಂಪ್ಯೂಟರ್‌ಗಳಲ್ಲಿ ಬಳಸುವ ಟ್ರಾನ್ಸ್‌ಫಾರ್ಮರ್ ತಯಾರಿಕೆಯಲ್ಲಿ ತೊಡಗಿ ಕೈಗಾರಿಕೋದ್ಯಮಿಯಾದ ಧರಣೇಶ್ ನಂತರ ಸ್ನೇಹ ಟೂರ್ಸ್ ಅಂಡ್ ಟ್ರಾವಲ್ಸ್, ಸ್ನೇಹ ಕನ್‌ಸ್ಟ್ರಕ್ಷನ್ಸ್, ಸ್ನೇಹ ಸಿಟಿ ಟ್ಯಾಕ್ಸಿ ಸರ್ವೀಸ್ ಸಂಸ್ಥೆಗಳನ್ನು ಸ್ಥಾಪಿಸಿದರು. ಕರ್ನಾಟಕ ಸಿಟಿ ಟ್ಯಾಕ್ಸಿ ಆಪರೇಟರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಯಾಗಿ ಟ್ಯಾಕ್ಸಿ ಆಪರೇಟರುಗಳ ಸಮಸ್ಯೆ ನಿವಾರಣೆಗೆ ಹೋರಾಟ ನಡೆಸಿದರು. ಸ್ವತಃ ವೃತ್ತಿ ಶಿಕ್ಷಣ ಪಡೆದು, ಸ್ವ ಉದ್ಯೋಗ ಕೈಗೊಂಡು ಹಲವರಿಗೆ ಉದ್ಯೋಗ ನೀಡಿದ ಧರಣೇಶ್, ವೃತ್ತಿ ಶಿಕ್ಷಣ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿ, ಸ್ನೇಹ ನರ್ಸಿಂಗ್ ಕಾಲೇಜು ಆರಂಭಿಸಿ ಶಿಕ್ಷಣ ಸೇವೆಯನ್ನೂ ಮಾಡುತ್ತಿದ್ದಾರೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ತಮ್ಮ ಶಿಕ್ಷಣ ಸಂಸ್ಥೆಯ ಹಿರಿಮೆ ಎಂದವರು ಹೇಳುತ್ತಾರೆ. ಕೆಂಪೇಗೌಡ ಯುವ ವೇದಿಕೆಯ ಕಾರ್ಯದರ್ಶಿಯಾಗಿ ತಮ್ಮ ಸಮುದಾಯದ ಯುವಜನರ ಆಶೋತ್ತರಗಳನ್ನು ಈಡೇರಿಸಲು ಶ್ರಮಿಸುತ್ತಾ ಜನಾನುರಾಗಿಯಾಗಿದ್ದಾರೆ.

ನಿಸ್ವಾರ್ಥ ಸಮಾಜ ಸೇವಕ: ಈ ಎಲ್ಲ ವಹಿವಾಟಿನ ಜೊತೆಗೆ ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡ ಧರಣೇಶ್ ನೊಂದವರ ಕಣ್ಣೀರು ಒರೆಸುವುದನ್ನು ಮಾತ್ರ ಮರೆಯಲಿಲ್ಲ. ಬಾಲ್ಯದಲ್ಲಿ ಸಂಘ ಪರಿವಾರದ ಸ್ವಯಂ ಸೇವಕನಾಗಿ ಸ್ವಾಮಿ ವಿವೇಕಾನಂದರ ವೀರವಾಣಿಯಿಂದ ಪ್ರೇರಿತರಾದ ಧರಣೇಶ್ ದರಿದ್ರನಾರಾಯಣ ಸೇವೆ ತಮ್ಮ ಪರಮ ಧ್ಯೇಯ ಎನ್ನುತ್ತಾರೆ.

ಹೀಗಾಗೇ ತತ್ವ, ಸಿದ್ಧಾಂತ ಮತ್ತು ಶಿಸ್ತಿಗೆ ಹೆಸರಾದ ಭಾರತೀಯ ಜನತಾಪಕ್ಷದ ಸಕ್ರಿಯ ಕಾರ್ಯಕರ್ತನಾಗಿ, ಪದಾಧಿಕಾರಿಯಾಗಿ ಜನಸೇವೆ ಮಾಡುತ್ತಿದ್ದಾರೆ. ಹಳೆಯ ಶ್ರೀನಿವಾಸನಗರ ನಗರ ಪಾಲಿಕೆ ವಾರ್ಡ್ ಸಂಘಟನಾ ಕಾರ್ಯದರ್ಶಿಯಾಗಿ ಪಕ್ಷ ಬೆಳೆಸಿದ ಅವರು ನಂತರ ಉಪಾಧ್ಯಕ್ಷರಾಗಿ ಪಕ್ಷದ ಸೇವೆ ಮಾಡಿದ್ದಾರೆ.

ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿಯಾಗಿ ದುಡಿದ ಧರಣೇಶ್ ಪ್ರಸ್ತುತ ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿ.ಜೆ.ಪಿ. ಘಟಕದ ಕಾರ್ಯದರ್ಶಿಯಾಗಿದ್ದಾರೆ.

ಅನಂತಕುಮಾರ್ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದಾಗ, ಆರ್. ಅಶೋಕ ಅವರು, ಉತ್ತರಹಳ್ಳಿ ಮತ್ತು ಪದ್ಮನಾಭನಗರ ಕ್ಷೇತ್ರದಿಂದ ಸ್ಪರ್ಧಿಸಿದಾಗ, ರವಿ ಸುಬ್ರಹ್ಮಣ್ಯ ಅವರು, ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದಾಗ, ರಾಮಚಂದ್ರ ಗೌಡರು ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಸ್ಪರ್ಧಿಸಿದಾಗ ಅವರೆಲ್ಲರ ಗೆಲುವಿಗೆ ಹಗಲಿರುಳು ದುಡಿದಿದ್ದಾರೆ.

ಹೌದು ನೀವು ಬಿಜೆಪಿಯನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ ಎಂದರೆ,  ತಾವು ಒಬ್ಬ ವಾಣಿಜ್ಯೋದ್ಯಮಿಯಾಗಿ ಹಿಂದಿನ ಸರ್ಕಾರಗಳ ಆಡಳಿತ ವೈಖರಿಯಮ್ನ ಕಣ್ಣಾರೆ ಕಂಡಿದ್ದೇನೆ. ಇಂದು ಯು.ಪಿ.ಎ. ಸರ್ಕಾರದ ಅವಧಿಯಲ್ಲಿ ಹಣದುಬ್ಬರ ಪ್ರಮಾಣ ನೇತ್ಯಾತ್ಮಕವಾಗಿ ಸಾಗಿದ್ದು, ಜೀವನಾವಶ್ಯಕ ವಸ್ತುಗಳ ಏರಿಕೆಯಿಂದ ಶ್ರೀಸಾಮಾನ್ಯರು ಜೀವನ ನಡೆಸಲು ಹೆಣಗಾಡುತ್ತಿದ್ದಾರೆ. ಅದೇ ವಾಜಪೇಯಿ ಎನ್.ಡಿ.ಎ. ಸರ್ಕಾರ ಕೇಂದ್ರದಲ್ಲಿ ಆಡಳಿತದಲ್ಲಿದ್ದ ಕಾಲದಲ್ಲಿ ಹಣದುಬ್ಬರದ ಪ್ರಮಾಣ ಶೇ.೪ಕ್ಕಿಂತ ಕೆಳಗಿತ್ತು. ದಿನನಿತ್ಯದ ವಸ್ತುಗಳ ಬೆಲೆ ಶ್ರೀಸಾಮಾನ್ಯನ ಕೈಗೆಟುಕುವಂತಿತ್ತು. ಹಳ್ಳಿ ಹಳ್ಳಿಗಳಿಗೂ ಅತ್ಯುತ್ತಮ ರಸ್ತೆ ಸಂಪರ್ಕ ಕಲ್ಪಿಸಲಾಗಿತ್ತು. ದೇಶದ ಉದ್ದಗಲ ಹೆದ್ದಾರಿಗಳು ಹಾಗೂ ಸಂಪರ್ಕ ರಸ್ತೆಗಳು ಸಿದ್ಧವಾದವು. ರಸ್ತೆ ಸಂಪರ್ಕ ಬಲಗೊಂಡ ಹಿನ್ನೆಲೆಯಲ್ಲಿ ವಾಣಿಜ್ಯ ವಹಿವಾಮ ಉತ್ತುಂಗಕ್ಕೇರಿತು. ದೇಶದ ಆರ್ಥಿಕ ಸ್ಥಿತಿ ಸದೃಢವಾಗಿ ವಿದೇಶಿ ಬಂಡವಾಳ ಹೂಡಿಕೆದಾರರು ದೇಶದಲ್ಲಿ ಹಣಹೂಡಲು ಮುಂದಾದರು. ಎನ್.ಡಿ.ಎ. ಶ್ರಮದ ಫಲವಾಗಿ ಭಾರತ ಇಂದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ಸಮರ್ಥವಾಗಿ ಸ್ಪರ್ಧೆ ನಡೆಸುತ್ತಿದೆ. ಇಂಥ ದೂರದರ್ಶಿತ್ವದ ಪಕ್ಷ ನನ್ನ ಆಯ್ಕೆಯಾಯ್ತು ಎನ್ನುತ್ತಾರೆ.

ಐ.ಟಿ, ಬಿ.ಟಿ. ಕ್ಷೇತ್ರದ ಸಾಧನೆಯಿಂದ ವಿಶ್ವದ ಗಮನ ಸೆಳೆದಿರುವ ಬೆಂಗಳೂರು ಮಹಾನಗರದ ಹಲವು ಪ್ರದೇಶಗಳು ಇನ್ನೂ ಮೂಲಸೌಕರ್ಯದಿಂದ  ವಂಚಿತವಾಗಿರುವ ಬಗ್ಗೆ ಮರುಗುವ ಅವರು, ತಮ್ಮ ಬಡಾವಣೆಯ ನಾಗರಿಕರಿಗೆ ಮೂಲಸೌಕರ್ಯ ಒದಗಿಸಲು ಶ್ರಮಿಸುತ್ತಿದ್ದಾರೆ.

ಬೆಂಗಳೂರು ಮಹಾನಗರ ಪಾಲಿಕೆಯ ಮಾನ್ಯತೆ ಪಡೆದ ಗುತ್ತಿಗೆದಾರರಾಗಿ, ಶ್ರೀನಿವಾಸನಗರ, ಗಿರಿನಗರ,ನಾಗೇಂದ್ರ ಬಡಾವಣೆ, ಮುನೇಶ್ವರ ಬಡಾವಣೆ ಹಾಗೂ ಕತ್ತರಿಗುಪ್ಪೆ ಬಡಾವಣೆಗಳಲ್ಲಿ ಇವರು ನಿರ್ಮಿಸಿರುವ ಸೇತುವೆಗಳು, ಡಾಂಬರು ಮತ್ತು ಕಾಂಕ್ರೀಟ್ ರಸ್ತೆಗಳು ಇಂದಿಗೂ ಗಟ್ಟಿಮುಟ್ಟಾಗಿವೆ. ಗುಣಮಟ್ಟದ ಕಾಮಗಾರಿ ಹೇಗಿರಬೇಕು ಎಂಬುದಕ್ಕೆ ಧರಣೇಶ್ ಅವರು ಮಾಡಿರುವ ಕಾಮಗಾರಿಗಳು ಮಾದರಿಯಾಗಿ ನಿಲ್ಲುತ್ತವೆ.

ಸಮುದಾಯದೊಂದಿಗೆ: ದೇಶದ ಅಭಿವೃದ್ಧಿಗೆ ಶಿಕ್ಷಣ ಹಾಗೂ ಸಾರ್ವಜನಿಕ ಆರೋಗ್ಯವೇ ಆಧಾರ ಎಂದು ನಂಬಿರುವ ಧರಣೇಶ್, ಪ್ರತಿ ವರ್ಷ ಗಿರಿನಗರ, ಕತ್ತರಿಗುಪ್ಪೆ ಹಾಗೂ ಹನುಮಂತನಗರದ ವಿವಿಧ ಸರ್ಕಾರಿ ಶಾಲೆಗಳ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಿಸುತ್ತಿದ್ದಾರೆ.

ಬಿಜೆಪಿ ಹಿರಿಯ ನಾಯಕರಾದ ಎ.ಬಿ. ವಾಜಪೇಯಿ, ಎಲ್.ಕೆ. ಅಡ್ವಾಣಿ, ಬಿ.ಎಸ್. ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯನಾಯ್ಡು, ಆರ್. ಅಶೋಕ ಅವರ ಹುಟ್ಟುಹಬ್ಬದ ದಿನದಂದು ಉಚಿತ ಆರೋಗ್ಯ ತಪಾಸಣಾ ಶಿಬಿರ, ನೇತ್ರ ತಪಾಸಣೆ  ಮತ್ತು ಉಚಿತ ಕನ್ನಡಕ ವಿತರಣಾ ಶಿಬಿರಗಳನ್ನು ಏರ್ಪಡಿಸುತ್ತಾ ಬಂದಿದ್ದಾರೆ.

ಯುವ ಚೇತನ: ಎಲ್ಲರೂ ತಮ್ಮ ತಮ್ಮ ಸ್ವಾರ್ಥಕ್ಕೆ ಗಂಟು ಬೀಳುವ ಈ ಕಾಲದಲ್ಲಿ, ಸ್ವತಃ ಉದ್ಯಮಿಯಾಗಿಬಿಡುವಿಲ್ಲದ ತಮ್ಮ ಕಾರ್ಯಭಾರಗಳ ನಡುವೆಯೂ ಧರಣೀಶ್ ಸಮಾಜ ಸೇವೆಗೆ, ದೀನರ ಸೇವೆಗೆ ತಮ್ಮ ಅಮೂಲ್ಯ ಸಮಯವನ್ನು ಮುಡಿಪಾಗಿಟ್ಟಿದ್ದಾರೆ.

ಕತ್ತರಿಗುಪ್ಪೆ, ಹನುಮಂತನಗರ ಹಾಗೂ ಗಿರಿನಗರ ಪ್ರದೇಶದಲ್ಲಿರುವ ಅರ್ಹ ಫಲಾನುಭವಿಗಳಿಗೆ ಬಿ.ಪಿ.ಎಲ್.ಕಾರ್ಡ್, ವೃದ್ಧಾಪ್ಯವೇತನ, ವಿಧವಾ ವೇತನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡಿಸಲು ಶ್ರಮಿಸುತ್ತಿದ್ದಾರೆ.

ಕೆಂಪೇಗೌಡ ಬಡಾವಣೆಯ ಐತಿಹಾಸಿಕ ಕೆಂಪಾಂಬುದಿ ಕೆರೆ ಸಂರಕ್ಷಣೆ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿ ಪಾಲ್ಗೊಂಡ ಧರಣೇಶ್, ತಮ್ಮ ಬಡಾವಣೆಯಲ್ಲಿ ಡೆಂಗ್ಯೂ, ಚಿಕುನ್‌ಗುನ್ಯಾ ಹಾಗೂ ಎಚ್೧ಎನ್೧ ರೋಗದ ಬಗ್ಗೆ ಜನಜಾಗೃತಿ ಅಭಿಯಾನವನ್ನೂ ಕೈಗೊಳ್ಳುತ್ತಿದ್ದಾರೆ. ಕಲಬೆರಕೆ ವಿರುದ್ಧ ಮತ್ತು ಅದರ ದುಷ್ಪರಿಣಾಮಗಳ ವಿರುದ್ಧ ಅರಿವು ಮೂಡಿಸುತ್ತಿದ್ದಾರೆ.

ಶಾಲಾ ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯ ಪ್ರಕಾಶಕ್ಕಾಗಿ ಅಂತರ ಶಾಲಾ ಮತ್ತು ಅಂತರ ಕಾಲೇಜು ಚರ್ಚಾಸ್ಪರ್ಧೆ, ಕ್ರೀಡಾಸ್ಪರ್ಧೆ ಆಯೋಜಿಸುತ್ತಾ ಬಂದಿದ್ದಾರೆ.

ಯೋಜನೆಗಳು:

 • ಎಲ್ಲ ವಿದ್ಯಾವಂತ ನಿರುದ್ಯೋಗಿಗಳೂ ಉದ್ಯೋಗಿಗಳಾಗಬೇಕು. ಅವರ ಅಪರಿಮಿತ ಶಕ್ತಿ ವ್ಯರ್ಥವಾಗಬಾರದು  ಇದಕ್ಕೆ ಸೂಕ್ತವಾದ ಯೋಜನೆ ರೂಪಿಸುವುದೇ ತಮ್ಮ ದ್ಯೇಯ ಎನ್ನುತ್ತಾರೆ.

 • ಮೂಲಭೂತ ಸೌಕರ್ಯಗಳ ಕೊರತೆಯಿಂದ ಕುಗ್ಗಿರುವ ತಮ್ಮ ಬಡಾವಣೆಯ ವಾರ್ಡ್‌ಗಳನ್ನು ಮಾದರಿ ವಾರ್ಡ್ ಮಾಡುವುದೇ ತಮ್ಮ ಗುರಿ ಎನ್ನುತ್ತಾರೆ.

 • ಜಾತಿ,ಮತ, ಧರ್ಮ ಭೇದವಿಲ್ಲದೆ ಎಲ್ಲ ವರ್ಗದ ಜನರು ಸುಖ, ಶಾಂತಿ ಹಾಗೂ ನೆಮ್ಮದಿಯಿಂದ ಸೌಹಾರ್ದತೆಯಿಂದ ಬಾಳುವಂಥ ವಾತಾವರಣವಮ್ನ ಕಲ್ಪಿಸುವುದು ತಮ್ಮ ಪರಮ ಗುರಿ ಎಂದೂ ಅವರು  ಭಾವಿಸುತ್ತಾರೆ.

 • ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಮ್ಮ ಬಡಾವಣೆಯಲ್ಲಿರುವ ನಿವಾಸಿಗಳ ಸಮಸ್ಯೆಗೆ ಸ್ಪಂದಿಸುವುದು ತಮ್ಮ ಸಂಕಲ್ಪವೆನ್ನುತ್ತಾರೆ.

 • ಕತ್ತರಿಗುಪ್ಪೆ, ಹನುಮಂತನಗರ ಅಥವಾ ಗಿರಿನಗರ ವಾರ್ಡ್‌ನಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ದೊರಕಿದಲ್ಲಿ, ಪಕ್ಷದ ತತ್ವ,ಸಿದ್ಧಾಂತಗಳಿಗೆ ಚ್ಯುತಿ ಆಗದಂತೆ ಹಾಗೂ ಅಭಿವೃದ್ಧಿಯೇ ಮೂಲ ಮಂತ್ರವಾಗಿರುವ ರಾಜ್ಯ ಬಿಜೆಪಿ ಸರ್ಕಾರದ ಆಶೋತ್ತರಗಳನ್ನು ಈಡೇರಿಸಲು ಅವಿರತ ಶ್ರಮಿಸುವುದಾಗಿ ಹೇಳುತ್ತಾರೆ.

ಮೂಲ : ಕನ್ನಡ ರತ್ನ

2.89534883721
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top