অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಝೀಮನ್, ಪೀಟರ್

ಝೀಮನ್, ಪೀಟರ್

ಝೀಮನ್, ಪೀಟರ್ (1865-1943)  1902
Ziemann , Pieter

ಡೆನ್ಮಾರ್ಕ್-ಭೌತಶಾಸ್ತ್ರ- ಕಾಂತಕ್ಷೇತ್ರಗಳಲ್ಲಿ ರೋಹಿತದ ಸಾಲುಗಳು ಸೀಳುವುದನ್ನು ಅನಾವರಣಗೊಳಿಸಿದಾತ.

ಝೀಮನ್ ತಂದೆ ಕ್ಯಾರರಿನಸ್ ಝೀಮನ್ ಝಾನ್ನೆಮೈರ್ ಎಂಬ ಹಳ್ಳಿಯಲ್ಲಿ ಪಾದ್ರಿಯಾಗಿದ್ದನು.  ಪೀಟರ್ 25 ಮೇ  1865 ರಂದು ಈ ಹಳ್ಳಿಯಲ್ಲೇ ಜನಿಸಿದನು.  ಪೀಟರ್ ಝೀರಿಕ್‍ಝಿ ಪಟ್ಟಣದಲ್ಲಿ ಪ್ರೌಢಾಶಾಲಾ ವ್ಯಾಸಂಗ ಮುಗಿಸಿ  ಅಭಿಜಾತ ಭಾಷೆಗಳ ಅಧ್ಯಯನಕ್ಕೆಂದು ಡೆಲ್ಫ್‍ಟ್‍ಗೆ ಹೋದನು.  ಆ ಕಾಲದಲ್ಲಿ ಗ್ರೀಕ್, ಲ್ಯಾಟಿನ್‍ನಂತಹ ಭಾಷಾ ಪ್ರೌಢಿಮೆ ವಿಶ್ವವಿದ್ಯಾಲಯದ ಪ್ರವೇಶಕ್ಕೆ ಅತ್ಯವಶ್ಯಕವಾಗಿದ್ದವು.  ಇಲ್ಲಿರುವಾಗ ಸಾರ್ವಜನಿಕ ನಿರ್ಮಾಣದ ವಿಭಾಗದ ಇಂಜಿನಿಯರ್ ಆಗಿದ್ದ ಡಾ. ಸಿ.ಲೆಲಿಯ ಮನೆಯಲ್ಲಿದ್ದನು.  ಇದರಿಂದ ಪೀಟರ್’ಗೆ ತಾಂತ್ರಿಕ  ಹಾಗೂ ವ್ಶೆಜ್ಞಾನಿಕ ವಿಷಯಗಳಲ್ಲಿ ಅಭಿರುಚಿ ಬೆಳೆಯಿತು.  ಇಲ್ಲಿರುವಾಗಲೇ ಕ್ಯಾಮೆರ್ಲಿಂಗ್ ಒನ್ನೆಸ್‍ನ ಸಂಪರ್ಕ ಝೀಮನ್‍ಗೆ ಒದಗಿತು. ಮುಂದೆ 1913ರಲ್ಲಿ ಕ್ಯಾಮರ್ಲಿಂಗ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.  ಕ್ಯಾಮರ್ಲಿಂಗ್, ಝೀಮನ್‍ಗಿಂತ ಹನ್ನೆರಡು ವರ್ಷ ದೊಡ್ಡವನಾಗಿದ್ದರೂ ಅವರಿಬ್ಬರ ಮಧ್ಯದ ಸಮಾನ  ಮನಸ್ಕತೆಗೇನೂ ಕೊರತೆಯಿರಲಿಲ್ಲ.  ಝೀಮನ್ ಶಾಖ, ವೈದ್ಯುತ್ ಭೌತಶಾಸ್ತ್ರಗಳಲ್ಲಿ ಹೊಂದಿದ್ದ ಪಾಂಡಿತ್ಯ, ಪ್ರಯೋಗಗಳನ್ನು ನಡೆಸುವಾಗ ತೋರುತ್ತಿದ್ದ ಕೌಶಲ್ಯ ಕ್ಯಾಮರ್ಲಿಂಗ್‍ನ ಮನ ಗೆದ್ದಿದ್ದಿತು.  1815ರಲ್ಲಿ ಝೀಮನ್ ಲೈಡ್‍ನ ವಿಶ್ವವಿದ್ಯಾಲಯ ಸೇರಿದನು.  ಇಲ್ಲಿ ಕ್ಯಾಮರ್ಲಿಂಗ್ ಒನ್ನೆಸ್ ಹಾಗೋ ಲೊಹ್ರೆಂಟ್ಸ್‍ನ ಮಾರ್ಗದರ್ಶನ ದಕ್ಕಿತು.  1890ರಲ್ಲಿ ಪೀಟರ್, ಲೊಹ್ರೆಂಟ್ಸ್‍ನ ಸಹಾಯಕನಾಗಿ ನೇಮಕಗೊಂಡನು. ಇದರಿಂದ ಕೆರ್ ಪರಿಣಾಮವನ್ನು ವಿಸ್ತೃತವಾಗಿ ಅಧ್ಯಯನ ಮಾಡುವುದು ಸಾಧ್ಯವಾಯಿತು.  1893ರಲ್ಲಿ ಡಾಕ್ಟರೇಟ್ ಪದವಿಗಳಿಸಿ, ಸ್ಟ್ರಾಸ್‍ಬರ್ಗ್‍ನ ಕೊಹ್ಲ್’ರಾಷ್ ಸಂಸ್ಥೆ ಸೇರಿದನು.  ಇಲ್ಲಿ ಕೊಹೆನ್‍ನ ಕೈಕೆಳಗೆ ಆರು ತಿಂಗಳಕಾಲ ಕೆಲಸ ಮಾಡಿದನು.  1894ರಲ್ಲಿ ಲೈಡೆನ್‍ಗೆ ಮರಳಿ 1895ರಿಂದ 1897ರವರೆಗೆ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದನು. ಇಲ್ಲಿ ಸೋಡಿಯಂ ಹಾಗೂ ಲಿಥಿಯಂ ಧಾತುವಿನ ರೋಹಿತದ ಸಾಲುಗಳು, ಕಾಂತಕ್ಷೇತ್ರದ ಪ್ರಭಾವದಲ್ಲಿ ಅಗಲಗೊಳ್ಳುವುದನ್ನು ಝೀಮನ್ ಗುರುತಿಸಿದನು. ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ರೋಹಿತದ ಸಾಲುಗಳು ಎರಡು ಮುರು ಸಾಲುಗಳಾಗಿ ಸೀಳಿ ಹೋಗುವುದು ಖಚಿತವಾಯಿತು. ಲೊಹ್ರೆಂಟ್ಸ್ ಪರಮಾಣುವಿನಲ್ಲಿ ಕಂಪಿಸುತ್ತಿರುವ ಎಲೆಕ್ಟಾನ್‍ಗಳೇ ಇದಕ್ಕೆ ಕಾರಣವೆಂದು ಹೇಳಿದ್ದನು.  ಝೀಮನ್ ಪ್ರಯೋಗಗಳು ಇದಕ್ಕೆ ಸಾಕ್ಷಿಯೊದಗಿಸಿದವು.  ಬೆಳಕಿನ ಪಥಕ್ಕೆ ಸಮಾಂತರದಲ್ಲಿ ಪ್ರಬಲ ಕಾಂತಕ್ಷೇತ್ರ ನಿರ್ಮಿಸಿದಾಗ ರೋಹಿತದ ಸಾಲುಗಳು ಎರಡಾಗಿಯೂ, ಲಂಬ ದಿಕ್ಕಿನಲ್ಲಿ ಕಾಂತಕ್ಷೇತ್ರವಿದ್ದಾಗ ಮೂರಾಗಿಯೂ ಸೀಳುತ್ತವೆ.  ಬೊಹ್ರ್‍ನ ಪರಮಾಣು ಮಾದರಿ ಈ ವಿದ್ಯಾಮಾನವನ್ನು ವಿವರಿಸಬಲ್ಲದು. ಆದರೆ ಝೀಮನ್ ಪರಿಣಾಮದಲ್ಲಿ ಇವು ಹಲವಾಗಿ ಸೀಳುತ್ತಿದ್ದವು.  ಇದಕ್ಕೆ ವಿವರಣೆ ನೀಡಲು ಪೂರ್ಣ ಪ್ರಮಾಣದ ಕ್ವಾಂಟಮ್ ಸಿದ್ಧಾಂತ ರೂಪು ತಳೆಯಬೇಕಾಯಿತು.  ಪೂರ್ಣ ಪ್ರಮಾಣದ ಕ್ವಾಂಟಂ ಸಿದ್ಧಾಂತದಲ್ಲಿ ಎಲೆಕ್ಟ್ರಾನ್‍ಗಳು ಗಿರಕಿಯನ್ನು ಸಹ ಪರಿಗಣಿಸಲಾಯಿತು.  ಇದಕ್ಕಾಗಿ ಉಹ್ಲೆನ್‍ಬೆಕ್, ಗೌಡ್‍ಸ್ಮಿತ್ 1926ರ ನೊಬೆಲ್ ಪ್ರಶಸ್ತಿ ಪಡೆದರು.  1902ರಲ್ಲಿ ಝೀಮನ್ ಹಾಗೂ ಲೊಹ್ರೆಂಟ್ಸ್, ಪರಮಾಣುಗಳ ಕಾಂತೀಯ ದೃಕ್ ಪರಿಣಾಮ ಹೊರಗೆಡವಿಟ್ಟಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದರು.  1908ರಲ್ಲಿ ಹ್ಯಾಲೆ ,ಝೀಮನ್ ಪರಿಣಾಮ ಬಳಸಿ ಸೂರ್ಯನ ಕಾಂತಕ್ಷೇತ್ರ ನಿರ್ಧರಿಸಿದನು.  ಝೀಮನ್ ಪರಿಣಾಮದ ಅಧ್ಯಯನದ ಪಲವಾಗಿ ವೈದ್ಯುತ್ ಕಾಂತೀಯತೆ ಹಾಗೂ ಬೆಳಕಿನ ಐಕ್ಯತಾ ಸಿದ್ಧಾಂತ ಮೂಡಿತು. ಝೀಮನ್‍ನ ಈ ಸಂಶೋಧನೆ ಏಕಕಾಲಕ್ಕೆ ಲೊಹ್ರೆಂಟ್ಸ್‍ನ ಸೈದ್ಧಾಂತಿಕ ನಿರ್ಧಾರಗಳಿಗೆ ಸಾಧನೆ ಒದಗಿಸಿ, ಎಲ್ಲಾ ಬಗೆಯ ಬೆಳಕುಗಳ ಧೃವೀಕರಣ ಸಾಬೀತಾಗಿ, ಋಣಾತ್ಮಕ ಕಣಗಳ ಅಸ್ತಿತ್ವವನ್ನು ಸಾರಿತು.  ಇದಾದ ಕೇವಲ ಒಂದೇ ವರ್ಷದಲ್ಲಿ ಜೆ.ಜೆ.ಥಾಮ್ಸನ್ ಮುಕ್ತ ಎಲೆಕ್ಟ್ರಾನ್‍ಗಳ ಅಸ್ತಿತ್ವ ಸಾರಿದನು. ಇದು ಝೀಮನ್ ಮಂಡಿಸಿದ ಬೆಳಕು ಕಾಂತತ್ವ ಹಾಗೂ ವೈದ್ಯುತ್ ಕ್ಷೇತ್ರಗಳ ಸಂಬಂಧವನ್ನು ಸ್ಪುಟಗೊಳಿಸಿತು. ಝೀಮನ್, ಸೂರ್ಯನ ಪ್ರಬಲ ಕಾಂತಕ್ಷೇತ್ರ, ದೂರದಿಂದ ಬರುವ ಆಕಾಶ ಕಾಯಗಳ ರೋಹಿತದ ಮೇಲೂ ಪ್ರಭಾವ ಬೀರಬಹುದೆಂದು ಸೂಚಿಸಿದನು. 1908ರಲ್ಲಿ ಮೌಂಟ್ ವಿಲ್ಸನ್  ವೀಕ್ಷಣಾಲಯದ ಖಗೋಳಶಾಸ್ತ್ರಜ್ಞ. ಜೆ.ಇಹೇಲ್ ತಾನು ಪಡೆದ ತಾರೆಗಳ ಛಾಯಾಬಿಂಬಗಳಿಂದ ಇದು ಸರಿಯೆಂದು ತೋರಿಸಿದನು.  ಝೀಮನ್ ಜೆ.ಡೆ ಗೀರ್‍ನೊಂದಿಗೆ 38ಎಅರ್,64 ಎನ್‍ಸಿ  ಎಂಬ ಎರಡು ಹೊಸ ಸಮಸ್ಥಾನಿಗಳನ್ನು ಪತ್ತೆ ಹಚ್ಚಿದನು. ಆ್ಯಮಸ್ಟರ್ ವಿಶ್ವವಿದ್ಯಾಲಯದಿಂದ ಝೀಮನ್‍ಗೆ ಪ್ರಾಧ್ಯಾಪಕನಾಗುವ ಆಹ್ವಾನ ದಕ್ಕಿತು. 1900ರಲ್ಲಿ ಇಲ್ಲಿಯೇ ವಿಶಿಷ್ಟ ಪ್ರಾಧ್ಯಾಪಕನಾಗಿ ಬಡ್ತಿ ಹೊಂದಿದನು. 1908ರಲ್ಲಿ ವ್ಯಾಂಡರ್ ವಾಲ್‍ನಿವೃತ್ತನಾದನು.  ಇದರಿಂದ ತೆರವಾದ ಭೌತಶಾಸ್ತ್ರ ಪ್ರಯೋಗಾಲಯದ ನಿರ್ದೇಶಕ ಸ್ಥಾನ ಝೀಮನ್‍ಗೆ ದಕ್ಕಿತು. 1923ರಲ್ಲಿ ಝೀಮನ್ ಪ್ರಯೋಗಗಳಿಗಾಗಿಯೇ ಹೊಸದಾದ ಭೌತಶಾಸ್ತ್ರ ಪ್ರಯೋಗಾಲಯ ನಿರ್ಮಾಣಗೊಂಡಿತು. ಕಂಪನ ರಹಿತ ತಳಹದಿ ಒದಗಿಸಲು ಇಲ್ಲಿ ಝೀಮನ್‍ನ ಅಗತ್ಯಕ್ಕೆ ತಕ್ಕಂತಹ 250 ಟನ್ ತೂಕದ ಕಾಂಕ್ರಿಟ್ ಪೀಠವನ್ನು ಛಾವಣಿಯಿಂದ ನೇತುಹಾಕಲಾಯಿತು. ಇಲ್ಲಿ ಝೀಮನ್ ಹಲವಾರು ಪ್ರಯೋಗಗಳನ್ನು ಕೈಗೊಂಡನು.  ಈಗ ಇದು ಆ್ಯಮಸ್ಟಾರ್ ಡ್ಯಾಂ ವಿಶ್ವವಿದ್ಯಾಲಯದ ಪೀಟರ್ ಝೀಮನ್ ಪ್ರಯೋಗಾಲಯವೆಂದು ಖ್ಯಾತವಾಗಿದೆ.  ಜಗತ್ತಿನ ಹಲವಾರು ವಿಖ್ಯಾತ ವಿಜ್ಞಾನಿಗಳು ಇಲ್ಲಿ ಭೇಟಿ ನೀಡಿದ, ಪ್ರಯೋಗ ನಡೆಸಿದ ಕೀರ್ತಿ ಈ ಪ್ರಯೋಗಾಲಯಕ್ಕಿದೆ.  ಝೀಮನ್‍ಗೆ ಹಲವಾರು ಬಾರಿ ವಿದೇಶಗಳಿಂದ ಅತ್ಯುನ್ನತ ಹುದ್ದೆಗಳು ಅರಸಿ ಬಂದರೂ ಅವನ್ನು ತಿರಸ್ಕರಿಸಿ, ಈ ಪ್ರಯೋಗಾಲಯದಲ್ಲೇ ಉಳಿದನು.  1935ರಲ್ಲಿ ನಿವೃತ್ತನಾದನು.  ಪೀಟರ್‍ನ ಖ್ಯಾತ ಶಿಷ್ಯರಲ್ಲಿ ಸಿ.ಜೆ. ಬಕ್ಕರ್, ಗೌಡ್‍ಸ್ಮಿತ್ ಉಹ್ಲೆನ್‍ಬೆಕ್ ಪ್ರಮುಖರು.  1892ರಲ್ಲಿ ಪೀಟರ್ ಬರೆದ ವೈಜ್ಞಾನಿಕ ಲೇಖನವೊಂದಕ್ಕೆ ಹಾರ್ಲೇಮನ್‍ಲ್ಲಿರುವ ಡ್ಯಾನಿಷ ವೈಜ್ಞಾನಿಕ  ಸಮಾಜದಿಂದ  ಬಂಗಾರದ ಪದಕ ದಕ್ಕಿದ್ದಿತು. ಝೀಮನ್ ಸ್ಟ್ರಾಸ್‍ಬರ್ಗ್‍ನಲ್ಲಿರುವಾಗ  ದ್ರವಗಳಲ್ಲಿ  ಹಾದು ಹೋಗುವ ವೈದ್ಯುತ್ ಅಲೆಗಳ ಹೀರಿಕೆ ಅಧ್ಯಯನ ನಡೆಸಿದ್ದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 7/3/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate