অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪ್ರೊಫೆಸರ್ ಅದಾ ಇ. ಜೊನಾಟ್

ಪ್ರೊಫೆಸರ್ ಅದಾ ಇ ಜೊನಾಟ್

ಜನನ: 22-06-1939.

70 ನೇ ವರ್ಷಕ್ಕೆ ನೊಬೆಲ್ ಪುರಸ್ಕಾರ ದೊರೆಯಿತು.

ಅದಾ ಇ ಜೊನಾಟ್ ಅವರ ಋಜು :

 

17 ಮಧ್ಯಪೂರ್ವ ದೇಶಗಳ ಪೈಕಿ ಇಸ್ರೇಲ್ ಒಂದು. ಇಸ್ರೇಲ್(Israel) ದೇಶದ 80 ಲಕ್ಷ ಜನಸಂಖ್ಯೆಯ ಪೈಕಿ 60 ಲಕ್ಷ ಜನ ಯಹೂದ್ಯರು. ಉಳಿದ 20 ಲಕ್ಷದಲ್ಲಿ ಅರಬ್ಬರು ಹಾಗೂ ಇತರರು. ಇಸ್ರೇಲಿನ ವಿಸ್ತೀರ್ಣ 22,072 ಚದರ ಕಿಲೋಮೀಟರ್. ಜನಸಾಂದ್ರತೆ ಚದರ ಕಿಲೋಮೀಟರ್ ಗೆ 388. ಈ ದೇಶವು ಲೆಬನಾನ್, ಸೀರಿಯಾ, ಜೋರ್ಡನ್, ಪೆಲೆಸ್ಟೈನ್, ಗಾಝಾ, ಗಲ್ಫ್ ಆಫ್ ಅರಬ್‍ನಿಂದ ಸುತ್ತುವರಿದಿದೆ. ಈ ದೇಶದ ಮಾನವ ಅಭಿವೃದ್ಧಿ ಸೂಚಂಕವು 0.900 ರಷ್ಟು. ಪ್ರಪಂಚದಲ್ಲಿ ಅತಿ ಹೆಚ್ಚು ಯಹುದಿಗಳಿರುವುದು ಈ ದೇಶದಲ್ಲಿಯೇ. ಜೆರುಸ್ಲೇಮ್(Jerusalem) ದ ವಿಸ್ತೀರ್ಣ 125 ಚದರ ಕಿಲೋಮೀಟರು ಹಾಗೂ ಜನಸಂಖ್ಯೆ ಸುಮಾರು 8.5 ಲಕ್ಷದಷ್ಟು.

ಬಾಲ್ಯ ಹಾಗೂ ಶಿಕ್ಷಣ:

“ಬದುಕು ಬಹಳ ಕ್ಲಿಷ್ಟಕರವಾಗಿದೆ ಮತ್ತು ವಿಭಿನ್ನ ಸಮಸ್ಯೆಗಳಿಂದ ಕೂಡಿದೆ (ವಿಜ್ಞಾನ ನಿರ್ಮಿಸುವುದಕ್ಕಿಂತ) ಅದನ್ನು ಎದುರಿಸಲು ಅಪಾರವಾದ ಚಾಣಾಕ್ಷತೆ ಮತ್ತು ಪರಿಶ್ರಮ ಬೇಕು. ನಿಮ್ಮ ಗುರಿ ತಲುಪುವ ವೈಜ್ಞಾನಿಕ ಯೋಜನೆ ಅಥವಾ ಪ್ರಯೋಗ ವಿಫಲವಾದಾಗ ನೀವು ಅನ್ಯಮಾರ್ಗ ಅನುಸರಿಸಬಹುದು. ಆದರೆ ಹಸಿವು ಮಾತ್ರ ಹಸಿವೆಯೇ.” ಎಂದು ಹೇಳುವ ಹಾಗೂ ಹಸಿವೆಯ ನಿಜವಾದ ಅರ್ಥವನ್ನು ತಿಳಿದಿದ್ದ - ಅದಾ ಇ ಜೊನಾಟ್, ನೊಬೆಲ್ ಪುರಸ್ಕಾರ ಪಡೆದ ಪ್ರಥಮ ಇಸ್ರೇಲಿ ಮಹಿಳೆ.

ಅದಾ ಇ ಜೊನಾಟ್ ಹುಟ್ಟಿದ್ದು 22 ಜೂನ್ 1939, ಜೆರುಸ್ಲೇಮ್‍ನಲ್ಲಿ. ಜೆರುಸ್ಲೇಮ್ ಇಸ್ರೇಲಿನ ರಾಜಧಾನಿ. ಅದು ಕರ್ನಾಟಕ ರಾಜ್ಯಕ್ಕಿಂತ ಸುಮಾರು 10 ಪಟ್ಟು ಕಡಿಮೆ ಕ್ಷೇತ್ರ ಇರುವ, ಇಡೀ ದೇಶದ ಜನಸಂಖ್ಯೆ ಬೆಂಗಳೂರು ನಗರಕ್ಕಿಂತಲೂ ಸುಮಾರು ಇಪ್ಪತ್ತು ಸಾವಿರದಷ್ಟು ಕಡಿಮೆ ಇರುವ ಚಿಕ್ಕ ದೇಶ. ಯಹೂದ್ಯರು ಇಲ್ಲಿ 75% ಇದ್ದಾರೆ. ಪ್ರತಿ ಐದು ಜನ ನೊಬೆಲ್ ಪುರಸ್ಕøತರಲ್ಲಿ ಒಬ್ಬ ಯಹೂದ್ಯನಿದ್ದಾನೆ. ನೆನಪಿಡಿ ಪ್ರಪಂಚದ ಒಟ್ಟು ಜನಸಂಖ್ಯೆಯ 0.2% ರಷ್ಟು ಯಹೂದ್ಯರಿದ್ದಾರೆ.  ಯಹೂದ್ಯರಿಗೆ ಪ್ಯಾಲೆಸ್ಟೈನ್‍ನಲ್ಲಿ ನೆಲೆಮಾಡಬೇಕೆಂದು ವಾದಿಸುವ ಅದಾ ಅವರ ಯಹೂದ್ಯ ತಂದೆ-ತಾಯಿ. ಇಸ್ರೇಲ್ ಉದಯವಾಗುವುದಕ್ಕಿಂತ ಮೊದಲು, 1933 ರಲ್ಲಿ ಪ್ಯಾಲೆಸ್ಟೈನ್‍ಗೆ ವಲಸೆ ಹೋದರು. ತಂದೆ ಹಿಲೆಲ್, ತಾಯಿ ಇಸ್ಥರ್ ಲಿಫ್‍ಸ್ಟಿಜ್ ಜೀವನೋಪಾಯಕ್ಕಾಗಿ ಕಿರಾಣಿ ಅಂಗಡಿಯನ್ನಿಟ್ಟುಕೊಂಡಿದ್ದರು. ಆದರೂ ಜೀವನ ಸಾಗಿಸುವುದು ಕಷ್ಟವಾಗಿತ್ತು. ಹಲವಾರು ಕುಟುಂಬಗಳ ಜೊತೆಗೆ ಬಾಡಿಗೆ ಮನೆಯಲ್ಲಿ  ಜೊನಾಟ್‍ಳ ಕುಟುಂಬವೂ ವಾಸವಾಗಿತ್ತು. ಪುಸ್ತಕಗಳನ್ನು ಕೊಳ್ಳಲೂ ಆಗದಂಥ ಬಡತನ.  ಅಂಥ ಬಡತನದಲ್ಲೂ ಅವರಿಗೆ ಓದುವ ಹುಚ್ಚು. ಬಡತನಕ್ಕೆ ಇನ್ನೊಂದು ಹೆಸರು ಅದಾ ಜೊನಾಟ್. ಪುಸ್ತಕಗಳು ಅವರಿಗೆ ಸಂಗಾತಿಯಾಗಿದ್ದವು. ಐದನೆಯ ವರ್ಷಕ್ಕೆನೇ ನಿಸರ್ಗವನ್ನು ಅರಿಯುವ ಬಯಕೆ.  ಅದಾ ಚಿಕ್ಕವಳಿದ್ದಾಗ ಪ್ರಯೋಗಮಾಡುವ ಹುಚ್ಚು. ತನ್ನ ಮನೆಯ ಬಾಲ್ಕನಿಯ ಎತ್ತರ ಅಳೆಯಲು ಟೇಬಲ್ ಮೇಲೆ ಟೇಬಲ್ ಇಟ್ಟು ಅದರ ಮೇಲೆ ಕುರ್ಚಿಯನ್ನಿಟ್ಟರೂ ಬಾಲ್ಕನಿ ಸಿಗಲಿಲ್ಲ. ಮಾಳಿಗೆಯ ಮೇಲೆ ಹತ್ತಿ ಕೆಳಗೆ ಬಿದ್ದು ಕೈಮುರಿದುಕೊಂಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಚಿಕ್ಕವಳಿದ್ದಾಗ ತನ್ನ ನಾಲಿಗೆಯ ತುದಿಯನ್ನು ಮೂಗಿಗೆ ಮುಟ್ಟಿಸಲು ಪ್ರಯತ್ನಿಸುತ್ತಿದ್ದಳಂತೆ. ನಾವು ಒಳ್ಳೆಯ ಶಿಕ್ಷಕರನ್ನು ನೆನೆಯುವಂತೆ, ಪ್ರಾಥಮಿಕ ಶಾಲೆಯ ಶಿಕ್ಷಕ ‘ಝ್ವಿ ವಿನಿಜ್‍ಕಿ’ ಅವರನ್ನು ಅದಾ ಬಹಳ ನೆನೆಯುತ್ತಾರೆ.

ಗಳಿಕೆಗಾಗಿ ಗಣಿತ ಪಾಠ:

ತಂದೆ- ತಾಯಿ ಹೆಚ್ಚು ಕಲಿತವರಲ್ಲ. ಆದರೂ ಮಗಳಿಗೆ ಒಳ್ಳೆಯ ವಿದ್ಯಾಭ್ಯಾಸ ದೊರೆಯಲೆಂದು ಒಳ್ಳೆಯ ಶಾಲೆಗೆ ಸೇರಿಸಿದರು. ದುರ್ದೈವ, ತಂದೆ ಅವರ 42 ವಯಸ್ಸಿಗೆ ಅಂದರೆ ಅದಾ 11 ವರ್ಷದವಳಿದ್ದಾಗ ಅಸುನೀಗಿದರು. ಹೀಗಾಗಿ ಅದಾ ಕುಟುಂಬವು ಟೆಲ್ ಅವಿವ್‍ಗೆ ಬರಬೇಕಾಯಿತು. ಚಿಕ್ಕ ಮಗು ಅದಾ ಮನೆಯ ಎಲ್ಲ ಕೆಲಸಗಳನ್ನು ಮಾಡಿ ಶಾಲೆಗೆ ಹೋಗುತ್ತಿದ್ದಳು.  ತಾಯಿಗೆ ಮಗಳ ಫೀ ಕೊಡುವುದು ಅಸಾಧ್ಯವಿದ್ದಾಗಲೂ ಅದಾ ಟೈಕಾನ್ ಹದಶ್ ಹೈಸ್ಕೂಲ್ ಎಂಬ ಒಳ್ಳೆಯ ಶಾಲೆಗೆ ಸೇರಿದಳು. ಸ್ಕೂಲ್ ಶಿಕ್ಷಣ ಶುಲ್ಕ ಕೊಡಲು ಅದಾ ಬೇರೆ ವಿದ್ಯಾರ್ಥಿಗಳಿಗೆ ಗಣಿತ ಪಾಠ ಹೇಳಿ ಹಣ ಗಳಿಸುತ್ತಿದ್ದರು.

ಅದಾ ಚಿಕ್ಕವಳಿದ್ದಾಗ ಮೇರಿ ಕ್ಯೂರಿ ಆದರ್ಶವಾಗಿದ್ದರು. ವಿಜ್ಞಾನ ವಿಷಯವನ್ನು ಅಭ್ಯಾಸ ಮಾಡಲು ಮೇರಿ ಕ್ಯೂರಿಯೇ ಕಾರಣ.  ಮೇರಿ ಕ್ಯೂರಿ ಅವರ ಜೀವನ ಚರಿತ್ರೆಯನ್ನು ಓದಿದನಂತರ ಕ್ಯೂರಿ, ಅದಾಗೆ ಆದರ್ಶವಾಗಲಿಲ್ಲವಂತೆ. ಕಾರಣ ಅದಾ ಅವರ ಬಡತನದ ಮುಂದೆ ಕ್ಯೂರಿ ಅವರ ಬಡತನ ಏನೂ ಅಲ್ಲವಂತೆ.

ಮೊಮ್ಮೊಗಳು ನೋವಾ ಮತ್ತು  ಚಿಕ್ಕ ಸೋದರಿ ನುರಿತ ಜೊತೆ ಅದಾ

ಅದಾ ಅವರಿಗೆ ಚಿಕ್ಕ ಸೋದರಿ ನುರಿತ ಇದ್ದಾರೆ. ಒಬ್ಬಳೇ ಮಗಳು. ಹಗಿತ್ ಜೊನಾಟ್. ಶೇಬಾ ಮೆಡಿಕಲ್ ಕೇಂದ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನೊವಾ ಎಂಬ ಒಬ್ಬ ಮೊಮ್ಮೊಗಳೂ ಇದ್ದಾಳೆ. ಐದು ವರ್ಷದ ನೋವಾ ತನ್ನ ಕಿಂಡರ್‍ಗಾರ್ಟನ್‍ಗೆ ಬಂದು ರೈಬೊಸೋಮು(Ribosomes)ಗಳ ಬಗ್ಗೆ ಉಪನ್ಯಾಸ ನೀಡಲು ಕೇಳಿದ್ದಳಂತೆ. ಅದಾ ಅವರ ಗುಂಗುರುಗೂದಲು ತಲೆ ತುಂಬಾ ರೈಬೊಸೋಮುಗಳನ್ನು ತುಂಬಿಕೊಂಡಂತೆ ಅನಿಸುತ್ತದೆ ಎಂದು ಇಸ್ರೇಲಿ ಜನ ಆಡಿಕೊಳ್ಳುತ್ತಾರಂತೆ. ತಂದೆ ತಾಯಿಯಂತೆ ಅದಾ ಕೂಡ ಹಮಾಸ್ ಕೈದಿಗಳನ್ನು ಬಿಡುಗಡೆ ಮಾಡಲು ಒತ್ತಾಯಿಸುತ್ತಾರೆ. ಯುವ ಮಹಿಳೆಯರು ವಿಜ್ಞಾನವನ್ನು ಕಲಿಯುವಂತೆ ಪ್ರೆರೇಪಿಸುತ್ತಾರೆ.

ಉನ್ನತ ಶಿಕ್ಷಣ:

ಅದಾ ಜೆರುಸ್ಲೇಮಿನ ಹೆಬ್ರಿವ್ ವಿಶ್ವವಿದ್ಯಾಲಯದಿಂದ 1962 ರಲ್ಲಿ ರಸಾಯನವಿಜ್ಞಾನದಲ್ಲಿ ಪದವಿ, 1964 ರಲ್ಲಿ ಜೀವರಸಾಯನ ವಿಜ್ಞಾನ ಹಾಗೂ 1968 ರಲ್ಲಿ ಎಕ್ಸರೇ ಸ್ಪಟಿಕ ವಿಜ್ಞಾನದಲ್ಲಿ  ಡಾಕ್ಟರೇಟ್ ಪದವಿಯನ್ನು ಪಡೆದರು. 1976 ರ ರಸಾಯನವಿಜ್ಞಾನದ ನೊಬೆಲ್ ಪುರಸ್ಕøತ ವಿಜ್ಞಾನಿ ವಿಲಿಯಮ್ ಎನ್. ಲಿಪ್ಸ್‍ಕೊಮ್ ಜು. ಅವರು ಕೆಲಸ ಮಡಿದ ಪ್ರಯೋಗಾಲಯದಲ್ಲಿ ಅದಾ ಕೆಲಸಮಾಡಿ ಇನ್ನೂ ಹೆಚ್ಚಿನ ಪ್ರಭಾವ ಪಡೆದರು. 1970 ರಲ್ಲಿ ಮೊಟ್ಟಮೊದಲು ಇಸ್ರೇಲಿನಲ್ಲಿ ಪ್ರೊಟೀನ್ ಸ್ಪಟಿಕ ವಿಜ್ಞಾನದ ಪ್ರಯೋಗಾಲಯವನ್ನು ಸ್ಥಾಪಿಸಿದರು. 1979 ರಿಂದ 1984 ರ ವರೆಗೆ ಗುಂಪು ಲೀಡರ್ ಆಗಿ ಬರ್ಲಿನ್‍ದ ಅಣು ಅನುವಂಶಿಕ ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಯಲ್ಲಿ ಕೆಲಸ ಮಾಡಿದರು.  1977 ರಿಂದ 78 ರಲ್ಲಿ ಚಿಕ್ಯಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. 1986 ರಿಂದ 2004 ರ ವರೆಗೆ  ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಯ ಡೆಸಿ ಪ್ರಯೋಗಾಲಯದ ಮುಖ್ಯಸ್ಥರಾಗಿ  ಸೇವೆ ಮಾಡಿದರು.

1970 ರಲ್ಲಿ ದೊಡ್ಡ ಗಾತ್ರದ ಅನಿಯತ ರಚನೆಯ ರೈಬೊಸೋಮುಗಳನ್ನು ಸ್ಪಟಿಕೀಕರಿಸುವ ಕೆಲಸವನ್ನು ಸ್ಪಟಿಕ ವಿಜ್ಞಾನದ ಸಹಾಯದಿಂದ ಮಾಡಿದರು. 1980 ರಲ್ಲಿ ಮೊಟ್ಟಮೊದಲು ರೈಬೊಸೋಮುಗಳ ಸ್ಪಟಿಕ ರೂಪವನ್ನು ಸೃಷ್ಠಿಸಿದರು. ಈ ಪ್ರಯೋಗಕ್ಕೆ ಹೆಚ್ಚು ತಾಪಮಾನ ಹಾಗೂ ಉಪ್ಪು ನೀರಿನಲ್ಲಿ ವಾಸಿಸಿರುವ ಗಟ್ಟಿಮುಟ್ಟಾದ ಬ್ಯಾಕ್ಟಿರಿಯಾವನ್ನು ಆರಿಸಿಕೊಂಡರು.

30 S ರೈಬೊಸೋಮ್‍ದ ಸ್ಪಟಿಕಗಳು

ಅದಾ ಇ ಜೊನಾಟ್ ಸ್ಪಟಿಕ ವಿಜ್ಞಾನಿ. ಶೀತ- ಜೀವ-ಸ್ಪಟಿಕವಿಜ್ಞಾನದಲ್ಲಿ ಇವರಿಗೆ ತುಂಬಾ ಅಭಿರುಚಿ. ರೈಬೋಸೋಮ್ ರಚನೆ ಹಾಗೂ ಕಾರ್ಯ(Structure and function of ribosome) ಬಗ್ಗೆ ಒಳ್ಳೆಯ ಕೆಲಸ ಮಾಡಿದ್ದಾರೆ. 2009 ರಲ್ಲಿ ಭಾರತೀಯ ಸಂಜಾತ ವೆಂಕಟರಮನ್ ರಾಮಕೃಷ್ಣನ್ ಹಾಗೂ ಥಾಮಸ್ ಎ. ಸ್ಟೆಟ್ಜ ಅವರೊಂದಿಗೆ ರಸಾಯನ ವಿಜ್ಞಾನದ ನೊಬೆಲ್ ಪುರಸ್ಕಾರವನ್ನು ಹಂಚಿಕೊಂಡಿದ್ದಾರೆ. ರಸಾಯನ ವಿಜ್ಞಾನದಲ್ಲಿ ನೊಬೆಲ್ ಪುರಸ್ಕಾರ ಪಡೆದ ನಾಲ್ಕನೆಯ ಮಹಿಳೆ ಹಾಗೂ 45 ವರ್ಷಗಳನಂತರ ರಸಾಯನವಿಜ್ಞಾನದಲ್ಲಿ ನೊಬೆಲ್ ಪುರಸ್ಕಾರ ಪಡೆದ ಮೊದಲ ವ್ಯಕ್ತಿ ಹಾಗೂ ನೊಬೆಲ್ ಪುರಸ್ಕಾರ ಪಡೆದ ಇಸ್ರೆಲಿನ  ಒಂಭತ್ತನೆ ವ್ಯಕ್ತಿ ಮತ್ತು ಮದ್ಯಪೂರ್ವ ದೇಶಗಳಲ್ಲಿ ವಿಜ್ಞಾನದಲ್ಲಿ ನೊಬೆಲ್ ಪುರಸ್ಕಾರ ಪಡೆದ ಮೊದಲ ಮಹಿಳೆ ಎಂಬ ಕೀರ್ತಿಗೆ ಭಾಜನರಗಿದ್ದಾರೆ.

ಸ್ಟಾಕ್‍ಹೋಮ್: ರಾಜನಿಂದ ನೊಬೆಲ್ ಪುರಸ್ಕಾರ ಪಡೆಯುತ್ತಿರುವುದು.(2009)

ಸ್ಟಾಕ್‍ಹೋಮ್ನಲ್ಲಿ ನೊಬೆಲ್ ಪುರಸ್ಕಾರ ಪ್ರಕಟಣೆಯಾಗಿ ಕೆಲವು ಗಂಟೆಗಳಲ್ಲಿ ಅದಾ ಇಸ್ರೇಲಿನ 9 ನೇ ಅಧ್ಯಕ್ಷರಾದ ಹಾಗೂ 1994 ರ ಶಾಂತಿ ನೊಬೆಲ್ ಪುರಸ್ಕøತ ‘ಝೀಮಾನ್ ಪೆರ್ಸ್’ ಜೊತೆ ಚರ್ಚೆಯಲ್ಲಿ ತೊಡಗಿದ್ದರು.

ಜೀವಿಗೆ “ಜೀವ” ತುಂಬುವ  ರೈಬೊಸೋಮ್‍ಗಳು.

ಸಂದೇಶವಾಹಕ ಆರ್.ಎನ್.ಎ. ಅನ್ನು ಹಿಡಿದುಕೊಂಡಿರುವ ರೈಬೊಸೋಮ್

ಯಾತಕ್ಕಾಗಿ ನೊಬೆಲ್ ಪುರಸ್ಕಾರ?:

‘ವಂಶವಾಹಿಗಳ (ಡಿ.ಎನ್.ಎ) ಗುಟ್ಟು ರಟ್ಟು ಮಾಡುವ ರೈಬೋಸೋಮ್‍ನ ಕಾರ್ಯ ನಿರ್ವಹಣೆ ಮತ್ತು ಸಂರಚನೆ ಕುರಿತ ಅಧ್ಯಯನಕ್ಕಾಗಿ’  ಅದಾ ಜೊನಾಟ್, ವೆಂಕಟರಮನ್ ರಾಮಕೃಷ್ಣನ್ ಹಾಗೂ ಥಾಮಸ್ ಎ. ಸ್ಟೆಟ್ಜ ಅವರಿಗೆ ನೊಬೆಲ್ ಪುರಸ್ಕಾರ ಲಭಿಸಿದೆ.

ಜೀವಕೋಶ (Cell)ಗಳು ಜೀವಿಗಳ ಮೂಲ ಘಟಕಗಳು. ಜೀವಕೋಶಗಳ ಜೀವದ್ರವ್ಯದಲ್ಲಿ ಕೋಶಕೇಂದ್ರ (Nucleus) ಇರುತ್ತದೆ. ಈ ಕೇಂದ್ರದಲ್ಲಿ ಜೀವಿಯ ಚಟುವಟಿಕೆಗಳನ್ನು ನಿರ್ದೇಶಿಸುವಂತಹ ಡಿ.ಎನ್.ಎ ಇದೆ. ಜೀವಿಯ ಸ್ವರೂಪದಿಂದ ಪ್ರವರ್ತನೆಯವರೆಗೂ ಸಕಲ ಅಂಶಗಳು ಡಿ.ಎನ್.ಎ ನಲ್ಲಿ ತುಂಬಿರುತ್ತವೆ. ಡಿ.ಎನ್.ಎ. ಗೆ ಜೀವ ಇಲ್ಲ. ಜೀವಿಗೆ “ಜೀವ” ತುಂಬಿಸುವುದೇ ರೈಬೊಸೋಮ್‍ಗಳ ಕೆಲಸ.

ರೈಬೊಸೋಮುಗಳ ವ್ಯಾಸ 20-30 ನ್ಯಾನೋ ಮೀಟರ್. ಅಂದರೆ ಅವು ಬರಿಗಣ್ಣಿಗಲ್ಲ ಸೂಕ್ಷ್ಮದರ್ಶಕದಲ್ಲೂ ಸರಿಯಾಗಿ ಕಾಣುವುದಿಲ್ಲ. ಅವುಗಳ ಒಳ-ಹೊರಗನ್ನು ನೋಡಬೇಕಾದರೆ ಇಲೆಕ್ಟ್ರಾನ್ ಸೂಕ್ಷ್ಮದರ್ಶಕದ ಮೊರೆ ಹೋಗಬೇಕು. ರೈಬೊಸೋಮ್‍ಗಳಲ್ಲಿ ಎರಡು ಉಪಘಟಕ(Subunits)ಗಳಿವೆ. ಒಂದು ಚಿಕ್ಕದು. ಇನ್ನೊಂದು ದೊಡ್ಡದು. ರೈಬೊಸೋಮ್‍ಗಳ ಪ್ರಮುಖ ಕಾರ್ಯ, ಪ್ರೊಟೀನ್ ಸಂಶ್ಲೇಷಣೆ. ಚಿಕ್ಕ ಮತ್ತು ದೊಡ್ಡ ಉಪಘಟಕಗಳು ಒಟ್ಟಿಗೆ ಸೇರಿ ಈ ಕೆಲಸ ಮಾಡುತ್ತವೆ. ಹಾಗಾಗಿ ರೈಬೊಸೋಮ್‍ಗಳನ್ನು “ಪ್ರೊಟೀನ್ ಕಾರ್ಖಾನೆ” ಎಂದೂ ಕರೆಯುತ್ತಾರೆ. ವಿವಿಧ ಅಮೈನೋ ಆಮ್ಲಗಳು ನಿರ್ಧಿಷ್ಟ ಕ್ರಮದಲ್ಲಿ ಜೋಡಣೆಯಾಗಿ ಪ್ರೊಟೀನ್ ಬೃಹದಣುಗಳಾಗಿ ಸಂಶ್ಲೇóಣೆಯಾಗುವುದೇ ರೈಬೊಜೋಮ್‍ಗಳಲ್ಲಿ.

ಪ್ರೊಟೀನ್ ಸಂಶ್ಲೇಷಣೆ:

ಜೀನ್ ನಿಮಗೆ ಗೊತ್ತು. ಅದು ಡಿ.ಎನ್.ಎ ಅಣುವಿನ ಒಂದು ಭಾಗ. ಈ ಭಾಗವು ಸಂದೇಶವಾಹಕ ಆರ್.ಎನ್.ಎ.  (m-RNA) ಹಾಗೂ ವರ್ಗಾವಣೆ ಆರ್. ಎನ್.ಎ (t-RNA) ಗಳನ್ನು ಸಂಶ್ಲೇಷಿಸುತ್ತದೆ. ಸಂದೇಶವಾಹಕ ಆರ್.ಎನ್.ಎ., ಡಿ.ಎನ್.ಎ.(ಜೀನ್) ದಿಂದ ಸಂದೇಶವನ್ನು ಹೊತ್ತು ತಂದು ಕೋಶದ್ರವ(Cytoplasm)ಕ್ಕೆ ನುಸುಳುತ್ತದೆ. ಈ ಸಂದೇಶವಾಹಕ ಆರ್.ಎನ್.ಎ. ಅನ್ನು ರೈಬೊಸೋಮ್ ದ ಚಿಕ್ಕ ಘಟಕವು ಹಿಡಿದುಕೊಳ್ಳುತ್ತದೆ. ಅನಂತರ ದೊಡ್ಡ ಘಟಕವು ಬಂದು ಚಿಕ್ಕ ಘಟಕದ ಕೆಳಗೆ ಸೇರುವುದು. ಈಗ ರೈಬೊಸೋಮ್ ದ ಎರಡು ಘಟಕಗಳ ಮಧ್ಯೆ ಸಂದೇಶವಾಹಕ ಆರ್.ಎನ್.ಎ. ನುಸುಳಿದಂತೆ ಕಾಣುತ್ತದೆ. ಕೋಶದ್ರವದಲ್ಲಿರುವ ವರ್ಗಾವಣೆ ಆರ್. ಎನ್.ಎ. ರೈಬೊಸೋಮ್ ಗಳಿಗೆ ಬರುವಾಗ ಕೊಡಾನ್(Codons = ಸಂದೇಶವಾಹಕ ಆರ್.ಎನ್.ಎ. ದ ಮೇಲಿರುವ ತ್ರಿವಳಿ ಸಂಕೇತಗಳು) ಗಳು ನಿರ್ದೇಶಿಸುವ ಯುಕ್ತ ಅಮೈನೋ ಆಮ್ಲಗಳನ್ನು ತಮ್ಮೊಂದಿಗೆ ಹೊತ್ತು ತಂದು ಪೆಪ್ಟೈಡ್ ಬಂಧಗಳ ಮೂಲಕ ಸೇರುತ್ತ ಪಾಲಿಪೆಪ್ಟೈಡ್ ಸರಪಳಿಗಳಾಗುವವು. ಈ ಸರಪಳಿಯೇ ಪ್ರೊಟೀನ್(Protein).

ಪ್ರೊಟೀನ್

ರೈಬೊಜೈಮ್: ಇದು ಆರ್.ಎನ್.ಎ. ಅಣು. ರಾಸಾಯನಿಕ ಕ್ರಿಯೆಯನ್ನು ಕ್ರಿಯಾವರ್ಧಿಸಲು ಅನುಕೂಲ ಒದಗಿಸುತ್ತದೆ. ವಿವಿಧ ರೀತಿಯ ಪ್ರತಿಜೈವಿಕ(Antibiotics)ಗಳು ಬ್ಯಾಕ್ಟಿರಿಯಾದಂತಹ ಸೂಕ್ಷ್ಮ ಜೀವಿಗಳಲ್ಲಿ ರೈಬೊಸೋಮುಗಳ ಕಾರ್ಯವನ್ನು ನಿರೋಧಿಸುವ ಕೆಲಸ ಮಾಡುತ್ತವೆ. ಹೊಸ ತರಹದ ಪ್ರತಿಜೈವಿಕಗಳನ್ನು, ಹೆಚ್ಚಾಗಿ ರೈಬೊಸೋಮುಗಳನ್ನು ಗುರಿಯಾಗಿಟ್ಟುಕೊಂಡೆ ಸಿದ್ಧಪಡಿಸಲಾಗುತ್ತದೆ. ಬ್ಯಾಕ್ಟಿರಿಯಾದಲ್ಲಿಯ ರೈಬೊಸೋಮ್‍ಗಳ ಕಾರ್ಯ ಸ್ಥಗಿತಗೊಂಡರೆ ಬ್ಯಾಕ್ಟಿರಿಯಾ ಬದುಕುಳಿಯಲಾರದು. ಅಂದರೆ ಪ್ರತಿಜೈವಿಕಗಳ ಗುರಿ ರೈಬೊಸೋಮ್‍ಗಳ ನಾಶ. ಕೆಲವು ಸೂಕ್ಷ್ಮ ಜೀವಿಗಳು ಪ್ರತಿಜೈವಿಕಗಳಿಗೆ ಬಗ್ಗುವುದಿಲ್ಲ. ಕೆಲವು ಕಾಯಿಲೆಗಳಿಗೆ ಬಳಸಿದ ಪ್ರತಿಜೈವಿಕಗಳು ಕ್ರಮೇಣ ನಿಷ್ಕ್ರೀಯವಾಗುತ್ತವೆ. ಯಾವುದೇ ರೋಗ ನಿರೋಧಕ ಔಷಧ ಕೊಟ್ಟರೂ ನಿರುಪಯೋಗವಾಗುತ್ತದೆ. ಅದಾ ಜೊನಾಟ್ ಅವರು ಇಪ್ಪತ್ತಕ್ಕೂ ಹೆಚ್ಚು ಪ್ರತಿಜೈವಿಕಗಳನ್ನು ರೈಬೊಸೋಮುಗಳಮೇಲೆ ಪ್ರಯೋಗಿಸಿದರು.

ಅದಾ ಅವರಿಗೆ ದೊರೆತ ಪಾರಿತೋಷಕಗಳು/ಬಹುಮಾನಗಳು:

1)            2000 - ಇರೋಪ್ ನವರಿಗೆ ಕೊಡುವ ಸ್ಪಟಿಕವಿಜ್ಞಾನದ ಮೊದಲ ಪಾರಿತೋಷಕ.

2)            2002- ಇಸ್ರೇಲಿ ಪಾರಿತೋಷಕ. (ರಸಾಯನವಿಜ್ಞಾನ)

3)            2006- ಊಲ್ಫ ಪಾರಿತೋಷಕ. (ರಸಾಯನವಿಜ್ಞಾನ)

4)            2008- ಲಾರಿಯಲ್ –ಯನೆಸ್ಕೊ ಪಾರಿತೋಷಕ(ಮೊಟ್ಟ ಮೊದಲ ಇಸ್ರೇಲಿ ಮಹಿಳೆ)

5)            2008- ಅಲ್ಬರ್ಟ್ ಐನ್‍ಸ್ಟೈನ್ ಪಾರಿತೋಷಕ. (ಕ್ರಯೋ-ಬಯೋ-ಕ್ರಿಸ್ಟಲೋಗ್ರಾಫಿ)

6)            2009- ನೊಬೆಲ್ ಪುರಸ್ಕಾರ.

7)            2009- ಹಾರ್ವೆ ಪಾರಿತೋಷಕ, ಕಿಲ್ಬಿ ಪಾರಿತೋಷಕ, ಪಾಲ್ ಕಾರರ್ ಬಂಗಾರದ ಪದಕ ಇತ್ಯಾದಿ.

ಅದಾ ಅವರ  ಉಕ್ತಿಗಳು:

1)            ಒಟ್ಟು ಜನಸಂಖ್ಯೆಯ ಅರ್ಧ ಭಾಗ ಮಹಿಳೆಯರು. ವಿಜ್ಞಾನ ಕಲಿಯಬೇಡಿ ಎಂದು ಅವರಿಗೆ ಹೇಳಿದರೆ ಜನಸಂಖ್ಯೆಯ ಅರ್ಧದಷ್ಟು ಮಾನವ ಬುದ್ಧಿಶಕ್ತಿಯನ್ನು ಕಳೆದುಕೊಂಡಂತೆ. ಅವರಿಗೆ ಅವಕಾಶಗಳು ಸಿಕ್ಕರೆ ಅಗಾಧವಾದವುಗಳನ್ನು ಮಾಡುತ್ತಾರೆ.

2)            ಮನೆ ಹಾಗೂ ಕಚೇರಿಗಳಲ್ಲಿ ಕೆಲಸಮಾಡುವ ಮಹಿಳೆಯರು ಆನಂದವಾಗಿದ್ದರೆ ಎಲ್ಲರೂ ಸುಖವಾಗಿರುತ್ತಾರೆ.

3)            ಪ್ರಪಂಚದಲ್ಲಿ ವಿಜ್ಞಾನವನ್ನು ಮಾಡುವುದಕ್ಕಿಂತ ಬದುಕುವುದು ಬಹಳ ಕ್ಲಿಷ್ಟಕರ ಹಾಗೂ ಅವಶ್ಯಕ.

4)            ನಾನು ಮಹಿಳೆ ಅಥವಾ ವಿಜ್ಞಾನ ಓದಿದ್ದೇನೆ ಎಂದು ನನಗೆಂದೂ ಅನ್ನಿಸಲೇ ಇಲ್ಲ. ನಾನು ಪುಸ್ತಕ ಕೊಳ್ಳಲೂ ಅಸಮರ್ಥವಾದ ಬಡ ಕುಟುಂಬದಲ್ಲಿ ಹುಟ್ಟಿದ ಮಗು.

5)            ದೀರ್ಘವಾದ ಹಾಗೂ ಬಗೆಬಗೆಯ ಪ್ರಯಾಣವು ನಮ್ಮನ್ನೆಲ್ಲ ಇಲ್ಲಿ ಒಗ್ಗೂಡಿಸಿದೆ.© 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate