ಅಂತರಜಾಲದ (ಇಂಟರ್‌ನೆಟ್) ವೀಕ್ಷಣೆಗೆ ಬಳಸುವ ತಂತ್ರಾಂಶಕ್ಕೆ (ಸಾಫ್ಟ್‌ವೇರ್) ಬ್ರೌಸರ್ ಎನ್ನುತ್ತಾರೆ. 90% ಕ್ಕೂ ಹೆಚ್ಚಿನ ಅಂತರಜಾಲ ವೀಕ್ಷಕರು ಬಳಸುವುದು ಮೈಕ್ರೋಸಾಫ್ಟ್ ಕಂಪೆನಿಯ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಎಂಬ ಬ್ರೌಸರ್ ತಂತ್ರಾಂಶವನ್ನು. ಇತ್ತೀಚೆಗೆ ಇದರ ಆವೃತ್ತಿ 7 ಬಿಡುಗಡೆಯಾಗಿದೆ.
ಟ್ಯಾಬ್‌ಗಳ ಬಳಕೆಯಿಂದಾಗಿ ಸುಧಾರಿತ ಸಂಚಾರ, ಸಾಧನಪಟ್ಟಿಯಿಂದಲೇ ಅಂತರಜಾಲ ಶೋಧ, ಸುಧಾರಿತ ಮುದ್ರಣ, ಆರ್‌ಎಸ್‌ಎಸ್ ಓದುಗ, ಇತ್ಯಾದಿ ಅತ್ಯಾಧುನಿಕ ಸೌಕರ್ಯಗಳು ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನ ಆವೃತ್ತಿ 7 ರಲ್ಲಿ ಅಡಕವಾಗಿವೆ. ಈ ಎಲ್ಲ ವೈಶಿಷ್ಟ್ಯಗಳ ಕಡೆ ಪಕ್ಷಿನೋಟ ನೀಡುವುದು ಈ ಲೇಖನದ ಉದ್ದೇಶ.
ಯೂಸರ್ ಇಂಟರ್‌ಫೇಸ್‌ನ್ನು ಹೊಸದಾಗಿ ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ನೀವು ಏನನ್ನು ನೋಡಬೇಕಾಗಿದೆಯೋ ಅದಕ್ಕೆ ಹೆಚ್ಚು ಜಾಗ ದೊರೆಯುತ್ತದೆ ಮತ್ತು ಯಾವುದಕ್ಕೆ ಅಗತ್ಯವಿಲ್ಲವೋ ಅದಕ್ಕೆ ಕಡಿಮೆ ಜಾಗ ನೀಡಲಾಗಿದೆ. ಮುದ್ರಿಸುವಾಗ ನೀವು ವೀಕ್ಷಿಸುತ್ತಿರುವ ಜಾಲತಾಣವು ಮುದ್ರಣಗೊಳ್ಳುವ ಪುಟದ ಗಾತ್ರಕ್ಕೆ ತಂತಾನೆ ಹಿಗ್ಗುವುದು ಅಥವಾ ಕುಗ್ಗುವುದು. ಬೇಕಾದ ಪಠ್ಯವನ್ನು ಮಾತ್ರವೇ ಮುದ್ರಿಸುವ ಸೌಲಭ್ಯವೂ ಇದೆ.
ಸಾಧನಪಟ್ಟಿಯಲ್ಲಿರುವ ಪಠ್ಯಚೌಕದೊಳಗೆ ಹುಡುಕಬೇಕಾಗಿರುವ ಪಠ್ಯವನ್ನು ನಮೂದಿಸುವ ಮೂಲಕ ಅಂತರಜಾಲಶೋಧವನ್ನು ಸುಲಭವಾಗಿ ನಡೆಸಬಹುದು. ಈ ಹಡುಕುವಿಕೆಗೆ ಬಳಸುವ ಜಾಲಶೋಧಕ ಯಾವುದು ಎಂಬುದನ್ನು ಪೂರ್ವನಿಯೋಜಿತಗೊಳಿಸಿಟ್ಟುಕೊಳ್ಳಬಹುದು.
ವೀಕ್ಷಿಸುತ್ತಿರುವ ಜಾಲತಾಣದಲ್ಲಿ ಆರ್‌ಎಸ್‌ಎಸ್ ಫೀಡ್ ಇದ್ದಲ್ಲಿ ಅದು ತಂತಾನೆ ಸಾಧನಪಟ್ಟಿಯಲ್ಲಿರುವ ಆರ್‌ಎಸ್ಎಸ್ ಚಿತ್ರಿಕೆಯನ್ನು (ಐಕಾನ್) ಪ್ರಜ್ವಲಗೊಳಿಸುತ್ತದೆ. ಇದನ್ನು ಕ್ಲಿಕ್ ಮಾಡಿ ಆಯ್ಕೆ ಮಾಡುವ ಮೂಲಕ ಈ ಆರ್‌ಎಸ್ಎಸ್ ಫೀಡ್‌ಗೆ ನೀವು ಚಂದಾದಾರರಾಗಬಹುದು. ಈ ಆರ್‌ಎಸ್‌ಎಸ್ ಎಂಬುದು ಒಂದು ವಿಶಿಷ್ಟ ಸೌಲಭ್ಯ. ಯಾವುದಾದರು ಸುದ್ದಿ ತಾಣ ಅಥವಾ ಬ್ಲಾಗಿನ ಆರ್‌ಎಸ್ಎಸ್ ಫೀಡ್‌ಗೆ ನೀವು ಚಂದಾದಾರರಾಗಿದ್ದೀರೆಂದುಕೊಳ್ಳಿ. ಆ ಸುದ್ದಿ ತಾಣ ಅಥವಾ ಬ್ಲಾಗ್ ನವೀಕರಿಸಲ್ಪಟ್ಟಾಗ ಈ ಆರ್‌ಎಸ್ಎಸ್ ಮೂಲಕ ಅದು ತಂತಾನೆ ನಿಮ್ಮ ಬ್ರೌಸರ್‌ನಲ್ಲಿ ದೊರೆಯುತ್ತದೆ.
ಇಂಟರ್‌ನೆಟ್ ಎಕ್ಸ್‌ಪ್ಲೋರರ್ 7 ರ ಇನ್ನೊಂದು ಪ್ರಮುಖ ಗುಣವೈಶಿಷ್ಟ್ಯವೆಂದರೆ ಸುಧಾರಿತ ಸುರಕ್ಷೆ ಹಾಗೂ ಫಿಶಿಂಗ್ ಸುರಕ್ಷೆ. ಇತ್ತೀಚೆಗೆ ಈ ಫಿಶಿಂಗ್ ಹಾವಳಿ ಅತಿಯಾಗುತ್ತಿದೆ. ಅಂತರಜಾಲದ ಮೂಲಕ ಬ್ಯಾಂಕಿಂಗ್, ವ್ಯಾಪಾರ ಮತ್ತು ಇತರೆ ಹಣಕಾಸು ವ್ಯವಹಾರ ಮಾಡುವವರ ಗುಪ್ತಪದವನ್ನು ಕದಿಯುವ ವಿಧಾನಕ್ಕೆ ಫಿಶಿಂಗ್ ಎಂದು ಹೆಸರು. ಇಂಟರ್‌ನೆಟ್ ಎಕ್ಸ್‌ಪ್ಲೋರರ್ 7 ಇಂತಹ ಫಿಶಿಂಗ್ ತಾಣಗಳನ್ನು ಪತ್ತೆಹಚ್ಚಿ ಅವುಗಳ ಯಾದಿ ಸಿದ್ಧಪಡಿಡಸಿಕೊಂಡಿರುತ್ತದೆ. ಅಷ್ಟು ಮಾತ್ರವಲ್ಲ, ಸಂಶಯಾಸ್ಪದ ತಾಣವನ್ನು ತಾನಾಗಿಯೇ ಇದು ಮಾರ್ಕ್ ಮಾಡಿ ತೋರಿಸುತ್ತದೆ. ಫಿಶಿಂಗ್ ತಾಣವನ್ನು ನೀವು ವೀಕ್ಷಿಸಹೊರಟರೆ ಇದು ನಿಮ್ಮನ್ನು ಎಚ್ಚರಿಸುತ್ತದೆ ಮಾತ್ರವಲ್ಲ ನೀವು ಖಂಡಿತವಾಗಿ ಅನುಮತಿಸುವ ತನಕ ಆ ತಾಣವನ್ನು ವೀಕ್ಷಿಸಲು ನಿಮಗೆ ಅನುವು ಮಾಡುವುದಿಲ್ಲ.
ನಿಮ್ಮ ಅನುಮತಿಯಿಲ್ಲದೆ ಯಾವುದೇ ತಂತ್ರಾಂಶವನ್ನು ನಿಮ್ಮ ಗಣಕದಲ್ಲಿ ಅನುಸ್ಥಾಪಿಸಲು ಇಂಟರ್‌ನೆಟ್ ಎಕ್ಸ್‌ಪ್ಲೋರರ್ 7 ಬಿಡುವುದಿಲ್ಲ. ಇದರಿಂದಾಗಿ ಕೆಲವು ತಾಣಗಳಲ್ಲಿರುವ ಪೋಕರಿ ತಂತ್ರಾಂಶ ಅಥವಾ ವೈರಸ್ ನಿಮ್ಮ ಗಣಕದೊಳಗೆ ನುಸುಳದಂತೆ ಇದು ನೋಡಿಕೊಳ್ಳುತ್ತದೆ.
ಮೂಲ : ಭಾಷಾಇಂಡಿಯ
ಕೊನೆಯ ಮಾರ್ಪಾಟು : 11/14/2019