অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಧ್ವನ್ಯಾತ್ಮಕ ಕೀಲಿಮಣೆ

ಧ್ವನ್ಯಾತ್ಮಕ ಕೀಲಿಮಣೆ

ಕೇವಲ 26 ಅಕ್ಷರಗಳು ಇರುವ ಇಂಗ್ಲಿಷ್ನ ಪಠ್ಯವನ್ನು ಕಂಪ್ಯೂಟರ್ಗೆ ಊಡಿಸಲು ಕ್ವರ್ಟೆ (QWERTY) ಕೀಲಿಮಣೆ ಬಹಳ ಜನಪ್ರಿಯವಾಗಿದ್ದು, 26 ಅಕ್ಷರಗಳಿಗಿಂತ ಹೆಚ್ಚು ಮೂಲ ಅಕ್ಷರಗಳು, ಅಲ್ಲದೆ, ಒತ್ತಕ್ಷರಗಳು ಮತ್ತು ಗುಣಿತಾಕ್ಷರಗಳಿರುವ ಭಾರತೀಯ ಭಾಷೆಗಳನ್ನೂ ಸಹ ಕಂಪ್ಯೂಟರ್‌ಗೆ ಊಡಿಸುವಲ್ಲಿ ಇದೇ ಕೀಲಿಮಣೆಯು ಬಳಕೆಯಲ್ಲಿರುವುದು ಆಶ್ಚರ್ಯದ ವಿಷಯವೇನಲ್ಲ. ‘ಶಿಫ್ಟ್‌,’ ಕೀಲಿಯನ್ನು ಸಹಿತ ‘ಕಂಟ್ರೋಲ್’ ಮತ್ತು ‘ಆಲ್ಟ್’ ಕೀಲಿಗಳನ್ನು ಸಹ ಸಂಯೋಜನಾ ಕೀಲಿಗಳಾಗಿ (ಕಾಂಬಿನೇಷನ್ ಕೀ) ಬಳಸುವ ಮೂಲಕ 52ಕ್ಕೂ ಹೆಚ್ಚಿನ ಸಾಧ್ಯತೆಗಳನ್ನು ಸೃಜಿಸಿ ಭಾರತೀಯ ಭಾಷಾ ಲಿಪಿಯ ಪಠ್ಯವನ್ನು ಬೆರಳಚ್ಚಿಸುವ ವಿವಿಧ ವಿನ್ಯಾಸಗಳನ್ನು ರೂಪಿಸಲಾಗಿದೆ. ಅವುಗಳಲ್ಲಿ ಹೆಚ್ಚು ಬಳಕೆಯಲ್ಲಿರುವ ಕೆಲವು ಪ್ರಮುಖ ವಿನ್ಯಾಸಗಳೆಂದರೆ, ಮೊದಲಿಗೆ ಬಂದ ಬೆರಳಚ್ಚು ಯಂತ್ರದ ವಿನ್ಯಾಸ, ನಂತರದ ಟ್ರಾನ್ಸ್‌ಲಿಟರೇಷನ್ ವಿನ್ಯಾಸ, ತದನಂತರದ ಫೊನೋಟಿಕ್ ಅಥವಾ ಧ್ವನ್ಯಾತ್ಮಕ ವಿನ್ಯಾಸ ಹಾಗೂ ಇತ್ತೀಚಿನ ಇನ್‌ಸ್ಕ್ರಿಪ್ಟ್ ವಿನ್ಯಾಸ.

ಬಳಕೆದಾರನ ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ, ಇಂಗ್ಲಿಷ್‌ ಕೀಲಿಯ ಸ್ಥಾನದಲ್ಲಿಯೇ ಇರುವ ಭಾರತೀಯ ಭಾಷೆಯ ಮೂಲ ಅಕ್ಷರದ ಕೀಲಿಗಳನ್ನೇ ಬಳಸಿ ತರ್ಕಬದ್ಧವಾಗಿ ಭಾರತೀಯ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಧ್ವನ್ಯಾತ್ಮಕ ಕೀಲಿಮಣೆ ವಿನ್ಯಾಸ. ಉಚ್ಛಾರಣಾ ಧ್ವನಿಯನ್ನು ಆಧರಿಸಿ ಭಾರತೀಯ ಭಾಷೆಗಳ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣದಿಂದಾಗಿ ಇದಕ್ಕೆ ಫೊನಟಿಕ್ ಅಥವಾ ಧ್ಯನ್ಯಾತ್ಮಕ ವಿನ್ಯಾಸ ಎಂಬ ಹೆಸರು ಬಂದಿದೆ. ವೇಗದ ಇಂಗ್ಲಿಷ್‌ ಬೆರಳಚ್ಚು ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಬೆರಳಚ್ಚು ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ತರ್ಕಬದ್ಧವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ಶ್ರೀ ಕೆ.ಪಿ ರಾವ್‌ರವರು ಭಾರತೀಯ ಭಾಷಾ ಪಠ್ಯಗಳನ್ನು ಕಂಪ್ಯೂಟರ್‌ನಲ್ಲಿ ಮೂಡಿಸಲು ಹಲವಾರು ಖಾಸಗಿ ಕಂಪನಿಗಳು ನೀಡಿರುವ ಲಿಪಿತಂತ್ರಾಂಶಗಳಲ್ಲಿ ಈ ವಿನ್ಯಾಸವೇ ‘ಕೆ.ಪಿ ರಾವ್ ಲೇಔಟ್’ ಎಂಬ ಹೆಸರಿನಲ್ಲಿ ಅತ್ಯಂತ ಜನಪ್ರಿಯವಾಗಿದೆ. ಇದರ ಪರಿXಷ್ಕೃತ ವಿನ್ಯಾಸವನ್ನು ಕರ್ನಾಟಕ ರಾಜ್ಯ ಸರಕಾರವು ಕನ್ನಡದ ಅಧಿಕೃತ ಕೀಲಿಮಣೆ ಎಂದು ಅಂಗೀಕರಿಸಿದೆ.

ಇಂಗ್ಲಿಷ್ ಕೀಲಿಮಣೆ ವಿನ್ಯಾಸದ ಮೇಲೆ ಭಾರತೀಯ ಭಾಷೆಯ ವಿನ್ಯಾಸವನ್ನು ಕಸಿ ಮಾಡಿ ಬಳಸುವುದರಿಂದ ಇತರೆ ಅಗತ್ಯವಾದ ಚಿಹ್ನೆಗಳೂ ಭಾರತೀಯ ಭಾಷೆಯ ಬಳಕೆಗೆ ಸಿಗುತ್ತವೆ. ಇದರಿಂದಾಗಿ ಗಣಿತ ಚಿಹ್ನೆಗಳ ಬಳಕೆಗಾಗಿ ಭಾರತೀಯ ಭಾಷೆಯ ಬೆರಳಚ್ಚು ಸ್ಥಿತಿಯಿಂದ (ಇಂಡಿಯನ್ ಲ್ಯಾಂಗ್ವೇಜ್ ಮೋಡ್) ಇಂಗ್ಲಿಷ್ ಬೆರಳಚ್ಚು ಸ್ಥಿತಿಗೆ (ಇಂಗ್ಲಿಷ್ ಮೋಡ್) ಹೊರಳುವುದು ಮತ್ತು ಇದಕ್ಕಾಗಿ ಫಾಂಟುಗಳ ಹೆಸರನ್ನು ಬದಲಾಯಿಸಿಕೊಳ್ಳುವುದು ಈ ರೀತಿಯ ಕಸರತ್ತುಗಳ ಅಗತ್ಯವಿರುವುದಿಲ್ಲ.

ಇಂಗ್ಲಿಷ್ ಅಂಕಿಗಳೆಂದು ಕರೆಯಲಾಗುವ ಇಂಡೋ-ಅರೆಬಿಕ್ ಅಂಕಿಗಳಿಗೆ ಸಮಾನಾಂತರವಾಗಿ ಭಾರತೀಯ ಭಾಷೆಗಳ ಅಂಕಿಗಳು ನಿಗದಿಯಾಗಿವೆ. ಆದ್ದರಿಂದ ಈ ಕೀಲಿಮಣೆ ವಿನ್ಯಾಸವು ಇತರ ಎಲ್ಲಾ ಹಳೆಯ ವಿನ್ಯಾಸಗಳಿಗಿಂತ ಅತ್ಯುತ್ತಮವಾಗಿದೆ. ಧ್ವನಿಶಾಸ್ತ್ರೀಯವಾಗಿಯೂ ಸಹ ಸಮರ್ಪಕವಾಗಿರುವ ಈ ವಿನ್ಯಾಸವು ಹೊಸದಾಗಿ ಕಂಪ್ಯೂಟರ್ ಬೆರಳಚ್ಚು ಕಲಿಯುವವರಿಗೆ ಸರಳವಾಗಿದೆ ಮತ್ತು ಕಲಿಕೆ ಹಾಗೂ ಬಳಕೆ ಎರಡೂ ಸಹ ಸುಲಭವಾಗುತ್ತದೆ. ಈ ವಿನ್ಯಾಸದಲ್ಲಿ ಒಂದು ಇಂಗ್ಲಿಷ್ ಕೀಲಿಸ್ಥಾನದಲ್ಲಿ ಭಾರತೀಯ ಭಾಷೆಯ ಎರಡು ಅಕ್ಷರಗಳು ನಿಗದಿಯಾಗಿದೆ. ಹಾಗೆ ನಿಗದಿಯಾದ ಅಕ್ಷರಗಳು ವ್ಯಂಜನಗಳಾದರೆ ಅವು ಅಲ್ಪಪ್ರಾಣ ಮತ್ತು ಮಹಾಪ್ರಾಣಗಳಾಗಿರುತ್ತವೆ ಹಾಗೂ ಸ್ವರಗಳಾದರೆ ಅವು ಹ್ರಸ್ವ ಸ್ವರಗಳು ಮತ್ತು ದೀರ್ಘ ಸ್ವರಗಳಾಗಿವೆ. ಸಂಬಂಧಿಸಿದ ಇಂಗ್ಲಿಷ್ ಕೀಲಿಯನ್ನು ಸುಮ್ಮನೆ ಒಮ್ಮೆ ಒತ್ತಿದರೆ ಕೆಳಗಿನ ಅಕ್ಷರವೂ, ಅದೇ ಕೀಲಿಯನ್ನು ಶಿಫ್ಟ್ ಹಿಡಿದುಕೊಂಡು ಒತ್ತಿದರೆ ಮೇಲಿನ ಅಕ್ಷರವು ಮೂಡುತ್ತದೆ ಎಂಬುದನ್ನು ಎಲ್ಲಾ 26 ಕೀಲಿಗಳು ಸೂಚಿಸುತ್ತವೆ.

ಇಲ್ಲಿ ಗುಣಿತಾಕ್ಷರಗಳು ಮತ್ತು ಒತ್ತಕ್ಷರಗಳಗೆ ಪ್ರತ್ಯೇಕವಾಗಿ ಕೀಲಿಗಳಿಲ್ಲ. ಇರುವ 26 ಕೀಲಿಗಳನ್ನೇ ಬಳಸಿ ಭಾಷಾ ಲಿಪಿಯನ್ನು ಉಚ್ಛರಿಸುವ ಕ್ರಮವಲ್ಲಿ ಬೆರಳಚ್ಚು ಮಾಡಿದರೆ ಎಲ್ಲಾ ಸಂಯುಕ್ತಾಕ್ಷರಗಳು, ಒತ್ತಕ್ಷರಗಳು ಎಲ್ಲವನ್ನೂ ಮೂಡಿಸಬಹುದು. k ಒತ್ತಿದರೆ ಕ ಬರುವಂತೆ, m ಒತ್ತಿದರೆ ಮ ಬರುವಂತೆ ಅಕ್ಷರಸ್ಥಾನ ನಿಗದಿಪಡಿಸಲಾಗಿದೆ. ಹಾಗೆಯೇ, ಸ್ವರಗಳೂ ಸಹ, a ಒತ್ತಿದರೆ ಅ ಬರುವಂತೆ, i ಒತ್ತಿದರೆ ಇ ಬರುವಂತೆ ಹೀಗೆ ಇದೇ ರೀತಿಯಲ್ಲಿ ಇಂಗ್ಲಿಷ್ ಕೀಲಿಗಳ ಸ್ಥಾನದಲ್ಲಿ ಭಾರತೀಯ ಭಾಷೆಯ ಅಕ್ಷರಗಳನ್ನು ನಿಗದಿಸಲಾಗಿದೆ. ಅವೇ ಇಂಗ್ಲಿಷ್ ಕೀಲಿಗಳನ್ನು ಶಿಫ್ಟ್ ಹಿಡಿದುಕೊಂಡು ಒತ್ತಿದರೆ ಅದಕ್ಕೆ ಅನುಗುಣವಾಗಿ ವ್ಯಂಜನ ಕೀಲಿಗಳಾದರೆ ಮಹಾಪ್ರಾಣಗಳು, ಸ್ವರಗಳ ಕೀಲಿಗಳಾದರೆ ದೀರ್ಘ ಸ್ವರಗಳು ಮೂಡುತ್ತದೆ. ಆದುದರಿಂದ, ಈ ವಿನ್ಯಾಸದಲ್ಲಿ ಭಾರತೀಯ ಭಾಷೆಯ ಅಕ್ಷರಗಳ ಸ್ಥಾನಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಬಹುದು.

ಗುಣಿತಾಕ್ಷರಗಳನ್ನು ಮೂಡಿಸುವ ಕ್ರಮ: ಇಂಗ್ಲಿಷ್ ಕೀಲಿಮಣೆಯ k ಅನ್ನು ಒತ್ತಿದರೆ ಭಾರತೀಯ ಭಾಷೆಯ `ಕ' ಮೂಡುತ್ತದೆ, k ಮತ್ತು a ಅನ್ನು ಕ್ರಮವಾಗಿ ಬೆರಳಚ್ಚಿಸಿದರೆ `ಕಾ' ಮೂಡುತ್ತದೆ, k ಮತ್ತು i ಒತ್ತಿದರೆ `ಕಿ" ಮೂಡುತ್ತದೆ. ಇದೇ ಕ್ರಮವನ್ನು ಎಲ್ಲಾ ವ್ಯಂಜನಗಳಿಗೆ ಅನ್ವಯಿಸಿದರೆ `ಕಾಗುಣಿತ' ಅಂದರೆ ಗುಣಿತಾಕ್ಷರಗಳು ಮೂಡುತ್ತವೆ.

ಒತ್ತಕ್ಷರಗಳನ್ನು ಮೂಡಿಸುವ ಕ್ರಮ : ಒಂದು ವ್ಯಂಜನ ಮತ್ತೊಂದರೆ ಜೊತೆ ಸೇರಿ ಒತ್ತಕ್ಷರವಾಗುತ್ತದೆ. ಆದರೆ, ಒಂದೇ ವ್ಯತ್ಯಾಸ ಎಂದರೆ ಎರಡು ವ್ಯಂಜನ ಸೇರಿಸಲು ‘ಲಿಂಕ್ ಕೀಲಿ’ ಎಂದು ಕರೆಯಲಾಗುವ ‘f’ ಕೀಲಿಯನ್ನು ಬಳಸಬೇಕು. ಮೊದಲಿಗೆ k ಅನ್ನು ಒತ್ತಿ, ನಂತರ f ಅನ್ನು ಒತ್ತಿದರೆ `ಕ್' ಮೂಡುತ್ತದೆ, ಸಂಯುಕ್ತಾಕ್ಷರ ಪಡೆಯಲು ಒಂದು ವ್ಯಂಜನವನ್ನು ಒತ್ತಿದ ನಂತರ (ಅರ್ಧಾಕ್ಷರ ಚಿಹ್ನೆಯನ್ನು ಮೂಡಿಸಲು) ಲಿಂಕ್ ಕೀಲಿಯನ್ನು ಒತ್ತಬೇಕು. ಆನಂತರ ಮತ್ತೊಂದು ವ್ಯಂಜನವನ್ನು ಒತ್ತಿದರೆ ಎಲ್ಲವೂ ಕೂಡಿ ಸಂಯುಕ್ತಾಕ್ಷರವಾಗುತ್ತದೆ.

ಧ್ವನ್ಯಾತ್ಮಕ ಕೀಲಿಮಣೆ ವಿನ್ಯಾಸ- ಕನ್ನಡ ಮೂಡಲು ಸಮಾನಂತರ ಇಂಗ್ಲಿಷ್ ಕೀಲಿಗಳ ಬೆರಳಚ್ಚು ಕ್ರಮದ ಉದಾಹರಣೆ:

ಕನ್ನಡದ ಸಂಯುಕ್ತಾಕ್ಷರಗಳು:
ಕ ಕಾ ಕಿ ಕೀ ಕು ಕೂ ಕೃ ಕೆ ಕೇ ಕೈ ಕೊ ಕೋ ಕೌ ಕಂ ಕಃ
k kA ki kI ku kU kR ke kE kY ko kO kV kM kH

ಕನ್ನಡದ ಗುಣಿತಾಕ್ಷರಗಳ ಪದಗಳು :
ಅಕ್ಕ= akfka, ಸತ್ಯ = stfy, ಸ್ತ್ರೀ = sftfrfI, ಸಂಸ್ಕೃತಿ = sMsfkRti, ರಾಷ್ಟ್ರೀಯ= rAxfqfrIy, ಸ್ವಾತಂತ್ರ್ಯೋತ್ಸವ = sfvAtMtfrfyOtfsv.

ಸಂಯುಕ್ತಾಕ್ಷರಗಳನ್ನು ಬೆರಳಚ್ಚಿಸುವಾಗ ಉಚ್ಚಾರಣಾ ಕ್ರಮದಲ್ಲಿಯೇ ಬೆರಳಚ್ಚು ಕ್ರಮ ಇರಬೇಕು. ಎಲ್ಲ ರೀತಿಯ ಒತ್ತಕ್ಷರಗಳನ್ನು ಬೆರಳಚ್ಚಿಸಿದ ನಂತರವೇ ಕೊನೆಯಲ್ಲಿ ಸ್ವರ ಕೀಲಿಯನ್ನು ಬೆರಳಚ್ಚಿಸಬೇಕು. ಒಂದಕ್ಕಿಂತ ಹೆಚ್ಚಿನ ಒತ್ತಕ್ಷರವನ್ನು ಮೂಡಿಸಬೇಕಾದರೆ ಲಿಂಕ್ ಕೀಲಿಯನ್ನು ಒತ್ತಿದ ನಂತರದ ಅದೇ ತರ್ಕವನ್ನು ಪುನರಾವರ್ತಿಸಬೇಕು.

ಮೂಲ : ಭಾಷಾಇಂಡಿಯ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate