ಮೈಕ್ರೋಸಾಫ್ಟ್ ವರ್ಡ್ ತಂತ್ರಾಂಶದಲ್ಲಿ (ಸಾಫ್ಟ್ವೇರ್) ಇಂಗ್ಲೀಷ್ ಭಾಷೆಯ ಪದಪರೀಕ್ಷೆ ಅರ್ಥಾತ್ spell-check ಇರುವುದು ಬಹುಮಂದಿಗೆ ತಿಳಿದಿದೆ. ಇಂಗ್ಲೀಷ್ ಮಾತ್ರವಲ್ಲ, ಕನ್ನಡದ ಪದಪರೀಕ್ಷೆಯೂ ಇದೇ ತಂತ್ರಾಂಶದಲ್ಲಿ ಅಡಕವಾಗಿದೆ. ಮೈಕ್ರೊಸಾಫ್ಟ್ ವರ್ಡ್ 2003ನ್ನು ಬಳಸಿ ಕನ್ನಡದ ಪದಪರೀಕ್ಷೆ ಮಾಡುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಒಂದು ಲೇಖನವನ್ನು ತಯಾರಿಸುವಾಗ ನುಸುಳುವ ಬೆರಳಚ್ಚಿನ ತಪ್ಪುಗಳನ್ನು ಸರಿಪಡಿಸುವಲ್ಲಿ ಪದಪರೀಕ್ಷೆ ಸೌಲಭ್ಯವು ಸಹಾಯಕಾರಿಯಾಗಿವೆ. ಈ ಸೌಲಭ್ಯವು ಪರಿಪೂರ್ಣವಲ್ಲ. ಯಾವ ಸಂದರ್ಭದಲ್ಲಿ ಯಾವ ಪದ ಸೂಕ್ತ ಎಂಬುದು ಗಣಕಕ್ಕೆ (ಕಂಪ್ಯೂಟರಿಗೆ) ತಿಳಿಯುವುದಿಲ್ಲ. ಬೆರಳಚ್ಚು ಮಾಡಿದ ಪದವು ತನ್ನ ಸಂಗ್ರಹದಲ್ಲಿಲ್ಲದಿದ್ದಲ್ಲಿ ಅದು ತಪ್ಪು ಎಂದಷ್ಟೇ ಅದು ಹೇಳಬಲ್ಲುದು. ಜೊತೆಗೆ ಬದಲಾವಣೆಯನ್ನೂ ಸೂಚಿಸಬಲ್ಲುದು. ಲೇಖಕನು ತನ್ನ ವಿವೇಚನಾ ಶಕ್ತಿಯನ್ನು ಬಳಸಿ ಅದು ಸೂಚಿಸಿದ ಪದ ಸರಿಹೊಂದುವಂತಿದ್ದಲ್ಲಿ ಅದನ್ನು ಬಳಸಬಹುದು. ಬಹಳಷ್ಟು ಬಾರಿ ಬೆರಳಚ್ಚು ಮಾಡುವಾಗ ಘಟಿಸುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವಲ್ಲಿ ಈ ಸೌಲಭ್ಯ ತುಂಬ ಪ್ರಯೋಜನಕಾರಿಯಾಗಿದೆ.
ವರ್ಡ್ 2003ರಲ್ಲಿ ಈ ಸೌಲಭ್ಯವು ತಂತಾನೆ ಸಕ್ರಿಯವಾಗಿರುತ್ತದೆ. ಅದು ಸಕ್ರಿಯವಾಗಿಲ್ಲದಿದ್ದಲ್ಲಿ ಅದನ್ನು ಸಕ್ರಿಯಗೊಳಿಸಲು ಈ ವಿಧಾನವನ್ನು ಬಳಸಿ – Tools ಮೆನುವಿನಲ್ಲಿ Options ಅನ್ನು ಆಯ್ಕೆ ಮಾಡಿ ಅದರಲ್ಲಿ Spellings & Grammar ಎಂಬ ಟ್ಯಾಬನ್ನು ಕ್ಲಿಕ್ ಮಾಡಿ. ಈಗ ಕಾಣಿಸುವ Check spelling as you type ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
ತಪ್ಪಾಗಿ ಬೆರಳಚ್ಚುಗೊಂಡ ಪದವು ಕೆಂಪು ಅಡಿಗೆರೆಯೊಂದಿಗೆ ಕಾಣಿಸಿಕೊಳ್ಳುತ್ತದೆ. ಈ ಪದದಲ್ಲಿ ಸೂಚಕವನ್ನು ಇರಿಸಿ ಮೌಸ್ನ ಬಲಗುಂಡಿಯನ್ನು ಕ್ಲಿಕ್ ಮಾಡಿದರೆ ತಪ್ಪಾದ ಪದಕ್ಕೆ ಬದಲಾವಣೆಯ ಆಯ್ಕೆಗಳನ್ನು ಅದು ತೋರಿಸುತ್ತದೆ.
ಈ ಚಿತ್ರವನ್ನು ಗಮನಿಸಿ. ಅದರಲ್ಲಿ ಸರಿಯಾದ ಪದಗಳ ಪಟ್ಟಿಯನ್ನು ಅದು ತೋರಿಸುತ್ತಿದೆ. ಅದರ ಜೊತೆಗೆ ಇನ್ನು ಕೆಲವು ಆಯ್ಕೆಗಳಿವೆ. ಕೆಲವೊಮ್ಮೆ ಗಣಕಕ್ಕೆ ತಿಳಿದಿರದ ಪದವನ್ನು (ಉದಾ – ನಾಮಪದ) ಅದು ತಪ್ಪು ಎಂದು ತೋರಿಸಿದರೂ ಅದು ತಪ್ಪಲ್ಲ ಎಂದು ನಾವು ಗಣಕಕ್ಕೆ ಹೇಳಬೇಕಾಗುತ್ತದೆ. ಅದಕ್ಕೆಂದೇ Ignore All ಎಂಬ ಆಯ್ಕೆಯಿದೆ. ಅಥವಾ ಈ ಪದವನ್ನು ನಮ್ಮದೆ ವೈಯಕ್ತಿಕ ನಿಘಂಟಿಗೆ ಸೇರಿಸಿಕೊಳ್ಳಲೂ ಬಹುದು. ಅದಕ್ಕಾಗಿ Add to Dictionary ಎಂದು ಆಯ್ಕೆ ಮಾಡಿಕೊಳ್ಳಬೇಕು.
ಒಮ್ಮೆ ಬೆರಳಚ್ಚು ಮಾಡಿದ ಲೇಖನದಲ್ಲಿರುವ ತಪ್ಪುಗಳನ್ನು ಒಟ್ಟಿಗೆ ಪತ್ತೆಹಚ್ಚಬೇಕಿದ್ದರೆ Tools ಮೆನುವಿನಿಂದ Spellings and Grammar ಅನ್ನು ಕ್ಲಿಕ್ ಮಾಡಬೇಕು. ಆಗ ಲೇಖನದಲ್ಲಿರುವ ಬೆರಳಚ್ಚಿನ ತಪ್ಪುಗಳನ್ನು ಒಂದೊಂದಾಗಿ ತೋರಿಸುತ್ತ ಹೋಗುತ್ತದೆ.
ಇಲ್ಲೂ ತಪ್ಪಲ್ಲ ಎಂದು ನಮಗೆ ತಿಳಿದಿರುವ ಪದವನ್ನು ನಮ್ಮ ವೈಯಕ್ತಿಕ ನಿಘಂಟಿಗೆ ಸೇರಿಸುವ ಸೌಲಭ್ಯವಿದೆ. ಒಂದು ಸಲಕ್ಕೆ ಕಡೆಗಣಿಸುವ ಅಥವಾ ಇಡಿಯ ಲೇಖನದಲ್ಲಿ ಕಡೆಗಣಿಸುವ ಸೌಕರ್ಯಗಳೂ ಇವೆ.
ವರ್ಡ್ನಲ್ಲಿ ಸ್ವಯಂಚಾಲಿತವಾಗಿ ಬೆರಳಚ್ಚಿನ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಸೌಲಭ್ಯವೂ ಇದೆ. ಇದಕ್ಕಾಗಿ Tools ಮೆನುವಿನಿಂದ AutoCorrect Options ಅನ್ನು ಕ್ಲಿಕ್ ಮಾಡಬೇಕು. ನಂತರ ಕಾಣಿಸುವ ಸಂವಾದಚೌಕದಲ್ಲಿ ಸ್ವಯಂಚಾಲಿತವಾಗಿ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಆಯ್ಕೆಗಳಲ್ಲಿ ನಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳಬಹುದು.
ವರ್ಡ್ 2003ರಲ್ಲಿ ಇನ್ನೂ ಒಂದು ಸೌಲಭ್ಯವಿದೆ. ತುಂಬ ಲೇಖನಗಳನ್ನು ಬರೆಯುವವರಿಗೆ ಅದು ಇಷ್ಟವಾಗಬಹುದು. ಅದುವೇ ಸಮಾನಾರ್ಥ ಪದಕೋಶ. ಒಂದು ಪದದ ಮೇಲೆ ಸೂಚಕವನ್ನು ಇರಿಸಿ ಮೌಸ್ನ ಬಲಕ್ಲಿಕ್ ಮಾಡಿದಾಗ ಕಾಣಿಸುವ ಮೆನುವಿನಲ್ಲಿ Synonyms ಮೇಲೆ ಕ್ಲಿಕ್ ಮಾಡಿದರೆ ಅದೇ ಅರ್ಥವುಳ್ಳ ಇತರೆ ಪದಗಳನ್ನು ಅದು ಸೂಚಿಸುತ್ತದೆ. ಪುಸ್ತಕ ಪದಕ್ಕೆ ಬದಲಾಗಿ ಹೊತ್ತಗೆ ಎಂಬ ಪದವನ್ನು ಈ ರೀತಿಯಾಗಿ ಆಯ್ಕೆ ಮಾಡಿಕೊಳ್ಳಬಹುದು.
ಮೂಲ : ಭಾಷಾಇಂಡಿಯ
ಕೊನೆಯ ಮಾರ್ಪಾಟು : 1/28/2020