ಪ್ರಪಂಚಾದ್ಯಂತ ಬಹುಪಾಲು ಜನರು ಬಳಸುವುದು ಮೈಕ್ರೋಸಾಫ್ಟ್ ಕಂಪೆನಿಯವರ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನ್ನು (ಆಪರೇಟಿಂಗ್ ಸಿಸ್ಟಮ್). ಇನ್ನು ದೈನಂದಿನ ಕಾರ್ಯಚಟುವಟಿಕೆಗಳಿಗೆ ಬಳಸುವುದು ಮೈಕ್ರೋಸಾಫ್ಟ್‌ನವರದೇ ಆದ ಆಫೀಸ್ ತಂತ್ರಾಂಶಗುಚ್ಛವನ್ನು. ಜನಸಾಮಾನ್ಯರಿಗೆ ಗಣಕಗಳಲ್ಲಿ ಮುಖ್ಯವಾಗಿ ಮಾಡಬೇಕಾದ ಎಲ್ಲ ಕೆಲಸಗಳನ್ನು ವಿಂಡೋಸ್ ಮತ್ತು ಆಫೀಸ್‌ಗಳನ್ನು ಬಳಸಿ ಮಾಡಬಹುದು. ಈ ಕೆಲಸಗಳು ಯಾವುವು? ಅವುಗಳಿಗೆ ಜನರು ಬಳಸುವ ತಂತ್ರಾಂಶಗಳು (ಸಾಫ್ಟ್‌ವೇರ್) ಯಾವುವು? ಒಂದು ಗಣಕವನ್ನು ನಡೆಸುವ ಮೇಲುಸ್ತುವಾರಿಗೆ ವಿಂಡೋಸ್. ಪತ್ರ, ಪುಸ್ತಕ, ಲೇಖನ, ಇತ್ಯಾದಿಗಳ ಬೆರಳಚ್ಚು ಮತ್ತು ಪುಟವಿನ್ಯಾಸಕ್ಕೆ ವರ್ಡ್. ಹಣಕಾಸು ಮತ್ತು ಇತರೆ ಲೆಕ್ಕ ವ್ಯವಹಾರಗಳಿಗೆ ಎಕ್ಸೆಲ್. ದತ್ತಾಂಶಗಳ (ಡಾಟಾಬೇಸ್) ಸಂಗ್ರಹಣೆ ಮತ್ತು ನಿರ್ವಹಣೆಗೆ ಆಕ್ಸೆಸ್. ವಿ-ಅಂಚೆ (ಇಮೈಲ್) ಕಳುಹಿಸಲು ಮತ್ತು ಸ್ವೀಕರಿಸಲು ಔಟ್‌ಲುಕ್. ಇನ್ನೂ ಸ್ವಲ್ಪ ಹೆಚ್ಚು ಪರಿಣತರುಗಳಿಗೆ ಅಂತರಜಾಲ ತಾಣ (ವೆಬ್‌ಸೈಟ್) ನಿರ್ಮಾಣಕ್ಕೆ ಫ್ರಂಟ್‌ಪೇಜ್ ಮತ್ತು ಭಾಷಣ ಕೊಡಲು ಸ್ಲೈಡ್‌ಶೋ ಮಾಡಲು ಪವರ್‌ಪೋಯಿಂಟ್. ಈ ವರ್ಡ್, ಎಕ್ಸೆಲ್, ಆಕ್ಸೆಸ್, ಔಟ್‌ಲುಕ್, ಪವರ್‌ಪೋಯಿಂಟ್ ಮತ್ತು ಫ್ರಂಟ್‌ಪೇಜ್ ಒಟ್ಟು ಸೇರಿ ಆಫೀಸ್ ತಂತ್ರಾಂಶಗುಚ್ಛ ಆಗಿದೆ.
ಮೈಕ್ರೋಸಾಫ್ಟ್ ವರ್ಡ್ ಕನ್ನಡ ಭಾಷೆಯನ್ನು ಯುನಿಕೋಡ್ ವಿಧಾನದಲ್ಲಿ ಕನ್ನಡ ಭಾಷೆಯನ್ನು ಬಳಸುತ್ತದೆ. ಯುನಿಕೋಡ್ ಬಳಕೆಯಿಂದಾಗಿ ಕನ್ನಡ ಭಾಷೆಯ ಜಗತ್ತಿನ ಇತರೆ ಭಾಷೆಗಳನ್ನೂ ಜೊತೆ ಜೊತೆಯಾಗಿ ಬಳಸಬಹುದು. ವಿಂಡೋಸ್ ಎಕ್ಸ್‌ಪಿ ಅಥವಾ ನಂತರದ ಕಾರ್ಯಾಚರಣೆಯ ವ್ಯವಸ್ಥೆಯಲ್ಲಿ ಆಫೀಸ್ 2003ನ್ನು ಅನುಸ್ಥಾಪಿಸಿದರೆ ಕನ್ನಡ ಯುನಿಕೋಡ್ ಸೌಲಭ್ಯವನ್ನು ಪಡೆಯಬಹುದು.
ಮೊದಲನೆಯದಾಗಿ ವರ್ಡ್‌ನ್ನು ಪ್ರಾರಂಭಿಸಿ. ನಂತರ ವಿಂಡೋಸ್ ಎಕ್ಸ್‌ಪಿಯಲ್ಲಿ ನೀಡಿರುವ ಕೀಲಿಮಣೆಯ ಸೌಲಭ್ಯದಲ್ಲಿ ಕನ್ನಡವನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಕೀಲಿಮಣೆಯು ಭಾರತೀಯ ಭಾಷೆಗಳನ್ನು ವಿಂಡೋಸ್ ಎಕ್ಸ್‌ಪಿಯಲ್ಲಿ ಅಳವಡಿಸುವ ಮೂಲಕ ದೊರೆಯುತ್ತದೆ. ಹೆಚ್ಚಿನ ವಿವರಗಳಿಗೆ ಈ ಲೇಖನಗಳನ್ನು ಓದಿ .
ವಿಂಡೋಸ್ ಎಕ್ಸ್‌ಪಿಯ ಜೊತೆ ಬಂದಿರುವ ಕೀಲಿಮಣೆಯು ಇನ್‌ಸ್ಕ್ರಿಪ್ಟ್ ವಿನ್ಯಾಸದ್ದಾಗಿದೆ. ಈ ವಿನ್ಯಾಸವನ್ನು ತಿಳಿಯಲು ಕನ್ನಡದ ಕೀಲಿಮಣೆಯನ್ನು ಆಯ್ಕೆ ಮಾಡಿ ನಂತರ ಆನ್‌ಸ್ಕ್ರೀನ್ ಕೀಬೋರ್ಡನ್ನು ಚಾಲನೆ ಮಾಡಿ ನೋಡಬಹುದು. ಇದನ್ನು ಚಾಲನೆ ಮಾಡಲು ಈ ರೀತಿ ಮಾಡಿರಿ - All Programs => Accessories => Accessibility => On-Screen Keyboard. ಆಗ ಕೀಲಿಮಣೆ ವಿನ್ಯಾಸ ಚಿತ್ರದಲ್ಲಿ ತೋರಿಸಿದಂತೆ ಕಾಣಿಸುತ್ತದೆ.
ಈ ಇನ್‌ಸ್ಕ್ರಿಪ್ಟ್ ವಿನ್ಯಾಸದ ಕೀಲಿಮಣೆಯ ವೈಶಿಷ್ಟ್ಯವೆಂದರೆ ಇದು ಎಲ್ಲಾ ಭಾರತೀಯ ಭಾಷೆಗಳಿಗೂ ಒಂದೆ ಆಗಿರುತ್ತದೆ. ಅಂದರೆ ಕನ್ನಡ ಭಾಷೆಯ ವಿನ್ಯಾಸವನ್ನು ಕಲಿತವರು ಭಾಷೆ ಬಾರದಿದ್ದರೂ ಬೆಂಗಾಳಿ, ಗುಜರಾತಿ, ತಮಿಳು, ಇತ್ಯಾದಿ ಇತರೆ ಭಾರತೀಯ ಭಾಷೆಗಳಲ್ಲಿ ಬೆರಳಚ್ಚು ಮಾಡಬಹುದು.
ಇನ್‌ಸ್ಕ್ರಿಪ್ಟ್ ಕೀಲಿಮಣೆ ಕಲಿಯುವುದು ಸ್ವಲ್ಪ ಕಷ್ಟ ಎನ್ನುವವರಿಗಾಗಿ ಭಾಷಾಇಂಡಿಯಾದಲ್ಲಿ ಇತರೆ ಕೀಲಿಮಣೆ ವಿನ್ಯಾಸಗಳು ಡೌನ್‌ಲೋಡ್‌ಗೆ ಲಭ್ಯವಿವೆ. Kannada Indic IME ಹೆಸರಿನ ಇದನ್ನು ಇಲ್ಲಿ ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ಟ್ರಾನ್ಸ್‌ಲಿಟರೇಶನ್, ಕರ್ನಾಟಕ ಸರಕಾರದ ಅಧಿಕೃತ ವಿನ್ಯಾಸ ಮತ್ತು ಕನ್ನಡ ಟೈಪ್‌ರೈಟರ್ ವಿನ್ಯಾಸಗಳನ್ನು ಅಳವಡಿಸಲಾಗಿದೆ. ನಿಮಗಿಷ್ಟವಾದ ವಿನ್ಯಾಸವನ್ನು ಬಳಸಿಕೊಂಡು ಕನ್ನಡವನ್ನು ಬೆರಳಚ್ಚು ಮಾಡಬಹುದು.
ವರ್ಡ್ ತಂತ್ರಾಂಶದಲ್ಲಿ ಭಾರತೀಯ ಭಾಷೆಗಳಿಗೆ ಒಂದು ವಿಶಿಷ್ಟ ಸೌಲಭ್ಯವನ್ನು ನೀಡಲಾಗಿದೆ. ಇದನ್ನು ಚಾಲೂ ಮಾಡಿಕೊಂಡರೆ ಕೇವಲ ಸ್ವರ ಚಿಹ್ನೆಗಳನ್ನು ಬೆರಳಚ್ಚು ಮಾಡಲಾಗುವುದಿಲ್ಲ. ಇನ್‌ಸ್ಕ್ರಿಪ್ಟ್ ವಿನ್ಯಾಸದಲ್ಲಿ ಸ್ವರಗಳಿಗೆ ನೀಡಿರುವ ಕೀಲಿ ಮತ್ತು ಸ್ವರಚಿಹ್ನೆಗಳಿಗೆ ನೀಡಿರುವ ಕೀಲಿ ಒಂದೇ ಆಗಿರುತ್ತದೆ. ಶಿಫ್ಟ್ ಕೀಲಿ ಸಹಿತ ಒತ್ತಿದರೆ ಸ್ವರ, ಅಲ್ಲದಿದ್ದರೆ ಸ್ವರ ಚಿಹ್ನೆ ಮೂಡಿಬರುತ್ತದೆ. ಒಂದು ವ್ಯಂಜನವನ್ನು ಬೆರಳಚ್ಚು ಮಾಡಿದ ನಂತರ ಸ್ವರ ಚಿಹ್ನೆ ಒತ್ತಿದರೆ ಅದು ತಂತಾನೆ ಸಂಯುಕ್ತಾಕ್ಷರವಾಗುತ್ತದೆ. ಆದರೆ ತಪ್ಪಿ ಸ್ವರ ಚಿಹ್ನೆಯನ್ನು ಎರಡು ಸಲ ಒತ್ತಿದರೆ ಕೇವಲ ಸ್ವರ ಚಿಹ್ನೆ ಮೂಡಿಬರುತ್ತದೆ. ಇದನ್ನು ತಪ್ಪಿಸಲು ವರ್ಡ್‌ನಲ್ಲಿ ಒಂದು ಸೌಲಭ್ಯ ನೀಡಿದ್ದಾರೆ. Tools => Options ಆಯ್ಕೆ ಮಾಡಿಕೊಂಡಾಗ ಕಾಣಿಸುವ ಸಂವಾದಚೌಕದಲ್ಲಿ Complex Scripts ಟ್ಯಾಬನ್ನು ಒತ್ತಿ. ಆಗ ಕಂಡುಬರುವ Use sequence checking ಎಂಬುದನ್ನು ಆಯ್ಕೆ ಮಾಡಿ.
ನಂತರ ಕೇವಲ ಸ್ವರ ಚಿಹ್ನೆಗಳು ಕಂಡುಬರುವುದಿಲ್ಲ.
ಮೂಲ : ಭಾಷಾಇಂಡಿಯ
ಕೊನೆಯ ಮಾರ್ಪಾಟು : 1/28/2020