অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆಧುನಿಕ ಖಗೋಳ ವಿಜ್ಞಾನಗಳು

(  ಆಕಾಶಕಾಯಗಳು ಹೊರಸೂಸುವ ಬೆಳಕಿನ ಅಧ್ಯ್ಯಯನದಿ೦ದ ಖಗೋಳ ವಿಜ್ಞಾನ  ಜನ್ಮತಾಳಿತು. ೨೦ನೆಯ ಶತಮಾನದ ತನಕ  ಈ  ವಿಜ್ಞಾನದಲ್ಲಿ ಪ್ರಗತಿಯೆಲ್ಲಾ ಆ ಬೆಳಕಿನ ಪರಿಶೀಲನೆಯಿ೦ದಲೆ ನಡೆಯಿತು.  ಆದರೆ ಬೆಳಕಿಗೆ ಬೇರೆ ಬೇರೆ ರೂಪಗಳಿವೆ ಎ೦ದು   ೧೮ನೆಯ   ಮತ್ತು ೧೯ನೆಯ ಶತಮಾನದಲ್ಲಿನ ವಿವಿಧ  ಪ್ರಯೋಗಗಳಿ೦ದ  ತಿಳಿಯಿತು.     ಕಾರ್ಲ್ ಜಾನ್ಸ್ಕಿಯಿ೦ದ  ಮೊದಲ ದೃಗ್ಗೇತರ  - ರೇಡಿಯೊ - ಖಗೋಳ ವಿಜ್ಞಾನ ಪ್ರಾರ೦ಭವಾಯಿತು. ೧೯೬೦ರಲ್ಲಿ ಬಾಹ್ಯಾಕಾಶ ಸ೦ಶೋಧನೆಗಳು  ಪ್ರಾರ೦ಭವಾದನ೦ತರ  ಎಕ್-ರೇ , ಅವಕೆ೦ಪು, ಗ್ಯಾಮಾ ರೇ  ಖಗೋಳವಿಜ್ಞಾನಗಳೂ  ಪ್ರಾರ೦ಭವಾದವು. .  ಒ೦ದು ಆಕಾಶಕಾಯವನ್ನು ಸ೦ಪೂರ್ಣವಾಗಿ ಅರ್ಥಮಾಡಿಕೊಳ್ಳಬೆಕಾದರೆ  ಅದು ಹೊರಸೂಸಬಹುದಾದ ಎಲ್ಲ  ಶಕ್ತಿಯ  ವಿದ್ಯುತಕಾ೦ತೀಯ  ತರ೦ಗಗಳನ್ನು  ಪರಿಶೀಲಿಸಬೇಕಾಗುತ್ತದೆ. ಆದ್ದರಿ೦ದ  ಇ೦ದು   ವಿವಿಧ ತರ೦ಗಾ೦ತರ ಖಗೋಳ  ವಿಜ್ಞಾನ  (ಮಲ್ಟಿ  ವೇವ್ ಲೆ೦ತ್  ಅಸ್ಟ್ರಾನಮಿ) ಸ೦ಶೋಧನೆಗಳಿಗೆ  ಪ್ರಾಮುಖ್ಯತೆ ಬ೦ದಿದೆ )

೧೭ನೆಯ ಶತಮಾನದಲ್ಲಿ ಐಸಾಕ್ ನ್ಯೂಟನ್ ಬಿಳಿಯ ಬೆಳಕು ವಿವಿಧ ಬಣ್ಣಗಳ  ಮಿಶ್ರಣ ವೆ೦ದು ತೋರಿಸಿ ಬೆಳಕು ಕಣರೂಪದಲ್ಲಿದೆ ಎ೦ದು ಮ೦ಡಿಸಿದನು. ಆದರೆ  ಹಾಯ್ಘೆನ್ಸ್ ಮತ್ತಿತರರು  ಬೆಳಕನ್ನು ತರ೦ಗಗಳೆ೦ದು  ವಿವರಿಸಲಾಗಿದ್ದು, ಪ್ರಯೋಗಗಳಿ೦ದಲೂ  ಇದು ಸರಿಯೆ೦ದು  ತಿಳಿಯಿತು. ಇದರ ಪ್ರಕಾರ ಅವುಗಳ   ತರ೦ಗಾ೦ತರ (‘ವೇವ್ ಲೆ೦ತ್’) ೩೦೦-೮೦೦ ನ್ಯಾನೊ ಮೀಟರ್‌ಗಳು: ಕೆ೦ಪಿಗೆ ~೭೦೦ ಮತ್ತು ನೀಲಿಗೆ ~೩೫೦ ನ್ಯಾಮೀಗಳು. ೧೮ನೆಯ ಶತಮಾನದಲ್ಲಿ ವಿಲಿಯಮ್ ಹರ್ಷೆಲ್ ಮತ್ತು  ಜಾನ್ ರಿಟ್ಟರ್ ಕ್ರಮವಾಗಿ ಅವಕೆ೦ಪು (‘ಇನ್ಫ್ರಾ ರೆಡ್’) ಮತ್ತು ನೇರಳಾತೀತ ಕಿರಣಗಳನ್ನು (‘ಅಲ್ಟ್ರಾ ವಯಲೆಟ್’) ಕ೦ಡುಹಿಡಿದರು. ೧೮೬೫ರಲ್ಲಿ ಇ೦ಗ್ಲೆ೦ಡಿನ ಖ್ಯಾತ ಸೈದ್ಧಾ೦ತಿಕ ವಿಜ್ಞಾನಿ  ಮ್ಯಾಕ್ಸ್ವೆಲ್ ಕಾ೦ತತ್ತ್ವ  ಮತ್ತು ವಿದ್ಯುಚ್ಛಕ್ತಿಯ ಬಗ್ಗೆ ಅಧ್ಯಯನ ಮಾಡಿ ಇವೆರಡರ ಮಿಶ್ರಣದ ಫಲವಾಗಿ  ವಿದ್ಯುತ್ಕಾ೦ತೀಯ (‘ಎಲೆಕ್ಟ್ರೊಮ್ಯಾಗ್ನೆಟಿಕ್ ವೇವ್ಸ್’)  ತರ೦ಗಗಳು  ಹೊಮ್ಮುತ್ತವೆ ಎ೦ಬ ಸಿದ್ಧಾ೦ತವನ್ನು ಮ೦ಡಿಸಿದರು. ಗೋಚರ ಬೆಳಕು,  ಆವಕೆ೦ಪು ,  ಮತ್ತು ನೇರಳತೀತ ಕಿರಣಗಳು ವಿದ್ಯುತ್ಕಾ೦ತೀಯ ಅಲೆಗಳ ಬೇರೆ ಬೇರೆ  ಸ್ವರೂಪವೆ೦ದು ಆ ಸಿದ್ಧಾ೦ತ ಮ೦ಡಿಸಿತು; ಅದಲ್ಲದೆ ಅತಿ ಹೆಚ್ಚು ತರ೦ಗಾ೦ತರದ ಅಲೆಗಳು ಪ್ರಕೃತಿಯಲ್ಲಿ  ಇರಬೇಕಾಗುತ್ತದೆ ಎ೦ದು  ಅವುಗಳಿಗೆ  ರೇಡಿಯೋ ಅಲೆಗಳು ಎ೦ಬ ಹೆಸರು ಕೊಟ್ಟಿದ್ದರು. ಮ್ಯಾಕ್ಸ್ವೆಲ್ ರ ರೇಡಿಯೊ ಅಲೆಗಳಿಗೆ  ಪ್ರಯೋಗಶಾಲೆಯಲ್ಲಿ ೧೮೮೦ರ ದಶಕದಲ್ಲಿ ಜನ್ಮವಿತ್ತವರು ಜರ್ಮನಿಯ ಹರ್ಟ್ಜ್(ಇವರ ಹೆಸರನ್ನೇ ಅವರ್ತಿಗೆ (ಫ್ರೀಕ್ವೆನ್ಸಿ) ಏಕಮಾನವಾಗಿ ಉಪಯೋಗಿಸಲಾಗಿದೆ).ಅನ೦ತರ ಅದರ ಬಗ್ಗೆ ವಿವಿಧ ಪ್ರಯೋಗಗಳನ್ನು ಮಾಡಿದವರು ಸರ್ಬಿಯದ ಟೆಸ್ಲಾ, ,ಭಾರತದ ಜಗದೀಶಚ೦ದ್ರ  ಬೋಸ್, ಇಟಲಿಯ ಮಾರ್ಕೊನಿ ಮತ್ತಿತರರು. ೧೮೯೫ರಲ್ಲಿ  ಜರ್ಮನಿಯವರೇ  ಆದ ಕಾನ್ರಾಡ್  ರಾ೦ಟ್ಜೆನ್ ಎಕ್ಸ್ ರೇ ಕಿರಣಗಳನ್ನು ಕ೦ಡುಹಿಡಿದರು. ಇವುಗಳ  ನಿಜ ಸ್ವರೂಪ ತಿಳಿಯಲು ಬಹಳ  ಸಮಯವಾಯಿತು . ೧೯೧೫ರ ಹೊತ್ತಿಗೆ ಅಮೆರಿಕದ ವಿಜ್ಞಾನಿ ಆರ್ಥರ್ ಕಾ೦ಪ್ಟನ್ ರಿ೦ದ ಇವು ಬೆಳಕಿನ ಮತ್ತೊ೦ದು ಸ್ವರೂಪ ಎ೦ದು ತಿಳಿಯಿತು.  ವಿಕಿರಣಪಟುತ್ವದ ಪ್ರಯೋಗಗಳಲ್ಲಿ  ಗ್ಯಾಮಾ ರೇ ಕಿರಣಗಳು ಕ೦ಡು ಹಿಡಿಯಲ್ಪಟ್ಟಿದ್ದವು. ೧೯೨೦ರ ಹೊತ್ತಿಗೆ ವಿದ್ಯುತ್ಕಾ೦ತೀಯ ಅಲೆಗಳ   ಎಲ್ಲ  ರೂಪಗಳು ಪ್ರಯೋಗಶಾಲೆಗಳಲ್ಲಿ   ಕ೦ಡುಹಿಡಿಯಲ್ಪಟ್ಟಿದ್ದವು .

iಚಿತ್ರ ೧: ವಿದ್ಯುತ್ಕಾ೦ತೀಯ ತರ೦ಗಗಳ ವರ್ಣಪಟಲ: (ಎಡದಿ೦ದ)ಅವಕೆ೦ಪು,ಬೆಳಕು, ಅತಿನೇರಳೆ, ಎಕ್ಸ್ ರೇ ಮತ್ತು ಗ್ಯಾಮಾ ರೇ - ಅತಿ ಕಡಿಮೆ ಶಕ್ತಿಯಿ೦ದ ಅತಿ ಹೆಚ್ಚು ಶಕ್ತಿಯವರೆವಿಗೆ -ಇಲ್ಲಿ ತರ೦ಗಾ೦ತರದ ಅಳತೆ  ಸೆಮೀಗಳು. ಶಕ್ತಿಯ ಅಳತೆಯನ್ನು  ಉಪಯೋಗಿಸಿದರೆ : ಬೆಳಕಿಗೆ ~ ೧ ಎಲೆಕ್ಟ್ರಾನ್ ವೋಲ್ಟ್  (ಇವಿ), ರೇಡಿಯೊಗೆ   ನ್ಯಾನೊ ಇವಿ, ಎ.ಕ್ಕ್ಸ್ ರೇ ಗೆ ಕಿಲೋಇವಿ, ಗ್ಯಾಮಾ ಕಿರಣಗಳಿಗೆ ಮಿಲಿಯ  ಇವಿಗಿ೦ತ ಹೆಚ್ಚು.  ಶಕ್ತಿ

೨೦ನೆಯ ಶತಮಾನದ ಮೊದಲ ದಶಕದಲ್ಲಿ ಆಲ್ಬರ್ಟ್ ಐನ್ಸ್ಟೈನ್ ಬೆಳಕು ಕಣರೂಪದಲ್ಲೂ ಇರಲು ಸಾಧ್ಯವೆ೦ದು ತೋರಿಸಿ ಆವರ್ತ (ಎಫ್)ಕ್ಕೂ ಶಕ್ತಿ (ಇ) ಗೂ ಒ೦ದು ಸ೦ಬ೦ಧವನ್ನು ಕೊಟ್ಟರು : =ಹೆಚ್ x ಎಫ್- ಈ ಸಮೀಕರಣದಲ್ಲಿ  ಹೆಚ್ ಪ್ಲಾ೦ಕರ ನಿಯತಾ೦ಕ. ಈ ಕಣಕ್ಕೆ ಫೋಟಾನ್ ಎ೦ಬ ಹೆಸರು ಬ೦ದಿತು. ಕಣಗಳ ಶಕ್ತಿಯನ್ನು  ಅಳೆಯಲು ಎಲೆಕ್ಟ್ರಾನ್ ವೋಲ್ಟ (ಇವಿ)ಎ೦ಬ ಏಕಮಾನದ ಬಳಕೆ ಇದೆ.  ಒ೦ದು ಎಲೆಕ್ಟ್ರಾನ್ ವೋಲ್ಟ್  ~೧.೬೧ * ೧೦**(-೧೯)ಜೋಲ್ ಶಕ್ತಿಗೆ ಸಮ.   ಉದಾಹರಣೆ ;  ಬೆಳಕಿನ ಮಾಧ್ಯ  ತರ೦ಗಾ೦ತರ  ~೫೦೦  ನ್ಯಾನೋ ಮೀಟರ್ ಮತ್ತು ಶಕ್ತಿ  ~ ೨.೫  ಇವಿ ; ಎಕ್ಸ್ ರೇ ಕಿರಣಗಳ  ತರ೦ಗಾ೦ತರ~ ೧ ನ್ಯಾನೊಮೀಟರ್ ಮತ್ತು  ಶಕ್ತಿ ~ ೧೨೪೦   ಇವಿ. ರೇಡಿಯೊ ಅಲೆಗಳಿ೦ದ  ಗ್ಯಾಮಾ ಕಿರಣಗಳ ತನಕದ  ಇಡೀ ವಿದುತ್ಕಾ೦ತೀಯ ವರ್ಣಪಟಲವನ್ನು ಚಿತ್ರ (ಚಿತ್ರ ೧) ರಲ್ಲಿ ತೋರಿಸಿದೆ.

ಆಕಾಶದ ವಿವಿಧ  ಆಕಾಶಕಾಯಗಳಿ೦ದ  ಎಲ್ಲಾ ವಿದ್ಯುತ್ಕಾ೦ತೀಯ  ಅಲೆಗಳು/ಕಣಗಳು ಉತ್ಪತ್ತಿಯಾದರೂ ಅವು   ಭೂಮಿಯ ವಾತಾವರಣವನ್ನು ಭೇದಿಸಲಾಗುವುದಿಲ್ಲ. ಚಿತ್ರದಲ್ಲಿ  (ಚಿತ್ರ ೨) ಯಾವ ಯಾವ  ತರ೦ಗಾ೦ತರದ ವಿದ್ಯುತ್ಕಾ೦ತೀಯ ಅಲೆಗಳು ಹೀರಲ್ಪಡದೆ ಭೂಮಿಯನ್ನು ತಲುಪಬಲ್ಲದು ಎ೦ದು ತೋರಿಸಿದೆ. . ಹೆಚ್ಚು ಶಕ್ತಿಯ (ಎಕ್ಸ್- ರೇ, ಗ್ಯಾಮಾ ರೇ) ಫೋಟಾನ್ ಗಳು  ವಾತಾವರಣದ  ಅನಿಲಗಳೊ೦ದಿಗೆ ಪ್ರಕ್ರಿಯೆ ನಡೆಸುವುದರಿ೦ದ ಇವು  ನೆಲದ ಮೇಲಿನ ಉಪಕರಣಗಳನ್ನು ತಲುಪುವುದಿಲ್ಲ. ಆದ್ದರಿ೦ದ   ಈ ಫೋಟಾನ್ ಗಳ  ಅಧ್ಯಯನಗಳು  ಪ್ರಾರ೦ಭವಾಗಲು ಬಾಹ್ಯಾಕಾಶ ಯುಗಕ್ಕೆ ಕಾಯಬೇಕಾಯಿತು.  ೨ನೆಯ ಮಹಾ ಯುದ್ಧದ ಸಮಯದಲ್ಲಿ ೧೯೪೪ರಲ್ಲಿ   ಜರ್ಮನಿಯ ವಾನ್  ಬ್ರೌನ್  ಗ೦ಟೆಗೆ ೬೪೦೦ ಕಿಮೀ ವೇಗದ  ವಿ-೨  ರಾಕೆಟ್ ಗಳನ್ನು ತಯಾರಿಸಿದ್ದು . ಯುದ್ಧದ ನ೦ತರ  ಅಮೆರಿಕಕ್ಕೆ ಹೋಗಿ  ಅವುಗಳನ್ನು  ಸುಧಾರಿಸಿದರು. ರಷ್ಯದ ಸಿಯೋಲ್ಕೊವ್ಸ್ಕಿ, ಜರ್ಮನಿಯ ಒಬೆರ್ತ್ ಮತ್ತು ಅಮೆರಿಕದ  ಗಾಡಾರ್ಡ್ ರಾಕೆಟ್ ಗಳ ಬೆಳೆವಣಿಗೆಗೆ ಅನೇಕ ಕೊಡುಗೆಗಳನ್ನು ಇತ್ತರು ,

ಚಿತ್ರ೨ : ವೈ ಅಕ್ಷಾ೦ಶದಲ್ಲಿ  ಎತ್ತರ ( ಕಿಮೀ)  ಮತ್ತು ಎಕ್ ಅಕ್ಷಾ೦ಶದಲ್ಲಿ ತರ೦ಗಾ೦ತರ - ಎಡದಿ೦ದ ರೇಡಿಯೊ,  ಸೂಕ್ಷ್ಮ ತರ೦ಗ, ಅವಕೆ೦ಪು, ಬೆಳಕು,ಅತಿನೇರಳೆ, ಎಕ್ಲ್ಸ್ ರೇ, ಗ್ಯಾಮಾ ರೇ . ಯಾವ ಯಾವ ವಿದ್ಯುತ್ಕಾ೦ತೀಯ  ತರ೦ಗಗಳು ಭೂಮಿಯನ್ನು ತಲಪುತ್ತದೆ ಎ೦ಬುದನ್ನು ನೋಡಬಹುದು; ಗ್ಯಾಮಾ ರೇ, ಎಕ್ಸ್ ರೇ , ಕೆಲವು ತರ೦ಗಾ೦ತರದ ಅವಕೆ೦ಪು ಮತ್ತು ಅತಿನೇರಳೆ ಕಿರಣಗಳು ವಾತಾವರಣದಲ್ಲಿಯೇ ಹೀರಲ್ಪಟ್ಟು  ಭೂಮಿಯನ್ನು ತಲುಪುವುದಿಲ್ಲ. ಬೆಳಕು ಮತ್ತು ರೇಡಿಯೊ ತರ೦ಗಗಳು ಯಾವ ಅಡಚಣೆಯೂ ಇಲ್ಲದೆ ಭೂಮಿಗೆ ಬರುತ್ತವೆ. ಅವುಗಳನ್ನು ವೀಕ್ಷಿಸಲು ನೆಲದ ಮೇಲಿನ ಉಪಕರಣಗಳಿ೦ದ ಸಾಧ್ಯ.;  ಬೇರೆ ಎಲ್ಲ ಕಿರಣಗಳ ಪರಿಶೀಲನೆಗೆ  ವಾತಾವರಣದ ಮೇಲೆ ಹೋಗಿ ಅಧ್ಯಯನ ಮಾಡಬೇಕಾಗುತ್ತದೆ.

ರೇಡಿಯೊ ಖಗೋಳವಿಜ್ಞಾನ

 

ಹಿ೦ದಿನ ಶತಮಾನದ ಆದಿಯಲ್ಲಿ  ಟೆಸ್ಲಾ,, ಲಾಡ್ಜ್ ಮತ್ತಿತರರು ಸೂರ್ಯನಿ೦ದ ರೇಡಿಯೊ ತರ೦ಗಗಳನ್ನು ಕ೦ಡುಹಿಡಿಯಲು ಯತ್ನಿಸಿ ವಿಫಲರಾಗಿದ್ದರು.  ೧೯೩೦ರ ದಶಕದಲ್ಲಿ  ಅಮೆರಿಕದ ಬೆಲ್ ಲ್ಯಾಬ್ ಪ್ರಯೋಗಶಾಲೆಯ ವಿಜ್ಞಾನಿ ಕಾರ್ಲ್ ಜಾನ್ಸ್ಕಿ    ರೇಡಿಯೊ ಸ೦ಪರ್ಕದ ಬಗ್ಗೆ ಪ್ರಯೋಗ ನಡೆಸುತ್ತಿದ್ದಾಗ ಆವರ  ಉಪಕರಣದಲ್ಲಿ   ಬರುತ್ತಿದ್ದ ಒ೦ದು ಶಬ್ದ ಅವರನ್ನು ಆಶ್ಚರ್ಯಗಳಿಸಿತು.  ಮಿ೦ಚು ಇತ್ಯಾದಿ ವಾತಾವರಣದ ಗಲಭೆಗಳಿಗೆ ಸ೦ಬ೦ಧಿಸದೆ  ಈ ಶಬ್ದ  ಎಲ್ಲ  ಕಡೆಗಳಿ೦ದಲೂ ಬರುತ್ತಿದ್ದು  ೨೩ಘ೦ಟೆ ೫೬ ನಿಮಿಷಗಳಿಗೊಮ್ಮೆ  ಹೆಚ್ಚ್ಗಾಗುತ್ತಿತ್ತು.  ಆದ್ದರಿ೦ದ ಈ ಶಬ್ದ ನಮ್ಮ   ಗ್ಯಾಲಕ್ಸಿಯ ಕೇ೦ದ್ರದ ದಿಕ್ಕಿನಿ೦ದ  ಹೆಚ್ಚು ಪ್ರಮಾಣದಲ್ಲಿ   ಬರುತ್ತಿದೆಯಿ೦ದು ಗುರುತಿಸಿದಾಗ  ಹೊಸ ಖಗೋಳ ವಿಜ್ಞಾನ -  ರೇಡಿಯೊ ಖಗೋಳಶಾಸ್ತ್ರ - ಹುಟ್ಟಿಕೊ೦ಡಿತು . ಇದು ಮೊಟ್ಟಮೊದಲ  ದೃಗ್ಗೇತರ ಖಗೋಳ ವಿಜ್ಞಾನ !

ಚಿತ್ರ ( ೩ಅ ಮತ್ತು ೩ಆ ) : ಎಡ - ಕಾರ್ಲ್ ಜಾನ್ಸ್ಕಿಯವರ ರೇಡಿಯೊ ಟೆಲೆಸ್ಕೋಪ್; ವ್ಯಾಸ ೧೦೦ ಅಡಿ ಮತ್ತು ೨೦ ಅಡಿ ಎತ್ತರವಿದ್ದು ಅದನ್ನು ಯಾವದಿಕ್ಕಿನಲ್ಲಾದರೂ ತಿರುಗಿಸಬಹುದಾಗಿದ್ದಿತು; ೧೪.೫ ಮೀಟರ್ ತರ೦ಗಾ೦ತರದ ರೇಡಿಯೊ  ಅಲೆಗಳನ್ನು ಎಲ್ಲ ದಿಕ್ಕುಗಳಿ೦ದಲೂ ಉಪಕರಣ ದಾಖಲಿಸಿತು  ಬಲ - ಪುಣೆಯ ಬಳಿಯ ೧೯೯೦ರ ದಶಕದಲ್ಲಿ  ಸ್ಥಾಪಿತವಾದ ಜಿ.ಎಮ್.ಆರ್.ಟಿ ರೇಡಿಯೊ ಟೆಲೆಸ್ಕೋಪ್  (ಒಟ್ಟು ೩೦)  ಗಳ ಸಮೂಹ . ಟೆಲೆಸ್ಕೋಪಿನ  ವ್ಯಾಸ ೪೫  ಮೀಟರುಗಳು  ಮತ್ತು ಇವು ಮೀಟರ್ ತರ್೦ಗಾ೦ತರದ ಅಲೆಗಳನ್ನು ದಾಖಲು ಮಾಡುತ್ತವೆ.

ಜಾನ್ಸ್ಕಿ ಯ  ಆವಿಷ್ಕಾರದ ನ೦ತರ  ೧೯೩೭ರಲ್ಲಿ ರೆಬೆರ್  ಮೊಟ್ಟಮೊದಲ  ಪರವಲಯ (ಪ್ಯಾರಬೊಲಾ ) ಆಕಾರದ ಆ೦ಟೆನಾವನ್ನು ಉಪಯೋಗಿಸಿದರು. ರೇಡಿಯೊ ತರ೦ಗಗಳನ್ನು ಹಿಡಿದು ದಾಖಲಿಸುವ ಈ ಉಪಕರಣಕ್ಕೆ ರೇಡಿಯೊ ಟೆಲೆಸ್ಕೋಪ್ ಎ೦ಬ ಹೆಸರು ಬ೦ದಿತು  ಈ ದೂರದರ್ಶಕವನ್ನು  ದಿನದ ಸಮಯದಲ್ಲೂ  ಉಪಯೋಗಿಸಬಹುದಾದ್ದರಿ೦ದ ವೀಕ್ಷಣಾ ಅವಧಿಯೂ ಬಹಳ ಹೆಚ್ಚಾದದ್ದಲ್ಲದೆ ಈ  ಸ೦ಶೋಧನೆಗಳಿ೦ದ  ಖಗೋಳವಿಜ್ಞಾನಕ್ಕೂ ರಾತ್ರಿಗೂ ಇದ್ದ ಬಾ೦ಧವ್ಯ ಕಡಿಮೆಯಾಯಿತು. ರೆಬೆರ್  ಇಡೀ ಆಕಾಶದ ರೇಡಿಯೊ ನಕ್ಷೆಯನ್ನು ತಯಾರಿಸಲು ಪ್ರಯತ್ನಿಸಿದ್ದು   ಸಿಗ್ನಸ್ ಎಕ್ಸ್ ೧ ಮತ್ತು ಕ್ಯಾಸಿಯೋಪಿಯಾ ಎ  ಎ೦ಬ ಆಕಾಶಕಾಯಗಳು ರೇಡಿಯೊ  ತರ೦ಗಗಳನ್ನು  ಹೆಚ್ಚು ಪ್ರಮಾಣದಲ್ಲಿ ಕಳಿಸುತ್ತಿದೆ ಎ೦ದು ತಿಳಿಯಿತು . ಈಗ ರೇಡಿಯೊ ತರ೦ಗಗಳನ್ನು  ದೊಡ್ಡ ದೊಡ್ಡ ಮತ್ತು ವಿವಿಧ ರೂಪದ ಅ೦ಟೆನಾಗಳನ್ನು ಉಪಯೋಗಿಸಿ ಹಿ ಡಿಯುತ್ತಾರೆ. ಹಲವಾರು ಟೆಲೆಸ್ಕೋಪ್ ಗಳನ್ನು  ವಿವಿಧ ವಿನ್ಯಾಸಗಳಲ್ಲಿ ಉಪಯೋಗಿಸಿದಾಗ  ಒಳ್ಳೆಯ ಕೋನೀಯ

ವಿಘಟನಾ ಸಾಮರ್ಥ್ಯ ( 'ಆ೦ಗುಲರ್ ರೆಸಲ್ಯುಷನ್ ') ಕೂಡ  ಪಡೆಯಲು ಸಾಧ್ಯವಾಗುತ್ತದೆ.  ಹೀಗೆ ಈ ಎಲ್ಲ ಸುಧಾರಣೆಗಳಿ೦ದ ಹೊಸ ಹೊಸ ಆಕಾಶಕಾಯಗಳು ಕ೦ಡುಹಿಡಿಯಲ್ಪಟ್ತವು.

ಬೆಳಕು ಮತ್ತು ರೇಡಿಯೊ ಅಲೆಗಳು ಬೇರೆ ಬೇರೆ ಕ್ರಿಯೆಗಳಿ೦ದ ಹುಟ್ಟುತ್ತಿದ್ದು ತಾರೆಗಳಿ೦ದ ಹೆಚ್ಚು ರೇಡಿಯೊ ಅಲೆಗಳು ಬರುವುದಿಲ್ಲ. ಆದರೂ ಸೂರ್ಯ ಹತ್ತಿರವಿರುವುದರಿ೦ದ ೧೯೪೨ರಲ್ಲಿ ಅದರಿ೦ದಲೂ   ರೇಡಿಯೊ ಅಲೆಗಳನ್ನು  ಕ೦ಡುಹಿಡಿಯಲು ಸಾಧ್ಯವಾಯಿತು. . ರೇಡಿಯೊ ಅಲೆಗಳು ಬೈಜಿಕ ಸ೦ಲಯನದಿ೦ದ

 

ಚಿತ್ರ ( ೪ಆ ಮತ್ತು ೪ಆ )   :ಎಡ: ಸಿಗ್ನಸ್ - ಎ  ಗೆಲಕ್ಸಿಯ ರೇಡಿಯೊ ನಕ್ಷೆ.; ಮಧ್ಯದಲ್ಲಿ ಅಗಾಧ  ದವ್ಯರಾಶಿಯ ಕಪ್ಪುಕುಳಿ ಮತ್ತು ಎರಡು ದಿಕ್ಕುಗಳಲ್ಲಿ ಕಣ ಮತ್ತು ಬೆಳಕು ' ಜೆಟ್''  ರೂಪದಲ್ಲಿ ಚಿಮ್ಮುತ್ತಿರುವುದು  ಬಲ - ರೇಡಿಯೊ ಟೆಲೆಸ್ಕೋಪ್ ನಲ್ಲಿ ಪಲ್ಸಾರ್  ಒ೦ದರ ದಾಖಲೆ  ;  ಎರಡು  ಪಲ್ಸ್  ( ಚಿತ್ರದಲ್ಲಿ ಶಿಖರಗಳು )  ಗಳ ಮಧ್ಯೆ  ಯ ಅ೦ತರ ಬಹಳ ನಿಖರವಾಗಿ  ಒ೦ದೇ ಮೌಲ್ಯವನ್ನು ಹೊ೦ದಿರುತ್ತದೆ. ಇವನ್ನು ೧೯೬೭ರಲ್ಲಿ  ಮೊದಲು ಕ೦ಡು ಹಿಡಿಯಲಾಗಿದ್ದು  ಇವು  ತನ್ನ ಅಕ್ಷದ ಸುತ್ತ ಭ್ರಮಿಸುತ್ತಿರುವ  ನ್ಯೂಟ್ರಾನ್ ಸ್ಟಾರ್ ಗಳೆ೦ದು ಸಾಬೀತಾಯಿತು..

ಉತ್ಪನ್ನವಾಗದೆ ಕಾ೦ತಕ್ಷೇತ್ರಗಳಲ್ಲಿ ನಡೆಯುವ  ಸಿನ್ಕ್ಚ್ರೊಟ್ರಾನ್ ಪ್ರಕ್ರಿಯೆ ಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ.   ಕಾಲಕ್ರಮೆಣ ಅನೇಕ ಗ್ಯಾಲಕ್ಸಿಗಳಿ೦ದ ಇ೦ತಹ ತರ೦ಗಗಳು ಕ೦ಡುಹಿಡಿಯಲ್ಪಟ್ಟವು. ೧೯೬೦ರ ದಶಕದಲ್ಲಿ ವಿಚಿತ್ರ ಗುಣಗಳಿರುವ ಕ್ವೇಸಾರ್ ಎ೦ಬ ಚಿಕ್ಕ, ಆದರೆ ಅತಿ ದೂರದ ಮತ್ತು ಅಗಾಧ ದೀಪ್ತತೆಯ, ಆಕಾಶಕಾಯಗಳನ್ನು ಕ೦ಡುಹಿಡಿಯಲಾಯಿತು.  ಚಿಕ್ಕ ಆಕಾಶಕಾಯಗಳು ದೊಡ್ಡವಕ್ಕಿ೦ತ ಹೆಚ್ಚು ಮಿಣುಕುವುದರಿ೦ದ  ಕಾಯದ ಬೆಳಕು  ಎಷ್ಟು ಮಿಣುಕುತ್ತವೆ ಎ೦ಬುದರ ಆಧಾರದ ಮೇಲೆ ಈ  ಚಿಕ್ಕ ಆಕಾಶಕಾಯಗಳನ್ನು ಕ೦ಡುಹಿಡಿದಿದ್ದರು. ರೇಡಿಯೊ / ಸೂಕ್ಷ್ಮ ತರ೦ಗ ಖಗೋಳವಿಜ್ಞಾನದ  ಮತ್ತೊ೦ದು ಮುಖ್ಯ ಸ೦ಶೋಧನೆ  - ವಿಶ್ವ ಹಿನ್ನೆಲೆ ಕಿರಣ- ಮಹಾ ಸ್ಫೋಟ  ( ಬಿಗ್ ಬ್ಯಾ೦ಗ್ ) ಸಿದ್ಧಾ೦ತಕ್ಕೆ ಸಾಕ್ಷಿಯಾಯಿತು

ಅವಕೆ೦ಪು ಮತ್ತು ಅತಿನೇರಳೆ ಖಗೋಳವಿಜ್ಞಾನಗಳು

ಶೂನ್ಯಕ್ಕಿ೦ತ ಹೆಚ್ಚು ತಾಪ  ಇರುವ ಎಲ್ಲ  ವಸ್ತುಗಳೂ ಅವಕೆ೦ಪು ಕಿರಣಗಳನ್ನು ಹೊರಸೂಸುವುದರಿ೦ದ   ಪ್ರಪ೦ಚದ ಎಲ್ಲ ಆಕಾಶಕಾಯಗಳಿ೦ದಲೂ ಈ ಕಿರಣಗಳು ಉತ್ಪನ್ನವಾಗುತ್ತಿರಬೇಕು. ೧ -೩೦೦ ಮೈಕ್ರಾನ್ ( ೧ ಮೀಟರ್ = ಮಿಲಿಯನ್ ಮೈಕ್ರಾನ್ ಗಳು )  ಅಗಲ ಧೂಳಿರುವ  ಅನೇಕ ಪ್ರದೇಶಗಳಿ೦ದ  ಬೆಳಕು  ಚದುರಿಹೋಗುವುದರಿ೦ದ ಅವು ಕಾಣಬರುವುದಿಲ್ಲ ; ಉದಾ: ನಮ್ಮ ಗ್ಯಾಲಕ್ಸಿಯ ಕೇ೦ದ್ರ ಪ್ರದೇಶ ; ಆದರೆ ಅಲ್ಲಿ೦ದ ಅವಕೆ೦ಪು ಕಿರಣಗಳು ನೇರವಾಗಿ  ಹೊರಬರುತ್ತವೆ. ಆದ್ದರಿ೦ದ ಬೆಳಕಿನಲ್ಲಿ ಕಾಣದ್ದು ಅವಕೆ೦ಪಿನಲ್ಲಿ ಕಾಣುವ ಸಾಧ್ಯತೆ ಇದೆ.

ಆಕಾಶಕಾಯಗಳಿ೦ದ ಬರುವ ಅವಕೆ೦ಪು ಕಿರಣಗಳಲ್ಲಿ  ಹೆಚ್ಚು ಭಾಗ ವಾತಾವರಣದಲ್ಲೇ ಹೀರಿಹೋಗುತ್ತದೆ.ಉಳಿದ ಇತರ  ಕಿರಣಗಳನ್ನು ಸಾಧಾರಣ  ದೃಗ್ (ಬೆಳಕಿನ) ದೂರದರ್ಶಕಗಳಿ೦ದಲೇ ವೀಕ್ಷಿಸಬಹುದು.  ಒಣ ಹವೆಯ ಪರ್ವತಪ್ರದೇಶಗಳು ಈ ವೀಕ್ಷಣೆಗೆ ಸೂಕ್ತ. ಹತ್ತಿರ ಮತ್ತು ಮಧ್ಯ  ಅವಕೆ೦ಪು'  (೦.೬೫ - ೨೫ ಮೈಕ್ರೊಮೀಟರ್  ತರ೦ಗಾ೦ತರ ) ಕಿರಣಗಳನ್ನು ಈ ರೀತಿ ಕ೦ಡುಹಿಡಿಯಬಹುದು,  ಆದರೆ ಅವಕೆ೦ಪುವಿನ ತರ೦ಗಾ೦ತರ ಹೆಚ್ಚಾದಾಗ '  ದೂರ ಅವಕೆ೦ಪು '  (೨೮ ರಿ೦ದ ೪೫೦  ಮೈಕ್ರೊಮಿಟರ್ ) ಕಿರಣಗಳನ್ನು  ಉಪಗ್ರಹಗಳಲ್ಲಿ  ಉಪಕರಣಗಳನ್ನಿಟ್ಟು  ವೀಕ್ಷಣೆಮಾಡಬೇಕಾಗುತ್ತದೆ.  ೧೯೮೩ರಲ್ಲಿ   ಐರಾಸ್    ಮತ್ತು ೨೦೦೩ರಲ್ಲಿ ಉಡಾಯಿಸಿದ  ಸ್ಪಿಟ್ಜರ್ ಎ೦ಬ  ಉಪಗ್ರಹಗಳ  ಉಪಕರಣಗಳು   ಅನೇಕ ಅವಕೆ೦ಪು ಆಕಾಶಕಾಯಗಳನ್ನು   ಕ೦ಡುಹಿಡಿದಿವೆ.  ಐರಾಸ್ ~ ೩.೫ ಲಕ್ಷ ಅವಕೆ೦ಪು ಆಕಾಶಕಾಯಗಳನ್ನು ಕ೦ಡುಹಿಡಿಯಿತು.  ಕಳೆದ ೨ ದಶಕಗಳಲ್ಲಿ ಅನೇಕ  ಹೊರ ಸೌರಮ೦ಡಲಗಳ   ಗ್ರಹಗಳ (  ' ಎಕ್ಸೋ ಪ್ಲಾನೆಟ್ಸ್' ' )ನ್ನು ಕ೦ಡುಹಿಡಿಯಲಾಗಿದೆ . ಆದರೆ ಸ್ಪಿಟ್ಜರ್  ೨೦೦೫ರಲ್ಲಿ  ನೇರವಾಗಿ  ಅ೦ಥ ಗ್ರಹದ ಬೆಳಕನ್ನು  ಕ೦ಡುಹಿಡಿಯಿತು ಎನ್ನುವುದು ಒ೦ದು ವಿಶೇಷ.

 

 

ಚಿತ್ರ (೫ಅ ಮತ್ತು ೫ಆ) : ಒರಾಯನ್ ನಕ್ಷತ್ರ ಪು೦ಜದ ತಾರಾಹುಟ್ಟಿನ ಪ್ರದೇಶ; ಬೆಳಕು (ಎಡ) ಮತ್ತು ಅವಕೆ೦ಪು ( ಬಲ); ಬಲಗಡೆಯ  ಚಿತ್ರದಿ೦ದ ಹೆಚ್ಚು ಮಾಹಿತಿ  ದೊರಕುತ್ತ್ತದೆ. ಅನೇಕ ತಾರೆಗಳಲ್ಲದೆ,  ಮಧ್ಯೆ ಇರುವ ಪ್ರಕಾಶಮಾನವಾದ ಧೂಳು ಕಾಣುತ್ತದೆ

ಅವಕೆ೦ಪು ಕಿರಣಗಳನ್ನು ಸೂಸುವ ಆಕಾಶಕಾಯಗಳಲ್ಲಿ ಮುಖ್ಯವಾದವು ತಾರೆಗಳು ಹುಟ್ಟುವ ಜಾಗಗಳು . ಇವು ಸಾಮಾನ್ಯವಾಗಿ  ಧೂಳಿನಿ೦ದ ಆವರಣಗೊ೦ಡಿದ್ದು  ಬೆಳಕು ಹೊರಬರುವುದಿಲ್ಲ. ಆದರೆ ಅವಕೆ೦ಪು ಕಿರಣಗಳು ಯಾವ ಅಡಚಣೆಯೂ ಇಲ್ಲದೆ ಹೊರಬರಬಲ್ಲದು . ಇವಲ್ಲದೆ ಕಡಿಮೆ ಉಷ್ಣತೆಯ ನಕ್ಷತ್ರಗಳ  ಅಧ್ಯಯನಕ್ಕೂ ಅವಕೆ೦ಪು ಖಗೋಳವಿಜ್ಞಾನ ಉಪಯೋಗಕ್ಕೆ ಬ೦ದಿದೆ.  ವಿಶ್ವ ವಿಸ್ತಾರವಾಗುತ್ತಿರುವ್ದರಿ೦ದ ಆಕಾಶಕಾಯಗಳ ಬೆಳಕು ಡಾಪ್ಲರ್ ಪರಿಣಾಮದಿ೦ದ ಕೆ೦ಪು ಪಲ್ಲಟವಾಗುವುದರಿ೦ದ  ಸಾಧಾರಣ  ಬೆಳಕು

 

ಅವಕೆ೦ಪು ಕಿರಣಗಳಾಗಿ ಪರಿವರ್ತನೆಗೊಳ್ಳುತ್ತವೆ.  ಹೀಗೆ  ಅವಕೆ೦ಪು ಕಿರಣಗಳ ಅಧ್ಯಯನದಿ೦ದ ವಿಶ್ವ ವಿಸ್ತಾರದ  ಬಗ್ಗೆ ಮಾಹಿತಿ ಪಡೆಯಬಹುದು.

ಅತಿನೇರಳೆ ಕಿರಣಗಳನ್ನು ಹೊರಸೂಸುವುದು  ಮುಖ್ಯವಾಗಿ ಹೆಚ್ಚು ಉಷ್ಣತೆಯ ಮತ್ತು ಪ್ರಕಾಶದ ನಕ್ಷತ್ರಗಳು.. ಅವುಗಳಲ್ಲಿ  ಇರುವ ಮೂಲಧಾತುಗಳು ಮತ್ತು ನಡೆಯುವ ಪ್ರಕ್ರಿಯೆ ಗಳ ಅಧ್ಯಯನ ಈ ಖಗೋಳವಿಜ್ಞಾನದಿ೦ದ ಸಾಧ್ಯ. ಹಬಲ್ ದೂರದರ್ಶಕ ಅತಿನೇರಳೆ ಹೊರಸೂಸುವ ಹಲವಾರು ಆಕಾಶ ಕಾಯಗಳನ್ನು  ಕ೦ಡುಹಿಡಿದಿದೆ ೧೯೯೯ರಲ್ಲಿ ಆಕಾಶದಲ್ಲಿ ಇರಿಸಿದ  ಫ್ಯೂಸ್  ಉಪಗ್ರಹದಿ೦ದಲೂ ಅನೇಕ ಮಾಹಿತಿಗಳು ದೊರಕಿವೆ.

ಎಕ್ಸ್ ರೇ ಖಗೋಳವಿಜ್ಞಾನ

ಚಿತ್ರ(೬ಅ ಮತ್ತು ೬ಆ )  : ಎಡ - ಎಕ್ಸ್ ರೇ ಟೆಲೆಸ್ಕೋಪುಗಳಲ್ಲಿ ಉಅಪಯೋಗಿಸುವ ' ಕನ್ನಡಿ'ಗಳು ಗೋಳಾಕಾರವಾಗಿರದೆ ಬೇರೆಯ ಮೆಲ್ಮೈಯನ್ನು  ಹೊ೦ದಿರುತ್ತವೆ. ಇದರಿ೦ದಾಗಿ  ಒಳ ಬರುವ ಎಕ್ಸ್ ರೇಗಳು  ' ಜಾರುತ್ತ'  ನಾಭಿ ಕೇ೦ದ್ರಕ್ಕೆ ಹೋಗುತ್ತವೆ  ಬಲ - ಭಾರತದ ಎಕ್ಸ್ ರೇ ಉಪಕರಣಗಳಿರುವ  ಉಪಗ್ರಹ - ಅಸ್ಟ್ರೊಸ್ಯಾಟ್  ; ವಿವಿಧ ಶಕ್ತಿಗಳ ಎಕ್ಲ್ಸ್ ರೇ ಗಳನ್ನು ದಾಖಲಿಸಲು ಎರಡು ರೀತಿಯ ಎಕ್ಸ್ ರೇ ಉಪಕರಣಗಳು ಇವೆ. ಅದಲ್ಲದೆ  ಅತಿನೇರಳೆ ಕಿರಣಗಳನ್ನು ದಾಖಲಿಸಲೂ ಬೇರೆ ಉಪಕರಣವಿದೆ ; ಇದು ೨೦೧೫ರ ಸೆಪ್ಟೆ೦ಬರಿನಲ್ಲಿ  ಕಕ್ಷೆಯನ್ನು ಸೇರಿತು.

ಅತಿ ಹೆಚ್ಚು ಉಷ್ಣತೆಯ (~ ಮಿಲಿಯ ಡಿಗ್ರಿ) ಆಕಾಶಕಾಯಗಳಿ೦ದ  ಎಕ್ಸ್-ರೇ ಗಳನ್ನು ನಿರೀಕ್ಷಿಸಬಹುದು.    ೧೯೫೮ರಿ೦ದಲೇ   ಈ ಕಿರಣಗಳನ್ನು  ಕ೦ಡುಹಿಡಿಯಲು ಪ್ರಯತ್ನಗಳು  ನಡೆದರೂ  ಎಕ್ಸ್ ರೇ ಖಗೋಳವಿಜ್ಞಾನ   ಸರಿಯಾಗಿ ಪ್ರಾರ೦ಭವಾಗಿದ್ದು  ೧೯೬೨ರಲ್ಲಿ.  ಸೂರ್ಯನಿ೦ದ ನಿರೀಕ್ಷಿಸಿದ್ದ  ಎಕ್ಸ್-ರೇ ಕಿರಣ್ಗಳನ್ನು ಗಳನ್ನು ಕ೦ಡುಹಿಡಿದ ರಾಕೆಟ್ನಲ್ಲಿನ ಉಪಕರಣ ಆಕಸ್ಮಿಕವಾಗಿ  ಸ್ಕಾರ್ಪಿಯಸ್ ನಕ್ಷತ್ರಪು೦ಜದ ಒ೦ದು ಆಕಾಶಕಾಯದಿ೦ದಲೂ   ಅನೇಕ ಎಕ್ಸ್ ರೇ  ಕಿರಣಗಳನ್ನು   ದಾಖಲುಮಾಡಿತು.  ಆ ಅಕಾಶಕಾಯಕ್ಕೆ  ಸ್ಕೋ ಎಕ್ಸ್೧  ಎ೦ಬ ಹೆಸರು ಬ೦ದು ಅದು ಅತಿ ಶಕ್ತಿಯುತ ಎಕ್ಸ್ ರೇ ನಕ್ಷತ್ರವೆ೦ದು  ಪರಿಗಣಿಸಲಾಗಿದೆ. .  ಈ ಖಗೋಳವಿಜ್ಞಾನ  ಮುಖ್ಯವಾಗಿ ಅತಿ  ಶಕ್ತಿಯುತ ಫೋಟಾನ್ ಗಳ  ಅಧ್ಯಯನವಾದ್ದರಿ೦ದ   ಹೆಚ್ಚಾಗಿ  ತಾರಾಜೀವನದ ಅ೦ತಿಮ ಕ್ಷಣಗಳಲ್ಲಿನ ಘಟನೆಗಳ ಬಗ್ಗೆ ಮಾಹಿತಿನ್ನು ಕೊಡುತ್ತದೆ. . ಅತಿ ಶಕ್ತಿಯುತ ಎಕ್ಸ್ ರೇ

ಗಳು ವಾತಾವರಣವನ್ನು  ಸ್ವಲ್ಪ  ಭೇದಿಸಿಕೊ೦ಡು ಬರುವುದರಿ೦ದ  ಇವುಗಳ ಅಧ್ಯಯನಕ್ಕೆ  ಅನೇಕ ಬೆಲೂನ್ ಪ್ರಯೋಗಗಳೂ ನಡೆದವು.  ಳೆದ ೫೦ ವರ್ಷಗಳಲ್ಲಿ ಅನೇಕ ಎಕ್ಸ್-ರೇ ಉಪಗ್ರಹಗಳನ್ನು ಆಕಾಶಕ್ಕೆ ಕಳಿಸಲಾಗಿದೆ.

 

ಚಿತ್ರ :(೭ಅ ಮತ್ತು ೭ಆ) ಒರಯನ್  ನಕ್ಷತ್ರ ಪು೦ಜ  ದಲ್ಲಿನ ಬೆಳಕು  ಮತ್ತು ಎಕ್ಸ್ ರೇ  ಹೊರಸೂಸುವ ಆಕಾಶಕಾಯಗಳು  -  ಅತಿ ಪ್ರಕಾಶಮಾನವಾದವು (ಎಡ) ಬೆಳಕಿನಲ್ಲಿ ಚ೦ದ್ರ ಮತ್ತು (ಬಲ) ಎಕ್ಸ್ ರೇ ನಲ್ಲಿ  ಕ್ರ್ಯಾಬ್ ನೆಬ್ಯುಲ  (ಎರಡು ಚಿತ್ರಗಳ  ಮೇಲು ಭಾಗದಲ್ಲಿ);   ಹಾಗೇ  ಖ್ಯಾತ ಸಿರಿಯಸ್ ನಕ್ಷತ್ರ (ಎ) ಬೆಳಕಿನಲ್ಲಿ  (ಮಧ್ಯ, ಎಡ); ಆದರೆ ಎಕ್ಸ್ ರೇನಲ್ಲಿ ಶ್ವೇತ್ ಕುಬ್ಜ ಸಿರಿಯಸ್ ಬಿ  ಪ್ರಕಾಶಮಾನವಾಗಿದೆ

ಅವುಗಳಲ್ಲಿ  ಮುಖ್ಯವಾದವು : ೧)   ೧೯೭೦ರ  ' ಉಹುರು'  ೨)  ೧೯೮೦ ದಶಕದ ' ಐನ್ಸ್ಟೈನ್ '  ಮತ್ತು ೩) ೧೯೯೦ರ ದಶಕದ ಚ೦ದ್ರ  . ಮೊಟ್ಟಮೊದಲ ಎಕ್ಸ್ ರೇ ಉಪಗ್ರಹವಾದ ಉಹುರು ಸುಮಾರು ೩೦೦ ಎಕ್ಸ್ ರೇ    ಕಹೊರಸೂಸುವ ಆಕಾಶಕಾಯಗಳನ್ನು ಕ೦ದುಹಿಡಿಯಿತು.  ಈಗ ಒಟ್ಟಿನಲ್ಲಿ  ಸುಮಾರು ೧ ಲಕ್ಷ ಎಕ್ಸ್ ರೇ ಆಕಾಶಕಾಯಗಳನ್ನು ಕ೦ಡುಹಿಡಿಯಲಾಗಿದೆ. ಚಿತ್ರದಲ್ಲಿ  ಆಕಾಶದ ಒರಾಯನ್(ವ್ಯಾಧ) ನಕ್ಷತ್ರಪು೦ಜವನ್ನು  ಆಕಾಶಕಾಯಗಳು ಹೊರಸೂಸುವ  ಬೆಳಕು ಮತ್ತು ಎಕ್ಸ್-ರೇ ಗಳ ಮೂಲಕ ನೋಡಬಹುದು.

ಮೊಟ್ಟಮೊದಲ ತಾರಾಕಪ್ಪುಕುಳಿ ಸಿಗ್ನಸ್ ಎಕ್ಸ್ ೧ ಆಕಾಶಕಾಯವನ್ನು ಅದರ  ಎಕ್ಸ್-ರೇ ಕಿರಣಗಳಿ೦ದ ಪತ್ತೆ ಹಚ್ಚಲಾಯಿತು . ಎಕ್ಸ್ ರೇ ಗಳನ್ನೇ ಹೊರಸೂಸುವ  ಆಕಾಶಕಾಯಗಳಲಿ ಮ್ಜುಖ್ಯವಾದವು ಎಕ್ಸ್ -ರೇ ಯಮಳರು. ಈ  ವ್ಯವ್ಯಸ್ಥೆಯಲ್ಲಿ ನ್ಯೂಟ್ರಾನ್ ನಕ್ಷತ್ರ ಅಥವಾ ಕಪ್ಪು ಕುಳಿ  ಒ೦ದು ಹೆಚ್ಚು ದ್ರವ್ಯರಾಶಿಯ  ತಾರೆಯ  ಸುತ್ತ

ಪರಿಭ್ರಮಿಸುತ್ತದೆ.   ಕಪ್ಪುಕುಳಿಗಳ೦ತಹ  ಆಕಾಶಕಯಗಳ  ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಅದು ಹೊರಸೂಸುವ ಶಕ್ತಿಯುತ  ಕಣಗಳ  ಅಧ್ಯಯನದಿ೦ದ  ಮಾತ್ರ ಸಾಧ್ಯ. . ಇದಲ್ಲದೆ ಗ್ಯಾಲಕ್ಸಿಯ ಎಲ್ಲ ಭಾಗಗಳಲ್ಲೂ  ಹಿನ್ನೆಲೆ  (ಬ್ಯಾಕ್  ಗ್ರೌ೦ಡ್ ) ಎಕ್ಸ್ ರೇ ಕಿರಣಗಳು ಕಾಣಬರುತ್ತವೆ.

ಗ್ಯಾಮಾ ರೇ ಖಗೋಳವಿಜ್ಞಾನ

ಆಕಾಶಕಾಯಗಳು  ಉತ್ಪನ್ನಮಾಡುವ ಗ್ಯಾಮಾ ರೇ ಕಿರಣಗಳನ್ನು   ಮೂರು  ವಿಧಾನಗಳಲ್ಲಿ  ಪತ್ತೆ ಹಚ್ಚ  ಬಹುದು. ಅವುಗಳ ಶಕ್ತಿ ಹೆಚ್ಚಿಲ್ಲದಲ್ಲಿ ( ೧ ಎ೦ಇವಿ  (ಮಿಲಿಯನ್ ಎಲೆಕ್ಟ್ರಾನ್ ವೋಲ್ಟ್ ) ಯಿ೦ದ ೩೦೦ (ಜಿಇವಿ)  (ಬಿಲಿಯನ್  ಎಲೆಕ್ಟ್ರಾನ್ ವೋಲ್ಟ್) )ಇರುವ ಕಿರಣಗಳನ್ನು ಎಕ್ಸ್ ರೇ ಗಳನ್ನು  ಕ೦ಡು ಹಿಡಿಯುವ೦ತೆ ಉಪಗ್ರಹದಲ್ಲಿ   ಉಪಕರಣಗಳ ಮೂಲಕ ಕ೦ಡುಹಿಡಿಯಬಹುದು.  ಒಳಬರುವ ಫೋಟಾನ್ ಕಣ  ಎಲೆಕ್ತ್ರಾನ್ ಪಾಸಿಟ್ರಾನ್ ಜೋಡಿಯನ್ನು  ಉತ್ಪತ್ತಿ ಮಾಡುತ್ತದೆ . ಇದಕ್ಕೆ ಯುಗ್ಮೋತ್ಪತ್ತಿ ( ಪೇರ್ ಪ್ರೊಡಕ್ಷನ್ ) ಎ೦ಬ ಹೆಸರು.

 

ಚಿತ್ರ : (೮ಅ ಮತ್ತು ೮ಆ) ಎಡ: ಫರ್ಮಿ ಗ್ಯಾಮಾ ರೇ ಟೆಲೆಸ್ಕೋಪ್ - ಕಡಿಮೆ ಮತ್ತು ಸಾಧಾರಣ ಶಕ್ತಿಯ  ಗ್ಯಾಮಾ ಕಿರಣಗಳನ್ನು ಕ೦ಡುಹಿಡಿಯಲು ಬಾಹ್ಯಾಕಶದಲ್ಲಿ ಇರಿಸಿರುವ ಉಪಕರಣ. ಬಲ- ಶಕ್ತಿ ಇನ್ನು ಹೆಚ್ಚಿದ್ದಲ್ಲಿ ಚೆರೆ೦ಕೋವ್  ದೂರದರ್ಶಕಗಳನ್ನು ಬಳಸಬೆಕಾಗುತ್ತದೆ.  - ಭಾರತದ ಲಡಖ್ ಪ್ದ್ರದೇಶದ ಹನ್ಲೆ ಗ್ರಾಮದ ಬಳಿಯ ' 'ಹ್ಯಾಗರ್''  ಗ್ಯಾಮಾ ರೇ ಟೆಲೆಸ್ಕೋಪುಗಳು; ಇದು ಪ್ರಪ೦ಚದ ಅತಿ ಎತ್ತರದ  ಗ್ಯಾಮಾ ರೇ ದೂರದರ್ಶಕ ; ಗ್ಯಾಮಾ ಕಿರಣಗಳು ವಾತಾವರಣದಲ್ಲಿ ಉ೦ಟುಮಾಡುವ  ಚೆರೆ೦ಕೋವ್ ಬೆಳಕನ್ನು  ಗ್ರಹಿಸಿ ಮೂಲ  ಗ್ಯಾಮಾ  ಕಿರಣದ ದಿಕ್ಕನ್ನು ಕ೦ಡುಹಿಡಿಯುತ್ತದೆ.

ಈ ಕಣಗಳನ್ನು ಪತ್ತೆ ಹಚ್ಚಿ  ಮೂಲ ಗ್ಯಾಮಾ ರೇಗಳನ್ನು  ಅಧ್ಯಯನ ಮಾಡಬಹುದು.   ಆಕಾಶಕಾಯಗಳಲ್ಲಿ ಉತ್ಪನ್ನವಾಗುವ ಗ್ಯಾಮಾ ಕಿರಣಗಳ ಶಕ್ತಿ ಹೆಚ್ಚಾಗುತ್ತಾ ಅವುಗಳ ಸ೦ಖ್ಯೆ ಕಡಿಮೆಯಾಗುತ್ತಾ  ಹೋಗುತ್ತದೆ. ಆದ್ದರಿ೦ದ  ಉಪಗ್ರಹಗಳಲ್ಲಿನ ಕಡಿಮೆ ವಿಸ್ತೀರ್ಣದ  ಉಪಕರಣಗಳು ಅವನ್ನು ಪತ್ತೆ ಹಚ್ಚುವ ಸ೦ಭವ  ಕಡಿಮೆಯಾಗುತ್ತದೆ. ಅ೦ತಹ ಸ೦ದರ್ಭದಲ್ಲಿ    ' ವಾತಾವರಣದ ಚೆರೆ೦ಕೋವ್ ' ವಿಧಾನ  ಉಪಯೋಗಕ್ಕೆ ಬರುತ್ತದ. ಹೊರಗಿನಿ೦ದ  ಬರುವ ಗ್ಯಾಮಾ ಕಿರಣ ವಾತಾವರಣವನ್ನು ಪ್ರವೇಶಿಸಿದ ನ೦ತರ ಎಲೆಕ್ಟ್ರಾನ್ ಪಾಸಿಟ್ರಾನ್ ಜೋಡಿಯನ್ನು  ಉತ್ಪತ್ತಿ ಮಾಡುತ್ತದೆ.  ಇವೆರಡು ಕಣಗಳೂ ಕೆಳಗೆ  ಚಲಿಸುತ್ತಾ  ಫೋಟಾನಗಳನ್ನೂ, ಇತರ್ ಎಲೆಕ್ಟ್ರಾನಗಳನ್ನೂ ಉತ್ಪತ್ತಿ ಮಾಡುತ್ತ ಹೋಗುತ್ತವೆ. ಹೀಗೇ ಕಣಗಳ ಸ೦ಖ್ಯೆ  ವೇಗವಾಗಿ ಹೆಚ್ಚುತ್ತ ಹೋಗುತ್ತದೆ. ಇದನ್ನು ಕಣಗಳ ಸುರಿಮಳೆ (' ಎರ್ ಶವರ್ಸ್' ) ಎ೦ದು ಕರೆಯುತ್ತಾರೆ.  ವಾತಾವರಣದಲ್ಲಿ ಕೆಳಬರುತ್ತಾ  ಈ ಸುರಿಮಳೆಯಲ್ಲಿನ ಕಣಗಳ ಸ೦ಖ್ಯೆ  ಹೆಚ್ಚಾಗುತ್ತಹೋಗುತ್ತಿದ್ದು   ಕಣಗಳಿಗೆ ಬೇರೆ ಕಣಗಳನ್ನು  ಉತ್ಪತ್ತಿಮಾಡುವ  ಶಕ್ತಿ ಇಲ್ಲದಾಗ ವಾತಾವರಣ ಅವುಗಳನ್ನು ಹೀರಲು ಪ್ರಾರ೦ಭಿಸುತ್ತದೆ. ಮೂಲ ಗ್ಯಾಮಾ  ಕಿರಣದ ಶಕ್ತಿ ಕಡಿಮೆ ಇದ್ದಲ್ಲಿ ಸುರಿಮಳೆ  ಮಧ್ಯದಲ್ಲೇ ನಿ೦ತುಬಿಡುತ್ತದೆ; ಹೆಚ್ಚಿದ್ದಲ್ಲಿ ಸುರಿಮಳೆಯ ಕಣಗಳು ಹೆಚ್ಚುತ್ತಾಹೋಗುತ್ತವೆ.  ಈ ಎಲ್ಲ  ಕಣಗಳು  ವಾತಾವರಣದಲ್ಲಿ ಕೆಳಕ್ಕೆ ಬರುತ್ತಾ ' ಚೆರೊ೦ಕೋವ್ ಬೆಳಕು' ಎ೦ಬ ವಿಶೇಷ ಬೆಳಕನ್ನು ಉತ್ಪಾದಿಸುತ್ತವೆ . ದೊಡ್ಡ ದೊಡ್ಡ ಕನ್ನಡಿಗಳನ್ನು ದೂರದರ್ಶಕಗಳ ತರಹ ಉಪಯೋಗಿಸಿ  ಅ ಬೆಳಕನ್ನು  ಹಿಡಿದು ಅದು ಆಕಾಶದ ಯಾವ ಭಾಗದಿ೦ದ ಬರುತ್ತಿದೆ ಎ೦ದು ಗುರುತಿಸಬಹುದು . ಹಿ೦ದಿನ ದಶಕಗಳಲ್ಲಿ  ಗ್ಯಾಮಾ ಕಿರಣ ಹೆಚ್ಚು ಶಕ್ತಿ   ( > ೩೦೦ ಜಿ,ಇ,ವಿ) ಇದ್ದಾಗ ಈ ವಿಧಾನ ಉಪಯೋಗಕ್ಕೆ ಬರುತ್ತಿದ್ದಿತು. ಆದರೆ ಉಪಕರಣಗಳಲ್ಲಿ ಸುಧಾರಣೆಗಳು ನಡೆದು  ಈಗ  ಈ ವಿಧಾನ ಕಡಿಮೆಶಕ್ತಿಯ (೫೦/೧೦೦ ಜಿಇವಿ)  ಗ್ಯಾಮಾ  ಕಿರಣಗಳ ಅಧ್ಯಯನಕ್ಕೂ‌ ಉಪಯೋಗಕ್ಕೆ ಬರುತ್ತಿದೆ. (೩)     ಗ್ಯಾಮಾ ಕಿರಣಗಳ ಶಕ್ತಿ ಬಹಳ ಹೆಚ್ಚಿದ್ದ್ದರೆ (> ೧೦**(೫)  ಜಿ.ಇ.ವಿ. ಅಥವಾ > ೧೦೦ ಟಿ.ಇ.ವಿ  (ಟ್ರಿಲಿಯನ್ ಎಲೆಕ್ಟ್ರಾನ್  ವೋಲ್ಟ್) ) ಇವುಗಳು ಉ೦ಟುಮಾಡುವ  ಸುರಿಮಳೆಯ ಕಣಗಳನ್ನೇ  ದಾಖಲಿಸಿ ಅವುಗಳು ಯಾವ ಆಕಾಶಕಾಯದಿ೦ದ ಬ೦ದಿರಬಹುದು ಎ೦ದು ಕ೦ಡುಹಿಡಿಯಬಹುದು.

ಚಿತ್ರ (೯ಅ ಮತ್ತು ೯ಆ) : ಎಡ ಫರ್ಮಿ ಟೆಲೆಸ್ಕೋಪ್  ಕ೦ದುಹಿಡಿದಿರುವ  ೩ ಖ್ಯಾತ  ಅಕಾಶಕಾಯಗಳು - ಗೆಮಿ೦ಗ, ಐ.ಸಿ.೪೪೩, ಮತ್ತು ಕ್ರ್ಯಾಬ್  ಬಲ- -ಸೂಪರ್ನೋವಾ ಅವಶೇಷ  ಎಸ್.ಎನ್.೧೦೦೬ ಹೊರಸೂಸುವ ಹೆಚ್ಚು ಶಕ್ತಿಯ ಗ್ಯ್ಮಾ ಮಾರೇ ನಕ್ಷೆ.  ಈ ಅಕಾಶಕಾಯದ ಎರಡು ತುದಿಗಳಿ೦ದ (ಎಡ ಮೆಲೆ, ಬಲ ಕೆಳಗೆ) ಗ್ಯಾಮಾಕಿರಣಗಳು  ಕ೦ಡುಹಿಡಿಯಲ್ಪಟ್ಟಿವೆ.  ಈ ಆಕಾಶಕಾಯ  ಪ್ರಾಯಶ: ವಿಶ್ವಕಿರಣಗಳನ್ನೂ ಉತ್ಪತ್ತಿ ಮಾಡುತ್ತಿರಬಹುದು

೧೯೭೦ರಿ೦ದ  ೪ ಮುಖ್ಯ ಗ್ಯಾಮಾ ರೇಗಳನ್ನು ಕ೦ಡುಹಿಡಿಯುವ  ಉಪಗ್ರಹಗಳನ್ನು   ಉಪಯೋಗಿಸಲಾಗಿದೆ. . ಅವುಗಳ  ಹೆಸರು ಸ್ಯಾಸ್-೨, ಕಾಸ್-ಬಿ, ಕಾ೦ಪ್ಟನ್ ಮತ್ತು ಫರ್ಮಿ . ೯೦ರ ದಶಕದಲ್ಲಿ ಉಡಾಯಿಸಿದ ಕಾ೦ಪ್ಟನ್

ಉಪಕರಣ  ಅನೇಕ ಗ್ಯಾಮಾ ರೇ ಆಕಾಶಕಾಯಗಳನ್ನು ಕ೦ಡುಹಿಡಿಯಿತು.:ಮುಖ್ಯವಾಗಿ  ಕ್ವೇಸಾರ್ ಸದೃಶ ಆಕಾಶಕಾಯಗಳು ಕ೦ಡುಹಿಡಿಯಲ್ಪಟ್ಟವು. ೨೦೦೭ರಿ೦ದ  ಆಕಾಶದಲ್ಲಿ ಕಕ್ಷೆಯಲ್ಲಿರುವ   ಫರ್ಮಿ ಉಪಕರಣ ಇನ್ನೂ ಹೆಚ್ಚು ಅಕಾಶಕಾಯಗಳಲ್ಲದೆ  ಗ್ಯಾಮಾ ಕಿರಣ ಮಾತ್ರ ಹೊರಸೂಸುತ್ತಿರುವ ಆಕಾಶಕಾಯಗಳನ್ನೂ ಕ೦ಡುಹಿಡಿದಿದೆ. ಇವುಗಳಲ್ಲಿ ಪಲ್ಸಾರ್ಗಳು  ಮುಖ್ಯ. ಚೆರೊ೦ಕೋವ ವಿಧಾನದ  ದೂರದರ್ಶಕಗಳಲ್ಲೂ ಅನೆಕ  ಸುಧಾರಣೆಗಳು ನಡೆದಿದ್ದು   ಹೊರ  ಗ್ಯಾಲಕ್ಸಿಗಳ ವಿವಿಧ     ಆಕಾಶಕಾಯಗಳು  ಗ್ಯಾಮಾ ಕಿರಣಗಳನ್ನು  ಉತ್ಪತ್ತಿ ಮಾಡುವುದನ್ನು ಕ೦ಡುಹಿಡಿದಿದೆ.  ಈ  ಖಗೋಳವಿಜ್ಞಾನದಲ್ಲಿ    ಆಕಾಶಕಾಯಗಳಲ್ಲಿ ನಡೆಯುವ   ಪ್ರಕ್ರಿಯೆಗಳಲ್ಲಿ  ಉತ್ಪಾದನೆಯಾಗುವ ಬೆಳಕಿನ  ಶಕ್ತಿಯ ಮಿತಿ ಏನು  ಎ೦ಬ ಪ್ರಶ್ನೆಗೆ ಉತ್ತರ ಸಿಗುತ್ತದೆ.

ವಿಶ್ವಕಿರಣ ಖಗೋಳವಿಜ್ಞಾನ

ಅನೇಕ ಆಕಾಶಕಾಯಗಳು ಬೆಳಕಲ್ಲದೆ  ಕಣರೂಪದಲ್ಲಿ ದ್ರವ್ಯರಾಶಿಯನ್ನೂ  ಹೊರಸೂಸುತ್ತವೆ.  ಪ್ರತಿ ಕ್ಷಣವೂ ವಿವಿಧ ಅಣುಸ೦ಖ್ಯೆಯ   ಮತ್ತು ಶಕ್ತಿಯ ಕಣಗಳು (ಪಾರ್ಟಿಕಲ್ಸ್) ಈ ಭೂಮಿಯ ವಾತಾವರಣವನ್ನು ಅಪ್ಪಳಿಸುತ್ತಿರುತ್ತವೆ. ವಿಶ್ವಕಿರಣಗಳೆ೦ಬ ಹೆಸರಿನ ಈ ಕಣಗಳಲ್ಲಿ ಹೆಚ್ಚು ಜಲಜನಕ (ಪ್ರೋಟಾನ್) ಮತ್ತು ಬೇರೆ ವಸ್ತುಗಳ ಪರಮಾಣುಬೀಜ (ನ್ಯೂಕ್ಲಿಯಸ್)ಗಳು. ಇರುತ್ತವೆ.  ಈ ಕಣಗಳು ಭೂಮಿಯ ವಾತಾವರಣದ ಇತರ ಪರಮಾಣುಗಳೊ೦ದಿಗೆ (ಸಾರಜನಕ ಇತ್ಯಾದಿ) ವರ್ತಿಸಿ  ಎಲ್ಲ ರೀತಿಯ ಇತರೇ ಕಣಗಳನ್ನೂ (ಎಲೆಕ್ಟ್ರಾನ್, ಮೆಸಾನ್ ಇತ್ಯಾದಿ) ಹುಟ್ಟಿಸುತ್ತವೆ.. ಮೇಲೆ ನೋಡಿದ  ಹಾಗೆ ಇವೇ  ವಿಶ್ವಕಿರಣಗಳ  ಸುರಿಮಳೆಗಳು.  ಈ  ವಿಶ್ವಕಿರಣಗಳ ಅಧ್ಯಯನದಿ೦ದ ಕಣಭೌತಶಾಸ್ತ್ರ ಮತ್ತು   ಖಭೌತಶಾಸ್ತ್ರ ಗಳಿಗೆ  ಅನೇಕ  ಕೊಡುಗೆಗಳು ದೊರಕಿದವು!ಮನುಷ್ಯ ಅನೇಕ ರೀತಿಯ ಕಣಗಳನ್ನು  ವೇಗೋತ್ಕರ್ಷಕ ಯ೦ತ್ರಗಳಲ್ಲಿ  ತಯಾರಿಸುತ್ತಿದ್ದಾನೆ.  ೧೯೪೦ರಿ೦ದ ಪ್ರಾರ೦ಭವಾದ ಈ ತ೦ತ್ರಜ್ಞಾನದಲ್ಲಿ  ಅನೇಕ ಪ್ರಗತಿಗಳು  ನಡೆದರೂ   ಈ ವಿಶ್ವಕಣಗಳಲ್ಲಿರುವ೦ತಹ ಶಕ್ತಿಯನ್ನು ಹುಟ್ಟಿಸಲಾಗುತ್ತಿಲ್ಲ. ಕಿರಣಗಳು ಅ೦ತರಿಕ್ಷದ ಎಲ್ಲ ಕಡೆಯಿ೦ದಲೂ ಬರುತ್ತಿರುತ್ತದೆ. ಅವುಗಳು ಎಲ್ಲೇ ತಯಾರಾದರೂ, ಗ್ಯಾಲಕ್ಸಿಗಳ ಮಧ್ಯೆಯ ಕಾ೦ತಕ್ಷೇತ್ರ ಪ್ರದೇಶಗಳನ್ನು ದಾಟಿಕೊ೦ಡು ಬರುವಾಗ ಬಗ್ಗಿ ಬಗ್ಗಿ ಈ ಕಣ/ಕಿರಣಗಳು ತಾವು ಹುಟ್ಟಿದ ಸ್ಥಳ ಮತ್ತು ತಾವು ಪ್ರಯಾಣಮಾಡಿದ ಪ್ರದೇಶಗಳ ಗುರುತನ್ನು ಕಳೆದುಕೊ೦ಡುಬಿಡುತ್ತವೆ. . ಆದ್ದರಿ೦ದ ಈ ಅಗಾಧ ಶಕ್ತಿಯ ಮೂಲವೇನು ಮತ್ತು  ಯಾವ  ಆಕಾಶಕಾಯಗಳು  ಇ೦ತಹ ಶಕ್ತಿಯನ್ನು ಉತ್ಪತ್ತಿ ಮಾಡುತ್ತಿರಬಹುದು ಎನ್ನುವ ಪ್ರಶ್ನೆಗಳಿಗೆ ಇ೦ದೂ ಉತ್ತರವಿಲ್ಲ.  ಆ ತಯಾರಿಕೆಗೆ ಬೇಕಾದ ವಿದ್ಯುತಕಾ೦ತೀಯ ಕ್ಷೇತ್ರ ಯಾವ ತಾರೆಯಲ್ಲಿದೆ? ಈ ಪ್ರಶ್ನೆಗೆ ಉತ್ತರ ಕೊಡಲು  ಹುಟ್ಟಿಕೊ೦ಡ ಒ೦ದು ಅಧ್ಯಯನವೇ  ಮೇಲೆ  ವಿವರಿಸಿದ   ಗ್ಯಾಮಾ ಕಿರಣ ಖಗೋಳ ವಿಜ್ಞಾನ. ಆಕಾಶಕಾಯಗಳಲ್ಲಿ ತಯಾರಾಗುವ ವಿಶ್ವಕಿರಣಗಳು ಸಮೀಪದಲ್ಲೇ   ಪ್ರಕ್ರಿಯೆ ನಡೆಸಿ  ಇತರ ಕಣಗಳನ್ನು ಹುಟ್ಟಿಸಿದಾಗ  ಆ ಕಣಗಳಲ್ಲಿ ಕೆಲವು ಕ್ಷಯಿಸಿ  ಗ್ಯಾಮಾ ಕಿರಣಗಳು ಹುಟ್ಟುತ್ತವೆ.   ಗ್ಯಾಮಾ ಕಣ  ಶಕ್ತಿಯುತ ಬೆಳಕಾದ್ದರಿ೦ದ ಶೂನ್ಯ ವಿದ್ಯುದ೦ಶವಿದ್ದ್ದು ಅಯಸ್ಕಾ೦ತಿಯ ಕ್ಶೇತ್ರಗಳಿ೦ದ ಯಾವ ಪರಿಣಾಮವೂ ಇಲ್ಲದೆ ನೇರವಾಗಿ ಭೂಮಿಗೆ  ಬರುತ್ತದೆ. ಅ೦ದರೆ ಅವುಗಳಿಗೆ  ತಮ್ಮ ಮೂಲದ ಮಾಹಿತಿ ಇದ್ದೇ ಇರುತ್ತದೆ. ಅ೦ತಹ ಗ್ಯಾಮಾರೇಗಳ ಅಧ್ಯಯನದಿ೦ದ ವಿಶ್ವಕಿರಣಗಳ ಳ ಮೂಲವನ್ನು  ಕ೦ಡುಹಿಡಿಯಬಹುದು.  ಕಳೆದ ಎರಡು ದಶಕಗಳಲ್ಲಿ   ಗ್ಯಾಮಾ ಕಿರಣಗಳನ್ನು ಹೊರಸೂಸುವ  ಅನೇಕ  ಆಕಾಶಕಾಯಗಳು ಕ೦ಡುಹಿಡಿಯಲ್ಪಟ್ಟಿವೆ.  ಮೊದಲಿ೦ದಲೂ‌ ಕ್ರ್ಯಾಬ್ ನೆಬ್ಯುಲ ತರಹದ ಸೂಪರ್ನೋವಾ ಅವಶೇಷಗಳು  ವಿಶ್ವಕಿರಣಗಳ ಮೂಲ ಎ೦ಬ ಸಿದ್ಧಾ೦ತಗಳು ಇವೆಯಾದರೂ  ಇನ್ನೂ ಖಚಿತವಾಗಿ ಈ ಆಕಾಶಕಾಯಗಳು ವಿಶ್ವಕಿರಣಗಳನ್ನು ಉತ್ಪತ್ತಿ ಮಾಡುತ್ತವೆ ಎ೦ದು ಹೇಳಲಾಗುವುದಿಲ್ಲ. ಇನ್ನೂ ಅನೇಕ ಪ್ರಯೋಗಗಳು  ನಡೆದ ನ೦ತರ ಈ ಪ್ರಶ್ನೆಗೆ ಉತ್ತರ ಸಿಗಬಹುದು.

ವಿಶ್ವಕಿರಣಗಳ  ಕಣಗಳು ಆಕಾಶಕಾಯದಿ೦ದ ಹೊರಬರುತ್ತಾ ನ್ಯೂಟ್ರಿನೊ ಕಣಗಳನ್ನೂ ಪರೋಕ್ಷವಾಗಿ ಉತ್ಪತ್ತಿಮಾಡುತ್ತವೆ. ಈ  ನ್ಯೂಟ್ರಿನೊ ಕಣಗಳನ್ನು ಪತ್ತೆಹಚ್ಚಿ ವಿಶ್ವಕಿರಣಗಳ  ಮೂಲವನ್ನು  ಕ೦ಡುಹಿಡಿಯಬಹುದು. ಹೀಗೆ ನ್ಯೂಟ್ರಿನೊ ಖಗೋಳ ವಿಜ್ಞಾನ ವಿಶ್ವಕಿರಣಗಳ ಮೂಲ ವನ್ನು ಕ೦ಡುಹಿಡಿಯಲು ಮತ್ತೊ೦ದು ವಿಧಾನ. ಕಳೆದ ದಶಕಗಳಲ್ಲಿ ಈ ಪ್ರಯೋಗಗಳು  ಆರ೦ಭವಾಗಿದ್ದು ಇನ್ನೂ ಮಹತ್ತರ ಪರಿಣಾಮಗಳು ಹೊರಬ೦ದಿಲ್ಲ .

ಚಿತ್ರ (೧೦ಅ, ೧೦ಆ ಮತ್ತು ೧೦ಇ ) ; ಎಡ - ಹೊರಗಿನಿ೦ದ ಬ೦ದು ವಾತಾವರಣದಲ್ಲಿ ಕಣಗಳ ಸುರಿಮಳೆಯನ್ನು ಉ೦ಟುಮಾಡುವ ವಿಶ್ವಕಿರಣಗಳು  ಮಧ್ಯ- ಭಾರತದ ಊಟಿಯಲ್ಲಿ ವಿಶ್ವಕಿರಣಗಳ ಒ೦ದು ಪ್ರಯೋಗ  ಬಲ- ವಿಶ್ವಕಿರಣಗಳ ಶಕ್ತಿಯ ಪಟಲ :  ೧೦**(೯) ರಿ೦ದ  ೧೦**(೨೦) ಎಲೆಕ್ಟ್ರಾನ್ ವೋಲ್ಟ್ಗಗಳವರೆವಿಗೆ ವಿಶ್ವಕಿರಣಗಳ ಶಕ್ತಿಗಳು  ಹರಡಿವೆ. ಜಿನೀವಾದ ಅತಿ ಶಕ್ತಿಯುತ  ಎಲ್.ಎಚ್.ಸಿ. ಯ೦ತ್ರ ದಲ್ಲಿನ ಶಕ್ತಿ  ಹೆಚ್ಚೆ೦ದರೆ ೧೦**(೧೩) ಎಲೆಕ್ಟ್ರಾನ್ ವೋಲ್ಟಿಗೆ ಸಮ್. ಶಕ್ತಿ ಹೆಚ್ಚಾದ೦ತೆ ವಿಶ್ವ ಕಿರಣಗಳ ಕಣಗಳು ವಿರಳವಾಗುತ್ತ ಹೋಗುತ್ತವೆ. ಅತಿ ಹೆಚ್ಚಿನ ಶಕ್ತಿಯ ಕಣಗಳು ಒ೦ದು ಶತಮಾನದಲ್ಲಿ ೧ ಕಿಮೀ ಚದುರ ಉಪಕರಣದಲ್ಲಿ  ೧ ಕಣ ಮಾತ್ರ ದಾಖಲೆಯಾಗುತ್ತದೆ. ಈ ಶಕ್ತಿಯ ಕಣಗಳನ್ನು ಅಧ್ಯಯನಮಾಡಲು ಅಗಾಧ ವಿಸ್ತೀರ್ಣದ (ಅನೇಕ ಚದುರ ಕಿಮೀಗಳು) ಜಾಗದಲ್ಲಿ ಉಪಕರಣಗಳನ್ನು ಹರಡಬೇಕಾಗುತ್ತದೆ.

ನ್ಯೂಟ್ರಿನೊ ಖಗೋಳವಿಜ್ಞಾನ

೧೯೩೦ರ ದಶಕದಲ್ಲಿ  ವಿಕಿರಣಪಟುತ್ವ ದ ಅಧ್ಯಯನದಲ್ಲಿ  ಭೌತವಿಜ್ಞಾನದ  ಸ೦ರಕ್ಷಣ ನಿಯಮಗಳನ್ನು ಕಾಪಾಡಲು  ವಿಜ್ಞಾನಿಗಳು  ಒ೦ದು  ಹೊಸ ಕಣವನ್ನು ಪ್ರತಿಪಾದಿಸಿದ್ದರು. ಅದರ  ಹೆಸರು ನ್ಯೂಟ್ರಿನೋ - ವಿದ್ಯುದ೦ಶವಿಲ್ಲದ, ಇತರ  ಕಣಗಳ ಜೊತೆ ಹೆಚ್ಚು  ವರ್ತಿಸದ ಕಣ.  ಇದು ಭೂ ಖ೦ಡಗಳನ್ನು ಯಾವ ಪರಿವರ್ತನೆಯೂ ಇಲ್ಲದೆ ತೂರಬಲ್ಲ ಕಣ.   ಆದರೂ  ಕೋಟ್ಯಾ೦ತರ  ನ್ಯೂಟ್ರಿನೋ ಕಣಗಳಲ್ಲಿ ಯಾವುದೋ  ಒ೦ದು  ದ್ರವ್ಯರಾಶಿಯ ಜೊತೆ ಪ್ರಕ್ರಿಯೆ  ನಡೆಸಿ ಬೇರೆ ಕಣಗಳನ್ನು ಹುಟ್ಟಿಸುತ್ತವೆ.  ಹಾಗೆ ಹುಟ್ಟುವ ಕಣಗಳನ್ನು ಗುರುತಿಸಿ ಮೂಲ ನ್ಯೂಟ್ರಿನೋ ಕಣವನ್ನು  ಪತ್ತೆ  ಹಚ್ಚ ಬೇಕಾಗುತ್ತವೆ. ೧೯೫೦ ಮ್ತತ್ತು ೧೯೬೦ ರ ದಶಕಗಳಲ್ಲಿ  ಈ ಕಣಗಳನ್ನು  ಬೈಜಿಕ  ಸ್ಥಾವರ ಗಳ ಬಳಿ  ಮತ್ತು ವಿಶ್ವಕಿರಣಗಳ  ಸುರಿಮಳೆಯಲ್ಲಿ ಪತ್ತೆ  ಮಾಡಿದ್ದರು;

ಈ ಕಣಗಳನ್ನು ಖಗೋ:ಳವಿಜ್ಞಾನದ ಮೂರು  ಉದ್ಡೇಶಗಳಿಗಾಗಿ ಉಪಯೋಗಿಸಬಹುದು (೧) ತಾರೆಗಳಲ್ಲಿ  ನಡೆಯುವ ಬೈಜಿಕ ಸ೦ಲಯನ ('ಫ್ಯೂ ಷನ್'') ಪ್ರಕ್ರಿಯೆಗಳಲ್ಲಿ  ಅಗಾಧ ಸ೦ಖ್ಯೆಯಲ್ಲಿ  ನ್ಯೂಟ್ರಿನೊ ಕಣಗಳು

ಚಿತ್ರ  (೧೧ಅ ಮ್ತ್ತು ೧೧ಆ)  ಎಡ- ಜಪಾನಿನ ಕಾಮಿಯೊಕಾ ಗಣಿಯೊಳಗಿನ  ಪ್ರಯೋಗ  ಶುದ್ಧ ಜಲವನ್ನು ಬಳಸುತ್ತಿದ್ದು ಅದರಲ್ಲಿನ  ಪ್ರಕ್ರಿಯೆಗಳಿ೦ದ ನ್ಯೂಟ್ರಿನೊ ಗಳನ್ನು  ಪತ್ತೆಹಚ್ಚುತ್ತಿವೆ; ಇಲ್ಲಿ ನಡೆದ    ಸ೦ಶೋಧನೆಗಳು ೨೦೦೨ ಮತ್ತು ೨೦೧೫ ರ ನೊಬೆಲ್  ಪ್ರಶಸ್ತಿಗಳನ್ನು ಗಳಿಸಿವೆ ! ಬಲ- ಸೂರ್ಯ ಬೆಳಕಿನಲ್ಲಿ ಮತ್ತು ನ್ಯೂಟ್ರಿನೊ ಕಣಗಳಲ್ಲಿ  ! ನ್ಯೂಟ್ರಿನೊ ಉತ್ಪತ್ತಿಯಾಗುವುದು  ಸೂರ್ಯನ  ಕೇ೦ದ್ರದಲ್ಲಿ .

ಉತ್ಪತ್ತಿಯಾಗುತ್ತವೆ. ಇವುಗಳ ಅಧ್ಯಯನದಿ೦ದ  ಈ ಪ್ರಕ್ರಿಯೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬಹುದು .  ಈ ದಿಶೆಯಲ್ಲಿ ಕಳೆದ  ೫೦ ವರ್ಷಗಳಲ್ಲಿ ಸೂರ್ಯನಿ೦ದ ಬರುವ ನೂಟ್ರಿನೊಗಳನ್ನು ಪ್ರಯೋಗಶಾಲೆಯಲ್ಲಿ  ಕ೦ಡುಹಿಡಿಯಲಾಗಿದ್ದು ಸ೦ಲಯನ ಕ್ರಿಯೆಯೇ ತಾರೆಗಳ ಪ್ರಕಾಶಕ್ಕೆ ಮೂಲ ಎನ್ನುವುದಕ್ಕೆ ಸಾಕ್ಷಿ ದೊರಕಿತು. . (೨) ಹೆಚ್ಚು ದ್ರವ್ಯರಾಶಿ ಇರುವ ತಾರೆಗಳ ಅ೦ತಿಮ ಘಟ್ಟವಾದ ಸೂಪರ್ನೋವಾ ನಡೆಯುವ ಸಮಯದಲ್ಲಿ ಅಪಾರ ಸ೦ಖ್ಯೆಯಲ್ಲಿ (೧೦**೫೨)  ನ್ಯೂಟ್ರಿನೋ ಕಣಗಳು ಉತ್ಪತಿಯಾಗಿ  ಬೆಳಕಿನ  ಫೋಟಾನ್ಗಳಿಗಿ೦ತ   ಮೊದಲೆ ಇವು ನಕ್ಷತ್ರವನ್ನು  ಬಿಡುತ್ತವೆ..  ೧೯೮೭ರಲ್ಲಿ ಪಕ್ಕದ ಗ್ಯಾಲಕ್ಸಿಯಲ್ಲಿ ಸೂಪರ್ ನೋವಾ  (ಎಸ್.ಎನ್ ೧೯೮೭ಎ) ಕಾಣಿಸಿಕೊ೦ಡಾಗ ಪ್ರಯೋಗಗಳು  ಆ ವಿದ್ಯಮಾನದಿ೦ದ  ನ್ಯೂಟ್ರಿನೊ ಕಣಗಳು ಬರುವುದನ್ನೂ  ಕ೦ಡು  ಹಿಡಿದರು . ಹಿ೦ದಿನಿ೦ದ ಇದ್ದ ಸೂಪರ್ನೋವಾ ಸಿದ್ಧಾ೦ತಕ್ಕೆ ಈ ಸೂಪರ್ನೋವಾ  ವೀಕ್ಷಣೆಯಿ೦ದ ಪುರಾವೆ ಸಿಕ್ಕಿತು.  (೩)  ವಿಶ್ವಕಿರಣಗಳ ಮೂಲವನ್ನು ಕ೦ಡುಹಿಡಿಯಲು  ಅವುಗಳ ಪ್ರಕ್ರಿಯೆಗಳಲ್ಲಿ  ಉತ್ಪತ್ತಿಯಾಗುವ  ನ್ಯೂಟ್ರಿನೊ ಕಣಗಳನ್ನು ಕ೦ಡು ಹಿಡಿಯಬಹುದು.  ಈ ಮೂರು  ಅಧ್ಯಯನಗಳಲ್ಲೂ ನ್ಯೂಟ್ರಿನೊಗಳಿಗೆ  ಬೇರೆ ಬೇರೆ ಶಕ್ತಿ ಇರುತ್ತದೆ: ನಕ್ಷತ್ರದಿ೦ದ  ಮತ್ತು ಸೂಪರ್ನೋವಾಗಳಿ೦ದ ಬರುವ  ನ್ಯೂಟ್ರಿನೊಗಳಿಗೆ ಎ೦ಇವಿ  ಶಕ್ತಿಯಾದರೆ ವಿಶ್ವಕಿರಣಗಳ ಮೂಲ ಪ್ರಕ್ರಿಯೆಗಳಲ್ಲಿ ಟಿ.ಇವಿ ನ್ಯೂಟ್ರಿನೊ ಕಣಗಳು ಉತ್ಪತ್ತಿಯಾಗುತ್ತವೆ.

ವಿವಿಧ ತರ೦ಗಗಳ ಖಗೋಳ ವಿಜ್ಞಾನ

 

ಒ೦ದು ಆಕಾಶಕಾಯವನ್ನು  ಸ೦ಪೂರ್ಣವಾಗಿ ಅರ್ಥಮಾಡಿಕೊಳ್ಳಲು  ಈಗಿನ ದಿನಗಳಲ್ಲಿ     ಮೇಲೆ ವಿವರಿಸಿದ  ಎಲ್ಲ  ಖಗೋಳ ವಿಜ್ಞಾನಗಳನ್ನೂ   ಬಳಸಿಕೊಳ್ಳಲಾಗುತ್ತಿದೆ. ಇದೇ ವಿವಿಧ ತರ೦ಗಗಳ ಖಗೋಳ ವಿಜ್ಞಾನ. ಖ್ಯಾತ ಕ್ರ್ಯಾಬ್ ಸೂಪರ್ ನೋವಾ  ಅವಶೇಷದ  ವಿವಿಧ ರೂಪಗಳನ್ನು ಕೆಳಗಿನ ಚಿತ್ರದಲ್ಲಿ ತೋರಿಸಲಾಗಿದೆ..  ಇದರಿ೦ದ ಬೇರೆ  ಬೇರೆ ಶಕ್ತಿಯ ಫೋಟಾನ್ ಗಳು  ಆಕಾಶಕಾಯದ ಯಾವ ಸ್ಥಳದಿ೦ದ ಹೊರ ಬರುತ್ತಿವೆ ಎ೦ದು ತಿಳಿಯಬಹುದಲ್ಲದೆ  ವಿವಿಧ ಖಗೋಳವಿಜ್ಞಾನಗಳ ಅವಶ್ಯಕತೆಯನ್ನೂ  ಅರ್ಥಮಾಡಿಕೊಳ್ಳಬಹುದು

ಚಿತ್ರ ೧೨  - ಕ್ರ್ಯಾಬ್ ನೆಬ್ಯುಲದ ವಿವಿಧ ಮುಖಗಳು: ಮೇಲಿನ ಸಾಲು - ರೇಡಿಯೊ,ಅವಕೆ೦ಪು ಮತ್ತು ಸಾಧಾರಣ ಬೆಳಕು ; ಕೆಳಗಿನ ಸಾಲು - ಅತಿನೇರಳೆ, ಕಡಿಮೆ ಶಕ್ತಿಯ ಎಕ್ಸ್ ರೇ, ಹೆಚ್ಚು ಶಕ್ತಿಯ ಎಕ್ಸ್ ರೇ .  ಇದು ೬ ಬೆರೆಬೇರೆ ದೂರದರ್ಶಕಗಳಿ೦ದ ಬ೦ದಿರುವ ಮಾಹಿತಿ. . ಕಡಿಮೆ ಶಕ್ತಿಯ  ಎಕ್ಸ್ ರೇಗಳಲ್ಲಿ ಕ್ರ್ಯಾಬ್ ಪಲ್ಸಾರ್  ಕೂಡ  ಕಾಣುತ್ತದೆ.

(ಈ ಲೇಖನ ಮೊದಲು ಎನ್.ಎ.ಎಲ್.ಪ್ರಯೋಗಶಾಲೆಯ   ವಾರ್ಷಿಕ ಸ೦ಚಿಕೆ ' ಕಣಾದ (೨೦೧೫) ರಲ್ಲಿ ಪ್ರಕಟವಾಗಿದ್ದಿತು ).

ಮೂಲ: ಪಾಲಹಳ್ಳಿ ವಿಶ್ವನಾಥ್ ಅಂಕಣ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate