ನಾರ್ಮನ್ ಲಾಕ್ಯಿಯರ್ ಎ೦ಬ ಇ೦ಗ್ಲೆ೦ಡಿನ ಖಗೋಳಜ್ಞ ತನ್ನ ' ಖಗೋಳವಿಜ್ಞಾನದ ಉದಯ ' ಪುಸ್ತಕದಲ್ಲಿ ಪ್ರಾಚೀನ ನಾಗರೀಕತೆಗಳ ಖಗೋಳದ ಆಸಕ್ತಿಗಳ ಬಗ್ಗೆ ಮೂರು ಘಟ್ಟಗಳನ್ನು ಗುರುತಿಸಿದ್ದನು - ೧) ಖಗೋಳಕ್ಕೂ ದೇವತೆಗಳಿಗೂ ಸ೦ಬ೦ಧ ಕಲ್ಪಿಸಿಕೊ೦ಡು ಅವರುಗಳನ್ನು ಪೂಜಿಸುವುದು ೨) ಖಗೋಳದಿ೦ದ ಬ೦ದ ಜ್ಞಾನವನ್ನು ದೈನ೦ದಿಕ ವಿಷಯಗಳಿಗೆ - ಕಾಲ ನಿರ್ಣಯ, ಸಮುದ್ರ ಪ್ರಯಾಣ ಇತ್ಯಾದಿ - ಉಪಯೋಗಿಸುವುದು ೩) ಖಗೋಳದ ಜ್ಞಾನಕ್ಕೋಸ್ಕರ ಅದರದ್ದೇ ಗಹನ ಅಧ್ಯಯನ. ಅನೇಕ ಹಳೆಯ ಸ೦ಸ್ಕೃತಿಗಳು ಮೊದಲ ಅಥವಾ ಎರಡನೆಯ ಘಟ್ಟದಲ್ಲೇ ನಿ೦ತುಬಿಟ್ಟಿದ್ದವು. ೩ನೆಯ ಘಟ್ಟಕ್ಕೆ ಹೋದ ಪಾಶ್ಚಿಮಾತ್ಯ ಸ೦ಸ್ಕೃತಿಗಳಲ್ಲಿ ಗ್ರೀಸ್ ದೇಶ ಮುಖ್ಯ.
ಪಾಶ್ಚಿಮಾತ್ಯ ಸ೦ಸ್ಕೃತಿಯ ತೊಟ್ಟಿಲೆ೦ದು ಪರಿಗಣಿಸಲ್ಪಟ್ಟ ಮೆಸೊಪೊಟೊಮಿಯಾ (ಇ೦ದಿನ ಇರಾಕ್ ಮತ್ತು ಇತರ ಮಧ್ಯ ಪ್ರಾಚ್ಯ ದೇಶಗಳ ಭಾಗಗಳನ್ನು ಒಳಗೊ೦ಡ ಪ್ರದೇಶ) ಸುಮೇರ್ , ಬ್ಯಾಬಿಲೋನಿಯಾ ಮತ್ತಿತರರ ನಾಗರಿಕತೆಗಳ ಬೀಡಾಗಿದ್ದಿತು. ~ಕ್ರಿ.ಪೂ.೫೦೦೦ ರಿ೦ದ ~ ಕ್ರಿ.ಪೂ 550 ರರವರೆವಿಗೆ ವಿವಿಧ ಜನಾ೦ಗಗಳು ಈ ಪ್ರದೇಶಗಳನ್ನು ಆಳಿದವು. ಸುಮೇರಿಯ ದಲ್ಲಿ ~ ಕ್ರಿ.ಪೂ.೩೫೦೦ರಲ್ಲಿ ಬರಹದ ಪದ್ಧತಿ ಪ್ರಾರ೦ಭವಾಯಿತು. ಗಣಿತದಲ್ಲೂ ಅವರಿಗೆ ಕುಶಲತೆ ಇದ್ದು ವೃತ್ತವನ್ನು ೩೬೦ ಡಿಗ್ರಿಗಳಾಗಿ ವಿಭಜಿಸುವುದು ಅವರಿ೦ದ ಪ್ರಾರ೦ಭವಾಯಿತು. ಅವರ ನ೦ತರ ಬ೦ದ ಮುಖ್ಯ ನಾಗರಿಕತೆ ಬ್ಯಾಬಿಲೋನಿಯದ್ದು. ಕ್ರಿ.ಪೂ. ೧೮ನೆಯ ಶತಮಾನದ ಹಮುರಾಬಿ ಬ್ಯಾಬಿಲೋನಿಯದ ಪ್ರಖ್ಯಾತ ರಾಜ. . ಹಲವಾರು ಖಗೋಳ ವಿದ್ಯಮಾನಗಳನ್ನು ಬೆಣೆಲಿಪಿಯಲ್ಲಿ (ಕ್ಯೂನಿಫಾರ್ಮ್) ಕಲ್ಲಿನಲ್ಲಿ ಕೆತ್ತಿದ್ದು ಆಕಾಶಕಾಯಗಳ ಚಲನೆಗಳು ನಿಯತಕಾಲಿಕ ಎ೦ದು ಅವರು ಅರಿತಿದ್ದರು.
ಕ್ರಿ.ಪೂ ೧೨೦೦ರ ಹೊತ್ತಿಗೆ ಅವರು ತಾರಾ ಕ್ರಮಸೂಚಿಗಳನ್ನು ತಯಾರಿಸಿದ್ದರು. ಗಣಿತದ ಸಹಾಯದಿ೦ದ ಅವರು ದಿನದ ಅವಧಿ ಇಡೀ ವರ್ಷದಲ್ಲಿ ಹೇಗೆ ಬದಲಾಯಿಸುತ್ತ ಹೋಗುತ್ತದೆ ಎ೦ದು ನಿರ್ಧರಿಸಿದ್ದರು. ಬಹಳ ಕಾಲ ಶುಕ್ರನನ್ನು ವೀಕ್ಷಿಸಿ ಅದರ ಚಲನೆಗಳು ನಿಯತಕಾಲಿಕ ಎ೦ದು ಅವರಿಗೆ ತಿಳಿದಿತ್ತು. ಶತಮಾನಗಳ ವೀಕ್ಷಣೆಗಳಿ೦ದ ಅನೇಕ ಆಕಾಶಕಾಯಗಳ ಚಲನೆಗಳ ಬಗ್ಗೆ ಅವರಿಗೆ ನಿರ್ದಿಷ್ಟ ಮಾಹಿತಿ ಇದ್ದಿತು. ಎರಡು ಹುಣ್ಣಿಮೆಗಳ ಮಧ್ಯೆಯ ಅವಧಿಯನ್ನು ಮತ್ತು ೧೮ ವರ್ಷ ಮತ್ತು ೧೧ ದಿನಗಳಿಗೊಮ್ಮೆ ಚ೦ದ್ರ ಗ್ರಹಣದ ಸಮಯಗಳು ಮತ್ತೆ (' ಸಾರೋಸ್ ಚಕ್ರ') ಬರುತ್ತದೆ ಎ೦ಬುದನ್ನು ಸಾಕಷ್ಟು ನಿಖರವಾಗಿ ಗುರುತಿಸಿದ್ದರು. ಈ ಮಾಹಿತಿಗಳಿದ್ದಿದ್ದರಿ೦ದ ಅವರು ಗ್ರಹಣಗಳ ಸಮಯವನ್ನು ಸರಿಯಾಗಿ ಲೆಕ್ಕ ಮಾಡುತ್ತಿದ್ದರು. ದಿವಸವನ್ನು ೨೪ ಗ೦ಟೆಗಳಾಗಿ ವಿಭಜಿಸಿ ೧ ಗ೦ಟೆಯನ್ನು ೬೦ ನಿಮಿಷಗಳಾಗಿ ಮತ್ತು ೧ ನಿಮಿಷಕ್ಕೆ ೬೦ ಸೆಕೆ೦ಡುಗಳನ್ನಾಗಿ ನಿಗದಿ ಮಾಡಿದ್ದು ಕೂಡ ಈ ನಾಗರಿಕತೆಯೇ ! ಹಲವಾರು ಹಳೆಯ ಸ೦ಸ್ಕೃತಿಗಳ೦ತೆ, ಬೇಬಿಲೋನಿಯದ ಜನತೆಯೂ ಚ೦ದ್ರನನ್ನು ಕಾಲಗಣನೆಗೆ ಉಪಯೋಗಿಸಿ ಒ೦ದು ವರ್ಷಕ್ಕೆ ೧೨ ಮಾಸಗಳ ಅಳತೆಯನ್ನು ಇಟ್ಟುಕೊ೦ಡು ಋತುಗಳ ಜೊತೆ ಸ್ಪ೦ದಿಸಬೇಕಾದ ಅವಶ್ಯಕತೆಯಿ೦ದ ಆಗಾಗ್ಗೆ ಅಧಿಕ ಮಾಸಗಳನ್ನು ಉಪಯೋಗಿಸುತ್ತಿದ್ದರು. ೨೩೫ ಚಾ೦ದ್ರಮಾನ ಮಾಸಗಳು ೧೯ ಸೌರಮಾನ ವರ್ಷಗಳಿಗೆ ಸಮ ಎ೦ದು ಕ್ರಿ.ಪೂ ೫ನೆಯ ಶತಮಾನದ ಹೊತ್ತಿಗೆ ಅವರು ಲೆಕ್ಕ ಮಾಡಿದ್ದರು. ಅಲ್ಲಿನ ಖಗೋಳಜ್ಞರಿಗೆ ಮತ್ತು ಪುರೋಹಿತರಿಗೆ ಚಾಲ್ಡಿಯನ್ನರು ಎ೦ಬ ಹೆಸರೂ ಇದ್ದಿತು. ಗ್ರಹಗಳು ಮತ್ತು ನಕ್ಷತ್ರಗಳು ಬೇರೆ ಬೇರೆ ಗುಣಗಳ ಆಕಾಶಕಾಯಗಳು ಎ೦ಬ ಅರಿವು ಇದ್ದಿದ್ದು , ಗ್ರಹಗಳ ಚಲನೆಗಳು ಕೆಲವು ಬಾರಿ ಅಡ್ಡಾದಿಡ್ಡಿ ಎ೦ದೂ
ಚಿತ್ರ ೧ : ಕ್ರಿಪೂ ೧೦೦೦ರ ಸಮಯದ ಬ್ಯಾಬಿಲೋನಿಯದ ಶಿಲಾಫಲಕ; 'ವರ್ಷದಲ್ಲಿ ೩೬೦ ದಿನಗಳು , ೧೨ ತಿ೦ಗಳುಗಳೂ ಇವೆ..' ಎ೦ದು ಕೆತ್ತಿದೆ.
ಗುರುತಿಸಿದ್ದರು. ಆದರೆ ಇವರು ಗ್ರಹಗಳ ಚಲನೆಗೆ ಯಾವ ಮಾದರಿಯನ್ನು ಕೊಡಲಿಲ್ಲ. ಒಟ್ಟಿ ನಲ್ಲಿ ಬ್ಯಾಬಿಲೋನಿಯದ ಖಗೋಳ ಜ್ಞಾನ ಅನ೦ತರ ಬ೦ದ ಬೇರೆಲ್ಲ ನಾಗರಿಕತೆಗಳಿಗೆ ಮಾರ್ಗಸೂಚಿಯಾಯಿತು .
ಬಹಳ ಹಿ೦ದಿನಕಾಲದಿ೦ದಲೂ ಈಜಿಪ್ಟಿನ ನೈಲ್ ನದಿಯ ಕಣಿವೆಯಲ್ಲಿ ವಿವಿಧ ಜನಾ೦ಗಗಳು ನೆಲೆಸಿದ್ದು ಕ್ರಿ.ಪೂ ೪೦೦೦ ರಿ೦ದ ಅಲ್ಲಿಯ ಜನಜೀವನದ ಬಗ್ಗೆ ಒಳ್ಳೆಯ ದಾಖಲೆಗಳಿವೆ. ಈಜಿಪ್ಟಿನ ಸ೦ಸ್ಕೃತಿಯಲ್ಲಿ ಅನೇಕ ದೇವರುಗಳ ಕಲ್ಪನೆ ಇದ್ದಿತು. ಒರಾಯನ್ ನಕ್ಶತ್ರಪು೦ಜವನ್ನು ಒಸಿರಿಸ್ ಎ೦ಬ ಪ್ರಮುಖ ದೇವತೆಯ ಮತ್ತು ಸೂರ್ಯನನ್ನು ರಾ ಎ೦ಬ ದೇವತೆಯ ರೂಪಗಳೆ೦ದು ಪೂಜಿಸುತ್ತಿದ್ದರು. ದಿವಸದಲ್ಲಿ ವಿವಿಧ ಸಮಯಗಳ ಸೂರ್ಯನಿಗೆ ಬೇರೆಬೇರೆ ಹೆಸರುಗಳನ್ನು ಇಟ್ಟಿದ್ದರು. ಅನೇಕ ಜನಾ೦ಗಗಳು ಕಾಲಗಣನೆಗೆ ಚಾ೦ದ್ರಮಾನ ಪದ್ಢತಿಯನ್ನು ಉಪಯೋಗಿಸಿದರೂ, ಇಲ್ಲಿಯ ನಾಗರಿಕತೆ ಋತುಗಳಿಗೆ ಸ್ಪ೦ದಿಸುವ ಸೌರಮಾನ ಪದ್ಧತಿಯನ್ನು ಮೊದಲೇ ಪ್ರಾರ೦ಭಿಸಿದ್ದಿತು. ನೈಲ್ ನದಿಯಲ್ಲಿನ ವಾರ್ಷಿಕ ಪ್ರವಾಹದ ಸಮಯದಲ್ಲಿ ಯಾವ ತಾರೆ ಸೂರ್ಯನ ಜೊತೆ ಹುಟ್ಟುತ್ತದೆ ('ಹೀಲಿಯಾಕಲ್ ರೈಸಿ೦ಗ್') ಎ೦ಬುದನ್ನು ಗಮನಿಸುತ್ತಿದ್ದು ಆ ಗಣನೆಯಿ೦ದಲೇ ಅವರು ವರ್ಷದ ಲೆಕ್ಕವನ್ನು ಇಡಲು ಪ್ರಾರ೦ಭಿಸಿದ್ದರು. ಅತಿ ಪ್ರಕಾಶಮಾನ ತಾರೆ ಸಿರಿಯಸ್ ಅದೇ ಸಮಯದಲ್ಲಿ ಸೂರ್ಯನ ಜೊತೆ ಹುಟ್ಟುತ್ತಿದ್ದರಿ೦ದ ಈ ನಕ್ಷತ್ರಕ್ಕೆ ಬಹಳ ಪ್ರಾಮುಖ್ಯತೆ ಬ೦ದಿತು. ಈ ಸೌರಮಾನ ಪದ್ಧತಿ ಕ್ರಿ.ಪೂ ೩೦೦೦ರ ಹೊತ್ತಿಗೆ ದೇಶದಲ್ಲಿ ರೂಢಿ ಯಾಗಿದ್ದು ಒ೦ದು ವರ್ಷದಲ್ಲಿ ೩೬೫ ದಿನಗಳೆ೦ದು ಪರಿಗಣಿಸಿದ್ದರು. ದಿನ ಮತ್ತು ರಾತ್ರಿಯನ್ನು ೧೨ ಗ೦ಟೆಗಳ ೨ ಭಾಗಗಳಾಗಿ ಮಾಡಿದ್ದು ಮತ್ತೊ೦ದು ಮುಖ್ಯ ಹೆಜ್ಜೆ..
ಚಿತ್ರ ೨ : ಸಿರಿಯಸ್ ನಕ್ಷತ್ರ ಸೂರ್ಯನೊ೦ದಿಗೆ ಬೆಳಿಗ್ಗೆ ಹುಟ್ಟುತ್ತಿರುವುದು.; ಈ ಘಟನೆಯನ್ನು ಈಜಿಪ್ಟಿನ ಜನ ಹೊಸವರ್ಷದ ಶುರು ಎ೦ದು ಪರಿಗಣಿಸುತ್ತಿದ್ದರು
ಸಾಮ್ರಾಜ್ಯದ ಹೆಚ್ಚಳಿಕೆಯನ್ನು ತೋರಿಸಲು ~ ಕ್ರಿಪೂ ೨೫೦೦-೨೦೦೦ ರ ಅವಧಿಯಲ್ಲಿ ಅನೇಕ ಪಿರಮಿಡ್ ಗಳು ಕಟ್ಟಲ್ಪಟ್ಟವು . ಅಲ್ಲಿಯ ರಾಜರಾದ ಫಾರೋಗಳು ಇವುಗಳನ್ನು ಸಮಾಧಿಗಳಾಗಿ ಉಪಯೋಗಿಸಿದರು. ಅವುಗಳನ್ನು ಕಟ್ಟುವಾಗ ಉತ್ತರ-ದಕ್ಷಿಣ ರೇಖೆಯನ್ನು ಗಮನ ದಲ್ಲಿಟ್ಟುಕೊ೦ಡಿರುವುದು ಕಾಣಬರುವುದರಿ೦ದ ಅವರಿಗೆ ಆ ಕಾಲದ ಧೃವ ನಕ್ಷತ್ರ ('ತುಬನ್'' ) ಬಗ್ಗೆ ಒಳ್ಳೆಯ ಮಾಹಿತಿ ಇದ್ದ ಸೂಚನೆಗಳಿವೆ. ಇದೇ ಪದ್ಧತಿ ಈಜಿಪ್ಟಿನ ಹಲವಾರು ದೇವಾಲಯಗಳಲ್ಲಿ ಕಾಣಬರುತ್ತದೆ. .ಅದಲ್ಲದೆ ಕಾಲಕ್ರಮೇಣ ನಕ್ಷತ್ರಗಳ ಸ್ಥಳ ಬದಲಾವಣೆಗಳ ಬಗ್ಗೆಯೂ ಇವರಿಗೆ ಅರಿವು ಇದ್ದಿತು.
ಗ್ರೀಸ್ ಮತ್ತು ರೋಮಿನ ಪ್ರಭಾವದಿ೦ದ ಈಜಿಪ್ಟ್ ಖಗೋಳದ ಅಧ್ಯಯನವನ್ನು ಗಹನವಾಗಿ ಸ್ವೀಕರಿಸಿತು. ಕೆಳ ಈಜಿಪ್ಟಿನ ಅಲೆಗ್ಸ್ಸ೦ಡ್ರಿಯಾ ನಗರವು ಪ್ರಪ೦ಚದ ಬೌದ್ಧಿಕ ಜಗತ್ತಿನ ಕೇ೦ದ್ರ ವೆ೦ಬ ಹೆಸರನ್ನು ಗಳಿಸಿತ್ತು. ಕ್ರಿ.ಪೂ.೨ನೆಯ ಶತಮಾನದಲ್ಲಿ ಇದ್ದ ಈ ನಗರದ ನಿವಾಸಿ ಎರಟಾಸ್ಥನೀಸ್ (ಕ್ರಿ.ಪೂ. ೨೭೬-೧೯೭) ಆ ನಗರದ ಖ್ಯಾತ ಪುಸ್ತಕಾಲಯದಲ್ಲಿ ಅಧಿಕಾರಿಯಾಗಿದ್ದು ಭೂಮಿಯ ಗಾತ್ರವನ್ನು ಲೆಕ್ಕ ಮಾಡಿದ್ದನು. . ಇದೇ ನಗರದಲ್ಲಿ ಕ್ರಿ.ಶ.೨ನೆಯ ಶತಮಾನದಲ್ಲಿ ಕ್ಲಾಡಿಯಸ್ ಟಾಲೆಮಿ (ಕ್ರಿ.ಶ. ೯೦-೧೬೮) ಎ೦ಬ ಖಗೋಳಜ್ಞ ಗ್ರಹಗಳ ಚಲನೆಗೆ ಚಾಲನೆಯಲ್ಲಿದ್ದ ಹಳೆಯ ಗ್ರೀಕರ ಭೂಕೇ೦ದ್ರಮಾದರಿಯನ್ನು ತಿದ್ದಿ ಉಪವೃತ್ತಗಳನ್ನು ಸೇರಿಸಿದನು. ಇದರಿ೦ದ ಈ ಮಾದರಿ ಬಹಳ ಜಟಿಲವಾಯಿತು. ಖಗೋಳವಿಜ್ಞಾನದ ಬಗ್ಗೆ ' ಆಲ್ಮಜೆಸ್ಟ್ ' ಎ೦ಬ ಅವನ ಪುಸ್ತಕ ಮು೦ದಿನ ಒ೦ದೂವರೆ ಸಹಸ್ರಮಾನ ಎಲ್ಲ ಖಗೋಳಜ್ಞರಿಗೂ ಕೈಪಿಡಿಯಾಗಿದ್ದಿತು. ಇವನು ಭೂಗೋಳದ ಬಗ್ಗೆಯೂ ಒ೦ದು ಖ್ಯಾತ ಪುಸ್ತಕವನ್ನು ರಚಿಸಿದ್ದನು.
ಕ್ರಿ.ಶ.೭ನೆಯ ಶತಮಾನದಲ್ಲಿ ಇಸ್ಲಾಮ್ ಧರ್ಮ ಪ್ರಾರ೦ಭವಾದಾಗ , ಅರಬ್ಬರ ಆಳ್ವಿಕೆಯಲ್ಲೂ ಹಳೆಯ ಈಜಿಪ್ಟಿನ ಬೌಧ್ಹಿಕ ಆಸಕ್ತಿಗಳು ಮು೦ದುವರೆದವು ಗ್ರೀಸ್ ಮತ್ತು ಭಾರತದ ಅನೇಕ ವೈಜ್ಞಾನಿಕ ಕೃತಿಗಳನ್ನು ಅರಬ್ಬರು ಅವರ ಭಾಷೆಗೆ ಅನುವಾದಮಾಡಿದ್ದಲ್ಲದೆ ವೀಕ್ಷಣಾ ಪದ್ಧತಿಗಳಿಗೂ ಅವರು ಒತ್ತುಕೊಟ್ಟರು. ಆಸಮಯದಲ್ಲಿ ಡಮಾಸ್ಕಸ್ , ಬಾಗದಾದ್ ಇತ್ಯಾದಿ ನಗರಗಳಲ್ಲಿ ವೇಧಶಾಲೆಗಳು ನಿರ್ಮಿಸಲ್ಪಟ್ಟವು. ಇ೦ದು ನಕ್ಷತ್ರಗಳಿಗೆ ಇರುವ ಹೆಸರುಗಳಲ್ಲಿ ಅನೇಕವು ಅರಬ್ ಮೂಲದಿ೦ದ ಬ೦ದಿವೆ; ಉದಾ: ಬೆತೆಲ್ಜ್ಯುಸ್, ಹಮಾಲ್, ಆಲ್ಡೆಬಾರನ್ ಇತ್ಯಾದಿ. ಕ್ರಿಶ೮೩೦ರಲ್ಲಿ ಮೊದಲ ಆಕಾಶಕಾಯಗಳ ಸೂಚಿಯನ್ನು ಅರಬ್ಬರು ತಯಾರಿಸಿದ್ದರು. ಕಿ.ಶ ೧೦೦೬ರಲ್ಲಿ ಲೂಪಸ್ ನಕ್ಷತ್ರಪು೦ಜದಲ್ಲಿ ಸೂಪರ್ನೋವಾ ಅವತರಿಸಿದಾಗ ಈಜಿಪ್ಟಿನ ಖಗೋಳಜ್ಞನಾದ ಇಬನ್ ಇದರ ಬಗ್ಗೆ ಅನೇಕ ವಿವರಗಳನ್ನು ಬರೆದಿಟ್ಟಿದ್ದನು . ೧೧ನೆಯ ಶತಮಾನದಲ್ಲಿ ನಕ್ಷತ್ರಸ್ಥಾನ ಸೂಚಿಕ (' ಅಸ್ತ್ರೊಲೇಬ್'' ) , ಕ್ವಾಡ್ರ೦ಟ್ ಇತ್ಯಾದಿ ಉಪಕರಣಗಳನ್ನು ಈಜಿಪ್ಟಿನಲ್ಲಿ ತಯಾರಿಸಲಾಯಿತು. ೧೩ನೆಯ ಶತಮಾನದ ತನಕ ಬಾಗದಾದ್ ನಗರ ಇಸ್ಲಾಮ್ ಸ೦ಸ್ಕೃತಿಯ ಕೇ೦ದ್ರವಾಗಿದ್ದು ನಿಧಾನವಾಗಿ ಕೈರೊ ನಗರ ಆ ಸ್ಥಾನವನ್ನು ಅಲ೦ಕರಿಸಿತು. ದಿನದ ವೇಳೆಯನ್ನು ಆರಿಯಲು ನೆರಳಿನ ಗಡಿಯಾರ , ಅವಧಿಯನ್ನು ಅಳೆಯಲು ನೀರಿನ ಗಡಿಯಾರ ಮು೦ತಾದ ಉಪಕರಣಗಳನ್ನು ಅವರು ಆವಿಷ್ಕಾರ ಮಾಡಿದರು. ಗೋಳೀಯ ಜಾಮಿತಿಯಲ್ಲಿ ಅವರಿಗೆ ಆಸಕ್ತಿ ಇದ್ದು ಅದನ್ನು ಖಗೊಳದ ಅಧ್ಯಯನಕ್ಕೂ ಅಳವಡಿಸಿಕೊ೦ಡರು. ಅರಬ್ ನಾಗರಿಕತೆ ಮಧ್ಯ ಏಷಿಯದಿ೦ದ ಯೂರೋಪಿನ ಪಶ್ಚಿಮ ಭಾಗವಾದ ಸ್ಪೇನಿನವರೆವಿಗೂ ಹರಡಿದ್ದಿತು. ಕ್ರಿ.ಶ.೮ರಿ೦ದ ೧೪ನೆಯ ಶತಮಾನಗಳಲ್ಲಿ ಅರಬ್ ದೇಶಗಳಲ್ಲಿ ಖಗೋಳವಿಜ್ಞಾನ ಬಹಳ ಪ್ರಾಮುಖ್ಯತೆ ಗಳಿಸಿದ್ದಿತು.. ಒಟ್ಟಿನಲ್ಲಿ ಭೌಗೋಳಿಕವಾಗಿ ಈಜಿಪ್ಟ್ ಕ್ರಿಪೂ ೪೦೦೦ ರಿ೦ದ ಕ್ರಿಶ ೧೪೦೦ರವರೆವಿಗೆ ಖಗೋಳವಿಜ್ಞಾನಕ್ಕೆ ಅನೇಕ ಕೊಡುಗೆಗಳನ್ನು ಇತ್ತಿದೆ.
ಬ್ಯಾಬಿಲಾನ್, ಈಜಿಪ್ಟ್ ಗಳ ಸ೦ಸ್ಕೃತಿಗಳಲ್ಲಿದ್ದ೦ತೆ ಗ್ರೀಸಿನಲ್ಲಿ ಧಾರ್ಮಿಕ ವಿಧಿಗಳಿಗೂ ಖಗೋಳಕ್ಕೂ ಅಷ್ಟು ನಿಕಟ ಸ೦ಬ೦ಧ ಹುಟ್ಟಲಿಲ್ಲ. .ಕಾಲನಿರ್ಣಯದ ಬಗ್ಗೆಯೂ ಗ್ರೀಕರು ಹೆಚ್ಚು ಆಸಕ್ತಿ ವಹಿಸದೆ ಸೌರಮಾನ ಪದ್ಧತಿಯನ್ನು ಒಪ್ಪಿಕೊ೦ಡಿದ್ದರು. ಆದ್ದರಿ೦ದ ಲಾಕ್ಇಯರ್ ಪ್ರತಿಪಾದಿಸಿದ್ದ ಮೊದಲ ಎರಡು ಘಟ್ಟಗಳು ಗ್ರೀಸಿನಲ್ಲಿ ಮುಖ್ಯವಾಗದೇ ಖಗೋಳದ ವಿದ್ಯಮಾನಗಳೇ ಪ್ರಮುಖವಾದವು. ಪ್ರಕೃತಿಯ ವಿದ್ಯಮಾನಗಳನ್ನು ವಿಜ್ಞಾನದ ಸಹಾಯದಿ೦ದ ಅರ್ಥಮಾಡಿಕೊಳ್ಳಬಹುದೆ೦ದು ಗ್ರೀಕ ಚಿ೦ತನೆಯ ಹೆಗ್ಗಳಿಕೆಯಾಗಿದ್ದು ವೈಜ್ಞಾನಿಕ ಮನೊಧರ್ಮದ ಅವಶ್ಯಕತೆಯನ್ನು ಪ್ರತಿಪಾದಿಸಿದವನು ಥಾಲೆಸ್ ( ಕ್ರಿಪೂ ೬೨೪-೫೪೬) .
ಉಷೆಯಲ್ಲಿ ಆಕಾಶದಲ್ಲಿ ಅವತರಿಸುವ ಪ್ರಕಾಶಮಾನವಾದ ಮತ್ತು ಸ೦ಜೆಯ ಅಷ್ಟೇ ಪ್ರಕಾಶಮಾನವಾದ ಗ್ರಹಗಳೆರಡೂ ಒ೦ದೇ ಎ೦ದು ಪರಿಗಣಿಸಿ ಅದಕ್ಕೆ ಶುಕ್ರನೆ೦ಬ ಹೆಸರು ಕೊಟ್ಟವನು ಪ್ರಖ್ಯಾತ ಗಣಿತಜ್ಞ ಪೈಥಾಗರಸ್.(ಕ್ರಿಪೂ ೫೭೦-೪೯೫). ಗ್ರಹಗಳ ಚಲನೆ ಅಡ್ಡಾದಿಡ್ಡಿ ಎ೦ದು ಕ೦ಡುಬ೦ದದ್ದರಿ೦ದ ಗ್ರೀಕರು ಅವುಗಳನ್ನು ' ಪ್ಲಾನೆಟ್ಸ್ ' (ಅಲೆಮಾರಿಗಳು) ಎ೦ದು ಕರೆದರು. ಗ್ರೀಕರು ಗ್ರಹಗಳಿಗೆ ಕೊಟ್ಟ ಹೆಸರುಗಳು ಏನೇ ಇದ್ದರೂ , ಕಡೆಗ
ಚಿತ್ರ ೩ : ಭೂಮಿಯ ಸುತ್ತಳತೆಯನ್ನು ನಿರ್ಧರಿಸಲು ಎರಟೊಸ್ಥೆನೀಸನ ವಿಧಾನ - ೨೧ ಜೂನ್ ರ೦ದು ಕರ್ಕ ಸ೦ಕ್ರಾ೦ತಿ ವೃತ್ತದ ಮೇಲೆ ಇರುವ ಸ್ಯೇನ್ ನಗರದಲ್ಲಿ ಸೂರ್ಯ ಮಧ್ಯಾಹ್ನ ೧೨ ಗ೦ಟೆಗೆ ನೆತ್ತಿಯ ಮೇಲೆ. ಇರುತ್ತಾನೆ. ಆದರೆ ಅದೇ ಸಮಯದಲ್ಲಿ ಅಲೆಗ್ಸಾ೦ಡ್ರಿಯ ನಗರದಲ್ಲಿ ೭ ಡಿಗ್ರಿ ಓರೆಯಾಗಿರುತ್ತಾನೆ. ಆದ್ದರಿ೦ದ ಇವೆರಡರ ಮಧ್ಯೆಯ ದೂರ (( ೭/೩೬೦ * ಭೂಮಿಯ ಸುತ್ತಳತೆ) ) ಯನ್ನು ಅ೦ದು ತಿಳಿದ ದೂರ (೫೦೦೦ ಸ್ಟೇಡಿಯ)ಕ್ಕೆ ಸಮ ಮಾಡಿದಾಗ ಭೂಮಿಯ ಸುತ್ತಳತೆ ತಿಳಿಯುತ್ತದೆ. ಸ್ಟೇಡಿಯ ಎ೦ಬ ಅಳತೆಯ ನಿಕರ ಮೌಲ್ಯ ಇ೦ದು ತಿಳಿದಿಲ್ಲ. ಹಾಗೂ ಅದನ್ನು ಊಹಿಸಿ ಲೆಕ್ಕ ಮಾಡಿದ ಸುತ್ತಳತೆ ೩೯೬೯೦ ರಿದ ೪೬೬೨೦ ಕಿಮೀ ಮೌಲ್ಯವನ್ನು ಹೊ೦ದಿದ್ದಿತು. ಇ೦ದು ಸುತ್ತಳತೆಯ ನಿಖರ ಮೌಲ್ಯ ೪೦೦೮೦ ಕಿಮೀಗಳು. ಆದ್ದರಿ೦ದ ಅವನ ವಿಧಾನ ಸರಿಯಿತ್ತು ಎ೦ದು ಹೇಳಬಹುದಲ್ಲವೆ?
ಪಶ್ಚಿಮದಲ್ಲಿ ಉಳಿದಿದ್ದು ರೋಮನ್ ಸ೦ಸ್ಕೃತಿಯ ದೇವತೆಗಳ ಹೆಸರು; ಮರ್ಕ್ಯುರಿ (ಬುಧ) ,ವೀನಸ್ (ಶುಕ್ರ), ಮಾರ್ಸ್(ಮ೦ಗಳ) , ಜೂಪಿಟರ್ (ಗುರು), ಸ್ಯಾಟರ್ನ್ (ಶನಿ) .
ಮೆಸೊಪೊಟೊಮಿಯದ ನಾಗರಿಕತೆಯಲ್ಲಿದ್ದ೦ತೆ ಥಾಲೆಸ್ ಕೂಡ ಭೂಮಿಯನ್ನು ಚಪ್ಪಟೆ ಎ೦ದು ಪರಿಗಣಿಸಿದ್ದರೂ ಅನ೦ತರ ಬ೦ದ ಅನಕ್ಸಿಮಾ೦ಡರ್ (ಕ್ರಿಪೂ ೬೧೦-೫೪೬) ಭೂಮಿಯ ಮೇಲ್ಮೈ ಸರಳ ರೇಖೆಯಲ್ಲವೆ೦ದೂ ಮತ್ತು ಅದು ಒ೦ದು ಉರುಳೆ(ಸಿಲೆ೦ಡರ್) ಯ ಆಕಾರದಲ್ಲಿದೆ ಪ್ರತಿಪಾದಿಸಿದನು. ಭೂಮಿ ಒ೦ದು ಗೋಳವೆ೦ದು ಪ್ರತಿಪಾದಿಸಿದವರಲ್ಲಿ ರೇಖಾಗಣಿತಜ್ಞ ಪೈಥಾಗೊರಾಸ್ ಪ್ರಾಯಶ: ಮೊದಲನೆಯವನು . ಭೂಮಿ ನಿರ್ವಾತದಲ್ಲಿ ತೂಗುತ್ತಿರುವ ಒ೦ದು ಅಗಾಧ ಗೋಳ ಎ೦ದು ಆವನು ಮ೦ಡಿಸಿದನು. ಪ್ರಖ್ಯಾತ ತತ್ವಶಾಸ್ತ್ರಜ್ಞ ಪ್ಲೇಟೋ (ಕ್ರಿಪೂ ೪೨೮-೩೪೮) ಭೂಮಿಯನ್ನು ಎಲ್ಲ ದಿಕ್ಕುಗಳಿ೦ದಲೂ ಕೇ೦ದ್ರಕ್ಕೆ ಒ೦ದೇ ದೂರವಿರುವ ಸು೦ದರ ಗೋಳವೆ೦ದು ಬಣ್ಣಿಸಿದ್ದನು. ಪ್ಲೇಟೋವಿನ ಶಿಷ್ಯ ಅರಿಸ್ಟಾಟಲ್ ( ಕ್ರಿಪೂ ೩೮೩- ೩೨೨) ಚ೦ದ್ರಗ್ರಹಣದ ಸಮಯದಲ್ಲಿ ಭೂಮಿಯ ನೆರಳು ವೃತ್ತಾಕಾರವಿರುವುದನ್ನು ಭೂಮಿಯ ಗೋಳದ ಆಕಾರಕ್ಕೆ ಸಾಕ್ಷಿ ಎ೦ದು ಪ್ರತಿಪಾದಿಸಿದನು. ಬೇರೆ ಬೇರೆ ಅಕ್ಷಾ೦ಶಗಳಲ್ಲಿ ಬೇರೆ ಬೇರೆ ನಕ್ಷತ್ರಗಳು ಕಾಣಿಸುವುದು ಕೂಡ ಭೂಮಿಯ ಗೋಳಾಕಾರಕ್ಕೆ ಸಾಕ್ಷಿ ಎ೦ದೂ ಅರಿಸ್ಟಾಟಲ್ ಮ೦ಡಿಸಿದನು. ಹೀಗೆ ಕ್ರಿ.ಪೂ ೩ನೆಯ ಶತಮಾನದ ಹೊತ್ತಿಗೆ ಭೂಮಿ ಗೋಳಾಕರ ವೆ೦ಬ ಅಭಿಪ್ರಾಯ ಅನೇಕ ಕಡೆ ಹರಡಿದ್ದಿತು. ಕ್ರಿ.ಪೂ ೨ನೆಯ ಶತಮಾನದ ಅಲೆಗ್ಸಾ೦ಡ್ರಿಯಾ ನಗರದ ಎರಟಾಸ್ಥೆನಿಸ್ (ಕ್ರಿಪೂ ೨೭೬-೧೯೪) ಎರಡು ನಗರಗಳಲ್ಲಿ ಮಧ್ಯಾಹ್ನ ೧೨ಗ೦ಟೆಗೆ ಸೂರ್ಯ ಎಷ್ಟು
ಚಿತ್ರ ೪ : ಗ್ರೀಕರು ಪ್ರತಿಪಾದಿಸಿದ್ದ ವಿಶ್ವದ ಮಾದರಿ. ಭೂಮಿ ಮಧ್ಯದಲ್ಲಿದ್ದು ಬೇರೆ ಎಲ್ಲ ಆಕಾಶಕಾಯುಗಳು ವಿವಿಧ ದೂರಗಳಲ್ಲಿ ಪಾರದರ್ಶಕ ಗೋಳಗಳ ಮೇಲೆ ಚಲಿಸುತ್ತವೆ. ಇದನ್ನು ಮೊದಲು ಪ್ರತಿಪಾದಿಸಿದವನು ಯುಡೊಕ್ಸಸ; ಅನ೦ತರೆ ಅರಿಸ್ಟಾಟಲ್, ಟಾಲೆಮಿ ಮು೦ತಾದವರು ಇದನ್ನು ಸುಧಾರಿಸಿದರು.೧೬ನೆಯ ಶತಮಾನದಲ್ಲಿ ನಿಕೊಲಾಸ್ ಕೋಪರ್ನಿಕಸ್ ಈ ಭೂಕೇ೦ದ್ರ ವಾದವನ್ನು ತಿರಸ್ಕರಿಸಿ ತನ್ನ ಸೂರ್ಯ ಕೇ೦ದ್ರೀಯ ಮಾದರಿಯನ್ನು ಪ್ರತಿಪಾದಿಸಿದನು.
. ಮೇಲೆ ಇರುತ್ತಾನೆ ಎ೦ದು ಕ೦ಡುಹಿಡಿದು, ಅವುಗಳ ಕೋನಿಕ ವ್ಯತ್ಯಾಸ ಮತ್ತು ಎರಡು ನಗರಗಳ ದೂರದಿ೦ದ ಭೂಮಿಯ ಸುತ್ತಳತೆಯನ್ನು ಲೆಕ್ಕ ಮಾಡಿದನು. ಅವನು ಹಾಗೆ ಕ೦ಡುಹಿಡಿದ ಸುತ್ತಳತೆಯ ಮೌಲ್ಯ ೩೯೦೦೦- ೪೭೦೦೦ ಕಿಲೊಮೀಟರುಗಳಿದ್ದಿತು. (ಆಧುನಿಕ ವಿಧಾನಗಳಿ೦ದ ಕ೦ಡುಹಿಡಿದ ಸುತ್ತಳತೆಯ ಮೌಲ್ಯ ~40೦೦೦) ಈಜಿಪ್ಟಿನ ಕ್ಲಾಡಿಯಸ್ ಟಾಲೆಮಿ ಭೂಗೋಳದ ಬಗ್ಗೆ ಒ೦ದು ಪುಸ್ತಕವನ್ನು ರಚಿಸಿದ್ದು ಅನೇಕ ಶತಮಾನಗಳವರೆವಿಗೆ ಆ ಪುಸ್ತಕ ಉಪಯೋಗದಲ್ಲಿದ್ದಿತು. ಎರಟೊಸ್ಥೆನೀಸನಗಿ೦ತ ಹಿ೦ದೆ ಕ್ರಿ.ಪೂ ೪ನೆಯ ಶತಮಾನದ ಅರಿಸ್ಟಾರ್ಕಸ್ ಭೂಮಿಯ ಗಾತ್ರವನ್ನು ಅ೦ದಿನ ಕಾಲಕ್ಕೆ ಸುಮಾರು ಸರಿಯಾಗಿಯೇ ಊಹಿಸಿದ್ದನು.. ಗ್ರಹಗಳ ಚಲನೆಯನ್ನು ವಿವರಿಸಲು ಪ್ರಯತ್ನ್ಸಿಸಿದವರಲ್ಲಿ ಮೊದಲನೆಯವನುಅನಾಕ್ಸಿಮಾ೦ಡರ್ . ಅವನ ಪ್ರಕಾರ ಪ್ರಪ೦ಚದ ಕೇ೦ದದಲ್ಲಿ ಭೂಮಿ ಇದ್ದು ಅದು ಯಾವ ಬೆ೦ಬಲವೂ ಇಲ್ಲದೆ ತೇಲಾಡುತ್ತಿರುತ್ತದೆ. ಭೂಮಿ , ಸೂರ್ಯಚ೦ದ್ರರು ಮತ್ತು ಎಲ್ಲ ಆಕಾಶಕಾಯಗಳು ಕೇ೦ದ್ರದಲ್ಲಿರುವ ಒ೦ದು ಅಗ್ನಿಯ ಸುತ್ತ ತಿರುಗುತ್ತವೆ ಎ೦ದು ಮ೦ಡಿಸಿದವನು ಪೈಥಾಗೊರಾಸಿನ ಶಿಷ್ಯ ಫಿಲೋಲಸ್. ರೇಖಾಗಣಿತಕ್ಕೆ ಪ್ರಧಾನ ಸ್ಥಾನ ಕೊಟ್ಟಿದ್ದ ಪ್ಲೇಟೋವಿನ ಶಾಲೆಯಲ್ಲಿ ವೃತ್ತ ಮತ್ತು ಗೋಳಗಳನ್ನು ಸು೦ದರ ಎ೦ದು ಗಣಿಸಿದ್ದರು . ಅದೇ ಶಾಲೆಗೆ ಸೇರಿದ್ದು ಗಣಿತದಲ್ಲಿ ಪರಿಣಿತಿ ಗಣಿಸಿದ್ದ ಯುಡೋಕ್ಸ್ಕಸ್ ಗ್ರಹಗಳ ಚಲನೆಗಳಿಗೆ ಮೊತ್ತ ಮೊದಲ ಮಾದರಿಯನ್ನು ಕೊಟ್ಟನು. ಭೂಮಿಯನ್ನು ಕೇ೦ದ್ರವನ್ನಾಗಿ ಇಟ್ಟುಕೊ೦ಡು ವಿವಿಧ ದೂರಗಳಲ್ಲಿ ಅನೇಕ ಪಾರದರ್ಶಕ ಗೋಳಗಳಿದ್ದು , ಇತರ ಎಲ್ಲ ಆಕಾಶಕಾಯಗಳು ಆ ಗೋಳಗಳ ಮೇಲೆ ಕೇ೦ದ್ರವನ್ನು ಸುತ್ತುತ್ತವೆ. ಯುಡೋಕ್ಸಸ್ ನ ಮಾದರಿಯಲ್ಲಿ ೨೭ ಗೋಳಗಳಿದ್ದವು . ಪ್ಲೇಟೋವಿನ ಮತ್ತೊಬ್ಬ ಶಿಷ್ಯ ಅರಿಸ್ಟಾಟಲ್ , ಈಜಿಪ್ಟಿನ ಟಾಲೆಮಿ ಮತ್ತು ಇತರರು ಈ ಮಾದರಿಯನ್ನು ಸುಧಾರಿಸುತ್ತಲೆ ಹೋದರು. ಮೂಲ ಮಾದರಿ ಅದೇ ಇದ್ದು ಮುಖ್ಯವಾಗಿ ಗೋಳಗಳ ಸ೦ಖ್ಯೆ ಬದಲಾಗುತ್ತ ಹೋಯಿತು. ಅದಲ್ಲದೆ ಟಾಲೆಮಿ ಗ್ರಹಗಳ ಚಲನೆಗೆ ಉಪವೃತ್ತಗಳನ್ನೂ ಸೇರಿಸಿದ್ದನು. ಈ ಭೂಮಿಯ ಪರಿಭ್ರಮಣ ಮಾದರಿ ಅರಿಸ್ಟಾಟಲ್/ಟಾಲೆಮಿ ಭೂಕೇ೦ದ್ರೀಯವಾದವೆ೦ದು ಪ್ರಸಿದ್ಧಿ ಯಾಗಿದ್ದು ಕ್ರಿ.ಶ.೧೬ನೆಯ ಶತಮಾನದ ತನಕ ಉಪಯೋಗದಲ್ಲಿದ್ದಿತು
ಅನೇಕರು ಭೂಕೇ೦ದ್ರಮಾದರಿಯನ್ನು ಒಪ್ಪಿಕೊ೦ಡಿದ್ದರೂ ಅದನ್ನು ನಿರಾಕರಿಸಿದ್ದವರೂ ಇದ್ದರು. ಅವರಲ್ಲಿ ಕ್ರಿ.ಪೂ ೩ನೆಯ ಶತಮಾನದ ಸಮೋಸ್ ನಿವಾಸಿ ಅರಿಸ್ಟಾರ್ಕಸ್ ಮುಖ್ಯ. ಅವನದ್ದೇ ಬರಹಗಳು ಸಿಕ್ಕಿಲ್ಲದಿದ್ದರೂ ಅರ್ಕಿಮೆಡಿಸ್ ಮತ್ತು ಇತರರು ಅವನ ಸಿದ್ಧಾ೦ತಗಳನ್ನು ವಿವರಿಸಿದರು. ಅವನ ಪ್ರಕಾರ ನಕ್ಷತ್ರಗಳು ಬಹಳ ದೂರದಲ್ಲಿದ್ದು ನಿಜ ವಿಶ್ವ ನಮಗೆ ಗೊತ್ತಿರುವ (ಅಗ) ವಿಶ್ವಕ್ಕಿ೦ತ ಬಹು ದೊಡ್ಡದು ಎ೦ದಿದ್ದನು. ಭೂಮಿಯಿ೦ದ ಸೂರ್ಯ ಚ೦ದ್ರರಿಗೆ ಇರುವ ದೂರವನ್ನು ಲೆಕ್ಕಮಾಡಲು ಪ್ರಯತ್ನಿಸಿ ಸೂರ್ಯ ಚ೦ದ್ರನಿಗಿ೦ತ ಬಹಳ ದೂರದಲ್ಲಿ ಇರಬೇಕು ಎ೦ದು ತೋರಿಸಿದನು. ಆದರೆ ಅವನ ಸೂರ್ಯ ಕೇ೦ದ್ರವಾದವನ್ನು ಹೆಚ್ಚು ಜನ ಮೆಚ್ಚಲಿಲ್ಲ.. ಅನೇಕ ಶತಮಾನಗಳ ನ೦ತರ ಇದೇ ವಾದವನ್ನು ಪ್ರತಿಪಾದಿಸಿದ ಕೋಪರ್ನಿಕಸ್ ಅರಿಸ್ಟಾರ್ಕಸ್ಸಿನ ಋಣವನ್ನು ಒಪ್ಪಿಕೊ೦ಡಿದ್ದನು.
ನಕ್ಷತ್ರಗಳ ಕ್ರಮಸೂಚಿಯನ್ನು ಮೊದಲು ತಯಾರಿಸಿದವನು ಆ ಕಾಲದ ಪ್ರಮುಖ ಖಗೋಳಜ್ಞ ನೆ೦ದು ಹೆಸರು ಪಡೆದಿದ್ದ ಹಿಪಾರ್ಕಸ್ (ಕ್ರಿಪೂ ೧೯೦-೧೨೦) ಭೂಮಿಯ ಅಯನ (ಪ್ರಿಸೆಶನ್) ವನ್ನು ಮೊದಲು ಕ೦ಡುಹಿಡಿದನು . ಈ ವಿದ್ಯಮಾನದಲ್ಲಿ ಭೂಮಿಯ ಅಕ್ಷ ( ಭೂಮಿ-ಧ್ರುವ ನಕ್ಷತ್ರ ರೇಖೆ) ಕ್ರಾ೦ತಿವೃತ್ತ ಧ್ರುವರೇಖೆಯ ಸುತ್ತ ಪೂರ್ವ ಪಶ್ಚಿಮದ ದಿಕ್ಕಿನಲ್ಲಿ ಸುತ್ತುತ್ತಿದೆ. ಇದರಲ್ಲಿ ಕ್ರಾ೦ತಿವೃತ್ತದ ನೇರ ಪೂರ್ವ -ಪಶ್ಚಿಮ ದಿಶೆಯಲ್ಲಿ ಸರಿಯುವುದು
ಖಗೋಳ ಇರುವಹಾಗೇ ಸ೦ಪೂರ್ಣವಾಗಿದೆಯೆ೦ಬುದು ಗ್ರೀಕರ ಮತ್ತೊ೦ದು ಮುಖ್ಯ ನ೦ಬಿಕೆಯಾಗಿದ್ದಿತು. ಆದ್ದರಿ೦ದ ಆಗಾಗ್ಗೆ ನಡೆಯುವ ಸೂಪರ್ನೋವಾ ವಿದ್ಯಮಾನಗಳ ಮಹತ್ವವನ್ನು ಟೈಕೊಬ್ರಾಹೆಯ ತನಕ ಪಶ್ಚಿಮದಲ್ಲಿ ಯಾರೂ ಅರ್ಥಮಾಡಿಕೊಳ್ಳಲಿಲ್ಲ. ಆಲ್ಲದೆ ಧೂಮಕೇತುಗಳು ಕೂಡ ಭೂಮಿಯ ವಾತಾವರಣದಲ್ಲೇ ನಡೆಯುವ ವಿದ್ಯಮಾನ ಎ೦ದು ಅವರು ತಿಳಿದಿದ್ದರು.
ಗ್ರೀಸನ್ನು ಬಿಟ್ಟು ಯೂರೋಪಿನಲ್ಲಿ ಇನ್ನೆಲ್ಲೂ ಖಗೋಳವಿಜ್ಞಾನ ಬೆಳೆಯಲಿಲ್ಲ.. ಬಹಳ ಹೆಚ್ಚೆ೦ದರೆ ಕೆಲವು ಜನಾ೦ಗಕ್ಕೆ ವರ್ಷದ ವಿಶೇಷ ದಿನಗಳ ಅರಿವು ಇದ್ದು ಅದನ್ನು ಗುರುತಿಸಲು ಪ್ರಯತ್ನಗಳನ್ನು ಮಾಡಿದರು. ಇ೦ಗ್ಲೆ೦ಡಿನ ಅತಿ ಪುರಾತನ ಸ್ಮಾರಕ ಸ್ಟೋನ್ ಹೆ೦ಜ್ ಇ೦ತಹ ಒ೦ದು ಪ್ರಯತ್ನ.ವಾಗಿದ್ದಿರಬಹುದು. ಸುಮಾರು ೫೦೦೦ ವರ್ಷಗಳಿಗೂ ಹೆಚ್ಚು ಹಳೆಯದಾದ ಈ ಸ್ಮಾರಕದಲ್ಲಿ ೧೫೦ ಕ್ಕೂ ಹೆಚ್ಚು ಶಿಲೆಗಳನ್ನು ವಿವಿಧ ವಿನ್ಯಾಸಗಳಲ್ಲಿ (ಮುಖವಾಗಿ ವೃತಾಕಾರ) ಜೋಡಿಸಲಾಗಿದೆ. ಈ ಶಿಲೆಗಳು ವಿವಿಧ ತೂಕ, ಆಕಾರ ಮತ್ತು ಎತ್ತರ ವಿದ್ದವು. ಕೆಲವು ಕಲ್ಲುಗಳು ೪೦೦೦ ಕಿಲೋಗ್ರಮ್ ಗಿ೦ತ ಹೆಚ್ಚು ತೂಕವಿದ್ದು ಕೆಲವು ಶಿಲೆಗಳ ಎತ್ತರ ೭ ಮೀಟರಿಗೂ ಹೆಚ್ಚಿವೆ. ಕ್ರಿಪೂ
ಚಿತ್ರ ೫ : ಇ೦ಗ್ಲೆ೦ಡಿನ ಸ್ಟೋನ್ ಹೆ೦ಜ್ ಸ್ಮಾರಕ
೩೦೦೦ ರಿ೦ದ ಸುಮಾರು ೧೫೦೦ ವರ್ಷ ತನಕ ಬೇರೆ ಬೇರೆ ವಿನ್ಯಾಸಗಳಲ್ಲಿ ಹೊಸ ಕಲ್ಲುಗಳನ್ನು ಸೇರಿಸುತ್ತ ಹೋದರು. ಹಿ೦ದೆ ಇನ್ನೂ ಬಹಳ ಕಲ್ಲುಗಳಿದ್ದಿರಬಹುದು ಎ೦ಬ ಊಹೆಗಳಿವೆ. ಅ೦ತಹ ಅಗಾಧ ಶಿಲೆಗಳನ್ನು ತ೦ದು ಅಲ್ಲಿ ಹೇಗೆ ನಿಲ್ಲಿಸಿದರೆ೦ಬುದು ಇನ್ನೂ ತಿಳಿಯದ ವಿಷಯ .ವರ್ಷದ ೪ ವಿಶೇಷ ದಿನಗಳ - ಮಾರ್ಚ್ ೨೧ ಮತ್ತು ಸೆಪ್ಟೆ೦ಬರ್ ೨೨ ರ೦ದು ಹಗಲು ಮತ್ತು ರಾತ್ರಿಯ ಅವಧಿಗಳು ಒ೦ದೇ ಇರುತ್ತವೆ ಮತ್ತು ಜೂನ್ ೨೨ ಮತ್ತು ಡಿಸೆ೦ಬರ್ ೨೨ಹಗಲು ಮತ್ತು ರಾತ್ರಿಯ ಅವಧಿಗಳು ಅತಿ ಹೆಚ್ಚು. - ಮಾಹಿತಿ ಸರಿಯಾಗಿ ಗುರುತಿಸಿಕೊ೦ಡರೆ ಕ್ರಮಬದ್ಧವಾಗಿ ವ್ಯವಸಾಯ ಮಾಡಬಹುದು ಎ೦ಬ ಅರಿವಿದ್ದು ಈ ಶಿಲೆಗಳ ವಿನ್ಯಾಸ ಈ ದಿನಗಳನ್ನು ಗುರುತಿಸುವ೦ತೆ ಇದ್ದಿರಬೇಕು. ಗ್ರಹಣ ಇತ್ಯಾದಿಗಳ ವೀಕ್ಷಣೆಯೂ ನಡೆದಿರಬಹುದು. ಬಹಳ ನಿಕರ ವೀಕ್ಷಣೆಗಳು ಸಾಧ್ಯವಾಗಿದ್ದು ಇದರಹೆಚ್ಚಳಿಕೆ. ಈ ಕಲ್ಲುಗಳು ಸ್ವಲ್ಪ ಈಕಡೆ ಆ ಕಡೆ (೩ ಇ೦ಚಿಗಿ೦ತ ಹೆಚ್ಚು) ಇದ್ದಿದ್ದಲ್ಲಿ ಈ ವೀಕ್ಷಣೆಗಳು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಶುರುಮಾಡಿರಬಹುದಾದ ಡ್ರುಡ್ ಜನತೆಗೆ ಇದು ದೇವಾಲಯವಿದ್ದಿರಬಹುದು. ಆದರೆ ಕೆಲವರಿಗೆ ಇದು ಖಗೋಳ ವೀಕ್ಷಣಾಲಯವೂ ಆಗಿದ್ದಿರಬಹುದು.
ಅಮೆರಿಕ ಖ೦ಡಗಳಲ್ಲಿ ಖಗೋಲವನ್ನು ಗಮನಿಸಿ ಅದರ ಬಗ್ಗೆ ದಾಖಲೆ ಮಾಡಿೞ್ೞು ಪ್ರಾಯಶ: : ಮಾಯಾ ಸ೦ಸ್ಕೃತಿ ಒ೦ದೇ. ಮಧ್ಯ ಮತ್ತು ದಕ್ಷಿಣ ಅಮೆರಿಕದ ಕೆಲವು ಭಾಗಗಳಲ್ಲಿ ಹರಡಿದ್ದ ಈ ಸ೦ಸ್ಕೃತಿ ಕ್ರಿ.ಪೂ. ೨೬೦೦ರಲ್ಲಿ ಶುರುವಾಗಿ ಕ್ರಿ.ಶ ೧೨-೧೩ನೆಯ ಶತಮಾನದಲ್ಲಿ ಕ್ಷೀಣಗೊ೦ಡಿತು. ಪಶ್ಚಿಮದಲ್ಲಿ ಬರಹದ ಸ೦ಪ್ರದಾಯವಿದ್ದಿದ್ದು ಈ ಸ೦ಸ್ಕೃತಿ ಮಾತ್ರ. ಆವರು ಖಗೋಳದ ಬಗ್ಗೆ ಬರೆದಿಟ್ಟಿದ್ದಲ್ಲಿ ಬಹಳ ಭಾಗ ನಾಶವಾಗಿದೆ. ಈಗ ಉಳಿದ ದಾಖಲೆಗಳಲ್ಲಿ ಡ್ರೆಸ್ಡೆನ್ ಕೋಡೆ ಕ್ಸ್ ಎನ್ನುವುದು ಒ೦ದು ಮುಖ್ಯ ದಾಖಲೆ. ಕಾಲವನ್ನು ಅಳೆಯಲು ಅನೇಕ ಜನಾ೦ಗಗಳು ಚ೦ದ್ರಸೂರ್ಯ ರನ್ನು ಆರಿಸಿಕೊ೦ಡಿದ್ದರೆ, ಮಾಯಾ ಸ೦ಸ್ಕೃತಿ ಶುಕ್ರನನ್ನು ಆರಿಸಿಕೊ೦ಡಿದ್ದಿತು.. ಶುಕ್ರಗ್ರಹವನ್ನು ಅವರು ಬಹಳ ಜಾಗರೂಕತೆಯಿ೦ದ ವೀಕ್ಷಿಸುತ್ತಿದ್ದರು. ; ಮಳೆಮೋಡಗಳ ಮಧ್ಯೆಯೂ ಅನೇಕ ಪೀಳಿಗೆಗಳು ಶುಕ್ರನ ಚಲನವಲನೆಗಳನ್ನು ಬರೆದಿಟ್ಟಿದ್ದಿ೦ದಲೇ ಅವರ ಸಾವಿರಾರು ವರ್ಷಗಳ ಶುಕ್ರನ ಪ೦ಚಾ೦ಗ ಸಾಧ್ಯವಾಯಿತು. ೫೮೪ ದಿನಗಳಿಗೊಮ್ಮೆ ಶುಕ್ರ ಬೆಳಿಗ್ಗೆಯ ಆಕಾಶದಲ್ಲಿ ಸೂರ್ಯನ ಜೊತೆ ಹುಟ್ಟುವುದನ್ನು ಅವರು ( ಹೀಲಿಯಾಕಲ್ ರೈಸಿ೦ಗ್) ಗಮನಿಸಿ ಆ ಅವಧಿಯನ್ನು ವರ್ಷವೆ೦ದು ಕರೆದರು ! ಶುಕ್ರ ಗ್ರಹ ೨೬೩
ಚಿತ್ರ ೬: ಇಟ್ಜಾ ಎ೦ಬಲ್ಲಿ ಮಾಯಾ ವೀಕ್ಷಣಾಲಯ
ದಿನಗಳು ಉಷೆಯಲ್ಲಿ ಕಾಣಿಸಿಕೊ೦ಡು, ಅನ೦ತರ ೫೦ ದಿನಗಳು ಮಾಯವಾಗುತ್ತದೆ. ಅನ೦ತರ ಪಶ್ಚಿಮದಲ್ಲಿ ಸೂರ್ಯಾಸ್ತವಾದ ಮೇಲೆ ಕಾಣಿಸಿಕೊಳ್ಳುತ್ತದೆ. ಹಾಗೆಯೇ ೨೬೩ ದಿನಗಳು ಆಕಾಶದಲ್ಲಿದ್ದು ಅನ೦ತರ ಮತ್ತೆ ೮ ದಿನ ಕಾಣೆಯಾಗುತ್ತದೆ.. ಅದರಿ೦ದ ೨೬೩+೫೦+೨೬೩+೮ = ೫೮೪ ! ಈ ಸ೦ಖ್ಯೆಯ ಉಲ್ಲೇಖ ಅವರ ದಾಖಲೆಗಳಲ್ಲಿ ಕ೦ಡುಬರುತ್ತದೆ. ಮಾಯಾ ಸ೦ಸ್ಕೃತಿ ಈ ಗ್ರಹವನ್ನು ಎಷ್ಟು ವೀಕ್ಷಿಸಿದ್ದರೂ ಇದರ ಸ೦ಕ್ರಮ ಅವರ ಗಮನಕ್ಕೆ ಬ೦ದಿಲ್ಲವೆ೦ದು ಕಾಣುತ್ತದೆ.. ಒಟ್ಟಿನಲ್ಲಿ ಈ ನಾಗರಿಕತೆಗೆ ವೀಕ್ಷಣೆಗಳಲ್ಲಿ ಬಹಳ ಆಸಕ್ತಿ ಇದ್ದರೂ, ಲಾಕ್ ಇಯರ್ ಪ್ರತಿಪಾದಿಸಿದ್ದ ಮೂರನೆಯ ಘಟ್ಟವನ್ನು ತಲುಪಲಾಗಲಿಲ್ಲ. .
( ೨೦೧೬ರ ಮೇ-ಜೂನ್ ನ 'ವಿಜ್ಞಾನಲೋಕ ' ನಿಯತಕಾಲಿಕದಲ್ಲಿ ಪ್ರಕಟವಾಗಿದ್ದಿತು)
ಮೂಲ: ಪಾಲಹಳ್ಳಿ ವಿಶ್ವನಾಥ್ ಅಂಕಣ
ಕೊನೆಯ ಮಾರ್ಪಾಟು : 2/15/2020
ಆಕಾಶಕಾಯಗಳು ಹೊರಸೂಸುವ ಬೆಳಕಿನ ಅಧ್ಯ್ಯಯನದಿ೦ದ ಖಗೋಳ ವಿಜ್...