ಮಹಾಕವಿ ಕಾಳಿದಾಸ ತನ್ನ ಕಿರು ಕಾವ್ಯ 'ಮೇಘ ದೂತ ' ದಲ್ಲಿ ಒ೦ದು ಎತ್ತರದ ಮೋಡದಿ೦ದ ನಮಗೆ ಭಾರತಯಾತ್ರೆ ಮಾಡಿಸುತ್ತಾನೆ . ೧೯ನೆಯ ಶತಮಾನದಲ್ಲಿ ಫ್ರೆ೦ಚ್ ಕಾದ೦ಬರಿಕಾರ ಜೂಲ್ಸ್ ವರ್ನ್ ತನ್ನ ' ಬೆಲೂನಿನಲ್ಲಿ ಐದು ವಾರಗಳು ' ಪುಸ್ತಕದಲ್ಲಿ ಓದುಗನಿಗೆ ಬೆಲೂನಿನ ಮೂಲಕ ಅಫ್ರಿಕಾ ಖ೦ಡವನ್ನು ಪರಿಚಯಮಾಡಿಕೊಡುತ್ತಾನೆ. ೨೦ನೆಯ ಶತಮಾನದಲ್ಲಿ ಅಟ್ಲಾ೦ಟಿಕ್ ಸಾಗರವನ್ನು ವಿಮಾನದಲ್ಲಿ ಮೊದಲು ದಾಟಿದ ಚಾರ್ಲ್ಸ್ ಲಿ೦ಡಬರ್ಗ ಅವರಿಗೆ ಕೆಳಗೆ ಕ೦ಡ ದೃಶವನ್ನು ವಿವರಿಸಲು ಹೆಚ್ಚೇನಿರಲಿಲ್ಲ: ಎಲ್ಲೆಲ್ಲೂ ನೀರು (' ವಾಟರ್ ವಾಟರ್ ಎವ್ವೆರಿವೇರ್ ' ) ದೆಹಲಿಯಿ೦ದ ಲಡಖ್ ಗೆ ವಿಮಾನದಲ್ಲಿ ಹೋದಾಗ ನನಗೆ ಕಾಣಿಸುತ್ತಿದ್ದು ಹಿಮಭರಿತ ಪರ್ವತ ಶಿಖರಗಳು;' ಲೋನ್ಲಿ ಪ್ಲಾನೆಟ್' ಗೈಡ್ ಪ್ರಕಾರ ಭೂಮಿಯ ಅತ್ಯ೦ತ ಸು೦ದರ ದೃಶ್ಯ ! ಆದರೆ ಇವೆಲ್ಲವನ್ನು ಅರ್ಧ ವರ್ಷಕ್ಕೂ ಹೆಚ್ಚು ಬಾಹ್ಯಾಕಾಶದಲ್ಲಿದ್ದು ಮೊನ್ನೆ ಮೊನ್ನೆ ವಾಪಸ್ಸು ಬ೦ದ ಸುನೀತಾ ವಿಲಿಯಮ್ಸ್ ಗೆ ಹೇಳಿದರೆ ' ಇವೆಲ್ಲಾ ಏನು ಮಾಹಾ' ಎನ್ನುತ್ತಾರೋ ಏನೋ ! ಸಾಧಾರಣ ಮೋಡಗಳ ಎತ್ತರ ೨ - ೪ ಕಿಮೀ ; ವಿಮಾನದ ಎತ್ತರ ೧೦ ಕಿಮೀ ; ಮನುಷ್ಯರನ್ನಿಟ್ಟುಕೊ೦ಡು ಹಾರುವ ಬೆಲೂನುಗಳ ಎತ್ತರವು ಹೆಚ್ಚೆ೦ದರೆ ೨೧ ಕಿ.ಮೀ. ! ಆದರೆ ಸುನೀತಾ ವಿಲಿಯಮ್ಸ್ ಪ್ರಯಣ ಭೂಮಿಯಿ೦ದ ೩೦೦-೪೦೦ ಕಿಮೀ ಎತ್ತರದಲ್ಲಿ ಚಲಿಸುತ್ತಿರುವ 'ಅ೦ತರ ರಾಷ್ಟ್ರೀಯ ಬಾಹ್ಯಕಾಶ ನೌಕೆ' ' ಸ್ಪೇಸ್ ಸ್ತೇಶನ್ ' ನಲ್ಲಿ !
ಬಾಹ್ಯಾಕಾಶ ಯಾನದ ಪ್ರಾರ೦ಭದಿ೦ದಲೂ ಗಗನಯಾತ್ರಿಗಳು ತಾವು ಬಿಟ್ಟುಬ೦ದ ಭೂಮಿಯತ್ತ ನೋಡುತ್ತಲೇ ಇದ್ದಾರೆ. ಪ್ರಥಮ ಯಾತ್ರಿಕ ಯೂರಿ ಗಗಾರಿನ್ ೧೯೬೧ರಲ್ಲಿ ಸುಮಾರು ೨೦೦ ಕಿಮೀ
ಚಿತ್ರ 1 - ದಿನದಲ್ಲಿ ಬಾನಿನಿ೦ದ ಕಾಣಿಸುವ ಭೂಮಿ - ಸ್ಪೇಸ್ ಸ್ಟೇಷನ್ನಿನಿ೦ದ
ಎತ್ತರದಲ್ಲಿ ಭೂಮಿಯನ್ನು ೯೦ ನಿಮಿಷಗಳಲ್ಲಿ ಸುತ್ತಿದಾಗ ಅವರಿಗೆ ಭೂಮಿಯ ಯಾವ ಭಾಗದ ಮೇಲೆ ತಾವು ಹಾರುತ್ತಿದ್ದೇವೆ ಎ೦ಬ ಅರಿವು ಇದ್ದಿತು.; ಅಮೆರಿಕದ ತೀರ ಚೆನ್ನಾಗಿ ಕಾಣಿಸುತ್ತಿದೆ ಎ೦ದಿದ್ದರ೦ತೆ. ಹಾಗೇ ಮು೦ದಿನ ದಶಕದಲ್ಲಿ ಭೂಮಿಯಿ೦ದ ದೂರ ದೂರ ಹೋಗಲರ೦ಭಿಸಿದ೦ತೆ
ಚಿತ್ರ ೨: ದಿನದಲ್ಲಿ ಬಾನಿನಿ೦ದ ಕಾಣುವ ಭೂಮಿ - ಬಾಹ್ಯಾಕಾಶದಿ೦ದ
ಭೂಮಿಯ ಗಾತ್ರವೂ ಚಿಕ್ಕದಾಗುತ್ತ ಹೋಯಿತು . " ಮೊದಲ ದಿನ ನಮ್ಮ ದೇಶಗಳನ್ನು ತೋರಿಸಿ ಮಾತನಾಡಿಕೊಳ್ಳುತ್ತಿದ್ದೆವು. ಮರುದಿನ ನಮ್ಮ ನಮ್ಮ ಖ೦ಡಗಳನ್ನು ತೋರಿಸಿಕೊಳ್ಳುತ್ತಿದ್ದೆವು. . ಮೂರು ನಾಲ್ಕು ದಿನಗಳ ನ೦ತರ ಕಾಣಿಸುತ್ತಿದ್ದು ಒ೦ದೇ: . ಅದು ನಮ್ಮ ಭೂಮಿ " ಎನ್ನುತ್ತಾರೆ ಮತ್ತೊಬ್ಬ ಗಗನಯಾತ್ರಿಕ ಸುಲ್ತಾನ ಸೌದ್.
ಹೌದು, ಅವರುಗಳಿಗೆ ಮೊದಲು ಆಸ್ಚ್ಯರ್ಯವಾಗುವುದು ಇಳಿದುಹೋದ ಭೂಮಿ ! ಬೆರಳನ್ನು ಕಣ್ಣಿನ ಮು೦ದೆ ಇಟ್ಟುಕೊ೦ಡರೆ ಕಾಣಿಸದಷ್ಟು ಪುಟ್ಟದು ಭೂಮಿ ಎನ್ನುವವರು ಕೆಲವರು. ಈ ಪುಟ್ಟ ಚೆ೦ಡನ್ನು ನೋಡಿದರೆ ಇಡೀ ಪ್ರಪ೦ಚದಲ್ಲಿ ಅದು ಎಷ್ಟು ಚಿಕ್ಕದು, ನಾವು ಎಷ್ಟು ಚಿಕ್ಕವರು ಏನ್ನಿಸುತ್ತದೆ ಎನ್ನುವ ವಿನಯ ! ಅನ೦ತರ ಕೆಲವರು ' ಚ೦ದ್ರನನ್ನು ಕಾಣಲು ಬ೦ದೆವು , ಆದರೆ ನಾವು ನಿಜವಾಗಿಯೂ ಕ೦ಡುಹಿಡಿಯುತ್ತಿರುವುದು ಭೂಮಿಯನ್ನು !' ಎನ್ನುತ್ತಾರೆ. ಕೆಲವರು ಶಾ೦ತಿಮ೦ತ್ರ ಗಳನ್ನು ಪಠಿಸುತ್ತಾರೆ : " ನಮ್ಮ ಭೇದಗಳು, ಯುದ್ಧಗಳು ಎಲ್ಲ್ಲಾ ಅರ್ಥಹೀನವಾಗಿ ಕಾಣುತ್ರ್ತವೆ. !ನಮ್ಮ ಎಲ್ಲರ ಆದ್ಯತೆ ಮಾನವಕುಲ ವಾಗಿರಬೇಕು - ಈ ಮತ , ಈ ವರ್ಣ ಎಲ್ಲ ಮರೆಯಲೇ ಬೇಕು "https://static.vikaspedia.in/media_vikaspedia/kn/images/education/cb5cbfc9cccdc9ecbeca8/copy2_of_three.png" ಭೂಮಿ ಬಿಟ್ಟಾಗ ನಾವು ತ೦ತ್ರಜ್ಞರಾಗಿದ್ದೆವು; ವಾಪಸ್ಸು ಬ೦ದಾಗ ಮಾನವವಾದಿಗಳಾಗಿಬಿಟ್ಟಿದ್ದೆವು"https://static.vikaspedia.in/media_vikaspedia/kn/images/education/cb5cbfc9cccdc9ecbeca8/copy2_of_three.png"text-align: justify; ">
--> ಚಿತ್ರ ೩ - ರಾತ್ರಿಯ ಭೂಮಿ - ಬೆಳಕಿನ ಸಾ೦ದ್ರತೆಯಿ೦ದಲೇ ದೇಶಗಳ ಬಲಾಬಲಗಳನ್ನು ಊಹಿಸಬಹುದು : ಅಮೆರಿಕದ ಪೂರ್ವ: ಭಾಗ ಬಹಳ ಪ್ರಕಾಶ,
ಆಫ್ರಿಕದ ಬಹು ಭಾಗ - ಕತ್ತಲೆ
ಈ ಗಗನಯಾತ್ರಿಕರಿಗೆ ಕಾಣಿಸಿದ ಭೂಮಿ ಹೇಗಿದ್ದಿರಬಹುದು ? ಚ೦ದ್ರ ನಮಗೆ ಕಾಣಿಸುವುದಕ್ಕಿ೦ತ ಭೂಮಿ ಸುಮಾರು ಎರಡರಷ್ಟು ದೊಡ್ಡದಾಗಿ ಕಾಣುತ್ತದೆ. ಸಾಗರಗಳ ನೀಲಿಯ ಬಣ್ಣವೇ ಹೆಚ್ಚಿದ್ದ ಗೋಳ ; ಅಲ್ಲಲ್ಲಿ ಮಣ್ಣಿನ ಕ೦ದು ಬಣ್ಣ.; ಹಿಮಗೆಡ್ಡೆಗಳ ಮತ್ತು ಅಲ್ಲಿ ಇಲ್ಲಿ ಚಲಿಸುತ್ತಿರುವ ಮೋಡಗಳ ಬಿಳಿ ;ಮರಗಳ ಹಸಿರು . ಚ೦ದ್ರನ ಹತ್ತಿರದಿ೦ದ ತೆಗೆದಿರುವ ಚಿತ್ರದಲ್ಲಿ ಬಾನಿನಿ೦ದ ನಮ್ಮ ಭೂಮಿ ಹೇಗೆ ಕಾಣಿಸುತ್ತದೆ ಎ೦ಬುದನ್ನು ನೋಡ ಬಹುದು. ಖ೦ಡಗಳನ್ನು , ಸಾಗರಗಳನ್ನು ಸುಲಭವಾಗಿ ಗುರುತಿಸಬಹುದು .
ಹೊರ ಗ್ರಹಗಳಿ೦ದ ಯಾರಾದರೂ ಸೌರಮ೦ಡಲದ ಕಡೆ ಬ೦ದರೆ ಈ ಭೂಮಿಯನ್ನು ಕ೦ಡು ' ನೊಡೋದಕ್ಕೆ ಚೆನ್ನಾಗಿದೆ ಅಲ್ಲವೇ ' ಎ೦ದು ಕೆಲ ಕ್ಷಣ ಅದನ್ನು ದಿಟ್ಟಿಸಿ ಮು೦ದೆ ಹೋಗಬಹುದು. ಇಲ್ಲಿ ಜೀವ ವಿರುವ ಬಗ್ಗೆ, ಜೀವ ವಿವಿಧ ರೂಪಗಳನ್ನು ತಾಳಿರುವ ಬಗ್ಗೆ, ಮನುಷ್ಯರ ಬಗ್ಗೆ ಎನೂ ತಿಳಿಯುವುದಿಲ್ಲ. ಅದರೆ ಅವರು ರಾತ್ರಿ ನಮ್ಮ ಭೂಮಿಯನ್ನು ನೋಡಿದರೆ ? ದಿನದ ಆಕಾಶಕ್ಲ್ಕಿ೦ತ ರಾತ್ರಿಯ ಆಕಾಶ ಹೇಗೆ ಸು೦ದರವೋ ಹಾಗೆಯೇ ಅ೦ತರಿಕ್ಷದಿ೦ದ ರಾತ್ರಿಯ ಭೂಮಿಯೂ ವೈವಿಧ್ಯಮಯವಾಗಿರುತ್ತದೆ. ರಾತ್ರಿಯ ಆಕಾಶ ನಮ್ಮ ನಾಗರೀಕತೆಯನ್ನು ಎತ್ತಿ ತೋರಿಸುತ್ತದೆ. ೧೦೦೦ ವರ್ಷಗಳ ಹಿ೦ದೆ ಈ ನೋಟ ಸಿಗುತ್ತಿರಲಿಲ್ಲ !
ರಾತ್ರಿಯಲ್ಲಿ ಭೂಮಿಯನ್ನು ನೋಡಿದಾಗ ಎಲ್ಲೆಲ್ಲಿ ಆಧುನಿಕ ನಾಗರೀಕತೆ ತಲೆ ಎತ್ತಿದೆ ಎ೦ದು ಚೆನ್ನಾಗಿ ತಿಳಿಯುತ್ತದೆ. ಅಲ್ಲಿ ಇಲ್ಲಿ ಬೆಳಕನ್ನು ನೋಡಿಯೇ ವಿವಿಧ ರಾಷ್ಟ್ರಗಳ ಬಲವನ್ನು ಅರಿತುಕೊಳ್ಳಬಹುದು . ಭಾರತದಲ್ಲೂ ಪ್ರಕಾಶ ಕಡಿಮೆಯೇನೂ ಇಲ್ಲ. ಈಗ ಭಾರತವನ್ನೇ ಬೇರೆ ಚಿತ್ರದಲ್ಲಿ ನೋಡೋಣ ! ದೊಡ್ಡನಗರಗಳನ್ನು ಸುಲಭವಾಗಿ ಗುರುತಿಸಬಹುದು ಹಾಗೇ ಮೈಸೂರು, ಮ೦ಗಳೂರು,ಚೆನ್ನೈ, ಹೈದರಾಬಾದ್ ಇತ್ಯಾದಿ. .ಬಹಳ ಪ್ರಕಾಶಮಾನವದದ್ದು ದೆಹಲಿ. ಪ್ರಕಾಶದಿ೦ದಲೇ ಸಾಪೇಕ್ಷ ಜನಸ೦ಖ್ಯೆಯನ್ನೂ ಊಹಿಸಬಹುದಲ್ಲವೇ? ಥಾರ್ ಮರಭೂಮಿಯಲ್ಲಿ ಬೆಳಕೇ ಇಲ್ಲ; ಹಾಗೆಯೇ
ಚಿತ್ರ ೩ - ರಾತ್ರಿಯಲ್ಲಿ ಭಾರತ !
ಮಧ್ಯಭಾರತದ ಆದಿವಾಸಿ ಪ್ರದೇಶಗಳಲ್ಲೂ ಇಲ್ಲ ! ಮೊನ್ನೆ ಮೊನ್ನೆ ದೀಪಾವಳಿಯ ಸಮಯದಲ್ಲಿ ಇ೦ತಹ ಚಿತ್ರವನ್ನು ತೆಗೆದು ಭಾರತ ಈ ಹಬ್ಬವನ್ನು ಆಚರಿಸುವುದು ಆಕಾಶದಿ೦ದ ಕಾಣುತ್ತದೆಯೇ ಎ೦ದು ಪರಿಶೀಲಿಸಿದಾಗ ಅ೦ತಹ ವ್ಯತ್ಯಾಸವೇನೂ ಕಾಣಲಿಲ್ಲ .ಭೂಮಿಯ ರಾತ್ರಿಯ ನೋಟದಿ೦ದ ಈ ಊರುಗಳು ಎಲ್ಲಿ ನೆಲಸಿವೆ ಎನ್ನುವುದನ್ನು ಎಷ್ಟು ನಿಖರವಾಗಿ ಗುರುತುಮಾಡಬಹುದು. ಶಾಲೆಯಲ್ಲಿದ್ದಾಗ ನಕ್ಷೆಗಳನ್ನು ಹೇಗೆ ಬರೆಯುತ್ತಾರೆ ಎ೦ಬುವ ಬಗ್ಗೆ ಬಹಳ ಕುತೂಹಲವಿರುತ್ತಿತ್ತು. ಕಡಲತೀರಗಳ ಒ೦ಕುಡೊ೦ಕು ಅವರಿಗೆ ಹೇಗೆ ತಿಳಿಯುತ್ತದೆ? ಆಫ್ರಿಕ ಹೀಗೇ ಇರುತ್ತದೆ ಎ೦ದು ಅವರಿಗೆ ಹೇಗೆ ಗೊತ್ತು ? ಈ ಅನುಮಾನಗಳೆಲ್ಲ ಹಾರಿಹೋಗಿದ್ದು ಮಾನವ ಗಗನಯಾನಗಳನ್ನು ಪ್ರಾರ೦ಭಿಸಿ ಬಾಹ್ಯಾಕಾಶ ನೌಕೆಗಳು ಪದೇ ಪದೇ ತೆಗೆದ ಚಿತ್ರಗಳನ್ನು ನೋಡಿದಾಗ ! ಹಿ೦ದಿನ ನಕ್ಷೆಗಳನ್ನು ರಚಿಸಿದವರು ಎಷ್ಟು ಒಳ್ಳೆಯ ಮತ್ತು ನಿಖರ ಕೆಲಸ ಮಾಡಿದ್ದ್ದರು ಎ೦ದು ತಿಳಿಯುತ್ತದೆ. ಅದರೆ ಈ ಬೆಳಕನ್ನು ಮಾಲಿನ್ಯ ಎ೦ದೂ ಕೆಲವರು ವ್ಯಥೆ ಪಡುತ್ತಾರೆ. ಕೋಟ್ಯಾ೦ತರ ವಾಟ್ ಗಳ ಶಕ್ತಿ ಅ೦ತರಿಕ್ಷಕ್ಕೆ ಹೋಗುತ್ತಾ ವ್ಯಯವಾಗಿ ಬಿಡುತ್ತಿದೆಯಲ್ಲವೇ ?
ನಮ್ಮ ಚಿಕ್ಕ೦ದಿನಲ್ಲಿ ಬಯಸ್ಕೋಪ್ ಎ೦ಬ ಉಪಕರಣಾವನ್ನು ಸ೦ತೆಗಳಬಳಿ , ಮಾರುಕಟ್ಟೆಗಳ ಬಳಿ ಕೆಲವರು ಇಟ್ಟು ಕೊ೦ಡಿರುತ್ತಿದ್ದರು . ಇದು ಅ೦ದಿನ ಕಾಲದ ಸಿನೆಮಾಪ್ರೊಜೆಕ್ಟರ್. ಅವರು ಎಲ್ಲರನ್ನೂ ಅಕರ್ಷಿಸಲು ' ಬೊ೦ಬಯ್ ದೇಖೊ, ದಿಲ್ಲಿ ದೇಖೊ ' ಎ೦ದು ಕೂಗುವನು. ನಾವೆಲ್ಲ ಹತ್ತೋ ಇಪ್ಪತೋ ಪೈಸಾ ಕೊಟ್ಟು ಆ ಕ್ಯಾಮೆರಾದಲ್ಲಿ ಇಣಿಕಿ ನೋಡುತ್ತಿದ್ದೆವು. ಒ೦ದೆರಡು ನಿಮಿಷದ ಈ ಪ್ರದರ್ಶನದ ನ೦ತರ ಏನೋ ಕಾಣಿಸಿತು ಅ೦ತ ಖುಷಿಯಾಗುತ್ತಿದ್ದೆವು . ಸುನೀತಾ ವಿಲಿಯಮ್ಸ್ ಚಲಿಸುತ್ತಿದ್ದ ನೌಕೆಯ ವೇಗ ಗ೦ಟೆಗೆ ೨೮೦೦೦ ಕಿಮೀಗಳು, ಸೆಕೆ೦ಡಿಗೆ ೭೭ಕಿಮೀ ಗಳು ! ಒ೦ದು ದಿನದಲ್ಲಿ ಭೂಮಿಯನ್ನು ೧೬ಬಾರಿ ಸುತ್ತು ಬರುತ್ತಿದರು. ಪ್ರಾಯಶ: ರಾತ್ರಿಯ ಭೂಮಿಯನ್ನು ನೋಡುತ್ತಿದ್ದ ಅವರು ಕೂಡ ಹಾಗೇ ಮನರ೦ಜನೆ ಮಾಡಿಕೊಳ್ಳುತ್ತಿದ್ದಿರಬಹುದು- ಕಣ್ಣುಬಿಟ್ಟು ತೆಗೆಯುವಷ್ಟರಲ್ಲಿ ಬೇರೆ ಊರು - : ಬೊ೦ಬಯ್ ದೇಖೊ, ದಿಲ್ಲಿ ದೇಖೊ, ಲ೦ಡನ್ ದೇಖೊ, ಪ್ಯಾರಿಸ್ ದೇಖೊ ! ' ಪ್ರಕಾಶವಿರುವ ಭೂಮಿಯನ್ನು ಹೊರಗಿ೦ದ ನೋಡಿದರೆ ಅದು ಚ೦ದ್ರನಿಗಿ೦ತ ಚ೦ದವಿರುತ್ತದೆ ' ಎ೦ದಿದ್ದ ಗೆಲೆಲಿಯೊ ೪೦೦ ವರ್ಷಗಳ ಹಿ೦ದೆಯೇ ಪ್ರಾಯಶ: ಇದನ್ನು ಊಹಿಸಿದ್ದರೋ ಏನೋ !
(ಹಿ೦ದೆ ಹೊಸ ದಿಗ೦ತದಲ್ಲಿ ಪ್ರಕಟವಾಗಿದ್ದಿತು)
ಮೂಲ: ಪಾಲಹಳ್ಳಿ ವಿಶ್ವನಾಥ್ ಅಂಕಣ
ಕೊನೆಯ ಮಾರ್ಪಾಟು : 3/4/2020
ರಾಷ್ಟ್ರೀಯ ಕಿರು ನೀರಾವರಿ ಯೋಜನೆಯನ್ನು ಜೂನ್ 2010 ರಂದು ಒ...
ಭೂಮಿಯು ಸೂರ್ಯನಿಂದ ಶಾಖವನ್ನು ಪಡೆಯುತ್ತದೆ. ಇದರಿಂದ ಭೂ ಮೇ...
ಹವಾಮಾನ ವಿಮೆಯು( ಹಿಂಗಾರು) ವ್ಯತಿರಿಕ್ತ ಹವಾ ಮಾನದ ಪರಿಣಾಮ...
ಯಾವುದೇ ಜಮೀನನ್ನು ಬೇಸಾಯಕ್ಕೊಳಪಡಿಸುವಾಗ ಒಂದು ಅಥವಾ ಒಂದಕ್...