অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಭಾರತದಲ್ಲಿ ಭೂ ವಿಜ್ಞಾನ : ಒಂದು ಕಿರುನೋಟ

ಭಾರತದಲ್ಲಿ ಭೂ ವಿಜ್ಞಾನ : ಒಂದು ಕಿರುನೋಟ

ಪ್ರಕೃತಿಯನ್ನು ಅರಿಯಲು ನೆರವು ನೀಡುವಲ್ಲಿ ವಿಜ್ಞಾನ ಲೋಕದ ಪಾತ್ರ ಅಪಾರ. ವಿಜ್ಞಾನವು ಅದರ ಮೂಲ ಸ್ವಭಾವದಲ್ಲಿ ಪ್ರಕೃತಿಯ ಒಳ ಹೊರಗನ್ನು ವಿವರಿಸುವುದರ ಜೊತೆಗೆ ಭವಿಷ್ಯದಲ್ಲಿ ಅದರ ರಚನೆ, ಆಗು-ಹೋಗುಗಳನ್ನು ಊಹಿಸುವ ಪ್ರಕ್ರಿಯೆಯನ್ನೂ ಅಪೇಕ್ಷಿಸುತ್ತದೆ. ನಾವು ಮಾನವರು ನೆಲೆಸಿರುವ ಭೂಮಿ, ಅದರ ರಚನೆ, ಸುತ್ತುವರೆದ ವಾತಾವರಣ, ಅದನ್ನಾವರಿಸಿರುವ ವಿಶಾಲ ಆಗಸ ಇವೆಲ್ಲವೂ ನಮ್ಮನ್ನು ಸದಾ ಮನಮೋಹಕಗೊಳಿಸುವ0ಥದ್ದು. ಇವುಗಳ ಅಂತರ್ಯವನ್ನು ತಿಳಿಯಲು ಕಳೆದ ಎರಡು ಮೂರು ಶತಮಾನಗಳಲ್ಲಿ ವಿಜ್ಞಾನವು ಸ್ವಲ್ಪ ಮಟ್ಟಿಗೆ ಸಫಲವಾಗಿದ್ದರೂ ಇನ್ನೂ  ನಮ್ಮ ಗಮನಕ್ಕೆ ಬಾರದ ಅದೆಷ್ಟೋ ಚಿದಂಬರ ರಹಸ್ಯಗಳು ಪ್ರಕೃತಿಯ ಅ0ತರಾಳದಲ್ಲಿ ಅಡಗಿಕೊಂಡಿವೆ.

ಮೊದಲಿನಿಂದಲೂ  ಭೂಮಂಡಲದ ಹವಾಮಾನದ ಸಂಕೀರ್ಣ ಸ್ವರೂಪವು ನಮ್ಮನ್ನು ಗೊಂದಲಕ್ಕೀಡುಮಾಡಿದೆ. ಹೆಸರಾ0ತ ವಿಜ್ಞಾನಿ ಕನ್ನಡಿಗ ಪ್ರೊ. ರೊದ್ದಂ ನರಸಿಂಹರವರು Journal of Indian Institute of Science ವೈಜ್ಞಾನಿಕ ಪತ್ರಿಕೆಯ ತಮ್ಮ ಬರಹದಲ್ಲಿ ಭೂ ವಿಜ್ಞಾನವನ್ನು "21ನೇ ಶತಮಾನದ ಒಂದು ಮಹತ್ತರ ಯೋಜನೆಯ ಪ್ರಬಲ ಉಮೇದುದಾರ" ಎಂದು ಬಣ್ಣಿಸಿದ್ದಾರೆ. ಭೂ ವಿಜ್ಞಾನವು ಒ0ದು ವ್ಯವಸ್ಥಿತ ಅಧ್ಯಯನ ವಿಭಾಗವಾಗಿದ್ದು ಭೂಮಿ, ವಾಯುಮಂಡಲ ಹಾಗೂ  ಮಹಾಸಾಗರಗಳು ಅದರ ಅ0ಗಗಳಾಗಿವೆ. ಹವಾಮಾನ ಮುನ್ಸೂಚನೆಯು ಭೂ ವಿಜ್ಞಾನದ ಅವಿಭಾಜ್ಯ ಅಂಗವಾಗಿದ್ದು ಇದನ್ನು ಸಮರ್ಥವಾಗಿ ಊಹಿಸಲು ನೆಲ,ಜಲ,ಗಾಳಿ ಇವುಗಳ ಪರಸ್ಪರ ಸ0ವಹನವನ್ನು ಚೆನ್ನಾಗಿ ತಿಳಿದುಕೊಳ್ಳುವುದು ತು0ಬಾ ಮಹತ್ವದ್ದಾಗಿರುತ್ತದೆ.

ಹವಾಮಾನ ಮುನ್ಸೂಚನೆಯ ಕೆಲಸ ಅತೀವ ಸಂಕೀರ್ಣತೆಯಿ0ದ ಕೂಡಿದ್ದು ಮಾನವ ನಿರ್ಮಿತ ಉಪಗ್ರಹಗಳು ಹಾಗೂ ಸೂಪರ್ ಕ0ಪ್ಯೂಟರಗಳು ಅತ್ಯಗತ್ಯ. ಸುಧಾರಿತ ವಿಜ್ಞಾನ-ತಂತ್ರಜ್ಞಾನದ ಬಲದಿಂದ ಹವಾಮಾನದ ವರ್ತನೆಯನ್ನು ಅಂದಾಜಿಸುವಲ್ಲಿ ನಾವು ನಿರ0ತರ ಪ್ರಗತಿ ಸಾಧಿಸುತ್ತಿದ್ದೇವೆ. 2013ರಲ್ಲಿ ಒರಿಸ್ಸಾ, ಪಶ್ಚಿಮ ಬಂಗಾಳ, ಆಂಧ್ರದ ಕರಾವಳಿಯೆ ಫೈಲಿನ್ ಚಂಡಮಾರುತ ಅಪ್ಪಳಿಸಿದಾಗ ಹವಾಮಾನ ತಜ್ಞರ ಸಮಯೋಚಿತ ನಿಖರ ಊಹೆಯಿಂದಾಗಿ ಸಾವಿರಾರು ಜನರ ಜೀವ ಉಳಿಯಿತು.

ಭಾರತದಲ್ಲಿ ಭೂ ವಿಜ್ಞಾನ ಬಗೆಗಿನ ಆಸಕ್ತಿ, ಚಟುವಟಿಕೆಗಳು ಬ್ರಿಟಿಷರ ಕಾಲದಲ್ಲೇ ರೂಪುಪಡೆದುಕೊಳ್ಳತೊಡಗಿತ್ತು. ಭಾರತದ ಭೂವಿಜ್ಞಾನ ಸ0ಸ್ಥೆಗಳ ಪೈಕಿ ಅತ್ಯಂತ ಹಳೆಯದಾದ 'ಭಾರತೀಯ ಹವಾಮಾನ ಇಲಾಖೆ(ಭಾ.ಹ.ಇ.)'ಯನ್ನು 1875ರಲ್ಲಿ ಸ್ಥಾಪಿಸಲಾಯಿತು.  ದಿನಪತ್ರಿಕೆಗಳಲ್ಲಿ, ದೂರದರ್ಶನದಲ್ಲಿ, ಆಕಾಶವಾಣಿಯಲ್ಲಿ ಬಿತ್ತರಗೊಳ್ಳುವ ಹವಾಮಾನ ವರದಿಗಳು ಭಾ.ಹ.ಇ. ಯ ಮಾಹಿತಿಯನ್ನು ಆಧರಿಸಿರುತ್ತವೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಇಸ್ರೋದ ಉಪಗ್ರಹಗಳು ಸೆರೆಹಿಡಿದ ಚಿತ್ರಗಳನ್ನು ಬಳಸಿಕೊಳ್ಳುವ ಭಾ.ಹ.ಇ.ಯು ಸಾಗರಗಳಲ್ಲಿ ರೂಪುಗೊಳ್ಳುವ ಚ0ಡಮಾರುತಗಳ ಬಗೆಗೆ ಸದಾ ಕಣ್ಣಿಟ್ಟಿರುತ್ತದೆ. ಇಲಾಖೆಯು ಭಾರತದ ಉದ್ದಗಲಕ್ಕೂ ಅನೇಕ ಹವಾಮಾನ ಕೇಂದ್ರಗಳನ್ನು ಸ್ಥಾಪಿಸಿದೆ. ಅಷ್ಟೇ ಅಲ್ಲದೇ ಭೂಮಿಯ ಧ್ರುವ ಪ್ರದೇಶವಾದ ಅಂಟಾರ್ಟಿಕಾದಲ್ಲೂ ಇ0ಥ ಕೇಂದ್ರವೊಂದನ್ನು ಹೊಂದಿದೆ. ಈ ಕೇಂದ್ರಗಳು ನೀಡಿದ ಮಾಹಿತಿಯೇ ಫೈಲಿನ್ ಚಂಡಮಾರುತದ ಬಗ್ಗೆ ನಿಖರ ಮುನ್ಸೂಚನೆ ನೀಡಲು ನೆರವಾಗಿದ್ದು.

ಭೂಮಿ ಎ0ದರೆ , ಸೂರ್ಯನನ್ನು ಸುತ್ತುವ ನೀರು, ಕಲ್ಲು, ಮಣ್ಣು, ಬೆಟ್ಟ, ಗುಡ್ಡಗಳ ದೊಡ್ಡ ರಾಶಿಯಷ್ಟೇ ಅಲ್ಲ, ಅದೊಂದು ದೈತ್ಯ ಅಯಸ್ಕಾಂತವೂ ಕೂಡ. ನಮ್ಮ ದೇಶದಲ್ಲಿ ಭೂಮಿಯ ಅಯಸ್ಕಾಂತೀಯ ಗುಣಧರ್ಮದದ ಕುರಿತಾದ ಅವಲೋಕನ 1840ರ ಸಮಯದಲ್ಲೇ ಪ್ರಾರಂಭಗೊಂಡಿದ್ದರೂ 1971ರಲ್ಲಷ್ಟೇ "ಭಾರತೀಯ ಭೂಕಾಂತೀಯ ಸಂಸ್ಥೆ" ಅಧಿಕೃತವಾಗಿ ಸ್ಥಾಪಿಸಲ್ಪಟ್ಟಿದ್ದು.

ಭೂ ವಿಜ್ಞಾನಕ್ಕೆ ಸಂಬಂಧ ಪಟ್ಟ ಇನ್ನೂ ಕೆಲವು ಕೇಂದ್ರ/ಪ್ರಯೋಗಾಲಯಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ.  ಉದಾಹರಣೆಗೆ ಹೈದರಾಬಾದಿನ 'ರಾಷ್ಟ್ರೀಯ ಭೂಭೌತಿಕ ಸ0ಶೋಧನಾ ಸ0ಸ್ಥೆ'ಯು ಭೂಕ0ಪನ ಮೌಲ್ಯಮಾಪನ, ಅಂತರ್ಜಲ ಹಾಗೂ ಇತರ ನೈಸರ್ಗಿಕ  ಸಂಪನ್ಮೂಲ ಪರಿಶೋಧನೆ ಮು0ತಾದ ಸ0ಶೋಧನಾ ಚಟುವಟಿಕೆಗಳಲ್ಲಿ ತೊಡಗಿದೆ. ಅಂತೆಯೇ ಗೋವಾದ 'ರಾಷ್ಟ್ರೀಯ ಸಮುದ್ರಶಾಸ್ತ್ರ ಸ0ಸ್ಥೆ'ಯು ಸಮುದ್ರಶಾಸ್ತ್ರದ ಭೌತಿಕ, ರಾಸಾಯನಿಕ, ಜೈವಿಕ ಹಾಗೂ ಭೂವೈಜ್ಞಾನಿಕ ಅಂಶಗಳ ಬಗ್ಗೆ ಸ0ಶೋಧನಾ ನಿರತವಾಗಿದೆ.

ಭೂಮಿಗೆ ಸಂಬಂಧಿಸಿದ ಅನೇಕ ಸಂಶೋಧನಾ ಅಧ್ಯಯನಗಳಲ್ಲಿ ಗಣಿತಶಾಸ್ತ್ರವು ಬಹುಮುಖ್ಯ ಪಾತ್ರ ವಹಿಸಿತ್ತದೆ.  ಭೌತಿಕ ಪ್ರಕ್ರಿಯೆಗಳನ್ನು ಗಣಿತದ ಸಮೀಕರಣ ರೂಪದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಈ ಜಟಿಲ ಸಮೀಕರಣಗಳನ್ನು ಸೂಪರ್ ಕಂಪ್ಯೂಟರ್ ಗಳ ಸಹಾಯದಿಂದ ಮಾತ್ರ ಬಗೆಹರಿಸಬಹುದು. ಭೂಮಿಯಲ್ಲಿ ನಡೆಯುವ ಭೌತಿಕ ಪ್ರಕ್ರಿಯೆಗಳು ಅಷ್ಟು ಸಂಕೀರ್ಣ ಮಟ್ಟದ್ದಾಗಿರುತ್ತದೆ.

ಭೂ ವಿಜ್ಞಾನದ ವಿವಿಧ ಆಯಾಮಗಳನ್ನು ಅಭ್ಯಸಿಸಲು ಹಲವಾರು ಪ್ರತ್ಯೇಕ ಸಂಸ್ಥೆಗಳಿದ್ದರೂ, ಕೊರತೆ ಇರುವುದು.ಅವುಗಳ ನಡುವಿನ ಪರಸ್ಪರ ಸಂವಹನದಲ್ಲಿ. ಭೂಮಿಯ ಘನರೂಪದ ನೆಲ, ಸಮುದ್ರ ಹಾಗೂ ವಾಯುಮಂಡಲಗಳು ಪರಸ್ಪರ ಒಂದರ ಮೇಲೆ ಇನ್ನೊಂದು ಹೇಗೆ ಪ್ರಭಾವ ಬೀರುತ್ತವೆ ಎಂಬುದು ಪ್ರತ್ಯೇಕ ಅಧ್ಯಯನದಿಂದ ಸ್ಪಷ್ಟವಾಗಿ ತಿಳಿಯಲು ಕಷ್ಟ. ಹೀಗಾಗಿ ಭೂ ವಿಜ್ಞಾನವನ್ನು ಅದರ ವಿವಿಧ ಅಂಗಗಳಾಗಿ ವಿಂಗಡಿಸಿ ಪ್ರತ್ಯೇಕವಾಗಿ ಅಭ್ಯಸಿಸುವುದರ ಬದಲಾಗಿ ಅದನ್ನು ಒಂದು ವ್ಯವಸ್ಥೆಯಾಗಿ ಪರಿಗಣಿಸಿ ಸಂಶೋಧನೆ ನಡೆಸುವಂಥ ಕೇಂದ್ರವು ಸದ್ಯದ ತುರ್ತು ಅಗತ್ಯವಾಗಿದೆ ಎಂದು ಅಭಿಪ್ರಾಯಪಡುತ್ತಾರೆ ಪ್ರೊ. ನರಸಿಂಹ.

ಪ್ರಖ್ಯಾತ ವಿಜ್ಞಾನಿ ಕನ್ನಡಿಗ ಪ್ರೊ. ಸಿ. ಎನ್. ಆರ್. ರಾವ್ ಅಧ್ಯಕ್ಷತೆಯ ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಶಿಫಾರಸ್ಸಿನ ಮೇರೆಗೆ ಮೂರು ಹೊಸ ಪರಸ್ಪರ ಸಂಯೋಜಿತ ಸಂಸ್ಥೆಗಳನ್ನು ಕೇಂದ್ರ ಸರ್ಕಾರವು ೨೦೦೬-೦೭ರಲ್ಲಿ ಸ್ಥಾಪಿಸಿತು. ಅವುಗಳೆಂದರೆ,  ಭೂ ವಿಜ್ಞಾನ ಮಂತ್ರಾಲಯ,  ಭೂ ವಿಜ್ಞಾನ ಇಲಾಖೆ ಮತ್ತು ಭೂ ಆಯೋಗ.


"ಭೂಮಿಯ ಭವಿಷ್ಯದ ದೃಷ್ಟಿಯಿಂದ ಹೆಚ್ಚು ಪ್ರಸ್ತುತತೆಯನ್ನು ಪಡೆಯುತ್ತಿರುವ ಭೂ ವಿಜ್ಞಾನ ಅಧ್ಯಯನದ ಪುನರ್ರಚನೆಯ ನಿಟ್ಟಿನಲ್ಲಿ  ಇದೊಂದು ಐತಿಹಾಸಿಕ ಹೆಜ್ಜೆ " ಎಂದು ತಮ್ಮ ಲೇಖನದಲ್ಲಿ ಪ್ರೊ. ನರಸಿಂಹ ಬಣ್ಣಿಸುತ್ತಾರೆ.

ಭಾರತದ ಶಿಕ್ಷಣ ರಂಗದಲ್ಲಿ ಭೂ ವಿಜ್ಞಾನ ಅಧ್ಯಯನದ ಅಗತ್ಯತೆ ತುರ್ತಾಗಿ ಎದ್ದು ಕಾಣುತ್ತಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ 'ವಾತಾವರಣ ಹಾಗೂ ಸಮುದ್ರಶಾಸ್ತ್ರ ವಿಜ್ಞಾನ ಕೇಂದ್ರ (CAOS)'ವು ಭಾರತದಲ್ಲಿನ ಭೂ ವಿಜ್ಞಾನ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ. ಈ ಕೇಂದ್ರವು ಭೂ ವಿಜ್ಞಾನ, ಹವಾಮಾನ ಬದಲಾವಣೆ, ಸಿವಿಲ್ ಇಂಜಿನಿಯರಿಂಗ್ ಮುಂತಾದ ವಿಷಯಗಳಲ್ಲಿ ಕೆಲಸ ಮಾಡುವ ಇತರ ಸಂಶೋಧನಾ ತಂಡಗಳ ಜೊತೆ ಜೊತೆಗೆ ಕಾರ್ಯ ನಿರ್ವಹಿಸುತ್ತಿದೆ.

ಪ್ರೊ. ನರಸಿಂಹರ ದೃಷ್ಟಿಯಲ್ಲಿ "ಭವಿಷ್ಯದ ಭೂ ವಿಜ್ಞಾನ ಸಂಶೋಧನೆಯು ಸಾಮಾನ್ಯ ನಾಗರಿಕನಿಗೂ  ಅತ್ಯುತ್ತಮ ಸೇವೆ ನೀಡುವ ನಿಟ್ಟಿನಲ್ಲಿ ವಿಜ್ಞಾನ - ತಂತ್ರಜ್ಞಾನವನ್ನು ಬಳಸಿಕೊಳ್ಳುವತ್ತ ಗಮನಹರಿಸಬೇಕು."

ಮೂಲ: ಭರತಕುಮಾರ ಹೆಗಡೆ ಕನ್ನಳ್ಳಿ

ಕೊನೆಯ ಮಾರ್ಪಾಟು : 4/5/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate