ಪ್ರಕೃತಿಯ ಚರಾಚರ ಜೀವಿಗಳಲ್ಲಿ ಮನುಷ್ಯನು ಬುದ್ದಿವಂತ ಜೀವಿ. ಅವನು ಅಣುವಿನಿಂದ ಹಿಡಿದು ನಿಸರ್ಗದ ಪ್ರತಿಯೊಂದು ಅಂಶದಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಕಲಿಕೆಯಲ್ಲಿ ತೊಡಗಿರುವುದು ಸ್ವಾಭಾವಿಕ. ಕಲೆಕೆ ಎಂಬುದು ಭ್ರೂಣದಿಂದ ಹಿಡಿದು ಚಟ್ಟದವರೆಗೂ ನಡೆಯುವ ನಿರಂತರ ಪ್ರಕ್ರಿಯೆ.
ಅಭಿಮನ್ಯು ತನ್ನ ತಾಯಿಯ ಉದರದಲ್ಲಿದ್ದಾಗಲೇ ಚಕ್ರವ್ಯೂಹವನ್ನು ಬೇದಿಸುವ ವಿದ್ಯೆಯನ್ನು ಕಲಿತದ್ದು ತಮಗೆಲ್ಲರಿಗೂ ತಿಳಿದ ವಿಚಾರವೇ. ಹೀಗೆ ಕಲಿಕೆಯು ಎಲ್ಲಿ ಯಾವಾಗ ಹೇಗೆ ನಡೆಯುತ್ತದೆ ಎಂದು ಖಡಾಖಂಡಿತವಾಗಿ ಹೇಳಲು ಸಾದ್ಯವಿಲ್ಲ. ನೋಡುವುದರಿಂದ ಮಾತನಾಡುವುದರಿಂದ, ಕೇಳುವುದರಿಂದ, ಓದುವುದರಿಂದ ಕಲಿಕಾ ಪ್ರಕ್ರಿಯೆಯು ನಡೆಯುತ್ತದೆ. ದಾರಿಯಲ್ಲಿ ನಡೆದಾಡುವಾಗ ದಾರಿಯಲ್ಲಿನ ಕಲ್ಲಿಗೆ ತಾಕಿ ಎಡವಿದರೆ, ಅಲ್ಲಿ ಒಂದು ಕಲಿಕೆ ನಡೆಯುತ್ತದೆ. ಏನೆಂದರೆ “ನಮ್ಮ ಗಮನ ನಮ್ಮ ನಡಿಗೆಯ ಮೇಲಿರಬೇಕೆಂಬುದು ಸಾಮಾನ್ಯ ಕಲಿಕೆಯಾದರೆ, ಮತ್ತೊಂದೆಡೆ ಆಪತ್ತೆಂಬುದು ಎಲ್ಲಿ, ಹೇಗೆ, ಯಾವಾಗ ಬರುತ್ತದೆಂಬುದು ಯಾರು ಅರಿಯದ ಸಂಗತಿಯಾಗಿದ್ದು, ಸದಾಕಾಲ ಎಚ್ಚರಿಕೆಯಲ್ಲಿರಬೇಕೆಂದು ನೀತಿ-ಕಲಿಕೆಯು” ಅದರಲ್ಲಡಗಿರುವುದು ಗೋಚರಿಸುತ್ತದೆ.
ಆಗಲೇ ಪ್ರಸ್ತಾಪಿಸಿದಂತೆ ಭ್ರೂಣದಿಂದಲೇ ಕಲಿಕೆ ಪ್ರಾರಂಭವಾಗುವುದು. ಈ ರೀತಿ ಪ್ರಾರಂಭವಾದ ಕಲಿಕೆ ಜನ್ಮದ ನಂತರ ವೈಯಕ್ತಿಕ ಆಸಕ್ತಿ ಅಭಿರುಚಿಗೆ ತಕ್ಕಂತೆ ಹಂತ-ಹಂತವಾಗಿ ಕ್ರಿಯೆಗೆ ಪ್ರತಿಕ್ರಿಯೆಯಂತೆ ನಡೆಯುತ್ತದೆ. ಅದು ಕೆಲವರಲ್ಲಿ ವೇಗವಾಗಿ ಮತ್ತೇ ಕೆಲವರಲ್ಲಿ ನಿಧಾನವಾಗಿ ನಡೆಯುವುದನ್ನು ಕಾಣಬಹುದು. ಕಲಿಕೆಯು ಯಶಸ್ವಿಯಾಗುವುದು ಯಾವುದನ್ನು ಕಲಿಯುತ್ತಿದ್ದೇವೆ ಎಂಬುದರ ಅರಿವು ಜ್ಞಾನವಿದ್ದಾಗ ಮಾತ್ರ. ಅಂದರೆ ಉದಾಹರಣೆಗೆ ಸೇಬು ಹಣ್ಣು ಎಂದು ಗೊತ್ತಾಗಬೇಕಾದರೆ ಮೊದಲು ಹಣ್ಣುಗಳೆಂದರೆ ಹೇಗಿರುತ್ತದೆ. ಆ ಹಣ್ಣುಗಳಲ್ಲಿ ಸೇಬು ಹಣ್ಣು ಎಂದರೆ ಯಾವುದು? ಯಾವ ಬಣ್ಣದ್ದು? ಹೇಗಿರುವುದು? ಎಂಬುದರ ಸ್ಪಷ್ಟ ಅರಿವು ಆದಾಗ ಮಾತ್ರ ಮಕ್ಕಳ ತಲೆಯಲ್ಲಿ ಸ್ಪಷ್ಟ ಶಾಶ್ವತ ಕಲಿಕೆ ಸೇಬು ಹಣ್ಣಿನ ಬಗ್ಗೆ ಉಂಟಾಗುತ್ತದೆ.
ಇಂದು ಕಲಿಕೆ ಎಂಬುದು ಸಹಜ ಕ್ರಿಯೆಯನ್ನು ಮರೆತು “ಕಂಠಸ್ಥ” ಎಂಬ ಕೃತಕ ವಿಧಾನಕ್ಕೆ ತನ್ನನ್ನು ಒಳಪಡಿಸುತ್ತಿರುವುದು ಒಂದು ವಿಷಾದನೀಯ ಸಂಗತಿ. ಮಕ್ಕಳು ತಾವು ಯಾವುದನ್ನು ಓದುತ್ತಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳದೆ, ಸುಮ್ಮನೆ ಪರೀಕ್ಷೆ ದೃಷ್ಟಿಯಿಂದ, ಅಂಕಗಳಿಕೆಯ ದೃಷ್ಟಿಯಿಂದ ಓದುವಂತಾಗುತ್ತದೆ. ಸಾಮಾನ್ಯವಾಗಿ ಯಾವುದೇ ಕಲಿಕಾ ವಿಷಯವಿದ್ದರೂ ಅದರಲ್ಲಿ ವ್ಯಕ್ತಿತ್ವಕ್ಕೆ ರೂಪುಕೊಡುವ ಜ್ಞಾನವಿರುತ್ತದೆ. ಅದನ್ನು ಓದಿ ಅರ್ಥೈಸಿಕೊಂಡಾಗ ಮಾತ್ರ ಮುಂದೊಮ್ಮೆ ತಾವು ತಮ್ಮನ್ನು ಅಂತಹ ಜ್ಞಾನಕ್ಕೆ ಒಳಪಡಿಸುವಲ್ಲಿ ಸಹಕಾರಿಯಾಗುತ್ತದೆ. ಹೀಗಿರುವಾಗ ಸಹಜ ಕಲಿಕೆಯನ್ನು ಬಿಟ್ಟು ಅಂದರೆ ಅರ್ಥವತ್ತಾದ ಓದುವಿಕೆಯನ್ನು ಬಿಟ್ಟು ಕಂಠಸ್ಥ್ಯಕ್ಕೆ ಮೊರೆ ಹೋಗುತ್ತಿರುವುದರಿಂದ ಮಕ್ಕಳಿಗೆ ಜ್ಞಾನವೃದ್ಧಿಯಲ್ಲಿ ತೊಡಕಾಗುತ್ತದೆ. ಕಂಠಸ್ಥ್ಯವೆಂಬುದು ಅಲ್ಪಕಾಲಿಕಾ. ಅದೇ ಅರ್ಥವತ್ತಾದ ಕಲಿಕೆಯು ದೀರ್ಘಕಾಲಿಕಾ ಶಾಶ್ವತ ಎಂದರೆ ತಪ್ಪಾಗಲಾರದು. ಹೀಗಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಕಂಠಸ್ಥ್ಯಕ್ಕೆ ಮಕ್ಕಳು ಮೊರೆಹೋಗದಂತೆ ಎಚ್ಚರಿಗೆ ಕ್ರಮಗಳನ್ನು ವಹಿಸಬೇಕು.
ಕೊನೆಯ ಮಾರ್ಪಾಟು : 4/19/2020