অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಒಳ್ಳೆಯ ಮಾತುಗಾರ

ನಾಲ್ಕು ಮಂದಿಯೇ ಇರಲಿ, ನಾಲ್ಕು ಸಾವಿರ ಮಂದಿಯೇ ಇರಲಿ ಅವರೆದುರು ನಿಂತು ಯಾವುದಾದರು ಸುದ್ದಿಯ ಕುರಿತು ಮಾತನಾಡುವುದು ಎಂದರೆ ಸಣ್ಣ ಕೆಲಸವಲ್ಲ. ಕಚೇರಿಗಳಲ್ಲಿ, ಕಾರ‍್ಯಕ್ರಮಗಳಲ್ಲಿ, ಊರೊಟ್ಟಿನ ಸಬೆಗಳಲ್ಲಿ, ಹೀಗೆ ಹಲವಾರು ಕಡೆಗಳಲ್ಲಿ ಒಂದಲ್ಲ ಒಂದು ಸುದ್ದಿಯ ಬಗ್ಗೆ ಮಂಡನೆ(presentation) ಮಾಡುವುದು ಇದ್ದೇ ಇರುತ್ತದೆ. ಆಗ ಒಂದೊಳ್ಳೆಯ ಮಂಡನೆಯನ್ನು ನಡೆಸಿಕೊಡುವುದು ಹೇಗೆ? ಯಾವೆಲ್ಲಾ ಅಂಶಗಳು ನಮ್ಮ ಮಂಡನೆಯನ್ನು ಚಂದಗಾಣಿಸುತ್ತವೆ? ಎಂಬ ಕೇಳ್ವಿಗಳು ಕೆಲವೊಮ್ಮೆ ಕಾಡುತ್ತಲೇ ಇರುತ್ತವೆ.

ಮಂದಿಯ ಮುಂದೆ ಏನಾದರು ಮಾತನಾಡಬೇಕೆಂದರೆ ಮೊದಲು ಒತ್ತಡ ಮತ್ತು ಹೆದರಿಕೆಗಳು ಕಾಡುತ್ತವೆ. ಎದುರಿಗಿರುವ ಹಲವಾರು ಕಣ್ಣಿನ ನೋಟಗಳು ನಮ್ಮ ಮೇಲಿರುತ್ತವೆ, ನಾವೇನು ತಪ್ಪು ಹೇಳುವೆವೋ? ಹೇಗೆ ನಡೆಸಿಕೊಡುವೆವೋ? ಎಂಬ ದಿಗಿಲು ಮೊದಲಾಗುತ್ತದೆ. ಇವೆಲ್ಲವೂ ಸೇರಿದರೆ ನಮ್ಮ ಮಂಡನೆಯನ್ನು ಹಾಳುಗೆಡುವುತ್ತವೆ. ನಾಚಿಕೆಯ ನಡತೆ, ಅಬ್ಯಾಸದ ಕೊರತೆ, ಮಂಡಿಸುತ್ತಿರುವ ಸುದ್ದಿಯ ಮೇಲೆ ಹಿಡಿತ ಇಲ್ಲದಿರುವುದು, ಹೀಗೆ ಮಂದಿಯಿಂದ ಮಂದಿಗೆ ಒತ್ತಡ ಮತ್ತು ಹೆದರಿಕೆಗೆ ಕಾರಣಗಳು ಬೇರೆ ಬೇರೆಯದ್ದಾಗಿರುತ್ತದೆ. ಇವಲ್ಲೆವನ್ನು ಮೀರಿ ಒಳ್ಳೆಯ ಮಂಡನೆಯನ್ನು ನಡೆಸಬಹುದು, ನಾವು ಹೇಳಬೇಕಾದದ್ದನ್ನು ಮಂದಿಗೆ ಸರಿಯಾಗಿ ತಲುಪಿಸಬಹುದು. ಆದರೆ ಅದಕ್ಕೂ ಮುನ್ನ ತೆರೆಯ ಹಿಂದೆ ಸಾಕಶ್ಟು ಅಣಿಗಾರಿಕೆ (preparation) ನಡೆಸಬೇಕಾಗುತ್ತದೆ. ಅಂತಹ ಕೆಲವು ಅಣಿಗಾರಿಕೆಗಳ ಕುರಿತು ತಿಳಿಯೋಣ.

‘ಕೇಳುಗರು’ ಯಾರು ಎಂದು ಅರಿತುಕೊಳ್ಳಿ


ಯಾವುದೇ ಮಂಡನೆಗೆ ಅಣಿಯಾಗುವ ಮುನ್ನ ‘ನಮ್ಮ ಕೇಳುಗರು ಯಾರು?’ ಎಂಬ ಅರಕೆ ಮಾಡಿಕೊಳ್ಳಬೇಕು. ಮಾತನಾಡುವ ಸುದ್ದಿಯಲ್ಲಿ ಮಂದಿಗೆ ಯಾವುದು ರುಚಿಸುವುದು? ಅವರಿಗೆ ಬೇಕಾದ ಯಾವ ವಿವರವನ್ನು ನಾವು ಕೊಡಬಹುದು? ನನ್ನ ಮಾತಿನಿಂದ ಅವರಿಗೇನು ಉಪಯೋಗವಾಗಬಹುದು? ಇಂತಹ ಹಲವು ವಿವರಗಳ ಸುತ್ತ ಚಿಂತಿಸಿ ಮಾತಿನಪರಿವಿಡಿ(content)ಯನ್ನು ಅಣಿಗೊಳಿಸಬೇಕು.

ಯಾವುದೇ ಕೇಳುಗನು ಮಂಡನೆಯನ್ನು ಕೇಳುವಾಗ ‘ಇದರಲ್ಲಿ ನನಗೇನಿದೆ?‘(what’s in it for me?) ಎಂದು ಹುಡುಕುತ್ತಾನೆ, ಆದ್ದರಿಂದ ಮಾತು ಶುರುಮಾಡುವ ಮೊದಲ ಬಾಗದಲ್ಲೇ ಕೇಳುಗನ ‘ಇದರಲ್ಲಿ ನನಗೇನಿದೆ?’ ಎಂಬ ಕೇಳ್ವಿಗೆ ಉತ್ತರದ ಸುಳಿವನ್ನು ಕೊಡಬೇಕು. ಆಗ ಆತ ನಿಮ್ಮ ಮಾತಿನೊಡನೆ ಸೇರಿಕೊಳ್ಳುತ್ತಾನೆ, ಜೊತೆಗೆ ಮಂಡನೆಯೂ ಸುಳುವಾಗುತ್ತದೆ. ಕೇಳುಗನ ಎದುರಿಗೆ ನಮ್ಮಲ್ಲಿದ್ದ ಅರಿವಿನ ಆಳವನ್ನು ತೋರಿಕೊಳ್ಳುವ ಮನಸ್ಸಿಗಿಂತ, ಕೇಳುಗನಿಗೆ ಅರಿವನ್ನು ತಿಳಿಸುವ ಮನಸ್ಸಿನಿಂದ ಮಂಡನೆಯನ್ನು ಮಾಡಬೇಕಿದೆ.

ಮೊದಲ ಮಾತು ತಪ್ಪದಿರಲಿ


ಮಂಡನೆಯ ಮೊದಲ ಕೆಲವು ನಿಮಿಶಗಳ ಮಾತು ತುಂಬಾ ಅರಿದಾದ್ದು. ಸಾಮಾನ್ಯವಾಗಿ, ಮೊದಲ ಸಾಲಿನ ಮಾತುಗಳಲ್ಲಿ ಈ ಕೆಳಗಿನ ತಪ್ಪುಗಳು ನಡೆಯುತ್ತವೆ.
  • ಪರಿಚಯವನ್ನು ಉದ್ದವಾಗಿ ನೀಡುವುದು.
  • ನಾನು ಏನು ಹೇಳಲು ಹೊರಟಿದ್ದೇನೆ ಎಂದು ಉದ್ದುದ್ದವಾಗಿ ಮೊದಲೇ ಹೇಳುತ್ತಾ ಕೂರುವುದು. ಹೆಚ್ಚಾಗಿ ‘ಹಮ್ಮುಗೆ(agenda)’ಯ ಉದ್ದುದ್ದ ಸಾಲುಗಳನ್ನು ಜಾರುಪಟ್ಟಿ(slide)ಯಲ್ಲಿ ನೀಡುವುದನ್ನು ನೋಡಿರುತ್ತೇವೆ. ನೀವು ಹೇಳ ಹೊರಟಿರುವ ಸುದ್ದಿಯ ಕುರಿತು ಚುಟುಕಾಗಿ ಹೇಳಿ, ಕೇಳುಗರಲ್ಲಿ ಕುತೂಹಲ ಮೂಡಿಸಿ. ನಿಮ್ಮ ಹೆಚ್ಚಿನ ವಿವರವನ್ನು ಅವರು ಎದುರು ನೋಡುವಂತೆ ಮೊದಲ ಮಾತು ಇರಲಿ.
  • ಬಂದೊಡನೆ ಗಂಟಲು ಸರಿಮಾಡಿಕೊಳ್ಳುವುದು(ಕೆಮ್ಮುವುದು, ಕ್ಯಾಕರಿಸುವುದು).
  • ಮಂಡನೆಗೆ ನಂಟಿಲ್ಲದ ಸುದ್ದಿಯನ್ನು ಮಾತನಾಡುವುದು. ಎತ್ತುಗೆಗೆ: ಸಿನಿಮಾ, ರಾಜಕೀಯ, ಊಟ ಹೀಗೆ ಬೇರಾವುದೋ ಮಂಡನೆಗೆ ನಂಟಿಲ್ಲದ ಸುದ್ದಿಯ ಬಗ್ಗೆ ಮಾತನಾಡಿ ಬಳಿಕ ಮಂಡನೆಯನ್ನು ಆರಂಬಿಸುವುದು.
  • ನಗೆಚಟಾಕಿಗಳನ್ನು ಹಾರಿಸುವುದು. ನೆನಪಿರಲಿ, ಮಂಡನೆಯನ್ನು ನಗೆಚಟಾಕಿಯಿಂದ ಆರಂಬಿಸಿದರೆ ಅದರ ಹೆಚ್ಚುಗಾರಿಕೆ ಮತ್ತು ಗಂಬೀರತೆಯನ್ನು ಕಳೆದುಕೊಳ್ಳಬಹುದು. ಆದರೆ ಮಂಡನೆಯ ನಡುವೆ ಸಂದರ‍್ಬಕ್ಕೆ ತಕ್ಕಂತೆ ನಗೆಚಟಾಕಿಗಳನ್ನು ಕಂಡಿತಾ ಬಳಸಿಕೊಳ್ಳಬಹುದು.
  • ಮಾತನ್ನು ಶುರುಮಾಡುವ ಮೊದಲು ಕೇಳುಗರ ಗುಂಪಿನಲ್ಲಿರುವ ಕೆಲವರನ್ನು ಮಾತನಾಡಿಸುವುದು.

ಈ ಮೇಲಿನವುಗಳು ಮಂಡನೆಯನ್ನು ಮಾಡಲು ಬಂದವರನ್ನು ಹದುಳಗೊಳಿಸಬಹುದು(comfortable) ಆದರೆ ಇವು ಕೇವಲ ಹೊತ್ತನ್ನು ಕಳೆಯಲು ಇರುವ ವಟಗುಟ್ಟುವಿಕೆ ಅಶ್ಟೇ. ಇವು ಕೇಳುಗರು ಗಮನವನ್ನು ಕಳೆದುಕೊಳ್ಳುವಂತೆ ಮಾಡುತ್ತವೆ. ಮೊದಲ ಒಂದೆರೆಡು ನಿಮಿಶಗಳಲ್ಲಿಯೇ ಕೇಳುಗರನ್ನು ಮೆಚ್ಚಿಸಬೇಕು, ಆಗ ಮಾತ್ರ ಮಂಡನೆಯ ಕೊನೆಯವರೆಗೆ ಅವರನ್ನು ಜೊತೆ ಕರೆದುಕೊಂಡು ಹೋಗಬಹುದು.

ಕತೆಯನ್ನು ಹೇಳಿ


ಮಂಡನೆಯನ್ನು ಮನಮುಟ್ಟುವಂತೆ ತಿಳಿಸಲು ಸಣ್ಣ ಸಣ್ಣ ಕತೆಗಳನ್ನು ಬಳಸಿಕೊಳ್ಳಿ. ಕತೆಯ ಮೂಲಕ ಮಂಡನೆಯ ವಿವರಗಳಿಗೆಹೋಲಿಕೆಯನ್ನು(analogy) ಕೊಡಿ. ಕತೆಗಳು ಕೇಳುಗನನ್ನು ಆಳಕ್ಕೂ ಮತ್ತು ತಲ್ಲಣಕ್ಕೂ ಇಳಿಸುತ್ತವೆ, ಆಗ ಮಂಡನೆಯು ಅವರಿಗೆ ತಲುಪುವ ಸಾದ್ಯತೆ ಹೆಚ್ಚು. ಲೆಕ್ಕಾಚಾರ, ವಿವರ, ಪಲಿತಾಂಶ, ಅರಕೆಯ ಮಾಹಿತಿ ಇವುಗಳನ್ನೆಲ್ಲಾ ಒಟ್ಟಿಗೇ ಕೇಳುಗನಿಗೆ ನೀಡಿದರೆ, ಆತ ಅವನ್ನು ನೆನಪಿನಲ್ಲಿ ಇಟ್ಟುಕೊಳ್ಳಲಾರ ಹಾಗಾಗಿ ಮಂಡನೆಯ ಗುರಿಯನ್ನು ಅರಿಯಲಾರ. ಎಶ್ಟು ಬೇಕೋ ಅಶ್ಟು ಮಾತ್ರ ಚುಟುಕಾದ ವಿವರವನ್ನು ಸಣ್ಣ ಕತೆ ಇಲ್ಲವೇ ಆಗುಹದೊಂದಿಗೆ ಹೋಲಿಸಿ ಕೊಟ್ಟರೆ ಚೆನ್ನಾಗಿರುತ್ತದೆ. ನೆನಪಿರಲಿ, ಸಿಕ್ಕಾಪಟ್ಟೆ ಕತೆಗಳನ್ನು ಹೇಳಿದರೂ ಕೇಳುಗನನ್ನು ದಾರಿತಪ್ಪಿಸಿದಂತೆ.

ಮಂಡನೆ ಚಿಟ್ಟುಹಿಡಿಸದಿರಲಿ


‘ಹೇಳಿದ್ದನ್ನೆ ಹೇಳೋ ಕಿಸ್ಬಾಯಿ ದಾಸ’ನಂತೆ ಮಂಡನೆ ಆಗಬಾರದು. ನಾವು ಏನು ಹೇಳುತ್ತಿದ್ದೇವೆ ಎಂದು ಕೇಳುಗರಿಗೆ ತಿಳಿಯಬೇಕು ಮತ್ತು ಮಂಡನೆಯ ಗುರಿಯ ಅರಿವು ಅವರಿಗಾಗಬೇಕು. ಯಾವುದೇ ವಿವರ ಮತ್ತು ಸುದ್ದಿಯನ್ನು ಮತ್ತೆ ಮತ್ತೆ ಒತ್ತಿ ಹೇಳುವ ಮಾತುಗಳು ಕೇಳುಗರ ಮನಸೆಳೆಯುವುದಿಲ್ಲ.

ಗಟ್ಟಿ ನಂಬಿಕೆಯಿರಲಿ


ಕಟ್ಟೆಯ ಮೇಲೆ ನಿಂತು ಮಾತನಾಡುವಾಗ ಎದೆಯ ಬಡಿತ ಹೆಚ್ಚಾಗಬಹುದು, ಉಸಿರಾಟ ಜೋರಾಗಬಹುದು, ಕೈ ಬೆರಳುಗಳು ಚಿಕ್ಕದಾಗಿ ನಡುಗಬಹುದು ಹಾಗು ಬಾಯಿ ಕೊಂಚ ಒಣಗಬಹುದು. ಆದರೆ ಈ ಎಲ್ಲಾ ತಳಮಳಗಳು ಎದುರಿಗಿರುವವರ ಕಣ್ಣಿಗೆ ಮೊದಲು ಕಾಣುವುದಿಲ್ಲ. ನೀವು ಅಂದುಕೊಂಡಶ್ಟು ಕೆಟ್ಟದಾಗಿ ಅವರೆದುರಿಗೆ ನೀವು ಕಾಣುತ್ತಿರುವುದಿಲ್ಲ. ಹಾಗಾಗಿ, ತಳಮಳಗಳನ್ನು ಹತ್ತಿಕ್ಕಿ ‘ನಾನು ಚೆನ್ನಾಗಿಯೇ ಮಾತನಾಡುತ್ತೇನೆ.’ ‘ನನಗೆ ಈ ಮಂಡನೆ ತುಂಬಾ ಹಿಡಿಸಿದೆ.’ ‘ನಾನು ಈ ಮಂಡನೆಯಲ್ಲಿ ಕಂಡಿತ ಮಂದಿಯ ಮನಸ್ಸನ್ನು ಗೆಲ್ಲುತ್ತೇನೆ.’ ಎಂದುಕೊಳ್ಳಿ. ಮಂಡನೆಯ ಮೇಲೆ ಗಟ್ಟಿ ನಂಬಿಕೆಯಿರಲಿ ಆಗ ನಿಮ್ಮ ಕೆಲಸ ತೊಂದರೆಯಿಲ್ಲದೆ ಮುಂದುವರಿಯಲಿದೆ.

ಮೈಮಾತು ಅರಿದಾದದ್ದು


ಮೇಲೆ ಹೇಳಿದ ಎಲ್ಲಾ ಬಗೆಗಳಿಗೆ ಕಳಶವಿಟ್ಟಂತೆ ಮೈಮಾತು(body language) ಇರುತ್ತದೆ. ಮಾತನಾಡುವಾಗ ನಮ್ಮ ಅರಿವಿಗೆ ಬಾರದಂತೆ ಕೆಲವು ಸನ್ನೆಗಳನ್ನು(gesture) ಮಾಡುತ್ತಿರುತ್ತೇವೆ. ಇದಕ್ಕೆ ಕಾರಣ ನಮ್ಮ ಎಚ್ಚರವಿಲ್ಲದ ಬಗೆ(unconscious mind). ನಮ್ಮಲ್ಲಿನ ಎಚ್ಚರವಿಲ್ಲದ ಬಗೆಯು ಗುಂಡಿಗೆ ಬಡಿತ, ಊಟದ ಅರಗುವಿಕೆ, ನೆತ್ತರಿನ ಒತ್ತಡ, ಮೈಬಿಸಿಯನ್ನು ಹಿಡಿತದಲ್ಲಿಡುವುದು, ಹೀಗೆ ಮೈಯೊಳಗಿನ ಸಾವಿರಾರು ಕೆಲಸಗಳನ್ನು ಮಾಡುತ್ತಿರುತ್ತದೆ. ಇವುಗಳ ಜೊತೆಗೆ ನಮ್ಮ ಮೈಮಾತಿನ ಕೆಲಸವನ್ನೂ ನೋಡಿಕೊಳ್ಳುತ್ತದೆ. ಈ ಎಚ್ಚರವಿಲ್ಲದ ಬಗೆಯು ಒಂದು ಸೆಕೆಂಡಿಗೆ 11 ಮಿಲಿಯನ್ ತುಣುಕುಗಳಶ್ಟು(bits) ಮಾಹಿತಿಯನ್ನು ಹಿಡಿತದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿರುತ್ತದೆ. ಇಶ್ಟೊಂದು ಬಿಡುವಿಲ್ಲದೇ ಕೆಲಸ ಮಾಡುತ್ತಿರುವ ಎಚ್ಚರವಿಲ್ಲದ ಬಗೆಯಿಂದ, ಮೈಮಾತನ್ನು ಅರಿವಿಗೆ ಬೇಕಾದಂತೆ ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಕಶ್ಟು ಪ್ರಯತ್ನ ಮಾಡಬೇಕಾಗುತ್ತದೆ.

ನಾಲ್ಕು ಮಂದಿಯ ಮುಂದೆ ನಿಂತು ಮಾತನಾಡುವಾಗ ಕೆಲವೊಮ್ಮೆ ತುಂಬಾ ತಡವರಿಸುತ್ತೇವೆ, ಒತ್ತಡಕ್ಕೆ ಒಳಗಾಗುತ್ತೇವೆ. ಇದಕ್ಕೆ ಕಾರಣ ನಮ್ಮ ಎಚ್ಚರವಿರುವ ಬಗೆ(conscious mind). ಇದು ಮಾತಿನ ಹಿಡಿತ, ನೋಟಗಳ ಹಿಡಿತ, ಹೀಗೆ ಇನ್ನಿತರ ಅರಿವಿಗೆ ಬರುವ ಕೆಲಸವನ್ನು ಮಾಡುತ್ತದೆ. ಎಚ್ಚರವಿರುವ ಬಗೆಯು ಸೆಕೆಂಡಿಗೆ ಕೇವಲ 40 ತುಣುಕುಗಳಶ್ಟು ಮಾಹಿತಿಯನ್ನು ಹಿಡಿತಲ್ಲಿಟ್ಟುಕೊಂಡು ಕೆಲಸ ಮಾಡುತ್ತಿರುತ್ತದೆ. ಮಂದಿಯ ಮುಂದೆ ನಿಂತು ಮಾತನಾಡುವಾಗ ಹೆಚ್ಚಿನ ಕೆಲಸವನ್ನು ಎಚ್ಚರವಿರುವ ಬಗೆಗೆ ನೀಡಿದಂತಾಗುತ್ತದೆ, ಆಗ ಅದು ಒತ್ತಡಕ್ಕೆ ಒಳಗಾಗಿ ಮಾತಿನಲ್ಲಿ ಗೊಂದಲ, ತಡವರಿಕೆಗಳು ಮೂಡುತ್ತವೆ.

ಎಚ್ಚರವಿರುವ ಹಾಗು ಎಚ್ಚರವಿರದ ಬಗೆಗಳಿಗೆ ಹೆಚ್ಚಿನ ಒತ್ತಡವನ್ನು ನೀಡದೇ ಮಾತುಗಾರಿಕೆ ಮತ್ತು ಮೈಮಾತು ಸಾಗಬೇಕಾದರೆ ಅಣಿಗಾರಿಕೆ ಮತ್ತು ಪಳಗುವಿಕೆ(preparation and practice) ಹೆಚ್ಚು ಹೆಚ್ಚು ಬೇಕಾಗುತ್ತದೆ. ಇದರಿಂದ ಮುಂದೇನು ಮಾತನಾಡಬೇಕು? ಹೇಗೆ ಮಾತನಾಡಬೇಕು? ಯಾವ ಸೊಲ್ಲನ್ನು ಎತ್ತರಿಸಿ ಹೇಳಬೇಕು? ಎಲ್ಲಿ ನಗೆಚಟಾಕಿ ಹಾರಿಸಬೇಕು? ಇಂತಹ ಹಲವಾರು ಮಾಹಿತಿಗಳ ಮುನ್ಸೂಚನೆಯು ಮೆದುಳಿಗೆ ಸಿಗುತ್ತದೆ. ಆಗ ಎಚ್ಚರವಿರುವ ಬಗೆಯು ಒತ್ತಡಕ್ಕೆ ಒಳಗಾಗದೇ ಮಾತು ಚೆನ್ನಾಗಿ ಹರಿಯುತ್ತದೆ. ಪಳಗುವಿಕೆಯಿಂದ ಎಚ್ಚರವಿರದ ಬಗೆಯೂ ಕೂಡ ನಮ್ಮ ಮೈಮಾತನ್ನು ನಮಗೆ ಬೇಕಾದಂತೆ ನಡೆಸಿಕೊಂಡು ಹೋಗುತ್ತವೆ.

ಮೈಮಾತಿನ ತೊಡಕನ್ನು ನಿವಾರಿಸುವ ಬಗೆ


ಮೊದಲು ಮೈಮಾತಿನಲ್ಲಿರುವ ತೊಡಕುಗಳೇನು ಎಂದು ಅರಿಯಬೇಕು, ಅದಕ್ಕಾಗಿ ಕನ್ನಡಿಯ ಮುಂದೆ ನಿಂತು ಮಾತನಾಡಬೇಕು ಇಲ್ಲವೇ ನಿಂತು ಮಾತನಾಡಿದ ಓಡುತಿಟ್ಟವನ್ನು (video) ತೆಗೆದುಕೊಂಡು ನೋಡಬೇಕು. ಒಬ್ಬೊಬ್ಬರಿಗೆ ಒಂದೊಂದು ಬಗೆಯ ಮೈಮಾತಿನ ಕೊರತೆಗಳಿರುತ್ತವೆ, ಕೆಲವರು ಮಾತನಾಡುವಾಗ ಪೆನ್ನನ್ನು ತಿರುವುದು, ನಿಂತಲ್ಲಿಯೇ ವಾಲಾಡುವುದು, ಅತ್ತಿಂದಿತ್ತ -ಇತ್ತಿಂದತ್ತ ಹೆಚ್ಚು ಓಡಾಡುವುದು, ಮಾತಿನ ಜೊತೆಗೆ ಎರಡು ಕೈಗಳನ್ನು ಹೆಚ್ಚಾಗಿ ಅಲೆದಾಡಿಸುವುದು, ನೆಲವನ್ನು ನೋಡುವುದು, ತಲೆ ಕೆರೆದುಕೊಳ್ಳುವುದು ಹೀಗೆ ಹತ್ತು ಹಲವಾರು. ಇವುಗಳಲ್ಲಿ ಯಾವ ಕೊರತೆ ಇದೆ ಎಂದು ಕಂಡುಕೊಳ್ಳಬೇಕು, ಬಳಿಕ ಮತ್ತೊಮ್ಮೆ ಅಬ್ಯಾಸ ಮಾಡಿ ಆ ಮೈಮಾತಿನ ಕೊರತೆ ಕಂಡುಬರದಂತೆ ಎಚ್ಚರವಹಿಸಬೇಕು. ಯಾವುದೇ ಕೊರತೆಯು ಒಮ್ಮೆಲೆ ಹೋಗುವುದಿಲ್ಲ ಎಂಬುದು ನೆನಪಿನಲ್ಲಿರಲಿ. ಅದಕ್ಕೂ ಕೊಂಚ ಕಾಲಾವಕಾಶ ಕೊಡಬೇಕು. ಹಾಗೆಯೇ ಈ ಪಳಗುವಿಕೆಯಲ್ಲಿ ನಮ್ಮ ನಿಲುವು ಮತ್ತು ನಮ್ಮ ಮಾತಿಗೆ ಸರಿಹೊಂದುವ ಒಳ್ಳೆಯ ಮೈಮಾತನ್ನು ರೂಡಿಸಿಕೊಳ್ಳಬೇಕು.

ಕಣ್ಣು ಕಣ್ಣು ಕಲೆತಿರಲಿ


ಹಲವು ಮಂದಿಯ ಎದುರು ಮಾತನಾಡುವಾಗ ಕಣ್ಕಲೆತ(eye contact) ತುಂಬಾ ಅರಿದಾದದ್ದು. ಆಗಶ್ಟೇ ನಮ್ಮ ಮಾತಿನ ಜೊತೆಗೆ ಅವರನ್ನು ಕೊಂಡೊಯ್ಯಲು ಸಾದ್ಯ. ಹಾಗಂದ ಮಾತ್ರಕ್ಕೆ ಕೇಳುಗರ ಗುಂಪಿನಲ್ಲಿರುವ ಕೆಲವರನ್ನು ಒಂದೇ ಸಮನೆ ನೋಡುವುದೂ ಒಳ್ಳೆಯದಲ್ಲ. ನಾವು ಎವೆಯಿಕ್ಕದೆ ನೋಡುತ್ತಿರುವ ಕೇಳುಗರನ್ನು ಇದು ಇರಿಸುಮುರಿಸಿಗೆ ಗುರಿಮಾಡುತ್ತದೆ ಮತ್ತು ಉಳಿದ ಕೇಳುಗರ ಗಮನವು ಬೇರೆಡೆಗೆ ಹೋಗುತ್ತದೆ. ಒಳ್ಳೆಯ ಕಣ್ಕಲೆತಕ್ಕೆ ಈ ಕೆಳಗಿನವುಗಳನ್ನು ಪಾಲಿಸಬಹುದು.

  • ಎದುರುಗಿರುವವರ ಎಲ್ಲರ ಮೇಲು ಕಣ್ಣುಹಾಯಿಸಿ. ಒಬ್ಬರನ್ನಾಗಲಿ ಇಲ್ಲವೇ ಒಂದೇ ಕಡೆಯಾಗಲಿ ಐದು ಸಕೆಂಡಿಗಿಂತ ಹೆಚ್ಚು ನೋಡುವುದು ಬೇಡ.
  • ಕೇಳುಗರ ಎಣಿಕೆ ತುಂಬಾ ಹೆಚ್ಚಿದ್ದರೆ, ಎದುರಿಗಿರುವ ಗುಂಪಿನ ಮೂಲೆಗಳಲ್ಲಿ ಎಡದಿಂದ ಬಲಕ್ಕೆ ಮನದೊಳಗೆ ಕೆಲವು ಗುರುತುಗಳನ್ನು ಮಾಡಿಕೊಳ್ಳಿ. ಮಾತನಾಡುವಾಗ ಆ ಗುರುತುಗಳತ್ತ ಕಣ್ಣುಹಾಯಿಸಿ ಮಾತನಾಡಿ. ಆಗಲೂ ಒಂದೇ ಗುರುತಿನತ್ತ ಹೆಚ್ಚು ಹೊತ್ತು ನೋಡದಿರಿ.
  • ಯಾರಾದರು ಮಾತಿನ ನಡುವೆ ಕೇಳ್ವಿಗಳನ್ನು ಕೇಳುತ್ತಿದ್ದರೆ ಅವರ ಕಡೆಗೆ ನೋಡಿ, ಅವರ ಮಾತನ್ನು ಚೆನ್ನಾಗಿ ಆಲಿಸಿ.

ಇಂತಹ ಹಲವಾರು ಪಳಗಿಸುವಿಕೆಗಳು ಮಂಡನೆಯನ್ನು ಚಂದಗಾಣಿಸುತ್ತವೆ. ಆದರೆ ಅದು ತುಂಬಾ ಹೆಚ್ಚಾಗದಿರಲಿ, ಮನೆಯಲ್ಲಿ ಕನ್ನಡಿಯ ಮುಂದೆ ತುಂಬಾ ಹೆಚ್ಚಿನ ತಾಲೀಮು ನಡೆಸಿದರೆ ಅದು ತನ್ನಂಬುಗೆಯನ್ನು ಕಡಿಮೆ ಮಾಡಬಹುದು. ಎಲ್ಲವೂ ಇತಿ-ಮಿತಿಯಲ್ಲಿರಲಿ.

ಗೆಲುವಿನ ಮಂಡನೆಗಾಗಿ ಕೆಲವು ಸಲಹೆಗಳು

  • ಒಳ್ಳೆಯ ಬಟ್ಟೆಯನ್ನು ಹಾಕಿಕೊಂಡಿರಿ. ನಡತೆ ಹಾಗು ವ್ಯಕ್ತಿತ್ವವು ಹಾಕಿರುವ ಬಟ್ಟೆಯಿಂದ ಹೊರಹೊಮ್ಮುತ್ತದೆ. ಬರ‍್ದಿನ(professional) ಬಟ್ಟೆಗಳನ್ನು ಹಾಕುವುದು ತನ್ನಂಬುಗೆಯನ್ನು ಹೆಚ್ಚಿಸುತ್ತವೆ.
  • ಮಂಡನೆ ಮಾಡಬೇಕಿರುವ ಜಾಗಕ್ಕೆ ಹೊತ್ತಿಗೆ ಮುಂಚೆಯೇ ತಲುಪಿ, ನೀವು ನಿಂತು ಮಾತನಾಡುವ ಜಾಗದಲ್ಲಿ ಓಡಾಡಿ ಹದುಳಗೊಳಿಸಿಕೊಳ್ಳಿ (be comfortable).
  • ಮಾತನ್ನು ಶುರುಮಾಡುವ ಮೊದಲಿನಲ್ಲಿ ಒತ್ತಡದಿಂದ ಗಂಟಲು ಒಣಗುವುದನ್ನು, ಗಂಟಲು ಹಿಡಿಯುವುದನ್ನು ತಡೆಯಲು ಮಂಡನೆ ಶುರುವಾಗುವ ಮುನ್ನ ಬಿಸಿಯಾದ ಕುಡಿಗೆಯನ್ನು (ಕಾಪಿ, ಟೀ, ಹಾಲು, ನೀರು) ಕುಡಿಯಬಹುದು.
  • ನಿಂತು ಮಾತನಾಡುವಾಗ ಎರಡು ಕಾಲುಗಳ ನಡುವೆ ಎದೆಯಗಲದಶ್ಟು ಜಾಗವಿರಲಿ. ಇಲ್ಲವೇ ಎರಡು ಬುಜದ ನೇರಕ್ಕೆ ಕಾಲುಗಳಿರಲಿ. ಇದರಿಂದ ಒಂದು ಕಾಲಿನ ಮೇಲೆ ತೂಕ ಬಿಟ್ಟು ನಿಲ್ಲುವುದು, ವಾಲಾಡುವುದು, ವಾರೆಯಾಗಿ ನಿಲ್ಲುವುದು ಇವುಗಳು ಆಗುವುದಿಲ್ಲ. ನಿಮ್ಮ ಮೈಮಾತು ಒಂದು ಹದಕ್ಕೆ ಬರುತ್ತದೆ.
  • ಮಾತನಾಡುವಾಗ ಕೈಗಳ ಓಡಾಟದ ಮೇಲೆ ನಿಗಾ ಇಡುವ ಪ್ರಯತ್ನ ಮಾಡಿ. ಮಾತಿಗೊಪ್ಪುವಂತೆ ಕೈಗಳನ್ನು ಬಳಸಿ.
  • ಮಾತಿನಲ್ಲಿ ಏರಿಳಿತಗಳನ್ನು ಬಳಸಿ.
  • ಮಂಡನೆಯಲ್ಲಿರುವ ತಲ್ಲಣಗಳನ್ನು(emotions) ಕೇಳುಗನಿಗೆ ತಲುಪಿಸಿ. ಹುರುಪಿನ ಮಂಡನೆಯಿದ್ದರೆ ಕೇಳುಗನಿಗೂ ಹುರುಪು ಬರಲಿ, ಸಿಟ್ಟಿದ್ದರೆ ಸಿಟ್ಟು, ನೋವಿದ್ದರೆ ನೋವು, ನಗುವಿದ್ದರೆ ನಗು. ಹೀಗೆ ಮಂಡನೆ ಮಾಡುವಾಗ ನಿಮ್ಮಲ್ಲಿನ ತಲ್ಲಣಗಳು ಕೇಳುಗನಿಗೂ ತಲುಪಲಿ.
  • ಮಂಡನೆಗೆ ಹೋಗುವ ಮುನ್ನ ಒತ್ತಡವಾದರೆ, ‘ನನ್ನ ಕೈಯಿಂದ ಇದು ಆಗುತ್ತದೆ.’ ‘ನಾನಿದನ್ನು ಮಾಡಿಯೇ ತೀರುತ್ತೇನೆ’ ಎಂದು ಜೋರಾಗಿ ಅಂದುಕೊಳ್ಳಿ.

ಮಂದಿಯ ಮುಂದೆ ನಿಂತು ಮಾತನಾಡುವುದು ಒಂದು ಕಲೆ, ಆ ಕಲೆಯು ಮೈಗೂಡಲು ಕೊಂಚ ಪಳಗಬೇಕು. ಸರಿಯಾದ ಪಳಗುವಿಕೆ ಮತ್ತು ಅಣಿಗಾರಿಕೆ ಇದ್ದರೆ ಗೆಲುವು ಕಟ್ಟಿಟ್ಟ ಬುತ್ತಿ. ಒಂದು ಮಾತಂತು ನೆನಪಿನಲ್ಲಿರಲಿ, ಮಾತನ್ನು ಕೇಳಲು ಬರುವವರು ನಿಮ್ಮ ಮಂಡನೆಯ ಗೆಲುವನ್ನೂ ಬಯಸುತ್ತಿರುತ್ತಾರೆ. ಹಾಗಾಗಿ ಹೆದರಿಕೆ ಮತ್ತು ಹಿಂಜರಿಕೆಗಳು ಬೇಡ.

ಮೂಲ : ಹೊನಲು

ಕೊನೆಯ ಮಾರ್ಪಾಟು : 7/3/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate