অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕನ್ನಡ ಅಭಿವೃಧಿ ಪ್ರಾಧಿಕಾರ

ಪ್ರಾಧಿಕಾರದ ಪರಿಚಯ

ಭಾಷಾವಾರು ಪ್ರಾಂತ್ಯಗಳ ರಚನೆಯ ಹಲವು ಉದ್ದೇಶಗಳಲ್ಲಿ ಆಯಾ ಪ್ರದೇಶದಲ್ಲಿ ಪ್ರಧಾನವಾಗಿ ಬಳಕೆಯಲ್ಲಿರುವ ಭಾಷೆಯಲ್ಲಿ ಆಡಳಿತವನ್ನು ನಡೆಸುವುದು ಒಂದಾಗಿರುತ್ತದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಈ ವಿಚಾರದಲ್ಲಿ ಭಾಷಾವಾರು ಪ್ರಾಂತ್ಯ ರಚನೆಯ ಹಿಂದೆ ಇದ್ದ ಸ್ಥಿತಿಯೇ ಆನಂತರದ ವರ್ಷಗಳಲ್ಲೂ ಮುಂದುವರೆಯಿತು. ಆಡಳಿತ ಎಂದರೆ ಆಂಗ್ಲ ಭಾಷೆಯಲ್ಲಿನ ಆಡಳಿತವೇ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ತಪ್ಪಿಸುವ ಪ್ರಯತ್ನವಾಗಿ ಸರ್ಕಾರವು ಕರ್ನಾಟಕ ರಾಜಭಾಷಾ ಅಧಿನಿಯಮ 1963 ಎಂಬ ಒಂದು ಕಾಯಿದೆಯನ್ನು ಜಾರಿಗೊಳಿಸಿ ಕರ್ನಾಟಕ ರಾಜ್ಯದಲ್ಲಿ ಕನ್ನಡವು ರಾಜ್ಯದ ಅಧಿಕೃತ ಆಡಳಿತ ಭಾಷೆಯೆಂದು ಘೋಷಿಸಿತು. ಆದಾಗ್ಯೂ ಉದ್ದೇಶಿತ ಪ್ರಮಾಣದಲ್ಲಿ ಕನ್ನಡದ ಬಳಕೆ ಆಗದಿರುವುದನ್ನು ಮನಗಂಡ ಸರ್ಕಾರವು ಕನ್ನಡ ಬಳಕೆಯ ಬಗ್ಗೆ ಸಲಹೆ ಸೂಚನೆಗಳನ್ನು ಸರ್ಕಾರಕ್ಕೆ ನೀಡಲು ಶ್ರೀ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ದಿನಾಂಕ: 10-02-1983 ರಲ್ಲಿ ಕನ್ನಡ ಭಾಷಾ ಕಾವಲು ಸಮಿತಿಯನ್ನು ಮತ್ತು 26-08-1985ರಲ್ಲಿ ಶ್ರೀ ಪಾಟೀಲಪಟ್ಟಪ್ಪನವರ ಅಧ್ಯಕ್ಷತೆಯಲ್ಲಿ ಕನ್ನಡ ಕಾವಲು ಸಮಿತಿಯನ್ನೂ ನಂತರ 1992ರಲ್ಲಿ ಶ್ರೀ ಜಿ. ನಾರಾಯಣ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನೂ ರಚಿಸಲಾಯಿತು. ಇವುಗಳು ಸರ್ಕಾರದ ಕಾರ್ಯಕಾರಿ ಆದೇಶದ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದವು. ಶ್ರೀ ಜಿ. ನಾರಾಯಣ ಅವರ ಕಾರ್ಯಾವಧಿಯ ನಂತರ ಡಾ. ಹೆಚ್. ನರಸಿಂಹಯ್ಯ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಈ ಅವಧಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 1994 ಎಂಬ ಒಂದು ಕಾಯಿದೆಯನ್ನು ರಚಿಸಿ 1ನೇ ನವೆಂಬರ್ 1995ರಿಂದ ಅದನ್ನು ಜಾರಿಗೊಳಿಸಲಾಯಿತು. ಈ ಅಧಿನಿಯಮದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಪ್ರಾಧಿಕಾರಕ್ಕೆ ಸ್ವಾಯತ್ತತೆ ಮತ್ತು ಶಾಸನಬದ್ಧ ಸ್ಥಾನಮಾನಗಳನ್ನು ನೀಡಲಾಗಿದೆ.

ಡಾ. ಹೆಚ್. ನರಸಿಂಹಯ್ಯ ಅವರ ರಾಜೀನಾಮೆಯ ನಂತರ 1996ರಲ್ಲಿ ಪ್ರೊ. ಚಂದ್ರಶೇಖರ ಪಾಟೀಲ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಅವರ ಅವಧಿಯ ನಂತರ 2000ರಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಮತ್ತು ಅವರ ಅವಧಿಯ ನಂತರ 2003ರಲ್ಲಿ ಶ್ರೀ ಬಿ.ಎಂ. ಇದಿನಬ್ಬ ಅವರು ಅಧ್ಯಕ್ಷರಾಗಿ ನೇಮಕಗೊಂಡರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸ್ಥಾಪನೆಯಾದ ನಂತರ, ಎಲ್ಲ ರಾಜ್ಯ ಸರ್ಕಾರಿ ಕಛೇರಿಗಳಲ್ಲಿ ಹಾಗೂ ಸರ್ಕಾರದ ಅಧೀನ ಸಂಸ್ಥೆಗಳಲ್ಲಿ ಕನ್ನಡದ ಬಳಕೆ ವ್ಯಾಪಕವಾಗಿದೆ. ಕನ್ನಡವನ್ನು ಬಳಸದಿದ್ದರೆ, ಪ್ರಾಧಿಕಾರದಿಂದ ಕ್ರಮ ಕೈಗೊಳ್ಳಲಾಗುವುದು ಎಂಬ ವಿಚಾರ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಯವರಲ್ಲಿ ಮೂಡಿದೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕನ್ನಡದ ಬಳಕೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಲಾಗಿದೆ. ರಾಜ್ಯ ಮಟ್ಟದಲ್ಲಿ ಕನ್ನಡ ಬಳಕೆಗಿರುವ ತೊಂದರೆಗಳಿಗೂ ಪರಿಹಾರವನ್ನು ಕಂಡುಕೊಳ್ಳಲಾಗುತ್ತಿದೆ. ಈ ದಿಸೆಯಲ್ಲಿ ಪ್ರಾಧಿಕಾರದಿಂದ ವಿವಿಧ ಕಛೇರಿಗಳನ್ನು ತಪಾಸಣೆ ಮಾಡಿ ಸೂಕ್ತ ಸಲಹೆ, ಸೂಚನೆ, ಎಚ್ಚರಿಕೆಗಳನ್ನು ನೀಡಲಾಗುತ್ತಿದೆ ಹೊರನಾಡುಗಳ ವಿಶ್ವವಿದ್ಯಾಲಯ/ಕಾಲೇಜುಗಳಲ್ಲಿ ಕನ್ನಡ ಎಂ.ಎ ಅಭ್ಯಾಸ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಹೊಸ ಯೋಜನೆಯನ್ನು 2005-06ರಿಂದ ಪ್ರಾರಂಭಿಸಲಾಗಿದೆ.

ಕಂಪ್ಯೂಟರುಗಳ ಬಳಕೆಯಿಂದ ಕನ್ನಡ ಬಳಕೆಗೆ ಹಿನ್ನಡೆಯುಂಟಾಗಬಾರದೆಂಬ ಕಾರಣದಿಂದ “ನುಡಿ” ಎಂಬ ಕಂಪ್ಯೂಟರ್ ಅಕ್ಷರ ತಂತ್ರಾಂಶವನ್ನು ಕರ್ನಾಟಕ ಗಣಕ ಪರಿಷತ್ತಿನ ಮೂಲಕ ಸಿದ್ಧಗೊಳಿಸಲಾಗಿದೆ. ಕಾಲಕಾಲಕ್ಕೆ ಇದನ್ನು ಪರಿಷ್ಕರಿಸಿ ವಿವಿಧ ಅನುಕೂಲತೆಗಳನ್ನು ಕಲ್ಪಿಸಿ, "ನುಡಿ-4"ನ್ನು ಕಳೆದ ವರ್ಷ ಬಿಡುಗಡೆ ಮಾಡಲಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸರ್ಕಾರಕ್ಕೆ ಸಲಹೆಗಳನ್ನು ನೀಡಲು ಕೆಳಕಂಡ ವರದಿಗಳನ್ನು ಸಲ್ಲಿಸಲಾಗಿದೆ:-.

  • ಶಿಕ್ಷಣ ತಜ್ಞರ ಸಲಹಾ ಸಮಿತಿಯ ಮಧ್ಯಂತರ ವರದಿ
    ಪ್ರೊ. ಚಂದ್ರಶೇಖರ ಪಾಟೀಲರು ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ದಿನಾಂಕ: 11-3-1999ರಂದು ಈ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಪ್ರಾಥಮಿಕ 01 ರಿಂದ 07ನೆಯ ತರಗತಿಯವರೆಗೆ ಶಿಕ್ಷಣ ಮಾಧ್ಯಮವು ಕಡ್ಡಾಯವಾಗಿ ಕನ್ನಡ (ಅಥವ ವಿದ್ಯಾರ್ಥಿಯ ಮಾತೃಭಾಷೆ) ವಾಗಿರಬೇಕು ಎಂಬ ಶಿಫಾರಸ್ಸು ಹಾಗೂ ಇನ್ನಿತರ ಶಿಫಾರಸ್ಸುಗಳನ್ನು ಈ ವರದಿ ಒಳಗೊಂಡಿದೆ.
  • ಶಿಕ್ಷಣ ಮತ್ತು ಮಾಧ್ಯಮ ನೀತಿ ನಿರೂಪಣಾ ವರದಿ
    ಪ್ರೊ. ಬರಗೂರು ರಾಮಚಂದ್ರಪ್ಪನವರು ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 2001ರ ಜನವರಿಯಲ್ಲಿ ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪ್ರಾಥಮಿಕ 01 ರಿಂದ 07ನೆಯ ತರಗತಿಯವರೆಗೆ ಕನ್ನಡ (ಅಥವ ವಿದ್ಯಾರ್ಥಿಯ ಮಾತೃಭಾಷೆ)ವೇ ಶಿಕ್ಷಣ ಮಾಧ್ಯಮವಾಗಬೇಕು-ಎಂಬುದರೊಂದಿಗೆ ಇತರ ಹಲವು ಶಿಫಾರಸ್ಸುಗಳನ್ನು ಈ ವರದಿಯು ಒಳಗೊಂಡಿದೆ.
  • ಈ ಎರಡೂ ವರದಿಗಳ ಅನೇಕ ಅಂಶಗಳನ್ನು ಸರ್ಕಾರವು ಜಾರಿಗೊಳಿಸಿದೆ. ಪ್ರಥಮ ಹಂತವಾಗಿ 1ರಿಂದ 4ನೆಯ ತರಗತಿಯವರೆಗೆ - ಶಿಕ್ಷಣ ಮಾಧ್ಯಮವು ಕನ್ನಡ/ ಮಾತೃಭಾಷೆಯಾಗಿರಬೇಕೆಂದು ಸರಕಾರವು ಆದೇಶ ಹೊರಡಿಸಿದ್ದು, ಅದನ್ನು ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಉಚ್ಚನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು ಸರಕಾರೀ ಆದೇಶಕ್ಕೆ ತಡೆಯಾಜ್ಞೆ ಪಡೆದಿವೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ಪ್ರಕರಣದಲ್ಲಿ ಪ್ರತಿವಾದಿಯಾಗಿ ಸ್ವಯಂಪ್ರೇರಣೆಯಿಂದ ಸೇರ್ಪಡೆಗೊಂಡು, ತಡೆಯಾಜ್ಞೆಯನ್ನು ಹಿಂದಕ್ಕೆ ಪಡೆಯಲು ಮತ್ತು ಸದರಿ ಅರ್ಜಿಯನ್ನು ವಜಾ ಮಾಡಲು ನ್ಯಾಯಾಲಯದಲ್ಲಿ ವಾದವನ್ನು ಮಂಡಿಸಿದೆ.
  • ಪ್ರಾಧಿಕಾರದ ಶಿಫಾರಸ್ಸಿನನ್ವಯ ಬಿ.ಇ ಮತ್ತು ಎಂ.ಬಿ.ಬಿ.ಎಸ್ ತರಗತಿಗಳ ಮೊದಲೆರಡು ಸೆಮಿಸ್ಟರುಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದನ್ನು ಜಾರಿಗೊಳಿಸಲಾಗಿದೆ. ಮೇಲ್ಕಂಡ ವರದಿಯ ಶಿಫಾರಸ್ಸಿನಂತೆ 1ರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಎಲ್ಲ ಉದ್ಯೋಗಗಳಲ್ಲೂ ಶೇಖಡಾ 5ರಷ್ಟು ಸ್ಥಾನಗಳನ್ನು ಮೀಸಲಾಗಿಟ್ಟು ಸರ್ಕಾರವು ಆದೇಶ ಹೊರಡಿಸಿದೆ. ಅದೇ ರೀತಿ ಅಂತಹ ವಿದ್ಯಾಗಳಿಗೆ ಉನ್ನತ ಶಿಕ್ಷಣದಲ್ಲಿ ಸಹ ಶೇಖಡಾ 5ರಷ್ಟು ಸ್ಥಾನಗಳನ್ನು ಕಾದಿರಿಸಲು ಸರ್ಕಾರವು ಆದೇಶ ಹೊರಡಿಸಿದೆ.
  • ಗಡಿನಾಡು ಅಧ್ಯಯನ ವರದಿ
  • ಸರ್ಕಾರವು ಗಡಿನಾಡು ಅಧ್ಯಯನ ಆಯೋಗವನ್ನು ರಚಿಸಿ ಅದಕ್ಕೆ ಶ್ರೀ ವಾಟಾಳ್ ನಾಗರಾಜ್ ಅವರು ಅಧ್ಯಕ್ಷರಾಗಿದ್ದು ಅವರು ಮಧ್ಯಂತರ ವರದಿಯನ್ನು ಸಲ್ಲಿಸಿದ ನಂತರ ಗಡಿನಾಡು ಅಧ್ಯಯನ ಆಯೋಗದ ಜವಾಬ್ದಾರಿಯನ್ನು ಸರ್ಕಾರವು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾಯಿಸಿತು. ಪ್ರೊ. ಬರಗೂರು ರಾಮಚಂದ್ರಪ್ಪನವರು ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಸಮಗ್ರ ವರದಿಯನ್ನು "ಗಡಿನಾಡು ಅಧ್ಯಯನ ವರದಿ" ಎಂಬ ಹೆಸರಿನಲ್ಲಿ ಸಿದ್ಧಗೊಳಿಸಿ ಮಾರ್ಚಿ 2002ರಲ್ಲಿ ಸರ್ಕಾರಕ್ಕೆ ಒಪ್ಪಿಸಲಾಗಿದೆ. ಈ ವರದಿಯ ಶಿಫಾರಸ್ಸುಗಳನ್ನು ಕಾರ್ಯಗತಗೊಳಿಸಲು ಸರಕಾರವು ಅವಶ್ಯ ಕ್ರಮ ಕೈಗೊಳ್ಳುತ್ತಿದೆ.

ಡಾ|| ಸರೋಜಿನಿ ಮಹಿಷಿ ವರದಿ
ಕನ್ನಡಿಗರಿಗೆ ಉದ್ಯೋಗಗಳಲ್ಲಿ ಸೂಕ್ತ ಅವಕಾಶಗಳನ್ನು ಒದಗಿಸುವ ಬಗ್ಗೆ ಈ ವರದಿಯಲ್ಲಿ ಅನೇಕ ಶಿಫಾರಸ್ಸುಗಳು ಇದ್ದು, ಹಲವು ಶಿಫಾರಸ್ಸುಗಳನ್ನು ಜಾರಿಗೊಳಿಸಲಾಗಿದೆ. ಖಾಸಗೀ ಮತ್ತು ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕನ್ನಡಿಗರನ್ನು ನೇಮಕ ಮಾಡಿಕೊಳ್ಳುತ್ತಿಲ್ಲವೆಂಬ ಬಗ್ಗೆ ಪರಿಶೀಲಿಸಿ, ಪ್ರಾಧಿಕಾರವು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯವರೊಂದಿಗೆ ಪತ್ರ ವ್ಯವಹರಿಸಲಾಗಿ, ಈ ಬಗ್ಗೆ ಮಾನ್ಯ ಕೈಗಾರಿಕಾ ಸಚಿವರು ಸದರಿ ಇಲಾಖೆಯ ಉನ್ನತಾಧಿಕಾರಿಗಳ ಸಭೆಯನ್ನು ಕರೆದಿದ್ದು, ಅದರಲ್ಲಿ ಪ್ರಾಧಿಕಾರದ ಅಧ್ಯಕ್ಷರು, ಸರಕಾರದ ಮುಖ್ಯ ಕಾರ್ಯದರ್ಶಿಗಳು ಸಹ ಭಾಗವಹಿಸಿದ್ದರು. ಈ ಸಭೆಯಲ್ಲಿ ಮಾನ್ಯ ಕೈಗಾರಿಕಾ ಸಚಿವರು ಭರವಸೆ ನೀಡಿದಂತೆ, ಈ ವಿಚಾರವನ್ನು ಅಗಿಂದಾಗ್ಗೆ ವಿಮರ್ಶಿಸಿ ಸೂಕ್ತ ಮಾರ್ಗದರ್ಶನ ನೀಡಲು ಸಚಿವ ಸಂಪುಟದ ಉಪಸಮಿತಿಯೊಂದನ್ನು ಸಹ ರಚಿಸಲಾಗಿದೆ. ಕನ್ನಡಿಗರಿಗೆ ಸೂಕ್ತ ಪ್ರಮಾಣದ ಉದ್ಯೋಗ ನೀಡುವ ಬಗ್ಗೆ ಖಾಸಗೀ ಕೈಗಾರಿಕೆಗಳು ಹಾಗೂ ಕಂಪನಿಗಳಿಗೆ ಮಾನ್ಯ ಕೈಗಾರಿಕಾ ಸಚಿವರು ಬಹಿರಂಗವಾಗಿ ಎಚ್ಚರಿಕೆಯನ್ನು ಸಹ ನೀಡಿರುತ್ತಾರಲ್ಲದೆ, ಇಲಾಖೆಯ ಅಧಿಕಾರಿಗಳಿಗೆ ಸಹ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿರುತ್ತಾರೆ.

ಕನ್ನಡ ನಾಡಿನಲ್ಲಿ ಕನ್ನಡದ ವಾತಾವರಣವನ್ನು ನಿರ್ಮಾಣ ಮಾಡಲು ಅನುಕೂಲ ವಾಗುವಂತೆ, ವಾಣಿಜ್ಯ ಸಂಸ್ಥೆಗಳ ನಾಮಫಲಕಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕೆಂಬ ಬಗ್ಗೆ ಪ್ರಾಧಿಕಾರವು ಕೆಲಸ ಮಾಡುತ್ತಾ ಬಂದಿದ್ದು, ಇದರಿಂದ ಸಾಕಷ್ಟು ಪ್ರಯೋಜನವಾಗಿದೆ.

ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಕರ್ನಾಟಕದ ಪರವಾಗಿ ವಾದ ಮಂಡಿಸಲು ಸಲಹೆ ನೀಡುವ ಬಗ್ಗೆ ಕರ್ನಾಟಕ ಸರ್ಕಾರವು ನೇಮಿಸಿರುವ ಸಮಿತಿಗೆ ಪತ್ರ ಬರೆದು ಮಹಾಜನ್ ವರದಿ ಜಾರಿಯ ಬಗ್ಗೆ ಸದರಿ ಸಮಿತಿಗೆ ಅಭಿಪ್ರಾಯವನ್ನು ತಿಳಿಸಲಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಮತ್ತು ಕನ್ನಡಿಗರ ಹಿತರಕ್ಷಣೆಯ ಬಗ್ಗೆ ಕೈಗೊಂಡಿರುವ ಕೆಲವು ಕ್ರಮಗಳನ್ನು ಸಂಕ್ಷಿಪ್ತವಾಗಿ ಮೇಲೆ ವಿವರಿಸಲಾಗಿದೆ. ಇವೇ ಅಲ್ಲದೆ ಸಾಂದರ್ಭಿಕವಾಗಿ, ಕನ್ನಡದ ಹಿತಕ್ಕೆ ಧಕ್ಕೆ ಉಂಟಾಗಿರುವುದು ಗಮನಕ್ಕೆ ಬಂದ ಎಲ್ಲ ಸಂದರ್ಭಗಳಲ್ಲಿಯೂ ಸೂಕ್ತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ.

ಕಾರ್ಯ ವೈವಿಧ್ಯ

  • ರಾಜ್ಯ ಸರ್ಕಾರದ ಆಡಳಿತ ಭಾಷಾ ನೀತಿಯ ಅನುಷ್ಠಾನದಲ್ಲಿ ಸರಕಾರದ ಎಲ್ಲ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ಸರಕಾರದ ಅಧೀನದ ಎಲ್ಲ ಸಂಸ್ಥೆಗಳು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸುವುದು.
  • ರಾಜ್ಯ ಸರ್ಕಾರ ಅಂಗೀಕರಿಸಿರುವ ಡಾ|| ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವುದು.
  • ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಜಾರಿಗೆ ತರುವಲ್ಲಿ ಇರುವ ಅಡಚಣೆಗಳನ್ನು ಗಮನಿಸಿ ಅವುಗಳ ನಿವಾರಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು
  • ಕನ್ನಡ ಪರೀಕ್ಷೆಗಳ (ಸೇವಾ ಪರೀಕ್ಷೆ) ಪದ್ಧತಿಯನ್ನು ಕನ್ನಡ ಜ್ಞಾನ ತಿಳಿಯಲು ನಡೆಸಲಾಗುವುದು ಪರೀಕ್ಷೆಗಳನ್ನು ಈಗಿರುವ ಅಥವಾ ಮುಂದೆ ರೂಪಿಸಬಹುದಾದ ಸಂಬಂಧಪಟ್ಟ ಪಠ್ಯಕ್ರಮಗಳ ಸಹಿತವಾಗಿ ಕಾಲಕಾಲಕ್ಕೆ ಪರಿಶೀಲಿಸತಕ್ಕದ್ದು ಮತ್ತು ಅಗತ್ಯವೆನಿಸಿದರೆ ಇದನ್ನು ಪರಿಷ್ಕರಿಸಲು ಮಾರ್ಪಡಿಸಲು ಅಥವಾ ನವೀಕರಿಸಲು ರಾಜ್ಯ ಸರ್ಕಾರಕ್ಕೆ ಕಛೇರಿ ಆಧುನೀಕರಣದಲ್ಲಿ ಬಳಸಲಾಗುವ ಕಂಪ್ಯೂಟರ್, ಇತ್ಯಾದಿ ಬಳಸುವ ಬಗ್ಗೆ ಅಧ್ಯಯನ ಹಾಗೂ ಸಮಾಲೋಚನೆಯನ್ನು ನಡೆಸತಕ್ಕದ್ದು ಮತ್ತು ಈ ಸಂಬಂಧದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಬಳಸುವುದಕ್ಕೆ ಪ್ರೇರಕವಾಗಬಹುದಾದ ನಿರ್ಣಯಗಳನ್ನು ಕೈಗೊಂಡು ಅದನ್ನು ಕಾರ್ಯಗತಗೊಳಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದು.
  • ಅಧಿಕಾರಿಗಳಿಗೆ ಮತ್ತು ನೌಕರರಿಗೆ ಕನ್ನಡ ಬಳಕೆಗೆ ಅನುಕೂಲವಾದ ತರಬೇತಿ ಕಾರ್ಯಕ್ರಮಗಳನ್ನು, ಶಿಬಿರಗಳನ್ನು, ಪ್ರದರ್ಶನಗಳನ್ನು ಮತ್ತು ವಿಚಾರ ಸಂಕಿರಣಗಳನ್ನು ಏರ್ಪಡಿಸತಕ್ಕದ್ದು ಮತ್ತು ಕನ್ನಡೇತರರಿಗೆ ಕನ್ನಡ ಕಲಿಕೆ ಕಾರ್ಯಕ್ರಮಗಳನ್ನು ಮತ್ತು ಆ ಸಂಬಂಧ ಪಠ್ಯಕ್ರಮ, ಸಾಹಿತ್ಯ ಸಿದ್ದಪಡಿಸುವುದು.
  • ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದ ಉಪಯುಕ್ತ ಪ್ರಕಟಣೆಗಳನ್ನು ಪ್ರಕಟಿಸತಕ್ಕದ್ದು. ಖರೀದಿಸತಕ್ಕದ್ದು ಮತ್ತು ವಿತರಿಸುವುದು.
  • ಕಛೇರಿಗಳಲ್ಲಿ ಬಳಸಲಾಗುವ ಎಲ್ಲ ನಮೂನೆಗಳನ್ನು ಕನ್ನಡದಲ್ಲಿ ಮುದ್ರಣವಾಗುವಂತೆ ನೋಡಿಕೊಳ್ಳತಕ್ಕದ್ದು ಹಾಗೂ ಕನ್ನಡೇತರ ಭಾಷೆಗಳಲ್ಲಿ ಇರಲೇಬೇಕಾದ ನಮೂನೆ, ಪ್ರಕಟಣೆ ಮತ್ತು ರಿಜಿಸ್ಟರ್ಗಳನ್ನು ಪರಿಶೀಲಿಸಿ ಮುದ್ರಣಕ್ಕೆ ಅನುಮತಿ ನೀಡುವುದು
  • ರಾಜ್ಯದಲ್ಲಿ ಹೆಚ್ಚು ಜನಸಂಪರ್ಕ ಹೊಂದಿರುವ ಕೇಂದ್ರ ಸರ್ಕಾರದ ಕಚೇರಿಗಳು, ಬ್ಯಾಂಕುಗಳು, ಅಂಚೆ ಕಛೇರಿಗಳು ಮತ್ತಿತರ ಕಛೇರಿಗಳು ಮತ್ತು ಉದ್ದಿಮೆಗಳಲ್ಲಿ ಇಂದಿನ ಬಳಕೆಯಲ್ಲಿರುವ ನಮೂನೆ, ನೋಟೀಸು, ನಾಮಫಲಕಗಳಲ್ಲಿ ಕೇಂದ್ರ ಸರ್ಕಾರದ ಭಾಷಾ ನೀತಿಗೆ ಅನುಗುಣವಾಗಿ ಪ್ರಾದೇಶಿಕ ಭಾಷೆಯನ್ನು ಬಳಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸತಕ್ಕದ್ದು ಮತ್ತು ಈ ಸಂಬಂಧವಾಗಿ ಅಂತಹ ಕಛೇರಿಗಳೊಂದಿಗೆ ಪತ್ರವ್ಯವಹಾರ ಕೈಗೊಳ್ಳುವುದು
  • ಆಡಳಿತ ಪೂರಕ ಸಾಹಿತ್ಯದ ರಚನೆ, ಪರಿಷ್ಕರಣೆ, ಮುದ್ರಣ ಮತ್ತು ವಿತರಣೆ ವಿಷಯಗಳಲ್ಲಿ ತೀರ್ಮಾನ ಕೈಗೊಳ್ಳತಕ್ಕದ್ದು ಮತ್ತು ಈ ಕ್ಷೇತ್ರದಲ್ಲಿನ ಪ್ರಗತಿಯನ್ನು ಆಗಿಂದಾಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದು.
  • ಕನ್ನಡ ಪಠ್ಯಪುಸ್ತಕಗಳನ್ನು ಪರೀಕ್ಷಿಸಿ ಲೋಪದೋಷಗಳೇನಾದರೂ ಇದ್ದರೆ ಅದನ್ನು ಸರಿಪಡಿಸಿಕೊಳ್ಳಲು ಸೂಚನೆ ನೀಡುವುದು
ಪ್ರಾಧಿಕಾರದ ಉದ್ದೇಶಗಳನ್ನು ನೆರವೇರಿಸಲು ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡುವುದು:-
  • ರಾಜ್ಯಮಟ್ಟದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ವಿಭಾಗ ಮಟ್ಟದಲ್ಲಿ ವಿಭಾಗಾಧಿಕಾರಿಗಳು, ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ಉಪವಿಭಾಗಮಟ್ಟದಲ್ಲಿ ಉಪ ವಿಭಾಗಾಧಿಕಾರಿಗಳು ಮತ್ತು ತಾಲೂಕುಮಟ್ಟದಲ್ಲಿ ತಹಶೀಲ್ದಾರ್ ಇವರನ್ನು ಪ್ರಾಧಿಕಾರದ ಉದ್ದೇಶಗಳನ್ನು ನೆರವೇರಿಸಲು ಜವಾಬ್ದಾರರನ್ನಾಗಿ ಮಾಡುವುದು.
  • ರಾಜ್ಯ ಸರ್ಕಾರವು ಪ್ರಾಧಿಕಾರದ ಬೇರೆ ಬೇರೆ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಜವಾಬ್ದಾರರನ್ನಾಗಿ ಮಾಡಲಾದ ಅಧಿಕಾರಿಗಳನ್ನು ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸತಕ್ಕದ್ದು ಮತ್ತು ಬೇರೆ ಬೇರೆ ಇಲಾಖೆಗಳಿಗಾಗಿ ಬೇರೆ ಬೇರೆ ವರ್ಗಗಳ ಅಧಿಕಾರಿಗಳನ್ನು ನಿರ್ದಿಷ್ಟಪಡಿಸುವುದು.
  • ಮಾಹಿತಿ ಪಡೆದುಕೊಳ್ಳುವುದು:-
  • ಪ್ರಾಧಿಕಾರವು ಅಧಿನಿಯಮದ ಉದ್ದೇಶಗಳಿಗಾಗಿ ರಾಜ್ಯ ಸರ್ಕಾರದ ಯಾವ ಅಧಿಕಾರಿಯಿಂದಲಾದರೂ ಡಾ|| ಸರೋಜಿನಿ ಮಹಿಷಿ ವರದಿಯನ್ನು ಅನಷ್ಟಾನಕ್ಕೆ ತರುವುದಕ್ಕೆ ಮತ್ತು ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಕೋರಬಹುದು ಮತ್ತು ಪಡೆದುಕೊಳ್ಳಬಹುದು ಮತ್ತು ಅಂತಹ ಅಧಿಕಾರಿಯು ಪ್ರಾಧಿಕಾರವು ಕೋರಬಹುದಾದ ಮಾಹಿತಿಯನ್ನು ಒದಗಿಸಲು ಬದ್ಧನಾಗಿರತಕ್ಕದ್ದು.

  • ಪ್ರಾಧಿಕಾರದ ಸಲಹೆಗಳು:-
  • ಪ್ರಾಧಿಕಾರವು ಈ ಅಧಿನಿಯಮದ ಉದ್ದೇಶಗಳನ್ನು ನೆರವೇರಿಸುವ ಸಲುವಾಗಿ ತನ್ನ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಲಹೆಗಳನ್ನು ನೀಡಬಹುದು.

  • ಕರ್ತವ್ಯ ಲೋಪವನ್ನು ದಾಖಲಿಸುವ ಮತ್ತು ನೇಮಕಾತಿ ಪ್ರಾಧಿಕಾರಕ್ಕೆ ತಿಳಿಸುವ ಅಧಿಕಾರ:

ಪ್ರಾಧಿಕಾರವು ಈ ಅಧಿನಿಯಮದ ಉದ್ದೇಶಗಳನ್ನು ನೆರವೇರಿಸುವ ಸಲುವಾಗಿ, ಸರ್ಕಾರವು ಕಾಲಕಾಲಕ್ಕೆ ಹೊರಡಿಸುವ ಅಥವಾ ಈಗಾಲೇ ಜಾರಿಯಲ್ಲಿರುವ ಯಾವುದೇ ಆದೇಶವನ್ನು ರಾಜ್ಯ ಸರ್ಕಾರ ಮತ್ತು ಸ್ಥಳೀಯ ನಿಕಾಯಗಳ ಅಧಿಕಾರಿಗಳು ಮತ್ತು ನೌಕರರು ಉಲ್ಲಂಘಿಸಿದರೆ ಅಂತಹ ಉಲ್ಲಂಘನೆಯನ್ನು ಕರ್ತವ್ಯಲೋಪವೆಂದು ದಾಖಲಿಸತಕ್ಕದ್ದು ಮತ್ತು ಅಂತಹ ವ್ಯಕ್ತಿಗಳ ವಿರುದ್ಧ ಅಗತ್ಯಕ್ರಮ ಕೈಗೊಳ್ಳುವಂತೆ ನೇಮಕಾತಿ ಪ್ರಾಧಿಕಾರಕ್ಕೆ ಸಲಹೆಗಳನ್ನು ನೀಡುವುದು.

ಸಾಧನೆಗಳು

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸ್ಥಾಪನೆಗೊಂಡ ನಂತರ ಇದುವರೆಗೆ ಮಾಡಿರುವ ಸಾಧನೆಗಳು
  • ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಅನುಷ್ಟಾನದ ಬಗ್ಗೆ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ತಪಾಸಣೆ ಕೈಗೊಂಡಿದೆ ಮತ್ತು ಕನ್ನಡ ಅನುಷ್ಟಾನ ವಿಭಾಗವನ್ನು ತೆರೆಯಲಾಗಿದೆ
  • ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ.ವರೆಗೆ ಶಿಕ್ಷಣ ಪಡೆದವರಿಗೆ ಸರ್ಕಾರದ ಉದ್ಯೋಗಗಳಲ್ಲಿ ಶೇಕಡಾ 5ರ ಮೀಸಲಾತಿ ನೀಡಲು ಪ್ರಾಧಿಕಾರ ಶಿಫಾರಸ್ಸು ಮಾಡಿದ್ದು ಅದರಂತೆ ಸರಕಾರ ಆದೇಶ ಹೊರಡಿಸಿದೆ
  • ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ. ವರೆಗೆ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಎಲ್ಲ ವೃತ್ತಿಪರ ಶಿಕ್ಷಣದಲ್ಲೂ ಶೇಕಡಾ 5ರ ಮೀಸಲಾತಿ ಸೌಲಭ್ಯವನ್ನು ಒದಗಿಸಲು ಮಾಡಿದ ಶಿಫಾರಸ್ಸಿನಂತೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
  • ಕನ್ನಡ ಸಂಸ್ಕೃತಿ, ಇತಿಹಾಸ, ಕಲೆ ಮುಂತಾದ ವಿಷಯಗಳ ಬಗ್ಗೆ ತಿಳುವಳಿಕೆ ನೀಡುವ ಸಲುವಾಗಿ ಕನ್ನಡ ಸಂಸ್ಕೃತಿ ಶಿಬಿರಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಡೆಸಲಾಗುತ್ತಿದೆ.
  • ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ಕನ್ನಡ ಕಲಿಸಲು ಕನ್ನಡ ಕಲಿಕಾ ಯೋಜನೆಯಡಿಯಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ.
  • ಗಣಕಯಂತ್ರಗಳಲ್ಲಿ ಕನ್ನಡ ಬಳಕೆ ಬಗ್ಗೆ ಕ್ರಿಯಾ ಯೋಜನೆಯಡಿಯಲ್ಲಿ ಕನ್ನಡ ಲಿಪಿ ತಂತ್ರಾಂಶ "ನುಡಿ" ಹೊರತರಲಾಗಿದೆ.
  • ಶಿಕ್ಷಣ ಮತ್ತು ಮಾಧ್ಯಮ ನೀತಿ ನಿರೂಪಣಾ ವರದಿಯನ್ನು ಸರ್ಕಾರಕ್ಕೆ ನೀಡಲಾಗಿದೆ.
  • ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದಂತೆ ಆಕರ ಸಾಹಿತ್ಯ ಯೋಜನೆಯಡಿಯಲ್ಲಿ ಉಪಯುಕ್ತ ಪುಸ್ತಕಗಳನ್ನು ಪ್ರಕಟಿಸಲಾಗಿದೆ.
  • ರಾಜ್ಯ ಮತ್ತು ಹೊರರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯನ್ನು ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಗೌರವಿಸಿ ಪುರಸ್ಕರಿಸಲಾಗುತ್ತಿದೆ.
  • ಹೊರನಾಡು ವಿಶ್ವವಿದ್ಯಾನಿಲಯಗಳಲ್ಲಿ ಎಂ.ಎ. ಕನ್ನಡ ಪದವಿ ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾಗಳಿಗೆ ಉತ್ತೇಜಕ ಬಹುಮಾನಗಳನ್ನು ನೀಡಲಾಗುತ್ತಿದೆ.
  • ಸರ್ಕಾರದ ಆಡಳಿತದಲ್ಲಿ ಕನ್ನಡವನ್ನು ಬಳಸದ ಅಧಿಕಾರಿ/ನೌಕರರ ವಿರುದ್ಧ ಶಿಸ್ತುಕ್ರಮಕ್ಕಾಗಿ ಶಿಫಾರಸ್ಸುಗಳನ್ನು ಮಾಡಿದ್ದು ಸಂಬಂಧಿಸಿದ ಇಲಾಖೆಗಳು ಕ್ರಮ ಕೈಗೊಳ್ಳುತ್ತಿವೆ.
  • ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ತೀರ್ಪ ನೀಡಿದ ನ್ಯಾಯಮೂರ್ತಿಗಳನ್ನು ಗೌರವಿಸಿ ಪುರಸ್ಕರಿಸಲಾಗುತ್ತಿದೆ.
  • ಕನ್ನಡೇತರರಿಗೆ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಉದ್ಯಾನವನಗಳಲ್ಲಿ ಕನ್ನಡ ಚಿಂತನೆ, ಕನ್ನಡ ಸಂವಹನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
  • ಕೇಂದ್ರ ಸರ್ಕಾರ, ಕೇಂದ್ರ ಸ್ವಮ್ಯದ ಉದ್ದಿಮೆಗಳು, ಕಾರ್ಖಾನೆಗಳು, ಬ್ಯಾಂಕ್ ಗಳಲ್ಲಿ ತ್ರಿಭಾಷಾ ಸೂತ್ರ ಅನುಷ್ಠಾನ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಡಾ.ಸರೋಜಿನಿ ಮಹಿಷಿ ವರದಿಯ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುತ್ತಿದೆ.
  • ಕಾಲೇಜು ವಿದ್ಯಾರ್ಥಿಗಳಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
  • ಕಾಲೇಜು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಲ್ಲಿ ಕನ್ನಡ ಭಾಷಾ ನೈಪುಣ್ಯತೆಯನ್ನು ಹೆಚ್ಚಿಸುವ ಹಿನ್ನೆಲೆಯಲ್ಲಿ ಕನ್ನಡ ಕಾವ್ಯ ರಸಗ್ರಹಣ ಶಿಬಿರ, ಹಳೆಗನ್ನಡ ಓದು ವ್ಯಾಖ್ಯಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.

ಕಾರ್ಯಕ್ರಮಗಳ ವಿವರ

  • ಕನ್ನಡ ಮಾಧ್ಯಮ ಪ್ರಶಸ್ತಿ (ರಾಜ್ಯ ಮತ್ತು ಹೊರರಾಜ್ಯದಲ್ಲಿ)
  • ನ್ಯಾಯಾಂಗದಲ್ಲಿ ಕನ್ನಡ
  • ಕನ್ನಡೇತರರಿಗೆ ಕನ್ನಡ ಕಲಿಕಾ ಕೇಂದ್ರ
  • ಕನ್ನಡ ಚಿಂತನೆ
  • ಹಳೆಗನ್ನಡ ಓದು ವ್ಯಾಖ್ಯಾನ ಶಿಬಿರ
  • ಕನ್ನಡ ಕಾವ್ಯ ರಸಗ್ರಹಣ ಶಿಬಿರ
  • ಹೊರ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕನ್ನಡದಲ್ಲಿ ಎಂ.ಎ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
  • ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಜಾಗೃತಿ ಕಾರ್ಯಕ್ರಮ
  • ನುಡಿ ತೇರು.
  • ಭಾಷಾ ಭಾವೈಕ್ಯ ಸಮಾವೇಶ (ಹೊರ ರಾಜ್ಯಗಳಲ್ಲಿ)
  • ಕಾರ್ಖಾನೆಗಳಿಗೆ ಭೇಟಿ ನೀಡುವುದು

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

 

ಪ್ರ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಯಾವಾಗ ರಚನೆಯಾಯಿತು? 
ಉ:ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ: ಲಾ 58 ಎಲ್.ಜೆ.ಎನ್. 93, ಬೆಂಗಳೂರು, ದಿನಾಂಕ 1ನೇ ಅಕ್ಟೋಬರ್ 1994ರ ಅಧಿನಿಯಮದಂತೆ 1 ನವಂಬರ್ 1995 ರಂದು ಜಾರಿಗೆ ಬಂದಿತು.

ಪ್ರ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಿದ ಉದ್ದೇಶವೇನು? 
ಉ: ಕನ್ನಡ ಅಭಿವೃದ್ಧಿಗಾಗಿ, ಕನ್ನಡ ಅಭಿವೃದ್ಧಿಗೆ ಸಂಬಂಧಪಟ್ಟ ಯೋಜನೆಗಳು ಮತ್ತು ಕಾರ್ಯಕ್ರಮಗಳ ಅನುಷ್ಠಾನದ ಉಸ್ತುವಾರಿಗೆ ಮತ್ತು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಅನುಷ್ಠಾನಗೊಳಿಸುವ ಬಗ್ಗೆ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ನೆಡೆಸುವುದು.

ಪ್ರ: ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಯಾರು ಯಾರನ್ನು ಒಳಗೊಂಡಿರುತ್ತದೆ? 
ಉ: ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಒಬ್ಬ ಅಧ್ಯಕ್ಷರು, ಏಳು ಜನ ನಾಮನಿರ್ದೇಶಿತ ಸದಸ್ಯರುಗಳನ್ನು ಒಳಗೊಂಡಿದೆ. ಅಲ್ಲದೆ ಈ ಕೆಳಕಂಡ ಅಧಿಕಾರಿಗಳು ಪದನಿಮಿತ್ತ ಸದಸ್ಯರುಗಳಾಗಿರುತ್ತಾರೆ.
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

  • ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ.
  • ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ.
  • ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
  • ನಿರ್ದೇಶಕರು, ಭಾಷಾಂತರ ಇಲಾಖೆ.
  • ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು.
  • ಅಧ್ಯಕ್ಷರು, ಕರ್ನಾಟಕ ಕನ್ನಡ ಸಾಹಿತ್ಯ ಅಕಾಡೆಮಿ.
  • ಪ್ರಾಧಿಕಾರದ ಕಾರ್ಯದರ್ಶಿ- ಸದಸ್ಯ ಕಾರ್ಯದರ್ಶಿ

ಪ್ರ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರನ್ನು ಯಾರು ನೇಮಿಸುತ್ತಾರೆ? 
ಉ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರನ್ನು ರಾಜ್ಯ ಸರ್ಕಾರವು ನಾಮ ನಿರ್ದೇಶನ ಮಾಡುತ್ತದೆ.

ಪ್ರ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಮತ್ತು ಸದಸ್ಯರ ಅಧಿಕಾರಾವಧಿ ಎಷ್ಟು? 
ಉ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಮತ್ತು ಸದಸ್ಯರ ಅಧಿಕಾರಾವಧಿ ಮೂರುವರ್ಷಗಳು. ಸರ್ಕಾರದ ಅಧಿಕಾರಿ ಸದಸ್ಯರಿಗೆ ಇದು ಅನ್ವಯವಾಗುವುದಿಲ್ಲ.

ಪ್ರ: ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರವು ಎಷ್ಟು ನಿಧಿಯನ್ನು ಕೊಡುತ್ತದೆ? 
ಉ: ರಾಜ್ಯ ಸರ್ಕಾರವು ಪ್ರತಿ ವರ್ಷ ಪ್ರಾಧಿಕಾರದ ಆಡಳಿತಾತ್ಮಕ ವೆಚ್ಚಗಳಿಗೆ ಸಮನಾದ ಮೊಬಲಗನ್ನು ಪ್ರಾಧಿಕಾರಕ್ಕೆ ಅನುದಾನವಾಗಿ ನೀಡುತ್ತದೆ.

ಪ್ರ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಯೋಜನೆಗಳು/ಕಾರ್ಯಕ್ರಮಗಳು ಯಾವುವು? 
ಉ: ರಾಜ್ಯದ ಜಿಲ್ಲಾ ಕೇಂದ್ರಗಳು/ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡ ನುಡಿ ಉತ್ಸವ/ಕನ್ನಡ ನುಡಿ ಹಬ್ಬ: ಈ ಕಾರ್ಯಕ್ರಮದ ಮೂಲಕ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡ ಭಾಷೆ, ಪರಂಪರೆಯ ಬಗ್ಗೆ ಅರಿವು ಮತ್ತು ಸ್ವಾಭಿಮಾನ ಮೂಡಿಸುವ ಸಮಾವೇಶ/ಜಾಥಾ (ವಿಶೇಷ ಆದ್ಯತೆ ಗಡಿ ತಾಲ್ಲೂಕು/ಜಿಲ್ಲಾ ಕೇಂದ್ರಗಳಿಗೆ)

  • ನ್ಯಾಯಾಂಗದಲ್ಲಿ ಕನ್ನಡ: ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯ ತೀರ್ಪು ನೀಡಿದ ನ್ಯಾಯಾಧೀಶರಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸುವ ಕಾರ್ಯಕ್ರಮ.
  • ಕನ್ನಡ ಮಾಧ್ಯಮ ಪ್ರಶಸ್ತಿ: ರಾಜ್ಯದಲ್ಲಿ ವಿಭಾಗ ಮಟ್ಟದ ಕನ್ನಡ ಮಾಧ್ಯಮ ಪ್ರಶಸ್ತಿ ಸಮಾರಂಭಕ್ಕೆ ಪ್ರತಿ ತಾಲ್ಲೂಕಿನಿಂದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ತರಗತಿಗಳನ್ನು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ತಲಾ 3 ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮ.
  • ಹೊರರಾಜ್ಯ: ಹೊರರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ, ಎಸ್.ಎಸ್.ಎಲ್.ಸಿ., ಮತ್ತು ಪಿ.ಯು.ಸಿ,ಯಲ್ಲಿ ಶಾಲೆಗೆ ಅತಿ ಹೆಚ್ಚು ಅಂಕಗಳಿಸಿದ ಮೂರು ವಿದ್ಯಾರ್ಥಿಗಳಿಗೆ ಬಹುಮಾನ.
  • ವಿದ್ಯಾರ್ಥಿವೇತನ: ಹೊರರಾಜ್ಯಗಳ ಪ್ರತಿ ವಿಶ್ವವಿದ್ಯಾಲಯಗಳಲ್ಲಿ ಕನ್ನಡದಲ್ಲಿ ಎಂ.ಎ. ವ್ಯಾಸಂಗ ಮಾಡುತ್ತಿರುವ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ತಲಾ ಮಾಸಿಕ ರೂ.2000/- ದಂತೆ ವಿತರಣೆ (7 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ).
ಕನ್ನಡ ಸಂಸ್ಕೃತಿ ಕಾರ್ಯಕ್ರಮ:
  • ರಾಜ್ಯದಲ್ಲಿನ ಸರ್ಕಾರಿ/ಸರ್ಕಾರೇತರ ಕ್ರಿಯಾಶೀಲ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕ ಉದ್ದಿಮೆ/ಖಾಸಗಿವಲಯದ ಕಾರ್ಖಾನೆಗಳಲ್ಲಿ ಕನ್ನಡ ಸಂಘಟನೆಗಳನ್ನು ಪ್ರೋತ್ಸಾಹಿಸಿ ನಿರಂತರ ಕಾರ್ಯಕ್ರಮಗಳನ್ನು ರೂಪಿಸುವ ಸಲುವಾಗಿ ಕನ್ನಡ ಕಲಿಕಾ ಕೇಂದ್ರಗಳು/ಕನ್ನಡ ಸಂಸ್ಕೃತಿ ಉತ್ಸವ/ಕನ್ನಡ ಸಂಸ್ಕೃತಿ ಶಿಬಿರ/ಭಾಷಾ ಗೋಷ್ಠಿ/ಸಮಾವೇಶ ಕಾರ್ಯಕ್ರಮಗಳ ವೆಚ್ಚ/ಸಹಾಯಧನ ನೀಡಿಕೆ.ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯ ತೀರ್ಪು ನೀಡಿದ ನ್ಯಾಯಾಧೀಶರಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸುವ ಕಾರ್ಯಕ್ರಮ.
  • ರಾಜ್ಯದ ಗಡಿಭಾಗ/ಹೊರರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕ್ರಿಯಾಶೀಲ ಸಂಸ್ಥೆಗಳ ಸಹಯೋಗದೊಂದಿಗೆ ಕನ್ನಡ ಜಾಗೃತಿ ಸಮಾವೇಶ/ಬಹು ಭಾಷಾ ಭಾವೈಕ್ಯ ಸಮಾವೇಶ /ಉಪನ್ಯಾಸ/ಕಮ್ಮಟ/ಗೋಷ್ಠಿ/ಸಾಂಸ್ಕೃತಿಕ ಉತ್ಸವಗಳಿಗಾಗಿ ವೆಚ್ಚ/ಸಹಾಯಧನ ನೀಡಿಕೆ.
  • ಪ್ರಾಧಿಕಾರದ ವತಿಯಿಂದ ಹೊರ ರಾಜ್ಯ/ವಿದೇಶಗಳಲ್ಲಿರುವ ಕನ್ನಡ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳುವ ಕನ್ನಡ ಜಾಗೃತಿ ಸಮಾವೇಶ/ಕನ್ನಡ ಕಲಿಕಾಕೇಂದ್ರ/ಗೋಷ್ಠಿ/ ವಿಚಾರ ಸಂಕಿರಣ/ಸಾಂಸ್ಕೃತಿಕ ಸಂವಾದ/ಕನ್ನಡ ಸಂಸ್ಕೃತಿ ಉತ್ಸವ/ಉಪನ್ಯಾಸಗಳಿಗೆ ವೆಚ್ಚ/ ಸಹಾಯಧನ ನೀಡಿಕೆ.
  • ಹೊರ ದೇಶಗಳಲ್ಲಿ ಅನಿವಾಸಿ ಕನ್ನಡಿಗರ ಜೊತೆ ಸಮಾವೇಶ ಕಾರ್ಯಕ್ರಮಕ್ಕೆ ಪ್ರಾಧಿಕಾರದ ಅಧ್ಯಕ್ಷರು/ ಅಧಿಕಾರಿಗಳು ಮತ್ತು ಪ್ರಾಧಿಕಾರ ಅನುಮೋದಿಸುವ ಎಲ್ಲಾ ಪ್ರತಿನಿಧಿಗಳಿಗೆ ತಗಲುವ ಪ್ರವಾಸ ವೆಚ್ಚ.
  • ಕನ್ನಡ ಗಣಕ/ಕನ್ನಡ ತಂತ್ರಾಂಶ/ಪ್ರಾಧಿಕಾರದ ಅಂರ್ತಜಾಲ ತಾಣ ಅಭಿವೃದ್ಧಿ ಹಾಗೂ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಗಣಕಯಂತ್ರದಲ್ಲಿ ಶಿಕ್ಷಣ.
ಕನ್ನಡ ಚಿಂತನೆ ಕಾರ್ಯಕ್ರಮ:
  • ರಾಜ್ಯದಲ್ಲಿರುವ ಮಹಾನಗರ ಪಾಲಿಕೆಗಳ (8 ಪಾಲಿಕೆಗಳು) ವ್ಯಾಪ್ತಿಯಲ್ಲಿ ಪ್ರಾಧಿಕಾರದ ಸಹಯೋಗದೊಂದಿಗೆ ಹಮ್ಮಿಕೊಳ್ಳುವ (ಸ್ವಾತಂತ್ರ್ಯ ಉದ್ಯಾನವನ/ಸುಚಿತ್ರ ಕಲಾಕೇಂದ್ರ/ನೃಪತುಂಗಬೆಟ್ಟ)/ಹಳೆಗನ್ನಡ ಕಾವ್ಯ-ವ್ಯಾಖ್ಯಾನ (ರಸಗ್ರಹಣ) ಕಾರ್ಯಕ್ರಮಕ್ಕೆ ತಗುಲುವ ವೆಚ್ಚ/ಸಹಾಯಧನ ನೀಡಿಕೆ.
  • ರಾಜ್ಯದಲ್ಲಿನ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಜಾಗೃತಿ ಕಾರ್ಯಕ್ರಮ.
ಕನ್ನಡ ಭವನ: ರಾಜ್ಯದಲ್ಲಿ/ರಾಜ್ಯದ ಗಡಿ ಭಾಗಗಳಲ್ಲಿ/ಹೊರರಾಜ್ಯಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಸಹಾಯಧನ ನೀಡಿಕೆ - ಹೋಬಳಿ ಮಟ್ಟದಲ್ಲಿ ರೂ.10.00ಲಕ್ಷ, ತಾಲ್ಲೂಕು/ಜಿಲ್ಲಾ ಕೇಂದ್ರಗಳಲ್ಲಿ ರೂ.15.00 ಲಕ್ಷಗಳು. (ವಿಶೇಷ ಸಂದರ್ಭದಲ್ಲಿ ಗರಿಷ್ಠ 20 ಲಕ್ಷ ಮೀರದಂತೆ) 
ಪೀಠೋಪಕರಣ ಹಾಗೂ ಪಾಠೋಪಕರಣ: ರಾಜ್ಯದಲ್ಲಿನ/ಗಡಿ ಭಾಗದಲ್ಲಿನ ಹಾಗೂ ಹೊರರಾಜ್ಯದಲ್ಲಿರುವ ಕನ್ನಡ ಶಾಲೆಗಳ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕಗಳನ್ನು ಶೇಖರಿಸಲು ಕಪಾಟುಗಳನ್ನು ಹಾಗೂ ಅರ್ಹ ಶಾಲೆಗಳಿಗೆ ಪೀಠೋಪಕರಣಗಳ ಖರೀದಿ ಮತ್ತು ಅರ್ಹ ಕನ್ನಡ ಸಂಸ್ಥೆಗಳಿಗೆ ಪೀಠೋಪಕರಣ /ಕಪಾಟುಗಳು ಹಾಗೂ ಪಾಠೋಪಕರಣಗಳ ಖರೀದಿಗಾಗಿ ಪ್ರಾಧಿಕಾರದಿಂದ ಸಹಾಯಧನ ನೀಡಿಕೆ.

ಆಡಳಿತದಲ್ಲಿ ಕನ್ನಡ

  • ಆಡಳಿತದಲ್ಲಿ ಕನ್ನಡ ತರಬೇತಿ ಕಾರ್ಯಕ್ರಮ/ಕನ್ನಡ ಶಾಸ್ತ್ರೀಯ ಭಾಷೆ ಸಂಬಂಧ ಕ್ರಿಯಾ ಯೋಜನೆ ರೂಪಿಸುವ ಗೋಷ್ಠಿ/ವಿಚಾರ ಸಂಕಿರಣಗಳನ್ನು ಏರ್ಪಡಿಸುವುದು.
  • ಕನ್ನಡದಲ್ಲಿ ಐ.ಎ.ಎಸ್/ಐ.ಪಿ.ಎಸ್/ಐ.ಎಫ್.ಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು.
  • ವಿಶೇಷ ಪದಕೋಶಗಳ ಮುದ್ರಣ/ಕಾನೂನು ತಜ್ಞರು/ಭಾಷಾ ತಜ್ಞರು/ಶಿಕ್ಷಣ ತಜ್ಞರು/ವಿಷಯ ತಜ್ಞರು/ಸಂಘಟನಕಾರರು/ಸಾಂಸ್ಕೃತಿಕ ನಿರ್ವಾಹಕರು ಇವರ ಸಲಹೆಯನ್ನು ಪ್ರಾಧಿಕಾರದ ಕಾರ್ಯಾಲಯಗಳಲ್ಲಿ ಬಳಸಿಕೊಳ್ಳುವುದು.

ಪ್ರಚಾರ ಹಾಗೂ ಕನ್ನಡ ಜಾಗೃತಿ:

  • ಕನ್ನಡ ನಾಮ ಫಲಕ ಸಪ್ತಾಹ ಮತ್ತು ಕನ್ನಡ ಪ್ರಚಾರ ಫಲಕ/ಜಾಹೀರಾತು/ಅಭಿವೃದ್ಧಿ ಪ್ರಚಾರ ನಾಮಫಲಕಗಳನ್ನು ರಾಜ್ಯದ ಎಲ್ಲಾ ತಾಲ್ಲೂಕುಗಳು/ಪ್ರಮುಖ ಕೇಂದ್ರಗಳಲ್ಲಿ ಪ್ರಕಟಣೆ ಮಾಡುವುದು.
  • ಕರಪತ್ರ/ಕೈಪಿಡಿ/ಭಿತ್ತಿಪತ್ರ/ಅಂಟುಚೀಟಿಗಳ ಮುದ್ರಣ.
  • ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಾಡು-ನುಡಿಗೆ ಸಂಬಂದಿಸಿದಂತ ಪುಸ್ತಕಗಳನ್ನು ಹೊರತರುವುದು.

ಪ್ರ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ್ಯಗಳು ಯಾವುವು?

  • ರಾಜ್ಯ ಸರ್ಕಾರದ ಆಡಳಿತ ಭಾಷಾ ನೀತಿಯ ಅನುಷ್ಠಾನದಲ್ಲಿ ಬೇರೆಬೇರೆ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ಎಲ್ಲ ಸಂಸ್ಥೆಗಳು ಮತ್ತು ಸ್ಥಳೀಯ ನಿಕಾಯಗಳು ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸತಕ್ಕದ್ದು.
  • ರಾಜ್ಯ ಸರ್ಕಾರ ಅಂಗೀಕರಿಸಿರುವ ಡಾ. ಸರೋಜಿನಿ ಮಹಿಷಿ ವರದಿಯ ಶಿಫಾರಸುಗಳನ್ನು ಪರಿಣಾಮಕಾರಿಯಾಗಿ ಅನುಷಾನಕ್ಕೆ ತರುವ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವುದು.
  • ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಜಾರಿಗೆ ತರುವಲ್ಲಿ ಅಡಚಣೆಗಳನ್ನು ಗುರ್ತಿಸಿ, ಅವುಗಳ ನಿವಾರಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳತಕ್ಕದು.
  • ಅಧಿಕಾರಿಗಳಿಗೆ ಮತ್ತು ನೌಕರರಿಗೆ ಕನ್ನಡ ಬಳಕೆಗೆ ಅನುಕೂಲವಾದ ತರಬೇತಿ ಕಾರ್ಯಕ್ರಮಗಳನ್ನು, ಶಿಬಿರಗಳನ್ನು, ಪ್ರದರ್ಶನಗಳನ್ನು ಮತ್ತು ವಿಚಾರ ಸಂಕಿರಣಗಳನ್ನು ಏರ್ಪಡಿಸತಕ್ಕದು ಮತ್ತು ಕನ್ನಡೇತರರಿಗೆ ಕನ್ನಡ ಕಲಿಕೆ ಕಾರ್ಯಕ್ರಮಗಳನ್ನು ಮತ್ತು ಆ ಸಂಬಂಧ ಪಠ್ಯಕ್ರಮ, ಸಾಹಿತ್ಯ ಸಿದ್ಧಪಡಿಸತಕ್ಕದು.
  • ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದ ಉಪಯುಕ್ತ ಪ್ರಕಟಣೆಗಳನ್ನು ಪ್ರಕಟಿಸತಕ್ಕದ್ದು, ಖರೀದಿಸತಕ್ಕದ್ದು ಮತ್ತು ವಿತರಿಸತಕ್ಕದ್ದು.
  • ರಾಜ್ಯದಲ್ಲಿ ಹೆಚ್ಚು ಜನ ಸಂಪರ್ಕ ಹೊಂದಿರುವ ಕೇಂದ್ರ ಸರ್ಕಾರದ ಕಛೇರಿಗಳು, ಬ್ಯಾಂಕ್ಗಳು, ಅಂಚೆ ಕಛೇರಿಗಳು ಮತ್ತು ಮತ್ತಿತರ ಕಛೇರಿಗಳು ಮತ್ತು ಉದ್ದಿಮೆಗಳಲ್ಲಿ ದೈನಂದಿನ ಬಳಕೆಯಲ್ಲಿರುವ ನಮೂನೆ, ನೋಟೀಸು, ನಾಮಫಲಕಗಳಲ್ಲಿ ಕೇಂದ್ರ ಸರ್ಕಾರದ ಭಾಷಾ ನೀತಿಗೆ ಅನುಗುಣವಾಗಿ ಪ್ರಾದೇಶಿಕ ಭಾಷೆಯನ್ನು ಬಳಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸತಕ್ಕದು ಮತ್ತು ಈ ಸಂಬಂಧವಾಗಿ ಅಂಥ ಕಛೇರಿಗಳೊಂದಿಗೆ ಪತ್ರವ್ಯವಹಾರ ಕೈಗೊಳ್ಳತಕ್ಕದು.
  • ಆಡಳಿತ ಪೂರಕ ಸಾಹಿತ್ಯದ ರಚನೆ, ಪರಿಷ್ಕರಣೆ, ಮುದ್ರಣ ಮತ್ತು ವಿತರಣೆ ವಿಷಯಗಳಲ್ಲಿ ತೀರ್ಮಾನ ಕೈಗೊಳ್ಳತಕ್ಕದು ಮತ್ತು ಈ ಕ್ಷೇತ್ರದಲ್ಲಿನ ಪ್ರಗತಿಯನ್ನು ಆಗಿಂದಾಗ್ಗೆ ಸಮೀಕ್ಷಿಸಿ ಸೂಕ್ತ ಕ್ರಮ ಸೂಚಿಸತಕ್ಕದು.

ಪ್ರ: ಇದುವರೆಗೂ ಎಷ್ಟು ಜನ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರುಗಳು ನೇಮಕವಾಗಿದ್ದಾರೆ? 
ಮಾನ್ಯ ಅಧ್ಯಕ್ಷರುಗಳ ವಿವರ:-

ಕ್ರ.

ಸಂ.

ಹೆಸರು

ಅಧಿಕಾರಾವಧಿ

ರಿಂದ

ವರೆಗೆ

ಕನ್ನಡ ಕಾವಲು ಸಮಿತಿ

1

ಶ್ರೀ ಸಿದ್ದರಾಮಯ್ಯ

1983

1983

2

ಶ್ರೀ ದೊಡ್ಡಮೇಟಿ ಜ್ಞಾನದೇವ ಶಿವನಾಗಪ್ಪ

1983

1984

3

ಡಾ.ಪಾಟೀಲ ಪುಟ್ಟಪ್ಪ

1984

1989

4

ಡಾ.ಜಿ.ನಾರಾಯಣ

1992

1995

ಕನ್ನಡ ಅಭಿವೃದ್ಧಿ ಪ್ರಾಧಿಕಾರ

1

ಡಾ.ಜಿ.ನಾರಾಯಣ

1995

1995

2

ಶ್ರೀ ಹೆಚ್.ನರಸಿಂಹಯ್ಯ

1995

1996

3

ಪ್ರೊ.ಚಂದ್ರಶೇಖರ ಪಾಟೀಲ್

23-10-1996

30-06-1999

4

ಡಾ.ಬರಗೂರು ರಾಮಚಂದ್ರಪ್ಪ

22-01-2000

13-01-2003

5

ಶ್ರೀ  ಬಿ.ಎಂ.ಇದಿನಬ್ಬ

24-03-2003

15-03-2006

6

ಡಾ.ಸಿದ್ದಲಿಂಗಯ್ಯ

12-06-2006

10-06-2008

7

ಡಾ.ಮುಖ್ಯಮಂತ್ರಿ ಚಂದ್ರು

11-06-2008

09-06-2014

ಮೂಲ : ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಕೊನೆಯ ಮಾರ್ಪಾಟು : 2/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate