অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅರಣ್ಯೆ ನಿನಗೆ ಶರಣು

ಅರಣ್ಯೆ ನಿನಗೆ ಶರಣು

  1. ಕಾಡಿನ ಹಣ್ಣುಗಳು
  2. ಬನ್ನಿ ಗಿಡ, ಲಕ್ಷ್ಮಿ ಫೋಟೋ
  3. ಪರಂಪರೆಯಲ್ಲಿ ಆಗ್ರೋಫಾರೆಸ್ತ್ರಿ
  4. ಗುಂಡು ತೋಪು, ಅಶ್ವಥಕಟ್ಟೆ, ಹೊಲದಲ್ಲಿ ಇರುತ್ತಿದ್ದ ಮರಗಿಡಗಳು ಇವೆಲ್ಲ ನಮ್ಮಲ್ಲಿ ಇದ್ದಂಥ ಆಗ್ರೋ ಫಾರೆಸ್ಟ್ರಿ ಮಾದರಿಗಳು
  5. ನಮ್ಮದೇ ನರ್ಸರಿ ಇರಲಿ
  6. ತಾಯಿ ಮರ ಗುರುತಿಸಿ
  7. ಕುಲ ವೃಕ್ಷಗಳು
  8. ಪಂಚವಟಿ
  9. ನೆಲ್ಲಿ ಕಾಯಿ ಮಹಿಮೆ
  10. ಪಂಚಾಯತಿಗಳು
  11. ಅಧಿಕ ಇಳುವರಿ ಬೆಳೆಗಳಿಗೆ ಬಂಡ ಮೇಲೆ ಹೊಲದಲ್ಲಿ ಮರಗಿಡಗಳಿದ್ದರೆ ಬೆಳೆ ಇಳುವರಿ ಕಡಿಮೆಯಾಗುತ್ತದೆ ಎಂದು ಮರಗಳನ್ನು ಕಡಿದು ಹಾಕಲು ಪ್ರಾರಂಬಿಸಿದೆವು.
  12. ಬೆಳೆ ಬದಲಾವಣೆಯಿಂದ ಮರ ನಾಶ
  13. ಕೃಷಿಯ ಜೊತೆ ಮರಗಳು
  14. ಮರಗಿಡ ಸಂಯೋಜನೆ ಮಾಡುವಾಗ ನಮ್ಮ ಭಾಗದಲ್ಲಿ ಬೆಳೆಯತಕ್ಕಂಥ ಮರಗಳನ್ನು ಮೊದಲು ಆಯ್ಕೆ ಮಾಡಿಕೊಳ್ಳಬೇಕು.
  15. ಸ್ಥಳೀಯ ಮರಗಳು ಇರಲಿ
  16. ಅತಿಯಾಗದಿರಲಿ
  17. ಎರೆ ಜಮೀನಿನ ಸಮಸ್ಯೆಗಳು
  18. ಸಂಪರ್ಕ ಜಾಲ

ದಿನಕ್ಕೆ ೧೨ ಗಂಟೆಗಳ ಕಾಲ ಸೂರ್ಯನ ಬೆಳಕು ಸಿಕ್ಕತಕ್ಕಂಥ ರಾಷ್ಟ್ರ ನಮ್ಮದು. ನಮ್ಮ  ದೇಶದಲ್ಲಿ ೫೦೦ - ೬೦೦ ಜಾತಿಯ ಗುರುತಿಸಿದ ವೃಕ್ಷ ಸಂಪತ್ತು ಇದೆ. ಭೂಮಿಯ ಒಳಗಡೆ ೧೫ ಅಡಿ ಆಳದವರೆಗೂ ಬೆಳೆಯುವ ಗೆಡ್ಡೆ ಗೆಣಸುಗಳಿವೆ. ಸಾರಜನಕ  ಸ್ಥಿರೀಕರಿಸುವ ಇವು ಮಣ್ಣಿನ ಫಲವತ್ತು ಹೆಚ್ಚಿಸುತ್ತವೆ. ಹೇಳಬೇಕೆಂದರೆ ಮನುಷ್ಯ ಜೀವನ ಪ್ರಾರಂಭ ಮಾಡಿದ್ದೆ ಗೆಡ್ಡೆ  ಗೆಣಸು  ತಿಂದುಕೊಂಡು. ಕಾಡಿನಿಂದಲೇ ಪ್ರಾರಂಭವಾದ ನಾಗರೀಕತೆ ನಮ್ಮದು.

ನಮ್ಮ ನಾಗರೀಕತೆಯ ಮೊದಲ ೬೦ - ೭೦ ಸಾವಿರ ವರ್ಷಗಳು ಮನುಷ್ಯ ಅನ್ನುವ ಪ್ರಾಣಿ ಕಾಡನ್ನೇ ಅವಲಂಬಿಸಿತ್ತು. ೧೦ ಸಾವಿರ ವರ್ಷದಿಂದೀಚೆಗಷ್ಟೇ ಕೃಷಿ ಬಂದಿರುವುದು. ರವೀಂದ್ರನಾಥ ಟಾಗೊರರು ಒಮ್ಮೆ ಲಂಡನ್ನಲ್ಲಿ ಭಾಷಣ ಮಾಡುತ್ತಾ, 'ನಿಮ್ಮದು ಹಿಂದುಳಿದ ನಾಗರೀಕತೆ' ಎಂದು ಬ್ರಿಟಿಷರು ಹಂಗಿಸಿದ್ದನ್ನು ಪ್ರಸ್ತಾಪಿಸುತ್ತಾ, ನಿಮ್ಮ ದೇಶದ ನಾಗರೀಕತೆ ಪಟ್ಟಣಗಳಿಂದ ಹುಟ್ಟಿದ್ದು, ನಮ್ಮದು ಕಾಡಿನಿಂದ ಹುಟ್ಟಿದ ನಾಗರೀಕತೆ. ಆದ್ದರಿಂದಲೇ ನಾವು ಎಲ್ಲಾ ಕಾರ್ಯಗಳನ್ನು 'ಅರಣ್ಯೆ' ಎಂಬ ಸ್ತುತಿಯಿಂದ ಪ್ರಾರಂಭಿಸುವುದು. ಋಗ್ವೇದದಲ್ಲಿ ಇದರ ಪ್ರಸ್ತಾಪ ಇದೆ. ಅರಣ್ಯೆ ಎಂದರೆ ಅನ್ನಪೂರ್ಣೆ , ತಾಯಿ ಎಂದೂ ಆಗುತ್ತದೆ.

ಈ ಶತಮಾನದ ಪ್ರಾರಂಭದಲ್ಲಿ ಷುಮಾಕರ್ ಎನ್ನುವ ವಿಶ್ವ ವಿಖ್ಯಾತ ಅರ್ಥಶಾಸ್ಥ್ರಜ್ಞ ಭಾರತವನ್ನೆಲ್ಲಾ ಸುತ್ತು ಹಾಕುತ್ತಾರೆ. 'ಇಂಡಿಯನ್ ಟ್ರೀಸ್' ಎನ್ನುವ ಪುಸ್ತಕಕ್ಕೆ ಮುನ್ನುಡಿ ಬರೆಯುತ್ತಾ, ' ಇಂಡಿಯಾ ದೇಶದಲ್ಲಿ ಬಡತನಕ್ಕೆ, ನಿರುದ್ಯೋಗಕ್ಕೆ, ಅನಾರೋಗ್ಯಕ್ಕೆ, ಅಪೌಷ್ಟಿಕತೆಗೆ ಅವಕಾಶವಿಲ್ಲ,  ಏಕೆಂದರೆ ಇಷ್ಟೊಂದು ಸಸ್ಯ ಪ್ರಭೇದಗಳು, ಇಷ್ಟು ವೈವಿಧ್ಯತೆ ಪ್ರಪಂಚದಲ್ಲಿ ಎಲ್ಲೂ ಇಲ್ಲ' ಎನ್ನುತ್ತಾರೆ. ನುಗ್ಗೆಯೊಂದರಲ್ಲೇ ೧೫೦ ಪ್ರಭೆದಗಳಿದ್ದಾವೆ ಇಲ್ಲಿ  (ಅದನ್ನ ಅಮೆರಿಕದವರು ಪೇಟೆಂಟ್ ಪಡೆದುಕೊಂಡಿರುವುದು ಬೇರೆ ವಿಷಯ).

ಪ್ರತಿ ಮನೆಯಲ್ಲೂ ನುಗ್ಗೆ ಗಿಡ ಇರುವಾಗ ; ಅದರ ಕಾಯಿ, ಸೊಪ್ಪು, ಹೂವು ಪ್ರತಿಯೊಂದನ್ನೂ ಆಹಾರವಾಗಿ ಬಳಸುವಾಗ ಅಪೌಷ್ಟಿಕತೆ ಹೇಗೆ ಸಾಧ್ಯ ಎನ್ನುವುದು ಷೂಮಾಕರ್  ಇಂಗಿತ. ಅವರು ಮುಂದುವರೆದು, ವಿಶ್ವ ಬ್ಯಾಂಕ್, ಐ ಎಂ ಎಫ್ ನಲ್ಲಿ ಇರುವಷ್ಟು ಹಣದ ಎರಡು - ಮೂರು ಪಟ್ಟು ಮೌಲ್ಯವನ್ನು ಭಾರತದಲ್ಲಿ ಏನೂ ಶ್ರಮವಿಲ್ಲದೆ ಉತ್ಪತ್ತಿ ಮಾಡಬಹುದು ಎಂದು ಅಭಿಪ್ರಾಯ ಪಡುತ್ತಾರೆ.

ಕಾಡಿನ ಹಣ್ಣುಗಳು

ಕಾಡಿನ ಹಣ್ಣು ಜಂಬುನೇರಲೆಗೆ ' ನೆಚರ್ಸ್ ಬ್ಲಡ್ ಬ್ಯಾಂಕ್ ' ಎನ್ನುತ್ತಾರೆ. ಅಂದರೆ ಅದರಲ್ಲಿ ಅಷ್ಟೊಂದು ಪೋಷಕಾಂಶಗಳು ಇವೆ ಎಂದರ್ಥ. ನಮ್ಮಲ್ಲಿ ಗುರುತಿಸಿದ ೨೫ ಜಾತಿ ಜಂಬು ನೇರಳೆ ಇದೆ  ಎಂದರೆ ಯೋಚನೆ ಮಾಡಿ.

ಇಂಥದ್ದೇ ಇನ್ನೊಂದು ಶ್ರೇಷ್ಠ  ಕಾಡು ಹಣ್ಣು ಎಲಚಿ ಹಣ್ಣು. ರಾಮಾಯಣದಲ್ಲಿ ಶಬರಿ ರಾಮನಿಗೆ ಕೊಡುವುದು ಎಲಚಿ ಹಣ್ಣನ್ನೇ. ನೂರಿನ್ನೂರು ಜಾತಿಯ ಎಲಚಿ ಹಣ್ಣನ್ನು ಸಂಗ್ರಹಿಸಿ, ರುಚಿ ನೋಡಿ ರಾಮನಿಗೆ ಕೊಡುತ್ತಾಳೆ. ಅಷ್ಟು ರುಚಿಯಾದ, ಅಷ್ಟೊಂದು ಪೋಷಕಾಂಶ ಇರುವ ಹಣ್ಣು ಅದು. ಕವಳೆ, ಎಲಚಿ, ನೇರಳೆ, ಬೇಲ, ಹಲಸು ಮುಂತಾದ ಕಾಡು ಹಣ್ಣುಗಳೆಲ್ಲಾ ತಿನ್ನಲು ರುಚಿಕಟ್ಟಾದ ಹಣ್ಣುಗಳು ಮಾತ್ರವಲ್ಲ, ರೋಗ ನಿರೋಧಕವೂ, ಪೌಷ್ಟಿಕತೆ  ಒದಗಿಸುವಂಥವೂ ಆಗಿವೆ.

ಕಾಡುಗೇರು ಅಂತ ಇದೆ. ಅಂಟಿನ ಗಿಡ. ಅದನ್ನು ದೋಬಿಮಾರ್ಕ್ (ಇದರ ಅಂಟನ್ನು ದೋಬಿಗಳು ಬಟ್ಟೆಗೆ ಮಾರ್ಕ್ ಮಾಡಲು ಉಪಯೋಗಿಸುತ್ತಿದ್ದರು) ಅಂತಲೂ ಅನ್ನುತ್ತಾರೆ. ಲಂಬಾಣಿಗಳು ಇದರ ಹಣ್ಣನ್ನು ಪೋಣಿಸಿ ಸರ ಮಾಡಿ ಮಾರುತ್ತಾರೆ. ಅದರ ಬೀಜ ಒಣಗಿಸಿ ಒಳಗಿನ ಪಪ್ಪು ತೆಗೆದುಕೊಂಡು ಅಂಟುಂಡೆ /  ಕರದಂಟು  ಅಂತ ಮಾಡುತ್ತಾರೆ. ಇದನ್ನು ಗರ್ಭಿಣಿಯರಿಗು, ಬಾನಂತಿಯರಿಗೂ ತಿನ್ನಿಸುತ್ತಾರೆ. ನಿರೋಧಕ ಶಕ್ತಿಗಾಗಿ. ಇದಕ್ಕೆ ಕ್ಯಾನ್ಸರ್  ನಿರೋಧಕ ಗುಣ ಇರುವುದು ಸಾಬೀತಾಗಿದೆ. ಇದರ ಪಪ್ಪಿನಲ್ಲಿ ಬೆಲೆ ಬಾಳುವ ಎಣ್ಣೆ ತೆಗೆಯುತ್ತಾರೆ. ಹಿಂದೆಯೆಲ್ಲ ಧಾನ್ಯ ಇಡುವ ವಾಡೆಗೆ ಮೆತ್ತಲು ಸಗಣಿ,, ಜೇಡಿಮನ್ನು ಕಲಸಿ ಅದರಲ್ಲಿ ಇದರ ಎಣ್ಣೆ ಬೆರೆಸುತ್ತಿದ್ದರು. ಆ ಮರವನ್ನು ೫೦೦ ಸಲ ಕತ್ತರಿಸಿದರೂ ಮತ್ತೆ ಚಿಗುರಿ ಬರುತ್ತದೆ.

ಅಂಟಿಗೆ ಸಂಬಂಧಿಸಿದ ಕೆಲ ಕುಟುಂಬಗಳೇ ಇದ್ದಾವೆ. ಅಂಟನ್ನು ತೆಗೆದು ಸಂಸ್ಕರಣೆ ಮಾಡಿ ಮಾರುವುದು ಅವರ ಕುಲ ಕಸುಬು. 'ಅಂಟಿನ್' ಎಂಬ ಅಡ್ಡಹೆಸರು ಇಟ್ಟುಕೊಂಡಿರುತ್ತಾರೆ ಅವರು. ಒಮ್ಮೆ oxford ಯೂನಿವರ್ಸಿಟಿ   ಇಂದ ಬಂದಿದ್ದ ತಜ್ಞರ ತಂಡ ಇದನ್ನು ಕಂಡು ಆಶ್ಚರ್ಯ ಪಟ್ಟು ಬಿಟ್ಟಿತು.  ನಮಗೆ ಕಲಿಸಲು ಬಂದಿದ್ದವರು ನಮ್ಮ ವೃಕ್ಷ ಸಂಪತ್ತು, ಅದರ ವೈವಿಧ್ಯತೆ ಅದರ ಬಗ್ಗೆ ನಮ್ಮವರಿಗೆ ಇರುವ ಜ್ಞಾನ ಕಂಡು ಬೆರಗಾಗಿ, ನಮ್ಮನ್ನು ತಮ್ಮಲ್ಲಿಗೆ 'ತಜ್ಞ' ರಾಗಿ ಬರುವಂತೆ ಆಹ್ವಾನಿಸಿ ಹೋದರು.

ನಮ್ಮಲ್ಲಿನ ಜೀವ ಸಂಪತ್ತನ್ನ ಪಟ್ಟಿ ಮಾಡುತ್ತಾ ಹೋದರೆ ಅದರ ಅಗಾಧತೆಯಲ್ಲಿ ಕಳೆದೆಹೋಗುತ್ತೇವೆ. ಉತ್ತರ ಕನ್ನಡದಲ್ಲಿ ಎಷ್ಟು ವೈವಿಧ್ಯತೆ ಇದೆ ಅಂದರೆ ಗಾರ್ಸಿನಿಯ ಎಂಬ ಒಂದೇ ಕುಟುಂಬಕ್ಕೆ ಸೇರಿದ ಐದು ಮಹಾವೃಕ್ಷಗಳು, ಹಲಸಿನ ಕುಟುಂಬಕ್ಕೆ ಸೇರಿದ ಒಂದು ವಾಟೆ ಇದೆ. ಪ್ರಪಂಚದಲ್ಲೇ ಅತ್ಯಂತ ಪರಿಣಾಮಕಾರಿ ಆಂಟಿ ಕೊಲೆಸ್ಟೆರಾಲ್ ಎಂದು ಇವು ಪ್ರಸಿದ್ದಿ. ಇದರಲ್ಲಿ ಕೋಕಂ ಅಥವಾ ಪುನರ್ಪುಳಿ ಅಂತ ಇದೆ. ಅಧ್ಬುತ ತಂಪು ಪಾನೀಯ ಮಾಡುತ್ತಾರೆ ಅದರಲ್ಲಿ. ಬೀಜದಲ್ಲಿ ಬಟರ್ ಮಾಡುತ್ತಾರೆ. ಹೀಗೆ ಪ್ರತಿಯೊಂದು ವೃಕ್ಷದ ಮೌಲ್ಯವೂ ಬೆಲೆ ಕಟ್ಟಲಾಗದ್ದು.

ಬನ್ನಿ ಗಿಡ, ಲಕ್ಷ್ಮಿ ಫೋಟೋ

ನಮ್ಮ ಹಿರಿಯರಿಗೆ ಪರಿಸರದ ಬಗ್ಗೆ ಅತಿ ಸೂಕ್ಷ್ಮವಾದ ಒಳಗಣ್ಣು ಇತ್ತು. ಇವತ್ತು ಬನ್ನಿ ಗಿಡವನ್ನು  ಪೂಜನೀಯ ಗಿಡ ಎಂದು ಪೂಜಿಸುತ್ತಾರೆ. ಆದರೆ ಪರಿಸರಾತ್ಮಕವಾಗಿ ನೋಡಿದಾಗ ಅದೊಂದು ಕೀಸ್ಟೋನ್ ಟ್ರೀ. ಅಂದರೆ, ಆಧಾರಪ್ರಾಯವಾದ ಮರ. ಹೀಗೆನ್ನಲು ಕಾರಣ, ಈ ಬನ್ನಿ ಮರ ತನ್ನ ಪೊಟರೆಗಳಲ್ಲಿ ಎಂಟು ಹತ್ತು ಥರದ ಇರುವೆಗಳನ್ನು ಸಾಕಿಕೊಂಡಿರುತ್ತದೆ. ನಮ್ಮ ಬೆಲೆಗೆ ಕೀಟದ ಬಾದೆ ಬಂದಾಗ ಆ ಇರುವೆಗಳು ದಂಡು ದಂಡಾಗಿ ಬಂದು ಕೀಟಗಳನ್ನು ತಿನ್ನುತ್ತವೆ. ಆದ್ದರಿಂದಲೇ ಬನ್ನಿ ಮರಕ್ಕೆ ರೈತರು ಪೂಜನೀಯ ಸ್ಥಾನ ಕೊಟ್ಟಿರುವುದು, ನಮ್ಮ ಹಿರಿಯರು ಅದನ್ನು ರಕ್ಷಣೆ ಮಾಡಬೇಕು ಎಂದಿರುವುದು. ಅದು ದ್ವಿದಳ ಸಸ್ಯ. ಅದರ ಎಲೆಯಲ್ಲಿ ಸಾರಜನಕ ಯಥೇಚ್ಚವಾಗಿದೇ. ಅದು ಉದುರಿಸಿದ ಎಲೆ ಭೂಮಿಗೆ ಸೇರಿದರೆ ಉತ್ತಮ ಗೊಬ್ಬರ ಆಗುತ್ತದೆ. ಬನ್ನಿ ಎಲೆಯನ್ನೇ ಕೊಟ್ಟರೆ ಬಂಗಾರ ಕೊಟ್ಟಂತೆ ಎಂದು ಅದನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಬನ್ನಿ ಗಿಡವನ್ನ ಕಾಪಾಡಿಕೊಂಡರೆ ಸಮೃದ್ಧಿ ಸಿಗುತ್ತದೆ ಎಂಬುದನ್ನು ನಮ್ಮ ಹಿರಿಯರು ಹೀಗೆ ಹೇಳಿದ್ದಾರೆ.

ಅದಿರಲಿ, ಲಕ್ಷ್ಮಿ ಫೋಟೋದ ಕಲ್ಪನೆ ನೋಡಿ. ಏನೇನಿರುತ್ತೆ ಲಕ್ಷ್ಮಿ ಫೋಟೋದಲ್ಲಿ? ನೀರು, ನೀರಿನಲ್ಲಿ ಪದ್ಮ ಕಮಲ, ಪಕ್ಕದಲ್ಲಿ ಆನೆ ಇರುತ್ತದೆ. ಮಧ್ಯದಲ್ಲಿ ಲಕ್ಷ್ಮಿ ಸಂಪತ್ತು ಸೂರೆ ಮಾಡುತ್ತಾ ಕುಳಿತಿರುತ್ತಾಳೆ. ಇವು ನಾಲ್ಕಕ್ಕೆ ಇರುವ ಸಂಬಂದ ನೋಡಿ. ಅನೆ ಎನ್ನುವುದು ಇಲ್ಲಿ ಮೋಡ. ಕಮಲ ಜಲ ಶುದ್ದಿ ಮಾಡುವ ಹೂ. ಕಮಲ ತನ್ನ ಒಣ ತೂಕದ ೨೦ ರಷ್ಟು ಪ್ರಮಾಣದ ಬಾರ ಲೋಹಗಳನ್ನು (ಪಾದರಸ, ಕ್ಯಾಡ್ಮಿಯಂ, ಕ್ರೊಮಿಯಮ್ ) ತನ್ನಲ್ಲಿ ಸಂಗ್ರಹ ಮಾಡಿ ಇಟ್ಟುಕೊಳ್ಳುತ್ತದೆ. ಇದರಿಂದ ನೀರನ್ನು ಶುದ್ದಿ ಮಾಡಿ ನೀರಿನ ರಕ್ಷಣೆ ಮಾಡುತ್ತದೆ. ನಿಮಗೆ ಲಕ್ಷ್ಮಿ ಬೇಕು ಎಂದರೆ ನೀರನ್ನು ಶುದ್ದವಾಗಿ ಇಡಿ, ಮೋಡ ಹಾಳಾದರೆ ಮಳೆ ಸುರಿಯುವುದಿಲ್ಲ. ಆಸಿಡ್ ರೈನ್ ಸುರಿಯುತ್ತೆ. ಆದ್ದರಿಂದ ಮೋಡದ ರಕ್ಷಣೆ ಮಾಡಿಕೊಳ್ಳಿ. ನೀರನ್ನ, ಗಾಳಿಯನ್ನ ಶುದ್ದವಾಗಿ ಇಟ್ಟುಕೊಂಡಾಗ ಸಿರಿ ಸಂಪತ್ತು ದಕ್ಕುತ್ತದೆ ಎಂಬ ಸಂದೇಶ ಸಾರುವುದು ಲಕ್ಷ್ಮಿ ಫೋಟೋ. ಪದ್ಮ ಕಮಲ, ನೀರು, ಮೋಡ ಮತ್ತು ಸಂಪತ್ತುಗಳಿಗೆ ಸಂಬಂಧವನ್ನು ಕಲ್ಪಿಸಿ ಲಕ್ಷ್ಮಿ ಫೋಟೋದಲ್ಲಿ ಅಳವಡಿಸಿದ ನಮ್ಮ ಹಿರಿಯರ ವಿವೇಕ ನೋಡಿದಿರಾ? ಅವರಿಗೆ ಎಷ್ಟು ಪಿಎಚ್ ಡಿ  ಇದ್ದಿರಬೇಕು ಎಂದು ಯೋಚಿಸುತ್ತಿದ್ದೀರಾ? ೮೮೦ ಜಾತಿಯ ವೃಕ್ಷಗಳಿಗೆ ಆಧ್ಯಾತ್ಮಿಕ ವ್ಯಾಖ್ಯೆ ಕೊಟ್ಟಿದ್ದಾರೆ ನಮ್ಮ ಹಿರಿಯರು. ಇದಕ್ಕೆ ಇಂಥ ಗುಣ ಇದೆ. ಇದನ್ನು ಹೀಗೆ ಬಳಸಬೇಕು ಎಂದು ನಮಗೆ ಟಿಪ್ಸ್ ಕೊಟ್ಟಿದ್ದಾರೆ. ಆರ್ಥಿಕ ಲಾಭಕ್ಕೂ ಮಿಗಿಲಾದ ಮಹತ್ತಾದ ವಿಚಾರಗಳನ್ನು ಹೇಳಿಕೊಟ್ಟಿದ್ದಾರೆ.

ಪರಂಪರೆಯಲ್ಲಿ ಆಗ್ರೋಫಾರೆಸ್ತ್ರಿ

ನಮ್ಮಲ್ಲಿ ಏನೇನು ಸಂಪನ್ಮೂಲಗಳಿವೆ, ಯಾವುದನ್ನು ಹೇಗೆ ಬಳಸುತ್ತಿದ್ದೇವೆ, ನಮ್ಮ ದೇಶದ ಸಂಪತ್ತನ್ನ ಜನಗಳಿಗೆ ಅನುಕೂಲವಾಗುವ ರೀತಿಯಲ್ಲಿ, ಉತ್ಪಾದನೆ ಹೆಚ್ಚಿಸುವ ರೀತಿಯಲ್ಲಿ ಇನ್ನೂ ಉತ್ತಮವಾಗಿ ಹೇಗೆ ಬಳಸಬಹುದು ಅನ್ನುವ ಬಗ್ಗೆ ಒಂದು ವರದಿ ಮಾಡಿಕೊಡಲು ಮದ್ರಾಸ್ ಪ್ರೆಸಿಡೆನ್ಸಿ ಡಾI  ಬೋಕಾನಿನ್ ಅನ್ನುವವರಿಗೆ ವಹಿಸುತ್ತದೆ (ಹಸಿರು ಕ್ರಾಂತಿಗೆ ಮುಂಚೆ). ಅವರು ಮದ್ರಾಸ್ನಿಂದ ಬೆಂಗಳೂರಿಗೆ  ಬಂದು ರಾಮನಗರ, ಚನ್ನಪಟ್ಟಣ, ಮೈಸೂರು, ಕೊಡಗು ಎಲ್ಲಾ ಕಡೆ ಓಡಾಡುತ್ತಾರೆ. ಎತ್ತಿನ ಗಾಡಿಯಲ್ಲಿ, ಕಾಲ್ನಡಿಗೆಯಲ್ಲಿ ಓಡಾಡಿ  ನಮ್ಮ ಕೃಷಿ ಆಚರಣೆಗಳ ಅಧ್ಯಯನ ಮಾಡುತ್ತಾರೆ. ಈ ದೇಶದಲ್ಲಿ ಎಂತಹ ಅದ್ಭುತವಾದ ಕೃಷಿ ಪದ್ಧತಿ ಇದೆ, ಆಗ್ರೋ ಫಾರೆಸ್ಟ್ರಿ ಇದೆ ಎನ್ನುವುದು ಅವರಿಗೆ ಅರ್ಥವಾಗುತ್ತದೆ. ವರದಿಯ ಕೊನೆಯಲ್ಲಿ, 'ನಾನು ಹೇಳುವಂಥದ್ದು ಏನೂ ಇಲ್ಲ. ಕಲಿತದ್ದೇ ಎಲ್ಲ' ಎಂದು ಸೇರಿಸುತ್ತಾರೆ. ಅವರು ಕಂಡದ್ದೇನು ? ಪ್ರತಿ ಊರಲ್ಲೂ ಒಂದು ಗುಂಡು ತೋಪು  (೫-೧೦ ಕಿ.ಮೀಟರಿಗೆ ಒಂದು). ಪ್ರತಿಯೊಂದು ಹಳ್ಳಿಯಲ್ಲೂ ಒಂದು ಅಶ್ವತ್ಥ ಮರ / ಕಟ್ಟೆ. ಅದಕ್ಕೆ ಪ್ರತಿ ದಿನ ಪೂಜೆ. ಪ್ರದಕ್ಷಿಣೆ. ಅಲ್ಲಿ ಮಾಡುವೆ ಮಾಡುತ್ತಾರೆ. ಊರಿನ ಹಿರಿಯರೆಲ್ಲ ಸಾಲಾಗಿ ನಿಂತುಕೊಂಡು ಎತ್ತುಗಳಿಗೆ ಜೋಳ ತಿನ್ನಿಸುತ್ತಾರೆ. ಅಲ್ಲೇ ಪಂಚಾಯತಿ ಕಟ್ಟೆ ಇದೆ. ಕಲ್ಯಾಣಿ ಇದೆ. ಕಲ್ಯಾಣಿ ಪಕ್ಕದಲ್ಲಿ ಒಂದು ಗೋಕಟ್ಟಿ ಇದೆ.ಅಲ್ಲೇ ಪಕ್ಕದಲ್ಲಿ ಕೆರೆ ಇದೆ. ಕೆರೆಯಿಂದ ನೀರು ಗೋಕಟ್ಟೆಗೆ ಬರುತ್ತದೆ.ಗೋಕಟ್ಟೆಯಲ್ಲಿ ಸಗಣಿ ಗಂಜಲ ಹಾಕಿ ನೀರು ಶುದ್ದಿಯಾಗಿ ಕಲ್ಯಾಣಿಗೆ ಬರುತ್ತದೆ. ಕಲ್ಯಾಣಿ ಪಕ್ಕಕ್ಕೆ ಗುಂಡು ತೋಪು.

ಗುಂಡು ತೋಪುಗಳು ಹೆಜ್ಜೇನಿಗೆ ಮನೆಯಾಗಿವೆ. ಹಕ್ಕಿ ಪಕ್ಷಿಗಳಿಗೆ ಮನೆಯಾಗಿವೆ. ರೈತರು ಕರೆಯದೆ ಜೇನ್ನೊಣ ಬಂದು ಅವರ ಬೆಳೆಗಳಿಗೆ ಪರಾಗಸ್ಪರ್ಶ ಮಾಡಿಕೊಡುತ್ತದೆ. ಇದರಿಂದ ಬೆಳೆಗಳ ಇಳುವರಿ ಸಮೃದ್ದವಾಗಿದೆ. ಬೆಳೆಗಳಿಗೆ ಹುಳ ಬಿದ್ದರೆ ಹಕ್ಕಿಗಳು ಕಬಳಿಸಿ ಬೆಳೆ ಕಾಪಾಡುತ್ತವೆ. ಇತ್ಯಾದಿ.. ಇತ್ಯಾದಿ.

ಪಕ್ಷಿಗಳು ಮರಿ ಹಾಕುವುದು ನಮ್ಮ ಹೊಲದಲ್ಲಿ ಬೆಳೆಗಳು ಇದ್ದಾಗ. ಏಕೆಂದರೆ ಹಕ್ಕಿಗೆ ತನ್ನ ಮರಿಗಳಿಗೆ ತಿನ್ನಿಸಲು ಕಂಬಳಿ ಹೂಲ / ಹಸಿರುಳ ಬೇಕು. ೧೫ ದಿವಸದಲ್ಲಿ ಮರಿ ರೆಕ್ಕೆ ಬಂದು ಹಾರಿ ಹೋಗಬೇಕಾದರೆ ಅದಕ್ಕೆ ಚನ್ನಾಗಿ ತಿನ್ನಿಸಬೇಕು. ಅದು ಬಕಾಸುರನಂತೆ

ಗುಂಡು ತೋಪು, ಅಶ್ವಥಕಟ್ಟೆ, ಹೊಲದಲ್ಲಿ ಇರುತ್ತಿದ್ದ ಮರಗಿಡಗಳು ಇವೆಲ್ಲ ನಮ್ಮಲ್ಲಿ ಇದ್ದಂಥ ಆಗ್ರೋ ಫಾರೆಸ್ಟ್ರಿ ಮಾದರಿಗಳು

 

ಹುಳುಗಳನ್ನು ತಿನ್ನುತ್ತದೆ.ಹೀಗೆ ನಮ್ಮ ಬೆಳೆಗೆ ಬೀಳುವ ಹುಳುಗಳನ್ನು ಹಕ್ಕಿಗಳು ಸ್ವಚ್ಚವಾಗಿ ತಿಂದು ಮುಗಿಸುತ್ತವೆ. ಗುಂಡುತೋಪು ಅಸಂಖ್ಯಾತ ಹಕ್ಕಿಗಳಿಗೆ ಮನೆಯಾಗಿರುತ್ತಿತ್ತು. ಅಲ್ಲದೆ ಎಲ್ಲ ಹೊಲಗಳಲ್ಲೂ ಹೊಂಗೆ ಮರ, ಆಲದ ಮರ, ಗೋಣಿ ಮರ, ಬಸರಿ ಮರ, ಹಲಸಿನ ಮರ ಹೀಗೆ ೨೫-೩೦ ಥರದ ಮರಗಳನ್ನು ಹಾಕಿರುತ್ತಿದ್ದರು. ಹೀಗೆ ಗುಂಡು [

ಈ ಉದಾಹರಣೆ ನೋಡಿ. ಹೊಸಕೋಟೆ ಹತ್ತಿರ ರಾಮೇನಹಳ್ಳಿ ಅನ್ನುವ ಊರಿನ ಮಧ್ಯೆ ದೊಡ್ಡ ಆಲದ ಮರ ಇದೆ. ಆ ಮರದಲ್ಲಿ ೬೦೦-೭೦೦ ಹೆಜ್ಜೇನಿನ ಗೂಡಿದೆ. ಈ ಒಂದು ಮರ ಇರುವುದರಿಂದ ಆ ಊರಿನ ಹಿಪ್ಪುನೇರಳೆ ಬೆಳೆ ಇಳುವರಿ ೨೫% ಹೆಚ್ಚಾಗಿದೆ. ಹಿಪ್ಪುನೇರಳೆಯ ಗುಣಮಟ್ಟ ಉತ್ಹ್ಕ್ರುಷ್ಟವಾಗಿದೆ. ಮಾತ್ರವಲ್ಲ, ಜೇನ್ನೊಣಗಳ ಕಾರಣಕ್ಕೆ ಅಲ್ಲಿ ಬೆಳೆಯುವ ಎಲ್ಲಾ ಬೆಳೆಗಳಲ್ಲೂ ಯಾವುದೇ ಖರ್ಚಿಲ್ಲದೆ ೨೦-೨೫% ಹೆಚ್ಚು ಇಳುವರಿ  ಬರುತ್ತದೆ. ಯಾವ ವಿಶ್ವ ಬ್ಯಾಂಕಿನ ಸಾಲವೂ ಇಲ್ಲದೆ ಇಂಥ ಸೇವೆ ಈ ಒಂದು ಮರದಿಂದ, ಜೇನ್ನೊಣಗಳಿಂದ ಆಗುತ್ತಿದೆ. ನಮ್ಮಲ್ಲಿ ೨೫೦ ಜಾತಿ ಜೇನುಗಳಿವೆ. ಪ್ರತಿ ಬೆಳೆಗಳಲ್ಲೂ ಇವುಗಳ ಪಾತ್ರ ಅತೀ ಮುಖ್ಯ. ಸೂರ್ಯಕಾಂತಿ ಹೂವಿಗೆ ಬೆಳಿಗ್ಗೆ ಎದ್ದು ಕಯ್ಯಾಡಿಸಿ ಪರಾಗಸ್ಪರ್ಶ ಮಾಡಿಸುತ್ತಾರೆ. ರೈತರು  ಆದರೆ ಜೇನ್ನೊಣದಿಂದ ಆದ ಪರಾಗಸ್ಪರ್ಶದಿಂದ ಅತ್ಯುತ್ತಮ ಇಳುವರಿ ಬರುತ್ತದೆ.

ನಮ್ಮದೇ ನರ್ಸರಿ ಇರಲಿ

ನಾವು ಈಗ ಅಗತ್ಯವಾಗಿ ಮಾಡಬೇಕಾಗಿರುವುದು ನಮ್ಮ ನರ್ಸರಿಗಳನ್ನು ನಾವೇ ಬೆಳೆಸಿಕೊಳ್ಳುವ ಕೆಲಸ. ಇದಕ್ಕೆ ನಬಾರ್ಡಿನ ಸಹಾಯ ಕೂಡ ಇದೆ. ಸಸಿಗಳ ಸಾಗಣೆಗೆ ತುಂಬಾ ಖರ್ಚಾಗುತ್ತದೆ. ಸಾಗಣೆಯಲ್ಲಿ ಸಸಿಗಳಿಗೆ ಡ್ಯಾಮೇಜ್ ಕೂಡ ಜಾಸ್ತಿ. ನಮ್ಮದೇ ನರ್ಸರಿ ಇದ್ದಾಗ ನಮಗೆ ಬೇಕಾದ ಜಾತಿಯ ಸಸ್ಯಗಳನ್ನು ನಮಗೆ ಹೊಂದಾಣಿಕೆ ಆಗುವ ರೀತಿಯಲ್ಲಿ ಬೆಳೆಸಿಕೊಳ್ಳಬಹುದು.

ರೈತರ ಹೊಲದಲ್ಲಿ ಮರಗಿಡಗಳನ್ನು ಮತ್ತೆ ತರಬೇಕು ಎಂದು ನಾನು ಅರಣ್ಯ ಇಲಾಖೆಯಲ್ಲಿದ್ದಾಗ ಬೇವಿನ ಮರ, ನೇರಳೆ ಮರ, ಹಲಸಿನ ಮರ, ಎಲಚಿ ಮರ, ನುಗ್ಗೆ ಮರ ಹೀಗೆ ಸುಮಾರು ೧೫೦ ಥರದ ಮರಗಳನ್ನು ಬೆಳೆಸಿ ರೈತರಿಗೆ ಕೊಡುತ್ತಿದ್ದೆ. ೧೯೭೮ರಲ್ಲಿ ಒಂದು ದಿನ ನಾನು ಮದ್ದೂರಿನ ರಸ್ತೆ ಬದಿ ಟಿಫಾನಿಸ್ ನಲ್ಲಿ ನಿಂತುಕೊಂಡು ತಿಂಡಿ ತಿನ್ನುತ್ತಿದ್ದೆ. ಪಕ್ಕದಲ್ಲಿ ಇಲಾಖೆಯ ವ್ಯಾನಿತ್ತು. ಅದರ ತುಂಬಾ ಹಲಸಿನ ಸಸಿಗಳನ್ನು ತುಂಬಿಕೊಂಡಿದ್ದೆ. ಅದನ್ನು ನೋಡಿದ ಕೆಲವು ರೈತರು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳಲು ಶುರು ಮಾಡಿದರು. ಕೊನೆಗೆ ನನ್ನ ಬಳಿ ಬಂದು  'ನಮಗೆ ಸಸಿ ಕೊಡಿ' ಎಂದು ಕೇಳಿದರು. ನಾನು 'ಒಂದಕ್ಕೆ  ೫೦ ರೂಪಾಯಿ ಆಗುತ್ತೆ' ಎಂದೆ. 'ಏನು ಮಹಾ, ಕೊಡ್ತೀವಿ, ಕೊಡಿ' ಅಂದರು. ನಾನು ೫೦ ರೂಪಾಯಿ ತೆಗೆದುಕೊಂಡು ಸಸಿ ಕೊಟ್ಟೆ. 'ನನಗೆರಡು, ನನಗೆರಡು ' ಎಂದು ಮುಗಿಬಿದ್ದು ಅಷ್ಟೂ ಸಸಿಗಳನ್ನು ಕೊಂಡುಕೊಂಡರು. ಅವರ ಆಸಕ್ತಿ ನೋಡಿ ನನಗೆ ಮನಸ್ಸು ತುಂಬಿ ಬಂದು ಅವರು ಕೊಟ್ಟ ದುಡ್ಡನ್ನು ಅವರಿಗೆ ಹಿಂದಿರುಗಿಸಿ ಕೊಟ್ಟು ಬಿಟ್ಟೆ.

ಮದ್ದೂರಿನ ಹತ್ತಿರ ಶಿವನಳ್ಳಿ ಅನ್ನುವಲ್ಲಿ ನಮ್ಮ ಸಂಶೋಧನಾ ಕೇಂದ್ರ ಇತ್ತು. ಅಲ್ಲಿ ಅದ್ಭುತವಾದ ನರ್ಸರಿ ಮಾಡಿದ್ದೆವು. ಸುತ್ತ ಮುತ್ತ ಹಳ್ಳಿಗಳಲ್ಲಿ ೨-೩ ಲಕ್ಷ ಸಸಿಗಳನ್ನು ನಾನೇ ಕೊಟ್ಟಿದ್ದೇನೆ. ಈಗಲೂ ಅಲ್ಲಿ ನರ್ಸರಿ ಇದೆ. ಮಂಚಯ್ಯ ಎನ್ನುವ ಗಾರ್ಡ್ ಇದ್ದಾನೆ. ಅವನಿಗೆ ಗಿಡಮರಗಳ ಬಗ್ಗೆ, ನರ್ಸರಿ ಬಗ್ಗೆ ಅಗಾಧವಾದ ಜ್ಞಾನ ಇದೆ. ನೀವು ಆತನನ್ನು ಹೋಗಿ ಕಾಣಬಹುದು.

ನಾನು ನೇರಳೆ ಇತ್ಯಾದಿ ಗಿಡಗಳ ನರ್ಸರಿ ಮಾಡಬೇಕಾದರೆ, ಹಳ್ಳಿಗಳಿಗೆ ಹೋಗಿ ಇಡೀ ಮರದ ಹಣ್ಣುಗಳನ್ನು (ಮರಕ್ಕೆ ಮರವನ್ನೇ) ಕೊಂಡುಕೊಂಡುಬಿಡುತ್ತಿದ್ದೆ. ಬುಟ್ಟಿಗಳಲ್ಲಿ ಹಣ್ಣು ತುಂಬಿಕೊಂಡು ಬಂದು ಶಾಲೆ ಮಕ್ಕಳಿಗೆ ತಿನ್ನಲು ಕೊಡುತ್ತಿದ್ದೆ. 'ಹಣ್ಣು ತಿಂದು, ಬೀಜ ಕೊಡಿ' ಎನ್ನುತ್ತಿದ್ದೆ. ಮಕ್ಕಳಿಗೋ 'ಹೋಳಿ' ಹಬ್ಬ. ಸ್ಕೂಲ್ ಬಿಟ್ಟದ್ದೇ ತಡ, ಓಡೋಡಿ ಬರುತ್ತಿದ್ದರು. ಹೊಟ್ಟೆ ತುಂಬಾ ನೇರಳೆ ಹಣ್ಣು ತಿಂದು ಬೀಜವನ್ನು ಜೋಪಾನವಾಗಿ ಕೊಟ್ಟು ಹೋಗುತ್ತಿದ್ದರು. ಹೀಗೆ ಬೀಜ ಸಂಗ್ರಹಿಸಿ ನರ್ಸರಿ ಮಾಡುತ್ತಿದೆ. ಕೆಲವರು ತಾವೇ ಸಸಿ ಮಾಡಿ ಕೊಡುತ್ತಿದ್ದದ್ದೂ ಉಂಟು. ಸಿರಸಿಯಲ್ಲಿ ಒಬ್ಬರ ಹತ್ತಿರ ಒಳ್ಳೆ ಮಿಡಿ ಮಾವಿನಕಾಯಿ ಮರ ಇತ್ತು. ಅವರು ಬೀಜ ಕೊಡಲು ಒಪ್ಪುತ್ತಿರಲಿಲ್ಲ. ಬಹಳ ಕಷ್ಟ ಪಟ್ಟು ಒಪ್ಪಿಸಿ ಅವರಿಗೆ ಸಸಿ ಬೆಳೆಸಿ ಕೊಡಲು ಕೇಳಿದೆವು. ಕೊನೆಗೆ ಉತ್ತಮ ಸಸಿಗಳನ್ನು ಬೆಳೆಸಿಕೊಟ್ಟರು.

ತಾಯಿ ಮರ ಗುರುತಿಸಿ

ನರ್ಸರಿ ಮಾಡಬೇಕಾದರೆ ಮೊದಲು ನಿಮ್ಮ ಸ್ಥಳೀಯ ಮರಗಳನ್ನು ಗುರುತಿಸಿಕೊಳ್ಳಿ. ಮ್ಯಾಪ್ ಮಾಡಿ. ಅಂತ ಮರಗಳ ಸಸಿಗಳನ್ನು ನರ್ಸರಿ ಮಾಡಿ ಬೆಳೆಸಿ. ಎಲ್ಲಿಂದಲೋ ಬೀಜ / ಸಸಿ ತಂದು ಹಾಕಿದರೆ ನಿಮ್ಮ ಪ್ರದೇಶಕ್ಕೆ ಹೊಂದಿಕೊಳ್ಳುವುದಿಲ್ಲ. ನಿಮ್ಮಲ್ಲೇ ಇರುವ ತಾಯಿ ಮರಗಳನ್ನ ಗುರುತಿಸಿಕೊಂಡು ಮ್ಯಾಪ್ ಹಾಕಿಕೊಳ್ಳಿ. ಇಂಥ ಊರಿನಲ್ಲಿ ಇಂಥ ಮರ ಇಂಥವರ ಜಮೀನಿನಲ್ಲಿ ಇದೆ ಎಂದು ಗುರುತಿಸಿ. ಹೊರಗಿನಿಂದ ಸಸಿ ತರುವುದು ಬೇಕಾಗಿಲ್ಲ. ತಾಯಿ ಮರಗಳನ್ನು ಗುರುತಿಸಲು ಕೆಲ ಮಾನದಂಡಗಳಿವೆ. ಯಾವ ಯಾವ ಮರಕ್ಕೆ ಏನೇನು ಮಾನದಂಡ ಎನ್ನುವುದನ್ನು ನಾನು ಮುಂದೆ ನಿಮಗೆ ವಿವರವಾಗಿ ಹೇಳುತ್ತೇನೆ. ಇದರ ಬಗ್ಗೆ ನಾನು ಒಂದು ಪುಸ್ತಕ ಬರೆದಿದ್ದೇನೆ. ಅದು ಅರಣ್ಯ ಇಲಾಖೆಯ ಗ್ರಂಥಾಲಯದಲ್ಲಿದೆ. ನೀವು ಯಾರಾದರೂ ಹುಡುಕಿ ತೆಗೆಯಬಹುದು. ಹೀಗೆ ಒಳ್ಳೆ ತಾಯಿ ವೃಕ್ಷ ಗುರುತಿಸಿ ಅದರ ಬೀಜಗಳನ್ನು ತೆಗೆದುಕೊಳ್ಳಬೇಕು.

ಬೆಂಗಳೂರಿನ ಸಮೀಪ ಹೊಸಕೋಟೆಯಲ್ಲಿ ಅರಣ್ಯ ಇಲಾಖೆಯ ಸಂಶೋಧನಾ ಕೇಂದ್ರ ಇದೆ. ಅಧಿಕ ಇಳುವರಿಯ ಹುಣಸೆ, ಹಲಸು, ಬೇಲ, ಬೆಟ್ಟನೆಲ್ಲಿ, ಜಂಬು ನೇರಳೆ, ಇನ್ನಿತರ ಬಹುಪಯೋಗಿ ಗಿಡಗಳ ಉತ್ತಮ ನರ್ಸರಿ ಅಲ್ಲಿದೆ. ಅಲ್ಲಿ ನೀವು ತಾಯಿಮರಗಳನ್ನು ನೋಡಬಹುದು. ಆಯಾ ಪ್ರದೇಶಕ್ಕೆ ಚನ್ನಾಗಿ ಹೊಂದಾಣಿಗೆ ಮಾಡಿಕೊಂಡ ಗಿಡಗಳನ್ನು ಗುರ್ತಿಸಿ ನರ್ಸರಿ ಮಾಡಿಕೊಂಡರೆ ಆದರಿಂದಲೇ ನಿಮಗೆ ೨೦% ಹೆಚ್ಚಿನ ಇಳುವರಿ ಸಿಗುತ್ತದೆ. ಹೆಚ್ಚಿನ ಅಭ್ಯಾಸದಿಂದ ಇನ್ನೂ ೨೦% ಹೆಚ್ಚು ಇಳುವರಿ ಪಡೆಯಬಹುದು. ಇವತ್ತು ಹಲಸಿನ ಹಣ್ಣಿನ ೨೦೦ ಉತ್ಪನ್ನಗಳನ್ನ ಮಾಡಿ ಮಾರುತ್ತಿದ್ದಾರೆ. ಏನೂ ಇಲ್ಲದಿದ್ದರೆ ಬೀಜ ಒಲೆಗೆ ಹಾಕಿ ಸುಟ್ಟುಕೊಂಡು ತಿಂದರೆ ಸಾಕು. ತುಂಬಾ ರುಚಿಯಾಗಿರುತ್ತದೆ. ಬೀಜ ಒಡೆದು  ಸಾರಿಗೆ ಹಾಕಿದರೂ ಅಷ್ಟೇ ರುಚಿ. ಹಲಸಿನ ಎಳೆ ಕಾಯಿ ಸಾರು ಅದ್ಭುತ. ಮಾಂಸಾಹಾರಿಗಳಿಗೆ ಚಿಕನ್ ತಿಂದಂತೆ ಇರುತ್ತದೆ. ಇದೇ ಥರ ನೀವು ವಿವಿಧ ಮರಗಳಿಂದ ಉತ್ಪನ್ನಗಳನ್ನು ಮಾಡಬಹುದು. ಅದರ ಗುಣ, ಮೌಲ್ಯಗಳನ್ನು ಗುರುತಿಸಲು ಸಿ ಎಫ್ ಟಿ ಆರ್ ಐ ನವರ ಸಹಾಯ ತೆಗೆದುಕೊಳ್ಳಬಹುದು.

ಕುಲ ವೃಕ್ಷಗಳು

ನಮ್ಮಲ್ಲಿ ಸ್ಥಳ ವೃಕ್ಷಗಳು, ಕುಲವೃಕ್ಷಗಳು ಅಂತ ಇವೆ. ನಮ್ಮ ಹಿರಿಯರು ಒಂದೊಂದು ಕುಲದವರಿಗೆ ಒಂದೊಂದು ವೃಕ್ಷವನ್ನು ವಹಿಸಿ ಕೊಟ್ಟಿದ್ದರು. ಈ ಮರವನ್ನು ನೀವು ರಕ್ಷಣೆ ಮಾಡಿದರೆ ಈ ಮರ ನಿಮ್ಮ ಕುಲವನ್ನ ರಕ್ಷಣೆ ಮಾಡುತ್ತದೆ. ಎಂದು ಹೇಳುತ್ತಿದ್ದರು. ಹೀಗೆ ೧೫ ಸಾವಿರ ವೃಕ್ಷಗಳನ್ನು ೧೫ ಸಾವಿರ ಕುಲಗಳಿಗೆ ರಕ್ಷಣೆ ಮಾಡಲು ಕೊಟ್ಟರು ಎಂದು ಕಂಡು ಬರುತ್ತದೆ. ಅವರು ಆ ಸ್ಥಳದಲ್ಲಿ ಇರತಕ್ಕಂಥ ಸ್ಥಳ ವೃಕ್ಷಗಳನ್ನು ಬೆಳೆಸಿ ಕಾಪಾಡುವ ಜೊತೆಗೆ ಬೇರೆಯವರಿಗೆ ಅದನ್ನು ಬೆಳೆಸಿ ಕೊಡಬೇಕು ಎನ್ನುವ ಆದೇಶ ಕೊಡುತ್ತಿದ್ದರು. ಒಂದು ಮರ ಅವನತಿಯಾಗಿಬಿಟ್ಟರೆ / ಕಳೆದು ಹೋಗಿಬಿಟ್ಟರೆ ಮತ್ತೆ ಅದನ್ನು ಸೃಷ್ಟಿಸಲು ಸಾಧ್ಯವಿಲ್ಲ ಎನ್ನುವ ಮುಂದಾಲೋಚನೆಯಿಂದ ಹೀಗೆ ಮಾಡುತ್ತಿದ್ದರು. ಹೀಗೆ ಆಯಾ ಪ್ರದೇಶದ ಸಸ್ಯ ತಳಿ ಸಂಪತ್ತನ್ನು ರಕ್ಷಿಸುತ್ತಿದ್ದರು.

ಪಂಚವಟಿ

ಇದನ್ನು ನಾನು ಅನೇಕ ಕಡೆ ಮಾಡಿಸಿದ್ದೇನೆ. ಐದು ಮಹಾನ್ ವೃಕ್ಷಗಳ ಕಲ್ಪನೆ ಇದು.

  • ಬಿಲ್ವಪತ್ರೆ. ಇದು ಮಹಾವೃಕ್ಷ. ಈಶ್ವರನಿಗೆ ಪ್ರಿಯವಾದದ್ದು. ಇದರ ಮಹಾನ್ ಗುಣ ಅಂದರೆ, ಪ್ರಪಂಚದಲ್ಲೇ ಅತ್ಯದ್ಭುತ  ಡಿ - ಟಾಕ್ಸಿ ಫೈಯಿಂಗ್ ಮರ ಇದು. ನಮ್ಮೊಳಗೇ ಸೇರಿಕೊಂಡಿರುವ ವಿಷವನ್ನೆಲ್ಲ ಇದು ತೊಳೆಯುತ್ತದೆ.
  • ಎರಡನೇ ಮಹಾವೃಕ್ಷ ಬೆಟ್ಟ ನೆಲ್ಲಿ. ರೋಗಗಳನ್ನು ತಡೆಗಟ್ಟಿ ಆರೋಗ್ಯವಂತರಾಗಿ ಮಾಡುವ ಅದ್ಭುತವಾದ ಒಂದು ಮರ. ಇದಕ್ಕೊಂದು ಕಥೆ ಇದೆ ಈ ಕೆಳಗಿನ (ಬಾಕ್ಸ್ ನೋಡಿ ).

ನೆಲ್ಲಿ ಕಾಯಿ ಮಹಿಮೆ

( ಸುಕನ್ಯಾ ಎನ್ನುವ ರಾಜಕುಮಾರಿ ಕಾಡಿನಲ್ಲಿ ವಿಹರಿಸುತ್ತಾ ಒಂದು ಹುತ್ತದಲ್ಲಿ ಹೊಳೆಯುತ್ತಿರುವ ಕಣ್ಣನ್ನು ನೋಡುತ್ತಾಳೆ. ಭಯವಾಗಿ ಚುಚ್ಚಿಬಿಡುತ್ತಾಳೆ. ರಕ್ತ ಬರುತ್ತದೆ. ಈಗ ಇನ್ನೊಂದು ಕಣ್ಣು ಕಾಣಿಸುತ್ತದೆ. ಅದನ್ನೂ ಚುಚ್ಚಿಬಿಡುತ್ತಾಳೆ. ಈಗ ಎರಡೂ ಕಣ್ಣಿಂದ ರಕ್ತ ಸುರಿಯತೊಡಗುತ್ತದೆ. ಅದು ತಪಸ್ಸಿನಲ್ಲಿದ್ದ ವೃದ್ದ ಚ್ಯವನ ಋಷಿಯ ಕಣ್ಣುಗಳು. ಕಣ್ಣು ಕಳೆದುಕೊಂಡು ಕೋಪಗೊಂಡ ಆತ ಇವಳಿಗೆ ಶಾಪ ಕೊಡುತ್ತಾನೆ. ಸುಕನ್ಯಾಳ ಸಖಿಯರು ಬೇಡಿಕೊಂಡ ನಂತರ, ರಾಜಕುಮಾರಿ ತನ್ನನ್ನು ಮದುವೆಯಾಗುವುದಾದರೆ ಶಾಪವನ್ನು ಹಿಂತೆಗೆದುಕೊಳ್ಳುತ್ತೇನೆ ಎನ್ನುತ್ತಾನೆ.ಸುಕನ್ಯಾ ಅವನನ್ನು ಮದುವೆಯಾಗಿ ನಿಷ್ಠೆಯಿಂದ ಅವನ ಸೇವೆ ಮಾಡುತ್ತಿರುತ್ತಾಳೆ. ಇವಳನ್ನು ಕಂಡು ಮರುಗಿದ ಅಶ್ವಿನಿ ದೇವತೆಗಳು ಅವಳಿಗೆ ಬೆತ್ತನೆಲ್ಲಿಯಲ್ಲಿ ಚ್ಯವನಪ್ರಾಶ ತಯಾರಿಸುವ ಫಾರ್ಮುಲಾ ಹೇಳಿಕೊಡುತ್ತಾರೆ. ಅದನ್ನು ಸೇವಿಸಿದ ಚ್ಯವನ ಋಷಿ ಕ್ರಮೇಣ ಯುವಕನಾಗಿ ಪರಿವರ್ತನೆಯಾಗುತ್ತಾನೆ. ಸಮರಸದ ಬಾಳು ಇವರದ್ದಾಗುತ್ತದೆ.)

  • ಮೂರನೆಯದ್ದು ಅಶೋಕ. ತಾಪಸವನ್ನ ಕಳೆಯುವಂಥ ಮಹಾ ವೃಕ್ಷ. ಖಿನ್ನತೆಯನ್ನು ತಡೆಯುವಂತಹ ಅದ್ಭುತ ಗುಣ ಇದಕ್ಕೆ ಇದೆ. ರಾವಣ ಸೀತೆಯನ್ನು ಇಟ್ಟಿದ್ದು ಈ ಮರದ ಕೆಳಗೇ.
  • ನಾಲ್ಕನೆಯ ಮಹಾನ್ ವೃಕ್ಷ ಆಲ.
  • ಐದನೆಯದು ಅಶ್ವತ್ಥ. ವಟವೃಕ್ಷ . ಇವೆರಡೂ ನಮ್ಮ ಜ್ಞಾನ ವೃದ್ದಿ ಮಾಡುವಂತದ್ದು.
  • ಈ ಐದು ವೃಕ್ಷಗಳ ಸಮಾಗಮವನ್ನು ಪಂಚವಟಿ ಎನ್ನುತ್ತೇವೆ. ಒಂದು ಹಳ್ಳಿಯ ಒಟ್ಟಾರೆಯಾದ ಆರೋಗ್ಯಕ್ಕೆ ಪಂಚವಟಿ ಅತ್ಯಗತ್ಯ.

ಒಳ್ಳೆ ಗುಣದ ಮರಗಳನ್ನು, ಹಿಂದಿನಿಂದ ನಮ್ಮಲ್ಲಿ ಇದ್ದಿರದಿದ್ದರೂ ನಾವು ಯಾಕೆ ತಂದು ಹಾಕಬಾರದು ಎಂದು ನೀವು ಕೇಳಿದಿರಿ. ಪ್ರತಿಯೊಂದು ಪ್ರದೇಶದಲ್ಲಿ ಬೆಳೆಯುವ ಮರಗಳು ಆಯಾ ಪ್ರದೇಶಕ್ಕೆ ಹೊಂದಾಣಿಕೆ ಆಗಿರುತ್ತವೆ. ಬಿಜಾಪುರದಲ್ಲಿ ೪೦ ಡಿಗ್ರೀ ಉಷ್ಣಾಂಶ . ಮಳೆ ಕಮ್ಮಿ . ಕೆಲ ಜಾತಿ ಮರಗಳು ಯಾವಾಗಲೋ ಇಲ್ಲಿಗೆ ಬಂದು ಕಾಲಾಂತರದಲ್ಲಿ ಇಲ್ಲಿನ ಸ್ಥಿತಿಗತಿಗೆ  ಹೊಂದಾಣಿಕೆ ಆಗಿರುತ್ತವೆ. ಅಂಥವನ್ನು ಬೆಳೆಸಿದರೆ ಚನ್ನಾಗಿ ಬೆಳೆಯುತ್ತವೆ. ಅದಕ್ಕೆ ಬೇಕಾದಂಥ ಪರಾಗಸ್ಪರ್ಶಿಗಳು ಆ  ಪ್ರದೇಶದಲ್ಲಿ ಅಭಿವೃದ್ದಿ ಆಗಿರುತ್ತವೆ . ಅವುಗಳಿಗೆ ಈ ಮರಗಳು ಸುಪರಿಚಿತವಾಗಿರುತ್ತವೆ. ಬೇರೆ ಪ್ರದೇಶದ ಮರಗಳನ್ನು ತಂದು ಬೆಳೆಸಿದರೆ ಉತ್ಪಾದನೆ ಕಡಿಮೆ ಆಗುತ್ತದೆ. ಕೆಂಪು ಮಣ್ಣಿಗೆ ಹೊಂದಿಕೊಂಡ ಮರಗಳನ್ನು ತಂದು ಕಪ್ಪು ಮಣ್ಣಿಗೆ ಹಾಕಿದರೆ ಅದಕ್ಕೆ ಉಸಿರು ಕಟ್ಟುತ್ತದೆ. ಸಾಯಲೂಬಹುದು. ಹಾಗೆಂದು ಹಾಕಲೇ ಕೂಡದು ಎಂದೇನಿಲ್ಲ. ಹಾಕಬಹುದು. ಆದರೆ ವಿಶೇಷ ಗಮನ ಕೊಟ್ಟು ಬೆಳೆಸಬೇಕು. ಗೊಬ್ಬರ ನೀರು ಎಲ್ಲ ಕೊಡಬೇಕು.

ಇನ್ನು ಒಳ್ಳೆ ಗುಣ ಎಂದರೆ ಏನು ಎನ್ನುವ ಪ್ರಶ್ನೆ ಬರುತ್ತದೆ. ಸೇಬು ನೋಡಲು ದಪ್ಪ ಇದೆ ಎಂದು ಒಂದಕ್ಕೆ ೨೫ ರೂಪಾಯಿಯಾದರೂ ಕೊಟ್ಟು ತರುತ್ತೇವೆ.ಅದರಲ್ಲಿ ಏನು ಸತ್ವ ಇರುತ್ತದೆ? ಚಾಕೊಲೆಟ್, ಸಿದ್ದ ಆಹಾರ ಕೊಟ್ಟು ಬೆಳೆಸಿದ ಮಕ್ಕಳು ನೋಡಲು ಗುಂಡು ಗುಂಡಾಗಿರುತ್ತಾರೆ, ಚನ್ನಾಗಿದೆ ಮಗು ಅನ್ನುತ್ತೇವೆ. ಅದಕ್ಕೆ ಏನೊಂದೂ ತಾಳಿಕೊಳ್ಳುವ ಶಕ್ತಿ ಇರುವುದಿಲ್ಲ. ಹಳ್ಳಿ ಮಕ್ಕಳು ರೊಟ್ಟಿ ತಿಂದುಕೊಂಡು, ಮುದ್ದೆ ತಿಂದುಕೊಂಡು ಕುಣಿದಾಡಿಕೊಂಡು ಇರುತ್ತಾರಲ್ಲ, ಎಷ್ಟು ಗಟ್ಟಿ ಮುಟ್ಟಾಗಿರುತ್ತಾರೆ ಅವರು. ಹಾಗೆಯೇ ಮರಗಿಡಗಳು ಕೂಡ. ಅದಕ್ಕೆ ರಸಗೊಬ್ಬರ ಹಾಕಿ ವಿಷ ಸಿಂಪಡನೆ ಮಾಡಿ ಆರೈಕೆ ಮಾಡಿದರೆ ನೋಡಲು ಚನ್ನಾಗಿರುತ್ತೆ. ಅಷ್ಟೇ ದುರ್ಬಲವಾಗಿರುತ್ತದೆ.

ಒಳ್ಳೆ ಗುಣ ಅಂದರೆ ಸ್ಥಳೀಯವಾಗಿ ಹೊಂದಿಕೊಂಡು ಬೆಳೆಯುವ, ಸ್ಥಳೀಯ ಅಗತ್ಯಗಳನ್ನು ಪೂರೈಸುವ ಗುಣ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸಸ್ಯ  ತಳಿಗಳನ್ನು  ಸ್ಥಳೀಯವಾಗಿ ಸಂರಕ್ಷಣೆ ಮಾಡಿ ಸ್ಥಳೀಯವಾಗಿ ಅಭಿವೃದ್ದಿಪದಿಸಬೇಕಾದ್ದು ಸರಿಯಾದ ಕ್ರಮ.

ಪಂಚಾಯತಿಗಳು

ಪಂಚಾಯತಿ ರಾಜ್ ಕಾಯ್ದೆ ಪ್ರಕಾರ, ಗ್ರಾಮ ಪಂಚಾಯತಿಗಳು ತಮ್ಮ ಪ್ರದೇಶದ ಮರವನ್ನು ಬೆಳೆಸಿ ಅಲ್ಲಿನ ಜನರ ಬಳಕೆಗೆ ಕೊಡಬೇಕು. ಹೆಚ್ಚಾದರೆ ಮಾತ್ರ ಮಾರಾಟ ಮಾಡಬೇಕು. ಸ್ಥಳೀಕರ ಬೇಡಿಕೆಗಳನ್ನು ಪೂರೈಸಿದ ನಂತರವಷ್ಟೇ ಮಾರಬೇಕು ಎಂದು ಕಾನೂನಲ್ಲಿದೆ. ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿ, ಜನರಿಗೆ ಕೈಗೆಟಕುವ ಬೆಲೆಯಲ್ಲಿ ಕೊಡಬೇಕು. ಅದನ್ನು ಕೇಳಿ ಪಡೆದುಕೊಳ್ಳಬೇಕಾದ್ದು ಎಲ್ಲರ ಹಕ್ಕು. ಎಲ್ಲಿ ಇದಾಗುತ್ತಿಲ್ಲವೋ ಅಂಥ ಕಡೆ ಕಾನೂನಿನ ಸಹಾಯ ಪಡೆದುಕೊಳ್ಳಬಹುದು.

ಇವತ್ತಿನ ಸಂದರ್ಭದಲ್ಲಿ ರೈತರಿಗೆ ಕೃಷಿ ಅರಣ್ಯದ ಬಗ್ಗೆ ಆಸಕ್ತಿ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣಗಳೂ ಇವೆ. ಮೊದಲು ನಮ್ಮಲ್ಲಿ ಎಲ್ಲ ಕಡೆ ಅರಣ್ಯಗಳಿದ್ದವು. ನಮ್ಮ ಗ್ರಾಮದ  ಸುತ್ತ ಮುತ್ತ ಹುಣಸೆ ಮರದ ತೋಪುಗಳು ಊರಿನಲ್ಲಿ ಆಲದ ಮರಗಳು, ದಬಗಲ್ಲಿ  ಮರಗಳು, ಬನ್ನಿ, ಬೇವು, ಹೊಂಗೆ,ಲಕ್ಕಿ.. ಹೀಗೆ ಯಾವ ಮರ ನೋಡಿದರೂ ಸಾಕಷ್ಟಿದ್ದವು. ಕತ್ತಲಾದರೆ ಊರು ಸೇರಲು ಭಯವಾಗುತ್ತಿತ್ತು. ಅಷ್ಟು ಗಿಡಮರಗಳಿರುತ್ತಿದ್ದವು. ಆಗ ನಮಗೆ ಇಂಥ ತಾರೀಖಿಗೆ ಮಳೆ ಬರುತ್ತದೆ, ಇಂಥ ತಾರೀಖಿಗೆ ಬಿತ್ತನೆ ಮಾಡುತ್ತೇವೆ, ಇಷ್ಟೇ ಬೆಳೆ ತೆಗೆದುಕೊಳ್ಳುತ್ತೇವೆ, ಇಷ್ಟೇ ಪದಾರ್ಥ ಮಾರಾಟ ಮಾಡುತ್ತೇವೆ ಅನ್ನುವುದನ್ನು ದಿನಾಂಕ ಸಹಿತ ಬರೆದಿಡಬಹುದು ಅನ್ನುವಷ್ಟು ಖಚಿತತೆ ಇರುತ್ತಿತ್ತು. ಇಂಥ ಸಮಯದಲ್ಲಿ ಕಟಾವು ಮಾಡಿ, ಇಂಥ ಸಮಯದಲ್ಲಿ ಮಾರಾಟ ಮಾಡಿದರೆ ಇಷ್ಟು ರೇಟು ಬರುತ್ತದೆ ಅನ್ನುವ ಖಾತ್ರಿ ಇರುತ್ತಿತ್ತು. ರೈತರು ಸ್ಥಳೀಯವಾದ ಸಂಗತಿಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡು ಮಳೆಯ ಮುನ್ಸೂಚನೆಯನ್ನು ನಿಖರವಾಗಿ ಕೊಡುತ್ತಿದ್ದರು. ನಮ್ಮ ಪಶು ಪಕ್ಷಿ ಪ್ರಾಣಿಗಳ ನಡವಳಿಕೆ ನೋಡಿಕೊಂಡು ಮಳೆ ಬರುತ್ತದೆ ಅನ್ನುವುದನ್ನು ಖಾತ್ರಿಯಲ್ಲಿ ಹೇಳುತ್ತಿದ್ದರು.

ನಮ್ಮಲ್ಲಿದ್ದ ಕಾಡು ಈಗಿಲ್ಲ. ರೈತರ ಜಮೀನಲ್ಲಿ ಗಿಡಮರಗಳಿಲ್ಲ. ಹವಾಮಾನವೂ ಪೂರ್ತಿ ಏರುಪೇರಾಗಿದೆ. ನಮ್ಮ ಯಾವ ಮಳೆಗಾಲ ವಿಚಾರದಲ್ಲೂ ಯಾವ ಖಾತ್ರಿಯೂ ಇಲ್ಲ. ಸ್ಥಳೀಕರಿಗೆ ಏಕೆ, ಹವಾಮಾನ ತಜ್ಞರಿಗೂ ಮಳೆಗಾಲ ವಿಚಾರದಲ್ಲೂ ಯಾವ ಖಾತ್ರಿಯೂ ಇಲ್ಲ. ಸ್ಥಳೀಕರಿಗೆ ಏಕೆ, ಹವಾಮಾನ ತಜ್ಞರಿಗೂ ಮಳೆಗಾಲ ಮುನ್ಸೂಚನೆ ಕೊಡುವುದು ಸಾಧ್ಯವಿಲ್ಲ. ಹವಾಮಾನ ಇಲಾಖೆಯವರು ಒಮ್ಮೊಮ್ಮೆ, 'ಮುಂದಿನ ಎರಡು ದಿನದಲ್ಲಿ ಭಯಂಕರ ಮಳೆ' ಎಂದು ಹೇಳುತ್ತಾರೆ. ನೋಡಿದರೆ ಯಾವ ಮಳೆಯೂ ಬಂದಿರುವುದಿಲ್ಲ. ಮಳೆ ಹಿಡಿದಾಗ, 'ಇನ್ನು ನಾಲ್ಕು ದಿನ ಮಳೆ ಮುಂದುವರೆಯುತ್ತೆ' ಅನ್ನುತ್ತಾರೆ. ಮಾರನೆಯ ದಿನವೇ ಬಯಲಾಗಿ ಬಿಟ್ಟಿರುತ್ತೆ. ಹಿಂದೆ (ಗಿಡಮರಗಳಿದ್ದಾಗ) ನಿಶ್ಚಿತವಾಗಿ ಮಳೆ ಬರುತ್ತಿತ್ತು. ನಿಶ್ಚಿತವಾಗಿ ಬೆಳೆ ಬೆಳೆಯುತ್ತಿದ್ದವು. ನಮ್ಮ ಬೆಳೆಗಳ ಜೊತೆ ಹೊಲದಲ್ಲಿ ನೆಗ್ಗಲಿ ಮುಳ್ಳು, ನಿಂಜಾಲಿ ಮುಳ್ಳು, ನೆಲಗುಳ್ಳ, ತಾಗಡಿ ಬಳ್ಳಿ, ದಬಗಳ್ಳೆ ಹಣ್ಣು.

ಅಧಿಕ ಇಳುವರಿ ಬೆಳೆಗಳಿಗೆ ಬಂಡ ಮೇಲೆ ಹೊಲದಲ್ಲಿ ಮರಗಿಡಗಳಿದ್ದರೆ ಬೆಳೆ ಇಳುವರಿ ಕಡಿಮೆಯಾಗುತ್ತದೆ ಎಂದು ಮರಗಳನ್ನು ಕಡಿದು ಹಾಕಲು ಪ್ರಾರಂಬಿಸಿದೆವು.

ಕಾಕಿ ಹಣ್ಣು, ಅಡವಿ ಹೆಸರು, ನೆಲಬೇವು ಮುಂತಾದ ಕಳೆಗಳು ಸಾಕಷ್ಟು ಬರುತ್ತಿದ್ದವು. ಈ ಕಳೆಗಳೇ ನಮಗೆ ಸಾಕಷ್ಟು ಆಹಾರ, ಔಷಧಿ ಒದಗಿಸುತ್ತಿದ್ದವು. ನಾವು ದವಾಖಾನೆಗೆ  ಹೋಗುತ್ತಿರಲಿಲ್ಲ. ಕಳೆಗಳೇ ನಮ್ಮ ಬೆಳೆಗಳಿಗೆ ಬೀಳುವ ಕೀಟ ರೋಗಗಳನ್ನು ನಿಯಂತ್ರಣ ಮಾಡುತ್ತಿದ್ದವು. ಬೆಳೆಗಳಿಗೆ ಪೋಷಕಾಂಶ ಕೊಡುತ್ತಿದ್ದವು.

ನಾವೆಲ್ಲಾ ರಾಸಾಯನಿಕ ಕೃಷಿಗೆ ಬಿದ್ದು, ನೀರು ಹಾಯಿಸಿ, ರಸಗೊಬ್ಬರ ಹಾಕಿ, ಔಷದ ಹೊಡೆದು ಕಳೆಗಳನ್ನು ಕೊಲ್ಲತೊಡಗಿದೆವು. ರಸಗೊಬ್ಬರ, ಔಷಧ, ನೀರಾವರಿ ಬಂದ ಮೇಲೆ ನಮ್ಮಲ್ಲಿ ಬೆಳೆಯತಕ್ಕಂಥ ಎಲ್ಲ ಬೆಳೆಗಳನ್ನು ಬಿಟ್ಟೆವು. ಈಗ ಮಳೆ ೧೫ ದಿನ ತಡ ಆದರೂ ಮೇವಿಲ್ಲ ಎನ್ನುತ್ತಾರೆ ರೈತರು. ಮಳೆ ತಡ ಆಯಿತು, ಬರುವಂಥ ಬೆಳೆಗಳನ್ನು ಬೆಳೆಯುವುದಿಲ್ಲ  ಎಂದರ್ಥ. ಎಲ್ಲಾ ಬೆಳೆ ಹಾಳು ಮಾಡಿಕೊಂಡು ಹತ್ತಿ, ಕಬ್ಬು, ಸೂರ್ಯಪಾನ ಬೆಳೆಯುತ್ತಿದ್ದರೆ, ವರ್ಷ ಪೂರ್ತಿ ಮಳೆ ಬಂದರೂ ಮೇವಿರುವುದಿಲ್ಲ (ನಮ್ಮ ಬೆಳೆಗಳನ್ನೆಲ್ಲ ಹಾಳುಮಾಡಿದ ಕೃಷಿ ಇಲಾಖೆಯವರು ಈಗ ಮೇವು ಕೊಡುತ್ತೇವೆ ಎನ್ನುತ್ತಾರೆ!).

ಬೆಳೆ ಬದಲಾವಣೆಯಿಂದ ಮರ ನಾಶ

ನಾವು ಯಾವಾಗ ಅಧಿಕ ಇಳುವರಿ ಬೆಳೆಗಳಿಗೆ ಬಂದೆವೋ ಆಗ ಹೊಲದಲ್ಲಿ  ಮರಗಿಡಗಳಿದ್ದರೆ ಬೆಳೆ ಇಳುವರಿ ಕಡಿಮೆಯಾಗುತ್ತದೆ ಎಂದು ಮರಗಳನ್ನು ಕಡಿದು ಹಾಕಲು ಪ್ರಾರಂಭಿಸಿದವು. ಗೋಮಾಳಗಳನ್ನು ಒತ್ತುವರಿ ಮಾಡುತ್ತಾ ಬಂದೆವು. ಈಗ ಯಾವ ಊರಲ್ಲೂ ಗೋಮಾಳಗಳು ಇಲ್ಲ. ಅರಣ್ಯಗಳನ್ನೆಲ್ಲ ಕಡಿದ ಮೇಲೆ ಮಂಗ, ಚಿಗರಿ, ತೋಳ, ಆನೆ ಇವೆಲ್ಲ ನಮ್ಮ ಹೊಲಗಳಿಗೆ ಬರತೊಡಗಿದವು. ಹಿತ್ತಲಲ್ಲಿ ಹಾಕಿದ್ದನ್ನೂ ಬಿಡುವುದಿಲ್ಲ ಅವು. ಅವುಗಳ ಮನೆಯನ್ನು ನಾವು ನಾಶ ಮಾಡಿದ್ದೀವಿ. ಅವು ನಮ್ಮ ಮನೆಗೆ ನುಗ್ಗುತ್ತಿವೆ. ಮುಂದೆ ನಮ್ಮ ಮನೆಯಲ್ಲೇ ವಾಸಮಾಡುತ್ತವೇನೋ!.

ಒಂದು ಕಡೆ ನಮ್ಮಲ್ಲಿ ಇದ್ದ ಮರಗಳನ್ನು ಕಡಿದು ಹಾಕಿದ ನಾವು, ಇನ್ನೊಂದು ಕಡೆ ಲಾಭಕ್ಕೆಂದು ಹೊರಗಡೆಯಿಂದ ಬಂದ ಗಿಡಗಳನ್ನು ಬೆಳೆಸಲು ಮುಂದಾದೆವು. ಅಕೆಸಿಯಾ, ನೀಲಗಿರಿ, ಸುಬಾಬುಲ್, ತಾಳೆ, ಜಟ್ರೋಪ.. ಇಂಥ ನಮಗೆ  ಗೊತ್ತಿಲ್ಲದ ಮರಗಳನ್ನು ಬೆಳೆಸತೊಡಗಿದೆವು. ಯಾವುದೋ ಕಂಪನಿಯವರು ತಮ್ಮ ಲಾಭಕ್ಕಾಗಿ ಈ ಗಿಡ ಬೆಳೆಯಿರಿ ಅಂದರೆ ನಾವು ಬೆಳೆದುಬಿಡುವುದು. ಒಂದರಲ್ಲಿ ಮೋಸ ಹೋದ ಮೇಲೆ ಅದನ್ನ ಬಿಟ್ಟು ಮತ್ತೊಂದಕ್ಕೆ  ಹೋಗುವುದು.ಹೈದರಾಬಾದ್ ಕಂಪನಿಯೊಂದು ತಮಗೆ ಬೇಕಾದ ಸಸಿ, ಬೀಜಕ್ಕಾಗಿ ರೈತರ ಹೊಲದಲ್ಲಿ ಜಟ್ರೋಪ ಬೆಳೆಯಿರಿ ಎಂದಾಗ ನಮ್ಮ ರೈತರು ಅದನ್ನೂ ಬೆಳೆದರು. ಕೃಷಿ ವಿಜ್ಞಾನ ಕೇಂದ್ರವೇ ಮುಂದಾಗಿ ಜಟ್ರೋಪ, ತಾಳೆಗಳನ್ನು ಉತ್ತೆಜಿಸಿತು. ಆ ದೆವ್ವದಂಥ ತಾಳೆಗಿಡ, ಅದರ ಹಿಂದು ಮುಂದು ಏನೂ ಗೊತ್ತಿಲ್ಲ, ಅದನ್ನೂ ಬೆಳೆಯುತ್ತಿದ್ದಾರೆ ನಮ್ಮ ರೈತರು! ಮುಂದೆ ಇನ್ನ್ಯಾವುದೋ ಬಂದರೆ ಇದನ್ನು ಬಿಟ್ಟು ಅದಕ್ಕೆ ಹೋಗುತ್ತಾರೆ.

ಕೃಷಿಯ ಜೊತೆ ಮರಗಳು

ನಮಗೆ ಇವತ್ತು ಮುಖ್ಯವಾಗಿರುವುದು ಕೃಷಿಯ ಜೊತೆ ಮರಗಿಡಗಳ  ಜೋಡಣೆ. ಏಕೆಂದರೆ ಹಿಂದೆಯಲ್ಲ ಬರಗಾಲ ಮಹಾಪೂರಗಳು ಬಂದರೂ ಅವುಗಳನ್ನ ತಾಳಿಕೊಲ್ಲುವಂಥ ಸಸ್ಯಗಳು ನಮ್ಮಲ್ಲಿ ಇದ್ದವು. ಆ ಥರದ ಬೆಳೆಗಳ ಸಂಯೋಜನೆ ಇರುತ್ತಿತ್ತು. ಹೀಗಾಗಿ ಅದರ ಪರಿಣಾಮ ಕಂಡು ಬರುತ್ತಿರಲಿಲ್ಲ. ಇವತ್ತು ಯಾರಲ್ಲೂ  ಮರಗಿಡ ಇಲ್ಲ. ಏನಾದರೂ ಅನಾಹುತ  ಆದರೆ, ಬೆಳೆಗಳು ಹೋದವೆಂದರೆ ನಮಗೆ ಏನೂ ಆದಾಯ ಇರುವುದಿಲ್ಲ. ಆದ್ದರಿಂದ ಕೃಷಿಯಲ್ಲಿನ ನಷ್ಟವನ್ನು ಎದುರಿಸಲು  ನಮಗೆ ಏನೋ ಒಂದು ಆದಾಯ ಕೊಡತಕ್ಕಂಥ ಗಿಡ ಮರಗಳು ಬೇಕೇ ಬೇಕು. ಇವತ್ತು ನಾವು ಕೃಷಿಗೆ ಎಷ್ಟು ಮಹತ್ವ ಕೊಡುತ್ತೆವೋ ಅಷ್ಟೇ

ಮರಗಿಡ ಸಂಯೋಜನೆ ಮಾಡುವಾಗ ನಮ್ಮ ಭಾಗದಲ್ಲಿ ಬೆಳೆಯತಕ್ಕಂಥ ಮರಗಳನ್ನು ಮೊದಲು ಆಯ್ಕೆ ಮಾಡಿಕೊಳ್ಳಬೇಕು.

ಗಿಡಮರಗಳಿಗೆ ಕೊಡಬೇಕಾಗಿದೆ. ಮುಖ್ಯವಾಗಿ  ಉರುವಲು ಕಟ್ಟಿಗೆ. ಗೊಬ್ಬರ, ಮೇವು  ಇಂಥವಕ್ಕೆ ಮಹತ್ವ ಕೊಡಬೇಕಾಗಿದೆ. ಮಳೆ ಇಲ್ಲ ಅಂದರೆ ಮೇವಿಲ್ಲ ಅನ್ನುವ ಸಮಸ್ಯೆ ನಿವಾರಣೆ ಆಗಬೇಕು. ಗೊಬ್ಬರ ಇಲ್ಲ ಅಂದರೆ ಹಸಿರೆಲೆ ಗೊಬ್ಬರ  ಮಾಡಿಕೊಳ್ಳಕ್ಕೆ ಬರುತ್ತೆ.  ಹಸಿರೆಲೆ ಗೊಬ್ಬರದಷ್ಟು ಶ್ರೇಷ್ಠವಾದ ಗೊಬ್ಬರ ಎಲ್ಲೂ ಇಲ್ಲ. ಬರಿ ಮಣ್ಣಿನಲ್ಲಿ ಮುಚ್ಚಿದರೆ ಸಾಕು ಅಂಥ ಉತ್ಕೃಷ್ಟವಾದ ಗೊಬ್ಬರ. ಯಾವುದೇ ಬೆಳೆಗೂ ಹಸಿರೆಲೆ ಗೊಬ್ಬರ ಅತ್ಯುತ್ತಮ. ಹಸಿರೆಲೆ ಗೊಬ್ಬರ ಮಾಡಿದಾಗ ಬೆಳೆಗಳ ಇಳುವರಿ ಎರಡು ಪಟ್ಟು ಜಾಸ್ತಿ ಆದದ್ದು ನಮ್ಮ ಅನುಭವದಲ್ಲಿದೆ.

ಆಂಧ್ರದಲ್ಲಿ  ಒಂದು ಕಡೆ ಒಂದು ಮಾವಿನ ಮರ ೨೫ ಸಾವಿರ ರೂಪಾಯಿಯ ಆದಾಯ ಕೊಡುತ್ತದೆ. ಇನ್ನೆಲ್ಲೋ ಒಂದೇ ಒಂದು ಚಿಕ್ಕು ಮರದಿಂದ ೨೦ ಸಾವಿರ ರೂಪಾಯಿ ಆದಾಯ ಬರುತ್ತದೆ ಎಂದು ಕೇಳಿದ್ದೇನೆ. ಅದಿರಲಿ, ನಮ್ಮ ಊರ ಪಕ್ಕದಲ್ಲಿ ಒಂದು ಹುಣಸೆ ಮರ ಇದೆ. ಪ್ರತಿ ವರ್ಷ ೧೫ ಕ್ವಿಂಟಾಲ್ ಹುಣಸೆ ಹಣ್ಣು ಆಗುತ್ತೆ ಅದರಲ್ಲಿ. ಅಂದರೆ ಒಂದು ಮರದ ಆದಾಯ ೭೫ ಸಾವಿರ! ನಮ್ಮಲ್ಲಿ ಒಬ್ಬ ರೈತ ಕೃಷಿಯನ್ನೇ ಮಾಡದೆ ಇದೇ ಜಮೀನಿನಲ್ಲಿ ಪೂರ್ತಿ ಮರಗಿಡವನ್ನೇ ಬೆಳೆಯುತ್ತಿದ್ದಾರೆ. ನಾಲ್ಕು ವರ್ಷದ ಹಿಂದೆ ಒಂದೂವರೆ ಕೋಟಿ ರೂಪಾಯಿಗೆ ಮರಮುಟ್ಟು ಮಾರಿದರು. ಮರಗಿಡಗಳು ಇದ್ದಾಗ ಎಷ್ಟೊಂದು ಆದಾಯ ಪಡೆಯಬಹುದು ಎನ್ನುವುದಕ್ಕಷ್ಟೇ ಇದನ್ನು ಹೇಳಿದೆ.

ಸ್ಥಳೀಯ ಮರಗಳು ಇರಲಿ

ಹಾಗೆಂದು ಯಾವ ರೈತರೂ ತಾವು ಬೆಳೆಯುತ್ತಿರುವ ಬೆಳೆಗಳನ್ನು ಬಿಟ್ಟು ಮರಗಿಡ ಬೆಳೆಸುವ ಅವಶ್ಯಕತೆ ಇಲ್ಲ. ಇವತ್ತು ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೂ ಬೆಲೆ ಇದೆ. ಈ ವರ್ಷ ಶೆಂಗಾಕಾಯಿಗೆ ಕ್ವಿಂಟಾಲಿಗೆ ೭೫೦೦ ರೂಪಾಯಿ ಬೆಲೆ ಇದೆ. ಮುಂದೆ ಕಡಿಮೆಯಂತೂ ಆಗುವುದಿಲ್ಲ. ಆದ್ದರಿಂದ ನಾವು ನಿಗಾ ವಹಿಸಿ ಬೆಳೆಗಳ ಸಂಗಡ ಗಿಡಮರಗಳನ್ನು ಸ್ಸರಿಯಾದ ರೀತಿಯಲ್ಲಿ ಬೆಳೆದುಕೊಂದಾಗ ನಮ್ಮಂಥ ಆದಾಯಗಾರರು ಯಾರು ಇರುವುದಿಲ್ಲ. ಅದಕ್ಕೆ ನಾವು ನಮ್ಮ ಕೃಷಿಯಲ್ಲಿ ಮರಗಿಡಗಳ ಸರಿಯಾದ ಸಂಯೋಜನೆ ಮಾಡಿಕೊಳ್ಳಬೇಕು. ಸರಿಯಾದ ಮರಗಿಡಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ರೈತರಾದ ನಾವು ಮೊದಲು ನಮ್ಮ ಪ್ರದೇಶದಲ್ಲಿ ಹಿಂದಿನಿಂದ ಇರತಕ್ಕಂಥ ಮರಗಿಡಗಳನ್ನು ನಾಶಮಾಡದೆ ಕಾಪಾಡಿಕೊಂಡು, ಬೆಳೆಸುವುದಾದರೆ ಅಂತಹ ಮರಗಿಡಗಳನ್ನು ಬೆಳೆಸಬೇಕು. ನಮ್ಮ ಹೊಲಕ್ಕೆ ಮರಗಿಡ ಸಂಯೋಜನೆ ಮಾಡುವಾಗ ನಮ್ಮ ಭಾಗದಲ್ಲಿ ಬೆಳೆಯತಕ್ಕಂಥ ಮರಗಳನ್ನು ಮೊದಲು ಆಯ್ಕೆ ಮಾಡಿಕೊಳ್ಳಬೇಕು.

ದುಡ್ಡಿನ ಹಿಂದೆ ಬಿದ್ದು ತಾಳೆ , ನೀಲಗಿರಿ, ಅಕೆಸಿಯ ಬೆಳೆಯಲು ಹೋದರೆ ನಮ್ಮನ್ನೂ ಹಾಳು ಮಾಡಿಕೊಂಡು ಪರಿಸರವನ್ನೂ ಹಾಳು ಮಾಡುತ್ತೇವೆ. ಯಾವುದನ್ನೇ ಬೆಳೆದರೂ ಮೊದಲು ಅದು ನಮಗೆ ಆಹಾರವಾಗಬೇಕು , ಮೇವು ಇರಬೇಕು, ಭೂಮಿಯ ಸತ್ವ ಉಳಿಯಬೇಕು. ಉಳಿದದ್ದು ನಂತರ.

ನಮ್ಮ ಜಮೀನಿನಲ್ಲಿ ಈಗಾಗಲೇ ಇರತಕ್ಕಂಥ ಗಿಡಮರಗಳನ್ನು ನಾವು ಹೆಚ್ಚಿಗೆ ಮಾಡಿಕೊಳ್ಳಬೇಕು. ಎರೆ ಜಮೀನು, ಕೆಂಪು ಜಮೀನು, ನಮ್ಮ ಪ್ರದೇಶದ ಹವಾಮಾನ, ಅಲ್ಲಿ ಬೀಳತಕ್ಕಂಥ ಮಳೆ ಇದನ್ನೆಲ್ಲಾ ಅವಲಂಬನೆ ಮಾಡಿ ನಮ್ಮ ಜಮೀನಲ್ಲಿ ಎಂಥ ಮರಗಿಡಗಳು ಬೆಳೆಯುತ್ತವೆ ಅನ್ನುವುದನ್ನ ಲೆಕ್ಕ ಹಾಕಬೇಕು. ನಮ್ಮಲ್ಲಿ ಹೀಗೆ ಬೆಳೆಯತಕ್ಕಂಥವು ನಮಗೆ ಒಳ್ಳೆಯದೇ ಹೊರತಾಗಿ ಮತ್ತೊಬ್ಬರು ಹೇಳಿದ್ದನ್ನ ಮಾಡುವಂಥದಲ್ಲ.

ನಮ್ಮ ಬಯಲು ಸೀಮೆಯಲ್ಲಿ ಕಪ್ಪು ಭೂಮಿಯಲ್ಲಿ ಮರಗಿಡಗಳೆಲ್ಲ ತುಂಬಾ ಕಡಿಮೆಯಾಗಿವೆ. ಹಳ್ಳದ ದಂಡೆಯೊಂದಿಗೆ ಬಳ್ಳಾರಿ ಜಾಲಿಯೊಂದು ಕಾಣಕ್ಕೆ ಸಿಗುತ್ತದೆ. ಅದನ್ನೇ ಜನ ಕಟ್ಟಿಗೆಗೆ ಕಟ್ಕೊಂಡು ಹೋಗುತ್ತಾರೆ. ನಮ್ಮಲ್ಲಿ ಹಿಂದಿನಿಂದ ಇರತಕ್ಕಂಥ ಹೊಂಗೆ, ಬೇವು, ಬನ್ನಿ, ಕರಿಜಾಲಿ ಇದೆಲ್ಲಾ ನಮಗೆ ಉತ್ತಮ. ಕರಿ ಜಾಲಿ ಬಹಳ ದುಬಾರಿ ಮರ. ಒಳ್ಳೆ ಕಟ್ಟಿಗೆ. ಬೇವು ಉತ್ತಮ ಕೀಟನಾಶಕವು ಹೌದು, ನಮ್ಮ ಭೂಮಿಗಂತೂ ಅಗದಿ ಅವಶ್ಯ. ಬೇವು, ಬನ್ನಿ, ಹೊಂಗೆ ಮರಗಳ ಬುಡಕ್ಕೆ ಬೆಳೆಗಳು ಚನ್ನಾಗಿ ಬೆಳೆಯುತ್ತವೆ. ಆ ಸೊಪ್ಪು ಬಿದ್ದು ಭೂಮಿ ತುಂಬಾ ಫಲವತ್ತಾಗುತ್ತದೆ. ಅದೇ ಅಕೆಸಿಯ, ನೀಲಗಿರಿ  ಬುಡಕ್ಕೆ ಬೆಳೆ ಬೆಳೆಯುವುದಿಲ್ಲ. ಆದರೆ ಯಾವ ಗಿಡದ ನೆರಳಲ್ಲೂ ಬೆಳೆ ಬರುವುದಿಲ್ಲ ಎಂಬುದು ಬಹಳಷ್ಟು ರೈತರ ಭಾವನೆ. ಹೇಳಬೇಕೆಂದರೆ, ಬೇವಿನ ಗಿಡ , ಹೊಂಗೆ ಗಿಡ ಇದ್ದ ಹೊಲದಲ್ಲಿ ಬೇರೆ ಹೊಲಕ್ಕಿಂತ ಬೆಳೆ ಇನ್ನು ಚನ್ನಾಗಿಯೇ ಬೆಳೆಯುತ್ತೆ. ಗಿಡ ಮರ ಹಾಕಿದರೆ ನಮ್ಮ ಬೆಳೆ ಹಾಳಾಗುತ್ತದೆ, ಆದಾಯ ಕಡಿಮೆ ಆಗುತ್ತದೆ ಅನ್ನುವುದು ತಪ್ಪು. ಸುಭಾಷ್ ಶರ್ಮ ಹೇಳುವಂತೆ, ನಿಮ್ಮ ಹೊಲದಲ್ಲಿ ಗಿಡ ಹಾಕಿದಾಗ ಹತ್ತು ಫುಟ್ ಜಾಗ ಹೋದರೂ ಇಡೀ ಹೊಲದ ಉತ್ಪನ್ನದಲ್ಲಿ ನಿಮಗೆ ೨೫% ಜಾಸ್ತಿಯಾಗುತ್ತದೆ.

ನಮ್ಮಲ್ಲಿ ಜಾಲಿ ಮರದ ಬುಡಕ್ಕ ಮುಳ್ಳು ಬೀಳುತ್ತದೆ ಎಂದು ಅದನ್ನು ಹೊಲದ ಬದುವಿನಲ್ಲಿ ಹಚ್ಚಿಕೊಳ್ಳುತ್ತೇವೆ. ಬನ್ನಿ ಬೇವು, ಹೊಂಗೆ ಎಲ್ಲ ಹೊಲದಲ್ಲಿ ಇರುತ್ತವೆ. ಬಿತ್ತನೆ ಮಾಡುವುದಕ್ಕಿಂತ ಮುಂಚೆ ಪ್ರತಿ ವರ್ಷ ಒಂದೆರಡು ಸಲ ರೈತರು ಈ ಗಿಡಗಳಿಗೆ ಸುತ್ತ ಹಾಕಿ ನೆಗಲ ಹೊಡೆಯುತ್ತಾರೆ. ಏಕೆಂದರೆ, ಆ ಮರದ ಬೇರುಗಳು ಮೆಲ್ಮಣ್ಣಿನಲ್ಲಿ ಬಂದಿರುತ್ತವೆ. ಬಿತ್ತನೆ ಮಾಡುವಾಗ ಕೂರಿಗೆ ತಾಳು ಮುರಿಯಬಹುದು, ನಮ್ಮ ಬೆಳೆಗಳಿಗೆ ಆ ಬೇರಿನಿಂದ ಸ್ಪರ್ಧೆ ಆಗಬಹುದು ಎಂಬ ಕಾರಣಕ್ಕೆ ಎಲ್ಲರೂ ನೆಗಲ ಹೊಡೆದು ಆ ಬೇರನ್ನು ತುಂಡು ಮಾಡುತ್ತಾರೆ. ಹಾಗೆ ಮಾಡಿದಾಗ ಆ ಮರಕ್ಕೆ ಹೇಳಿ ಕೊಟ್ಟಂತೆ ಆಗುತ್ತದೆ. ಆಗ ಅದರ ಬೇರು ಮೇಲೆ ಬರುವುದಿಲ್ಲ. ಒಳಕ್ಕೆ ಹೋಗುತ್ತದೆ. 'ನಮ್ಮ ಬೆಳೆಗಳಿಗೆ ಏನು ತೊಂದರೆ ಇಲ್ಲ.

ಅತಿಯಾಗದಿರಲಿ

ಮುಖ್ಯ ಏನು ಎಂದರೆ ನಮ್ಮಲ್ಲಿ ಬೆಳೆಯ ತಕ್ಕಂಥ ಗಿಡಮರಗಳನ್ನು ಪಟ್ಟಿ ಮಾಡಿಕೊಂಡು, ಅವುಗಳ ಗುಣಗಳನ್ನು ಗುರುತಿಸಿಕೊಂಡು ಯಾವುದನ್ನು ಹೊಲದ ಬೌಂಡರಿಯಲ್ಲಿ ಹಾಕ್ಕೋಬೇಕು, ನಡುವೆ ಬದು ಮೇಲೆ ಯಾವುದನ್ನು ಹಾಕ್ಕೋಬೇಕು, ಗಿಡದ ನೆರಳು ಬೆಳೆಗಳ ಮೇಲೆ ಬಿದ್ದರೆ ಏನಾಗುತ್ತೆ. ಅದಕ್ಕೆ ಹಾನಿಯಾಗದಂತೆ ಯಾವ ಗಿಡ ಹಚ್ಕೊಬೇಕು ಎಂದು ಆಯ್ಕೆ ಮಾಡಿಕೊಂಡು ಹಾಕಬೇಕೆ ಹೊರತಾಗಿ, ಯಾರೋ ಹೇಳಿದರು, ಎಲ್ಲೋ ನೋಡಿದೆ ಎಂದು ಹಾಕಲು ಹೋಗಬಾರದು. ನಾವು ಯಾವುದೇ ಒಂದು ಮರಗಿಡ ಬೆಳೆಯಬೇಕಾದರೆ ಇದರಿಂದ ಉಪಯೋಗ ಏನಿದೆ, ಇದನ್ನ ಯಾವಾಗ ಕಡಿಯಬೇಕು, ಯಾವಾಗ ಮಾರಬೇಕು, ಕಡಿಯದೇ ಹಾಗೆ ಬಿಟ್ಟರೆ ಒಳ್ಳೆಯದಾ?  ಅದರ ಸೊಪ್ಪನ್ನ ಉಪಯೋಗ ಮಾಡಿಕೊಳ್ಳುವುದು ಒಳ್ಳೆಯದಾ?  ಎಂಬ ಎಲ್ಲ ವಿಚಾರ ಮಾಡಿಕೊಂಡು ಬೆಳೆಯಬೇಕೆ ಹೊರತಾಗಿ ಮನಬಂದಂತೆ ಬೆಳೆಯಬಾರದು. ನಾನು ಯಾವಾಗಲೂ ಹೇಳುವುದು ಏನೆಂದರೆ, ಯಾರೇ ಇರಲಿ, ಏನನ್ನು ಅತಿಯಾಗಿ ಮಾಡಬಾರದು. ಉದಾಹರಣೆಗೆ, ಒಮ್ಮೆ ಒಂದು ಸಂಸ್ಥೆಗೆ ಹೋಗಿದ್ದೆ. ಅವರು ೪೯೭ ಎಕರೆ ಪೂರ್ತಿ ಅರಣ್ಯ ಮಾಡಿದ್ದರು. ನಾನು ಅವರನ್ನು ಅದರಿಂದ ಆದಾಯ ಎಷ್ಟಿದೆ ಎಂದು ಕೇಳಿದೆ. ಅವರಿಗೆ ಅದರಲ್ಲಿ ಆದಾಯವೇ ಇಲ್ಲ! ೪-೫ ಎಕರೆ ಜಮೀನಿರುವ ರೈತರು ನೋಡಲು ಬಂದಾಗ, ೫೦೦ ಎಕರೆ ಬೆಳೆದೂ ಏನು ಆದಾಯ ಇಲ್ಲ ಎಂದಾಗ ರೈತರಿಗೆ ಏನು ಸಂದೇಶ ಕೊಟ್ಟಂತಾಯಿತು? ಅವರು ಬೆಳೆದದ್ದು ಪೂರಾ ಸುಬಾಬುಲ್. ಅದನ್ನೂ ಕಡಿದು ಮಾರಿದರೆ ಬೆಲೆ ಇದೆ. ಕಡಿದಾಗ ಮತ್ತೆ ಚಿಗುರಿ ಮರವಾಗುತ್ತದೆ. (ನಮ್ಮ ಮುದೇನೂರು ಶಂಕರಗೌಡರು ಅದರಲ್ಲೇ ಆದಾಯ  ಮಾಡುತ್ತಾರೆ ). ಆದರೆ ಇವರು ಆದನ್ನು ಕಡಿಯದೆ ಎಷ್ಟೋ ಕಾಲದಿಂದ ಬಿಟ್ಟು ಬಿಟ್ಟಿದ್ದಾರೆ. ಆದಾಯ ತೆಗೆದುಕೊಳ್ಳುವ ವಿಚಾರ ಮಾಡಿಲ್ಲ. ಅದು ಅವರಿಗೆ ಹೊಂದಬಹುದು, ನಮ್ಮ ರೈತರಿಗೆ ಹೊಂದುವುದಿಲ್ಲ.

ಎರೆ ಜಮೀನಿನ ಸಮಸ್ಯೆಗಳು

ನಮ್ಮ ಎರೆ ಜಮೀನಿನ ವಿಚಾರಕ್ಕೆ ಬಂದರೆ, ಮಸಾರಿ ಜಮೀನಿನಲ್ಲಿ ಗಿಡ ಮರ ಬೆಳೆಸಿದ ಹಾಗೆ ಕಪ್ಪು ಮಣ್ಣಿನಲ್ಲಿ ಬೆಳೆಸಲು ಬರುವುದಿಲ್ಲ. ನೀರಿನ ಸಂಗ್ರಹ ಮಾಡಿಕೊಳ್ಳಬೇಕು ಎಂದರೆ ನಮ್ಮ ನೆಲದಲ್ಲಿ ನೀರು ಇನ್ಗುವುದಿಲ್ಲ. ಇಳಿಯುವುದಿಲ್ಲ. ಸಣ್ಣ ಮಳೆಯಾದರೆ ನೆಲ ತೊಯ್ಯುವುದಿಲ್ಲ, ದೊಡ್ಡ ಮಳೆಯಾದರೆ ನೀರೆಲ್ಲ ಹೊರಗೆ ಹರಿದು ಬಿಡುತ್ತದೆ.

ನಮ್ಮ ಎರೆ ಹೊಲದಲ್ಲಿ ಟ್ರಿಂಚ್ ತೆಗೆದು ಮಳೆ ಹೊಡೆದರೆ ಮಾರನೆಯ ದಿವಸ ಟ್ರೆಂಚು ನೋಡಲು ಕೂಡ ಸಿಗುದಿಲ್ಲ. ಪೂರ್ತಿ ಸಾಪಾಗಿ ಬಿಡುತ್ತದೆ. ಅದಕ್ಕೆ ನಾವು ಎರೆನೆಲದಲ್ಲಿ ಏನು ಮಾಡಬೇಕು ಎನ್ನುವುದು ಮುಖ್ಯ. ಬದು ತಡೆಯಬೇಕು ಎಂದರೆ ಬದುವಿನ ಮೇಲೆ ಕೆಂಪು ಮಣ್ಣು, ಗರಸು ಮಣ್ಣು, ಉಸುಕು ಮಣ್ಣು ಹೊದಿಕೆ ಹಾಕಿದರೆ ಬದು ಜರುಗುವುದಿಲ್ಲ. ಎರೆಮಣ್ಣಿನಲ್ಲಿ ಒಳಗಡೆ ಪ್ಯಾಕ್ ಆಗಿರುತ್ತದೆ. ಮೇಲಕ್ಕೆ ಕಾಣುವುದಿಲ್ಲ. ಅಕಸ್ಮಾತ್ ಏನಾದರೂ ನೀರು ಒಳಗೆ ಹತ್ತಿದರೆ ಒಳಗೆ ಹರಿದು ಬಿಡುತ್ತದೆ. ಎರೆಮಣ್ಣಿನಲ್ಲಿ ಈ ಅರಣ್ಯ ಸಸ್ಯಗಳನ್ನ ಹಚ್ಚಿದಾಗ ಬೇರು ಪ್ರಾರಂಭದಲ್ಲಿ ಒಂದೆರಡು ವರ್ಷ ಬೆಳೆಯುವುದಿಲ್ಲ. ಯಾಕೆಂದರೆ ಬೇರಿಗೆ ಮಣ್ಣಿನ ನೀರು ಸುಲಭವಾಗಿ ಸಿಗುವುದಿಲ್ಲ. ನಾವು ಕೆಂಪು ಮಣ್ಣು, ಉಸುಕು, ಕೊಟ್ಟಿಗೆ ಗೊಬ್ಬರ ಇಂಥದ್ದು ಹಾಕಿದರೆ ಪಟ್ಟನೆ ಬೇರು ಬಿಟ್ಟು ಬೆಳೆಯಕ್ಕೆ ಶುರುವಾಗುತ್ತೆ. ಆದ್ದರಿಂದ ಎರೆ ಮಣ್ಣಿನಲ್ಲಿ ನಾವು ದೊಡ್ಡ ಗುಣಿ ತೆಗೆದು ಅದಕ್ಕೆ ಕಸ    ಹಾಕಿ  ಮುಚ್ಚುವುದಕ್ಕಿಂತ ಅರ್ಧ ಚಂದ್ರಾಕೃತಿಯಲ್ಲಿ ಮಣ್ಣು ಗೆಬರಿ ಸಣ್ಣ ಸಣ್ಣ ಗುಣಿ ಮಾಡಿ ಅಲ್ಲೇ ಸಸಿಗಳನ್ನು ಹಾಕಬೇಕು. ಕೆರೆಗಳನ್ನು  (ಕೃಷಿ ಹೊಂಡ ) ಮಾಡಿಕೊಂಡು ನೀರು ಸಂಗ್ರಹ ಮಾಡಿಕೊಂಡು ಆ ಕೆರೆಗಳ ಸುತ್ತ ಗಿಡಾ ಹಚ್ಚಿಕೊಳ್ಳಬಹುದು. ನಮ್ಮ ಹೊಲದಲ್ಲಿ ಬೀಳುವ ನೀರು, ನಮ್ಮ ಹೊಲಕ್ಕೆ ಹರಿದು ಬರುವ ನೀರು ಅದನ್ನೆಲ್ಲ ಲೆಕ್ಕ ಮಾಡಿ ನಾವು ಕೆರೆ ಮಾಡಿಕೊಳ್ಳಬೇಕು.

ಭೈಪ್ ಸಂಸ್ಥೆಯವರು ಕೃಷಿ ಭೂಮಿಯಲ್ಲಿ ಅರಣ್ಯ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕಲಘಟಗಿ ತಾಲೂಕು ಸೂರಸೆಟ್ಟಿ ಕೊಪ್ಪದಲ್ಲಿ ಒಳ್ಳೆ ಪ್ರಯೋಗ ಮಾಡಿದ್ದಾರೆ. ಆಗ್ರೋ ಫಾರೆಸ್ಟ್ರಿ ಮಾಡಿದ ಮೇಲೆ ಒಂದೆಕರೆ  ಎರಡೆಕರೆ ಜಮೀನಿರುವ ಕೂಲಿಕಾರರು ಸ್ವಂತ ಹೊಲದಲ್ಲಿ ಒಂದೆರಡು ಕುರಿ, ಆಡು, ಆಕಳ ಇಟ್ಟುಕೊಂಡು ಎಕರೆಗೆ ೨೫ ಸಾವಿರ ನಿವ್ವಳ ಉತ್ಪನ್ನ ತೆಗೆಯುತ್ತಾರೆ.

ಕಾಯಿಪಲ್ಲೆಗಳನ್ನು ಸಾವಯವ ಉತ್ಹ್ಪನ್ನಗಳಾಗಿ ಗ್ರಾಮ ಚೇತನ (ರೈತರದ್ದೇ ಸಂಸ್ಥೆ) ದಲ್ಲಿ ಇಟ್ಟು ಮಾರಾಟ ಮಾಡುತ್ತಾರೆ. ಆಗ್ರೋ ಫಾರೆಸ್ಟ್ರಿ ಒಂದು ಒಳ್ಳೆ ಉತ್ತಮವಾದ ವಿಚಾರ. ಸಾವಯವ ಕೃಷಿಕರು ಮಾಡಿದರೆ ಇನ್ನೂ ಅನುಕೂಲ ಆಗುತ್ತದೆ. ಈ ಆಗ್ರೋ ಫಾರೆಸ್ಟ್ರಿ ಮಾಡುವುದರಿಂದ ಮತ್ತೊಬ್ಬರ ಹೊಲಕ್ಕೆ ಕೂಲಿ ಹೋಗುವುದಕ್ಕೆ ಬದಲಾಗಿ ತಮ್ಮ ಹೊಲದಲ್ಲಿ ತಾವೇ ದುಡಿದುಕೊಂಡು ಎಕರೆಗೆ ೨೫ ಸಾವಿರ ಪಡೆದುಕೊಳ್ಳುತ್ತಾರೆ. ಅಂದರೆ ದೊಡ್ಡ ಸಾಧನೆಯೆ.

ಸಂಪರ್ಕ ಜಾಲ

ನಾವು ಒಂದೊಂದು ನಿರ್ದಿಷ್ಟ ಹವಾಗುಣದ ಪ್ರದೇಶಕ್ಕೆ ಸೇರಿದ ರೈತರು ಒಂದಾಗಿ ಕೂಡಿಕೊಂಡು ನಮ್ಮಲ್ಲಿ ಹಿಂದಿನಿಂದ ಇದ್ದ ಗಿಡಮರಗಳು ಯಾವುದಿವೆ, ಹೊಸದಾಗಿ ಬಂದಿರತಕ್ಕಂಥ ಗಿಡಮರಗಳು ಯಾವುವು ಎಂಬುದನ್ನು ಪಟ್ಟಿ ಮಾಡಿಕೊಳ್ಳಬೇಕು. ಈ ಗಿಡಮರಗಳ ಉಪಯೋಗ ಏನು ಅನ್ನುವುದನ್ನು ನಾವೇ ವಿಚಾರ ಮಾಡಿ ಯಾವುದನ್ನ ಎಷ್ಟು ಹಾಕಿಕೊಳ್ಳಬೇಕು ಎಂದು ತೀರ್ಮಾನಿಸಬೇಕು. ನಾವು ಬೆಳೆಯುವ ಬೆಳೆಗಳು ಯಾವುವು ಎಂಬುದನ್ನು ನೋಡಿಕೊಂಡು ಮರ ಜೋಡಣೆಯ ವಿನ್ಯಾಸ ಮಾಡಿಕೊಳ್ಳಬೇಕು. ಇದಕ್ಕೆ ಹೆಚ್ಚಿನ ತಾಂತ್ರಿಕ ಸಹಾಯವನ್ನು ಶೇಷಗಿರಿಯವರು , ಎಲ್ಲಪ್ಪರೆಡ್ಡಿಯವರು, ಇಕ್ರಾದವರು ಮಾಡುತ್ತಾರೆ. ಆದರೆ ನಮ್ಮ ನಡುವೆ ಈ ಸಂಪರ್ಕ ಜಾಲ ಬಹಳ ಮುಖ್ಯ. ಇದು ಒಂದೆರಡು ದಿನದಲ್ಲಿ ಆಗುವಂಥದಲ್ಲ. ಎರಡು ಮೂರು ವರ್ಷ ಮಾಡಿದಾಗ ನಮಗೆ ಮೇವಿನ ಕೊರತೆ ಕಮ್ಮಿಯಾಗಿದೆಯ? ನಮಗೆ ಗೊಬ್ಬರ ಹೆಚ್ಚಾಗಿದೆಯ?ಕಟ್ಟಿಗೆ ಸಿಗುತ್ತಿದೆಯ? ಹಣ್ಣು ಸಿಗುತ್ತಿದೆಯ? ಹೊಲದ ಆದಾಯ ಹೆಚ್ಚಾಗಿದೆಯ? ಇವೆಲ್ಲ ಅರ್ಥವಾಗುತ್ತಾ ಹೋಗುತ್ತದೆ. ಬೆಳೆ ಸ್ವಲ್ಪ ಕಡಿಮೆಯಾದರೂ ಹೆಚ್ಚಿನ ಆದಾಯ ಬರಿತ್ತಿದೆ ಎಂಬುದು ಮನದಟ್ಟಾಗುತ್ತದೆ. ಪ್ರಯೋಗ ಗುಂಪುಗಳಲ್ಲಿ ಮಾಡುವುದರಿಂದ ನಮಗೆ ತಾಂತ್ರಿಕ ಮತ್ತು ನೈತಿಕ ಒತ್ತಾಸೆ ಸಿಗುತ್ತದೆ.

ಮೂಲ:ಸಹಜ ಸಾಗುವಳಿ

ಕೊನೆಯ ಮಾರ್ಪಾಟು : 3/4/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate