ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಎಂ.ಸಿ.ಟಿ.ಎಸ್ ತಂತ್ರಜ್ಞಾನ

ಆರೋಗ್ಯ ಇಲಾಖೆಯ ಎಂ.ಸಿ.ಟಿ.ಎಸ್. ತಂತ್ರಜ್ಞಾನ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನವು, ಭಾರತ ಸರ್ಕಾರದ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಇದರ ಮುಖ್ಯ ಉದ್ದೇಶ, ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ಜನರ ಆರೋಗ್ಯವನ್ನು ಎಲ್ಲಾ ರೀತಿಯಿಂದ ಕಾಪಾಡುವುದು. ಅದರಲ್ಲೂ ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವುದು. ಗರ್ಭಿಣಿ ಮಹಿಳೆಯರ ಸಾವನ್ನು ಮತ್ತು ಶಿಶುಮರಣವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುವುದು ಹಾಗೂ ಅವರಿಗೆ ಬೇಕಾದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಲ್ಲಿ ಈ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಕಾರ್ಯಕ್ರಮ ಮುಂಚೂಣಿಯಲ್ಲಿದೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನವನ್ನು ಕರ್ನಾಟಕ ರಾಜ್ಯದಲ್ಲಿ ಯಶಸ್ವಿಯಾಗಿ ಅಳವಡಿಸಿದ್ದು, ಅದರಡಿಯಲ್ಲಿ ಎಂ.ಸಿ.ಟಿ.ಎಸ್. ಕಾರ್ಯಕ್ರಮವೂ ಒಂದಾಗಿರುತ್ತದೆ.

ಗ್ರಾಮೀಣ ಮಹಿಳೆಯರಿಗೆ ವಿವಿಧ ವೈದ್ಯಕೀಯ ಸೌಲಭ್ಯಗಳನ್ನು ಆರೋಗ್ಯ ಇಲಾಖೆಯು ಒದಗಿಸುತ್ತಿದ್ದು ಈ ಎಲ್ಲಾ ಸೇವೆಗಳು ಗರ್ಭಿಣಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ತಲುಪುವ ಹಾಗೆ ನೋಡಿಕೊಳ್ಳುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿರುತ್ತದೆ. ಗರ್ಭಿಣಿ ಮಹಿಳೆಯರ ಮತ್ತು ಮಕ್ಕಳ ಸಾವು-ನೋವುಗಳನ್ನು ತಪ್ಪಿಸಲು ಹಾಗೂ ಗರ್ಭಿಣಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸರಿಯಾದ ಸಮಯದಲ್ಲಿ ಒದಗಿಸಬೇಕಾದ ಸೇವೆಯನ್ನು ಅವರ ಮನೆಯ ಬಾಗಿಲಿನಲ್ಲೇ ಒದಗಿಸಲು ಬೇಕಾದ ಮಾಹಿತಿಯನ್ನು ಈ ತಂತ್ರಾಂಶದಿಂದ ಕರಾರುವಕ್ಕಾಗಿ ಕಲೆ ಹಾಕಬಹುದಾಗಿರುತ್ತದೆ.ಈ ಕಾರ್ಯವನ್ನು ಮನೆಯ ಬಾಗಿಲಿನಲ್ಲೇ ಒದಗಿಸಬೇಕಾದಲ್ಲಿ ಪ್ರತೀ ಹಳ್ಳಿಯಲ್ಲೂ ಗರ್ಭಿಣಿ ಮಹಿಳೆಯರ ಮತ್ತು ಮಕ್ಕಳ ವಿವರಗಳು ಅಗತ್ಯ. ಅವರು ಆ ಮಾಹೆಯಲ್ಲಿ ಪಡೆಯಬೇಕಾದ ಸೌಲಭ್ಯಗಳು ಮುಂಚಿತವಾಗಿಯೇ ಉಪ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಗೆ ತಿಳಿದಿದ್ದಲ್ಲಿ ಆಕೆ ನಿಗದಿತ ಸಮಯದಲ್ಲಿ ಸೇವೆಯನ್ನು ಒದಗಿಸಬಹುದು. ಆದರೆ ಈ ಕಾರ್ಯವನ್ನು ಚಾಚೂ ತಪ್ಪದೆ ಕಾರ್ಯಗತಗೊಳಿಸಲು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಗೆ ಕಷ್ಟವಾಗುತ್ತಿದ್ದು ಈ ಕಾರ್ಯವನ್ನು ಸುಲಭಗೊಳಿಸಲು ಆರೋಗ್ಯ ಇಲಾಖೆಯ ಜನಸಂಖ್ಯಾ ತಜ್ಞರ ವಿಭಾಗವು ಎನ್ಐಸಿ, ಬೆಂಗಳೂರು ಇವರ ಸಹಕಾರದೊಂದಿಗೆ ತಂತ್ರಾಂಶವನ್ನು ಅಂತರ್ಜಾಲದಲ್ಲಿ ಅಳವಡಿಸಿದ್ದು ಇದು ನಮ್ಮ ರಾಜ್ಯದಲ್ಲಿ ೧ ನೇ ಜನವರಿ ೨೦೧೧ ರಿಂದ ಎಲ್ಲ ಜಿಲ್ಲೆಗಳಲ್ಲೂ ಅನುಷ್ಟಾನವಾಗಿರುತ್ತದೆ.

ಜನಸಂಖ್ಯಾ ತಜ್ಞರ ವಿಭಾಗವು ಸಿದ್ದಪಡಿಸಿರುವ ತಂತ್ರಾಂಶದಿಂದ ರಾಜ್ಯದಲ್ಲಿ ಇರುವ ಪ್ರತೀ ಗರ್ಭಿಣಿ ಮಹಿಳೆಯನ್ನು ಆ ಮಹಿಳೆಯು ಗರ್ಭಧರಿಸಿದ ದಿನದಿಂದ ಅವಳಿಗೆ ಹೆರಿಗೆಯಾಗುವವರೆಗೂ ಚಾಚೂ ತಪ್ಪದೆ ಅವಳನ್ನು ನೋಡಿಕೊಳ್ಳುವುದು ಹಾಗೂ ಅವಳಿಗೆ ಬೇಕಾದ ವೈದ್ಯಕೀಯ ಸೌಲಭ್ಯಗಳನ್ನು ನಿಗದಿತ ಸಮಯದಲ್ಲಿ ನೀಡುವುದು ಸಾಧ್ಯವಾಗುತ್ತದೆ. ಇದೇ ರೀತಿ ಜನಿಸಿದ ಮಗುವಿಗೆ ಬೇಕಾದ ವೈದ್ಯಕೀಯ ಸೌಲಭ್ಯಗಳು ಹಾಗೂ ರೋಗನಿರೋಧಕ ಲಸಿಕೆಗಳನ್ನು ನಿಗದಿತ  ಸಮಯದಲ್ಲಿ ನೀಡಲು ಅನುಕೂಲವಾಗುತ್ತದೆ. ಕಾರಣಾಂತರದಿಂದ ಗರ್ಭಿಣಿ ಮಹಿಳೆಯಾಗಲೀ, ಜನಿಸಿದ ಶಿಶುವಾಗಲೀ ವೈದ್ಯಕೀಯ ಸೌಲಭ್ಯಗಳಿನ್ದ ವಂಚಿತವಾದಲ್ಲಿ, ಯಾವ ಕಾರಣಕ್ಕಾಗಿ ಈ ಸೌಲಭ್ಯವು ವಂಚಿತವಾಗಿರುತ್ತದೆ ಹಾಗೂ ಆ ಸೌಲಭ್ಯವನ್ನು ವಂಚಿತವಾಗದ ರೀತಿಯಲ್ಲಿ ಹೇಗೆ ನೀಡಬೇಕು ಎಂಬುದನ್ನು ಮುಂಚಿತವಾಗಿ ತಿಳಿದು ಆ ಗರ್ಭಿಣಿ ಮಹಿಳೆ ಮತ್ತು ಜನಿಸಿದ ಮಗುವನ್ನು ಟ್ರ್ಯಾಕ್ ಮಾಡಿ ಸೌಲಭ್ಯವನ್ನು ಒದಗಿಸುವುದೇ ಈ ತಂತ್ರಾಂಶದ ಹಾಗೂ ಕಾರ್ಯಕ್ರಮದ ಉದ್ದೇಶ.

ಆರೋಗ್ಯ ಇಲಾಖೆಯಲ್ಲಿ ಮೊದಲ ಬಾರಿಗೆ ಮಾಹಿತಿಯನ್ನು ಎಸ್ ಎಂ ಎಸ್ ಮುಖಾಂತರ ರವಾನಿಸುವ ತಾಂತ್ರಿಕತೆಯನ್ನು ಅಭಿವೃದ್ದಿಪಡಿಸಿದ್ದು, ಈ ತಾಂತ್ರಿಕತೆಯನ್ನು ಎಂ ಸಿ ಟಿ ಎಸ್ ಕಾರ್ಯಕ್ರಮಕ್ಕಾಗಿ ಅಳವಡಿಸಿಕೊಳ್ಳಲಾಗಿದೆ. ಈ ತಾಂತ್ರಿಕತೆಯ ಮೂಲಕ ಗರ್ಭಿಣಿ ಮಹಿಳೆಗಾಗಲೀ ಅಥವಾ ಜನಿಸಿದ ಮಗುವಿಗಾಗಲೀ ನೀಡಿದ ಅನೇಕ ಸೇವೆಗಳನ್ನು, ಸೇವೆ ನೀಡಿದ ತಕ್ಷಣ ಮೊಬೈಲ್ ಉಪಯೋಗಿಸಿ ಎಸ್ ಎಂ ಎಸ್ ಮುಖಾಂತರ ನೀಡಿರುವ ಸೇವೆಗಳ ವಿವರಗಳನ್ನು ಕ್ಷಣ ಮಾತ್ರದಲ್ಲಿ ರವಾನಿಸಬಹುದಾಗಿದೆ. ಹೀಗೆ ರವಾನಿಸಿದ ಮಾಹಿತಿಯು ಯಾರ ಸಹಾಯವಿಲ್ಲದೆ ತಂತಾನೇ ನಿಗದಿತ ಜಾಗದಲ್ಲಿ ತಂತ್ರಾಂಶದಲ್ಲಿ ಅಪ್ ಲೋಡ್ ಆಗುತ್ತದೆ. ಈ ತಾಂತ್ರಿಕತೆಯಿಂದ ಆಗಿಂದಾಗ್ಗೆ ತಂತ್ರಾಂಶದಲ್ಲಿ ಡೇಟಾ ಎಂಟ್ರಿ ಮಾಡುವುದು ತಪ್ಪುತ್ತದೆ ಮತ್ತು ಪೇಪರ್ ಮೂಲಕ ಮಾಹಿತಿ ರವಾನಿಸುವುದು ತಪ್ಪುತ್ತದೆ.

ಈ ತಾಂತ್ರಿಕತೆಯಿಂದ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸೇವೆಯನ್ನು ಪಡೆದುಕೊಳ್ಳಲು ಗರ್ಭಿಣಿ ಮಹಿಳೆಯರಿಗೆ ಅವರ ಮೊಬೈಲ್ಗೆ ಮಾಹಿತಿ ನೀಡಬಹುದಾಗಿರುತ್ತದೆ ಹಾಗೂ ಆರೋಗ್ಯ ಸೇವಾ ಕಾರ್ಯಕರ್ತರಿಗೆ ಸಮಯಕ್ಕೆ ಸರಿಯಾಗಿ ಸೇವೆಯನ್ನು ಒದಗಿಸಲು ಸಹ ಮೊಬೈಲ್ ಮುಖಾಂತರ ಮಾಹಿತಿ ನೀಡಬಹುದಾಗಿರುತ್ತದೆ.

ಮೂಲ:ಕುಟುಂಬ ವಾರ್ತೆ.

3.0380952381
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top